ಶುಕ್ರವಾರ, ಮಾರ್ಚ್ 29, 2024

ಹೇಗಿದೆ “ಯುವ?” ಸಖತ್‌ “ಪವರ್‌”ಪುಲ್‌ ಶಿವ!


ಪ್ರಿಯ ಸ್ನೇಹಿತರೇ,

ಬೆಳಿಗ್ಗೆ ಐದಕ್ಕೇ ಅಲಾರಂ ಇಟ್ಟುಕೊಂಡು, ನೆನ್ನೆಯೇ ಇಂದಿನ ಬೆಳಗಿನ 9.30ರ ಶೋಗೆ ಬುಕ್‌ ಮಾಡಿದ್ದ “ಯುವ” ಸಿನಿಮಾಗೆ ಹೋಗಿ ಬಂದೆ. ತುಮಕೂರಿನ ಐನೋಕ್ಸ್‌ನಲ್ಲಿಸಿನಿಮಾ ನೋಡುವುದೇ ಒಂದು ಹಬ್ಬ!

ಯುವ ರಾಜ್‌ಕುಮಾರ್‌ ಅವರ ಮೊದಲ ಚಿತ್ರ “ಯುವ” ಇಂದು ಬಿಡುಗಡೆಯಾಗಿದ್ದು, ಯಾರಾದರೂ ನನ್ನನ್ನು ಹೇಗಿದೆ “ಯುವ?” ಎಂದು ಕೇಳಿದರೆ, ನಾನು ಒಂದೇ ಸಾಲಿನಲ್ಲಿ ಸಖತ್‌ “ಪವರ್”‌ವುಲ್‌ ಶಿವ! ಎಂದು ಹೇಳಲು ಇಚ್ಛಿಸುತ್ತೇನೆ.

ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ “ಯುವ” ಚಿತ್ರದ ಮೊದಲಾರ್ಧದಲ್ಲಿ ಯುವ ರಾಜ್‌ಕುಮಾರ್‌ ಅವರನ್ನು ಕಾಲೇಜಿನ ಆಂಗ್ರಿ ಯಂಗ್‌ ಮ್ಯಾನ್‌ ಆಗಿ ಪರಿಚಯಿಸಿ ಕನ್ನಡ ಚಲನಚಿತ್ರರಂಗಕ್ಕೆ ಮತ್ತೊಬ್ಬ ಸ್ಟಾರ್‌ ನಟನನ್ನು ನೀಡಿದ್ದಾರೆ. ಚಿತ್ರದ ವಿರಾಮದ ನಂತರ ಬರುವ ಕುಟುಂಬದ ಜವಾಬ್ದಾರಿಯ “ಯುವ”ನ ಮೂಲಕ ನಮ್ಮ ಚಲನಚಿತ್ರರಂಗಕ್ಕೆ ಮತ್ತೊಬ್ಬ ಸೂಪರ್‌ ಸ್ಟಾರ್‌ ನಟ ಸಿಕ್ಕಂತಾಗಿದೆ. ತಮ್ಮ ಎಂದಿನ ಶೈಲಿಯಲ್ಲಿಯೇ ನಿರ್ದೇಶಕರು ʼಯುವʼ ಸಿನಿಮಾ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್‌ನ ಅದ್ಧೂರಿ ನಿರ್ಮಾಣವಿದೆ.



ನಟನೆ, ಡ್ಯಾನ್ಸ್‌ ಮತ್ತು ಆಕ್ಷನ್‌ಗಳಲ್ಲಿ ಮಿಂಚುವ ಯುವ ರಾಜ್‌ಕುಮಾರ್‌ ನೋಡುಗನ ಮನಗೆಲ್ಲುತ್ತಾರೆ. ದೊಡ್ಡಪ್ಪ ಮತ್ತು ಚಿಕ್ಕಪ್ಪನಷ್ಟು ಡ್ಯಾನ್ಸ್‌ ಇನ್ನೂ ಮಾಡಿಲ್ಲವಾದರೂ, ಇರುವ ಒಂದೇ ಡ್ಯಾನ್ಸ್‌ನಲ್ಲಿ ಭರವಸೆ ಮೂಡಿಸುತ್ತಾರೆ. ಆಕ್ಷನ್‌ ದೃಶ್ಯಗಳಲ್ಲಿ ಚಿಕ್ಕಪ್ಪನ ʼಪವರ್‌ʼ, ದೊಡ್ಡಪ್ಪನ ʼಖದರ್‌ʼ ಇದೆ. ನಟನೆಯಲ್ಲೂ ಕೂಡ ಗಮನ ಸೆಳೆಯುವ ಯುವ ರಾಜ್‌ಕುಮಾರ್‌ ಈಗಾಗಲೇ ತಮಗೆ ನೀಡಲಾಗಿರುವ ಜೂನಿಯರ್‌ ʼಪವರ್‌ ಸ್ಟಾರ್‌ʼ ಬಿರುದನ್ನು ಉಳಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ನಾಯಕಿಯಾಗಿ ಸಪ್ತಮಿ ಗೌಡ, ತಂದೆಯಾಗಿ ಅಚ್ಯುತ ಕುಮಾರ್‌, ತಾಯಿಯಾಗಿ ಸುಧಾರಾಣಿ, ಟ್ರೈನರ್‌ ಆಗಿ ಕಿಶೋರ್‌, ಪ್ರಿನ್ಸಿಪಾಲ್‌ ಆಗಿ ಗೋಪಾಲಕೃಷ್ಣ ದೇಶಪಾಂಡೆ ಮತ್ತು ಇನ್ನು ಮುಂತಾದ ಪಾತ್ರಗಳ ಅತ್ಯುತ್ತಮ ಕಲಾವಿದರ ತಂಡವೇ ಇಲ್ಲಿರುವುದು ಚಿತ್ರದ ಪ್ಲಸ್‌ ಪಾಯಿಂಟ್.‌ ಪ್ರಿನ್ಸಿಪಾಲ್‌ ಪಾತ್ರವಂತೂ ಕಣ್ಣಿಗೆ ಹಬ್ಬ!

