ಖ್ಯಾತ ಬ್ರಿಟಿಷ್ ಬೇಟೆಗಾರ-ಬರಹಗಾರ
ಕೆನೆತ್ ಆಂಡರ್ಸನ್ ಅವರ ಮಗ ಡೊನಾಲ್ಡ್ ಆಂಡರ್ಸನ್ (1934-2014) ಅವರ ಜೀವನಗಾಥೆ “ಕೊನೆಯ ಬಿಳಿ
ಬೇಟೆಗಾರ – ವಸಾಹತು ಶಿಕಾರಿಯೊಬ್ಬನ ನೆನಪುಗಳು” ಕನ್ನಡಕ್ಕೆ ಬಂದಿರುವುದು ಸಂತಸದ ಸಂಗತಿ. ಮೂಲ ಇಂಗ್ಲೀಷಿನಲ್ಲಿ
ಜೋಷುವಾ ಮ್ಯಾಥ್ಯೂ ಅವರ ನಿರೂಪಣೆಯಲ್ಲಿರುವ “ದ ಲಾಸ್ಟ್ ವೈಟ್ ಹಂಟರ್” ಕೃತಿಯನ್ನು ಕನ್ನಡಕ್ಕೆ
ಡಾ. ಎಲ್.ಜಿ. ಮೀರಾ ಅವರು ಅನುವಾದಿಸಿದ್ದಾರೆ. ಕಾಲೇಜಿನ ದಿನಗಳಿಂದಲೂ ತೇಜಸ್ವಿಯವರ ಓದುಗರು-ಅಭಿಮಾನಿಯೂ
ಆಗಿರುವ ಮೀರಾ ಅವರು ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕಿ. ಈ ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ
ತಂದಿರುವುದಕ್ಕೆ ಅವರಿಗೆ ಅಭಿನಂದನೆಗಳು ಸಲ್ಲಲೇಬೇಕು. ತೇಜಸ್ವಿಯವರ ನೆನಪಿಗೆ ಈ ಕೃತಿ ಅರ್ಪಣೆಯಾಗಿರುವುದೂ
ಕೂಡ ಮೀರಾ ಅವರ ತೇಜಸ್ವಿ ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಈ ಕೃತಿಗೆ ಡೊನಾಲ್ಡ್ ಅವರಿಗಿಂತ
ಕೊಂಚ ಹಿರಿಯರಿದ್ದ, ಆದರೆ ಡೊನಾಳ್ಡ್ ಅವರನ್ನು ಹತ್ತಿರದಿಂದ
ಕಂಡಿದ್ದ ಭಾರತದ ಅಗ್ರಗಣ್ಯ ವನ್ಯಜೀವಿ ಛಾಯಾಗ್ರಾಹಕರಾದ ಟಿ.ಎನ್.ಎ ಪೆರುಮಾಳ್ ಅವರ ಆಪ್ತ ಮುನ್ನುಡಿಯಿದೆ.
ʼಲೋಕದಲ್ಲಿ ಎಲ್ಲ ಬಗೆಯ ಜನರಿದ್ದಾರೆ ಮತ್ತು ಡೊನಾಲ್ಡ್ ಆಂಡರ್ಸನ್ ಒಬ್ಬ ಅನನ್ಯ ವ್ಯಕ್ತಿ ಮತ್ತು
ಚರಿತ್ರೆಯಲ್ಲಿ ಅವರಿಗೆ ತಮ್ಮದೇ ಆದ ನ್ಯಾಯಬದ್ಧ ಸ್ಥಾನವಿದೆʼ ಎಂದಿರುವುದು ಈ ಕೃತಿಯ ಪ್ರಾಮುಖ್ಯತೆಯನ್ನು
ಎತ್ತಿ ಹಿಡಿದಿದೆ. ಶಿಕಾರಿ ಮತ್ತು ಛಾಯಾಗ್ರಹಣಕ್ಕೆ ಅಂತಹ ವ್ಯತ್ಯಾಸವೇನಿಲ್ಲ, ಡೊನಾಲ್ಡ್ ತನ್ನ
ತಂದೆಯಂದೆ ಬಂದೂಕು ಆರಿಸಿಕೊಂಡರೆ, ತಮ್ಮ ಶಿಕ್ಷಕ ಓ.ಸಿ.ಎಡ್‌ವಾರ್ಡ್ಸ್ ಅವರ ಪ್ರಭಾವದಿಂದ ಕ್ಯಾಮೆರಾ
ಆರಿಸಿಕೊಂಡೆ ಎಂದಿದ್ದಾರೆ ಪೆರುಮಾಳ್. ಡೊನಾಲ್ಡ್ ಅವರಿಗೆ ಶಿಕಾರಿಯಲ್ಲಿದ್ದ ಪರಿಣತಿಯನ್ನು ತಾವು
ಕಂಡಂತೆ ದಾಖಲಿಸಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಕೆ. ಉಲ್ಲಾಸ ಕಾರಂತ ಅವರು ತಂದೆಯನ್ನು
ಮೀರಿಸಿದ ಮಗ ಡೊನಾಲ್ಡ್ ಅನುಭವಗಳು ಕನ್ನಡದ ಓದುಗರಿಗೆ ಒಂದು ರೋಚಕ ಹೊಸ ಪ್ರಪಂಚವನ್ನು ತೆರೆದಿಟ್ಟಿವೆ
ಎಂದಿದ್ದಾರೆ.
