ಒಂದು ರಾತ್ರಿ ಊಟದ ಸಮಯದಲ್ಲಿ
ಈಟಿವಿ ನ್ಯೂಸ್ ನೋಡುತ್ತಿದ್ದಾಗ ʼಹಾಯ್ ಬೆಂಗಳೂರುʼ ವಾರಪತ್ರಿಕೆಯಲ್ಲಿ ʼಜಾನಕಿ ಕಾಲಂʼ ಬರೆಯುತ್ತಿರುವವರು
ಜೋಗಿ ಅಂದರೆ ಜ್ಯೋತಿಯ ಗಂಡ ಗಿರೀಶ್ ಎಂದು ಗಿರೀಶ್ ರಾವ್ ಹತ್ವಾರ್ ಅವರನ್ನು ಪರಿಚಯಿಸಿದಾಗ ನನಗೆ
ಶಾಕ್ ಆಗಿದ್ದಂತೂ ಸತ್ಯ. ಕೂಡಲೇ ಊರಿನಲ್ಲಿದ್ದ ನನ್ನ ಗೆಳೆಯರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ.
ಅವರಿಗೂ ಶಾಕ್ ಆಯಿತು. ಅಲ್ಲಿಯವರೆಗೂ ಜಾನಕಿ ಎಂದರೆ ಬೆಂಗಳೂರಿನ ವಿವಿಯಲ್ಲಿ ಅಧ್ಯಾಪಕಿಯಿರಬಹುದು
ಎಂದು ಭ್ರಮಿಸಿದ್ದ ಸಂಗತಿಯೇ ನಮ್ಮ ಶಾಕಿಗೆ ಕಾರಣವಾಗಿತ್ತು. ಕನ್ನಡ ಸಾಹಿತ್ಯದ ಬಗ್ಗೆ, ಬೆಂಗಳೂರಿನ
ಬಗ್ಗೆ, ಆ ಕಾಲಕ್ಕೇ ಓದುಗರ ನಾಡಿ ಹಿಡಿದಂತೆ ಬರೆಯುತ್ತಿದ್ದವರು ಕನ್ನಡ ಉಪನ್ಯಾಸಕರೇ ಇರಬಹುದೆಂಬುದು
ನಮ್ಮ ಬಹುಕಾಲದ ನಂಬಿಕೆಯಾಗಿತ್ತು. ರವಿ ಬೆಳಗೆರೆ ಅವರ ʼಹಾಯ್ ಬೆಂಗಳೂರ್ʼ ವಾರಪತ್ರಿಕೆಯಂತೆ, ಲಂಕೇಶರ
ʼಲಂಕೇಶ್ ಪತ್ರಿಕೆʼಯನ್ನು ಓದುತ್ತಿದ್ದ ನಮಗೆ ಥೇಟ್ ಲಂಕೇಶರಂತೇ ಜಾನಕಿ ಅವರೂ ಉಪನ್ಯಾಸಕರೇ ಇರಬೇಕೆಂದು
ನಾವು ಭಾವಿಸಿದ್ದೆವು. ಆದರೆ, ಅಂದು ಜಾನಕಿ ಎಂದರೆ ಜೋಗಿಯೆಂಬುದು ಮನದಟ್ಟಾಗಿತ್ತು.
