ಮಂಗಳವಾರ, ಸೆಪ್ಟೆಂಬರ್ 26, 2023

ವಯಸ್ಸು ನಲವತ್ತೇಳು… ಮನಸ್ಸು ಇಪ್ಪತ್ತನಾಲ್ಕು…

ವಯಸ್ಸು ನಲವತ್ತೇಳು… ಮನಸ್ಸು ಇಪ್ಪತ್ತನಾಲ್ಕು…

ಆತ್ಮೀಯ ಸ್ನೇಹಿತರೇ, ನಮಸ್ಕಾರ…

ಮೊದಲಿಗೆ, ನನ್ನ ಹುಟ್ಟುಹಬ್ಬಕ್ಕೆ ಹಾರೈಸುವುದರ ಮೂಲಕ ನನಗೆ ಮತ್ತಷ್ಟು ಚೈತನ್ಯ ನೀಡಿದ್ದೀರಿ. ತುಂಬು ಹೃದಯದ ಧನ್ಯವಾದಗಳು…



ನಾನು ಹುಟ್ಟಿದ್ದು 1977ನೇ ಇಸವಿಯ ಸೆಪ್ಟೆಂಬರ್‌ 25ರ ಭಾನುವಾರದ ಸಂಜೆ ಎಂಬುದು ನನಗೆ ಗೊತ್ತುಗುವಷ್ಟರಲ್ಲಿ ನನಗೆ ಸುಮಾರು ಇಪ್ಪತ್ತಮೂರು ವರುಷ ವಯಸ್ಸು ಆಗಿತ್ತು. ಅಲ್ಲಿಯವರೆಗೂ ನನ್ನ ಶಾಲಾ ದಾಖಲಾತಿಯ 22/07/1977 ನನ್ನ ಹುಟ್ಟಿದ ದಿನವಾಗಿತ್ತು. ಗಣಪತಿಯ ಹಬ್ಬದ ನಂತರ ಜನಿಸಿದೆ ಅಂತ ತಾತಾ ಹೇಳುತ್ತಿದ್ದುದ್ದು ನೆನಪಿತ್ತು. ಯಾವುದೋ ಒಂದು ದಿನ ಮನೆಯ ಹಳೆಯ ಪತ್ರಗಳನ್ನು ನೋಡುತ್ತಿದ್ದಾಗ ನನಗೆ ನಿಜಾಂಶ ತಿಳಿದಿತ್ತು. ಅಷ್ಟರಲ್ಲಾಗಲೇ ತಾತ ತೀರಿಕೊಂಡು ಬಹಳ ವರ್ಷಗಳೇ ಆಗಿದ್ದವು. ಅಲ್ಲಿಯವರೆಗೂ ಈ ಬಗ್ಗೆ ಯಾರೂ ಏಕೆ ತಲೆಕೆಡಿಸಿಕೊಳ್ಳಲಿಲ್ಲ ಎಂಬ ಸಂದೇಹಕ್ಕೆ ಸುಲಭವಾದ ಮತ್ತು ಸಹಜವಾದ ಉತ್ತರ, ಹುಟ್ಟು ಎಂಬುದು ನಮಗೆ ಹಬ್ಬವೇ ಆಗಿರಲಿಲ್ಲ. ನಮ್ಮ ಮನೆಯಲ್ಲಿ ಇದ್ದದ್ದೇ ಹಾಗೆ. ಆ ಕಾಲದಲ್ಲಿ ಬೇರೆಯವರ ಮನೆಯಲ್ಲಿ ಹುಟ್ಟು ಹಬ್ಬದ ಸಂಭ್ರಮಗಳು ಇದ್ದಿರಬಹುದು… ಆದರೆ, ನನ್ನ ನೈಜ ಹುಟ್ಟುಹಬ್ಬ ತಿಳಿದ ನಂತರ ಸ್ನೇಹಿತರು-ಆತ್ಮೀಯರು ವಿಶ್‌ ಮಾಡುತ್ತಿದ್ದರು. ಅಷ್ಟರಲ್ಲಾಗಲೇ ನನಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಆಸೆ ಅಂತ ಏನು ಇರಲಿಲ್ಲ. ಮನೆಯಲ್ಲಿ ಕೂಡ ನಾನು ಹೇಳದ ಹೊರತು ಯಾರಿಗೂ ಈ ವಿಷಯ ಅರಿವಾಗುತ್ತಲೇ ಇರಲಿಲ್ಲ. ಇವತ್ತಿಗೂ ನಮ್ಮ ತಂದೆ-ತಾಯಿಗೆ ನಾನು ಹೇಳಿದರಷ್ಟೇ ಗೊತ್ತಾಗುವುದು.

ಆದರೆ, ನನ್ನ ಶ್ರೀಮತಿ ಮತ್ತು ಮಗಳು ಈ ದಿನ ಬಹಳ ಸಂಭ್ರಮದಲ್ಲಿರುತ್ತಾರೆ. ನನ್ನ ಮಗನಂತೆಯೇ ಇರುವ ಹರೀಶನಿಗೆ ಕೂಡ ಈ ದಿನ ಸಂಭ್ರಮವೇ. ಪ್ರತಿವರ್ಷ ನಮ್ಮ ನಾಲ್ಕೂ ಜನರ ಹುಟ್ಟುಹಬ್ಬ ಒಂದು ಒಳ್ಳೆಯ ಹೋಟೆಲ್ಲಿನಲ್ಲಿ ಊಟ ಮಾಡುವ ಮೂಲಕ ಆಚರಿಸಲ್ಪಡುತ್ತದೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಆಗುವುದಿಲ್ಲ. ನೆನ್ನೆ ಮಳೆಯ ಕಾರಣದಿಂದ ಹೊರಗೆ ಹೋಗಲು ಆಗಲೇ ಇಲ್ಲ. ಮಧ್ಯಾಹ್ನದಿಂದಲೇ ಮೋಡ ಕವಿದ ಮಳೆ ಮಗಳಿಗೆ ಬಹಳ ನೋವುಂಟು ಮಾಡಿತ್ತು ಎಂಬುದಂತೂ ಸತ್ಯ. ಈ ನೆಪದಲ್ಲಿ ಮತ್ತೊಂದು ದಿನ ಹೊರಗೆ ಹೋಗುವುದೆಂಬ ತೀರ್ಮಾನವಾಯ್ತು.

ಈಗ ವಿಷಯಕ್ಕೆ ಬರುತ್ತೇನೆ. ಪ್ರತಿ ಹುಟ್ಟುಹಬ್ಬದ ಹಿಂದಿನ ದಿನವೇ ನಾನು ಆತ್ಮವಲೋಕನ ಮಾಡಿಕೊಳ್ಳಲು ತೊಡಗುತ್ತೇನೆ. ವಿದ್ಯಾರ್ಥಿಯಾಗಿದ್ದಾಗ ವಿಜ್ಞಾನಿಯಾಗಬೇಕು ಎಂದು ಹಂಬಲಿಸುತ್ತಿದ್ದವನು ಆದದ್ದಾದರೂ ಏನು ಅಂತೆಲ್ಲಾ. ಸಾಧಿಸಿದಾದ್ದರೂ ಏನು ಅಂತಹ ಯೋಚನೆಯೂ ಬರುತ್ತದೆ. ನಾನು ನಡೆದ ದಾರಿ ಸರಿ ಅಂತ ಅನ್ನಿಸಿದ್ದರಿಂದಲೇ ಹೆಜ್ಜೆ ಇಟ್ಟಿದ್ದು ಅಂತ ನೆನಪಾಗುತ್ತದೆ. ಆದರೆ, ನಾನು ಗೆದ್ದೇನೋ, ಸೋತೆನೋ ನನಗೆ ಅರ್ಥವಾಗುವುದಿಲ್ಲ. ನನ್ನ ಜೀವನ ಒಂದು ಹಂತಕ್ಕೆ ಬಂತು ಅನ್ನುವಾಗಲೆಲ್ಲಾ ವಿಧಿಯ ಕೈವಾಡ ಮೇಲುಗೈ ಸಾಧಿಸಿದೆ. ಆಗೆಲ್ಲಾ ಬಿದ್ದ ಹೊಡೆತಗಳಿದಂಲೇ ಚೇತರಿಸಿಕೊಂಡು ಮುನ್ನುಗುವ ಮನೋಭಾವ ಬೆಳೆಸಿಕೊಂಡಿದ್ದೇನೆ. ನನಗೆ ಒಂದಷ್ಟು ಉತ್ತಮ ಹವ್ಯಾಸಗಳಿರುವುದರಿಂದ ತುಸು ಸೊಂಬೇಂರಿಯಾದರೂ ಆದಷ್ಟು ಲವಲವಿಕೆಯಿಂದ ಇರುತ್ತೇನೆ. ಜೀವನವೇ ಒಂದು ಪ್ರಯೋಗಶಾಲೆ ಅಂತ ಅಂದುಕೊಂಡೇ ನನ್ನ ಮೇಲೆಯೇ ಸಾಕಷ್ಟು ಪ್ರಯೋಗಗಳನ್ನು ಮಾಡಿಕೊಂಡು ಗೆದ್ದಿದ್ದೇನೆ, ಆಗಾಗ ಸೋತದ್ದು ಕೂಡ ಇದೆ. ಆದರೆ, ಯಾವ ಸೋಲು ಕೂಡ ನನ್ನನ್ನು ಧೃತಿಗೆಡಿಸಿಲ್ಲ. ಯಾಕೆಂದರೆ, ಅದು ಅನುಭವವಾಗಿ ನನಗೊಂದು ಪಾಠ ಕಲಿಸಿರುತ್ತದೆ. ವಿಜ್ಞಾನಿಯಾಗದಿದ್ದರೂ ವಿಜ್ಞಾನಿಯ ಮನಸ್ಥಿತಿ ಕೊಂಚ ಇದೆ. ಇವತ್ತಿಗೂ ನನಗೆ ಕಲಿಯುವುದೆಂದರೇ ಬಹಳ ಇಷ್ಟ. ಪ್ರಮುಖವಾಗಿ ಸದಾಕಾಲ ಸಾಹಿತ್ಯ ಮತ್ತು ಸಿನಿಮಾದ ವಿದ್ಯಾರ್ಥಿಯಾಗಿಯೇ ಇರುತ್ತೇನೆ. ಇದೇಕಾರಣದಿಂದ ನನಗೀಗ ವಯಸ್ಸು ನಲವತ್ತೇಳಾದರೂ ಮನಸ್ಸು ಇಪ್ಪತ್ತನಾಲ್ಕು… ಮತ್ತೊಮ್ಮೆ ನಿಮಗೆಲ್ಲಾ ಧನ್ಯವಾದಗಳೊಂದಿಗೆ…

