ಬೆಳಿಗ್ಗೆ
ಐದಕ್ಕೇ ಅಲಾರಂ ಇಟ್ಟುಕೊಂಡು, ನೆನ್ನೆಯೇ ಇಂದಿನ ಬೆಳಗಿನ 9.30ರ ಶೋಗೆ ಬುಕ್ ಮಾಡಿದ್ದ “ಯುವ” ಸಿನಿಮಾಗೆ
ಹೋಗಿ ಬಂದೆ. ತುಮಕೂರಿನ ಐನೋಕ್ಸ್‌ನಲ್ಲಿಸಿನಿಮಾ ನೋಡುವುದೇ ಒಂದು ಹಬ್ಬ!
ಯುವ
ರಾಜ್‌ಕುಮಾರ್ ಅವರ ಮೊದಲ ಚಿತ್ರ “ಯುವ” ಇಂದು ಬಿಡುಗಡೆಯಾಗಿದ್ದು, ಯಾರಾದರೂ ನನ್ನನ್ನು ಹೇಗಿದೆ
“ಯುವ?” ಎಂದು ಕೇಳಿದರೆ, ನಾನು ಒಂದೇ ಸಾಲಿನಲ್ಲಿ ಸಖತ್ “ಪವರ್”ವುಲ್ ಶಿವ! ಎಂದು ಹೇಳಲು ಇಚ್ಛಿಸುತ್ತೇನೆ.
ನಿರ್ದೇಶಕ
ಸಂತೋಷ್ ಆನಂದ್‌ರಾಮ್ “ಯುವ” ಚಿತ್ರದ ಮೊದಲಾರ್ಧದಲ್ಲಿ ಯುವ ರಾಜ್‌ಕುಮಾರ್ ಅವರನ್ನು ಕಾಲೇಜಿನ
ಆಂಗ್ರಿ ಯಂಗ್ ಮ್ಯಾನ್ ಆಗಿ ಪರಿಚಯಿಸಿ ಕನ್ನಡ ಚಲನಚಿತ್ರರಂಗಕ್ಕೆ ಮತ್ತೊಬ್ಬ ಸ್ಟಾರ್ ನಟನನ್ನು
ನೀಡಿದ್ದಾರೆ. ಚಿತ್ರದ ವಿರಾಮದ ನಂತರ ಬರುವ ಕುಟುಂಬದ ಜವಾಬ್ದಾರಿಯ “ಯುವ”ನ ಮೂಲಕ ನಮ್ಮ ಚಲನಚಿತ್ರರಂಗಕ್ಕೆ
ಮತ್ತೊಬ್ಬ ಸೂಪರ್ ಸ್ಟಾರ್ ನಟ ಸಿಕ್ಕಂತಾಗಿದೆ. ತಮ್ಮ ಎಂದಿನ ಶೈಲಿಯಲ್ಲಿಯೇ ನಿರ್ದೇಶಕರು ʼಯುವʼ
ಸಿನಿಮಾ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್‌ನ ಅದ್ಧೂರಿ ನಿರ್ಮಾಣವಿದೆ.
ನಟನೆ,
ಡ್ಯಾನ್ಸ್ ಮತ್ತು ಆಕ್ಷನ್‌ಗಳಲ್ಲಿ ಮಿಂಚುವ ಯುವ ರಾಜ್‌ಕುಮಾರ್ ನೋಡುಗನ ಮನಗೆಲ್ಲುತ್ತಾರೆ. ದೊಡ್ಡಪ್ಪ
ಮತ್ತು ಚಿಕ್ಕಪ್ಪನಷ್ಟು ಡ್ಯಾನ್ಸ್ ಇನ್ನೂ ಮಾಡಿಲ್ಲವಾದರೂ, ಇರುವ ಒಂದೇ ಡ್ಯಾನ್ಸ್‌ನಲ್ಲಿ ಭರವಸೆ
ಮೂಡಿಸುತ್ತಾರೆ. ಆಕ್ಷನ್ ದೃಶ್ಯಗಳಲ್ಲಿ ಚಿಕ್ಕಪ್ಪನ ʼಪವರ್ʼ, ದೊಡ್ಡಪ್ಪನ ʼಖದರ್ʼ ಇದೆ. ನಟನೆಯಲ್ಲೂ
ಕೂಡ ಗಮನ ಸೆಳೆಯುವ ಯುವ ರಾಜ್‌ಕುಮಾರ್ ಈಗಾಗಲೇ ತಮಗೆ ನೀಡಲಾಗಿರುವ ಜೂನಿಯರ್ ʼಪವರ್ ಸ್ಟಾರ್ʼ
ಬಿರುದನ್ನು ಉಳಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.