ಕಾಲೇಜಿನ ಜೀವನದ ಜೊತೆಯೇ, ಕಾಲೇಜಿನ ನಂತರದ ಜೀವನದ ಕತೆಯನ್ನು ನಿರ್ದೇಶಕರು ಚಿತ್ರದಲ್ಲಿ ಹೇಳಿದ್ದು ಪುಡ್‌ ಡೆಲಿವರಿ ಹುಡುಗ-ಹುಡುಗಿಯರ ಬದುಕಿನ ಚಿತ್ರಣವನ್ನು ಕೂಡ ನೀಡಿದ್ದಾರೆ. ಬಸವಣ್ಣನವರ ʼಕಳಬೇಡ ಕೊಲಬೇಡʼ ವಚನ ಚಿತ್ರದಲ್ಲಿ ಇದ್ದು ಈ ಚಿತ್ರದ ಆಶಯವನ್ನೇ ಬಿಂಬಿಸಿದಂತಿದೆ. ಸೋತವನು ಸಾಯಬಾರದು, ಗೆಲುವಿನ ದಿನಕ್ಕೆ ಹಂಬಲಿಸಬೇಕು ಎನ್ನುವ ಒಂದು ಮೆಸೇಜನ್ನು ಕೂಡ ನಿರ್ದೇಶಕರು ನೀಡಿದ್ದಾರೆ.

ಅಜನೀಶ್‌ ಲೋಕನಾಥ್‌ ಅವರ ಸಂಗೀತದ ಜೊತೆಗೆ ಇತರ ತಂತ್ರಜ್ಞರ ಕೆಲಸಗಳು ಅಚ್ಚುಕಟ್ಟಾಗಿವೆ. ಇಡೀ ಚಿತ್ರವನ್ನು ಡಾ. ರಾಜ್‌ ಮತ್ತು ಅಪ್ಪು ಅವರ ತಂದೆ ಮಗನ ಸಂಬಂಧಕ್ಕೆ ಅರ್ಪಿಸಲಾಗಿದೆ.



ಮುಂದಿನ ದಿನಗಳಲ್ಲಿ ʼಯುವ ರಾಜ್‌ಕುಮಾರ್‌ʼ ಅವರ ನಟನೆಯಲ್ಲಿ ಮತ್ತಷ್ಟು ಪವರ್‌ಪುಲ್‌ ಸಿನಿಮಾಗಳು ಬರಲಿ ಮತ್ತು ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ತಮಗೆ ತಾವೇ ಹಾಕಿಕೊಂಡಿರುವ ಇತಿ-ಮಿತಿಗಳ ಹೊರಗೆ ಬಂದು ಮತ್ತಷ್ಟು ಸಿನಿಮಾಗಳನ್ನು ನೀಡಲಿ ಎಂದು ಆಶಿಸುತ್ತೇನೆ.

ಪ್ರೀತಿಯಿಂದ,

-        ಗುಬ್ಬಚ್ಚಿ ಸತೀಶ್.

ಭಾನುವಾರ, ಮಾರ್ಚ್ 24, 2024

ನೀರು (ಪುಟ್ಟ ಕತೆ)


 

ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹಾಲು, ತರಕಾರಿ ತರಲು ಹೋಗುವವರು ಹೋಗುತ್ತಿದ್ದರು. ಶಾಲೆ, ಕಾಲೇಜಿಗೆ ಮತ್ತು ಆಫೀಸಿಗೆ ಹೋಗುವವರು ಕೂಡ ಅದಾಗಲೇ ಮನೆಯನ್ನು ಬಿಟ್ಟಿದ್ದರು.

ರಾತ್ರಿ ಕುಡಿದು ಅಲ್ಲಿಯೇ ರಸ್ತೆ ಪಕ್ಕ ಮಲಗಿದ್ದವನೊಬ್ಬನಿಗೆ ಬೆಳಗ್ಗೆ ಎಚ್ಚರವಾಗಿ ತಾನು ಎಲ್ಲಿಗೆ ಬಂದಿದ್ದೇನೆ ಎಂದುಕೊಳ್ಳುತ್ತಲೇ ನಿಧಾನವಾಗಿ ಎದ್ದು ರಸ್ತೆಗೆ ಇಳಿದ. ತಟ್ಟಾಡುತ್ತಲೇ ಎರಡೆಜ್ಜೆ ಇಟ್ಟವನು ಮೂರನೆಯ ಹೆಜ್ಜೆಯನ್ನು ಅಲ್ಲೇ ಮಲಗಿದ್ದ ನಾಯಿಯ ಬಾಲದ ಮೇಲಿಟ್ಟ. ನೋವಿನಿಂದ ದಿಕ್ಕೆಟ್ಟ ನಾಯಿ ಇದ್ದಕ್ಕಿದ್ದಂತೆ ಎದ್ದು ರಸ್ತೆಯಲ್ಲಿ ಬರುತ್ತಿದ್ದ ಬೈಕಿಗೆ ಅಡ್ಡವಾಯಿತು. ಬೈಕಿನ ಮೇಲಿದ್ದವ ಎಷ್ಟೇ ಪ್ರಯತ್ನಿಸಿದರೂ ತನ್ನ ಹಣೆಬರಹವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಹಾಕಿದ್ದ ಬ್ರೇಕ್‌ ಆತನನ್ನು ರಸ್ತೆಗೆ ಕೆಡವಿತ್ತು. ಕ್ಷಣಾರ್ಧದಲ್ಲಿ ಆತ ರಸ್ತೆಯ ಮೇಲಿದ್ದ. ಹೆಲ್ಮೆಟ್‌ ಹಾಕಿದ್ದರಿಂದ ತಲೆಗೇನೂ ಪೆಟ್ಟಾಗಿರಲಿಲ್ಲ. ಆದರೆ, ಕೈ ಸ್ವಲ್ಪ ತರಚಿತ್ತು. ಆದ ಆಘಾತದಿಂದ ಆತನಿಗೆ ವಿಪರೀತ ಭಯವಾಗಿತ್ತು. ಆ ಕೂಡಲೇ ನೆರೆದ ಜನ ಆತನನ್ನು ಎತ್ತಿ ಪಕ್ಕಕ್ಕೆ ಕೂರಿಸಿ ಸಮಾಧಾನ ಹೇಳುತ್ತಿದ್ದರು. ಮತ್ತ್ಯಾರೋ ಆತನ ಬೈಕನ್ನು ಎತ್ತಿ ರಸ್ತೆಯ ಮಗ್ಗುಲಿಗೆ ನಿಲ್ಲಿಸಿ ಅದಕ್ಕೇ ಹೆಚ್ಚೇನು ತೊಂದರೆಯಾಗಿಲ್ಲ ಎಂದು ಖಚಿತ ಪಡಿಸಿದರು.



