ಗುರುವಾರ, ಜೂನ್ 13, 2024

ಸ್ಪರ್ಧಾತ್ಮಕ ಪುಸ್ತಕಗಳ ಮೇಲೆ ಅಮೇಜಾನಿನಲ್ಲಿ ರಿಯಾಯಿತಿ

ಸ್ನೇಹಿತರೇ,

ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಬಹುದಾದ ಪುಸ್ತಕಗಳು ಅಮೇಜಾನಿನಲ್ಲಿ ಶೇ. 35ರ ರಿಯಾಯಿತಿವರೆಗೂ ಲಭ್ಯವಿವೆ...

ಲಿಂಕ್:‌ https://amzn.to/3x63DhF





ಗುರುವಾರ, ಜೂನ್ 6, 2024

ರೂ 10000/- ಮೌಲ್ಯದ ಕಾವ್ಯ ಪ್ರಶಸ್ತಿ

ವಿಭಾ ಸಾಹಿತ್ಯ ಪ್ರಶಸ್ತಿಗೆ ಕಾವ್ಯ ಹಸ್ತಪ್ರತಿ ಆಹ್ವಾನ




ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ "ವಿಭಾ ಸಾಹಿತ್ಯ ಪ್ರಶಸ್ತಿ ೨೦೨೪"ಕ್ಕಾಗಿ ಕನ್ನಡದ ಕವಿ/ಕವಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು, ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. ೧೦,೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ಕೋರಿದೆ.




ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ: ಜೂನ್ ೩೦

ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ:

ಸುನಂದಾ & ಪ್ರಕಾಶ ಕಡಮೆ

ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-೨೦೨೪

ನಂ. ೯೦, 'ನಾಗಸುಧೆ ಜಗಲಿ'

೬/ಬಿ ಕ್ರಾಸ್, ಕಾಳಿದಾಸನಗರ,

ವಿದ್ಯಾನಗರ ವಿಸ್ತೀರ್ಣ

ಹುಬ್ಬಳ್ಳಿ- ೫೮೦೦೩೧

ದೂರವಾಣಿ: ೯೩೮೦೬೧೩೬೮೩,  ೯೮೪೫೭೭೯೩೮೭

ಭಾನುವಾರ, ಮೇ 26, 2024

ಪಾತ್ರ (ಪುಟ್ಟ ಕತೆ)

(ಚಿತ್ರಕೃಪೆ: Freepik)

ಅವನ ಕಣ್ಣುಗಳೇ ಹಾಗೆ. ಬಹಳ ಸೂಕ್ಷ್ಮ. ಅವನ ಸ್ನೇಹಿತರೂ ಕೂಡ ಅದನ್ನೇ ಹೇಳುತ್ತಿದ್ದರು. ನಿನ್ನ ಕಣ್ಣು ಬಹಳ ಸೂಕ್ಷ್ಮ. ಅದಕ್ಕೇ ಎಲ್ಲವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಒಂದು ಕತೆ ಬರೆದುಬಿಡುತ್ತೀಯ. ನಾವೆಲ್ಲಾ ನಮ್ಮ ಪಾಡಿಗೆ ನಾವಿದ್ದರೆ, ನೀನು ಕತೆಗಾರ, ಕವಿ, ಸಾಹಿತಿ ಎಂದೆಲ್ಲಾ ಹೆಸರು ಮಾಡಿದೆ ಎಂದು ಹೊಗಳುತ್ತಿದ್ದರು. ಅವನಿಗದು ಮುಜುಗರವಾದರೂ ತೋರಿಸಿಕೊಳ್ಳದೆ ಹೆಮ್ಮೆ ಪಡುತ್ತಿದ್ದ. ಇವರೆಲ್ಲಾ ಕೆಲಸ ಸಿಕ್ಕಮೇಲೆ ಮದುವೆ, ಮಕ್ಕಳು, ಮನೆ ಅನ್ನುವ ಜಂಜಾಟದಲ್ಲಿ ತೊಡಗಿದ್ದರೆ ಇವನು ಮಾತ್ರ ತನ್ನ ಕೆಲಸ ಮಾಡಿಕೊಂಡು, ಹವ್ಯಾಸಕ್ಕಾಗಿ ಬರೆದುಕೊಂಡು, ಇದರಿಂದ ಸಿಕ್ಕಿದ್ದ ಹೆಸರಿನಿಂದ, ಗೌರವದಿಂದ ಬೀಗುತ್ತಿದ್ದ. 

