ಶನಿವಾರ, ಸೆಪ್ಟೆಂಬರ್ 9, 2023

ಗುಬ್ಬಚ್ಚಿ ಸತೀಶ್

ಗುಬ್ಬಚ್ಚಿ ಸತೀಶ್



1977ರ ಸೆಪ್ಟ್ಟೆಂಬರ್ 25ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನನ. ಪ್ರ‍್ರೌಢಶಾಲೆಯವರೆಗೆ ಗುಬ್ಬಿಯಲ್ಲಿ ವಿದ್ಯಾಭ್ಯಾಸ, ನಂತರ ತುಮಕೂರಿನ ಶ್ರೀ ಸಿದ್ಧಗಂಗಾ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್ ಫಾರ್ ಬಾಯ್ಸ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ಜೀವನ ಪ್ರೀತಿಯಿಂದಲೇ ಹೆಸರುವಾಸಿಯಾದ ಇವರು ತಮ್ಮ “ಮಳೆಯಾಗು ನೀ...” (2010) ಕವನ ಸಂಕಲನದಿಂದ ಪ್ರೇಮಕವಿ ಎಂದು ಚಿರಪರಿಚಿತರಾಗಿದ್ದಾರೆ. “ಮುಗುಳ್ನಗೆ” (2011 ಮೊದಲ, 2015 ಎರಡನೇ ಮುದ್ರಣ) ಕಾದಂಬರಿ, “ಸ್ನೇಹ ಮಾಡಬೇಕಿಂಥವಳ...” (ಲೇಖನಗಳ ಸಂಗ್ರಹ 2012), ಹನ್ನೊಂದು ಕತೆಗಳ ‘ಉಘೇ ಉಘೇ’ ಇವರ ಮೊದಲ ಕಥಾಸಂಕಲನ (2014), ಬೇಂದ್ರೆ ಸಾಹಿತ್ಯ ಪುರಸ್ಕಾರ ಪಡೆದ ಅಂತರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ ಶಿವು ಕೆ. ಅವರ ‘ವೆಂಡರ್ ಕಣ್ಣು’ (ದಿನಪತ್ರಿಕೆ ಹಂಚುವವರ ಕುರಿತ ಲಲಿತ ಪ್ರಬಂಧಗಳ ಸಂಕಲನ) ಕನ್ನಡ ಪುಸ್ತಕದ ಇಂಗ್ಲೀಷ್ ಅನುವಾದ "Boys of the Dawn" (2017) ಪ್ರಕಟಗೊಂಡಿವೆ. ತುಮಕೂರು ವಾರ್ತೆ ಪತ್ರಿಕೆಯಲ್ಲಿ ಅಂಕಣರೂಪದಲ್ಲಿ ಪ್ರಕಟವಾದ ಪುಸ್ತಕ ಸಂಸ್ಕೃತಿ ಮತ್ತು ಪುಸ್ತಕಗಳನ್ನು ಕುರಿತ ಲೇಖನಗಳ ಸಂಗ್ರಹ “ರೆಕ್ಕೆ ಪುಕ್ಕ ಬುಕ್ಕ” ಮತ್ತು ಸ್ನೇಹ ಕುರಿತು ಸಂಪಾದಿಸಿರುವ “ಮರೆಯಲಾಗದ ಸ್ನೇಹ” 2018ರಲ್ಲಿ ಪ್ರಕಟಗೊಂಡಿವೆ. 

