ಜನನಿಬಿಡ
ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ
ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹಾಲು, ತರಕಾರಿ ತರಲು ಹೋಗುವವರು ಹೋಗುತ್ತಿದ್ದರು.
ಶಾಲೆ, ಕಾಲೇಜಿಗೆ ಮತ್ತು ಆಫೀಸಿಗೆ ಹೋಗುವವರು ಕೂಡ ಅದಾಗಲೇ ಮನೆಯನ್ನು ಬಿಟ್ಟಿದ್ದರು.
ರಾತ್ರಿ
ಕುಡಿದು ಅಲ್ಲಿಯೇ ರಸ್ತೆ ಪಕ್ಕ ಮಲಗಿದ್ದವನೊಬ್ಬನಿಗೆ ಬೆಳಗ್ಗೆ ಎಚ್ಚರವಾಗಿ ತಾನು ಎಲ್ಲಿಗೆ ಬಂದಿದ್ದೇನೆ
ಎಂದುಕೊಳ್ಳುತ್ತಲೇ ನಿಧಾನವಾಗಿ ಎದ್ದು ರಸ್ತೆಗೆ ಇಳಿದ. ತಟ್ಟಾಡುತ್ತಲೇ ಎರಡೆಜ್ಜೆ ಇಟ್ಟವನು ಮೂರನೆಯ
ಹೆಜ್ಜೆಯನ್ನು ಅಲ್ಲೇ ಮಲಗಿದ್ದ ನಾಯಿಯ ಬಾಲದ ಮೇಲಿಟ್ಟ. ನೋವಿನಿಂದ ದಿಕ್ಕೆಟ್ಟ ನಾಯಿ ಇದ್ದಕ್ಕಿದ್ದಂತೆ
ಎದ್ದು ರಸ್ತೆಯಲ್ಲಿ ಬರುತ್ತಿದ್ದ ಬೈಕಿಗೆ ಅಡ್ಡವಾಯಿತು. ಬೈಕಿನ ಮೇಲಿದ್ದವ ಎಷ್ಟೇ ಪ್ರಯತ್ನಿಸಿದರೂ
ತನ್ನ ಹಣೆಬರಹವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಹಾಕಿದ್ದ ಬ್ರೇಕ್ ಆತನನ್ನು ರಸ್ತೆಗೆ ಕೆಡವಿತ್ತು.
ಕ್ಷಣಾರ್ಧದಲ್ಲಿ ಆತ ರಸ್ತೆಯ ಮೇಲಿದ್ದ. ಹೆಲ್ಮೆಟ್ ಹಾಕಿದ್ದರಿಂದ ತಲೆಗೇನೂ ಪೆಟ್ಟಾಗಿರಲಿಲ್ಲ. ಆದರೆ,
ಕೈ ಸ್ವಲ್ಪ ತರಚಿತ್ತು. ಆದ ಆಘಾತದಿಂದ ಆತನಿಗೆ ವಿಪರೀತ ಭಯವಾಗಿತ್ತು. ಆ ಕೂಡಲೇ ನೆರೆದ ಜನ ಆತನನ್ನು
ಎತ್ತಿ ಪಕ್ಕಕ್ಕೆ ಕೂರಿಸಿ ಸಮಾಧಾನ ಹೇಳುತ್ತಿದ್ದರು. ಮತ್ತ್ಯಾರೋ ಆತನ ಬೈಕನ್ನು ಎತ್ತಿ ರಸ್ತೆಯ ಮಗ್ಗುಲಿಗೆ
ನಿಲ್ಲಿಸಿ ಅದಕ್ಕೇ ಹೆಚ್ಚೇನು ತೊಂದರೆಯಾಗಿಲ್ಲ ಎಂದು ಖಚಿತ ಪಡಿಸಿದರು.