ನಾಯಕಿಯಾಗಿ
ಸಪ್ತಮಿ ಗೌಡ, ತಂದೆಯಾಗಿ ಅಚ್ಯುತ ಕುಮಾರ್, ತಾಯಿಯಾಗಿ ಸುಧಾರಾಣಿ, ಟ್ರೈನರ್ ಆಗಿ ಕಿಶೋರ್, ಪ್ರಿನ್ಸಿಪಾಲ್
ಆಗಿ ಗೋಪಾಲಕೃಷ್ಣ ದೇಶಪಾಂಡೆ ಮತ್ತು ಇನ್ನು ಮುಂತಾದ ಪಾತ್ರಗಳ ಅತ್ಯುತ್ತಮ ಕಲಾವಿದರ ತಂಡವೇ ಇಲ್ಲಿರುವುದು
ಚಿತ್ರದ ಪ್ಲಸ್ ಪಾಯಿಂಟ್. ಪ್ರಿನ್ಸಿಪಾಲ್ ಪಾತ್ರವಂತೂ ಕಣ್ಣಿಗೆ ಹಬ್ಬ!
ಕಾಲೇಜಿನ
ಜೀವನದ ಜೊತೆಯೇ, ಕಾಲೇಜಿನ ನಂತರದ ಜೀವನದ ಕತೆಯನ್ನು ನಿರ್ದೇಶಕರು ಚಿತ್ರದಲ್ಲಿ ಹೇಳಿದ್ದು ಪುಡ್
ಡೆಲಿವರಿ ಹುಡುಗ-ಹುಡುಗಿಯರ ಬದುಕಿನ ಚಿತ್ರಣವನ್ನು ಕೂಡ ನೀಡಿದ್ದಾರೆ. ಬಸವಣ್ಣನವರ ʼಕಳಬೇಡ ಕೊಲಬೇಡʼ
ವಚನ ಚಿತ್ರದಲ್ಲಿ ಇದ್ದು ಈ ಚಿತ್ರದ ಆಶಯವನ್ನೇ ಬಿಂಬಿಸಿದಂತಿದೆ. ಸೋತವನು ಸಾಯಬಾರದು, ಗೆಲುವಿನ ದಿನಕ್ಕೆ
ಹಂಬಲಿಸಬೇಕು ಎನ್ನುವ ಒಂದು ಮೆಸೇಜನ್ನು ಕೂಡ ನಿರ್ದೇಶಕರು ನೀಡಿದ್ದಾರೆ.
ಅಜನೀಶ್
ಲೋಕನಾಥ್ ಅವರ ಸಂಗೀತದ ಜೊತೆಗೆ ಇತರ ತಂತ್ರಜ್ಞರ ಕೆಲಸಗಳು ಅಚ್ಚುಕಟ್ಟಾಗಿವೆ. ಇಡೀ ಚಿತ್ರವನ್ನು
ಡಾ. ರಾಜ್ ಮತ್ತು ಅಪ್ಪು ಅವರ ತಂದೆ ಮಗನ ಸಂಬಂಧಕ್ಕೆ ಅರ್ಪಿಸಲಾಗಿದೆ.
ಮುಂದಿನ
ದಿನಗಳಲ್ಲಿ ʼಯುವ ರಾಜ್‌ಕುಮಾರ್ʼ ಅವರ ನಟನೆಯಲ್ಲಿ ಮತ್ತಷ್ಟು ಪವರ್‌ಪುಲ್ ಸಿನಿಮಾಗಳು ಬರಲಿ ಮತ್ತು
ನಿರ್ದೇಶಕ ಸಂತೋಷ್ ಆನಂದ್‌ರಾಮ್ ತಮಗೆ ತಾವೇ ಹಾಕಿಕೊಂಡಿರುವ ಇತಿ-ಮಿತಿಗಳ ಹೊರಗೆ ಬಂದು ಮತ್ತಷ್ಟು
ಸಿನಿಮಾಗಳನ್ನು ನೀಡಲಿ ಎಂದು ಆಶಿಸುತ್ತೇನೆ.
ಪ್ರೀತಿಯಿಂದ,
-
ಗುಬ್ಬಚ್ಚಿ ಸತೀಶ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