Learn English Through Cricket Commentary
ಸ್ನೇಹಿತರೇ,
ನೆನ್ನೆಯಿಂದ (ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ) ಐಸಿಸಿ ಪುರುಷರ ವಿಶ್ವ ಕಪ್ ಕ್ರಿಕೆಟ್ ಶುರುವಾಗಿದೆ. ಭಾರತ ಸೇರಿದಂತೆ ಒಟ್ಟು ಹತ್ತು ರಾಷ್ಟ್ರಗಳು ಪ್ರಶಸ್ತಿಗೆ ಸೆಣಸಲಿವೆ. ಈ ಬಾರಿಯ ವಿಶ್ವ ಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಇಲ್ಲದಿರುವುದು ದುರಂತ. ಈ ಹಿಂದೆ ಇತರೆ ನೆರೆರಾಷ್ಟ್ರಗಳ ಜೊತೆ ಅಂದರೆ ಭಾರತ ಉಪಖಂಡದಲ್ಲಿ ನಮ್ಮ ದೇಶ ಆತಿಥ್ಯವನ್ನು ಹಂಚಿಕೊಂಡಿತ್ತು. ಈ ಬಾರಿ ನಮ್ಮ ದೇಶದ್ದೇ ಪೂರ್ಣ ಆತಿಥ್ಯ… ಇದು 13ನೇ ವಿಶ್ವಕಪ್…
ಈಗ ನಾನು ವಿಷಯಕ್ಕೆ ಬರುತ್ತೇನೆ. ಕ್ರಿಕೆಟ್ ನೋಡಿ ಇಂಗ್ಲೀಷ್ ಕಲಿಯಬಹುದೇ!? ಹೌದು, ಎನ್ನುವುದು ನನ್ನ ಉತ್ತರ. ಹೇಗೆಂದರೆ, ಕಾಮೆಂಟರಿ ಕೇಳುತ್ತಾ… ಹೌದಾ…!? ಕ್ರಿಕೆಟ್ ನೋಡುತ್ತಾ ಕಾಮೆಂಟರಿ ಕೇಳುತ್ತಾ ಇಂಗ್ಲೀಷ್ ಕಲಿಯಬಹುದಾ ಎಂದು ಹುಬ್ಬೇರಿಸಬೇಡಿ. ಖಂಡಿತಾ ಕಲಿಯಬಹುದು. ಅದೂ ಸ್ಪೋಕನ್ ಇಂಗ್ಲೀಷ್... ಕ್ರಿಕೆಟ್ ನೋಡುವವರಿಗೆ ಗೊತ್ತಿರುತ್ತೆ, ಜೋರಾಗಿ ಸೌಂಡ್ ಕೊಟ್ಟಿಕೊಂಡು ಕ್ರಿಕೆಟ್ ನೋಡುವ ಮಜಾ! ಆ ಮಜಾದಲ್ಲಿಯೇ ಇಂಗ್ಲೀಷ್ ಕಲಿತುಬಿಡಬಹುದು.
ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಷ್ಟೇ
ನಾವು ಕನ್ನಡದಲ್ಲಿ ಕಾಮೆಂಟರಿ ಕೇಳುತ್ತಿರುವುದು. ಮೊದಲೆಲ್ಲಾ ಕಾಮೆಂಟರಿ ಅಂದರೆ ಅದು ಇಂಗ್ಲೀಷ್‌ನಲ್ಲಿ
ಮಾತ್ರ ಅಲ್ವಾ? ಟಿವಿ ಬರುವ ಮುಂಚೆ ರೇಡಿಯೋವೇ ಗತಿ! ಆಗ ಇಂಗ್ಲೀಷ್ ಕಾಮೆಂಟರಿ ಕೇಳುವುದನ್ನು
ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಆ ಕಾಲದವರು ಇನ್ನೂ ಚೆನ್ನಾಗಿ ಇಂಗ್ಲೀಷ್ ಕಲಿಯಬಹುದಾಗಿತ್ತು,
ಕೆಲವರಂತೂ ಈ ಮೂಲಕವೇ ಇಂಗ್ಲೀಷ್ ಕಲಿತಿದ್ದಾರೆ.