ಆದರೆ,
ಬಿದ್ದವನಿಗೆ ಯಾರೂ ನೀರು ಕೊಟ್ಟು ಸಂತೈಸುತ್ತಿಲ್ಲ. ವಾಕಿಂಗ್ ಮುಗಿಸಿ ಬರುತ್ತಿದ್ದವರ ಕೈಯಲ್ಲಿ
ಅರ್ಧರ್ಧ ನೀರಿದ್ದ ಬಾಟಲ್‌ಗಳಿವೆ! ಶಾಲಾ-ಕಾಲೇಜ್-ಆಫೀಸಿಗೆ ಹೋಗುತ್ತಿರುವವರ ಬಳಿ ಪೂರ್ತಿ ತುಂಬಿದ
ನೀರಿನ ಬಾಟಲ್ಗಳಿವೆ!! ಮನೆಗೆ ಕುಡಿಯುವ ನೀರನ್ನು ದೊಡ್ಡ ಕ್ಯಾನ್‌ಗಳಲ್ಲಿ ತೆಗೆದುಕೊಂಡು ಹೋಗುವವರು
ನೋಡುತ್ತಲೇ ಇದ್ದಾರೆ ಹೊರತು ಬಿದ್ದ ಬೈಕ್ ಸವಾರನಿಗೆ ನೀರು ಕೊಡಲು ಮನಸ್ಸು ಮಾಡುತ್ತಿಲ್ಲ!!! ಎಲ್ಲರೂ
ನಾಯಿಯನ್ನು ಶಪಿಸುತ್ತಾ, ಬಿದ್ದವನ ಹಣೆಬರಹ-ಗ್ರಹಚಾರ ಸರಿಯಿಲ್ಲ ಎಂದು ಗೊಣಗುತ್ತಿರುವವರೇ. ಸದ್ಯ
ಹೆಚ್ಚೇನೂ ಆಗಿಲ್ಲ ಎಂದುಕೊಳ್ಳುತ್ತಾ ಕೆಲವರು ಅಲ್ಲಿಂದ ತೆರಳುತ್ತಿದ್ದರೆ, ಕೆಲವರಂತೂ ತಮಗೂ ಇದಕ್ಕೂ
ಸಂಬಂಧವೇ ಇಲ್ಲವೆಂಬಂತೆ ನಿರ್ಗಮಿಸುವವರೇ ಸರಿ. ಯಾರಾದರೂ ಒಂದು ಗುಟುಕು ನೀರು ಕೊಡುವರೇ ಎಂದು ಆತ
ಕಾದದ್ದೇ ಬಂತು.
ಎಷ್ಟು
ಹೊತ್ತಾದರೂ ಬಿದ್ದವನಿಗೆ ಯಾರೂ ನೀರು ಕೊಡಲಿಲ್ಲ. ಆತ ತನಗಾದ ಆಘಾತದಿಂದ ಹೊರಬರಲಾಗುತ್ತಿಲ್ಲ. ಇದನ್ನೆಲ್ಲಾ
ಆಗ ತಾನೇ ಜ್ಞಾನ ಬಂದಂತೆ ಗಮನಿಸುತ್ತಿದ್ದ ಕುಡುಕನಿಗೆ ಈ ಅಪಘಾತಕ್ಕೆ ಪರೋಕ್ಷವಾಗಿ ತಾನೇ ಕಾರಣ ಎಂಬುದು
ನಿಧಾನವಾಗಿ ಮನದಟ್ಟಾಯಿತು. ಅವನ ಕಣ್ಣುಗಳಿಗೆ ತನ್ನ ಸುತ್ತಲೂ ಅಷ್ಟೇಲ್ಲಾ ನೀರಿನ ಮೂಲಗಳು ಕಂಡರೂ
ಯಾರೂ ಕೂಡ ಬಿದ್ದವನಿಗೆ ನೀರು ಕೊಡದಿದ್ದದ್ದು ಗಮನಕ್ಕೆ ಬಂತು. ತಾನು ರಾತ್ರಿ ಕುಡಿದಾಗಲು ನೀರು ಕಡಿಮೆ
ಬೆರೆಸಿಯೇ ಕುಡಿದದ್ದು ನೆನೆದು ನಗು ಬಂತು. ಕೂಡಲೇ ತನ್ನ ಜೇಬಿನಿಂದ ಇಪ್ಪತ್ತು ರೂಪಾಯಿ ನೋಟೊಂದನ್ನು
ತೆಗೆದು ʼಯಾರಾದರೂ ಬೇಗ ಒಂದು ಲೀಟರ್ ಬಿಸ್ಲೆರಿ ತಂದು, ಈತನಿಗೆ ಕೊಡಿʼ ಎಂದು ಅಂಗಲಾಚಿದ.
ಬಿದ್ದವನಿಗೆ
ಕಡೆಗೂ ಸದ್ಯದಲ್ಲಿಯೇ ನೀರು ಸಿಗುತ್ತದೆ ಎಂದು ತುಸು ನಿರಾಳವಾಯಿತು. ಅವನ ಬೈಕಿಗೆ ಅಡ್ಡ ಬಂದಿದ್ದ
ನಾಯಿ ಅದೆಲ್ಲಿತ್ತೋ ಏನೋ ರಸ್ತೆಯಲ್ಲಿ ಜೋರಾಗಿ ಹೋಗುತ್ತಿದ್ದ ಮತ್ತೊಂದು ಬೈಕನ್ನು ಅಟ್ಟಿಸಿಕೊಂಡು
ಹೋಯಿತು.
- ಗುಬ್ಬಚ್ಚಿ ಸತೀಶ್.
Interesting story
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್
ಅಳಿಸಿ