ಗುರುವಾರ, ನವೆಂಬರ್ 14, 2024

ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ.

ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವಾದರೆ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಓದಿ.

https://nallanalle.blogspot.com/2024/11/how-to-earn-online.html

ಮೊದಲಿಗೆ, ನಾಳೆಯಿಂದ ಬೆಂಗಳೂರಿನಲ್ಲಿ ಜರುಗಲಿರುವ ವೀರಲೋಕ ಪುಸ್ತಕ ಸಂತೆಯಲ್ಲಿ ನೀವೆಲ್ಲಾ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಕೋರುತ್ತೇನೆ... ಮಾನಸಿಕವಾಗಿ ಮೂರೂ ದಿನಗಳು ನಾನಲ್ಲಿ ಇರುತ್ತೇನೆ ಎಂದು ಬಿನ್ನವಿಸಿಕೊಳ್ಳುತ್ತೇನೆ.


ಪುಸ್ತಕ ಸಂತೆಗೆ ಶುಭವಾಗಲಿ...

ಮೊನ್ನೆ ಸ್ನೇಹಿತರೊಬ್ಬರು ನನ್ನ ವಾಟ್ಸಪ್ಪಿಗೆ ಈ ಕೆಳಗಿನ ಪೋಸ್ಟರ್‌ ಕಳಿಸಿದರು. ಅವರಿಗೆ ನಾನು ಕೂಡ ಸಾಹಿತಿ, ಪುಸ್ತಕ ಪ್ರಕಾಶನವಿದೆ ಎಂದು ಇತ್ತೀಚಿಗಷ್ಟೇ ಗೊತ್ತಾಗಿದೆ. ಆದಕಾರಣ ಈ ಫೋಸ್ಟರ್‌ ಕಳಿಸಿದ್ದರು. ನಾನು ಧನ್ಯವಾದಗಳನ್ನು ಹೇಳಿ ಅನಂತ ಕುಣಿಗಲ್‌ ಅವರಿಗೆ ಪುಸ್ತಕ ಪ್ರಕಾಶನ ಮಾಡುವುದು ಹೇಗೆ ಎಂದು ತಿಳಿಸಿದ್ದೇ ನಾನು ಎಂದು ಉತ್ತರ ಬರೆದೆ. ಅವರಿಗೆ ಆಶ್ಚರ್ಯವಾಯಿತು. 

ಶ್ರೀಯುತ ಅನಂತ ಕುಣಿಗಲ್‌ ಅವರು ಉತ್ಸಾಹಿ ಸಾಹಿತಿ ಮತ್ತು ಪ್ರಕಾಶಕರು. ಈಗ ವೀರಲೋಕದ ಭಾಗವೂ ಆಗಿರುವ ಅನಂತ ಅವರು ಈ ಪುಸ್ತಕ ಸಂತೆಯಲ್ಲಿ ಪುಸ್ತಕ ಪ್ರಕಟಣೆಯ ಬಗ್ಗೆ ಮಾತನಾಡುತ್ತಿರುವುದು ಸಂತಸದ ವಿಚಾರವೇ ಸರಿ. ನನಗೆ ಸಮಯವಿದಿದ್ದರೆ ಮೊದಲನೇ ಸಾಲಿನಲ್ಲಿ ಕುಳಿತು ಇವರ ಮಾತುಗಳನ್ನು ಆಲಿಸುತ್ತಿದ್ದೆ. ಪ್ರಕಾಶನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ನಾನೆಷ್ಟು ತಿಳಿದುಕೊಂಡಿದ್ದರೂ ಅದು ಸಾಲದಾಗಿದೆ. ಕಾರಣಾಂತರಗಳಿಂದ ನಾನು ಹೋಗಲಾಗುತ್ತಿಲ್ಲ. ಆಸಕ್ತರು ಹೋಗಿ ಬನ್ನಿ...

