ರಹಮತ್ ತರೀಕೆರೆ ಎಂದರೆ ಕೆಲವರಿಗೆ
ಮೇಷ್ಟ್ರು, ಹಲವರಿಗೆ ವಿಮರ್ಶಕ, ಒಂದಷ್ಟು ಮಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶಾಂತರ ಸುತ್ತುವ
ಅಲೆಮಾರಿ, ಲೇಖಕ, ಸೃಜನಶೀಲ ಸಾಹಿತ್ಯ ಪ್ರಿಯ ಓದುಗರಿಗೆ
ನೆಚ್ಚಿನ ಲಲಿತ ಪ್ರಬಂಧಕಾರ, ಇತ್ಯಾದಿ… ಇತ್ಯಾದಿ… ಇವೆಲ್ಲವೂ ಅಥವಾ ಮೇಲಿನ ಯಾವುದೇ ಒಂದು ವಿಶೇಷಣ
ಗೊತ್ತಿಲ್ಲದವರಿಗೆ ʼಬುದ್ಧಿ ಜೀವಿ” ಮಾತ್ರ! ಇಂತಹ ವಿಶೇಷತೆಗಳ ವ್ಯಕ್ತಿಯೊಬ್ಬರ ಆತ್ಮಕಥೆ ಪ್ರಕಟವಾಗುತ್ತದೆ
ಎಂದು ತಿಳಿದಾಗ ಖುಷಿಯಿಂದ ಓದಬೇಕೆಂದುಕೊಂಡವರಲ್ಲಿ ನಾನೂ ಒಬ್ಬ.
ರಹಮತ್ ತರೀಕೆರೆ ಅವರ ಆತ್ಮಕಥನ
“ಕುಲುಮೆ – ಬಾಳ ಚಿತ್ರಗಳು” ಶ್ರೀಮತಿ ಬಾನು ಅವರ ಮುಖಪುಟ ಚಿತ್ರದೊಂದಿಗೆ ಪ್ರಕಟವಾಗಿದ್ದು, ಮುಖಪುಟವೇ
ರಹಮತ್ ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದೆ. ನಾನು ಮೇಲೆ ಹೇಳಿದ ಎಲ್ಲಾ ವಿಶೇಷಣಗಳು ಇದೊಂದು
ಚಿತ್ರದಲ್ಲಿಯೇ ಮೈದೆಳೆದಿವೆ ಎಂದರೂ ಸರಿ.
ರಹಮತ್ ಅವರೇ ತಮ್ಮ ಬಾಳಕಥನವನ್ನು
“ಕುಲುಮೆ” ಎಂದು ಕರೆದಿರುವ ಕಾರಣವನ್ನು ತಿಳಿಸಿದ್ದಾರೆ: ʼನಮ್ಮ ಕುಟುಂಬದ ಕಸುಬು ಕಮ್ಮಾರಿಕೆ. ಬೆಂಕಿ
ಹೊಗೆ ಹೊಡೆತ ಕಡಿತಗಳ ಈ ಕಸುಬು, ಹೆತ್ತಬ್ಬೆಯಂತೆ ಎದೆಹಾಲು ಕುಡಿಸಿ ನಮ್ಮನ್ನು ಪೊರೆಯಿತು; ಆತ್ಮಸಂಗಾತಿಯಂತೆ
ವಿವಿಧ ಜಾತಿ ವೃತ್ತಿ ಧರ್ಮಗಳ ಜನರೊಟ್ಟಿಗೆ ನಂಟನ್ನು ಬೆಸೆಯಿತುʼ ಎಂದು. ಆದಕಾರಣದಿಂದ ʼಒಬ್ಬ ವ್ಯಕ್ತಿ
ಕಬ್ಬಿಣದಂತೆ ಕುಲುಮೆಯಲ್ಲಿ ಬೆಂದು, ಬಡಿಸಿಕೊಂಡು ಒಂದು ರೂಪ ತಳೆಯಬೇಕು. ಈ ಶೀರ್ಷಿಕೆ ಸೂಕ್ತವಾಗಿದೆʼ
ಎಂದೆಲ್ಲಾ ನಾನು ಹೇಳಲು ಹೋಗುವುದಿಲ್ಲ. ಆದರೆ “ಕುಲುಮೆ”
ರಹಮತ್ ತರೀಕೆರೆ ಅವರ ಕುಲಕಸುಬಿನ ಹೊರತಾಗಿಯೂ ಒಂದು ಆತ್ಮಕಥನಕ್ಕೆ ಬಹಳ ಸೂಕ್ತವಾದ ಹೆಸರಾಗಿದೆ ಎಂದು
ಹೇಳಲು ಇಚ್ಛಿಸುತ್ತೇನೆ.