ಆದರೆ, ಬಿದ್ದವನಿಗೆ ಯಾರೂ ನೀರು ಕೊಟ್ಟು ಸಂತೈಸುತ್ತಿಲ್ಲ. ವಾಕಿಂಗ್‌ ಮುಗಿಸಿ ಬರುತ್ತಿದ್ದವರ ಕೈಯಲ್ಲಿ ಅರ್ಧರ್ಧ ನೀರಿದ್ದ ಬಾಟಲ್‌ಗಳಿವೆ! ಶಾಲಾ-ಕಾಲೇಜ್-ಆಫೀಸಿಗೆ ಹೋಗುತ್ತಿರುವವರ ಬಳಿ ಪೂರ್ತಿ ತುಂಬಿದ ನೀರಿನ ಬಾಟಲ್ಗಳಿವೆ!! ಮನೆಗೆ ಕುಡಿಯುವ ನೀರನ್ನು ದೊಡ್ಡ ಕ್ಯಾನ್‌ಗಳಲ್ಲಿ ತೆಗೆದುಕೊಂಡು ಹೋಗುವವರು ನೋಡುತ್ತಲೇ ಇದ್ದಾರೆ ಹೊರತು ಬಿದ್ದ ಬೈಕ್‌ ಸವಾರನಿಗೆ ನೀರು ಕೊಡಲು ಮನಸ್ಸು ಮಾಡುತ್ತಿಲ್ಲ!!! ಎಲ್ಲರೂ ನಾಯಿಯನ್ನು ಶಪಿಸುತ್ತಾ, ಬಿದ್ದವನ ಹಣೆಬರಹ-ಗ್ರಹಚಾರ ಸರಿಯಿಲ್ಲ ಎಂದು ಗೊಣಗುತ್ತಿರುವವರೇ. ಸದ್ಯ ಹೆಚ್ಚೇನೂ ಆಗಿಲ್ಲ ಎಂದುಕೊಳ್ಳುತ್ತಾ ಕೆಲವರು ಅಲ್ಲಿಂದ ತೆರಳುತ್ತಿದ್ದರೆ, ಕೆಲವರಂತೂ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ನಿರ್ಗಮಿಸುವವರೇ ಸರಿ. ಯಾರಾದರೂ ಒಂದು ಗುಟುಕು ನೀರು ಕೊಡುವರೇ ಎಂದು ಆತ ಕಾದದ್ದೇ ಬಂತು.

ಎಷ್ಟು ಹೊತ್ತಾದರೂ ಬಿದ್ದವನಿಗೆ ಯಾರೂ ನೀರು ಕೊಡಲಿಲ್ಲ. ಆತ ತನಗಾದ ಆಘಾತದಿಂದ ಹೊರಬರಲಾಗುತ್ತಿಲ್ಲ. ಇದನ್ನೆಲ್ಲಾ ಆಗ ತಾನೇ ಜ್ಞಾನ ಬಂದಂತೆ ಗಮನಿಸುತ್ತಿದ್ದ ಕುಡುಕನಿಗೆ ಈ ಅಪಘಾತಕ್ಕೆ ಪರೋಕ್ಷವಾಗಿ ತಾನೇ ಕಾರಣ ಎಂಬುದು ನಿಧಾನವಾಗಿ ಮನದಟ್ಟಾಯಿತು. ಅವನ ಕಣ್ಣುಗಳಿಗೆ ತನ್ನ ಸುತ್ತಲೂ ಅಷ್ಟೇಲ್ಲಾ ನೀರಿನ ಮೂಲಗಳು ಕಂಡರೂ ಯಾರೂ ಕೂಡ ಬಿದ್ದವನಿಗೆ ನೀರು ಕೊಡದಿದ್ದದ್ದು ಗಮನಕ್ಕೆ ಬಂತು. ತಾನು ರಾತ್ರಿ ಕುಡಿದಾಗಲು ನೀರು ಕಡಿಮೆ ಬೆರೆಸಿಯೇ ಕುಡಿದದ್ದು ನೆನೆದು ನಗು ಬಂತು. ಕೂಡಲೇ ತನ್ನ ಜೇಬಿನಿಂದ ಇಪ್ಪತ್ತು ರೂಪಾಯಿ ನೋಟೊಂದನ್ನು ತೆಗೆದು ʼಯಾರಾದರೂ ಬೇಗ ಒಂದು ಲೀಟರ್‌ ಬಿಸ್ಲೆರಿ ತಂದು, ಈತನಿಗೆ ಕೊಡಿʼ ಎಂದು ಅಂಗಲಾಚಿದ.



ಬಿದ್ದವನಿಗೆ ಕಡೆಗೂ ಸದ್ಯದಲ್ಲಿಯೇ ನೀರು ಸಿಗುತ್ತದೆ ಎಂದು ತುಸು ನಿರಾಳವಾಯಿತು. ಅವನ ಬೈಕಿಗೆ ಅಡ್ಡ ಬಂದಿದ್ದ ನಾಯಿ ಅದೆಲ್ಲಿತ್ತೋ ಏನೋ ರಸ್ತೆಯಲ್ಲಿ ಜೋರಾಗಿ ಹೋಗುತ್ತಿದ್ದ ಮತ್ತೊಂದು ಬೈಕನ್ನು ಅಟ್ಟಿಸಿಕೊಂಡು ಹೋಯಿತು.

- ಗುಬ್ಬಚ್ಚಿ ಸತೀಶ್.

ಭಾನುವಾರ, ಮಾರ್ಚ್ 17, 2024

ಹಿರಿತನ (ನ್ಯಾನೋ ಕತೆ)


ಯತೀಶ, ಆನಂದ, ಲಿಂಗಪ್ಪ, ರಾಜ ಎಲ್ಲಾ ಹೇಗಿದ್ದೀರ? ಏನು ಓದುದ್ರಿ? ಏನು ಬರೆದ್ರಿ? ಎನ್ನುತ್ತಲೇ ಕಾಫಿ ಬಾರಿಗೆ ಬರುತ್ತಿದ್ದ ಹಿರಿಯ ಸಾಹಿತಿಗಳನ್ನು ಕಂಡ ಕೂಡಲೇ ಅಲ್ಲಿದ್ದ ಯುವ ಸಾಹಿತಿಗಳು, ಸಾಹಿತ್ಯ ಸಂಚಾಲಕರೆಲ್ಲ ಎದ್ದು ನಿಂತು ಗೌರವಿಸುತ್ತಿದ್ದರು. ಅದು ಆಗ. ಇತ್ತೀಚೆಗೆ ಈ ಹಿರಿಯ ಸಾಹಿತಿಗಳಿಗೆ ಯಾರೂ ಸಿಗಲಿಲ್ಲವೆಂದು ಗೌರವವೊಂದು ಸಮರ್ಪಣೆಯಾಗಿದೆ. ಈಗ ಅವರು ಠೀವಿಯಿಂದ ಏನನ್ನೂ ಮಾತನಾಡದೆ, ಯಾರನ್ನೂ ಮಾತನಾಡಿಸದೆ ಕಾಫಿ ಬಾರಿಗೆ ಗಜಗಾಂಭೀರ್ಯದಲ್ಲಿ ಬರುತ್ತಾರೆ. ಆ ಸಮಯಕ್ಕೆ ಸರಿಯಾಗಿ ಅಲ್ಲಿಂದ ಯುವ ಸಾಹಿತಿಗಳು, ಸಾಹಿತ್ಯ ಸಂಚಾಲಕರೆಲ್ಲ ಏನೋ ಕೆಲಸವಿರುವವರಂತೆ ಗೊಣಗಾಡುತ್ತಾ ಮೆಲ್ಲನೆ ಜಾಗ ಖಾಲಿ ಮಾಡುತ್ತಾರೆ.

