ಸೋಮವಾರ, ಸೆಪ್ಟೆಂಬರ್ 11, 2023

ಗೋಮಿನಿ ಪ್ರಕಾಶನ – ಒಂದು ಕಿರು ಪರಿಚಯ

 ಗೋಮಿನಿ ಪ್ರಕಾಶನ – ಒಂದು ಕಿರು ಪರಿಚಯ

ಗುಬ್ಬಚ್ಚಿ ಸತೀಶ್ ಅವರ “ಮಳೆಯಾಗು ನೀ...” ಕವನ ಸಂಕಲನ ಪ್ರಕಟಿಸುವ ಮೂಲಕ 2010ರಲ್ಲಿ  ಆರಂಭವಾದ ಗೋಮಿನಿ ಪ್ರಕಾಶನವು ಇದುವರೆವಿಗೂ 75ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಗುಬ್ಬಚ್ಚಿ ಸತೀಶ್ ಅವರ ಪುಸ್ತಕಗಳನ್ನು ಪ್ರಕಟಿಸುತ್ತಲೇ ಗುಬ್ಬಚ್ಚಿ ಸತೀಶ್ ಅವರ ಶ್ರೀಮತಿ ಜಿ.ಸಿ. ಚಂಪರಾಣಿ ಇತರ ಉದಯೋನ್ಮುಖ ಮತ್ತು ಪ್ರತಿಭಾನ್ವಿತರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ತಮ್ಮ ಪುಸ್ತಕಗಳನ್ನು ಕೂಡ ಪ್ರಕಟಿಸಿದ್ದಾರೆ. ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕನ್ನಡ ಮಾತ್ರವಲ್ಲದೇ, ಇಂಗ್ಲೀಷ್ ಪುಸ್ತಕಗಳು ಕೂಡ ಪ್ರಕಟವಾಗಿವೆ. 

ಗೋಮಿನಿ ಪ್ರಕಾಶನದ ಪ್ರಕಟಣೆಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಒಳಗೊಂಡಂತೆ ಇತರ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಗುಬ್ಬಚ್ಚಿ ಸತೀಶ್ ಪ್ರಕಾಶನದ ಸಂಪಾದಕರಾಗಿದ್ದು, ಪ್ರಕಾಶನವು ತನ್ನದೇ ವೆಬ್‌ಸೈಟ್ ಮೂಲಕ ಪ್ರಕಟಣೆಗಳನ್ನು ಮಾರುವುದಲ್ಲದೆ ರಾಜ್ಯದಾದ್ಯಂತ ವಿತರಣೆಯ ವ್ಯವಸ್ಥೆಯನ್ನು ಹೊಂದಿದೆ. 

ಪ್ರಕಾಶನದ ವತಿಯಿಂದ ತುಮಕೂರಿನಲ್ಲಷ್ಟೇ ಅಲ್ಲದೇ, ಬೆಂಗಳೂರಿನಲ್ಲಿ ಕೂಡ ಪುಸ್ತಕ ಬಿಡುಗಡೆ, ಪರಿಚಯ ಕರ‍್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯವನ್ನು ಪಸರಿಸುವ ಕೆಲಸವನ್ನೂ ಕೂಡ ಪ್ರಕಾಶನ ಮಾಡಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಏರ್ಪಡಿಸುವ ಪುಸ್ತಕ ಮೇಳಗಳಲ್ಲೂ ಕೂಡ ಪ್ರಕಾಶನ ಯಶಸ್ವಿಯಾಗಿ ಭಾಗವಹಿಸಿ, ತನ್ನ ಪ್ರಕಟಣೆಗಳನ್ನು ಓದುಗರಿಗೆ ತಲುಪಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ.

