ನಾಳೆಗೆ ಯಾವ ಪುಸ್ತಕವನ್ನು ಓದಿ
ಬರೆಯಲಿ ಎಂದು ಯೋಚಿಸುತ್ತಿದ್ದವನು, ಅರೇ ನಾಳೆ ಶುಕ್ರವಾರ! ಅಂದರೆ ಯಾವುದಾದರೂ ಸಿನಿಮಾ ನೋಡಬೇಕು
ಎಂದುಕೊಂಡೆ. “ಸಲಾರ್” ರಿಲೀಸ್ ಆಗುವುದು ಗೊತ್ತಿತ್ತು. ಆದರೆ, “ಕಬ್ಜ” ಸಿನಿಮಾವನ್ನು ನೋಡಿದ ನಂತರ
ಯಾವುದೇ ಕಾರಣಕ್ಕೂ ಕತ್ತಲೆ ಸಾಮ್ರಜ್ಯದ ಕತೆ ಇರುವ ಸಿನಿಮಾವನ್ನು ಮೊದಲ ದಿನವೇ ನೋಡಬಾರದೆಂದು ನಿರ್ಧರಿಸಿರುವುದರಿಂದ
ಬೇಡ ಎಂದ ಸುಮ್ಮನಾದೆ. ಆದರೆ, ಬುಕ್‌ಮೈಶೋನಲ್ಲಿ ಚೆಕ್ ಮಾಡಿದಾಗ ಶಾರುಖ್ ಖಾನ್ ಅಭಿನಯದ “ಡಂಕಿ”
ಸಿನಿಮಾ ಇಂದೇ (ಗುರುವಾರ – 21/12/2023) ರಾತ್ರಿ ಏಳು ಹತ್ತಕ್ಕೆ ಶೋ ಇರುವುದು ಗೊತ್ತಾಗಿ ಬೇಗಬೇಗ
ಕೆಲಸ ಮುಗಿಸಿ ಸ್ವಲ್ಪ ಒತ್ತಡದಲ್ಲೇ ಎಸ್-ಮಾಲ್ ತಲುಪಿದೆ. ಅಲ್ಲಿ ಟಿಕೆಟ್ ತೆಗೆದುಕೊಳ್ಳಲು ಹೋದಾಗಲೇ
ತಿಳಿದದ್ದು ಸಿನಿಮಾ ಹತ್ತು ನಿಮಿಷ ತಡವಾಗಿ ಶುರುವಾಗುತ್ತದೆ ಎಂದು. ವಿಷಯ ತಿಳಿದು ಸ್ವಲ್ಪ ನಿರಾಳವಾಯಿತು.
ಆದರೂ, ಟಿಕೆಟ್ ಮೆಸೇಜ್ ಬರದೇ ಸ್ವಲ್ಪ ಗಡಿಬಿಡಿಯಾಯಿತು. ಎಸ್-ಮಾಲಿನಲ್ಲಿ ಇರುವ ಐನೋಕ್ಸ್ ಮಲ್ಟಿಪ್ಲೆಕ್ಸಿನಲ್ಲಿ
ಇದು ಮೊದಲ ಅನುಭವ. ಯಾವತ್ತೂ ಸರಿಯಾಗಿ ಬರುತ್ತಿದ್ದ ಮೆಸೇಜ್ ಮೊದಲ ಬಾರಿಗೆ ತಾಂತ್ರಿಕ ಕಾರಣದಿಂದ
ಬರಲಿಲ್ಲ. ಟಿಕೆಟನ್ನು ಒಂದು ಚೀಟಿಯಲ್ಲಿ ಗುರುತು ಹಾಕಿ ಕೊಟ್ಟಿದ್ದರು.
ಸರಿಯಾದ ಸಮಯದಿಂದ ಹತ್ತು ನಿಮಿಷ
ಜಾಹೀರಾತುಗಳು ಬಂದು ಸಿನಿಮಾ ತಡವಾಗಿಯೇ ಶುರುವಾಯಿತು. “ಡಂಕಿ” ಸಿನಿಮಾದಲ್ಲಿ ಮೊದಲ ಹೆಸರು ತೋರಿಸಿದ್ದು
ತಾಪ್ಸಿ ಪನ್ನು! ನಂತರ, ಶಾರುಕ್ ಖಾನ್. ಈ ವಿಷಯವನ್ನು ಕನ್ನಡ ಸಿನಿಮಾ ನಿರ್ಮಾಪಕರಾದ ವೀರೆಂದ್ರ
ಮಲ್ಲಣ್ಣನವರು ಫೇಸ್‌ಬುಕ್ಕಿನಲ್ಲಿ ಬರೆದಿದ್ದರೂ ಕೂಡ. ಇಲ್ಲಿಯೇ ಸಿನಿಮಾದಲ್ಲಿ ಯಾರಿಗೆಲ್ಲಾ ಪ್ರಾಮುಖ್ಯತೆ
ಇದೆ ಎಂದು ಗೊತ್ತಾಗುತ್ತದೆ. ಸಿನಿಮಾ ಆರಂಭವಾಗಿದ್ದೇ ತಡ ನನ್ನನ್ನು ಒಳಗೆ ಎಳೆದುಕೊಂಡು ಬಿಟ್ಟಿತು.