ಅನಂತ ಅವರು ಆಗಾಗ ಫೇಸ್ಬುಕ್ಕಿನಲ್ಲಿ ಪ್ರಕಾಶನದ ಬಗ್ಗೆ ಬರೆಯುತ್ತಿರುತ್ತಾರೆ. ಬಹಳ ಲೆಕ್ಕಾಚಾರದ ಉಪಯುಕ್ತ ಮಾಹಿತಿಗಳಿರುತ್ತವೆ. ತಮ್ಮ ಪುಸ್ತಕ ಪ್ರಕಾಶನದ ಅನುಭವದ ಬಗ್ಗೆ ಹಿಂದೊಮ್ಮೆ ಬರೆಯುತ್ತಾ ನನ್ನ ಹೆಸರನ್ನು ಪ್ರಸ್ತಾಪಿಸುವುದನ್ನೇ ಮರೆತಿದ್ದರು. ಪ್ರಕಾಶನದ ಅತಿರಥ ಮಹಾರಥರನ್ನು ನೆನೆಯುತ್ತಾ ಈ ಗುಬ್ಬಚ್ಚಿಯನ್ನೇ ಮರೆತಿದ್ದರು. ನಾನು ಕಾಮೆಂಟಿಸಿ ಅವರಿಗೆ ನೆನಪಿಸಿದೆ. ಇದಕ್ಕೆ ಕಾರಣವಾದದ್ದು ನನ್ನೊಳಗಿನ ನಾನು. ಈ ನಾನುವಿನ ಬಗ್ಗೆ ನನಗೆ ವಿಷಾದವಿದೆ.

ಇತ್ತೀಚಿಗೆ ನಮ್ಮ ಪ್ರಕಾಶನದ ನಿಬಂಧನೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಾಗ ಅನಂತ ಅವರು ರಾಯಧನದ ಬಗ್ಗೆ ಕಾಮೆಂಟ್‌ ಮಾಡಿದ್ದರು. ಯಾರಾದರೂ ರಾಯಧನ ಕೊಡುತ್ತೇನೆ ಎಂದರೆ ನನ್ನ ಪುಸ್ತಕಗಳನ್ನು ಕೊಡಲು ನಾನೇ ಸಿದ್ಧನಿರುವಾಗ ರಾಯಧನದ ಮಾತೆಲ್ಲಿ? ನಿಮ್ಮ ಪ್ರಕಾಶನದ ಈಮೇಲ್‌ ಐಡಿ ಕೊಡಿ, ಇಷ್ಟವಾದರೆ ಪ್ರಕಟಿಸಿ ರಾಯಧನ ಕೊಡಿ ಎಂದೆ. ಅವರ್ಯಾಕೋ ಈಮೇಲ್‌ ಐಡಿ ಕೊಡಲಿಲ್ಲ. ಹೋಗಲಿಬಿಡಿ.

ಮೊನ್ನೆ ಮತ್ತೊಬ್ಬ ಸ್ನೇಹಿತರಾದ ಪ್ರಕಾಶಕರು ಇದು ನಿಮ್ಮದೇ ಐಡಿಯಾ ಎಂದರು. ಹೇಗೆ ಸರ್‌ ಎಂದೆ. ನೀವು ಹಿಂದೊಮ್ಮೆ ಪ್ರಕಟಿಸಿದ್ರಲ್ಲ ಅದರ ಪ್ರಭಾವ ಅಂದರು. ಇಲ್ಲ ಸರ್.‌ ಪ್ರತಿಯೊಬ್ಬ ಸೃಜನಶೀಲ ಮನಸ್ಸಿನಲ್ಲಿಯೂ ಅವರದೇ ಐಡಿಯಾಗಳಿರುತ್ತವೆ. ಸ್ಪೂರ್ತಿ ಇರಬಹುದು ಎಂದೆ. ಅವರು ನನ್ನ ಸ್ನೇಹಕ್ಕೆ ಕಟ್ಟುಬಿದ್ದು ಅಷ್ಟಕ್ಕೆ ಸುಮ್ಮನಾದರು. ಸ್ನೇಹಿತರಾದ ಪ್ರಕಾಶಕರು ಹೇಳಿದ ಪೋಸ್ಟರ್‌ ಕೆಳಗಿದೆ.