ಈಗ ನಾಡಿನ ಪ್ರಮುಖ ಯುವ ಸಾಹಿತಿಯಾಗಿರುವ ಶ್ರುತಿ ಬಿ.ಎಸ್. ಅವರ ಮೊದಲ ಪುಸ್ತಕ “ಬದುಕ ದಿಕ್ಕು ಬದಲಿಸಿದ ಆಸ್ಟಿಯೋಸರ್ಕೋಮ” ಪುಸ್ತಕವನ್ನು ಪ್ರಕಟಿಸಿ, ನಂತರ ಅವರ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. ನಾಡಿನ ಪ್ರಮುಖ ನ್ಯಾನೋ ಕತೆಗಾರ ವಿ. ಗೋಪಕುಮಾರ್ ಅವರ ಮೂರು ನ್ಯಾನೋ ಕತೆಗಳ ಸಂಕಲನಗಳು ಸೇರಿದಂತೆ ಒಟ್ಟು ಇದುವರೆವಿಗೂ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. “ಮೈಸೂರಿನ ಪುಟಗಳು” ಯೂಟ್ಯೂಬ್ ಖ್ಯಾತಿಯ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ಪ್ರಖ್ಯಾತ “ಮರೆತುಹೋದ ಮೈಸೂರಿನ ಪುಟಗಳು” ಪುಸ್ತಕವನ್ನು ಒಳಗೊಂಡಂತೆ ಎರಡು ಪುಸ್ತಕಗಳು ಪ್ರಕಟವಾಗಿವೆ. ಸಮಕಾಲೀನ ಕನ್ನಡ ಸಾಹಿತ್ಯದ ಮೇರುಪ್ರತಿಭೆ ಕವಿ ವಾಸುದೇವ ನಾಡಿಗರ ಹಲವು ಸಂಕಲನಗಳು ಪ್ರಕಟವಾಗಿ, ಇವರ ಐದು ಸಂಕಲನಗಳ ಸಂಕಲನ “ಅನುಕ್ತ” ಕೂಡ ಪ್ರಕಟವಾಗಿ ನಾಡಿನ ಕಾವ್ಯಪ್ರಿಯರ ಮನಗೆದ್ದಿದೆ. ಇತ್ತೀಚೆಗೆ ಪ್ರಕಟವಾದ ಪೂರ್ಣಿಮಾ ಮಾಳಗಿಮಾನಿ ಅವರ ಕಾದಂಬರಿ “ಇಜಯಾ” ತಿಂಗಳೊಳಗೆ ಐನೂರು ಪ್ರತಿಗಳ ದಾಖಲೆ ಮಾರಾಟ ಕಂಡು ಕನ್ನಡ ಸಾಹಿತ್ಯಕ್ಕೆ ಗೋಮಿನಿ ಪ್ರಕಾಶನದ ಮೂಲಕ ಮತ್ತೊಬ್ಬ ಸಾಹಿತಿಯ ಪರಿಚಯ ಮಾಡಿಕೊಟ್ಟಿದೆ.

ಕಲಾವಿದರಾದ ಅಜಿತ್ ಎಸ್. ಕೌಂಡಿನ್ಯ, ಕತೆಗಾರ ಎಚ್.ಕೆ. ಶರತ್, ಬೆಂಗಳೂರಿನ ಶ್ರೀ ವೆಂಕಟೇಶ್ ಅವರ ರೀಗಲ್ ಪ್ರಿಂಟ್ಸ್ ಸೇರಿದಂತೆ ಕಲಾವಿದರಾದ ಸಂತೋಷ್‌ ಸಸಿಹಿತ್ಲು, ಮುಂಬೈಯ ಟ್ರಿನಿಟಿ ಅಕಾಡೆಮಿ ಫಾರ್‌ ಕಾರ್ಪೋರೇಟ್‌ ಟ್ರೈನಿಂಗ್‌ ಲಿಮಿಟೆಡ್‌ ಸಂಸ್ಥೆಗಳಂತಹ ಉತ್ತಮ ತಂಡದೊಂದಿಗೆ ಗೋಮಿನಿ ಪ್ರಕಾಶನವು ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಿ, ಆಧುನಿಕ ಸೌಲಭ್ಯ ಒದಗಿಸಿರುವ ಎಲ್ಲಾ ಮಾಧ್ಯಮಗಳ ಮೂಲಕ ಸಕ್ರಿಯವಾಗಿ ಪುಸ್ತಕಗಳ ಪರಿಚಯ ಮತ್ತು ಮಾರಾಟದಲ್ಲಿ ಪ್ರಕಾಶನ ತೊಡಗಿಕೊಂಡಿದೆ.

ತನ್ನ ಪುಸ್ತಕಕ್ಕೆ ಪ್ರಕಾಶಕರು ಸಿಗಲಿಲ್ಲವೆಂಬ ಬೇಸರದಿಂದ ಹೊರಬಂದು, ಅಂಕಿತ ಪುಸ್ತಕದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರ ಕಿವಿಮಾತಿನಂತೆ, ಕತೆಗಾರ ವಸುಧೇಂದ್ರ ಅವರ ಸಲಹೆ ಮತ್ತು ತುಮಕೂರಿನ ಪ್ರೊ. ಎಂ.ಎಚ್.‌ ನಾಗರಾಜು ಅವರ ಸಲಹೆಗಳನ್ನು ಪರಿಗಣಿಸಿ, ಬಹುಮುಖ್ಯವಾಗಿ ಕತೆಗಾರ ಕೆ. ಗಣೇಶ್ ಕೋಡೂರ್ ಅವರ ಮಾರ್ಗದರ್ಶನದಲ್ಲಿ ಗುಬ್ಬಚ್ಚಿ ಸತೀಶ್ ತಮ್ಮ ಶ್ರೀಮತಿ ಚಂಪ ಸತೀಶ್ ಅವರೊಂದಿಗೆ ಶುರುಮಾಡಿದ ಗೋಮಿನಿ ಪ್ರಕಾಶನ, ಸಕ್ರಿಯವಾಗಿ ಪುಸ್ತಕ ಪ್ರಕಾಶನದಲ್ಲಿ ತೊಡಗಿಕೊಂಡಿದೆ. ಪ್ರಕಾಶನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ʼಅತ್ಯುತ್ತಮ ಪುಸ್ತಕ ಸೊಗಸು ಬಹುಮಾನʼ (ಮಕ್ಕಳ ಹಿರಿಯ ಸಾಹಿತಿ ಶ್ರೀ ತಮ್ಮಣ್ಣ ಬೀಗಾರ ಅವರ "ಫ್ರಾಗಿ ಮತ್ತು ಗೆಳೆಯರು" ಕಾದಂಬರಿ) ಸಂದಿದೆ.


