“ಕಾಟೇರ” Review: ಕ್ಲಾಸ್ ಮಾಸ್ ಡಿ-ಬಾಸ್
ಪ್ರಿಯ ಸ್ನೇಹಿತರೇ, ನಮಸ್ಕಾರ.
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು…
ಚಾಲೆಂಜಿಂಗ್ ಸ್ಟಾರ್ ದರ್ಶನ್
ಅವರು ನಾಯಕನಟನಾಗಿ ಅಭಿನಯಿಸಿರುವ “ಕಾಟೇರ” ಸಿನಿಮಾವನ್ನು ಡಿಸೆಂಬರ್ 29ರಂದೇ ಅಂದರೆ ಬಿಡುಗಡೆಯಾದ
ದಿನವೇ ನೋಡಲಾಗಲಿಲ್ಲ. ಕಾರಣ, ವಿಪರೀತ ರಶ್. ಮಧ್ಯರಾತ್ರಿ ಒಂದು ಗಂಟೆಯಿಂದಲೇ ಮಾರುತಿ ಥಿಯೇಟರಿನಲ್ಲಿ ಶೋ ಶುರುವಾಗಿತ್ತು. ನಂತರ, ಮೊದಲ
ದಿನ ನಿರಂತರವಾಗಿ ಶೋಗಳು ನಡೆದವು. ಮಧ್ಯಾಹ್ನದಿಂದ ಪ್ರಶಾಂತ್ ಥಿಯೇಟರ್ನಲ್ಲಿಯೂ ಪ್ರದರ್ಶನ ಶುರುವಾಯಿತು.
ಅಲ್ಲೂ ಕೂಡ ರಶ್. ಎಸ್-ಮಾಲಿನ ಐನೋಕ್ಸ್ ಪಿವಿಆರ್ ಮಲ್ಟಿಪ್ಲೆಕ್ಸಿನಲ್ಲಿ ಸ್ವಲ್ಪ ತಡವಾಗಿ ಆನ್
ಲೈನ್ ಬುಕ್ಕಿಂಗ್ ಬಿಟ್ಟರು. ಸೋ ನಾನು ನೋಡುವಷ್ಟರಲ್ಲಿ ಬಹಳ ತಡವಾಯಿತು. ಅಷ್ಟರಲ್ಲಾಗಲೇ “ಕಾಟೇರ”
ಸಿನಿಮಾ ಮೂರುದಿನಗಳ ಯಶಸ್ವಿ ಪ್ರದರ್ಶನ ಕಂಡು 2023ರ ಸೂಪರ್ ಹಿಟ್ ಸಿನಿಮಾವಾಗಿ 2024ರಲ್ಲಿ ತನ್ನ
ಯಶಸ್ಸಿನ ಪ್ರದರ್ಶನವನ್ನು ಮುಂದುವರಿಸಿ ಆಗಿತ್ತು. ಮೂರು ದಿನಗಳಲ್ಲೇ 60ಕೋಟಿ ಕಲೆಕ್ಷನ್ ಮಾಡಿ ದಾಖಲೆ
ಮಾಡಿತ್ತು.
ನಾನು ನೆನ್ನೆ (02/01/2024
ಸೋಮವಾರ) “ಕಾಟೇರ” ನೋಡಿದೆ. ಬೆಳಿಗ್ಗೆಯೇ ಅಷ್ಟೇನೂ ರಶ್ ಆಗುವುದಿಲ್ಲ ಎಂದುಕೊಂಡವನ ಊಹೆ ಸುಳ್ಳಾಗಿತ್ತು.
ಆಗಲೂ ಪ್ರದರ್ಶನ ಹೌಸ್ ಫುಲ್ ಆಗಿತ್ತು. ಇನ್ನು ಸಿನಿಮಾ ಮೇಕಿಂಗ್ ಚೆನ್ನಾಗಿದೆ. ಒಂದೇ ಮಾತಿನಲ್ಲಿ
ಹೇಳುವುದಾದರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ಲಾಸ್ ಮತ್ತು ಮಾಸ್ ದರ್ಶನ ಈ ಸಿನಿಮಾದಲ್ಲಾಗಿದೆ.
ಇಡೀ ಸಿನಿಮಾದಲ್ಲಿ ಎರಡು ಶೇಡ್ ಗಳಲ್ಲಿರುವ “ಕಾಟೇರ” ಪಾತ್ರವನ್ನು ಅವರು ಆವಾಹಿಸಿಕೊಂಡುಬಿಟ್ಟಿದ್ದಾರೆ.
ಜಡೇಶ್ ಕುಮಾರ್ ಹಂಪಿ ಅವರ ಕತೆಯನ್ನು ಸಶಕ್ತವಾಗಿ ತರುಣ್ ಕಿಶೋರ್ ಸುಧೀರ್ ಅವರು ನಿರ್ದೇಶಿಸಿದ್ದಾರೆ.