-        ನಿಮ್ಮ ಪ್ರೀತಿಯ, ಗುಬ್ಬಚ್ಚಿ ಸತೀಶ್.

ಶನಿವಾರ, ಸೆಪ್ಟೆಂಬರ್ 23, 2023

ರಾಧೆಯ ಧ್ಯಾನದಲ್ಲಿ ಕೃಷ್ಣ ಹಚ್ಚಿದ ಹಣತೆ

 ದೇಹಾತೀತ ಪ್ರೀತಿಯ

ಕಲಿಸಿಕೊಡು ಸಖಿ

ಸುಟ್ಟುಹೋಗುವ ದೇಹಕೂ

ಅರ್ಥ ನೀಡು



ದೇಹಾತಿತ ದಾಹಕೆ ನದಿಯ ಹುಡುಕುವ ಕವಿ ವಾಸುದೇವ ನಾಡಿಗರ ‘ನಿನ್ನ ಧ್ಯಾನದ ಹಣತೆ’ ಕೃತಿಯನ್ನು ನಾನು ತುಂಬಾ ಬೇಜಾರಾದ ಒಂದು ಸಂಜೆ ಓದಿಕೊಂಡಾಗ ನನ್ನ ಬೇಜಾರೆಲ್ಲಾ ಮಾಯವಾಗಿ ಮನಸ್ಸು ಪ್ರಫುಲ್ಲಗೊಂಡು ನಳನಳಿಸತೊಡಗಿತು, ಹೊಸದೊಂದು ಮುದದಿಂದ ಬೀಗತೊಡಗಿತು. ನನ್ನ ಮನಸ್ಸಿಗೆ ಒಂದು ರೀತಿಯಲ್ಲಿ ಸಾಂತ್ವನ ನೀಡಿದ ಕೃತಿಯಿದು. ಈ ಕೃತಿಯನ್ನು ಯಾರೇ ಓದಿದರೂ ಖಂಡಿತ ಅವರಿಗೆ ನನ್ನ ಅನುಭವವೇ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. 2014ರಲ್ಲಿ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದ ಈ ಕೃತಿ ತುಂಬಾ ವಿಶೇಷವಾದದ್ದು.

ಈ ಕೃತಿಯನ್ನು ವಿಮರ್ಶೆಯ ಓದಿಗೆ, ಒರೆಗೆ ಹಚ್ಚಿ ಪುಟಗಟ್ಟಲೆ ಬರೆಯುವುದಕ್ಕಿಂತ ಇಲ್ಲಿನ ಹಣತೆಗಳಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವುದು ಒಳಿತು. ಲೌಕಿಕದ ಸಂಕೇತವಾದ ಕೃಷ್ಣ ಅಲೌಕಿಕದ ಸಂಕೇತವಾದ ರಾಧೆಯನ್ನು ಹಂಬಲಿಸುವ ಸಂವಾದ ರೂಪದ ಕಾವ್ಯದ ಹಣತೆಗಳ ಮೂಲಕ ಕವಿ ನೀಡುವ ಬೆಳಕು ನಮ್ಮೆಲ್ಲ ಕತ್ತಲನ್ನು ಸರಿಸಿ ಬೆಳಕ ನೀಡುವಂತಿದೆ ಈ ಕೃತಿ.


ಗೋಕುಲದ ಕೃಷ್ಣನ ಲೌಕಿಕ ಕಷ್ಟಗಳನ್ನು ಕೇಳಿ:


ಪ್ರತಿಹಗಲು ನನ್ನ ನಾನು ಹುಡುಕುತ್ತೇನೆ

ಅಲ್ಲಿ ನೀನೇ ಕಾಣಿಸುವೆ

ಮುಖ ತಿರುಗಿಸಿಕೊಂಡು ಹೋಗಿಬಿಡುವ

ನಿನ್ನಲಿ ಅದೆಷ್ಟು ಪ್ರಶ್ನೆಗಳಿವೆ!

ಕುಳಿತು ಮಾತನಾಡಬೇಕಾಗಿದೆ ರಾಧೆ

ಶತ ಶತಮಾನಗಳು ಕಳೆದರೂ ನಿರೀಕ್ಷೆ ಮುಗಿಯುವುದಿಲ್ಲ!

                   *

ರಾಧೆ,

ಈ ರಕ್ತ ಸಿಕ್ತ ಕೈ ಬೆರಳುಗಳೂ

ಹೂಮುಡಿಸಬಲ್ಲವು ನಿನ್ನ ಹೆರಳಿಗೆ

ಒಡ್ಡು ಮುಡಿಯ!

ಬೆಣ್ಣೆ ಮೃದುವಿನ್ನಲ್ಲಾಡಿದ

ಕೈ ಬೆರಳುಗಳೂ

ಎಡತಾಕಬಲ್ಲದು ಕ್ರೌರ್ಯದ ಬೇರುಗಳನು

ಸಖೀ,

ನಿನ್ನ ಸ್ನಿಗ್ಧ ನಗುವನ್ನು ಕಾಪಿಟ್ಟು ಕೊಂಡಿದ್ದೇನೆ

ಎದೆಯೊಳಗೆ

ಯಾವ ಬಿರುಗಾಳಿಯೂ ಬೀಳಿಸದು

ಅಂತರಂಗದ ನಿನ್ನ ಸಿಂಹಾಸನವ

ಹಾಗೆಂಬ ಕೋಟೆ ಮಾನಸವ

                   *

ದಣಿವಾಗಲಿಲ್ಲ

ಹೆಡೆಯ ಮೆಟ್ಟಿದಾಗ

ಬೆಟ್ಟ ಹೊತ್ತಾಗ

ಸುರರನ್ನು ಹಿಮ್ಮೆಟ್ಟಿದಾಗ

ಶತ್ರುಗಳನ್ನು ಬೆನ್ನಟ್ಟಿದಾಗ

ಸಖಿ,

ನಿನ್ನ ನೆನಪಿನಭಾರದಲ್ಲಿ

ನಿಟ್ಟುಸಿರುಟ್ಟಿದ್ದೇನೆ

ಮರದ ನೆರಳು ಬಿಸಿ ಕಾರುತ್ತಿದೆ

ಕೊರಳ ನರಗಳಲಿ ಅವ್ಯಕ್ತ ನೋವು

ದ್ವಾರಕೆಯ ಒಳಮನೆಯು ಸೆರೆಮನೆಯಾಯಿತೆ!

                   *

ಆ ಸಂಜೆಯ ಮಥುರೆಯಲಿ

ನೀನು ಹೂ ಮಾಲೆ ಕಟ್ಟುತಿರಬೇಕು

ಇಲ್ಲಿ ಯಾಕೊ ಮೊಗ್ಗುಗಳು ಅರಳಲೆ ಇಲ್ಲ!

ಸಖಿ

ನಿನ್ನ ಕೈಬೆರಳ ಸೋಕಿಗೆ

ಮುಕುತಿಗೆ ಕೂತವನು ನಾನೂ

ನಿನ್ನ ತುಟಿಗಳು ಅದಾವ ಹಾಡನು

ಗುನುಗುತ್ತಿವೆ?