ನಂತರದ ದಿನಗಳಲ್ಲಿ ಉದಯವಾಣಿಯ
ಭಾನುವಾರದ ಪುರವಣಿ “ಸಾಪ್ತಾಹಿಕ ಸಂಪದʼದಲ್ಲಿ ದೀಪಾವಳಿ ಕುರಿತ ಲೇಖನವೊಂದರಲ್ಲಿ ಕೃಷ್ಣ ಆಲನಹಳ್ಳಿಯವರ
ಪರಿಚಯ ನನಗಾಯಿತು. ಆ ಲೇಖನವನ್ನು ಬರೆದವರು ಇದೇ ಜೋಗಿ. ಆ ಲೇಖನವನ್ನು ಓದದೇ ಇದ್ದರೆ ಬಹುಶಃ ನಾನು
ಕೃಷ್ಣ ಆಲನಹಳ್ಳಿಯವರ “ಸುಟ್ಟ ತಿಕದ ದೇವರು” ಎಂಬ ಅಪರೂಪದ ಕತೆಯಿಂದ, ಕೃಷ್ಣ ಎಂಬ ಅನನ್ಯ ಸಾಹಿತಿಯ
ಪರಿಚಯದಿಂದ ವಂಚಿತನಾಗುತ್ತಿದ್ದನೆನೋ!? ಇದಕ್ಕೂ ಸ್ವಲ್ಪ ವರುಷಗಳ ಮುಂಚೆ ನಮ್ಮೂರಿನ ಲೈಬ್ರರಿಯಲ್ಲಿ
“ರವಿ ಕಂಡದ್ದು, ರವಿ ಕಾಣದ್ದುʼ ಎಂಬ ಪುಸ್ತಕವೊಂದನ್ನು ನೋಡಿದ್ದೆ. ಅದನ್ನು ಬರೆದಿದ್ದವರು ರವಿ
ಬೆಳಗೆರೆ ಮತ್ತು ಜೋಗಿ. ಹೀಗೇ ಜೋಗಿಯವರ ಓದಿಗೆ ಬಿದ್ದವನು ನಾನು. ಮುಂದೊಂದು ದಿನ ತುಮಕೂರಿನ ನಮನ
ಬುಕ್ ಪ್ಯಾಲೇಸಿನಲ್ಲಿ ಜೋಗಿಯವರ “ನದಿಯ ನೆನಪಿನ ಹಂಗುʼ ಕಾದಂಬರಿ ಓದಿದ ಮೇಲೆ ಇವರ ಅಭಿಮಾನಿಯಾದರೂ
ನಂತರ ನನಗೆ ಓದಲು ಸಾಧ್ಯವಾದದ್ದು ಜೋಗಿಯವರ ಇತ್ತೀಚಿನ “ಅಶ್ವತ್ಥಾಮನ್” ಕಾದಂಬರಿ ಮಾತ್ರ.
ಹಾಗೂ, 2014ರಲ್ಲಿ ಶ್ರವಣ ಬೆಳಗೊಳದ
ಸಾಹಿತ್ಯ ಸಮ್ಮೇಳನದಲ್ಲಿ ಅದೇ ವರ್ಷ ಪ್ರಕಟವಾಗಿದ್ದ ನನ್ನ “ಉಘೇ ಉಘೇ” ಕಥಾಸಂಕಲನವನ್ನು ಮಾರಾಟಮಾಡಬೇಕೆಂದು
ಬ್ಯಾಂಕಿನಲ್ಲಿ ಅಕ್ಷರಶಃ ಜಗಳ ಮಾಡಿಕೊಂಡು ರಜೆ ಪಡೆದು ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಳಿಗೆ ಮಾಡಿದ್ದೆ.
ಆಗ ಅಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಪುಸ್ತಕಗಳಲ್ಲಿ ಜೋಗಿಯವರ “ಲೈಫ್ ಇಸ್ ಬ್ಯೂಟಿಪುಲ್” ಪುಸ್ತಕವೂ
ಒಂದು! ಅಲ್ಲಿಯೇ ಗೆಳೆಯ ಕೊಟ್ಟ ಆ ಪುಸ್ತಕದ ಒಂದು ಅಧ್ಯಾಯವನ್ನು ಓದಿ ಇದೇನು ಜೋಗಿ ಈ ರೀತಿ ಬರೆದಿದ್ದಾರಲ್ಲ
ಎಂದು ಬೇಜಾರಾಗಿ ಪುಸ್ತಕವನ್ನು ಪಕ್ಕಕ್ಕಿಟ್ಟಿದ್ದೆ. ತದನಂತರ ತಿಳಿದದ್ದು ಅದು ಜೋಗಿಯವರು ಬರೆದಿರುವುದು