ತಮ್ಮ ಮಾತುಗಳಲ್ಲಿ ಈ ಆತ್ಮಕಥೆಯನ್ನು
ಬಾಳ ಚಿತ್ರಗಳಂತೆಯೇ ಓದಿಕೊಳ್ಳಬಹುದು ಎಂದಿರುವುದು ಸೂಕ್ತವಾಗಿದೆ. ಬಹಳ ಅರ್ಥಪೂರ್ಣವಾಗಿ, ಮನಸ್ಸಿಗೆ
ಆಪ್ತವೆನಿಸುವ ಲಲಿತ ಪ್ರಬಂಧಗಳನ್ನು ಬರೆಯುವ ರಹಮತ್ ಅವರ ಇಲ್ಲಿನ ಬರವಣಿಗೆಯೂ ಲಲಿತ ಪ್ರಬಂಧಗಳಂತೆಯೇ
ಓದಿಸಿಕೊಳ್ಳುತ್ತವೆ. ಅವರೇ ಹೇಳಿರುವಂತೆ ಸ್ವಾರಸ್ಯಕರ ವ್ಯಕ್ತಿಚಿತ್ರಗಳೂ ಕೂಡ ಓದುಗನಿಗೆ ಸಿಗುತ್ತವೆ.
ಆತ್ಮಕಥನದ ಹೆಸರಿನ ಸೊಗಸಿನ ಜೊತೆಗೆ ಇಲ್ಲಿನ ಪರಿವಿಡಿಯೂ ಗಮನಸೆಳೆಯುತ್ತದೆ. ಮೊದಲನೇ ಅಧ್ಯಾಯ ಗರಿಕೆಬಳ್ಳಿ.
ಅದರಲ್ಲಿ ಒಂದಷ್ಟು ಉಪ-ಅಧ್ಯಾಯಗಳ ಹೆಸರನ್ನು ಓದಿದರೆ ಎಷ್ಟು ಶ್ರದ್ಧೆಯಿಂದ ತಮ್ಮ ಬಾಳಕಥನವನ್ನು ರಹಮತ್
ಓದುಗರಿಗೆ ನೀಡಿದ್ದಾರೆ ಎಂಬುದೇ ಒಂದು ಸೋಜಿಗದಂತಿದೆ. ಇಂತಹ ಒಟ್ಟು ಹನ್ನೆರೆಡು ಅಧ್ಯಾಯಗಳ ಆತ್ಮಕಥೆಯ
ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಅಭಿಮಾನಿಗಳಿಗೆ ತಮ್ಮ ಜೀವನವನ್ನು ಕಟ್ಟಿಕೊಟ್ಟಿದ್ದಾರೆ ರಹಮತ್ ತರೀಕೆರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಕೃತಿಯೊಂದು "ದೀಪ"ದಂತಹ ಜೀವನಾನುಭವ ಕಥನ.
ಶಿವಮೊಗ್ಗದ ಅಹರ್ನಿಶಿ ಪ್ರಕಾಶನ
ಈ ಕೃತಿಯನ್ನು ಪ್ರಕಟಿಸಿದ್ದು, ಪ್ರಕಾಶನದ ಅಕ್ಷತಾ ಅವರು ಹೇಳಿರುವಂತೆ ರಹಮತ್ ಅವರ ಬಾಲ್ಯದ ಅನಾರೋಗ್ಯದ
ದುರಂತ, ಕನ್ನಡ ಲೋಕಕ್ಕೆ ಲಾಭಕರವಾಗಿದ್ದಂತೂ ಸತ್ಯ.
ರೂ. 330/-ರ ಮೌಲ್ಯದ ರಹಮತ್
ತರೀಕೆರೆ ಅವರ “ಕುಲುಮೆ”ಯನ್ನು ನೀವು ರಿಯಾಯಿತಿ ದರದಲ್ಲಿ ಅಮೇಜಾನಿನಲ್ಲಿ ಕೊಂಡು ಓದಬಹುದು..
ಲಿಂಕ್… https://amzn.to/3NBvFq3
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