ಈ ಕೊಳಲು ನನ್ನ ಮಾತನೂ ಕೇಳುತ್ತಿಲ್ಲ

                   *

ಚಕ್ರವ ಗೋಡೆಗೆ ಸಿಕ್ಕಿಸಿದ್ದೇನೆ

ಬತ್ತಳಿಕೆಯ ಬಿಸುಟ್ಟಿದ್ದೇನೆ

ಖಡ್ಗವ ತುಕ್ಕು ಹಿಡಿಸಿದ್ದೇನೆ

ನಿಶ್ಯಸ್ತ್ರನಾಗಿದ್ದೇನೆ ಸಖಿ

ನಿನ್ನ ಸಾಂಗತ್ಯವೊಂದನ್ನೆ ಹೊತ್ತು

ಕಡಿ ಬಡಿ ಸುಡುವ ಈ

ಹೊತ್ತುಗಳನೆಲ್ಲ ಹುಗಿದುಬಂದಿದ್ದೇನೆ

ಸಖಿ

ಮಥುರೆಯ ಬಾಗಿಲ ತೆರೆ

                   *


ಮಥುರೆಯ ಅಲೌಕಿಕ ರಾಧೆಯ ಸಾಂತ್ವನ... ಅದೂ ಕೃಷ್ಣನ ಮೂಲಕವೇ:


ಪ್ರೀತಿಯ ತೊರೆಗೆ ಬೊಗಸೆಯೊಡ್ಡಿ

ಕಾದಿದ್ದೆ,

ಮಥುರೆಯ ಕದ ತೆರೆದೆ ನೀನು

ಅರೆ ಮುಚ್ಚಿದ ಕಣ್ಣಲೂ ನಿನ್ನದೇ ಬಿಂಬ

ಮುರಳಿಯ ಒಳ ಹೊರಗೆಲ್ಲಾ

ನಿನ್ನದೇ ನಡೆ ಚೆಲುವು

ಹಳೆಯ ದಾರಿಗಳೆಲ್ಲ

ಹಾಡಾಗಿಸಿದೆ ನೀನು

ಹೃದಯದಿಕ್ಕೆಲಗಳಲಿ ಪ್ರೀತಿ ಬಿತ್ತಿ

ಕಾಲುಕೆದರಿ ಕದನಕೆ

ಕರೆವ ವೈರಿಗಳನ್ನೂ ಮರೆಸಿದೆ!

                   *

ಸಖೀ,

ಬೆಣ್ಣೆ ಮೆದ್ದು ಬೆಳೆದೂ

ಮೃದುವಾಗದ ನನ್ನ

ಒರಟುತನವನ್ನು

ಅದು ಹೇಗೆ ಹೂವಾಗಿಸಿದೆ!

                   *

ಕುತಂತ್ರ ಅಪ್ಪುಗೆಗಳಲಿ

ಬೇಸತ್ತು ಹೋಗಿದ್ದೇನೆ

ಕೋಟೆಕಟ್ಟುವವರ ಬಿಟ್ಟು ಬಂದಿದ್ದೇನೆ

ಬಾ

ಸಖಿ

ನಿನ್ನ ಕೋಟೆಯೊಳಗೆ

ಬಂಧಿಸು

ನಿರ್ವಾಜ್ಯ ತೋಳುಗಳನ್ನು ಚಾಚು

 

ಈ ಸಂವಾದದ ಅನುಸಂಧಾನದಲ್ಲಿ ದೊರೆತ ನೆಮ್ಮದಿ, ಸಮಾಧಾನ, ಆತ್ಮವಿಶ್ವಾಸ...:

 

ಸಖಿ

ನಿನ್ನಧ್ಯಾನದ ಹುಚ್ಚು

ಒಳಿತೇ ಮಾಡಿತು

                   *

ಸಖಿ

ನೀನೆಂಬ ಹಣತೆ

ನೀನೆಂಬ ಕವಿತೆ

ನಾನೆಂಬ ಭ್ರಮೆಯ ಕಿತ್ತುಹಾಕಿತು!

                   *

ಕಲಹಗಳು ಬೇಡ ಸಖಿ

ಬಾಣಗಳನ್ನು ತೊಳೆಯಿಸಿಕೊಂಡ

ನದಿ ನಾನು

ನಿನ್ನ ಮಡಿಲಲ್ಲಿ

ಇಡುತ್ತೇನೆ ತಲೆಯ

ಮತ್ತೆ ಬಾಲ್ಯ ಮರುಕಳಿಸಲಿ

                   *

ಹಚ್ಚಿ ಹೋದೆ ಹಣತೆ ನೀನು

ಎದೆಯ ಕತ್ತಲು ಓಡಿತು

ಬದುಕು ಬಂಧುರದ ನಂಟು ಬೆಳೆಸಿತು

ಮಥುರೆಯ ತುಂಬಾ

ಗೋಕುಲದ ಗಂಧ

ಬೃಂದಾವನದ ಜನರು

ಹಣತೆಗೆ ಹಸಿದಿದ್ದಾರೆ

         

ನೀನೆಂಬ ಹಣತೆ

ಹೃದಯಗಳಲಿ ಸಂಜೀವಿನಿ

                   *

ಆತ್ಮಪ್ರತ್ಯಯಗಳಲ್ಲೇ

ದಣಿಯುವುದು ನಿನಗೂ ಇಷ್ಟವಿಲ್ಲ ಸಖೀ

ಬಿಡು,

ಕಣ್ಣರೆಪ್ಪೆಯನ್ನೂ ಮಿಟುಕಿಸದೆ

ಕುಳಿತಿದ್ದೇನೆ

ಹಣತೆ ಆರೀತೆಂದು!


ತಮ್ಮಂತೆಯೇ ಇರದುದರೆಡೆಗೆ ತುಡಿವ ಮನಸುಗಳಿಗೆ ಕೃತಿಯನ್ನು ಅರ್ಪಿಸಿದ್ದಾರೆ ಕವಿ. ಕವಿಗಳ ಗುರುಗಳಾದ ಶ್ರೀ ಸತ್ಯನಾರಾಯಣ ರಾವ್ ಅಣತಿ ಮುನ್ನುಡಿಯನ್ನು ಬರೆದಿದ್ದಾರೆ. ಶ್ರೀ ಕಲ್ಲೇಶ್ ಕುಂಬಾರ್ ಬೆನ್ನುಡಿಯಲ್ಲಿ ಇಲ್ಲಿನ ಸಂವಾದರೂಪಿ ಕವಿತೆಗಳು ಎಣ್ಣೆ ತೀರದ ಹಣತೆಯಂತೆ ಸದಾ ಓದುಗನ ಎದೆಯಲ್ಲಿ ಬೆಳಗುತ್ತಲೇ ಇರುತ್ತವೆ ಎನ್ನುತ್ತಾರೆ. ಹೊಸದೊಂದು ಓದಿಗೆ, ಕವಿತೆಯ ಸಾಂತ್ವನಕ್ಕೆ ಹಾತೊರೆಯುವವರಿಗೆ ರಾಧೆಯ ಧ್ಯಾನದಲ್ಲಿ ಕೃಷ್ಣ ಹಚ್ಚಿದ ಹಣತೆಯಾಗಿ ಈ ಕೃತಿ ಖಂಡಿತ ಬೆಳಕ ನೀಡುತ್ತದೆ.

***

ನಾಡಿಗರ ಮತ್ತು ಇತರ ಕವಿಗಳ ಹಾಗೂ ವೀರಲೋಕದ ನಾಳಿನ ಕಾರ್ಯಕ್ರಮಕ್ಕೆ ಶುಭಹಾರೈಸುತ್ತೇನೆ...



ಮಂಗಳವಾರ, ಸೆಪ್ಟೆಂಬರ್ 12, 2023

ಕಥೆ ಚಿತ್ರಕಥೆ ಸಂಭಾಷಣೆ ಜೋಗಿ

‘ಬರೀ ದೃಶ್ಯಗಳಿಗೆ ಅಲಂಕಾರ ಮಾಡಿ ಪ್ರೇಕ್ಷಕನನ್ನ ತೃಪ್ತಿಗೊಳಿಸೋದು ಕಷ್ಟದ ಕೆಲಸ. ಅದೇ ಒಂದೊಳ್ಳೆಯ ಕತೆಗೆ ಅವನು ಸುಲಭವಾಗಿ ಮನ ಸೋಲುತ್ತಾನೆ’

-        ಸ್ಟೀವನ್ ಸ್ಟಿಲ್‌ಬರ್ಗ್

ತಮ್ಮ ಹನಿಗವನಗಳಿಂದ ಗಮನ ಸೆಳೆಯುತ್ತಿರುವ ನವೀನ್ ಮಧುಗಿರಿ ಫೋನ್ ಮಾಡಿ ‘ಸರ್, ಪುಸ್ತಕಗಳನ್ನೇನೊ ಪ್ರಕಟಿಸಿದೆ, ಅವುಗಳ ಮಾರಾಟ ಮಾಡುವುದು ಹೇಗೆ?’ ಎಂದು ಕೇಳಿದರು. ನಾನು ನಕ್ಕು ಪುಸ್ತಕಗಳನ್ನು ಮಾರಾಟ ಹೇಗೆ ಮಾಡುವುದು ಎಂದರೆ... ಅದು ನಮಗೂ ಇವರೆಗೆ ಗೊತ್ತಾಗಿಲ್ಲ. ಅದರಲ್ಲೂ ಕವನ ಸಂಕಲನದ ಒಂದು ಪ್ರತಿಯನ್ನೂ ಮಾರಲಿಕ್ಕಾಗುವುದಿಲ್ಲ. ಯಾಕೆಂದರೆ, ಈ ಕಾಲಘಟ್ಟದಲ್ಲಿ ನೋಡುಗರಿದ್ದಾರೆ, ಓದುಗರಿಲ್ಲ. ನೀವು ಇದುವರೆಗೂ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದೀರಾ ಅಲ್ಲವೇ? ಅಲ್ಲಿಗೆ ಸಾಕು. ಇನ್ನು ಮುಂದೆ ಒಂದು ಕಿರುಚಿತ್ರ ಮಾಡಿ ಎಂದು ಉಚಿತ ಸಲಹೆ ಕೊಟ್ಟೆ. ಅವರು ನಕ್ಕು ಸುಮ್ಮನಾದರು.