- ಗುಬ್ಬಚ್ಚಿ ಸತೀಶ್.

ಶನಿವಾರ, ಮಾರ್ಚ್ 16, 2024

ಕನ್ನಡ ಭಾಷೆ, ಸಾಹಿತ್ಯ, ರಂಗಭೂಮಿ, ಸಿನಿಮಾಗಳ ಸಂಗಮ “ಬ್ಲಿಂಕ್”‌ ಸಿನಿಮಾ

 


ಯೂಟ್ಯೂಬರ್‌ ಆಗಿ ಕನ್ನಡಿಗರಿಗೆ ಪರಿಚಯವಿದ್ದ ಶ್ರೀನಿಧಿ ಬೆಂಗಳೂರು ಮತ್ತು ತಂಡ ಕನ್ನಡ ಚಲನಚಿತ್ರರಂಗಕ್ಕೆ ನೀಡಿರುವ ಅಪರೂಪದ ಕೊಡುಗೆಯೇ “ಬ್ಲಿಂಕ್”‌ ಸಿನಿಮಾ. ತಮ್ಮ ಅಪಾರ ಓದಿನ ಮತ್ತು ಸಿನಿಮಾ ಅಭಿರುಚಿಯ ಅನುಭವದಿಂದ ಈ ಕತೆಯನ್ನು ತೆರೆಯ ಮೇಲೆ ತಂದಿದ್ದಾರೆ ಶ್ರೀನಿಧಿ. ಗ್ರೀಕ್‌ನ ದುರಂತ ನಾಟಕ ಸಾಫೋಕ್ಲಿಸ್‌ನ “ಈಡಿಪಸ್‌” ಸರಣಿಯ ನಾಟಕಗಳು ಮತ್ತು ನಾಡಿನ ಹೆಮ್ಮೆಯ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್‌ ಅವರ “ರಂಗನಾಯಕಿ” ಸಿನಿಮಾದಿಂದ ಪ್ರೇರಣೆಗೊಂಡಿರುವ ನಿರ್ದೇಶಕರು “ಬ್ಲಿಂಕ್” ಸಿನಿಮಾವನ್ನು ಪ್ರೇಕ್ಷಕ ಕಣ್ಣು ಮಿಟುಕಿಸದೇ ನೋಡುವಂತೆ ಮಾಡಿ ಅವನ ಮನ ಗೆದಿದ್ದಾರೆ. ನಾಯಕ ನಟನ ಹೆಚ್ಚು ಹೊತ್ತು ಕಣ್ಣು ಮಿಟುಕಿಸದೇ ಇರುವ ಶಕ್ತಿಯೇ ಅವನ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ನೆರವಾಗಿ ಅವನ ಪಾಲಿಗದು ದೈಹಿಕ ಮತ್ತು ಮಾನಸಿಕ ಹಿಂಸೆಯಾಗುವುದೇ ಸಿನಿಮಾ. ಇದನ್ನು ಟೈಮ್‌ ಟ್ರಾವೆಲಿಂಗ್‌ ತಂತ್ರದ ಮೂಲಕ ಹೇಳಲು ಹೊರಟು ನಿರ್ದೇಶಕರು ಮತ್ತು ತಂಡ ಯಶಸ್ವಿಯಾಗಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯ, ರಂಗಭೂಮಿ, ಸಿನಿಮಾಗಳ ಸಂಗಮ “ಬ್ಲಿಂಕ್”‌ ಸಿನಿಮಾ ಎಂದೇ ಹೇಳಲು ನಾನು ಇಷ್ಟಪಡುತ್ತೇನೆ. ಲಂಕೇಶರು “ಈಡಿಪಸ್”‌ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಂಕೇಶರ ಸಂದರ್ಶನದ ಮಾತುಗಳ ಮೂಲಕವೇ ಆರಂಭವಾಗುವ ಸಿನಿಮಾ ಅಂತ್ಯದವರೆಗೂ ಪ್ರೇಕ್ಷಕನನ್ನು ತಲ್ಲೀನನಾಗಿಸಿ ನೋಡಿಸಿಕೊಳ್ಳುತ್ತದೆ. ಕಣ್ಣು, ಕಿವಿಗಳಿಗಷ್ಟೇ ಅಲ್ಲದೇ ಮೆದುಳಿಗೂ ನಿರ್ದೇಶಕರು ಪ್ರೇಕ್ಷಕನಿಗೆ ಕೆಲಸ ಕೊಡುವುದರಿಂದ ಒಂದು ಹಿತವಾದ ತಲೆನೋವು ಪ್ರೇಕ್ಷಕನಿಗೆ ಕಾಡಿದರೂ ಅಚ್ಚರಿಯಿಲ್ಲ. ಆ ಹಿತವಾದ ತಲೆನೋವಿನಲ್ಲಿಯೇ ನೋಡುಗನಿಗೆ ಅಪಾರ ನಲಿವಿದೆ. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೆ ಚಂದವಂತೆ. ಆದರೆ, ಸಿನಿಮಾದಲ್ಲಿ ಪ್ರೇಕ್ಷಕನ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ. ಒಂದು ಚಂದದ, ಅನನ್ಯ, ಅಪರೂಪದ ಸಿನಿಮಾ ನೋಡಿದ ಅನುಭವ ಪ್ರೇಕ್ಷಕನಿಗೆ ಖಂಡಿತ ಆಗುತ್ತದೆ.



ದೀಕ್ಷಿತ್‌ ಶೆಟ್ಟಿ ಅವರ ನಟನೆ ಈ ಚಿತ್ರದ ಪ್ಲಸ್‌ ಪಾಯಿಂಟ್.‌ ಉಳಿದೆಲ್ಲಾ ನಟರು ಕೂಡ ತಮ್ಮ ಪಾತ್ರಕ್ಕೆ ಪೂರಕವಾಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಿರ್ದೇಶಕರು, ನಿರ್ಮಾಪಕರು ಮತ್ತು ತಂಡದ ಕೆಲಸವನ್ನು ಮೆಚ್ಚಲೇಬೇಕು.  ಇಡೀ ಸಿನಿಮಾ ತಂಡಕ್ಕೆ ಒಂದು ಹ್ಯಾಟ್ಸಾಫ್.