ಪ್ರಕಾಶನದ ವಿಳಾಸ:

ಗೋಮಿನಿ ಪ್ರಕಾಶನ

“ಅಪರಿಮಿತ”, 6ನೇ ಕ್ರಾಸ್,

ಚನ್ನಕೇಶವ ಲೇಔಟ್,

ಗೂಳೂರು – 572118

ತುಮಕೂರು ತಾಲ್ಲೂಕು ಮತ್ತು ಜಿಲ್ಲೆ.

ಮೊಬೈಲ್: 99866 92342

ಇಮೈಲ್: sathishgbb@gmail.com

ವೆಬ್‌ಸೈಟ್:‌ www.gominiprakashana.com




ಶನಿವಾರ, ಸೆಪ್ಟೆಂಬರ್ 9, 2023

ಗುಬ್ಬಚ್ಚಿ ಸತೀಶ್

ಗುಬ್ಬಚ್ಚಿ ಸತೀಶ್



1977ರ ಸೆಪ್ಟ್ಟೆಂಬರ್ 25ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನನ. ಪ್ರ‍್ರೌಢಶಾಲೆಯವರೆಗೆ ಗುಬ್ಬಿಯಲ್ಲಿ ವಿದ್ಯಾಭ್ಯಾಸ, ನಂತರ ತುಮಕೂರಿನ ಶ್ರೀ ಸಿದ್ಧಗಂಗಾ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್ ಫಾರ್ ಬಾಯ್ಸ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ಜೀವನ ಪ್ರೀತಿಯಿಂದಲೇ ಹೆಸರುವಾಸಿಯಾದ ಇವರು ತಮ್ಮ “ಮಳೆಯಾಗು ನೀ...” (2010) ಕವನ ಸಂಕಲನದಿಂದ ಪ್ರೇಮಕವಿ ಎಂದು ಚಿರಪರಿಚಿತರಾಗಿದ್ದಾರೆ. “ಮುಗುಳ್ನಗೆ” (2011 ಮೊದಲ, 2015 ಎರಡನೇ ಮುದ್ರಣ) ಕಾದಂಬರಿ, “ಸ್ನೇಹ ಮಾಡಬೇಕಿಂಥವಳ...” (ಲೇಖನಗಳ ಸಂಗ್ರಹ 2012), ಹನ್ನೊಂದು ಕತೆಗಳ ‘ಉಘೇ ಉಘೇ’ ಇವರ ಮೊದಲ ಕಥಾಸಂಕಲನ (2014), ಬೇಂದ್ರೆ ಸಾಹಿತ್ಯ ಪುರಸ್ಕಾರ ಪಡೆದ ಅಂತರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ ಶಿವು ಕೆ. ಅವರ ‘ವೆಂಡರ್ ಕಣ್ಣು’ (ದಿನಪತ್ರಿಕೆ ಹಂಚುವವರ ಕುರಿತ ಲಲಿತ ಪ್ರಬಂಧಗಳ ಸಂಕಲನ) ಕನ್ನಡ ಪುಸ್ತಕದ ಇಂಗ್ಲೀಷ್ ಅನುವಾದ "Boys of the Dawn" (2017) ಪ್ರಕಟಗೊಂಡಿವೆ. ತುಮಕೂರು ವಾರ್ತೆ ಪತ್ರಿಕೆಯಲ್ಲಿ ಅಂಕಣರೂಪದಲ್ಲಿ ಪ್ರಕಟವಾದ ಪುಸ್ತಕ ಸಂಸ್ಕೃತಿ ಮತ್ತು ಪುಸ್ತಕಗಳನ್ನು ಕುರಿತ ಲೇಖನಗಳ ಸಂಗ್ರಹ “ರೆಕ್ಕೆ ಪುಕ್ಕ ಬುಕ್ಕ” ಮತ್ತು ಸ್ನೇಹ ಕುರಿತು ಸಂಪಾದಿಸಿರುವ “ಮರೆಯಲಾಗದ ಸ್ನೇಹ” 2018ರಲ್ಲಿ ಪ್ರಕಟಗೊಂಡಿವೆ. 