ಬರವಣಿಗೆಯ ಹಲವು ಶಿಬಿರಗಳು, ಕಮ್ಮಟಗಳಲ್ಲಿ ಭಾಗವಹಿಸಿರುವ ಇವರು ತುಮಕೂರಿನ ಕಣ್ಮುಚ್ಚಾಲೆ ಮಕ್ಕಳ ಗುಂಪಿನ 2011ನೇ ಸಾಲಿನ ರಾಜ್ಯಮಟ್ಟದ ಗಾಳಿಪಟ ಲೇಖನ ಸ್ಪರ್ಧಾ ವಿಜೇತ. ತುಮಕೂರು ಜಿಲ್ಲಾ ಲೇಖಕಿಯರ ಸಂಘದವತಿಯಿಂದ ನಡೆದ 2011ನೇ ಸಾಲಿನ ಕಥಾಸ್ಪರ್ಧೆಯಲ್ಲಿ, 2013ರ ಅನನ್ಯ ಪ್ರಕಾಶನದ ಕಥಾಸ್ಪರ್ಧೆಯಲ್ಲಿ ಬಹುಮಾನ ಮತ್ತು 2015ರ ಡಾ|| ಹೇಮಲತಾ ಶಶಿಧರ್ ನೆನಪಿನ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿರುತ್ತಾರೆ. 2014ರ ಅನನ್ಯ ಪ್ರಕಾಶನದ ‘ಗಾಂಧಿ ಜಯಂತಿ’ ಲೇಖನ ಸ್ಪರ್ಧೆಯಲ್ಲಿ, 2015ರ ಸುಧಾ ಯುಗಾದಿ ವಿಶೇಷಾಂಕದ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ (ದೋಭಿಘಾಟಿನ ಗೆಳೆಯರು) ಬಹುಮಾನ ಪಡೆದಿರುತ್ತಾರೆ. ಇವರ ಕವಿತೆಗಳು ಕೂಡ ಪ್ರಶಸ್ತಿಗೆ ಭಾಜನವಾಗಿವೆ.

ಅನುವಾದ, ಮಕ್ಕಳ ಸಾಹಿತ್ಯ ರಚನೆಯಲ್ಲಿಯೂ ಸೃಜನಶೀಲವಾಗಿ ತೊಡಗಿಕೊಂಡಿರುವುದಲ್ಲದೇ, ತಮ್ಮ ಶ್ರೀಮತಿ ಚಂಪ ಸತೀಶ್ ಅವರ ಜೊತೆ ಮಗಳ ಹೆಸರಿನ ‘ಗೋಮಿನಿ ಪ್ರಕಾಶನ’ ದ ಮೂಲಕ ಪುಸ್ತಕ ಪ್ರಕಟಣೆಯಲ್ಲಿ ತೊಡಗಿಕೊಂಡಿದ್ದಾರೆ. ಮಕ್ಕಳಲ್ಲಿ, ಯುವಕರಲ್ಲಿ ವಿಶೇಷವಾಗಿ ಕನ್ನಡ ಪುಸ್ತಕಗಳನ್ನು ಓದುವ-ಬರೆಯುವ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ. ಕಂಪ್ಯೂಟರ್ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ತದನಂತರ ಹದಿನೈದು ವರ್ಷಗಳ ಕಾಲ ತುಮಕೂರು ವೀರಶೈವ ಸಹಕಾರ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ತಮ್ಮಿಷ್ಟದ ಪ್ರವೃತ್ತಿ ಬರವಣಿಗೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ತಮ್ಮದೇ ಹೆಸರಿನ ಯೂಟ್ಯೂಬ್ ಚಾನೆಲ್ ಕೂಡ ನಡೆಸುತ್ತಾರೆ.

ಬರವಣಿಗೆಯ ಕೌಶಲ, ಪುಸ್ತಕ ಪ್ರೀತಿ ಮತ್ತು ಜೀವನ ಪ್ರೀತಿಯ ಉಪನ್ಯಾಸಗಳಿಗೂ ಹೆಸರುವಾಸಿ.

9986692342

sathishgbb@gmail.com

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ದುಡ್ಡು ಬಿತ್ತಿ, ದುಡ್ಡು ಬೆಳೆಯಬಹುದೇ…!?

ಕನ್ನಡದಲ್ಲಿ ಪ್ರಕಟವಾಗಿ ಅತ್ಯಂತ ಹೆಚ್ಚು ಮಾರಾಟವಾದ “ಮನಿ ಸೀಕ್ರೆಟ್ಸ್‌ ಹಾಗೂ ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್”‌ (ಅಮೇಜಾನಿನಲ್ಲಿ ಕೊಳ್ಳಲು ಲಿಂಕ್:‌ https://amzn....