ನಮ್ಮಂಥ ಓದುಗರಿಗಲ್ಲ, ಹೊಸ ಅಂದರೆ ಹೊಸ ತಲೆಮಾರಿನ ಓದುಗರಿಗೆ ಎಂದು. ಹೊಸ ಓದುಗರನ್ನು ಕನ್ನಡದ ಪುಸ್ತಕಗಳೆಡೆಗೆ
ಸೆಳೆಯಬೇಕೆಂಬ ಅವರ ಪ್ರಯತ್ನ ಫಲ ಕೊಟ್ಟಿತ್ತು. ಇದೇ ಕಾರಣಕ್ಕೆ ಇದೇ ಮಾದರಿಯ ಸರಣಿ ಪುಸ್ತಕಗಳು ಪ್ರಕಟವಾಗಿ
ಹೆಚ್ಚು ಓದುಗರನ್ನು, ಹೊಸ ಓದುಗರನ್ನು ಸೆಳೆಯತೊಡಗಿದವು. ʼಲೈಫ್ ಇಸ್ ಬ್ಯೂಟಿಪುಲ್ʼ ನಂತರ ʼತಂದೆ
ತಾಯಿ ದೇವರಲ್ಲ,ʼ ʼಪ್ರೀತಿಸುವವರನ್ನು ಕೊಂದುಬಿಡಿ,ʼ ʼನೀವು ದೇವರನ್ನು ನಂಬಬೇಡಿ,ʼ ʼನಾನು ಬಡವ ನಾನೇ
ಸುಖಿ,ʼ ʼಐ ಹೇಟ್ ಮೈ ವೈಫ್,ʼ ಪುಸ್ತಕಗಳು ಪ್ರಕಟವಾಗಿ ಅಪಾರ ಜನಮನ್ನಣೆಯನ್ನು ಗಳಿಸುವುದರ ಜೊತೆಗೆ
ಹೊಸ ಓದುಗರನ್ನು ಕೂಡ ಸೆಳೆದದ್ದಂತೂ ನಿಜ. ಇದಕ್ಕೆ ಪ್ರಮುಖ ಕಾರಣವೇಂದರೆ, ಜೋಗಿಯವರ ಬರವಣಿಗೆ, ಪುಸ್ತಕದ
ಸ್ಮಾರ್ಟ್‌ಫೋನಿನಂತಹ ಸೈಜು ಎಂದೇ ಹೇಳಬೇಕು. ಮತ್ತು ನನ್ನ ಅಭಿಪ್ರಾಯವೊಂದನ್ನು ಸೇರಿಸಿಬೇಕೆಂದರೇ,
ಇಲ್ಲಿನ ನೆಗೆಟಿವ ಟೈಟಲ್‌ಗಳೇ ಈ ಪುಸ್ತಕಗಳೆಡೆಗೆ ಯುವ ಮನಸ್ಸುಗಳನ್ನು ಸೆಳೆಯುತ್ತವೆ ಎಂದು ನಾನು
ಭಾವಿಸಿದ್ದೇನೆ. ಉದಾಹರಣೆಗೆ ಹೇಳಬೇಕೆಂದರೆ, ಇವನ್ಯಾರಪ್ಪ, ʼತಂದೆ ತಾಯಿ ದೇವರಲ್ಲʼ ಅಂತಾನೇ, ʼಪ್ರೀತಿಸುವವರನ್ನು
ಕೊಂದುಬಿಡಿʼ ಅಂತಾನೇ ಎಂದೆಲ್ಲಾ ಹೊಸ ಓದುಗರು ಹಾಗೂ ಓದುಗರೂ ಕೂಡ ಈ ಪುಸ್ತಕಗಳೆಡೆಗೆ ಆಕರ್ಷಿತರಾಗಿರಬಹುದು.
ಈ ಪುಸ್ತಕಗಳ ಮಾರಾಟವನ್ನು ಕಂಡು ಹಲುಬಿದವರು ಜೋಗಿ ಮಾರಾಟಕ್ಕೆಂದೇ ಈ ರೀತಿಯ ಪುಸ್ತಕಗಳನ್ನು ಬರೆಯುತ್ತಾರೆ
ಎಂದರು. ಅದು ಅವರ ಹೊಟ್ಟೆಹುರಿಯಷ್ಟೇ! ಪುಸ್ತಕಗಳನ್ನು ಬರೆಯುವುದು, ಪ್ರಕಟಿಸುವುದು ಮಾರಾಟವಾಗಲಿ
ಅಂದರೆ ಓದುಗರನ್ನು ತಲುಪಲಿ ಎಂಬ ಉದ್ದೇಶದಿಂದ ಅಲ್ಲವೇ. ಪ್ರಶಸ್ತಿಗಳಿಗೇ ಬರೆಯುವುದು ಕೂಡ ಉಂಟು.