ಹೌದು. ಇದು ಈ ಕಾಲಘಟ್ಟದ ಸತ್ಯ. ಇದು ನೋಡುಗರ ಕಾಲವೇ ಹೊರತು, ಓದುಗರ ಕಾಲವಲ್ಲ. ನೋಡುವುದು ಎಂದರೆ ಕಿರುಚಿತ್ರಗಳನ್ನು, ಸಿನಿಮಾಗಳನ್ನು ನೋಡುವುದು. ಹಲವು ಪುಸ್ತಕಗಳನ್ನು ಬರೆದವರಿಗಿಂತ ಒಂದು ಕಿರುಚಿತ್ರ ಮಾಡಿದವರು ಹೆಚ್ಚು ಮಾನ್ಯರಾಗುತ್ತಿರುವ ಕಾಲ. ಸ್ಮಾರ್ಟ್ಫೋನುಗಳ ಈ ಕಾಲದಲ್ಲಿ ನೋಡುವುದು ಕೂಡ ಬಹಳ ಸುಲಭವೇ ಆಗಿಬಿಟ್ಟಿದೆ.

ಈ ಕಿರುಚಿತ್ರ ಅಥವಾ ಸಿನಿಮಾ ಮಾಡಲ್ಲಿಕ್ಕಾದರೂ ಒಂದೊಳ್ಳೆ ಕಥೆ ಬೇಕು. ಆ ಕಥೆಯನ್ನು ಚಿತ್ರಕಥೆಯ ರೂಪದಲ್ಲಿ ಬರೆದಿರಬೇಕು. ಅದಕ್ಕೆ ಪೂರಕವಾದ ಸಂಭಾಷಣೆಯೂ ರಚಿತವಾಗಿರಬೇಕು. ಇದನ್ನು ನಿರ್ದೇಶಕ ಮತ್ತು ಇತರ ತಾಂತ್ರ‍್ರಿಕವರ್ಗದವರು ಸೇರಿ ನೋಡಲು ಯೋಗ್ಯವಾದ ಚಿತ್ರವನ್ನು ರೂಪಿಸಬೇಕು. ಚಿತ್ರ ಪರದೆಯ ಮೇಲೆ ನೋಡುಗರನ್ನು ಸೆಳೆಯಬೇಕೆಂದರೆ ಮೊದಲಿಗೆ ಅದು ಒಂದೊಳ್ಳೆ ಚಿತ್ರಕಥೆಯಾಗಿ ಬಿಳಿಹಾಳೆಯ ಮೇಲೆ ಮೂಡಿರಬೇಕು. ಆಗಷ್ಟೇ ಒಂದೊಳ್ಳೆ ಚಿತ್ರ ಸಿದ್ಧವಾಗುತ್ತದೆ.

ಈ ಚಿತ್ರಕಥೆಯನ್ನು ಬರೆಯಲು ಕಲಿಯಲಿಕ್ಕೆಂದೇ ಹಲವಾರು ಪುಸ್ತಕಗಳಿವೆ. ಆದರೆ ಅವೆಲ್ಲವೂ ಇಂಗ್ಲೀಷಿನಲ್ಲಿವೆ. ಕನ್ನಡದಲ್ಲಿ ಈ ರೀತಿಯ ಪುಸ್ತಕಗಳು ವಿರಳಾತಿ ವಿರಳ ಎನ್ನುವ ಹೊತ್ತಿನಲ್ಲಿ ನಮ್ಮೆಲ್ಲರ ನೆಚ್ಚಿನ ಲೇಖಕ ಜೋಗಿಯವರು ಬಹಳ ಶ್ರಮವಹಿಸಿ ಒಂದು ಪುಸ್ತಕವನ್ನು ಕನ್ನಡಿಗರಿಗೆ ನೀಡಿದ್ದಾರೆ. ಆ ಪುಸ್ತಕದ ಹೆಸರೇ ‘ಕಥೆ ಚಿತ್ರಕಥೆ ಸಂಭಾಷಣೆ ಜೋಗಿ’ ಎಂದು. ಬೆಂಗಳೂರಿನ ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.



ಫೇಸ್‌ಬುಕ್ಕಿನ ಮೂಲಕವೇ ಈ ಪುಸ್ತಕ ಪ್ರಕಟವಾಗುತ್ತಿರುವ ಸುದ್ಧಿ ನನಗೆ ತಿಳಿದರೂ ಇದಾಗಲೇ ಅಲ್ಪಸ್ವಲ್ಪ ಚಿತ್ರಕತೆ ಬರೆಯುವುದನ್ನು ಕಲಿತ ನಾನು ಮೊದಲಿಗೆ ಈ ಪುಸ್ತಕವನ್ನು ನಿರ್ಲಕ್ಷಿಸಿದ್ದೆ. ವಾಟ್ಸಾಪ್ಪಿನಲ್ಲಿ ನ್ಯಾನೋ ಕತೆಗಾರ ವಿ. ಗೋಪಕುಮಾರ್ ಈ ಪುಸ್ತಕವನ್ನು ತರಿಸಿಕೊಂಡು ಅದರ ಚಿತ್ರವನ್ನು ಹಾಕಿದಾಗ ಅವರಿಗೆ ಈ ಪುಸ್ತಕದ ಅವಶ್ಯಕತೆಯೇ ಇಲ್ಲ ಎಂದು ಹೇಳುತ್ತಾ ಆಗಲೇ ತಮ್ಮ ಕಿರುಚಿತ್ರಗಳಿಂದ ಗಮನ ಸೆಳೆದಿರುವ ಅವರಿಗೆ ನಿಮಗಾಗಲೇ ಚೆನ್ನಾಗಿ ಚಿತ್ರಕಥೆ ಬರೆಯಲು ಬರುತ್ತದೆ ಎಂದು ವಾದಿಸಿದ್ದೆ. ಅದಕ್ಕವರು ನಾನಿನ್ನು ಕಲಿಯುವುದು ಬಹಳಷ್ಟಿದೆ ಎಂದು ಹೇಳಿ ಸುಮ್ಮನಾಗಿದ್ದರು.

ಆದರೆ, ಒಂದು ಯಾವುದೋ ಒಳ್ಳೆಯ ಪುಸ್ತಕ ತನ್ನ ಓದುಗನನ್ನು ತಾನೇ ಹುಡುಕಿಕೊಳ್ಳುತ್ತದೆ ಎಂದು ನಾನು ನಂಬಿರುವುದಕ್ಕೆ ಪೂರಕವೆಂಬಂತೆ ಈ ಪುಸ್ತಕ ನಮ್ಮ ಮನೆ ಸೇರಿಬಿಟ್ಟಿತು. ಕುತೂಹಲಕ್ಕೆಂದು ಕೈಗೆತ್ತಿಕೊಂಡವನು ಒಂದು ವಾರ ಕಾಲ ನನಗೆ ಸಿಗುವ ಅಲ್ಪಸ್ವಲ್ಪ ಸಮಯದಲ್ಲೇ ಓದಿ ಮುಗಿಸಿದೆ. ಸಿನಿಮಾಗಳಿಗೆ ಚಿತ್ರಕಥೆ ಏಕೆ ಬಹುಮುಖ್ಯವಾಗುತ್ತದೆ ಎಂಬುದು ನನಗೆ ಮತ್ತೊಮ್ಮೆ ಮನದಟ್ಟಾಗಿ ಹಲವಾರು ಹೊಸ ವಿಷಯಗಳನ್ನು ತಿಳಿದುಕೊಂಡಂತಾಯಿತು.

