ಸ್ನೇಹಿತರೇ,
ಜೀವನದಲ್ಲಿ ಒಂದು ಗುರಿ ಇರಬೇಕಾಗುತ್ತದೆ. ನೀವು ಇರುವುದರಲ್ಲೇ ಸಂತುಷ್ಟರಾಗಿ ಇರುತ್ತೇನೆ ಎಂದರೆ ನಿಮಗೆ ಯಾವುದೇ ಗುರಿಯ ಅವಶ್ಯಕತೆ ಇರುವುದಿಲ್ಲ. ಆದರೆ, ಏನನ್ನಾದರೂ ಸಾಧಿಸಬೇಕೆಂದುಕೊಂಡಿದ್ದರೆ ಆಗ ನಿಶ್ಚಿತವಾದ ಒಂದು ಗುರಿ ಇರಬೇಕಾಗುತ್ತದೆ. ಈ ಗುರಿಯ ಮಹತ್ವವನ್ನು ಹೇಳುವ ಒಂದು ಕತೆಯಿದೆ. ಓದಿಕೊಳ್ಳಿ...
ಒಬ್ಬ ವ್ಯಾಪಾರಿಯ ಬಳಿ ಒಂದಿನ್ನೂರು ಒಂಟೆಗಳು, ಒಂದು ನೂರು ಸೇವಕರಿದ್ದರು. ಆತ ಯಾವಾಗಲು ಯಾವುದಾದರೂ ಕೆಲಸ ಮಾಡುವುದರಲ್ಲಿಯೇ ಬ್ಯುಸಿ. ಒಂದು ಸಂಜೆ ತನ್ನ ಕೆಲಸಗಳ ಬಗ್ಗೆ ಹೇಳಲು ತನ್ನ ಬುದ್ಧಿವಂತ ಗೆಳೆಯನನ್ನು ಬರಮಾಡಿಕೊಂಡ. ಊಟವಾದ ನಂತರ ರಾತ್ರಿಯೆಲ್ಲಾ ತನ್ನ ಗೆಳೆಯನಿಗೆ ತನ್ನ ಕೆಲಸಗಳ ಬಗ್ಗೆ, ಇರುವ ಆಸ್ತಿಯ ಬಗ್ಗೆ ಹೇಳಿದ. ಮುಂದುವರಿಯುತ್ತಾ, ಮುಂದೆ ಇನ್ನೂ ಮಾಡಬೇಕಾಗಿರುವ ಕೆಲಸಗಳ ಬಗ್ಗೆ, ಸಂಪಾದಿಸಬೇಕಾಗಿರುವ ಆಸ್ತಿಯ ಬಗ್ಗೆ ವಿವರಿಸುತ್ತಲೇ ಇದ್ದ. ಒಂದು ಕ್ಷಣವೂ ಆತನಿಗೆ ಸುಮ್ಮನೆ ಕೂಡಲು ಆಗಲೇ ಇಲ್ಲ. ಆತನ ಮಾತನ್ನು ಮಧ್ಯದಲ್ಲಿಯೇ ತಡೆದ ಬುದ್ಧಿವಂತ ಗೆಳೆಯ, “ಅದೆಲ್ಲಾ ಸರಿ. ಆದರೆ, ನಿನ್ನ ಜೀವನದ ಮುಖ್ಯ ಗುರಿ ಯಾವುದು?” ಎಂದು ಕೇಳಿದ. ಅದಕ್ಕೆ ವ್ಯಾಪಾರಿ, “ಇಷ್ಟೆಲ್ಲಾ ಮಾಡಿದ ಮೇಲೆ, ಹೆಚ್ಚು ಆಸ್ತಿಯನ್ನು ಗಳಿಸಿದ ಮೇಲೆ ನಾನು ನನ್ನ ಜೀವನವನ್ನು ಶಾಂತಿಯಿಂದ ಕಳೆಯಬೇಕಿರುವೆ” ಎಂದು. ಅದಕ್ಕೆ ಪ್ರತಿಕ್ರಿಯಿಸುತ್ತಾ ನಗುತ್ತಾ ಬುದ್ಧಿವಂತ ಗೆಳೆಯ ಹೇಳಿದ, “ನೀನು ಸದಾ ಒಂದಿಲ್ಲೊಂದು ಕೆಲಸ, ಆಸ್ತಿ ಗಳಿಸಿರುವುದರಲ್ಲಿಯೇ ಚಡಪಡಿಸುತ್ತಿದ್ದರೆ ನಿನಗೆ ಶಾಂತಿಯಿಂದ ಇರುವುದಕ್ಕಾದರೂ ಸಾಧ್ಯವೆಲ್ಲಿದೆ? ಒಂದು ಕ್ಷಣವೂ ಸುಮ್ಮನೆ ಕೂಡಲಾರೆಯಾದರೆ ನಿನಗೆ ಶಾಂತಿ ಎಲ್ಲಿಂದ ಲಭಿಸುತ್ತದೆ?” ಎಂದು ಹೇಳಿ ಹೊರಟುಹೋದ.
ನಿಮ್ಮ ಗುರಿ ಜೀವನದಲ್ಲಿ ಶಾಂತಿ ಗಳಿಸುವುದಾಗಿದ್ದರೆ, ಮೊದಲು ನೀವು ಒಂದು ಕ್ಷಣ ಸುಮ್ಮನೆ ಕುಳಿತುಕೊಳ್ಳುವುದನ್ನು, ಧ್ಯಾನ ಮಾಡುವುದನ್ನು ಕಲಿಯಬೇಕಿರುತ್ತದೆ ಅಲ್ಲವೆ?
ಕತೆ ಓದುದ್ರಲ್ಲ!?
ನಿಮ್ಮ ಗಮನ ನಿಮ್ಮ ಗುರಿಯೆಡೆಗೇ ಇರಲಿ...
ಬಸವ ಜಯಂತಿಯ ಮತ್ತು ಅಕ್ಷಯ ತೃತೀಯ ದಿನದ ಶುಭಾಶಯಗಳು...
- ಗುಬ್ಬಚ್ಚಿ ಸತೀಶ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