ಜಾತಿಗಳ ನಡುವಿನ ತಾರತಮ್ಯವನ್ನು
ಎತ್ತಿ ತೋರಿಸುತ್ತಲೇ, ದೇಶದಲ್ಲಿ ಜಾರಿಯಾದ ʼಉಳುವವನೇ ಭೂ ಒಡೆಯʼ ಎಂಬ ಕಾನೂನಿನ ಮಹತ್ವವನ್ನು ಸಿನಿಮಾದಲ್ಲಿ
ತಿಳಿಸಲಾಗಿದೆ. ಈ ಕಾನೂನು ಜಾರಿಯಾದ ಕಾಲಘಟ್ಟದ ಸಂಘರ್ಷದ ಕತೆಯೇ “ಕಾಟೇರ”
ಸಿನಿಮಾದ ನಿರೂಪಣೆ ಬಹಳ ಸಂಯಮದಿಂದ
ಕೂಡಿರುವುದು ಸಿನಿಮಾ ಸ್ವಲ್ಪ ದೀರ್ಘವಾಯಿತು ಅಂತ ಅನ್ನಿಸಿದರೂ ದರ್ಶನ್ ಅಭಿಮಾನಿಗಳಿಗೆ ಅದು ಬೋನಸ್
ಪಾಯಿಂಟ್! ಸಂಗೀತ, ಸಿನಿಮಾಟೋಗ್ರಫಿ, ಸಾಹಿತ್ಯ ಸೇರಿದಂತೆ ಇಡೀ ತಂಡ ಅಚ್ಚುಕಟ್ಟಾಗಿ ಕೆಲಸ ಮಾಡಿದೆ.
ಇನ್ನು ನಾಯಕಿ ಆರಾಧನ ಅವರದ್ದು ಹೊಸ ಪರಿಚಯ. ಬಹಳಷ್ಟು ಕಡೆ ಅವರದ್ದು ಮನೋಜ್ಞ ಅಭಿನಾಯ. ಇತರ ಪಾತ್ರಗಳಾದ
ಕುಮಾರ್ ಗೋವಿಂದ್, ಶ್ರುತಿ, ಬಿರಾದಾರ್, ರೋಹಿತ್, ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ,
ಅಚ್ಯುತ ಕುಮಾರ್, ಗೋಮಾರದಹಳ್ಳಿ ಮಂಜುನಾಥ್ ಶಿರಾ, ಸರ್ದಾರ್ ಸತ್ಯ ಅವರ ಅಭಿನಯ ಮತ್ತು ಫ್ಲೋರೆನಿಕ್ಸ್
ಲೇಡಿ ಆಫೀಸರ್ (ನಟಿಯ ಹೆಸರು ಗೊತ್ತಿಲ್ಲ) ಗಮನ ಸೆಳೆಯುತ್ತದೆ.
ಪುಟ್ಟ ಪಾತ್ರವಾದರೂ ಹಿರಿಯ ನಟರುಗಳಾದ ಶ್ರೀನಿವಾಸ್ ಮೂರ್ತಿ ಮತ್ತು ದೊಡ್ಡಣ್ಣನವರ ಪಾತ್ರಗಳು ನೆನಪಿನಲ್ಲಿ
ಉಳಿಯುತ್ತವೆ.
“ಕಾಟೇರ” ಸಿನಿಮಾವನ್ನು ಇತ್ತೀಚಿಗೆ
ಮೃತಪಟ್ಟ ದಸರಾ ಅಂಬಾರಿ ಖ್ಯಾತಿಯ ಆನೆ ಅರ್ಜುನನಿಗೆ ಅರ್ಪಿಸಿರುವುದು ದರ್ಶನ್ ಅವರ ಪ್ರಾಣಿಗಳೆಡಗಿನ ಪ್ರೀತಿಗೆ
ಮತ್ತೊಂದು ನಿದರ್ಶನವಾಗಿದೆ. ಇಡೀ ಸಿನಿಮಾದಲ್ಲಿ ʼಹೊಲೆ ಮಾರಿʼ ಆಚರಣೆ ಒಂದು ರೂಪಕವಾಗಿ ಬಳಕೆಯಾಗಿದೆ. ʼಮಾತು ಬರದ ಚುಂಗನಿಗೆ ಹಿರಣ್ಯ ಕಶಿಪು ಪಾತ್ರವನ್ನು ನಾಟಕದಲ್ಲಿ ಅಭಿನಯಿಸುವಾಸೆ. ಆದರೆ, ಏನು ಮಾಡುವುದು ಅವನಿಗೆ ಮಾತೇ ಬರುವುದಿಲ್ಲ. ಅವನಿಗೆ ದನಿಯಾಗಿ ಅವನ ಆಸೆಯನ್ನು ನೆರವೇರಿಸುವ ಕಾಟೇರನ ಪಾತ್ರʼ ಇಲ್ಲಿ ಮತ್ತೊಂದು ರೂಪಕ. ಈ ರೂಪಕಗಳ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಒಂದು ಬ್ಲಾಕ್ ಬಸ್ಟರ್ ಸಿನಿಮಾವಾಗಿ “ಕಾಟೇರ” ಹೊರಹೊಮ್ಮಿದೆ. ಡಿ-ಬಾಸ್ ಅವರ ಇಮೇಜ್ ಮತ್ತಷ್ಟು ಹೆಚ್ಚಾಗಿದೆ.
ಧನ್ಯವಾದಗಳು…
ಪ್ರೀತಿಯಿಂದ,
- ಗುಬ್ಬಚ್ಚಿ ಸತೀಶ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