ಸದ್ಯಕ್ಕೆ ನಾನು ಟಿವಿಯ ಕಾಮೆಂಟರಿ
ಬಗ್ಗೆ ಹೇಳ್ತೇನೆ. ನಾನು ಟಿವಿಯಲ್ಲಿ ಕ್ರಿಕೆಟ್ ನೋಡುವ ಕಾಲಕ್ಕೆ ಕಾಮೆಂಟರಿಗಾರರಾಗಿ ಫೇಮಸ್
ಆಗಿದ್ದವರು ಟೋನಿ ಗ್ರೇಗ್, ಜೆಫ್ರಿ ಬಾಯ್ಕಾಟ್, ಸುನೀಲ್ ಗವಾಸ್ಕರ್... ಬೆರಳೆಣಿಕೆಯಷ್ಟು
ಮಾತ್ರ. ಇವರ ಕಾಮೆಂಟರಿ ಕೇಳುತ್ತಲೇ 80-90ರ ದಶಕದ ಕ್ರಿಕೆಟ್ ಪ್ರೇಮಿಗಳು ಬೆಳೆದದ್ದು. ಜೊತೆಗೆ
ಇಂಗ್ಲೀಷ್ ಕಲಿತದ್ದು. ಅಷ್ಟು ಅಚ್ಚುಕಟ್ಟಾದ ಸೊಗಸಾದ ಭಾಷೆ ಇವರದಾಗಿರುತ್ತಿತ್ತು. ನಂತರ ರವಿ
ಶಾಸ್ತ್ರಿ, ಕಪಿಲ್ ದೇವ್, ಸಿಕ್ಸರ್ ಸಿಧು, ಮೈಕೇಲ್ ಆರ್ಥಟನ್, ಇಯಾನ್ ಬಿಷಪ್, ನಾಸೀರ್
ಹುಸೇನ್, ಸಂಜಯ್ ಮಂಜ್ರೇಕರ್, ಹರ್ಷ ಬೋಗ್ಲೆ… ಇನ್ನು ಮುಂತಾದವರು ಫೇಮಸ್ ಆಗಿದ್ದಾರೆ.
ಹರ್ಷ ಬೋಗ್ಲೆ ಕ್ರಿಕೆಟ್ ಕಾಮೆಂಟರಿಯ ದಂತಕಥೆಯೇ ಆಗಿದ್ದಾರೆ.
ಇನ್ನು ನಮ್ಮ ನೆಚ್ಚಿನ ಕೆಲವು
ಕ್ರಿಕೆಟರ್‌ಗಳು ಕೂಡ ಕಾಮೆಂಟರಿ ಮಾಡುತ್ತಲೇ ಇರುತ್ತಾರೆ. ಇವರ ಇಂಗ್ಲೀಷ್ ಕೂಡ
ಚೆನ್ನಾಗಿರುತ್ತದೆ. ಇವರ ಇಂಗ್ಲೀಷ್ ಕೇಳುತ್ತಲೇ ಸುಲಭವಾಗಿ ನಾವು ಕೂಡ ಇಂಗ್ಲೀಷ್ ಕಲಿಯಬಹುದು.
ಅದೂ ನಾನು ಹೇಳಿದಂತೆ ಸ್ಪೋಕನ್ ಇಂಗ್ಲೀಷ್! ಇದು ನನ್ನ ಮಟ್ಟಿಗೆ ನಿಜ ಮತ್ತು ನನ್ನಂತೆಯೇ ಕೋಟ್ಯಾನುಕೋಟಿ
ಕನ್ನಡಿಗರಷ್ಟೆ ಅಲ್ಲದೆ ಇತರೆ ಭಾಷಿಕರೂ ಸಹ ಇಂಗ್ಲೀಷ್ ಕಲಿತಿದ್ದಾರೆ. ನೀವು ಕನ್ನಡದಲ್ಲೇ
ಕಾಮೆಂಟರಿ ಕೇಳುವುದಾದರೆ ಅದು ನಿಮ್ಮಿಷ್ಟ. ಕನ್ನಡದ ಜೊತೆಗೆ ಇಂಗ್ಲೀಷ್ ಕೂಡ ಕ್ರಿಕೆಟ್ ನೋಡುವ
ಸಮಯದಲ್ಲೇ ಕಲಿತಿನೀ ಅನ್ನುವುದಾದರೇ ಇನ್ಮುಂದೆ ಕ್ರಿಕೆಟ್ ನೋಡುವತ್ತಲೇ ಹರಿಸುವ ಗಮನವನ್ನು
ಸ್ಪಲ್ಪ ಕಾಮೆಂಟರಿ ಕೇಳುವ ಕಡೆಗೂ ಹರಿಸಿ ಒಂದಷ್ಟು ಇಂಗ್ಲೀಷ್ ನಿಮ್ಮದಾಗಿಸಿಕೊಳ್ಳಿ.
ಈ ಬಾರಿ ಮತ್ತೊಮ್ಮೆ ನಮ್ಮ ಭಾರತ ದೇಶ
ಕಪ್ ಗೆಲ್ಲಲಿ ಎಂದು ಆಶಿಸುತ್ತಾ…
ಪ್ರೀತಿಯಿಂದ, - ಗುಬ್ಬಚ್ಚಿ ಸತೀಶ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