ಅರ್ಜುನ V/s ಏಕಲವ್ಯ
ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗೆ ಮತ್ತು ಅರ್ಜುನನ ಬಗ್ಗೆ ಗೊತ್ತೇ ಇರುತ್ತದೆ. ನಾನೇನಾದರು ನಿಮಗೆ ದ್ರೋಣಾಚಾರ‍್ಯನಂತ ಗುರುವಿನ ಬಲವುಳ್ಳ ಅರ್ಜುನನಾಗುತ್ತಿರೋ ಇಲ್ಲಾ ಗುರುವಿಲ್ಲದ ಏಕಲವ್ಯನಂತಾಗುತ್ತಿರೋ ಎಂದರೆ, ನೀವು ಆರಾಮವಾಗಿ ಅರ್ಜುನ ಎಂದು ಹೇಳಿಬಿಡಬಹುದು. ಸಾಮಾನ್ಯವಾಗಿ ಅರ್ಜುನ ಸರಿಯಾದ ಆಯ್ಕೆಯೇ ಆಗಿರುತ್ತಾನೆ ಎಂಬುದರಲ್ಲಿ ತಪ್ಪಿಲ್ಲ. ಆದರೆ, ಮತ್ತೊಂದು ಕೋನದಿಂದ ನೋಡಿದರೆ ಏಕಲವ್ಯನೇ ಸೂಕ್ತನಾಗಿರುತ್ತ್ತಾನೆ.
ನೀವು ಈ ಸ್ಪರ್ಧೆಯನ್ನು ಊಹಿಸಿಕೊಳ್ಳಿ: ಅರ್ಜುನನಿಗೆ ಮರದ ಗೂಳಿಯೊಂದರ ಎಡಗಣ್ಣಿಗೆ ಗುರಿಯಿಡಬೇಕಿದೆ. ಗುರಿಯಿಟ್ಟ ಆತ ಎರಡು ಅಂಗುಲದಷ್ಟು ಗುರಿ ತಪ್ಪಿದ ಎಂದುಕೊಳ್ಳಿ. ಆತ ಆಗ ತನ್ನ ಗುರು ದ್ರೋಣರ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕೇಳುತ್ತಾನೆ. ಆಗವರು ಅರ್ಜುನನಿಗೆ ಮತ್ತೆ ಗುರಿಯಿಡುವಂತೆ ಹೇಳಿ ಈ ಬಾರಿ ಎಡಗಾಲಿನ ಮೇಲೆ ಹಾಕಿರುವ ಹೆಚ್ಚಿನ ಭಾರವನ್ನು ಬಲಗಾಲಿಗೂ ಸ್ವಲ್ಪ ವರ್ಗಾಯಿಸುವಂತೆ ಹೇಳುತ್ತಾರೆ. ಗುರುಗಳು ಹೇಳಿದಂತೆಯೇ ಅರ್ಜುನ ಮಾಡುತ್ತಾನೆ. ಆದರೆ, ಈ ಬಾರಿಯೂ ಸ್ವಲ್ಪದರಲ್ಲಿಯೇ ಗುರಿ ತಪ್ಪುತ್ತಾನೆ. ಮತ್ತೆ ಅವನು ಗುರುಗಳ ಮೊರೆಹೋಗುತ್ತಾನೆ. ಮತ್ತವರು ಮಾರ್ಗದರ್ಶನ ನೀಡುತ್ತಾರೆ. ಕಡೆಗೆ ಅರ್ಜುನ ತನ್ನ ಗುರಿ ಮುಟ್ಟುತ್ತಾನೆ.