‘ಕಥೆ ಚಿತ್ರಕಥೆ ಸಂಭಾಷಣೆ ಜೋಗಿ’ ಪುಸ್ತಕವು My Experiments with Cinema ಎನ್ನುವ ಉಪಶೀರ್ಷಿಕೆಯೊಂದಿಗೆ ಮಹಾತ್ಮ ಗಾಂಧೀಜಿಯವರ ‘ನನ್ನ ಆತ್ಮಕಥೆ’ ‘An Autobiography’ or ‘The Story Of My Experiments With Truth’ ಪುಸ್ತಕವನ್ನು ನೆನಪಿಗೆ ತರುತ್ತದೆ. ಆದರೆ ಇದು ಆತ್ಮಕತೆಯಲ್ಲ, ಚಿತ್ರಕಥೆಯ ಮಹತ್ವವನ್ನು ಒತ್ತಿ ಹೇಳುವ ಪುಸ್ತಕ. ಹಳೆಯ ಕಪ್ಪುಬಿಳುಪಿನ ಸಿನಿಮಾದಲ್ಲಿ ಹೆಸರು ತೋರಿಸುವಂತೆ ಆಕರ್ಷಕ ಮುಖಪುಟದೊಂದಿಗೆ (ವಿನ್ಯಾಸ: ಪ್ರದೀಪ್ ಬತ್ತೇರಿ) 352 ಪುಟಗಳ ಈ ಬೃಹತ್ ಪುಸ್ತಕವು ಗಮನ ಸೆಳೆಯುತ್ತದೆ. 18 ನಿರ್ದೇಶಕರ ಚಿಂತನೆಯ ಸಾರವಾದ ಈ ಪುಸ್ತಕವನ್ನು ಖ್ಯಾತ ನಟ ಪ್ರಕಾಶ್ ರೈ ‘ಸಿನಿಮಾ ಮಾಡುವವರ ಪಾಲಿಗೆ ಬಹುಮುಖ್ಯ ಕೈಪಿಡಿ” ಎನ್ನುತ್ತಾರೆ.

‘ನನ್ನ ಪೆನ್ನು ಕೋವಿಯಿಂದ ಮೊದಲ ಸಲ ‘ಶಿಕಾರಿ’ ಮಾಡಿಸಿದ ಮಿತ್ರ ಬಿ.ಎಸ್. ಲಿಂಗದೇವರು ಅಖಂಡ ಗೆಳೆತನಕ್ಕೆ’ ಎಂದು ‘ನಾನು ಅವನಲ್ಲ, ಅವಳು’ ಸಿನಿಮಾ ಖ್ಯಾತಿಯ ನಿರ್ದೇಶಕ ಬಿ.ಎಸ್. ಲಿಂಗದೇವರುರವರಿಗೆ ಅರ್ಪಿತವಾಗಿರುವ ಈ ಪುಸ್ತಕ ಎರಡು ಭಾಗಗಳಲ್ಲಿದೆ. ‘ಟೈಟಲ್ ಕಾರ್ಡ್’ ಎಂಬ ಮೊದಲ ಭಾಗದಲ್ಲಿ ಜೋಗಿಯವರು ಧಾರಾವಾಹಿಗಳಿಗೆ, ಸಿನಿಮಾಗಳಿಗೆ ಬರೆದ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಎರಡನೆಯ ಭಾಗ ‘ಸೆಂಕೆಡ್ ಹಾಫ್’ ನಲ್ಲಿ ಕನ್ನಡದ ಹಿರಿಯ ಕಿರಿಯರೆನ್ನದೆ ಒಟ್ಟು 18 ನಿರ್ದೇಶಕರು, ಲೇಖಕರು ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ.

ಮೊದಲ ಭಾಗದ ‘ತಬ್ಬಲಿಯು ನೀನಾದೆ ಮಗನೇ...’ ಲೇಖನದಲ್ಲಿ ಜೋಗಿಯವರು ‘ಚಿತ್ರಕತೆ ಎಂದರೆ ಏನು, ಅದರಲ್ಲಿ ಏನೇನಿರಬೇಕು, ಒಂದು ಕತೆಯನ್ನು ಚಿತ್ರಕತೆಯಾಗಿ ಹೇಳುವುದು ಹೇಗೆ ಎಂಬ ಪ್ರಶ್ನೆಗೆ ನಾವು ಪಾಶ್ಚಾತ್ಯ ವಿದ್ವಾಂಸರಿಂದಲೇ ಉತ್ತರ ಪಡೆಯಬೇಕು ಅಂತೇನಿಲ್ಲ. ಕನ್ನಡದ ಅನೇಕ ಕಥನ ಕವನಗಳಲ್ಲಿ, ಕಾವ್ಯದಲ್ಲಿ, ಪುರಾಣದ ಕಾದಂಬರಿಗಳಲ್ಲಿ ಚಿತ್ರಕತೆಯ ತಂತ್ರವನ್ನು ತೆರೆದು ತೋರುವಂಥ ಉದಾಹರಣೆಗಳು ಸಿಗುತ್ತವೆ’ ಎಂದು ಹೇಳುತ್ತಾ ಈ ನಿಟ್ಟಿನಲ್ಲಿ ಕನ್ನಡದ ಪ್ರಸಿದ್ಧ ಪದ್ಯ ಗೋವಿನ ಹಾಡನ್ನು ಉದಾಹರಿಸುತ್ತಾ ಸವಿವರವಾಗಿ ಈ ಪದ್ಯ ಒಂದು ಅತ್ಯುತ್ತಮ ಚಿತ್ರಕತೆಯಂತೆಯೇ ಇರುವುದನ್ನು ವಿವರಿಸುತ್ತಾರೆ. ಈ ಭಾಗದಲ್ಲಿ ನನ್ನ ಗಮನ ಸೆಳೆದ ಮತ್ತೊಂದು ಲೇಖನ ‘ನಾನೂ ನಿರ್ದೇಶಕನಾದೆ’. ಡಾ|| ರಾಜ್‌ಕುಮಾರ್ ಬಾಂಡ್ ಆಗಿ ನಟಿಸಿದ ‘ಆಪರೇಷನ್ ಡೈಮಂಡ್ ರಾಕೆಟ್’ ಸಿನಿಮಾದ ಕೊನೆಯಲ್ಲಿ ಮುಂದಿನ ಅಸೈನ್‌ಮೆಂಟ್ ‘ಆಪರೇಷನ್ ಗೋಲ್ಡನ್ ಗ್ಯಾಂಗ್’ ಎಂದು ಘೋಷಿಸುವುದನ್ನು ನೆನಪಿಟ್ಟುಕೊಂಡ ನಿರ್ಮಾಪಕರೊಬ್ಬರು ಬಾಂಡ್ ಸಿನಿಮಾಕ್ಕೆ ಕತೆ ಬರೆಯಿರಿ ಎಂದು ಲೇಖಕರಿಗೆ ಸೂಚಿಸಿ, ಅವರು ಒಂದು ಅದ್ಭುತ ಕತೆಯನ್ನು ಹೆಣೆದಿದ್ದಾರೆ. ಆದರೆ, ಬಜೆಟ್ ಕಾರಣದಿಂದ ಸಿನಿಮಾ ಸೆಟ್ಟೇರದೆ ನಿಂತುಹೋಯಿತು. ತಾವು ಪತ್ರಕರ್ತನ ಕೆಲಸಕ್ಕೆ ಇನ್ನೂ ರಾಜೀನಾಮೆ ಕೊಡದೆ ಇದ್ದುದರಿಂದ ಬಚಾವಾದೆ ಎನ್ನುತ್ತಾ ಈ ಅನುಭವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ ಲೇಖಕರು. ‘ಬೆಸ್ಟ್ ವೇ ಅಂದರೆ ಹೆಮಿಂಗ್ – ವೇ’ ಲೇಖನವು ಚಿತ್ರಕಥೆ ಬರೆಯುವವರಿಗಷ್ಟೇ ಅಲ್ಲದೆ ಲೇಖಕರು ಹೇಳುವಂತೆ ಬರೆಯಲು ಹೊರಡುವ ಪ್ರತಿಯೊಬ್ಬರೂ ಕಲಿಯಬೇಕಾದ ಮೂಲಭೂತ ಪಾಠ ಏನು ಅನ್ನುವುದನ್ನು ಹೇಳುತ್ತದೆ. ಆದಿಯಿಂದ ಅಂತ್ಯದವರೆಗೂ ಈ ಭಾಗ ಸಿನಿಮಾ ರೂಪುಗೊಳ್ಳುವ ಪ್ರಕ್ರಿಯೆಗಳ ಸ್ಥೂಲ ಪರಿಚಯವನ್ನು ಮಾಡಿಕೊಡುತ್ತದೆ.