ಒಮ್ಮೆ ಕೆಲಸದ ನಿಮಿತ್ತ ಅವನು ಹೊರಗೆ ಹೋಗಬೇಕಾಗಿ ಬಂತು. ಪ್ರತಿಸಲದಂತೆ ಈ ಸಲವೂ ಕೂಡ ಒಂದು ಹೊಸ ಕತೆಯೊಂದಿಗೆ ಬರಬೇಕು ಎಂದೇ ತೀರ್ಮಾನಿಸಿ ಹೊರಟ. ತಾನು ಹೋದ ಕಡೆಯೆಲ್ಲಾ ಕೆಲಸವನ್ನು ಮಾಡಿಕೊಂಡೇ ಹೊಸ ಕತೆಯನ್ನು, ಪಾತ್ರಗಳನ್ನು ಹುಡುಕುತ್ತಾ ಇದ್ದ. ಕೆಲಸದ ಮೇಲೆ ಬಂದಿದ್ದ ಮೂರು ದಿನಗಳು ಮುಗಿಯುತ್ತಾ ಬಂದರೂ ಅವನಿಗೆ ಯಾವ ಕತೆಯ ಎಳೆಯೂ ಸಿಗಲಿಲ್ಲ. ಕತೆಯಿರಲಿ, ಒಂದು ಪುಟ್ಟ ಪಾತ್ರವೂ ಕೂಡ ಇವನ ಕಣ್ಣಿಗೆ ಬೀಳಲಿಲ್ಲ. ಹಿಂದೆಲ್ಲಾ ಹೀಗೆ ಆಗಿರಲಿಲ್ಲ. ಪ್ರತಿಬಾರಿ ಹೊರಗೆ ಹೋದಾಗ ಹೊಸ ಕತೆಗಳು, ಪಾತ್ರಗಳು ಸಿಗುತ್ತಿದ್ದವು. ಆದರೆ, ಆ ಸಂಜೆ ಅವನಿಗೆ ಬಹಳ ಬೇಸರವಾಯಿತು. ತಾನು ಉಳಿದುಕೊಂಡಿದ್ದ ಹೋಟೆಲ್ಲಿನಲ್ಲಿ ಕಾಫಿ ಹೀರುತ್ತಾ ಚಿಂತಾಕ್ರಾಂತನಾಗಿದ್ದ.

ʼಸರ್‌, ಎಕ್ಸ್‌ಕ್ಯೂಸ್‌ಮಿ...ʼ ಎಂಬ ಮಧುರ ಧ್ವನಿ ಎಲ್ಲಿಂದಲೋ ತೇಲಿಬಂದಂತೆ ಅವನಿಗೆ ಅನ್ನಿಸಿತು.

ಚಿಂತೆಯಿಂದ ಹೊರಬಂದು ನೋಡಿದರೆ ಎದುರಿಗೆ ಹುಡುಗಿಯೊಬ್ಬಳು ನಿಂತಿದ್ದಳು.

ʼಎಸ್‌ ಮೇಡಂ, ಹೇಳಿʼ ಎಂದ.

ʼಸರ್‌, ಅದು ಅದೂ ನಾನು ನಿಮ್ಮ ಜೀವನದ ಪಾತ್ರ... ಐ ಮೀನ್...‌ʼ ಎಂದಳು ಆ ಹುಡುಗಿ.

ಒಂದು ಕ್ಷಣ ಇವನಿಗೆ ತಬ್ಬಿಬ್ಬಾಯಿತು. ಸುಧಾರಿಸಿಕೊಂಡವನಿಗೆ ಆ ಹುಡುಗಿ ತನಗೆ ಪ್ರಪೋಸ್‌ ಮಾಡುತ್ತಿದ್ದಾಳೆ ಎಂದು ಅರ್ಥವಾಯಿತು. ಆ ಹುಡುಗಿಯ ಸೃಜನಶೀಲತೆ ಕಂಡು ಇವನೊಳಗಿದ್ದ ಕತೆಗಾರ ಕರಗಿಹೋಗಿದ್ದ.

ಮದುವೆಗೆ ಬಂದ ಗೆಳೆಯರೆಲ್ಲಾ ಅಕ್ಷತೆ ಹಾಕಿ ಹಾರೈಸಿ, ಮನಸ್ಸಿನಲ್ಲೇ ಮುಗುಮ್ಮಾಗಿ ನಕ್ಕು ʼಮಗಾ... ಕತೆ ಬರಿತೀಯಾ, ಬರೀ. ಇನ್ಮೇಲೆ ಅದೇನು ಬರಿತೀಯೋ ನಾವೂ ನೋಡ್ತೀವಿʼ ಎಂದುಕೊಂಡು ʼಸದ್ಯ ಇವನಿಗೂ ಒಂದು ಗಂಟಾಕಿಸಿ ನಾವೆಲ್ಲಾ ಪರಿಪೂರ್ಣರಾದೆವುʼ ಎಂದುಕೊಂಡು ಪರಸ್ಪರ ಮುಖ ನೋಡಿಕೊಂಡರು.