ಬರವಣಿಗೆಯ ಹಲವು ಶಿಬಿರಗಳು, ಕಮ್ಮಟಗಳಲ್ಲಿ ಭಾಗವಹಿಸಿರುವ ಇವರು ತುಮಕೂರಿನ ಕಣ್ಮುಚ್ಚಾಲೆ ಮಕ್ಕಳ ಗುಂಪಿನ 2011ನೇ ಸಾಲಿನ ರಾಜ್ಯಮಟ್ಟದ ಗಾಳಿಪಟ ಲೇಖನ ಸ್ಪರ್ಧಾ ವಿಜೇತ. ತುಮಕೂರು ಜಿಲ್ಲಾ ಲೇಖಕಿಯರ ಸಂಘದವತಿಯಿಂದ ನಡೆದ 2011ನೇ ಸಾಲಿನ ಕಥಾಸ್ಪರ್ಧೆಯಲ್ಲಿ, 2013ರ ಅನನ್ಯ ಪ್ರಕಾಶನದ ಕಥಾಸ್ಪರ್ಧೆಯಲ್ಲಿ ಬಹುಮಾನ ಮತ್ತು 2015ರ ಡಾ|| ಹೇಮಲತಾ ಶಶಿಧರ್ ನೆನಪಿನ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿರುತ್ತಾರೆ. 2014ರ ಅನನ್ಯ ಪ್ರಕಾಶನದ ‘ಗಾಂಧಿ ಜಯಂತಿ’ ಲೇಖನ ಸ್ಪರ್ಧೆಯಲ್ಲಿ, 2015ರ ಸುಧಾ ಯುಗಾದಿ ವಿಶೇಷಾಂಕದ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ (ದೋಭಿಘಾಟಿನ ಗೆಳೆಯರು) ಬಹುಮಾನ ಪಡೆದಿರುತ್ತಾರೆ. ಇವರ ಕವಿತೆಗಳು ಕೂಡ ಪ್ರಶಸ್ತಿಗೆ ಭಾಜನವಾಗಿವೆ.

ಅನುವಾದ, ಮಕ್ಕಳ ಸಾಹಿತ್ಯ ರಚನೆಯಲ್ಲಿಯೂ ಸೃಜನಶೀಲವಾಗಿ ತೊಡಗಿಕೊಂಡಿರುವುದಲ್ಲದೇ, ತಮ್ಮ ಶ್ರೀಮತಿ ಚಂಪ ಸತೀಶ್ ಅವರ ಜೊತೆ ಮಗಳ ಹೆಸರಿನ ‘ಗೋಮಿನಿ ಪ್ರಕಾಶನ’ ದ ಮೂಲಕ ಪುಸ್ತಕ ಪ್ರಕಟಣೆಯಲ್ಲಿ ತೊಡಗಿಕೊಂಡಿದ್ದಾರೆ. ಮಕ್ಕಳಲ್ಲಿ, ಯುವಕರಲ್ಲಿ ವಿಶೇಷವಾಗಿ ಕನ್ನಡ ಪುಸ್ತಕಗಳನ್ನು ಓದುವ-ಬರೆಯುವ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ. ಕಂಪ್ಯೂಟರ್ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ತದನಂತರ ಹದಿನೈದು ವರ್ಷಗಳ ಕಾಲ ತುಮಕೂರು ವೀರಶೈವ ಸಹಕಾರ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ತಮ್ಮಿಷ್ಟದ ಪ್ರವೃತ್ತಿ ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ತಮ್ಮದೇ ಹೆಸರಿನ ಯೂಟ್ಯೂಬ್ ಚಾನೆಲ್ ಕೂಡ ನಡೆಸುತ್ತಾರೆ.

ಬರವಣಿಗೆಯ ಕೌಶಲ, ಪುಸ್ತಕ ಪ್ರೀತಿ ಮತ್ತು ಜೀವನ ಪ್ರೀತಿಯ ಉಪನ್ಯಾಸಗಳಿಗೂ ಹೆಸರುವಾಸಿ.

9986692342

sathishgbb@gmail.com

 

ಶುಕ್ರವಾರ, ಸೆಪ್ಟೆಂಬರ್ 8, 2023

ಜೈ ಜವಾನ್‌ ಜೈ ಕಿಸಾನ್ ಎನ್ನುವ ಹೈವೋಲ್ಟೇಜ್ ಸಿನಿಮಾ ಜವಾನ್

"ಜವಾನ್"‌ ವಿಮರ್ಶೆ

  