ಒಂದು ಒಳ್ಳೆಯ ಸಿನಿಮಾದ ಮೊದಲ ಲಕ್ಷಣವೇ ಇದು.
ಪಂಜಾಬ್ ಗ್ರಾಮವೊಂದನ್ನು ಸಾಂಕೇತಿಕವಾಗಿಟ್ಟುಕೊಂಡು
ಹೇಗಾದರೂ ವಿದೇಶಕ್ಕೆ ಹೋಗಿ ಸಂಪಾದಿಸಿ ತನ್ನ ಕುಟುಂಬವನ್ನು
ಚೆನ್ನಾಗಿ ನೋಡಿಕೊಳ್ಳಬೇಕೆಂಬ ಪ್ರತಿಯೊಬ್ಬ ಭಾರತೀಯನ ಕನಸನ್ನು ತೆರೆಯಮೇಲೆ ಅಚ್ಚುಕಟ್ಟಾಗಿ ಎಲ್ಲಿಯೂ
ಬೋರಾಗದಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ. ಸಿನಿಮಾದ ಸಂಗೀತ (ಪ್ರೀತಮ್)
ಸಿನಿಮಾ ನೋಡುಗನನ್ನು ತಲ್ಲೀನನಾಗಿಸುತ್ತದೆ. ಇದು ಸೂಪರ್ ಸ್ಟಾರ್ ಶಾರುಕಿನ ಪಠಾಣ್, ಜವಾನ್ ಸಿನಿಮಾಗಳಂತಲ್ಲ.
ಒಂದು ಕನಸಿನ, ಸ್ನೇಹದ, ಪ್ರೇಮದ ಕಥೆ. ಸಿನಿಮಾ ಆರಂಭವಾದ ಪಾತ್ರದಿಂದಲೇ ಸಿನಿಮಾ ಮುಗಿದು ಒಂದು ಅತ್ಯುತ್ತಮ
ಸಿನಿಮಾ ನೋಡಿದ ಅನುಭವವಾಯಿತು. ಇಂಟರ್ವಲ್‌ವರೆಗೂ ಒಂದು ಮಗ್ಗುಲಾದರೆ, ನಂತರ ಮತ್ತೊಂದು ಮಜಲು. ಈ
“ಡಂಕಿ” ಭಾರತೀಯರ ಇಂಗ್ಲೀಷ್ ಜೀವನದ ಕನವರಿಕೆಗಳನ್ನು, ತೊಳಲಾಟಗಳನ್ನು, ಸುಖ-ದುಃಖಗಳನ್ನು ತೆರೆಯಮೇಲೆ
ಸಮಂಜಸವಾಗಿ ತೆರೆದಿಟ್ಟಿದೆ. ತಮ್ಮ ಕನಸನ್ನು ಸರಿಯಾದ ದಾರಿಯಲ್ಲಿ ಈಡೇರಿಸಿಕೊಳ್ಳಲಾಗದೇ, ಅನಿವಾರ್ಯವಾಗಿ
ಅಡ್ಡದಾರಿ ಹಿಡಿದ ಬದುಕ ಚಿತ್ರಣ ನಮ್ಮದೇ ಬದುಕೆಂಬಂತೇ ಭಾಸವಾಗುವುದು ಕೂಡ ನೋಡುಗನಿಗೆ ಲಭಿಸುವ ಭಾಗ್ಯವೆಂದೇ
ಹೇಳಬೇಕು. ಮುಖ್ಯವಾಗಿ ಸಿನಿಮಾ ನೋಡುವಾಗ ಪ್ರೇಕ್ಷಕ ಹೇಗೆ ಪ್ರತಿಕ್ರಿಯಿಸುತ್ತಾನೆ (ಹೀರೋಯಿಸಂ ಆರಾಧನೇಯದ್ದೇ
ಬೇರೆ ಆಯಾಮ) ಎಂಬುದರ ಮೇಲೆ ಒಂದು ಸಿನಿಮಾದ ಗೆಲುವಿರುತ್ತದೆ. ಈ ದೃಷ್ಟಿಯಲ್ಲಿ ನೋಡುಗ ಪ್ರತಿಕ್ರಿಯಿಸುವಂತೆ
ಮಾಡುವ ಹಲವಾರು ದೃಶ್ಯಗಳಿವೆ. ನೋಡುಗನ ಊಹೆಯಂತೆಯೂ ಸಿನಿಮಾ ಸಾಗುವುದು ಕೂಡ “ಡಂಕಿ”ಯ ಪ್ಲಸ್ ಪಾಯಿಂಟ್
ಎಂದೇ ಹೇಳಬೇಕು. ಚಿತ್ರಮಂದಿರದಿಂದ ಹೊರಬಂದ ಮೇಲೆಯೂ ಕಾಡುವ “ಡಂಕಿ” ಒಂದು ಪರಿಪೂರ್ಣ ಸಿನಿಮಾವೆಂದೇ
ಹೇಳಬೇಕು.