ಇನ್ನು ಎರಡನೇ ಭಾಗ ‘ಸೆಕೆಂಡ್ ಹಾಫ್’ನಲ್ಲಿ ಗಿರೀಶ್ ಕಾಸರವಳ್ಳಿಯಂಥ ಹೆಸರಾಂತ ನಿರ್ದೇಶಕರಿಂದ ಹಿಡಿದು ಇತ್ತೀಚಿನ ‘ರಾಮಾ ರಾಮಾ ರೇ...’ ಸಿನಿಮಾ ನಿರ್ದೇಶಕ ಡಿ. ಸತ್ಯಪ್ರಕಾಶ್ ರವರನ್ನು ಒಳಗೊಂಡಂತೆ 18 ಪ್ರತಿಭಾನ್ವಿತರ ಅನಿಸಿಕೆ ಅಭಿಪ್ರಾಯ ಮಾರ್ಗದರ್ಶನಗಳಿವೆ. ಗಿರೀಶ್ ಕಾಸರವಳ್ಳಿಯವರ ‘ಚಿತ್ರಕಥೆ: ವಸ್ತು ಮತ್ತು ವಿನ್ಯಾಸ’ ಹಾಗೂ ಬಿ. ಸುರೇಶರವರ ‘ಸಿನಿಮಾದ ಸಂಕೇತ ಭಾಷೆ - ಸಿಮಿಯಾಟಿಕ್ಸ್’ ಲೇಖನಗಳು ಸುದೀರ್ಘವಾಗಿ ಚರ್ಚೆಗೆ ಒಳಪಟ್ಟಿವೆ. ಇನ್ನುಳಿದ ಇತರ ಲೇಖನಗಳು ಕೂಡ ಸಿನಿಮಾ ಚಿತ್ರಕಥೆಗೆ ಪೂರಕವಾದ ಹಲವಾರು ಸೂತ್ರಗಳನ್ನು ನೀಡುವಲ್ಲಿ ಸಫಲವಾಗಿವೆ. ಸಹಜವೆಂಬಂತೆ ಯೋಗರಾಜ್ ಭಟ್ ಮತ್ತು ರಕ್ಷಿತ್ ಶೆಟ್ಟಿಯವರ ಲೇಖನಗಳು ಯುವ ಮನಸ್ಸುಗಳನ್ನು ಆಕರ್ಷಿಸುತ್ತವೆ. ಬಿ.ಎಸ್. ಲಿಂಗದೇವರು, ಬಿ.ಎಂ. ಗಿರಿರಾಜ್, ಪವನ್ ಕುಮಾರ್, ಕೆ.ಎಂ. ಚೈತನ್ಯ ಇನ್ನು ಮುಂತಾದವರ ಲವಲವಿಕೆಯ ಮಾತುಗಳು ಕೂಡ ಚಿತ್ರಕಥೆ ಬರೆಯುವವರಿಗೆ ಪಾಠಗಳಂತಿವೆ. ಸಿನಿಮಾವಲ್ಲದೆ ಧಾರಾವಾಹಿಗಳಿಗೂ ವರ್ಷಾನುಗಟ್ಟಲೆಯಿಂದ ಬರೆಯುತ್ತಿರುವ ಹಲವರ ಅಭಿಫ್ರಾಯಗಳು ಪುಸ್ತಕಕ್ಕೆ ಒಂದು ಪರಿಪೂರ್ಣತೆಯ ಚೌಕಟ್ಟನ್ನು ನೀಡಿವೆ.

ಮುನ್ನುಡಿಯಲ್ಲಿ ದುನಿಯಾ ಸೂರಿಯವರು ಚಿತ್ರಕಥೆಯ ಅಭ್ಯಾಸ ನೇರವಾಗಿ ಪ್ರಾಕ್ಟಿಕಲ್ ಆಗಿರುತ್ತದೆ. ಥಿಯರಿಗಳು ಕೆಲಸಕ್ಕೆ ಬರುವುದಿಲ್ಲ ಎನ್ನುವುದು ಸರಿಯೇ ಆದರೂ ಈ ಪುಸ್ತಕವು ಚಿತ್ರಕಥೆಯ ಅಕ್ಷರಗಳನ್ನು ಮತ್ತು ಕಾಗುಣಿತವನ್ನು ಕಲಿಸುವುದಂತೂ ನಿಜ. ಸೂರಿಯವರೇ ‘ಸೆಂಕೆಂಡ್ ಹಾಫ್’ನ ತಮ್ಮ ಲೇಖನದಲ್ಲಿ ಹೇಳಿರುವಂತೆ ಸಿನಿಮಾ ಅಂದರೆ ಚಂಚಲತೆ ಅಲ್ಲ, ಗಾಢವಾದ ಧ್ಯಾನ. ಇಡೀ ಸಿನಿಮಾವನ್ನು ಕಣ್ಮುಂದೆ ತಂದು ನಿಲ್ಲಿಸುವ ಚಿತ್ರಕತೆ ಒಂದು ಧ್ಯಾನದ ಸ್ಥಿತಿಯಲ್ಲಿ ಮಾತ್ರ ಹುಟ್ಟುತ್ತದೆ. ಈ ಪರಿಯ ಧ್ಯಾನವನ್ನು ಒಲಿಸಿಕೊಳ್ಳಲು ಈ ಪುಸ್ತಕದ ಅವಶ್ಯಕತೆಯಂತೂ ಖಂಡಿತ ಇದೆ.

ಇವೆಲ್ಲಾ ಕಾರಣಗಳಿಗೆ ಚಿತ್ರಕಥೆ ಬರೆಯಲು ತೊಡಗುವವರಿಗೆ ಸ್ಫೂರ್ತಿ ನೀಡುವ, ದಾರಿ ತೋರುವ ಈ ಪುಸ್ತಕವನ್ನು ಶಿಫಾರಸ್ಸು ಮಾಡುತ್ತ ನನ್ನ ಆತ್ಮೀಯ ಸಿನಿಪ್ರೇಮಿ ಗೆಳೆಯರಿಗೆ ಉಡುಗೊರೆಯಾಗಿಯೂ ನೀಡುತ್ತಿದ್ದೇನೆ.

 

ಈ ಪುಸ್ತಕವನ್ನು ಅಮೇಜಾನಿನಲ್ಲಿ ಕೊಳ್ಳಲು: https://amzn.to/3ExRYs3

 

ಸೋಮವಾರ, ಸೆಪ್ಟೆಂಬರ್ 11, 2023

ಚಂದ್ರನೂರಿಗೆ ವಿಹಾರ ಹೂಡುವ ‘ಹಕ್ಕಿ ಮತ್ತು ಮೋಡ’

ಮಕ್ಕಳ ಸಾಹಿತಿಗಳಿಗೆ ಯಾವುದಾದರೂ ಪ್ರಶಸ್ತಿ, ಪುರಸ್ಕಾರ, ಗೌರವ, ಸನ್ಮಾನಗಳು ದೊರೆತಾಗ ನನ್ನ ಮನಸ್ಸು ಮುದಗೊಳ್ಳುತ್ತದೆ. ಕಾರಣ, ನೆಪದಲ್ಲಾದರೂ ಅವರಿಗೆ ಸಿಗಬೇಕಾದ ಗೌರವ ದೊರೆಯಿತಲ್ಲ ಎಂಬ ಸಮಾಧಾನ. ಸಾಮಾನ್ಯವಾಗಿ ಮಕ್ಕಳ ಸಾಹಿತ್ಯ ರಚಿಸುವವರನ್ನು ಕಡೆಗಣಿಸಲಾಗುತ್ತದೆ ಎಂದು ಹೇಳುತ್ತಾರೆ. ಅದು ಎಷ್ಟು ನಿಜವೋ ಸುಳ್ಳೋ ನನಗೆ ಗೊತ್ತಿಲ್ಲ. ಆದರೆ, ಮಕ್ಕಳ ಸಾಹಿತ್ಯ ರಚಿಸದವರು ಸಾಹಿತಿಗಳೇ ಅಲ್ಲ ಎಂದು ಸುಲಭವಾಗಿ ಹೇಳಬಹುದು. ಯಾಕೆಂದರೆ, ಮಕ್ಕಳ ಸಾಹಿತ್ಯ ರಚಿಸುವವರು ಮಕ್ಕಳೇ ಆಗಿದ್ದರೆ ಓಕೆ. ಇಲ್ಲವಾದರೆ ಅವರು ಮಕ್ಕಳ ಮನಸ್ಸುಳ್ಳವರಾಗಿರಬೇಕಾಗುತ್ತದೆ. ಅದು ಎಲ್ಲರಿಗೂ ಆಗದ ಕೆಲಸ. ನಮ್ಮ ಕನ್ನಡ ಸಾಹಿತ್ಯದಲ್ಲಿ ಜೆ.ಪಿ. ರಾಜರತ್ನಂ, ಪಂಜೇ ಮಂಗೇಶರಾಯರು, ಪಳಕಳ ಸೀತಾರಾಮ ಭಟ್ಟ, ಆನಂದ ಪಾಟೀಲ, ಸುಮತೀಂದ್ರ ನಾಡಿಗ ಹೀಗೆ ಇನ್ನು ಮುಂತಾದ ಹಲವಾರು ಹೆಸರಾಂತ ಮಕ್ಕಳ ಸಾಹಿತಿಗಳಿದ್ದಾರೆ. ಪದ್ಯ ಸಾಹಿತ್ಯದಲ್ಲಷ್ಟೇ ಅಲ್ಲದೇ ಗದ್ಯ ಸಾಹಿತ್ಯದಲ್ಲೂ ಸಾಕಷ್ಟು ಕೃಷಿಮಾಡಿ ಕಿರಿಯರ ಹಿರಿಯರ ಮನಕ್ಕೆ ಲಗ್ಗೆಯಿಟ್ಟ ಬೋಳುವಾರು, ನಾ ಡಿಸೋಜ ಮುಂತಾದವರಿದ್ದಾರೆ. ನಾ ಡಿಸೋಜರವರಂತೂ ಇತ್ತೀಚಿಗೆ ಮಕ್ಕಳ ಸಾಹಿತ್ಯ ರಚನೆ ಮಾಡದವರನ್ನು ಯಾವ ಪ್ರಶಸ್ತಿಗೂ ಪರಿಗಣಿಸಬಾರದು ಎಂದು ಪ್ರೀತಿಪೂರ್ವಕವಾಗಿ ಆಗ್ರಹಿಸುತ್ತಲೇ ಸಾಹಿತಿಯಾದವರು ಮಕ್ಕಳ ಸಾಹಿತ್ಯವನ್ನೂ ಶ್ರೀಮಂತಗೊಳಿಸಬೇಕು ಎಂದು ಬುದ್ಧಿಮಾತು ಹೇಳಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ಶಿವರಾಮ ಕಾರಂತರೂ ಮಕ್ಕಳಿಗಾಗಿಯೇ ಸಾಹಿತ್ಯ ರಚನೆ ಮಾಡಿರುವುದು ನಮಗೆಲ್ಲಾ ಗೊತ್ತೇ ಇದೆ.