ಮಾರ್ಚ್‌ 8ರಂದೇ ಬಿಡುಗಡೆಯಾಗಿದ್ದ ಸಿನಿಮಾ ತುಮಕೂರಿನಲ್ಲಿ ಮಾರ್ಚ್‌ 15ರಂದು ಅಂದರೇ ಒಂದು ವಾರದ ನಂತರ ನೋಡಲು ಸಿಕ್ಕಿತು. ಬಹಳ ರಶ್‌ ಕೂಡ ಇತ್ತು. ಸೋಶಿಯಲ್‌ ಮೀಡಿಯಾದ ಮೂಲಕವೇ ಅಪಾರ ಪ್ರಶಂಸೆಗೆ, ಪ್ರೀತಿಗೆ ಒಳಗಾಗಿರುವ ಸಿನಿಮಾವನ್ನು ಕನ್ನಡದ ಮಕ್ಕಳೆಲ್ಲಾ, ಬಹುಮುಖ್ಯವಾಗಿ ಕನ್ನಡ ಸಿನಿಮಾ ಪ್ರೇಮಿಗಳೆಲ್ಲಾ ಆದಷ್ಟು ಬೇಗ ಒಂದಾಗಿ ನೋಡಿ. ನೀವು ನೋಡಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್‌ ಮಾಡಿ ತಿಳಿಸಿ. ನೋಡಿಲ್ಲವಾದರೆ, ನೋಡಿಕೊಂಡು ಬಂದು ತಿಳಿಸಿ.

ಪ್ರೀತಿಯಿಂದ,

-        ಗುಬ್ಬಚ್ಚಿ ಸತೀಶ್.

ಶುಕ್ರವಾರ, ಮಾರ್ಚ್ 15, 2024

ನಾನೇಕೆ ಅಮೇಜಾನ್‌ ಸಪೋರ್ಟ್‌ ಮಾಡ್ತೀನಿ



ಸ್ನೇಹಿತರೇ, ನಾನು ಆಗಾಗ ಇಲ್ಲಿ ಅಮೇಜಾನ್ಲಿಂಕ್ಹಾಕುವುದನ್ನು ನೋಡಿರುತ್ತೀರಿ. ಕೆಲವು ಸ್ನೇಹಿತರು ನಾನು ಹಾಕಿದ ಲಿಂಕಿನಿಂದ ತಮಗೆ ಬೇಕಾದ ವಸ್ತುವನ್ನು ಕೊಂಡು ಚೆನ್ನಾಗಿದೆ ಎಂದು ನನಗೆ ತಿಳಿಸಿದ್ದೀರಿ ಕೂಡ. ಮತ್ತೆ ಕೆಲವು ಆತ್ಮೀಯರು ನೀನ್ಯಾಕೆ ಅಮೇಜಾನ್ಸಪೋರ್ಟ್ಮಾಡುತ್ತೀಯ ಅಂತ ನೇರವಾಗಿ ಮತ್ತು ಮೆಸೇಜ್ಕೂಡ ಮಾಡಿ ಕೇಳಿದಿರಿ. ಕೆಲವರು ಹೇಗೆ ಕೇಳುವುದು ಅಂತ ಸುಮ್ಮನಾದಿರಿ. ನಾನಿಲ್ಲಿ ಒಂದು ವಿಷಯ ಸ್ಪಷ್ಟಪಡಿಸಲು ಇಷ್ಟ ಪಡುತ್ತೇನೆ. ಅಮೇಜಾನ್ಅಮೇರಿಕಾದಾದ್ದರೂ ಇಂಡಿಯಾದ ಪ್ರತ್ಯೇಕ ವೆಬ್ಸೈಟ್ಇದೆ. ಅಮೇಜಾನ್.ಇನ್ಅಂತ. ಅಮೇಜಾನ್ಇಂಡಿಯಾ ಅಂತಲೂ ಕರೆಯಬಹುದು. ಇವರು ಇಲ್ಲಿನ ವ್ಯಾಪಾರಿಗಳಿಗೆ ಇಲ್ಲಿಯೇ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟು ಬಹಳ ವರ್ಷಗಳಾದವು. ಬೆಲೆಯೂ ಸ್ಪರ್ಧಾತ್ಮಕವಾಗಿರುವುದರಿಂದ ಗ್ರಾಹಕರಿಗೂ ಅನುಕೂಲವಾಗಿದೆ. ಇವರು ಇಲ್ಲಿ ಮಾಡುವ ವ್ಯಾಪಾರಕ್ಕೆ ಇಲ್ಲಿಯೇ ತೆರಿಗೆಯನ್ನು ಕೂಡ ಕಟ್ಟುತ್ತಾರೆ. ಈಗ ಅಮೇರಿಕಾದಲ್ಲಿರುವ ಉಡುಪಿಯ ಹೋಟೆಲ್‌ ಅಥವಾ ಮತ್ತೊಂದು ನಮ್ಮ ದೇಶದ ಉದ್ಯಮವೊಂದು ಅಲ್ಲಿ ವ್ಯಾಪಾರ ವಹಿವಾಟು ನಡೆಸಿ ಅಲ್ಲಿನ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಾರಲ್ಲಾ ಅದೇ ರೀತಿ. ಇದು ಜಾಗತೀಕರಣ ಒದಗಿಸಿದ ಅನುಕೂಲಗಳಲ್ಲೊಂದು.

ಎಲ್ಲಾ ರೀತಿಯ ವ್ಯಾಪಾರಗಳಲ್ಲಿರುವ ಸಮಸ್ಯೆಗಳಂತೆ ಇಲ್ಲೂ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರಗಳೂ ಇವೆ. ಮೋಸವೂ ಇದೆ, ಜೊತೆಗೆ ಕಾನೂನು ಕೂಡ ಇದೆ.



ನಾನು ಅಮೇಜಾನನ್ನು ಬಹುಮುಖ್ಯವಾಗಿ ಇಷ್ಟಪಡುವುದು ಪುಸ್ತಕಗಳ ಮಾರಾಟದಿಂದಲೇ ದ್ಯೆತ್ಯ ಸಂಸ್ಥೆಯಾಗಿ ಬೆಳೆದ ಅಮೇಜಾನ್‌ ನಮ್ಮ ದೇಶದಲ್ಲೂ ಅತಿ ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡುವ ಆನ್‌ಲೈನ್‌ ಅಂಗಡಿಯಾಗಿರುವ ಕಾರಣದಿಂದ. ನಮ್ಮ ಕನ್ನಡದ ಪುಸ್ತಕಗಳನ್ನು ಮಾರಾಟಮಾಡಲು ಇಲ್ಲಿ ವಿಪುಲ ಅವಕಾಶಗಳಿವೆ. ಮತ್ತು ಈಗಾಗಲೇ ದಿನಂಪ್ರತಿ ಲಕ್ಷಾಂತರ ರೂಗಳ ಕನ್ನಡ ಪುಸ್ತಕಗಳ ವಹಿವಾಟು ಇಲ್ಲಿ ನಡೆಯುತ್ತಿದೆ. ನಾನು ಕೂಡ ನಮ್ಮ ಪ್ರಕಾಶನದ ಆನ್‌ಲೈನ್‌ ಅಂಗಡಿಯನ್ನು ಬಹಳ ವರ್ಷಗಳ ಹಿಂದೆಯೇ ತೆರೆದಿದ್ದರೂ ಮಾರಾಟ ಶುರುಮಾಡಿದ್ದು ಇತ್ತೀಚಿನ ವರ್ಷಗಳಲ್ಲಿ ಮಾತ್ರ. ಮುಂಚೆಯೇ ಶುರುಮಾಡಿದ್ದರೆ ಚೆಂದವಿತ್ತು ಅಂತ ಆಗಾಗ ಅನ್ನಿಸಿದ್ದು ಉಂಟು. ಕಾರಣ, ಆಗ ಈಗಷ್ಟು ಸ್ಪರ್ಧೆ ಇರಲಿಲ್ಲ. ಇರಲಿಬಿಡಿ. ಆದರೆ, ಇದು ಬಹುತೇಕ ಪ್ರಕಾಶಕರಿಗೆ ಮತ್ತು ಮಾರಾಟಗಾರರಿಗೆ ವರವಾಗಿರುವುದಂತೂ ಸತ್ಯ.

ನಾನು ಮೊದಲು ಮೊಬೈಲ್‌ ಕೊಂಡದ್ದು ಇಲ್ಲಿನ ಒಂದು ಮೊಬೈಲ್‌ ಅಂಗಡಿಯಲ್ಲಿ. ಎರಡನೇ ಮೊಬೈಲ್‌ (ಸ್ಮಾರ್ಟ್‌ಫೋನ್) ಕೊಂಡದ್ದು‌ ಅಮೇಜಾನಿನಲ್ಲಿ. ನನ್ನ ಸ್ನೇಹಿತರು ನನಗೆ ಹೇಳಿದ್ದರಿಂದ. ನಂತರ, ಅಷ್ಟರಲ್ಲಾಗಲೇ ಅಮೇಜಾನಿನಲ್ಲಿ ಸಿಗುವ ಬೆಲೆಗೆ ಅಂಗಡಿಗಳವರೂ ಮಾರಲು ಶುರುಮಾಡಿದ್ದರಿಂದ ಮತ್ತೆರೆಡು ಮೊಬೈಲ್‌ಗಳನ್ನು ಇಲ್ಲಿನ ಅಂಗಡಿಯಲ್ಲಿಯೇ ಕೊಂಡಿದ್ದೇನೆ. ಇದೇ ರೀತಿ ಈಗ ಎಲ್ಲಾ ವಸ್ತುಗಳ ಮಾರಾಟಕ್ಕೆ ಪೈಪೋಟಿಯಿರುವುದು ನಿಮಗೆಲ್ಲಾ ಗೊತ್ತೇ ಇದೆ.  ಇದೇ ಕಾರಣದಿಂದ, ಪುಸ್ತಕಗಳ ಹೊರತಾಗಿಯೂ ನಾನು ಪ್ರಮೋಟ್‌ ಮಾಡುವ ಇತರ ವಸ್ತುಗಳು ನನ್ನ ಸ್ನೇಹಿತರಿಗೆ, ಪರಿಚಯದವರಿಗೆ ಉಪಯೋಗವಾಗಬಹುದೆಂದು ಒಂದು ಲಿಂಕನ್ನು ನಾನು ಸಾಮಾಜಿಕ ತಾಣಗಳಲ್ಲಿ ಆಗಾಗ ಹಾಕಿರುತ್ತೇನೆ. ವಿಶೇಷ ರಿಯಾಯಿತಿಯ ಪ್ರಯೋಜನ ನನ್ನ ಸ್ನೇಹಿತರಿಗೂ ಸಿಗಲಿ ಎಂಬುದಷ್ಟೇ ನನ್ನ ಪ್ರಮುಖ ಆಶಯ.

ಬೇಕಿದ್ದರೆ, ಒಮ್ಮೆ ಚೆಕ್‌ ಮಾಡಿ ನೋಡಿ: https://amzn.to/43qdjiz

ಮತ್ತೇನಾದರೂ ಪ್ರಶ್ನೆ, ಅನುಮಾನಗಳಿದ್ದರೆ ಕಾಮೆಂಟ್‌ ಮಾಡಿ ತಿಳಿಸಿ. ಉತ್ತರಿಸುತ್ತೇನೆ.

ಧನ್ಯವಾದಗಳು,

ಪ್ರೀತಿಯಿಂದ,

-         ಗುಬ್ಬಚ್ಚಿ ಸತೀಶ್.

ಶುಕ್ರವಾರ, ಫೆಬ್ರವರಿ 23, 2024

ನೈಜ ಘಟನೆಗಳನ್ನಾಧರಿಸಿದ “ಆರ್ಟಿಕಲ್‌ 370” ಸಿನಿಮಾ

 ನೈಜ ಘಟನೆಗಳನ್ನಾಧರಿಸಿದ “ಆರ್ಟಿಕಲ್‌ 370” ಸಿನಿಮಾ



“ಆರ್ಟಿಕಲ್‌ 370” ಹಿಂದಿ ಸಿನಿಮಾ ನಮ್ಮ ದೇಶದ ಸ್ವಾತಂತ್ರ್ಯದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿದ್ದ ಸಂವಿಧಾನದ ಆರ್ಟಿಕಲ್‌ 370ನ್ನು ಆಗಸ್ಟ್‌ 5, 2019ರಂದು ಭಾರತ ಸರ್ಕಾರ ರದ್ದುಪಡಿಸಿದ ಹಿನ್ನೆಲೆಯ ಮತ್ತು ಮುನ್ನೆಲೆಯ ನೈಜಘಟನೆಗಳನ್ನಾಧರಿಸಿದೆ. ಇತಿಹಾಸದ ತಪ್ಪನ್ನು ಇತಿಹಾಸ ನಿರ್ಮಾಣದ ಮೂಲಕವೇ ಸರಿಪಡಿಸಿಬೇಕು ಎಂಬ ಆಶಯ ಸಿನಿಮಾದ್ದಾಗಿದೆ. Uri – The Surgical Strike ಸಿನಿಮಾವನ್ನು ನಿರ್ದೇಶಿಸಿ ದೇಶದ ಗಮನ ಸೆಳೆದು, ಈ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದ ಆದಿತ್ಯ ಸುಹಾಸ್‌ ಜಂಭಾಲೆ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ದೇಶದ ಇತಿಹಾಸದ ಪ್ರಮುಖ ಚಿತ್ರಣವನ್ನು ಬಹುಮುಖ್ಯವಾಗಿ NIA, PMO ಅಧಿಕಾರಿಗಳ ಮತ್ತು CRPF ಯೋಧರ ದೃಷ್ಠಿಯಿಂದ ಕಟ್ಟಿಕೊಡಲಾಗಿದೆ. ಗುಪ್ತಚಾರಿಣಿ, ನಂತರ NIA ಅಧಿಕಾರಿ ಜೂನಿ ಅಕ್ಸರ್‌ ಆಗಿ ಯಾಮಿ ಗೌತಮ್‌, PMO ಕಾರ್ಯದರ್ಶಿ ರಾಜೇಶ್ವರಿ ಸ್ವಾಮಿನಾಥನ್‌ ಆಗಿ ಪ್ರಿಯಾಮಣಿ ಮತ್ತು CRPF ಯೋಧ ಯಶ್‌ ಚೌಹಾಣ್‌ ಆಗಿ ವೈಭವ್‌ ತತ್ವವಾಡಿ ಗಮನ ಸೆಳೆಯುತ್ತಾರೆ. ಪ್ರಧಾನಮಂತ್ರಿಗಳಾಗಿ ಅರುಣ್‌ ಗೋವಿಲ್‌ ಇದ್ದಾರೆ.

ಈ ಸಿನಿಮಾದಲ್ಲಿ ಹಲವು ಅಧ್ಯಾಯಗಳ ಮೂಲಕ ಆರ್ಟಿಕಲ್‌ 370ರ ಅಡಿ ಕಣಿವೆ ಪ್ರದೇಶದಲ್ಲಿ ನಡೆಯುತ್ತಿದ್ದ ರಾಜಕೀಯ, ಸಾಮಾಜಿಕ ಮತ್ತು ಹುಸಿ ಹೋರಾಟದ ಚಿತ್ರಣವನ್ನು ನೀಡುತ್ತಲೇ ಅಲ್ಲಿ ನಡೆಯುತ್ತಿದ್ದ ಗಲಭೆ, ಹಿಂಸಾಚಾರ, ಮೋಸ ಮತ್ತು ಅನೈತಿಕ ವ್ಯಾಪಾರಗಳ ಚಿತ್ರಣವನ್ನು ನೀಡಲಾಗಿದೆ. ಯಾವ ಅಮಾಯಕರ ಬಲಿಯನ್ನು ಪಡೆಯದೇ ಯಶಸ್ವಿಯಾಗಿ ಹೇಗೆ “ಆರ್ಟಿಕಲ್‌ 370” ರ ರದ್ದಿನ ಆಪರೇಷನ್‌ ನಡೆಸಲಾಯಿತು ಎಂಬುದನ್ನು ಸಶಕ್ತವಾಗಿ ತೋರಿಸಲಾಗಿದೆ. ಸಂವಿಧಾನಕ್ಕೆ ಚ್ಯುತಿ ಬರದಂತೆ ಈ ವಿಧೇಯಕವನ್ನು ರದ್ದುಪಡಿಸಿದ ಚಾಕಚಕ್ಯತೆಯನ್ನು ತೆರೆಯಮೇಲೆ ನೋಡಿದರೆ ಚೆನ್ನ. ಹಿನ್ನೆಲೆಯ ಸಂಗೀತ ದೃಶ್ಯಗಳಿಗೆ ಅನುಗುಣವಾಗಿದ್ದು ಪ್ರೇಕ್ಷಕನನ್ನು ಕಟ್ಟಿಹಾಕುತ್ತದೆ. 70 ವರ್ಷಗಳಿಂದಲೂ ಕಾಶ್ಮೀರದ ಪ್ರಜೆಗಳು, ಅಧಿಕಾರಿಗಳು ಬಯಸಿದ್ದ ಬದುಕನ್ನು ನೀಡುವಲ್ಲಿ ಈ ವಿಧೇಯಕದ ರದ್ದು ಹೇಗೆ ಸಾಧ್ಯವಾಗಿಸಿದೆ ಎಂಬುದನ್ನು ಕೂಡ ಸಿನಿಮಾದ ಅಂತ್ಯದಲ್ಲಿ ತೋರಿಸಲಾಗಿದೆ.

ದೇಶದ ಪ್ರಜೆಗಳ ಹಿತರಕ್ಷಣೆಯ ದೃಷ್ಟಿಯಿಂದ ಹಾಗೂ ಜಮ್ಮು ಮತ್ತು ಕಾಶ್ಮೀರ ಎಂದಿದ್ದರೂ ದೇಶದ ಅವಿಭಾಜ್ಯ ಅಂಗ ಎಂದು ಸಾಬೀತುಪಡಿಸಿದ ಆರ್ಟಿಕಲ್‌ 370ರ ರದ್ದಿನ ಈ ಸಿನಿಮಾ ಬಾಲಿವುಡ್ಡಿನ ಅಂಗಳದಿಂದ ಬಂದಿದ್ದು, ಆಸಕ್ತರು ಒಮ್ಮೆ ನೋಡಬಹುದಾಗಿದೆ.‌ ಈ ಸಿನಿಮಾ ಕುರಿತು ಖುದ್ದು ಪ್ರಧಾನಮಂತ್ರಿಗಳೇ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಅಧಿಕಾರವನ್ನು ಆರ್ಟಿಕಲ್‌ 370 ರದ್ದು ಪಡಿಸುವ ಮೂಲಕ ಹೇಗೆ ತೆಗೆಯಲಾಯಿತು ಎಂಬುದನ್ನು ಹೇಳುತ್ತದೆ ಎಂದಿದ್ದಾರೆ. ನಿಮಗೂ ಈ ವಿಷಯ ಕುರಿತು ಆಸಕ್ತಿಯಿದ್ದರೆ ಕೂಡಲೇ ಈ ಸಿನಿಮಾ ನೋಡಿ. ಅಂದಹಾಗೆ ಈ ಸಿನಿಮಾ ಕಣಿವೆ ಪ್ರದೇಶದಲ್ಲೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ…