ಪಠಾಣ್ ಸಿನಿಮಾದ ಯಶಸ್ಸಿನ ಬೆನ್ನಿಗೇ ಬಿಡುಗಡೆಯಾಗಿರುವ ಬಾಲಿವುಡ್ ಬಾದ್ ಶಾ ಎಂದೇ ಖ್ಯಾತರಾದ ಶಾರುಖ್ ಖಾನ್ ಅವರ ನಟನೆಯ ಸಿನಿಮಾ ʼಜವಾನ್ʼ ದೇಶದ ಹಲವು ಸಾಮಾಜಿಕ ಸಮಸ್ಯೆಗಳನ್ನು ತೋರಿಸುತ್ತಲೇ ಜೈ ಜವಾನ್ ಜೈ ಕಿಸಾನ್ ಎಂಬ ಸಂದೇಶವನ್ನು ಸೂಕ್ಷ್ಮವಾಗಿ ನೋಡುಗನಿಗೆ ರವಾನಿಸುತ್ತದೆ. ಮನರಂಜನೆಯ ನೆಪದಲ್ಲಿ ದೇಶದ ಚುನಾವಣೆಯ ಮಹತ್ವವನ್ನು ಕೂಡ ಎತ್ತಿ ಹಿಡಿಯುತ್ತದೆ. ದ್ವಿಪಾತ್ರದಲ್ಲಿ ಶಾರುಖ್‌ ಲೀಲಾಜಾಲವಾಗಿ ಅಭಿನಯಿಸಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಾರೆ. ಎರಡು ತಲೆಮಾರಿಗೂ ವಿಲನ್ ಆಗಿ ವಿಜಯ್ ಸೇತುಪತಿ ಶಾರುಖ್‌ ಖಾನಿಗೆ ಸಮನಾಗಿ ಅಭಿನಯಿಸಿದ್ದಾರೆ. ನಾಯಕಿಯರಾಗಿ ದಿಪೀಕಾ ಪಡುಕೋಣೆ ಮತ್ತು ನಯನತಾರ ಹಾಗೂ ಉಳಿದ ಪೋಷಕ ಪಾತ್ರಗಳು ಕೂಡ ಗಮನ ಸೆಳೆಯುತ್ತವೆ. ಅಟ್ಲಿ ಅವರು ರಚಿಸಿ-ನಿರ್ದೇಶಿಸಿರುವ “ಜವಾನ್”‌ ಒಂದು ಹೈವೋಲ್ಟೇಜ್ ಸಿನಿಮಾವಾಗಿ ಪ್ರೇಕ್ಷಕನಿಗೆ ರಂಜಿಸುವುದರ ಜೊತೆಜೊತೆಗೆ ಚಿಂತನೆಗೆ ಹಚ್ಚುತ್ತದೆ. ಶಾರುಖ್‌ ಖಾನ್‌ ಮತ್ತು ವಿಜಯ್‌ ಸೇತುಪತಿ  ಅಭಿಮಾನಿಗಳಿಗೆ ಹಬ್ಬವಿದೆ. 



ಭಾನುವಾರ, ಸೆಪ್ಟೆಂಬರ್ 3, 2023

ಓದಿದ್ದೀರ ಡಾ. ಎಸ್.‌ ಎಲ್‌. ಭೈರಪ್ಪನವರ ʼಯಾನʼ?

 ಪ್ರಿಯ ಸ್ನೇಹಿತರೇ,

ನಮ್ಮ ಭಾರತ ದೇಶದ ʼಚಂದ್ರಯಾನ-3ʼ ಯಶಸ್ವಿಯಾಗಿ, ಇದೀಗ ಸೂರ್ಯಯಾನವೂ ಉಡಾವಣೆ ಆಗಿದೆ. ಈ ಹೊತ್ತಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಬಾಹ್ಯಾಕಾಶವನ್ನೇ ಮುಖ್ಯ ವಸ್ತುವನ್ನಾಗಿಸಿಕೊಂಡು ಯಾವುದಾದರೂ ಸೃಜನಶೀಲ ಕೃತಿಗಳು ಪ್ರಕಟವಾಗಿವೆಯೇ ಎಂದು ಆಲೋಚಿಸಿದಾಗ ತಕ್ಷಣ ನೆನಪಿಗೆ ಬರುವುದು ಡಾ.‌ ಎಸ್.ಎಲ್.‌ ಭೈರಪ್ಪನವರ "ಯಾನ” ಕಾದಂಬರಿ. 



ಈ ಕಾದಂಬರಿಯು 2014ರಲ್ಲಿ ಮೊದಲ ಮುದ್ರಣ ಕಂಡಿದ್ದು, ಇದುವರೆವಿಗೂ ನಲ್ವತ್ತಮೂರು ಮುದ್ರಣಗಳನ್ನು ಕಂಡಿದೆ. ಈ ಕಾದಂಬರಿಯನ್ನು ಪ್ರಕಟವಾದ ಸಮಯದಲ್ಲೇ ನಾನು ಓದಿದ್ದು, ಇದೀಗ ನಮ್ಮ ಭಾರತ ದೇಶದ ಬಾಹ್ಯಾಕಾಶ ತಂತ್ರಜ್ಞಾನವನ್ನು ಇಡೀ ವಿಶ್ವವೇ ಬೆರಗಾಗಿ ನೋಡುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ಕೈಯಲ್ಲಿಡಿದು ಕೂತಿದ್ದೇನೆ. 