- ಗುಬ್ಬಚ್ಚಿ ಸತೀಶ್.



ಗುರುವಾರ, ಮೇ 16, 2024

ಅರ್ಜುನ V/s ಏಕಲವ್ಯ

ಅರ್ಜುನ V/s ಏಕಲವ್ಯ



ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗೆ ಮತ್ತು ಅರ್ಜುನನ ಬಗ್ಗೆ ಗೊತ್ತೇ ಇರುತ್ತದೆ. ನಾನೇನಾದರು ನಿಮಗೆ ದ್ರೋಣಾಚಾರ‍್ಯನಂತ ಗುರುವಿನ ಬಲವುಳ್ಳ ಅರ್ಜುನನಾಗುತ್ತಿರೋ ಇಲ್ಲಾ ಗುರುವಿಲ್ಲದ ಏಕಲವ್ಯನಂತಾಗುತ್ತಿರೋ ಎಂದರೆ, ನೀವು ಆರಾಮವಾಗಿ ಅರ್ಜುನ ಎಂದು ಹೇಳಿಬಿಡಬಹುದು. ಸಾಮಾನ್ಯವಾಗಿ ಅರ್ಜುನ ಸರಿಯಾದ ಆಯ್ಕೆಯೇ ಆಗಿರುತ್ತಾನೆ ಎಂಬುದರಲ್ಲಿ ತಪ್ಪಿಲ್ಲ. ಆದರೆ, ಮತ್ತೊಂದು ಕೋನದಿಂದ ನೋಡಿದರೆ ಏಕಲವ್ಯನೇ ಸೂಕ್ತನಾಗಿರುತ್ತ್ತಾನೆ.



ನೀವು ಈ ಸ್ಪರ್ಧೆಯನ್ನು ಊಹಿಸಿಕೊಳ್ಳಿ: ಅರ್ಜುನನಿಗೆ ಮರದ ಗೂಳಿಯೊಂದರ ಎಡಗಣ್ಣಿಗೆ ಗುರಿಯಿಡಬೇಕಿದೆ. ಗುರಿಯಿಟ್ಟ ಆತ ಎರಡು ಅಂಗುಲದಷ್ಟು ಗುರಿ ತಪ್ಪಿದ ಎಂದುಕೊಳ್ಳಿ. ಆತ ಆಗ ತನ್ನ ಗುರು ದ್ರೋಣರ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕೇಳುತ್ತಾನೆ. ಆಗವರು ಅರ್ಜುನನಿಗೆ ಮತ್ತೆ ಗುರಿಯಿಡುವಂತೆ ಹೇಳಿ ಈ ಬಾರಿ ಎಡಗಾಲಿನ ಮೇಲೆ ಹಾಕಿರುವ ಹೆಚ್ಚಿನ ಭಾರವನ್ನು ಬಲಗಾಲಿಗೂ ಸ್ವಲ್ಪ ವರ್ಗಾಯಿಸುವಂತೆ ಹೇಳುತ್ತಾರೆ. ಗುರುಗಳು ಹೇಳಿದಂತೆಯೇ ಅರ್ಜುನ ಮಾಡುತ್ತಾನೆ. ಆದರೆ, ಈ ಬಾರಿಯೂ ಸ್ವಲ್ಪದರಲ್ಲಿಯೇ ಗುರಿ ತಪ್ಪುತ್ತಾನೆ. ಮತ್ತೆ ಅವನು ಗುರುಗಳ ಮೊರೆಹೋಗುತ್ತಾನೆ. ಮತ್ತವರು ಮಾರ್ಗದರ್ಶನ ನೀಡುತ್ತಾರೆ. ಕಡೆಗೆ ಅರ್ಜುನ ತನ್ನ ಗುರಿ ಮುಟ್ಟುತ್ತಾನೆ.


