ಸ್ನೇಹಿತರೇ,
ಆಂಗ್ಲ ಸಾಹಿತಿ ಜೋಸೆಫ್ ರುಡ್ಯಾರ್ಡ್
ಕಿಪ್ಲಿಂಗ್ ಅವರ ಜಗತ್ಪ್ರಸಿದ್ದ “ಜಂಗಲ್ ಬುಕ್” ಯಾರಿಗೆ ಗೊತ್ತಿಲ್ಲ? ಜಂಗಲ್ ಬುಕ್ ಎಂದರೆ
ಮೊಗ್ಲಿ, ಶೇರ್ ಖಾನ್, ಭಗೀರ, ಭಾಲೂ ಇನ್ನು ಮುಂತಾದ ಪಾತ್ರಗಳು ನಮ್ಮ ಕಣ್ಮುಂದೆ ಸುಳಿದಾಡುತ್ತವೆ.
ಕಾಡು ಕಣ್ಕಟ್ಟುತ್ತದೆ. ಭಾರತದಲ್ಲಿಯೇ 1865 ಡಿಸೆಂಬರ್ 30ರಂದು ಮುಂಬೈನಲ್ಲಿ ಜನಿಸಿದ ಕಿಪ್ಲಿಂಗ್
ತನ್ನ ಬಾಲ್ಯವನ್ನು ಕಳೆದದ್ದು ಇಲ್ಲಿಯೇ. ತನ್ನ ಆರನೇ ವರ್ಷದಲ್ಲಿ ವಿದ್ಯಾಭ್ಯಾಸಕ್ಕೆಂದು ಇಂಗ್ಲೇಂಡಿಗೆ
ತೆರಳಿದ ಕಿಪ್ಲಿಂಗ್ ಹತ್ತು ವರುಷಗಳ ನಂತರ ಭಾರತಕ್ಕೆ ಹಿಂದಿರುಗಿದರು. ಕವಿ, ಕತೆಗಾರ, ಪತ್ರಕರ್ತ
ಮತ್ತು ಕಾದಂಬರಿಕಾರರಾಗಿದ್ದ ಕಿಪ್ಲಿಂಗ್ ಆ ಕಾಲಘಟ್ಟದ ಜನಪ್ರಿಯ ಸಾಹಿತಿ. 1907ರಲ್ಲಿ ತಮ್ಮ ನಲವತ್ತೊಂದನೇಯ
ವಯಸ್ಸಿನಲ್ಲಿಯೇ ಸಾಹಿತ್ಯಕ್ಕಾಗಿ ನೊಬೆಲ್ ಬಹುಮಾನವನ್ನು ಪಡೆದವರು. ಇವರ ʼಜಂಗಲ್ ಬುಕ್ʼ ಒಂದು
ಪ್ರಸಿದ್ಧ ಕಥಾಸಂಕಲನ. ಈಗಾಗಲೇ ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದೆ. ಇದೀಗ ಕನ್ನಡಕ್ಕೂ
ಬಂದಿದೆ.
ಮೂಲ ಇಂಗ್ಲೀಷ್ ಭಾಷೆಯ ʼಜಂಗಲ್
ಬುಕ್ʼ ಕತೆಗಳು ಹುಟ್ಟಿದ್ದು ಅಮೇರಿಕಾದಲ್ಲಿ. ತಮ್ಮ ಪುಟ್ಟ ಮಗಳು ಜೋಸೆಫೀನ್‌ಗಳಿಗಾಗಿ ಈ ಕತೆಗಳನ್ನು
ಕಿಪ್ಲಿಂಗ್ ಬರೆದರು ಎಂಬ ಹೇಳಿಕೆಯಿದೆ. ಆದರೆ, ದುರದೃಷ್ಟವಶಾತ್ ಜೋಸೆಫೀನ್ ನ್ಯೂಮೋನಿಯಾದಿಂದ ತನ್ನ
ಆರನೇ ವಯಸ್ಸಿನಲ್ಲಿಯೇ ತೀರಿಕೊಳ್ಳುತ್ತಾಳೆ. ಕಿಪ್ಲಿಂಗ್ ತನ್ನ ಭಾರತದ ಕಾಡು-ಮೇಡುಗಳ ಸುತ್ತಾಟ,
ಆಫ್ರಿಕಾ, ಜಪಾನ್, ಅಮೇರಿಕಾಗಳ ಪರ್ಯಟನೆಯ ಅನುಭವ ಮತ್ತು ಅಪಾರ ಓದಿನ ಅನುಭವಗಳಿಂದಲೇ ಈ ಕೃತಿಯನ್ನು
ರಚಿಸಿದ್ದಾರೆ. ಪ್ರಾಣಿಗಳ ಪ್ರಪಂಚದ ಈ ಕೃತಿಯನ್ನು ಬರೆಯಲು ನಮ್ಮ ʼಪಂಚತಂತ್ರದ ಕತೆಗಳುʼ, ʼಜಾತಕ
ಕತೆಗಳುʼ ಪ್ರೇರಣೆಯಾಗಿರುವುದನ್ನು ಅಲ್ಲಗೆಳೆಯಲಾಗದು. ಈ ಸಂಕಲನದ ಪಾತ್ರಗಳ ಹೆಸರುಗಳು ಕೂಡ ಭಾರತದವೇ
ಆಗಿವೆ. ಕತೆ ನಡೆಯುವ ಪ್ರದೇಶಗಳಾದ ಸಿಯೋನಿ ಪರ್ವತಗಳು ಮಧ್ಯಪ್ರದೇಶದ ಕಾಡುಗಳಾದರೆ, ಮೋಗ್ಲಿಯನ್ನು
ಹೊತ್ತೊಯ್ಯುವ ಮಂಗಗಳ ಕೋಲ್ಡ್ ಲೈರ್ಸ್ ಈಗಿನ ಚಿತ್ತೋರ್‌ಗಡ್, ಭಗೀರ ತಪ್ಪಿಸಿಕೊಂಡು ಬಂದಿದ್ದ