ನೀವು ಈಗಾಗಲೇ ಓದಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ… ಓದಿಲ್ಲವಾದರೇ, ಓದಿ ನಿಮ್ಮ ಅನಿಸಿಕೆ-ಅಭಿಪ್ರಾಯ ತಿಳಿಸಿ… ಜೊತೆಗೆ ಬಾಹ್ಯಾಕಾಶ ಯಾನ ಕುರಿತೇ ಪ್ರಕಟವಾಗಿರುವ ಯಾವುದಾದರೂ ಸೃಜನಶೀಲ ಕೃತಿಗಳು ನಿಮ್ಮ ಗಮನದಲ್ಲಿದ್ದರೆ ತಿಳಿಸಿ…

 

ಡಾ. ಎಸ್.ಎಲ್.‌ ಭೈರಪ್ಪನವರ ʼಯಾನʼ ಕೊಳ್ಳಲು ಅಮೇಜಾನ್‌ ಲಿಂಕ್: https://amzn.to/45PDvmA

 

ಧನ್ಯವಾದಗಳು…

ಯಶಸ್ವಿಯಾಗಿ ಉಡಾವಣೆಯಾದ ʼಆದಿತ್ಯ ಎಲ್‌ 1ʼ 125 ದಿನಗಳ ಕ್ಷಣಗಣನೆ ಆರಂಭ…

 ಪ್ರಿಯ ಸ್ನೇಹಿತರೇ,

ʼಚಂದ್ರಯಾನ 3ʼ ರ ಯಶಸ್ಸಿನ ಬೆನ್ನಲ್ಲೇ ಇಸ್ರೋ ಸೂರ್ಯಾಯಾನ ʼಆದಿತ್ಯ ಎಲ್‌ 1ʼ ಸೋಲಾರ್‌ ಮಿಷನ್‌ ಕೈಗೊಂಡಿದ್ದು, ಇಂದು (02/09/2023) ಯಶಸ್ವಿಯಾಗಿ ಬೆಳಿಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣೆ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ʼಆದಿತ್ಯ-ಎಲ್‌ 1ʼ ಬಾಹ್ಯಾಕಾಶ ನೌಕೆಯನ್ನು ಹೊತ್ತು ಯಶಸ್ವಿಯಾಗಿ ಆಕಾಶಕ್ಕೆ ಜಿಗಿದಿದೆ. ಕೇಂದ್ರ ಸರಕಾರ ಈ ಯೋಜನೆಗಾಗಿ 380 ಕೋಟಿ ರೂಗಳ ಅನುದಾನ ನೀಡಿದ್ದು, ಸೂರ್ಯನ ಮೇಲೆ ಗಮನ ಇಡಲು ಇಸ್ರೋ ನಿಗದಿಪಡಿಸಿರುವ ನ್ಯೂಟನ್‌ ಲಾಂಗ್ರೇಜ್‌ ಪಾಯಿಂಟ್‌ ಎಲ್‌ 1 ತಲುಪಲು 125 ದಿನಗಳ ಸಮಯಾವಕಾಶ ಬೇಕಿದೆ. 

ಇಲ್ಲಿ ನೌಕೆಯಲ್ಲಿ ಕಳಿಸಿರುವ ಬಾಹ್ಯಾಕಾಶ ಆಧಾರಿತ ಭಾರತೀಯ ಪ್ರಯೋಗಾಲಯ ಸ್ಥಾಪಿತವಾಗಲಿದೆ. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದ ಎಲ್‌1 ಪಾಯಿಂಟಿನಿಂದ ಸೂರ್ಯನ ಅಧ್ಯಯನ ಮಾಡಲು ಭಾರತದ ಚೊಚ್ಚಲ ಸೌರಮಂಡಲ ಸಾಹಸ ಇದಾಗಿದೆ. ಮತ್ತಷ್ಟು ಹತ್ತಿರದಿಂದ ಸೂರ್ಯನ ಪ್ರಕ್ರಿಯೆಗಳನ್ನು ಗಮನಿಸುವುದು ನಮ್ಮ ಉದ್ದೇಶವಾಗಿದೆ ಎಂದು ಇಸ್ರೋ ಮುಖ್ಯಸ್ಥರಾದ ಎಸ್.‌ ಸೋಮನಾಥ್‌ ಅವರು ತಿಳಿಸಿದ್ದಾರೆ. ಈ ಯಾನವೂ ಯಶಸ್ವಿಯಾಗಲಿ ಎಂಬುದು ಎಲ್ಲ ಭಾರತೀಯರ ಹಾರೈಕೆ…