ಸ್ಟಾರ್ ನಟನ ಹಮ್ಮಿಲ್ಲದೆ ಇಂತಹ
ಸಿನಿಮಾದಲ್ಲಿ ನಟಿಸಿದ ಶಾರುಖ್, ನಿರ್ದೇಶಕ ಹಿರಾನಿ,
ನಟನಟಿಯರಾದ ತಾಪ್ಸಿ, ವಿಕ್ಕಿ ಕೌಶಲ್, ಬೊಮಾನ್ ಇರಾನಿ ಇನ್ನು ಮುಂತಾದವರು ಮತ್ತು ಇಡೀ ಚಿತ್ರತಂಡ
ಇಷ್ವವಾಗಿಬಿಡುತ್ತದೆ. ಒಂದು ಉತ್ತಮ ಒಳ್ಳೆಯ ಸಿನಿಮಾ ನೋಡಲು ಬಯಸುವವರು ಮಿಸ್ ಮಾಡದೇ ನೋಡಿ “ಡಂಕಿ.”
ಇನ್ನು, ಇಂಟರ್ವಲ್‌ನಲ್ಲಿ ಅದು-ಇದು
ತಿನ್ನಿ ಎಂದು ಮಲ್ಟಿಪ್ಲೆಕ್ಸ್ನವರು ಪುಸಲಾಯಿಸುತ್ತಾ ಹೆಚ್ಚಿನ ಸಮಯವನ್ನು ವ್ಯಯಿಸಿದ್ದರಿಂದ ನನ್ನ
ಸಮಯವೂ ವ್ಯರ್ಥವಾಗಿ ತಡರಾತ್ರಿಯಾಯಿತು. ಹೊಟ್ಟೆ ಹಸಿಯುತ್ತಿದ್ದದನ್ನು ಗಮನಿಸಿ ಅಲ್ಲಿದ್ದ ಮಾಲಿನ
ಒಂದು ಹೋಟೆಲ್ಲಿನ ಮೆನುವಿನ ದುಬಾರಿ ರೇಟ್ ನೋಡಿ ಇಲ್ಲಿ ಬೇಡವೆಂದುಕೊಂಡು, ಊಟ ಮಾಡಲು ಟೌನ್‌ಹಾಲಿನ
ಪ್ರಸಾದ್ ಹೋಟೆಲ್ ಮುಚ್ಚಿರಬಹುದೆಂದುಕೊಂಡು ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ಲಿನಲ್ಲಿರುವ ಪುಡ್‌ಕೋರ್ಟಿಗೆ
ಹೋಗಿದ್ದಾಯಿತು. ಅಲ್ಲಿ ಇನ್ನೇನು ಮುಚ್ಚುತ್ತಿದ್ದ ಹೋಟೆಲ್ ಒಂದರಲ್ಲಿ ರುಚಿಯಾದ ಅಕ್ಕಿರೊಟ್ಟಿ,
ಚಿತ್ರಾನ್ನ ದೊರೆಯಿತು. ತಿಂದು ಮನೆ ದಾರಿ ಹಿಡಿದಾಗಲೇ ಗೊತ್ತಾಗಿದ್ದು ಪ್ರಸಾದ್ ಹೊಟೇಲ್ ಇನ್ನೂ ತೆರೆದಿತ್ತು ಎಂದು. ಅಲ್ಲಿನ ಮಸಾಲೆ ದೋಸೆ ಮಿಸ್ ಆದರೂ ಒಂದು ಒಳ್ಳೆಯ ಸಿನಿಮಾ ಮಿಸ್ ಆಗಲಿಲ್ಲ ಎಂಬ
ಸಂತೋಷದಲ್ಲಿ ಮನೆ ಸೇರಿದೆ.
ಬೆಳಿಗ್ಗೆ ಎದ್ದು ಪತ್ರಿಕೆಯೊಂದರಲ್ಲಿ
“ಡಂಕಿ” ಸಿನಿಮಾ ಕುರಿತ ಕಥೆ ಹೇಳುವ ಮಾದರಿಯ ವಿಮರ್ಶೆಯನ್ನು ಓದಿ ಸಖತ್ ಬೇಜಾರಾಗಿದ್ದಂತೂ ನಿಜ…
- ಗುಬ್ಬಚ್ಚಿ ಸತೀಶ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