ಅದೇ ಸ್ಪರ್ಧೆಯಲ್ಲೀಗ ಏಕಲವ್ಯನನ್ನು ಕಲ್ಪಿಸಿಕೊಳ್ಳಿ: ಆತನೂ ಮೊದಲ ಪ್ರಯತ್ನದಲ್ಲಿ ಗುರಿ ತಪ್ಪುತ್ತಾನೆ. ಆದರಿಲ್ಲಿ ಅವನಿಗೆ ಮಾರ್ಗದರ್ಶನ ಮಾಡಲು ಗುರುಗಳಿಲ್ಲ. ಸಿದ್ಧ ಉತ್ತರಗಳನ್ನು ನೀಡಬಲ್ಲ ಗುರು ಆತನ ಹಿಂದೆ ಬೆಂಗಾವಲಾಗಿ ನಿಂತಿಲ್ಲ. ಆಗ ಆತ ತನ್ನನ್ನೇ ಪ್ರಶ್ನಿಸಿಕೊಂಡು ತನ್ನಲ್ಲೇ ಉತ್ತರ ಹುಡುಕಿಕೊಳ್ಳಲು ಪ್ರಯತ್ನಿಸುತ್ತಾನೆ. ಮತ್ತೇ ಸೋಲುತ್ತಾನೆ. ಮತ್ತೆ ಮತ್ತೆ ಪ್ರಯತ್ನಿಸಿ ಮತ್ತೆ ಮತ್ತೆ ಸೋಲುತ್ತಾನೆ. ರಾತ್ರಿಯೆಲ್ಲಾ ನಿದ್ದೆಬರುವುದಿಲ್ಲ. ಮರುದಿನವು ಆತನ ಪ್ರಯತ್ನಕ್ಕೆ ಫಲವಿರುವುದಿಲ್ಲ. ಆದರೂ ಆತ ಛಲ ಬಿಡುವುದಿಲ್ಲ. ಮೂರನೇ ದಿನದ ಸತತ ಪ್ರಯತ್ನದಿಂದ ಆತನಿಗೆ ಅರಿವಾಗಿರುತ್ತದೆ; ತಾನು ತನ್ನ ಎಡಗಾಲಿನ ಮೇಲೆ ಹೆಚ್ಚು ಭಾರವನ್ನು ಹಾಕುತ್ತಿದ್ದೇನೆ ಎಂದು. ಅದನ್ನು ಬಲಗಾಲಿಗೆ ಸ್ವಲ್ಪವೇ ವರ್ಗಾಯಿಸಿದರೆ ತನಗೆ ಗೆಲುವು ನಿಶ್ಚಿತವೆಂದು ಖಚಿತವಾಗುತ್ತದೆ. ಆ ನಂತರದ ಪ್ರಯತ್ನದಲ್ಲಿ ಆ ಮರದ ಗೂಳಿಯ ಎಡಗಣ್ಣಿಗೆ ಸರಿಯಾಗಿ ಬಾಣ ಬಿಟ್ಟು ಗೆಲ್ಲುತ್ತಾನೆ. 


ಇವರಿಬ್ಬರನ್ನು ನೋಡಿದಾಗ ಅರ್ಜುನನಿಗೆ ಗುರುವೊಬ್ಬ ಜೊತೆಯಿರಲೇಬೇಕಾಗುತ್ತದೆ. ಆತನಿಗೆ ಕುರುಕ್ಷೇತ್ರದಲ್ಲಿ ಯುದ್ಧಮಾಡುವಾಗಲೂ ಕೃಷ್ಣನ ರೂಪದಲ್ಲಿ ಗುರುವೊಬ್ಬ ಸಾರಥಿಯಾಗಬೇಕಾಯಿತು. ಆತ ತನ್ನ ಸ್ವಂತ ಪರಿಶ್ರಮದಿಂದ ಸಾಧಿಸಿ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಿಕೊಂಡವನಲ್ಲ. ಆತನದ್ದು ಏನೇ ಆದರೂ ಪರಾವಲಂಬಿ ಬದುಕು. ಆದರೆ, ಏಕಲವ್ಯ ಹಾಗಲ್ಲ. ಆತ ತನ್ನ ಸ್ವಂತ ಪರಿಶ್ರಮದಿಂದ, ಸತತ ಪ್ರಯತ್ನಗಳಿಂದ ತನ್ನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡವನು. ತನ್ನಲ್ಲೇ ಅಡಗಿದ್ದ ಗುರುವೆಂಬ ಅರಿವನ್ನು ಅರಿತುಕೊಂಡವನು. ಬಿಲ್ವಿದ್ಯೆಯಲ್ಲಿ ಪರಿಣಿತಿ ಪಡೆದವನು. ಆದಕಾರಣ ಗೆಳೆಯರೇ, ನಾವು ನಮ್ಮಲ್ಲಿರುವ ಗುರುವನ್ನು ಮೊದಲು ಅರಿಯಬೇಕಿದೆ. ಅದಕ್ಕೇ ಹಿರಿಯರು ಹೇಳಿದ್ದು, “ಅರಿವೇ ಗುರು.”


ಶುಕ್ರವಾರ, ಮೇ 10, 2024

ನಿಮ್ಮ ಗುರಿ ಏನು?

ಸ್ನೇಹಿತರೇ,

ಜೀವನದಲ್ಲಿ ಒಂದು ಗುರಿ ಇರಬೇಕಾಗುತ್ತದೆ. ನೀವು ಇರುವುದರಲ್ಲೇ ಸಂತುಷ್ಟರಾಗಿ ಇರುತ್ತೇನೆ ಎಂದರೆ ನಿಮಗೆ ಯಾವುದೇ ಗುರಿಯ ಅವಶ್ಯಕತೆ ಇರುವುದಿಲ್ಲ. ಆದರೆ, ಏನನ್ನಾದರೂ ಸಾಧಿಸಬೇಕೆಂದುಕೊಂಡಿದ್ದರೆ ಆಗ ನಿಶ್ಚಿತವಾದ ಒಂದು ಗುರಿ ಇರಬೇಕಾಗುತ್ತದೆ. ಈ ಗುರಿಯ ಮಹತ್ವವನ್ನು ಹೇಳುವ ಒಂದು ಕತೆಯಿದೆ. ಓದಿಕೊಳ್ಳಿ...


ಒಬ್ಬ ವ್ಯಾಪಾರಿಯ ಬಳಿ ಒಂದಿನ್ನೂರು ಒಂಟೆಗಳು, ಒಂದು ನೂರು ಸೇವಕರಿದ್ದರು. ಆತ ಯಾವಾಗಲು ಯಾವುದಾದರೂ ಕೆಲಸ ಮಾಡುವುದರಲ್ಲಿಯೇ ಬ್ಯುಸಿ. ಒಂದು ಸಂಜೆ ತನ್ನ ಕೆಲಸಗಳ ಬಗ್ಗೆ ಹೇಳಲು ತನ್ನ ಬುದ್ಧಿವಂತ ಗೆಳೆಯನನ್ನು ಬರಮಾಡಿಕೊಂಡ. ಊಟವಾದ ನಂತರ ರಾತ್ರಿಯೆಲ್ಲಾ ತನ್ನ ಗೆಳೆಯನಿಗೆ ತನ್ನ ಕೆಲಸಗಳ ಬಗ್ಗೆ, ಇರುವ ಆಸ್ತಿಯ ಬಗ್ಗೆ ಹೇಳಿದ. ಮುಂದುವರಿಯುತ್ತಾ, ಮುಂದೆ ಇನ್ನೂ ಮಾಡಬೇಕಾಗಿರುವ ಕೆಲಸಗಳ ಬಗ್ಗೆ, ಸಂಪಾದಿಸಬೇಕಾಗಿರುವ ಆಸ್ತಿಯ ಬಗ್ಗೆ ವಿವರಿಸುತ್ತಲೇ ಇದ್ದ. ಒಂದು ಕ್ಷಣವೂ ಆತನಿಗೆ ಸುಮ್ಮನೆ ಕೂಡಲು ಆಗಲೇ ಇಲ್ಲ. ಆತನ ಮಾತನ್ನು ಮಧ್ಯದಲ್ಲಿಯೇ ತಡೆದ ಬುದ್ಧಿವಂತ ಗೆಳೆಯ, “ಅದೆಲ್ಲಾ ಸರಿ. ಆದರೆ, ನಿನ್ನ ಜೀವನದ ಮುಖ್ಯ ಗುರಿ ಯಾವುದು?” ಎಂದು ಕೇಳಿದ. ಅದಕ್ಕೆ ವ್ಯಾಪಾರಿ, “ಇಷ್ಟೆಲ್ಲಾ ಮಾಡಿದ ಮೇಲೆ, ಹೆಚ್ಚು ಆಸ್ತಿಯನ್ನು ಗಳಿಸಿದ ಮೇಲೆ ನಾನು ನನ್ನ ಜೀವನವನ್ನು ಶಾಂತಿಯಿಂದ ಕಳೆಯಬೇಕಿರುವೆ” ಎಂದು. ಅದಕ್ಕೆ ಪ್ರತಿಕ್ರಿಯಿಸುತ್ತಾ ನಗುತ್ತಾ ಬುದ್ಧಿವಂತ ಗೆಳೆಯ ಹೇಳಿದ, “ನೀನು ಸದಾ ಒಂದಿಲ್ಲೊಂದು ಕೆಲಸ, ಆಸ್ತಿ ಗಳಿಸಿರುವುದರಲ್ಲಿಯೇ ಚಡಪಡಿಸುತ್ತಿದ್ದರೆ ನಿನಗೆ ಶಾಂತಿಯಿಂದ ಇರುವುದಕ್ಕಾದರೂ ಸಾಧ್ಯವೆಲ್ಲಿದೆ? ಒಂದು ಕ್ಷಣವೂ ಸುಮ್ಮನೆ ಕೂಡಲಾರೆಯಾದರೆ ನಿನಗೆ ಶಾಂತಿ ಎಲ್ಲಿಂದ ಲಭಿಸುತ್ತದೆ?” ಎಂದು ಹೇಳಿ ಹೊರಟುಹೋದ. 

ನಿಮ್ಮ ಗುರಿ ಜೀವನದಲ್ಲಿ ಶಾಂತಿ ಗಳಿಸುವುದಾಗಿದ್ದರೆ, ಮೊದಲು ನೀವು ಒಂದು ಕ್ಷಣ ಸುಮ್ಮನೆ ಕುಳಿತುಕೊಳ್ಳುವುದನ್ನು, ಧ್ಯಾನ ಮಾಡುವುದನ್ನು ಕಲಿಯಬೇಕಿರುತ್ತದೆ ಅಲ್ಲವೆ?

ಕತೆ ಓದುದ್ರಲ್ಲ!?

ನಿಮ್ಮ ಗಮನ ನಿಮ್ಮ ಗುರಿಯೆಡೆಗೇ ಇರಲಿ...

ಬಸವ ಜಯಂತಿಯ ಮತ್ತು ಅಕ್ಷಯ ತೃತೀಯ ದಿನದ ಶುಭಾಶಯಗಳು...

- ಗುಬ್ಬಚ್ಚಿ ಸತೀಶ್.

ಗುರುವಾರ, ಮೇ 9, 2024

ಈ ಸ್ಪರ್ಧೆಗೆ ಮೇ 23 ಕಡೇ ದಿನ...

ಕರ್ನಾಟಕ ಲೇಖಕಿಯರ ಸಂಘವು ವಿವಿಧ ದತ್ತಿನಿಧಿಗಳ ಪ್ರಶಸ್ತಿಗಳಿಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದೆ. 



ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತವೆ. ಆಯ್ಕೆಯಾದ ಕೃತಿಗಳಿಗೆ ದಿ.23.06.2024 ರಂದು ಭಾನುವಾರ  ಬೆಳಿಗ್ಗೆ 10.00 ಗಂಟೆಗೆ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಲಿರುವ  ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್.ಪುಷ್ಪ ತಿಳಿಸಿದ್ದಾರೆ.

(2023ರ ಜನವರಿಯಿಂದ 2023ರ ಡಿಸೆಂಬರ್‌ವರೆಗೆ ಪ್ರಕಟಗೊಂಡ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು.)

ದತ್ತಿ ಪ್ರಶಸ್ತಿಗಳು:

1. ಕಾಕೋಳು ಸರೋಜಮ್ಮ(ಕಾದಂಬರಿ)  - 1000 ರೂ.

2.  ಭಾಗ್ಯ ನಂಜಪ್ಪ (ವಿಜ್ಞಾನ ಸಾಹಿತ್ಯ,) - 5000 ರೂ

3. ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) - 5000 ರೂ

4. ಜಿ.ವಿ. ನಿರ್ಮಲ (ಭಾರತದ ಯಾವುದೇ  ಭಾಷೆಯ ಅನುವಾದಿತ ಕಾದಂಬರಿ/ ಕಥಾ ಸಂಕಲನ/ ಜೀವನ ಚರಿತ್ರೆ) - 5000 ರೂ.

5. ತ್ರಿವೇಣಿ ಸಾಹಿತ್ಯ ಪುರಸ್ಕಾರ

( ಪ್ರಾಯೋಜಕರು - ಸುಧಾಮೂರ್ತಿ-  ಸಣ್ಣಕಥೆ/ ಕಾದಂಬರಿ) -2000 ರೂ.

6. ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ) -1500 ರೂ

7. ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) - 1000 ರೂ.

8.  ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ.) -2000 ರೂ.

9. ಇಂದಿರಾ ವಾಣಿರಾವ್  (ನಾಟಕ) -1000 ರೂ.

10. ಜಯಮ್ಮ ಕರಿಯಣ್ಣ (ಸಂಶೋಧನೆ) -1000 ರೂ.

11. ತ್ರಿವೇಣಿ ದತ್ತಿನಿಧಿ ( ಕಥೆ/ ಕಾದಂಬರಿ- ಪ್ರಥಮ, ದ್ವಿತೀಯ, ತೃತೀಯ) - 

ಪ್ರಥಮ- 3000

ದ್ವಿತೀಯ ಬಹುಮಾನ- 2000, ತೃತೀಯ - 1000 ರೂ

12. ಉಷಾ. ಪಿ. ರೈ ( ಕವನ ಸಂಕಲನ )- (2020- 2021- 2022 ಈ ಮೂರು ವರ್ಷಗಳಲ್ಲಿ ಪ್ರಕಟಗೊಂಡ ಕವನ ಸಂಕಲನ ) - 5000 ರೂ.

13. ನಿರುಪಮಾ 

1. ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳು- 2500 ರೂ

2. ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡ ಕಥೆಗಳು- 2500 ರೂ


ನಿಯಮಗಳು :

* ದತ್ತಿ ಬಹುಮಾನಕ್ಕಾಗಿ ಲೇಖಕಿಯರು, ಸಾಹಿತ್ಯಾಸಕ್ತರು ಮೇಲೆ ಸೂಚಿಸಿರುವ ಯಾವುದೇ ಪ್ರಕಾರಗಳಿಗೆ ಕೃತಿಗಳನ್ನು ಕಳುಹಿಸಬಹುದು. ಬಹುಮಾನಕ್ಕಾಗಿ ಕಳುಹಿಸುವ ಕೃತಿಗಳೊಂದಿಗೆ ಈ ಕೆಳಕಂಡ ವಿವರಗಳನ್ನುಳ್ಳ ಪತ್ರವನ್ನು ಕಳುಹಿಸಬೇಕು.

* ಲೇಖಕಿಯರ ಹೆಸರು, ಅಂಚೆವಿಳಾಸ, ಫೋನ್ ನಂ. ಇಮೇಲ್ ವಿಳಾಸ, ಕೃತಿ ಶೀರ್ಷಿಕೆ, ಪ್ರಕಟಣೆ ವರ್ಷ ಬರೆಯಬೇಕು.

* ಕೃತಿಗಳ ಮೇಲೆ ಆಯಾ ದತ್ತಿನಿಧಿಯ ಹೆಸರು ಬರೆಯಬೇಕು.

* ಲೇಖಕಿಯರು ತಮ್ಮ 3 ಕೃತಿಗಳನ್ನು ಕಳುಹಿಸಬೇಕು.

* ಈಗಾಗಲೇ ಎರಡು ಪುಸ್ತಕ ಬಹುಮಾನ ಪಡೆದ ಲೇಖಕಿಯರ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.

* ಸಂಪಾದಿತ ಕೃತಿಗಳನ್ನು ಹಾಗೂ ಪಿ.ಎಚ್.ಡಿ. ಪ್ರಬಂಧಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದಿಲ್ಲ.

* ಬಹುಮಾನಕ್ಕೆ ಲೇಖಕಿಯರ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು. ಕೃತಿಯ ಪ್ರಥಮ ಆವೃತ್ತಿಯನ್ನು ಮಾತ್ರ ಪರಿಗಣಿಸಲಾಗುವುದು.

* ಪ್ರತಿ ಪುಸ್ತಕ ಬಹುಮಾನ ಆಯ್ಕೆ ಸಮಿತಿಯಲ್ಲಿ ಮೂವರು ಖ್ಯಾತ ಸಾಹಿತಿಗಳು ಇರುತ್ತಾರೆ. ಅವರು ನೀಡಿದ ತೀರ್ಪಿನ ಪ್ರಕಾರ ಕೃತಿಯನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುವುದು.

* ಕರ್ನಾಟಕ ಲೇಖಕಿಯರ ಸಂಘ ದತ್ತಿನಿಧಿ ಪುಸ್ತಕ ಬಹುಮಾನ ವಿತರಣೆ ಸಮಾರಂಭದಲ್ಲಿ ಬಹುಮಾನ ಪಡೆದ ಕೃತಿಗಳ ಲೇಖಕಿಯರನ್ನು ಗೌರವಿಸಿ ಬಹುಮಾನ ನೀಡಲಾಗುವುದು.

* ದಯವಿಟ್ಟು ಕೃತಿಗಳನ್ನು ದಿ.  23.05.2024 (ಮೇ 23) ರ ಒಳಗೆ ತಲುಪುವಂತೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸುವುದು. ತಡವಾಗಿ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.

* ಕೃತಿಗಳು ತಲುಪಬೇಕಾದ ವಿಳಾಸ:  ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು, 206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ ಬೆಂಗಳೂರು -560018

ಮುಹೂರ್ತ


 

ಇಸ್ತಾನ್‌ಬುಲ್ಲಿಗೆ ಸುಮಾರು ಎರಡು ಘಂಟೆಯ ಪ್ರಯಾಣ ವೇಳೆ ತಗಲುವ ಒಂದು ಹಳ್ಳಿಯಲ್ಲಿ ಅಲ್ಲಾದ್ದೀನ್ ಎಂಬ ಶ್ರೀಮಂತ ವ್ಯಾಪಾರಿಯಿದ್ದ. ಆತನ ಬಳಿ ಹಲವು ಸೇವಕರಿದ್ದರು. ಅವರಲ್ಲಿ ಮುಸ್ತಾಫನೂ ಒಬ್ಬ. ಆತ ತನ್ನ ಒಡೆಯನಿಗೆ ಬಹಳ ಬೇಕಾದವನಾಗಿದ್ದ.

ಒಂದು ದಿನ ಅಲ್ಲಾದ್ದೀನ್ ಮುಸ್ತಾಫನನ್ನೂ ಏನೋ ತರಲು ಮಾರ್ಕೆಟ್ಟಿಗೆ ಕಳುಹಿಸಿದ್ದ. ಹೋದ ಸ್ವಲ್ಪ ಹೊತ್ತಿನಲ್ಲಿಯೇ ಮುಸ್ತಾಫನು ಬೆವರುತ್ತಾ ಭಯಭೀತನಾಗಿ ಹಿಂದಿರುಗಿ ಬಂದಿದ್ದ. ಇದನ್ನು ಕಂಡ ಅಲ್ಲಾದ್ದೀನ್ ಕಾರಣ ಕೇಳಲು, ಕಾರಣ ಆಮೇಲೆ ಹೇಳುತ್ತೇನೆಂದ ಮುಸ್ತಾಫಾ ತನ್ನ ಒಡೆಯನ ಕುದುರೆಯನ್ನು ಕೇಳಿ ಪಡೆದು ಅದನ್ನು ಹತ್ತಿ ವೇಗವಾಗಿ ಇಸ್ತಾನ್‌ಬುಲ್ ಕಡೆಗೆ ಮಿಂಚಿನ ವೇಗದಲ್ಲಿ ಹೋಗಿಯೇ ಬಿಟ್ಟ.

ಅಲ್ಲಾದ್ದೀನನಿಗೆ ಇದೆಲ್ಲಾ ವಿಚಿತ್ರವಾಗಿ ಕಂಡಿತ್ತು. ಮಾರ್ಕೆಟ್ಟಿನಲ್ಲಿ ಏನೋ ವಿಚಿತ್ರ ಘಟನೆ ನಡೆದಿರಬಹುದೆಂದು ಊಹಿಸಿ ಅಲ್ಲಿಗೆ ಹೋದರೆ ಅಲ್ಲಿ ಯಮಧರ್ಮರಾಯ ಸುತ್ತಾಡುತ್ತಿದ್ದಾನೆ! ಆಶ್ಚರ್ಯದಿಂದ ಯಮನು ಯಾರನ್ನೋ ಹುಡುಕುತ್ತಿದ್ದಾನೆ. ಇದನ್ನು ಗಮನಿಸಿದ ಅಲ್ಲಾದ್ದೀನ್ ನೇರವಾಗಿ ಯಮನಲ್ಲಿಗೆ ಹೋಗಿ ಆತ ಅಲ್ಲಿ ಸುತ್ತಾಡುತ್ತಿರುವ ಕಾರಣವೇನು ಎಂದು ಕೇಳುತ್ತಾನೆ. ಆಗ ಯಮನು, “ಇಲ್ಲಿ ಸ್ವಲ್ಪ ಹೊತ್ತಿಗೆ ಮುಂಚೆ ಮುಸ್ತಾಫನನ್ನು ನೋಡಿದೆ. ಆತ ಇಲ್ಲೇನು ಮಾಡುತ್ತಿದ್ದಾನೆ ಎಂದು ಯೋಚಿಸುತ್ತಿರುವಷ್ಟರಲ್ಲಿ ಆತ ಮಂಗಮಾಯವಾದ. ಯಾಕೆಂದರೆ, ಇನ್ನು ಎರಡು ಘಂಟೆಯ ನಂತರ ಆತನ ಸಾವು ಇಸ್ತಾನ್‌ಬುಲ್‌ನಲ್ಲಿ ನಿಶ್ಚಯವಾಗಿದೆ” ಎಂದು ಹೇಳಿದ.

(ಯಮನೊಂದಿಗೆ ನಮ್ಮ ಸಾವಿನ ಮುಹೂರ್ತ ಹೇಗೆ ಕೂಡಿ ಬರುತ್ತದೆ ಎಂಬುದನ್ನು ಅರಿಯಲು ಅಥವಾ ನೀತಿಗಾದರೂ ಇರುವ ಮುಸ್ತಾಫನ ಕಥೆ ಇದು - ಸಂಗ್ರಹ)

{ಎರಡು ಧರ್ಮಗಳ ಪಾತ್ರಗಳನ್ನು ಬೆಸೆದಿರುವ ಈ ಅಜ್ಞಾತ ಕತೆಗಾರನಿಗೆ ಒಂದು ನಮಸ್ಕಾರ ಅಥವಾ ಸಲಾಂ ಹೇಳಲೇಬೇಕು)

“ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು…

  ಆತ್ಮೀಯ ಸ್ನೇಹಿತರೇ, “ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು… ನನ್ನ ಅನಿಸಿಕೆಯಯನ್ನು ನನ್ನ ಯೂಟ್ಯೂಬ್‌ ಚಾನೆಲ್ಲಿನಲ್ಲಿ ವೀಕ್ಷಿಸಿ… ಧನ್ಯವಾದಗಳೊಂದಿಗೆ, ಗುಬ್ಬಚ್ಚಿ ...