ಧನ್ಯವಾದಗಳು…

“ಚಂದ್ರಯಾನ-3”ರ ಯಶಸ್ಸಿಗೆ ಮಸಾಲೆದೋಸೆ, ಫಿಲ್ಟರ್‌ ಕಾಫಿ ಕೂಡ ಕಾರಣವಂತೆ…

 ಪ್ರಿಯ ಸ್ನೇಹಿತರೇ,


ನಮ್ಮ ಭಾರತದ ಹೆಮ್ಮೆ ಇಸ್ರೋ ಚಂದ್ರಯಾನ-3ನ್ನು ಯಶಸ್ವಿಯಾಗಿ ಮುಗಿಸಿ ಸೂರ್ಯಯಾನಕ್ಕೆ ಆದಿತ್ಯ ಎಲ್‌ 1 ಉಡಾವಣೆಗೆ ಸಜ್ಜಾಗುತ್ತಿರುವ ಹೊತ್ತಲೇ ಚಂದ್ರಯಾನ-3ರ ಯಶಸ್ಸಿಗೆ ಕಾರಣವೇನು ಎಂಬ ಹಲವು ಚರ್ಚೆಗಳು ಶುರುವಾಗಿವೆ. ಚಂದ್ರಯಾನ-2ರ ಸೋಲಿನ ಬಳಿಕ ಗೆಲುವು ಸುಲಭವಾಗಿರಲಿಲ್ಲ. ಧೈರ್ಯಗುಂದಿದ ವಿಜ್ಞಾನಿಗಳಲ್ಲಿ ಹುರುಪು ತುಂಬಿ ಕೆಲಸಕ್ಕೆ ಹಚ್ಚಬೇಕಿತ್ತು. ನಿಗದಿತ ಸಂಬಳ ಬಿಟ್ಟರೆ ಯಾವುದೇ ಪ್ರೋತ್ಸಾಹಕ ಧನ ಅಥವಾ ಉಡುಗೊರೆಗಳ ಬೆಂಬಲವಿರಲಿಲ್ಲ. ಈ ನಿಟ್ಟಿನಲ್ಲಿ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು, ಹುರಿದುಂಬಿಸಲು ಇಸ್ರೋ ಪ್ರತಿದಿನ ಸಂಜೆ 5ಕ್ಕೆ ಉಚಿತವಾಗಿ ಮಸಾಲೆದೋಸೆ ಮತ್ತು ಫಿಲ್ಟರ್‌ ಕಾಫಿಯನ್ನು ನೀಡುತ್ತಿತ್ತಂತೆ. ಹೌದು, ನೀವು ನಂಬಲೇ ಬೇಕು, ಉಚಿತ ಮಸಾಲದೋಸೆ ಮತ್ತು ಫಿಲ್ಟರ್‌ ಕಾಫಿ. ಮಸಾಲೆ ದೋಸೆ ಸವಿದು, ಫಿಲ್ಟರ್‌ ಕಾಫಿ ಹೀರಿದ ನಂತರ ಮತ್ತಷ್ಟು ಉತ್ಸುಕರಾಗಿ ಸಂತೋಷದಿಂದ ಇಸ್ರೋ ವಿಜ್ಞಾನಿಗಳು ಮಿಷನ್‌ ಚಂದ್ರಯಾನ-3ರಲ್ಲಿ ತೊಡಗುತ್ತಿದ್ದರಂತೆ. ಈಗ ಫಲಿತಾಂಶ ನಮ್ಮ ಕಣ್ಮುಂದೆಯೇ ಇದೆ… ಈ ಸಂಗತಿಯನ್ನು ಇಸ್ರೋದ ಪ್ರಮುಖ ವಿಜ್ಞಾನಿ ಮತ್ತು ಚಂದ್ರಯಾನ-3ರ ಪ್ರಮುಖ ರೂವಾರಿಯಲ್ಲೊಬ್ಬರೂ ಆಗಿರುವ ಶ್ರೀ ವೆಂಕಟೇಶ್ವರ ಶರ್ಮ ಅವರು ಪತ್ರಕರ್ತೆ ಬರ್ಖಾ ದತ್‌ ಅವರಲ್ಲಿ ಹಂಚಿಕೊಂಡಿದ್ದು, ಇದು ವಾಷಿಗ್ಟಂನ್‌ ಪೋಸ್ಟ್‌ನಲ್ಲಿ ವರದಿಯಾಗಿದೆ…

ಧನ್ಯವಾದಗಳು…

ಶುಕ್ರವಾರ, ಸೆಪ್ಟೆಂಬರ್ 1, 2023

“ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾ ಇಷ್ಟವಾಗಲು ಹತ್ತು ಅಂಶಗಳು… ಇಷ್ಟವಾಗದ ಒಂದೇ ಅಂಶ…

ಪ್ರಿಯ ಸ್ನೇಹಿತರೇ,

ರಕ್ಷಿತ್‌ ಶೆಟ್ಟಿ ಅವರ ಅಭಿನಯದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾ ಇಂದಿನಿಂದ ತೆರೆಕಂಡಿದ್ದು, ನಾನು ನೆನ್ನೆಯೇ ತುಮಕೂರಿನ ಐನಾಕ್ಸ್‌ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿದ್ದ ಪೇಯ್ಡ್‌ ಪ್ರಿಮೀಯರ್‌ ಶೋನಲ್ಲಿ ಸಿನಿಮಾವನ್ನು ನೋಡಿ, ನನಗೆ ಇಷ್ಟವಾದ ಹತ್ತು ಅಂಶಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ…

ಮೊದಲಿಗೆ, ಸಂಗೀತ…  ಸಿನಿಮಾದ ಕಥೆ… ಇದು ಪ್ರೇಮಕಥೆ… ಎಷ್ಟೋ ಪ್ರೇಮಕತೆಗಳು ಈಗಾಗಲೇ ಬಂದಿದೆಯೆನ್ನುವಷ್ಟರಲ್ಲಿ ಸಿನಿಮಾದ ಹಿನ್ನೆಲೆ ಸಂಗೀತ ನಿಮ್ಮನ್ನು ಕಟ್ಟಿಹಾಕಿರುತ್ತದೆ… ಸಂಗೀತ ಚರಣ್‌ ರಾಜ್…