ಅದೇ ಸ್ಪರ್ಧೆಯಲ್ಲೀಗ ಏಕಲವ್ಯನನ್ನು ಕಲ್ಪಿಸಿಕೊಳ್ಳಿ: ಆತನೂ ಮೊದಲ ಪ್ರಯತ್ನದಲ್ಲಿ ಗುರಿ ತಪ್ಪುತ್ತಾನೆ. ಆದರಿಲ್ಲಿ ಅವನಿಗೆ ಮಾರ್ಗದರ್ಶನ ಮಾಡಲು ಗುರುಗಳಿಲ್ಲ. ಸಿದ್ಧ ಉತ್ತರಗಳನ್ನು ನೀಡಬಲ್ಲ ಗುರು ಆತನ ಹಿಂದೆ ಬೆಂಗಾವಲಾಗಿ ನಿಂತಿಲ್ಲ. ಆಗ ಆತ ತನ್ನನ್ನೇ ಪ್ರಶ್ನಿಸಿಕೊಂಡು ತನ್ನಲ್ಲೇ ಉತ್ತರ ಹುಡುಕಿಕೊಳ್ಳಲು ಪ್ರಯತ್ನಿಸುತ್ತಾನೆ. ಮತ್ತೇ ಸೋಲುತ್ತಾನೆ. ಮತ್ತೆ ಮತ್ತೆ ಪ್ರಯತ್ನಿಸಿ ಮತ್ತೆ ಮತ್ತೆ ಸೋಲುತ್ತಾನೆ. ರಾತ್ರಿಯೆಲ್ಲಾ ನಿದ್ದೆಬರುವುದಿಲ್ಲ. ಮರುದಿನವು ಆತನ ಪ್ರಯತ್ನಕ್ಕೆ ಫಲವಿರುವುದಿಲ್ಲ. ಆದರೂ ಆತ ಛಲ ಬಿಡುವುದಿಲ್ಲ. ಮೂರನೇ ದಿನದ ಸತತ ಪ್ರಯತ್ನದಿಂದ ಆತನಿಗೆ ಅರಿವಾಗಿರುತ್ತದೆ; ತಾನು ತನ್ನ ಎಡಗಾಲಿನ ಮೇಲೆ ಹೆಚ್ಚು ಭಾರವನ್ನು ಹಾಕುತ್ತಿದ್ದೇನೆ ಎಂದು. ಅದನ್ನು ಬಲಗಾಲಿಗೆ ಸ್ವಲ್ಪವೇ ವರ್ಗಾಯಿಸಿದರೆ ತನಗೆ ಗೆಲುವು ನಿಶ್ಚಿತವೆಂದು ಖಚಿತವಾಗುತ್ತದೆ. ಆ ನಂತರದ ಪ್ರಯತ್ನದಲ್ಲಿ ಆ ಮರದ ಗೂಳಿಯ ಎಡಗಣ್ಣಿಗೆ ಸರಿಯಾಗಿ ಬಾಣ ಬಿಟ್ಟು ಗೆಲ್ಲುತ್ತಾನೆ.
ಇವರಿಬ್ಬರನ್ನು ನೋಡಿದಾಗ ಅರ್ಜುನನಿಗೆ ಗುರುವೊಬ್ಬ ಜೊತೆಯಿರಲೇಬೇಕಾಗುತ್ತದೆ. ಆತನಿಗೆ ಕುರುಕ್ಷೇತ್ರದಲ್ಲಿ ಯುದ್ಧಮಾಡುವಾಗಲೂ ಕೃಷ್ಣನ ರೂಪದಲ್ಲಿ ಗುರುವೊಬ್ಬ ಸಾರಥಿಯಾಗಬೇಕಾಯಿತು. ಆತ ತನ್ನ ಸ್ವಂತ ಪರಿಶ್ರಮದಿಂದ ಸಾಧಿಸಿ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಿಕೊಂಡವನಲ್ಲ. ಆತನದ್ದು ಏನೇ ಆದರೂ ಪರಾವಲಂಬಿ ಬದುಕು. ಆದರೆ, ಏಕಲವ್ಯ ಹಾಗಲ್ಲ. ಆತ ತನ್ನ ಸ್ವಂತ ಪರಿಶ್ರಮದಿಂದ, ಸತತ ಪ್ರಯತ್ನಗಳಿಂದ ತನ್ನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡವನು. ತನ್ನಲ್ಲೇ ಅಡಗಿದ್ದ ಗುರುವೆಂಬ ಅರಿವನ್ನು ಅರಿತುಕೊಂಡವನು. ಬಿಲ್ವಿದ್ಯೆಯಲ್ಲಿ ಪರಿಣಿತಿ ಪಡೆದವನು. ಆದಕಾರಣ ಗೆಳೆಯರೇ, ನಾವು ನಮ್ಮಲ್ಲಿರುವ ಗುರುವನ್ನು ಮೊದಲು ಅರಿಯಬೇಕಿದೆ. ಅದಕ್ಕೇ ಹಿರಿಯರು ಹೇಳಿದ್ದು, “ಅರಿವೇ ಗುರು.”
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