ಇಲ್ಲಿ ಆಕಾಶ ನೋಡಲು ನುಗ್ಗಲಿಲ್ಲ. ನನಗೆ ಕಂಡಷ್ಟು ಆಕಾಶ ನನ್ನದು. ನಿಮಗೆ ದಕ್ಕಿದಷ್ಟು ಆಕಾಶ ನಿಮ್ಮದು...

ಈಗ, ವಿಷಯಕ್ಕೆ ಬರುತ್ತೇನೆ. ಕನ್ನಡ ಪುಸ್ತಕ ಪ್ರಕಾಶನ ಕುರಿತು ತಿಳಿಸಲು ಬಹಳಷ್ಟು ಜನ ಇದ್ದಾರೆ. ಆದರೆ, ಪ್ರಶ್ನೆಯಿರುವುದು ಓದುಗರನ್ನು ಎಲ್ಲಿಂದ ತರುವುದು? ಎಂಬುದು. ಏ! ಓದುಗರಿದ್ದಾರೆ ಮೊನ್ನೆ ಇಂತಹವರದು ಇಂತಿಷ್ಟು ಸಾವಿರ ಪ್ರತಿಗಳು ಮುದ್ರಣವಾಗಲಿಲ್ಲವೇ? ಎಂದೆಲ್ಲಾ ಹೇಳಬೇಡಿ. ಅದು ಇಷ್ಟು ವರ್ಷಗಳ ಕಾಲ ಅವರು ಗಳಿಸಿದ ಆಸ್ತಿ. ಸಮಸ್ಯೆ ಇರುವುದು ಹೊಸ ಓದುಗರ ಸೃಷ್ಟಿಯಲ್ಲಿ. ಕಲಿಕೆಯಲ್ಲಿ ಕನ್ನಡ ಕಡಿಮೆಯಾಗುತ್ತಿದೆ. ಹಿಂದೊಮ್ಮೆ ಒಂದನೇ ತರಗತಿಯಿಂದಲೇ ಇಂಗ್ಲೀಷ್‌ ಭಾಷೆಯನ್ನು ಕಲಿಸುತ್ತೇವೆ ಎಂದು ಸರ್ಕಾರ ಹೇಳಿದಾಗ ಬೇಡ ಬೇಡ ಎಂದು ಕನ್ನಡ ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ವಿರೋಧಿಸಿದರು. ಸರ್ಕಾರ ಸುಮ್ಮನಾಯಿತು. ಅಂದು ಈ ಕೆಲಸವಾಗಿದ್ದರೆ ಇಂದಿನ ದುಸ್ಥಿತಿ ಬರುತ್ತಿರಲಿಲ್ಲ. ಈಗ ಒಂದನೇ ತರಗತಿಯಿಂದಲೇ ಇಂಗ್ಲೀಷ್‌ ಕಲಿಸುತ್ತಿದ್ದರೂ ರಾಜ್ಯದ ಅರ್ಧ ಮಕ್ಕಳು ಇಂಗ್ಲೀಷ್‌ ಶಾಲೆಗಳಲ್ಲಿ ಕಲಿಯುತ್ತಿದ್ದು, ಕನ್ನಡ ಒಂದು ಭಾಷೆಯಾಗಷ್ಟೇ ಕಲಿಯುತ್ತಿದ್ದು, ಪಾಸ್‌ ಆದರೆ ಸಾಕು ಎಂಬ ಮನಸ್ಥಿತಿಗೆ ಬಂದುಬಿಟ್ಟಿದ್ದಾರೆ. ನನ್ನ ಆತಂಕ ಇರುವುದು ಇಲ್ಲಿ! ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಹೊಸ ಓದುಗರನ್ನು ಎಲ್ಲಿಂದ ತರುವುದು?

ಚರ್ಚೆಗೆ ಒಂದಷ್ಟು ಕಾಮೆಂಟುಗಳು ಬಂದರೆ, ಈ ಬಗ್ಗೆ ವಿಸ್ತಾರವಾಗಿ ಬರೆಯುವೆ.

- ಗುಬ್ಬಚ್ಚಿ ಸತೀಶ್.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ. ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವ...