ಅವನ ಕಣ್ಣುಗಳೇ ಹಾಗೆ. ಬಹಳ ಸೂಕ್ಷ್ಮ. ಅವನ ಸ್ನೇಹಿತರೂ ಕೂಡ ಅದನ್ನೇ ಹೇಳುತ್ತಿದ್ದರು. ನಿನ್ನ ಕಣ್ಣು ಬಹಳ ಸೂಕ್ಷ್ಮ. ಅದಕ್ಕೇ ಎಲ್ಲವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಒಂದು ಕತೆ ಬರೆದುಬಿಡುತ್ತೀಯ. ನಾವೆಲ್ಲಾ ನಮ್ಮ ಪಾಡಿಗೆ ನಾವಿದ್ದರೆ, ನೀನು ಕತೆಗಾರ, ಕವಿ, ಸಾಹಿತಿ ಎಂದೆಲ್ಲಾ ಹೆಸರು ಮಾಡಿದೆ ಎಂದು ಹೊಗಳುತ್ತಿದ್ದರು. ಅವನಿಗದು ಮುಜುಗರವಾದರೂ ತೋರಿಸಿಕೊಳ್ಳದೆ ಹೆಮ್ಮೆ ಪಡುತ್ತಿದ್ದ. ಇವರೆಲ್ಲಾ ಕೆಲಸ ಸಿಕ್ಕಮೇಲೆ ಮದುವೆ, ಮಕ್ಕಳು, ಮನೆ ಅನ್ನುವ ಜಂಜಾಟದಲ್ಲಿ ತೊಡಗಿದ್ದರೆ ಇವನು ಮಾತ್ರ ತನ್ನ ಕೆಲಸ ಮಾಡಿಕೊಂಡು, ಹವ್ಯಾಸಕ್ಕಾಗಿ ಬರೆದುಕೊಂಡು, ಇದರಿಂದ ಸಿಕ್ಕಿದ್ದ ಹೆಸರಿನಿಂದ, ಗೌರವದಿಂದ ಬೀಗುತ್ತಿದ್ದ.
ಒಮ್ಮೆ ಕೆಲಸದ ನಿಮಿತ್ತ ಅವನು ಹೊರಗೆ ಹೋಗಬೇಕಾಗಿ ಬಂತು. ಪ್ರತಿಸಲದಂತೆ ಈ ಸಲವೂ ಕೂಡ ಒಂದು ಹೊಸ ಕತೆಯೊಂದಿಗೆ ಬರಬೇಕು ಎಂದೇ ತೀರ್ಮಾನಿಸಿ ಹೊರಟ. ತಾನು ಹೋದ ಕಡೆಯೆಲ್ಲಾ ಕೆಲಸವನ್ನು ಮಾಡಿಕೊಂಡೇ ಹೊಸ ಕತೆಯನ್ನು, ಪಾತ್ರಗಳನ್ನು ಹುಡುಕುತ್ತಾ ಇದ್ದ. ಕೆಲಸದ ಮೇಲೆ ಬಂದಿದ್ದ ಮೂರು ದಿನಗಳು ಮುಗಿಯುತ್ತಾ ಬಂದರೂ ಅವನಿಗೆ ಯಾವ ಕತೆಯ ಎಳೆಯೂ ಸಿಗಲಿಲ್ಲ. ಕತೆಯಿರಲಿ, ಒಂದು ಪುಟ್ಟ ಪಾತ್ರವೂ ಕೂಡ ಇವನ ಕಣ್ಣಿಗೆ ಬೀಳಲಿಲ್ಲ. ಹಿಂದೆಲ್ಲಾ ಹೀಗೆ ಆಗಿರಲಿಲ್ಲ. ಪ್ರತಿಬಾರಿ ಹೊರಗೆ ಹೋದಾಗ ಹೊಸ ಕತೆಗಳು, ಪಾತ್ರಗಳು ಸಿಗುತ್ತಿದ್ದವು. ಆದರೆ, ಆ ಸಂಜೆ ಅವನಿಗೆ ಬಹಳ ಬೇಸರವಾಯಿತು. ತಾನು ಉಳಿದುಕೊಂಡಿದ್ದ ಹೋಟೆಲ್ಲಿನಲ್ಲಿ ಕಾಫಿ ಹೀರುತ್ತಾ ಚಿಂತಾಕ್ರಾಂತನಾಗಿದ್ದ.