ಓಡಾಯ್ ಫೋರ್ ರಾಜಸ್ಥಾನದ ಉದಯ್‌ಪುರ್ ಎಂದು ಗುರುತಿಸಲಾಗಿದೆ. ಜೊತೆಗೆ ರಷ್ಯಾದ ದ್ವೀಪಗಳ ಚಿತ್ರಣವೂ
ಇದೆ. ಕಿಪ್ಲಿಂಗ್ ಅವರ ಈ ಕೃತಿಗೆ ಸ್ನೇಹಿತ ಸ್ಕೌಟ್ ಚಳುವಳಿಯ ಸ್ಥಾಪಕರಾದ ರಾಬರ್ಟ್ ಬಾಡೆನ್
ಪೋವೆಲ್ ಅವರ ಸ್ಕೌಟಿನ ನಿಯಮಗಳೂ ಕೂಡ ಪ್ರೇರಣೆಯಂತೆ. ಈ ನಿಯಮಗಳೇ ಇಲ್ಲಿ ಕಾಡಿನ-ನಾಡಿನ ನಿಯಮಗಳಾಗಿವೆ
ಎಂದು ಕೂಡ ಹೇಳಲಾಗಿದೆ. ಬಹುಮುಖ್ಯವಾಗಿ 1872ರಲ್ಲಿ ಉತ್ತರಪ್ರದೇಶದ ಕಾಡಿನಲ್ಲಿ ತೋಳಗಳೊಂದಿಗೆ ಕಾಣಿಸಿಕೊಂಡ
ʼದಿನಾ ಸಾನಿಚರ್ʼ ಅಥವಾ ʼಭಾರತೀಯ ತೋಳಗಳ ಪೋರʼ ಎಂದೇ ಪ್ರಸಿದ್ಧನಾದ ಹುಡುಗನೇ ʼಜಂಗಲ್ ಬುಕ್ʼ
ಕತೆಗಳನ್ನು ಬರೆಯಲು ಪ್ರೇರಣೆಯೆಂದು ಸ್ವತಃ ಕಿಪ್ಲಿಂಗ್ ಅವರೇ ಹೇಳಿಕೊಂಡಿದ್ದಾರೆ. ತಮ್ಮ ಕತೆಗಳಲ್ಲಿ
ಪ್ರಾಣಿಗಳ ಮೂಲಕ ಡಾರ್ವಿನ್ನನ ʼಬದುಕುಳಿಯುವ ಸಂಘರ್ಷʼವನ್ನು ಕೂಡ ಕಿಪ್ಲಿಂಗ್ ಹೇಳಿರುವುದು ಈ ಸಂಕಲನದ
ಹೆಗ್ಗಳಿಕೆ.
ಇದುವರೆವಿಗೂ ಇಂಗ್ಲೀಷ್ ಅಕ್ಷರಗಳಲ್ಲಿ,
ಅನಿಮೇಟೆಡ್ ಚಿತ್ರಗಳಲ್ಲಿ, ಸಿನಿಮಾಗಳಲ್ಲಿ, 3-ಡಿ ಸಿನಿಮಾಗಳಲ್ಲಿ ಲಭ್ಯವಿದ್ದ ಈ ಹೆಸರಾಂತ ಕತೆಗಳು
ಈಗ ಕನ್ನಡದಲ್ಲಿಯೂ ಲಭ್ಯವಿದ್ದು, ಕನ್ನಡದ ಓದುಗರು ʼಜಂಗಲ್ ಬುಕ್ʼ ಕತೆಗಳಲ್ಲಿ ಕಳೆದುಹೋಗಬಹುದಾಗಿದೆ.
ʼಜಂಗಲ್ ಬುಕ್ʼ ಎಂದೇ ಕನ್ನಡಕ್ಕೆ ಅನುವಾದಗೊಂಡಿರುವ ಈ ಸಂಕಲನದ ಅನುವಾದಕಿ ಶ್ರೀಮತಿ ಆಶಾ ಜಿ. ಅವರು
ಸಶಕ್ತವಾಗಿ ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ʼನಾಡೋಜ ಡಾ| ಚಂದ್ರಶೇಖರ ಕಂಬಾರ ಪ್ರತಿಷ್ಠಾನʼದ
ಪ್ರಧಾನ ಕಾರ್ಯದರ್ಶಿಗಳಾದ ಸಾಹಿತಿ ಶ್ರೀ ಹೊ.ನ. ನೀಲಕಂಠೇಗೌಡ ಅವರ ಬೆನ್ನುಡಿ ಈ ಪುಸ್ತಕಕ್ಕಿದೆ.
ವಂಶಿ ಪಬ್ಲಿಕೇಷನ್ಸ್ ಈ ಕೃತಿಯನ್ನು ಪ್ರಕಟಿಸಿದ್ದು, ಕಲಾವಿದ ಸಂತೋಷ್ ಸಸಿಹಿತ್ಲು ಅವರ ಮುಖಪುಟ
ಮತ್ತು ರೇಖಾಚಿತ್ರಗಳಿವೆ. ಮಾನವ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಪ್ರತಿನಿಧಿಸುವ ಈ ಪುಸ್ತಕದ
ಮೌಲ್ಯ ರೂ. 225/- ಆಗಿರುತ್ತದೆ.
-
ಧನ್ಯವಾದಗಳು…
ಕನ್ನಡ “ಜಂಗಲ್ ಬುಕ್” ಕೊಳ್ಳಲು ಅಮೇಜಾನ್ ಲಿಂಕ್:
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