ಅದು ಬೇರೆ ವಿಚಾರ ಮತ್ತು ಅಂತಹವರೇ ಹೆಚ್ಚಿದ್ದಾರೆ. ಅದಿರಲಿ, ಜೋಗಿಯವರು ಈ ರೀತಿಯ ಪುಸ್ತಕಗಳನ್ನು
ಯಂಗ್ ಅಡಲ್ಟ್ ಫಿಕ್ಷನ್ ಎಂದು ಎಲ್ಲೋ ಬರೆದದ್ದನ್ನು ಓದಿದಾಗ ನನಗೆ ಇವು ಯಂಗ್ ಅಡಲ್ಟ್ ಫಿಕ್ಷನ್
ಮಾದರಿಯ ಪುಟ್ಟ ಪುಟ್ಟ ಕತೆಗಳಷ್ಟೇ ಎಂದನಿಸಿತು. ಕಾರಣ, ಇಂಗ್ಲೀಷಿನಲ್ಲಿ ಕಾದಂಬರಿಗಳಿಗೆ ಯಂಗ್ ಅಡಲ್ಟ್
ಫಿಕ್ಷನ್ ಅನ್ನುತ್ತಾರೆ. ಈ ಚೇತನ್ ಭಗತ್, ರವೀಂದರ್ ಸಿಂಗ್, ಸವಿ ಶರ್ಮಾ… ಅವರುಗಳು ಬರೆಯುವ
ರೀತಿಯ ಕಾದಂಬರಿಗಳು.
ನಂತರ ಜೋಗಿಯವರು ನನ್ನ ಕತೆಗಳನ್ನು ಕುರಿತು ಬರೆದು ಮೈಲ್ ಮಾಡಿದರು, ನಾನು ಅವರ ʼಕತೆ ಚಿತ್ರಕಥೆ ಸಂಭಾಷಣೆ ಜೋಗಿʼ ಎಂಬ ಅವರ ಪುಸ್ತಕವನ್ನು ಕುರಿತು
ನನ್ನ ʼರೆಕ್ಕೆ ಪುಕ್ಕ ಬುಕ್ಕʼ ಅಂಕಣದಲ್ಲಿ ಬರೆದೆ. ಒಂದೆರೆಡು ಸಲ ಅವರನ್ನು ಭೇಟಿಯಾಗಿದ್ದೂ ಇದೆ.
ಈಗ ವಿಷಯಕ್ಕೆ ಬರುತ್ತೇನೆ. ಜೋಗಿಯವರ
ʼಲೈಫ್ ಇಸ್ ಬ್ಯೂಟಿಪುಲ್ʼ ಸರಣಿಯ ಏಳನೇ ಪುಸ್ತಕ “ಚಿಯರ್ಸ್! – Drink Like a Fish” ಓದಲು
ಶುರುಮಾಡಿದಾಗ ಈ ಪುಸ್ತಕ ಕುರಿತು ಜೋಗಿಯವರು ಬರೆದ ʼಇದು ಕಡ್ಲೆಬಜಿಲ್!ʼ ಮಾತುಗಳಲ್ಲಿ ಮಂಗಳೂರಿನ
ಸಭೆಯೊಂದರಲ್ಲಿ ಸಿಗುವ ವಿದ್ಯಾರ್ಥಿನಿಯೊಬ್ಬರು ʼನಿಮ್ಮ ಪುಸ್ತಕದಿಂದ ಓದು ಆರಂಭಿಸಿದೆ. ಈಗ ನಿಮ್ಮನ್ನು
ಓದುವುದಿಲ್ಲ. ಲಂಕೇಶರನ್ನು ಓದಲು ಶುರು ಮಾಡಿದ್ದೇನೆʼ ಎಂದು ಹೇಳಿದ್ದನ್ನು ಉಲ್ಲೇಖಿಸಿದ್ದಾರೆ. ಇದು
ಓಂದು ಉದಾಹರಣೆಯಷ್ಟೆ. ಈ ರೀತಿಯ ಅಸಂಖ್ಯ ತರುಣ ತರುಣಿಯರು ಕನ್ನಡದ ಓದುಗರಾಗಿ ರೂಪುಗೊಂಡಿದ್ದಾರೆ.