ಮೇಲಿನ ನನ್ನ ಪೀಠಿಕೆಗೆ ಕಾರಣವಾದ ವಿಷಯವೇನೆಂದರೆ ನಮ್ಮ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಹಲವು ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಮಕ್ಕಳ ಸಾಹಿತಿ ಪ್ರೊ. ಟಿ.ಎಸ್. ನಾಗರಾಜಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿರುವ ಸುದ್ಧಿಮಕ್ಕಳ ಸಾಹಿತಿಗೆ ಸಂದ ಗೌರವ ಎಂದು ಪತ್ರಿಕೆಗಳಲ್ಲಿ ಪ್ರಕಟವಾದದ್ದು. ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಬಾಲ ಸಾಹಿತ್ಯ ಪುರಸ್ಕಾರ ಸಂದಾಗಲೇ ಇವರ ಮಕ್ಕಳ ಸಾಹಿತ್ಯದ ಪುಸ್ತಕಗಳನ್ನು ಓದುವ ಮನಸ್ಸಾಗಿದ್ದರೂ ಅದು ಕನ್ನಡಿಯೊಳಗಿನ ಗಂಟಾಗಿಯೇ ಉಳಿದುಬಿಟ್ಟಿತು. ಸಂದರ್ಭದಲ್ಲಾದರೂ ಅವರ ಪುಸ್ತಕವೊಂದನ್ನು ಓದೋಣವೆಂದರೆ ಅವರ ಯಾವುದೇ ಪುಸ್ತಕ ನನ್ನ ಬಳಿ ಇಲ್ಲ. ನೆಪದಲ್ಲಾದರೂ ಒಂದು ಮಕ್ಕಳ ಪದ್ಯಗಳ ಸಂಕಲನವನ್ನು ಓದಬೇಕೆಂದು ಹುಡುಕಿದಾಗಲೇ ನನ್ನ ಕೈಗೆ ಸಿಕ್ಕ ಪುಸ್ತಕ ಡಾ|| ಕೆ.ಬಿ. ರಂಗಸ್ವಾಮಿಯವರಹಕ್ಕಿ ಮತ್ತು ಮೋಡ ಮಕ್ಕಳ ಪದ್ಯಗಳ ಸಂಕಲನ.



     ನಮ್ಮ ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ವಿಪುಲವಾಗಿದೆ. ಮಕ್ಕಳ ಸಾಹಿತಿಗಳು ಕೂಡ ಹೆಚ್ಚಾಗಿಯೇ ಇದ್ದಾರೆ. ಡಾ|| ವಿದ್ಯಾವಾಚಸ್ಪತಿ ಕವಿತಾಕೃಷ್ಣ, ಕೃಷ್ಣಮೂರ್ತಿ ಬಿಳಿಗೆರೆ, ಸಿದ್ದರಾಜ್ ಐವಾರ್, ಪದ್ಮಾ ಕೃಷ್ಣಮೂರ್ತಿ, ಸುಶಿಲಾ ಸದಾಶಿವಯ್ಯ, ಕಮಲಾ ಬಡ್ಡಿಹಳ್ಳಿ, ಡಾ|| ಕೆ.ಬಿ. ರಂಗಸ್ವಾಮಿ, ವಿದ್ಯಾ ಅರಮನೆ ಇನ್ನು ಮುಂತಾದವರು ತಮ್ಮ ಮಕ್ಕಳ ಸಾಹಿತ್ಯ ರಚನೆಯಿಂದ ಗಮನ ಸೆಳೆಯುತ್ತಲೇ ಇರುತ್ತಾರೆ.



 ವೃತ್ತಿಯಲ್ಲಿ ಮಕ್ಕಳ ವೈದ್ಯರು, ಶಿಕ್ಷಕರೂ ಆಗಿರುವ ಡಾ|| ಕೆ.ಬಿ. ರಂಗಸ್ವಾಮಿಯವರು ತಮ್ಮಗರಿಕೆ ಮತ್ತುಕವಿತೆಗಷ್ಟೇ ಸಾಧ್ಯ ಎಂಬ ಕಿರುಗವಿತೆಗಳ ಸಂಕಲನ ಹಾಗುಬೆಳದಿಂಗಳ ಹೈಕುಗಳು ಎಂಬ ಚಂದಿರನ ಧ್ಯಾನದಲ್ಲೇ ಬರೆದಿರುವ ಇನ್ನೂರಕ್ಕು ಹೆಚ್ಚು ಹೈಕುಗಳ ಸಂಕಲನದ ಮೂಲಕ ಈಗಾಗಲೇ ಚಿರಪರಿಚಿತರಾಗಿದ್ದಾರೆ. ಇವರ ಪ್ರಬಂಧಗಳು ಹಲವು ಪ್ರಶಸ್ತಿಗಳನ್ನು ಪಡೆದಿವೆ. ವೃತ್ತಿಯಲ್ಲಿ ಮಕ್ಕಳ ವೈದ್ಯರಾಗಿರುವ ಇವರು ಸಹಜವಾಗಿ ಮಕ್ಕಳ ಒಡನಾಟದಲ್ಲಿದ್ದರೂ ಮಕ್ಕಳ ಪದ್ಯಗಳನ್ನು ರಚಿಸಿದ್ದು ಅವರೇ ಹೇಳಿರುವಂತೆ ತಮ್ಮ ಎರಡನೇ ಮಗನ ಜನನದ ನಂತರ. ಈಗಾಗಲೇ ಇವರು ತಮ್ಮ ಮಕ್ಕಳ ಪದ್ಯಗಳಿಗೆ ಸಹೃದಯರ ಮೆಚ್ಚುಗೆ ಪಡೆದಿದ್ದಾರೆ. ಇವರ 40 ಮಕ್ಕಳ ಪದ್ಯಗಳನ್ನುಹಕ್ಕಿ ಮತ್ತು ಮೋಡ ಪುಸ್ತಕದಲ್ಲಿ ಸಂಕಲಿಸಲಾಗಿದೆ.

 ʼಹಕ್ಕಿ ಮತ್ತು ಮೋಡ ಸಂಕಲನದ ಎಲ್ಲಾ ಪದ್ಯಗಳು ನನಗೆ ಮೊದಲ ಓದಿನಲ್ಲೇ ಬಹಳ ಖುಷಿಕೊಟ್ಟವು. ಓದಿನ ಖುಷಿಯಿರುತ್ತದ್ದಲ್ಲ ಅದರಲ್ಲೂ ಮಕ್ಕಳ ಪದ್ಯಗಳ ಓದಿನ ಖುಷಿಯಿರುತ್ತದ್ದಲ್ಲ ಅದು ವರ್ಣಿಸಲು ಅಸಾಧ್ಯ. ಖುಷಿಯನ್ನು ಓದಿಯೇ ಅನುಭವಿಸಿಬೇಕು. ಸಂಕಲನದಲ್ಲಿ ನನಗೆ ಎರಡು ಪದ್ಯಗಳು ಬಹಳ ಅಂದರೆ ಬಹಳ ಇಷ್ಟವಾದವು. ಒಂದು ಸಂಕಲನದ ಶೀರ್ಷಿಕೆ ಪದ್ಯಹಕ್ಕಿ ಮತ್ತು ಮೋಡ, ಇನ್ನೊಂದುಚಂದ್ರನೂರಿಗೆ ವಿಹಾರ.’ ಆದಕಾರಣದಿಂದಲೇ ಇವೆರಡು ಪದ್ಯಗಳ ಹೆಸರನ್ನು ಸೇರಿಸಿಯೇ ಅಂಕಣಕ್ಕೆ ಶೀರ್ಷಿಕೆಯನ್ನು ಬರೆದಿದ್ದೇನೆ.