ಮಂಗಳವಾರ, ಫೆಬ್ರವರಿ 13, 2024

ಸಿದ್ದು ಸತ್ಯಣ್ಣವರ ಬೆಳೆದ “ಬೆಳಕಿನ ಬೆಳೆ”

 ಸಿದ್ದು ಸತ್ಯಣ್ಣವರ ಬೆಳೆದ “ಬೆಳಕಿನ ಬೆಳೆ”



ಪತ್ರಕರ್ತ ಸಾಹಿತಿ ಸಿದ್ದು ಸತ್ಯಣ್ಣವರ “ಬೆಳಕಿನ ತೆನೆ – ನೋವುಂಡು ಬೆಳಕು ಕಂಡವರ ಕಥನಗಳು” ಎಂಬ Success Stories ಸಂಕಲನವನ್ನು ಹೊರತಂದಿದ್ದಾರೆ. ಅವರಿಗೆ ಅಭಿನಂದನೆಗಳು.

ವೃತ್ತಿಯ ಅನುಭವಗಳಿಂದ ಚಿಂತನೆಯೊಂದು ಮೊಳಕೆಯೊಡೆದು ಸಮಾಜಕ್ಕೆ ಮಾದರಿಯಾಗಬಲ್ಲ ಕೆಲವು ಯಶೋಗಾಥೆಗಳನ್ನು ಸಂಕಲಿಸಬೇಕೆಂದುಕೊಂಡ ಲೇಖಕರು ಈ ಕೃತಿಯನ್ನು ಬಹಳ ಆಸ್ಥೆಯಿಂದ ಓದುಗರಿಗೆ ನೀಡಿದ್ದಾರೆ. ಸಂಕಲನದ ಹಸ್ತಪ್ರತಿಯನ್ನು ಖ್ಯಾತ ಸಿನಿಮಾ ನಟರಾದ ದುನಿಯಾ ವಿಜಯ್‌ ಅವರು ಓದಿ ಮೆಚ್ಚಿರುವುದು ವಿಶೇಷ. ಸಾಹಿತಿಗಳಾದ ಕೇಶವ ಮಳಗಿಯವರು ಈ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ. ಬಂಜರು, ಕಲ್ಲರಾಶಿಗಳ ಮರುಭೂಮಿಯಲ್ಲಿ ಲೋಕಕೆ ಸುಗಂಧವನ್ನು ಹಂಚಲೆಂದೇ ಅರಳಿಹೆವು ಎನ್ನುವ ಸಾಮಾನ್ಯರ ಅಸಾಮಾನ್ಯ ಕಥನಗಳು ಇಲ್ಲಿವೆ ಎಂದಿದ್ದಾರೆ ಕತೆಗಾರರೂ ಆದ ಕೇಶವ ಮಳಗಿ ಅವರು.

ಈ “ಬೆಳಕಿನ ತೆನೆ”ಯಲ್ಲಿ ಇಪ್ಪತ್ತು ಯಶೋಗಾಥೆಗಳಿವೆ. ದಿನಗೂಲಿ ಮಾಡುತ್ತಲೇ ಪಿ.ಎಚ್.ಡಿ ಪದವೀಧರೆಯಾದ ಸಾಕೆಭಾರತಿಯಿಂದ ಆರಂಭವಾಗಿ ನೈಜೀರಿಯಾದ ಖ್ಯಾತ ನಟ ʼಪಾಆ ಪಾಆʼ ಎಂದೇ ಕರೆಯಲ್ಪಡುವ ಒಶೀತಾ ಇಹೇಮಿವರೆಗೂ ಓದುಗರನ್ನು ಪ್ರೇರೆಪಿಸುವ ಇಪ್ಪತ್ತು ಯಶೋಗಾಥೆಗಳಿವೆ. ಎಲ್ಲಾ ಕ್ಷೇತ್ರಗಳ ಸಾಧಕರ ಗೆಲುವಿನ ಕತೆಗಳಿವೆ. ಇತ್ತೀಚಿನ ದಿನಮಾನಗಳಲ್ಲಿ ದೇಶದ ಕ್ರಿಕೆಟ್‌ ತಾರೆಯಾಗಿ ಮಿಂಚುತ್ತಿರುವ ಮೊಹಮ್ಮದ್‌ ಸಿರಾಜ್‌ನ ಕತೆಯಿದೆ. ಚಿಕ್ಕ ವಯಸ್ಸಿಗೆ ವಿಶ್ವವಿಖ್ಯಾತನಾಗಿರುವ ಪುಟ್ಬಾಲ್‌ ತಾರೆ ಎಂಬಾಪೆಯ ಕತೆಯೂ ಇದೆ. ಎಲೆ ಮರೆಯ ಕಾಯಿಯಂತಿರುವ ಹಲವು ಸಾಮಾನ್ಯರ ಅಸಾಮಾನ್ಯ ಕಥನಗಳಿವೆ. ಓದಿದ ನಂತರ ಏನನ್ನಾದರೂ ಸಾಧಿಸಬೇಕೆಂಬ ಛಲವನ್ನು ಓದುಗರಲ್ಲಿ ಬಿತ್ತುವಲ್ಲಿ ಈ ಸಂಕಲನ ಖಂಡಿತ ಯಶಸ್ವಿಯಾಗುತ್ತದೆ. ಓದುಗರಿಗೆ ಗೊತ್ತಿಲ್ಲದ ಹಲವಾರು ಸಂಗತಿಗಳು ಕೂಡ ಈ ಸಂಕಲನದ ಮೂಲಕ ಓದುಗರ ಜ್ಞಾನಭಂಡಾರ ಸೇರಬಲ್ಲದು ಎಂಬುದು ನನ್ನ ಅನಿಸಿಕೆ.

ಅಮೂಲ್ಯ ಪುಸ್ತಕ ಪ್ರಕಟಿಸಿರುವ ಈ ಕೃತಿಯ ಮೌಲ್ಯ ರೂ. 125/-

ನಿಮ್ಮ ಪ್ರತಿಗೆ:                                                                                   https://amzn.to/3Szj9JA

“ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು…

  ಆತ್ಮೀಯ ಸ್ನೇಹಿತರೇ, “ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು… ನನ್ನ ಅನಿಸಿಕೆಯಯನ್ನು ನನ್ನ ಯೂಟ್ಯೂಬ್‌ ಚಾನೆಲ್ಲಿನಲ್ಲಿ ವೀಕ್ಷಿಸಿ… ಧನ್ಯವಾದಗಳೊಂದಿಗೆ, ಗುಬ್ಬಚ್ಚಿ ...