ಅದನ್ನು ಬಹಳ ಹತ್ತಿರದಿಂದ ನಾನು ಕೂಡ ಗಮನಿಸಿದ್ದೇನೆ. ಸಾಹಿತ್ಯದ ಯಾವುದೇ ಪ್ರಕಾರದ ಪುಸ್ತಕಗಳನ್ನು
ಈ ಸರಣಿ ಪುಸ್ತಕಗಳಿಗೆ ಹೋಲಿಸಲಾಗದಿದ್ದರೂ ಈ ಪುಸ್ತಕಗಳಲ್ಲಿ ಸಾಹಿತ್ಯದ ಎಲ್ಲಾ ಪ್ರಕಾರಗಳಿವೆ. ಸುಮ್ಮನೇ
ಹೇಳಬೇಕೆಂದರೆ, ಒಂದಷ್ಟು ಜನ ಕುವೆಂಪು ಅವರನ್ನು ಓದುತ್ತಾ, ತೇಜಸ್ವಿಯವರನ್ನು ಓದುತ್ತಾ, ಭೈರಪ್ಪನವರನ್ನು
ಓದುತ್ತಾ, ಲಂಕೇಶರನ್ನು ಓದುತ್ತಾ, ರವಿ ಬೆಳಗೆರೆಯನ್ನು
ಓದುತ್ತಾ, ಸಾಯಿಸುತೆಯವರನ್ನು ಓದುತ್ತಾ, ಇನ್ನೂ ಅವರಿವರನ್ನು ಓದುತ್ತಾ ಸಾಹಿತ್ಯದೆಡೆಗೆ ತೆರೆದುಕೊಂಡರೆ
ಇತ್ತೀಚಿನ ಬಹುತೇಕ ಓದುಗರನ್ನು ಸಾಹಿತ್ಯದೆಡೆಗೆ ಸೆಳೆದ ಕೀರ್ತಿ ನಿಸ್ಸಂಶಯವಾಗಿ ಜೋಗಿಯವರಿಗೆ ಸಲ್ಲುತ್ತದೆ.
ಇಂತಹ ಜೋಗಿಯವರಿಗೆ ನಾನಂತೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಓದಿನ ರುಚಿ ಹತ್ತಿಸಿಕೊಂಡವರಿಗೂ
ತಿಂಡಿಯ ರುಚಿ ಹತ್ತಿಸಿಕೊಂಡವರಿಗೂ ವ್ಯತ್ಸಾಸವೇ ಇರುವುದಿಲ್ಲ. ಇದೊಂಥರ ಬಲ್ಲವನೇ ಬಲ್ಲ ಬೆಲ್ಲದ ರುಚಿಯ
ಅಂತಾರಲ್ಲ ಹಾಗೇ!
“ಚಿಯರ್ಸ್” ಪುಸ್ತಕದ ಒಳಗೆ
ʼತೊಂಬತ್ತರ ತಾರುಣ್ಯದಲ್ಲಿ ಸಾಯೋಣ,ʼ ಕಥಾಪ್ರಸಂಗ,ʼ ಅಧಿಕಪ್ರಸಂಗ,ʼ ವಿಚಾರ ಪ್ರಸಂಗʼ ಮತ್ತು ʼನಿಮ್ಮನ್ನು
ಅಭಿನಂದಿಸುತ್ತಾ…ʼ ಎಂಬ ಐದು ಅಧ್ಯಯಗಳಿವೆ. ʼಕಥಾಪ್ರಸಂಗʼ ಅಧ್ಯಾಯದಲ್ಲಿ ಐದು ಕತೆಗಳಿವೆ. ʼತೇರೆ
ಮನ್ ಕೀ ಜಮುನಾ!ʼ ಕತೆ ಓದಿದೆ. ಇನ್ನೂ ಹೊರಬರಲಾಗಿಲ್ಲ.
ನೀವೂ ಒಳಬರಲು ಇಚ್ಚಿಸುವುದಾದರೇ…
ನಿಮಗೂ ಚಿಯರ್ಸ್! https://amzn.to/41xUDfI
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