ಎರಡನೆಯದಾಗಿ, ಚಿತ್ರಕಥೆ… ನಿರ್ದೇಶಕರು ಕಥೆ ಹೇಳಿರುವ ಶೈಲಿ ಬಹಳ ಇಷ್ಟವಾಗುತ್ತದೆ…‌ ರಚನೆ ಮತ್ತು ನಿರ್ದೇಶನ ಹೇಮಂತ ಎಮ್‌ ರಾವ್…

ಮೂರನೆಯದಾಗಿ, ಸಿನಿಮಾಟೋಗ್ರಫಿ ನಿರ್ದೇಶಕರ ತಾಳಕ್ಕೆ ತಕ್ಕಂತಿದೆ…‌ ಛಾಯಗ್ರಹಣ ಅದ್ವೈತ ಗುರುಮೂರ್ತಿ…

ನಾಲ್ಕನೇಯದಾಗಿ, ಕವಿ ಗೋಪಾಲಕೃಷ್ಣ ಅಡಿಗ ಟ್ರಸ್ಟಿಗೆ ಕೃತಜ್ಞತೆಗಳನ್ನು ಸಲ್ಲಿಸಿರುವುದು. ಕವಿ ಅಡಿಗರ ʼಯಾವ ಮೋಹನ ಮುರಳಿ ಕರೆಯಿತುʼ ಗೀತೆಯಲ್ಲಿ ಈ ಸಿನಿಮಾದ ಹೆಸರು “ಸಪ್ತ ಸಾಗರದಾಚೆ ಎಲ್ಲೋ” ಬರುತ್ತದೆ…

ಐದನೆಯದು, ಈ ಸಿನಿಮಾದ ಎಡಿಟಿಂಗ್‌ ಇಷ್ಟವಾಯ್ತು. ಸಂಕಲನ ಸುನಿಲ್‌ ಎಸ್‌ ಭಾರಧ್ವಾಜ್…

ಆರನೆಯದು, ಪೋಷಕ ಪಾತ್ರಗಳು… ಅವರುಗಳ ಆಯ್ಕೆ, ಸಂಭಾಷಣೆ… ಅಭಿನಯ‌ ಬಹಳ ಇಷ್ಟವಾಗುತ್ತೆ…

ಏಳನೆಯದು, ನಿರ್ದೇಶಕರು… ಓನ್‌ ಅಂಡ್‌ ಓನ್ಲಿ ಹೇಮಂತ್‌ ಎಮ್ ರಾವ್… ಸಿನಿಮಾವನ್ನು ಎರಡು ಭಾಗಗಳಲ್ಲಿ ಹೇಳಿರುವುದು ಇಷ್ಟವಾಗುತ್ತದೆ.

ಎಂಟನೇಯದು, ನಾಯಕಿ ರುಕ್ಮಿಣಿ ವಸಂತ್‌ ಅಭಿನಯ

ಒಂಭತ್ತನೆಯದು, ರಕ್ಷಿತ್‌ ಶೆಟ್ಟಿ ಅಭಿನಯ‌…

ಹತ್ತನೆಯದು, ಸಿನಿಮಾದ ಕತೆ… ಪ್ರೇಮಕತೆ… ಇದು ಕನ್ನಡ ಸಿನಿಮಾಗಳ ಮತ್ತೊಂದು ಕ್ಲಾಸಿಕ್‌ ಪ್ರೇಮಕತೆಯಾಗುತ್ತದೆ.

ಮತ್ತು ಇನ್ನು ಇಷ್ಟವಾಗುವ ಅಂಶಗಳಿದ್ದರೂ ಇಷ್ಟ ಆಗದೇ ಇದ್ದ ಅಂಶವೆಂದರೆ ಚಿತ್ರಗಳಲ್ಲಿ ಕತೆಗೆ ತಕ್ಕಂತೆ ಪೂರಕವಾಗಿ ಹಾಡುಗಳು ಅರ್ಥಾತ್‌ ಸಾಹಿತ್ಯ ಬಂದಾಗ ಹಿನ್ನಲೆ ಸಂಗೀತವೇ ಜೋರಾಗಿ ಕೇಳುವುದು…

ಸದ್ಯಕ್ಕೆ ಸೈಡ್‌ ಎ ನೋಡಿರಿ… ಅಕ್ಟೋಬರ್‌ 20ಕ್ಕೆ ಸೈಡ್‌ ಬಿ ನೋಡೋದು ಇದ್ದೇ ಇದೆ… ಥ್ಯಾಂಕ್ಯು…

“ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು…

  ಆತ್ಮೀಯ ಸ್ನೇಹಿತರೇ, “ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು… ನನ್ನ ಅನಿಸಿಕೆಯಯನ್ನು ನನ್ನ ಯೂಟ್ಯೂಬ್‌ ಚಾನೆಲ್ಲಿನಲ್ಲಿ ವೀಕ್ಷಿಸಿ… ಧನ್ಯವಾದಗಳೊಂದಿಗೆ, ಗುಬ್ಬಚ್ಚಿ ...