 

ಬಿಂಕದಿ ಹಾರುತ

ಬಾನಲಿ ಹಕ್ಕಿ

ಠಣ್ಣನೆ ಹೊಡೆಯಿತು

ಮೋಡಕ್ಕೆ ಡಿಕ್ಕಿ

 

ʼಹಕ್ಕಿ ಮತ್ತು ಮೋಡ ಪದ್ಯದಲ್ಲಿ ಹಕ್ಕಿ ಮತ್ತು ಮೋಡ ಅಪಘಾತಕ್ಕೀಡಾಗಿ ಜಗಳಕ್ಕಿಳಿಯುತ್ತವೆ. ಆಗ ಆಗಸ ಇವೆರಡನ್ನು ಸಮಾಧಾನ ಮಾಡಿ ಜಗಳವನ್ನು ಬಿಡಿಸುವುದೇ ಚಂದ

 

ಜಗಳವು ಬೇಡ

ಗೆಳೆಯರೇ ನಿಮ್ಮಲಿ

ನೀವಿಬ್ಬರೂ ಇರುವುದು

ನನ್ನಂಗಳದಲಿ

 

ʼಚಂದ್ರನೂರಿಗೆ ವಿಹಾರ ಪದ್ಯದಲ್ಲಿ ಚಂದಿರನೂರ ಹಬ್ಬಕ್ಕೆ ಲಗ್ಗೆಹಾಕುವ ಓದುಗ ಮನಸ್ಸು

 

ಕಜ್ಜಾಯ ಶ್ಯಾವಿಗೆ

ಒಬ್ಬಟ್ಟು ಸಂಡಿಗೆ

ಚೆನ್ನಾಗಿ ಮೆದ್ದು

ಢರ‍್ರನೆ ತೇಗೋಣ

 

ಎಂದು ಅಲ್ಲಿ ಹಬ್ಬದೂಟ ಮಾಡಿ ಹಾಗೇ ವಿಹರಿಸುತ್ತಾ

 

ಅರಮನೆ ತೋಟದಿ

ಚಂದ್ರನ ಜೊತೆಯಲಿ

ಜೂಟಾಟ ಆಡೋಣ

ಒಂದಷ್ಟು ಕಥೆಗಳ ಕೇಳೋಣ

 

ಎಂದು ನಲಿದಾಡಿನುಣ್ಣನೆ ಕೆನ್ನಗೆ / ಮುತ್ತನ್ನು ಕೊಟ್ಟು ಮನೆಯ ಹಾದಿ ಹಿಡಿಯುತ್ತದೆ.

 

ಸಂಕಲನದ ಬಹುತೇಕ ಪದ್ಯಗಳಲ್ಲಿ ಪ್ರಾಣಿಪಕ್ಷಿಗಳ, ಕ್ರಿಮಿಕೀಟಗಳ ಒಡನಾಟವಿದೆ. ಚಿಟ್ಟೆ, ಇರುವೆ, ಕೊಕ್ಕರೆ, ನವಿಲು, ಬೆಕ್ಕು, ಕಂಬಳಿ ಹುಳು, ಬೆಳ್ಳಕ್ಕಿ, ತಾಯಿ ಕೋಳಿ ಇಲ್ಲಿನ ಪದ್ಯಗಳಲ್ಲಿ ಬಂದು ಅವುಗಳದೇ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ. ಪದ್ಯಗಳಲ್ಲಿ ಬಳಸಿರುವ ಪ್ರಾಸವು ಗಮನ ಸೆಳೆಯುತ್ತದೆ. ಉದಾಹರಣೆಗೆಕಂಬಳಿ ಹುಳು ಪದ್ಯದಅಂಗಳದೊಳಗೆ ಕಂಬಳಿ ಹುಳು / ತೆವಳುತ ಬಂದಿತು ಪುಳು ಪುಳು ಸಾಲುಗಳನ್ನು ನೋಡಬಹುದು.

 ಸಂಕಲನದಲ್ಲಿ ಲೌಕಿಕ ಸಂಬಂಧಗಳಾದ ಅಪ್ಪ, ಅಮ್ಮ, ಅಜ್ಜಿ, ಅಣ್ಣ, ತಮ್ಮ, ಮಿಸ್ಸು, ಫ್ಯಾಮಿಲಿ ಡಾಕ್ಟರು, ಬಲೂನು ಮಾಮ ಕುರಿತ ಪದ್ಯಗಳ ಜೊತೆಗೆ ಅಲೌಕಿಕವಾದ ದೇವರು, ಮುದ್ದುಕೃಷ್ಣನ ಕುರಿತು ಸೊಗಸಾದ ಪದ್ಯಗಳಿವೆ. ವಿಮಾನ ಯಾನ ಮಾಡಿಸುವ, ಚಾರಣದ ಸಾಹಸ ಮಾಡಿಸುವ ಪದ್ಯಗಳೂ ಇವೆ. ‘ಮುದ್ದು ಕೃಷ್ಣ ಪದ್ಯದಲ್ಲಿ ತಮ್ಮನ ಹೆಸರೇ ಮುದ್ದು ಕೃಷ್ಣ! ಅವನು ಹೇಳುತ್ತಾನೆ, ‘ಚಪ್ಪರಿಸುವೆವು ನಾನು ಅಣ್ಣ / ಹಂಚಿಕೊಂಡು ತಾಜಾಗಿಣ್ಣ.’  

  ಸಂಕಲನದ ಮತ್ತೊಂದು ಮುಖ್ಯ ಪದ್ಯನಾನಾಗ ಬಯಸುವೆ ಮಕ್ಕಳು ಏನಾಗಬೇಕೆಂದು ಹೇಳುವ ನೀತಿಯ ಪಾಠದಂತಿದೆ. ‘ನಾನಾಗ ಬಯಸುವೆ ಬಿದಿರಿನ ಕೊಳಲು / ಹೊಮ್ಮಿಸಿ ಸ್ವರಗಳ ಮರೆಸುವೆ ಅಳಲು ರೀತಿಯ ಅರ್ಥವತ್ತಾದ ಸಾಲುಗಳು ಇದಕ್ಕೆ ಸಾಕ್ಷಿಯಾಗಿವೆ. ಪ್ರಶ್ನೆ, ಒಗಟಿನ ರೂಪದ ಪದ್ಯಗಳು ಮಕ್ಕಳ ಜ್ಞಾನಾರ್ಜನೆಗೆ ಸಹಕಾರಿಯಾಗಿವೆ. ಹಕ್ಕಿಗಳಿಗೆ ಪ್ರಶ್ನೆ ಪದ್ಯದಚಿಂವ್ ಚಿಂವ್ ಚಿಂವ್ ಚಿಂವ್ ಗುಬ್ಬಚ್ಚಿ ಮರಿಯೇ / ನಮ್ಮನು ತೊರೆದು ಹೋದುದು ಸರಿಯೇ?’ ಎಂಬ ಪ್ರಶ್ನೆ ನಮ್ಮನ್ನೇ ನಾವು ಪ್ರಕೃತಿಯನ್ನು ಕುರಿತು ಚಿಂತನೆಗೆ ಹಚ್ಚುವಂತಿವೆ. ಸಂಕಲನದಲ್ಲಿ ಪ್ರಕೃತಿಯ ಹಬ್ಬವಿದೆ, ಹಿತ್ತಲಿದೆ, ಜಾತ್ರೆಯೂ ಇದೆ. ‘ಮೊಲದ ಜಾಣ್ಮೆ ರೀತಿಯ ಕಥನ ಪದ್ಯವೂ ಇದೆ.

ಒಟ್ಟಿನಲ್ಲಿ ಹಾ. ಉಮೇಶ ಸೊರಬರವರ ಸಂಕ್ಷಿಪ್ತ ಮುನ್ನುಡಿಯೊಂದಿಗೆ ಪ್ರಕಟವಾಗಿರುವ ಡಾ|| ಕೆ.ಬಿ. ರಂಗಸ್ವಾಮಿಯವರಹಕ್ಕಿ ಮತ್ತು ಮೋಡ ಮಕ್ಕಳ ಪದ್ಯಗಳ ಪುಸ್ತಕವು ಸಂಕಲನದತಮ್ಮಪದ್ಯದಅವಂಗೆ ಮಾತೇ ಬರೊಲ್ಲ / ಆದ್ರೂ ನಂಗೆ ಬೋರಾಗಲ್ಲ ಎಂಬ ಸಾಲುಗಳಂತೆ ಎಲ್ಲೂ ಬೋರು ಹೊಡೆಸಲ್ಲ. ಬದಲಾಗಿ ಓದುಗನನ್ನು ಬೆರಗಾಗಿಸಿ ಬಾಲ್ಯದ ಆಗಸದಲ್ಲಿ ಒಮ್ಮೆ ಕೈಹಿಡಿದುಕೊಂಡು ಓಡಾಡಿಸಿಕೊಂಡು, ಆಟವಾಡಿಸಿಕೊಂಡು ಬರುತ್ತವೆ.

ವಯಸ್ಸು ನಲವತ್ತೇಳು… ಮನಸ್ಸು ಇಪ್ಪತ್ತನಾಲ್ಕು…

ವಯಸ್ಸು ನಲವತ್ತೇಳು… ಮನಸ್ಸು ಇಪ್ಪತ್ತನಾಲ್ಕು… ಆತ್ಮೀಯ ಸ್ನೇಹಿತರೇ, ನಮಸ್ಕಾರ… ಮೊದಲಿಗೆ, ನನ್ನ ಹುಟ್ಟುಹಬ್ಬಕ್ಕೆ ಹಾರೈಸುವುದರ ಮೂಲಕ ನನಗೆ ಮತ್ತಷ್ಟು ಚೈತನ್ಯ ನೀಡ...