ಇಂಗ್ಲೀಷ್ ವಾರಪತ್ರಿಕೆಯಲ್ಲಿ
ಮ್ಯಾಥ್ಯೂ ಜೋಷುವಾ ಅವರ “ದ ಲಾಸ್ಟ್ ವೈಟ್ ಹಂಟರ್” ಪುಸ್ತಕದ ಬಗ್ಗೆ ಪರಿಚಯ ಲೇಖನ ಓದಿದ ಡಾ. ಎಲ್.ಜಿ.
ಮೀರಾ ಅವರು ತಾವು ತೇಜಸ್ವಿಯವರ ಅನುವಾದದಲ್ಲಿ ಓದಿದ್ದ ಕೆನೆತ್ ಆಂಡರ್ಸನ್ ಅವರ ಮಗ ಡೊನಾಲ್ಡ್
ಆಂಡರ್ಸನ್ ಬೆಂಗಳೂರಿನಲ್ಲಿಯೇ ಅದೂ ಕಬ್ಬನ್ ಪಾರ್ಕ್ ಪಕ್ಕದಲ್ಲಿಯೇ ಎಂಬತ್ತು ವರ್ಷ ಬದುಕಿ ಬಾಳಿದ್ದರು
ಎಂಬ ವಿವರಗಳನ್ನು ಓದಿ ಆಶ್ಚರ್ಯಚಕಿತರಾಗಿ ಈ ಕೃತಿ ಕನ್ನಡದ ಓದುಗರಿಗೆ ಲಭಿಸಬೇಕು ಎಂದು ನಿರ್ಧರಿಸಿದ
ಕಾರಣ ಈ ಕೃತಿಯೀಗ “ಕೊನೆಯ ಬಿಳಿ ಬೇಟೆಗಾರ” ಎಂದು ಕನ್ನಡದ ಓದುಗರಿಗೆ ಲಭ್ಯವಿದೆ.
ʼಇದು ಸಂದುಹೋದ ಕಾಲದ ಜನಗಳ ಮತ್ತು
ಸ್ಥಳಗಳ ಕಥೆʼ ಎಂದು ಪೀಠಿಕೆಯ ಮೊದಲ ಸಾಲಿನಲ್ಲಿಯೇ ಡೊನಾಲ್ಡ್ ಮಾಲ್ಕಮ್ ಸ್ಟುವಾರ್ಟ್ ಆಂಡರ್ಸನ್
ಹೇಳಿರುವುದು ಈ ಕೃತಿಯ ಆಶಯವನ್ನು ವ್ಯಕ್ತಪಡಿಸಿದೆ. ಡೊನಾಲ್ಡ್ ಅವರು ಬೆಂಗಳೂರಿನಲ್ಲಿ ಬೆಳೆದದ್ದು,
ಅವರ ಕುಟುಂಬ, ಸ್ನೇಹಿತರು, ಶಿಕಾರಿ ದಿನಗಳು, ಕಳೆದ ವರ್ಷಗಳು, ತಿರುಗಾಟಗಳು, ತನ್ನ ತಂದೆ ಕೆನೆತ್
ನೆನಪು ಮತ್ತು ಡೊನಾಲ್ಡ್ ಅವರ ಕೊನೆಯ ದಿನಗಳು ಇಲ್ಲಿ ಅಪರೂಪದ ಚಿತ್ರಗಳೊಂದಿಗೆ ದಾಖಲಾಗಿವೆ. ದೇಶದ
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರ ದಿನಗಳ ಒಂದು ಅಪೂರ್ವ ದಾಖಲೆ ಬ್ರಿಟಿಷ್ ಭಾರತದ ಕೊನೆಯ
ಸ್ಕಾಟ್ ವ್ಯಕ್ತಿ ಕಂಡಂತೆ ನಿರೂಪಿತವಾಗಿದೆ. ಡೊನಾಲ್ಡ್
ಅವರ ರೋಚಕ ಕಥೆಯಷ್ಟೇ ಅಲ್ಲ ಕೊನೆಗಾಲದಲ್ಲಿ ಒಬ್ಬಂಟಿಯಾಗಿ ಇಲ್ಲುಳಿದ ವ್ಯಥೆಯ ಪರಿಚಯವೂ ಇಲ್ಲಿದೆ.
ಬೆಂಗಳೂರಿನ ಆಕೃತಿ ಪುಸ್ತಕ ಈ
ಕೃತಿಯನ್ನು ಪ್ರಕಟಿಸಿದ್ದು, ಇದರ ಮೌಲ್ಯ ರೂ. 395/- ಆಗಿರುತ್ತದೆ.
ಈ ಕೃತಿಯನ್ನು ಅಮೇಜಾನಿನಲ್ಲಿ ಕೊಳ್ಳಲು: https://amzn.to/3RzI0fC
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