ʼಸರ್, ಎಕ್ಸ್‌ಕ್ಯೂಸ್‌ಮಿ...ʼ ಎಂಬ ಮಧುರ ಧ್ವನಿ ಎಲ್ಲಿಂದಲೋ ತೇಲಿಬಂದಂತೆ ಅವನಿಗೆ ಅನ್ನಿಸಿತು.
ಚಿಂತೆಯಿಂದ ಹೊರಬಂದು ನೋಡಿದರೆ ಎದುರಿಗೆ ಹುಡುಗಿಯೊಬ್ಬಳು ನಿಂತಿದ್ದಳು.
ʼಎಸ್ ಮೇಡಂ, ಹೇಳಿʼ ಎಂದ.
ʼಸರ್, ಅದು ಅದೂ ನಾನು ನಿಮ್ಮ ಜೀವನದ ಪಾತ್ರ... ಐ ಮೀನ್...ʼ ಎಂದಳು ಆ ಹುಡುಗಿ.
ಒಂದು ಕ್ಷಣ ಇವನಿಗೆ ತಬ್ಬಿಬ್ಬಾಯಿತು. ಸುಧಾರಿಸಿಕೊಂಡವನಿಗೆ ಆ ಹುಡುಗಿ ತನಗೆ ಪ್ರಪೋಸ್ ಮಾಡುತ್ತಿದ್ದಾಳೆ ಎಂದು ಅರ್ಥವಾಯಿತು. ಆ ಹುಡುಗಿಯ ಸೃಜನಶೀಲತೆ ಕಂಡು ಇವನೊಳಗಿದ್ದ ಕತೆಗಾರ ಕರಗಿಹೋಗಿದ್ದ.
ಮದುವೆಗೆ ಬಂದ ಗೆಳೆಯರೆಲ್ಲಾ ಅಕ್ಷತೆ ಹಾಕಿ ಹಾರೈಸಿ, ಮನಸ್ಸಿನಲ್ಲೇ ಮುಗುಮ್ಮಾಗಿ ನಕ್ಕು ʼಮಗಾ... ಕತೆ ಬರಿತೀಯಾ, ಬರೀ. ಇನ್ಮೇಲೆ ಅದೇನು ಬರಿತೀಯೋ ನಾವೂ ನೋಡ್ತೀವಿʼ ಎಂದುಕೊಂಡು ʼಸದ್ಯ ಇವನಿಗೂ ಒಂದು ಗಂಟಾಕಿಸಿ ನಾವೆಲ್ಲಾ ಪರಿಪೂರ್ಣರಾದೆವುʼ ಎಂದುಕೊಂಡು ಪರಸ್ಪರ ಮುಖ ನೋಡಿಕೊಂಡರು.
- ಗುಬ್ಬಚ್ಚಿ ಸತೀಶ್.
ಮದುವೆ ಆಯಿತು. ಸೃಜನಶೀಲತೆಯ ಮುಕ್ತಾಯ ಆಯಿತು. ಆದರೂ ವಾಸ್ತವತೆ ಇದೆಯಲ್ಲ, ಕಥಾವಸ್ತುವಾಗಿ!
ಪ್ರತ್ಯುತ್ತರಅಳಿಸಿಹೌದು. ಅದೇ ಕಥೆ.
ಅಳಿಸಿ😂
ಪ್ರತ್ಯುತ್ತರಅಳಿಸಿ