ಶುಕ್ರವಾರ, ಫೆಬ್ರವರಿ 23, 2024

ನೈಜ ಘಟನೆಗಳನ್ನಾಧರಿಸಿದ “ಆರ್ಟಿಕಲ್‌ 370” ಸಿನಿಮಾ

 ನೈಜ ಘಟನೆಗಳನ್ನಾಧರಿಸಿದ “ಆರ್ಟಿಕಲ್‌ 370” ಸಿನಿಮಾ



“ಆರ್ಟಿಕಲ್‌ 370” ಹಿಂದಿ ಸಿನಿಮಾ ನಮ್ಮ ದೇಶದ ಸ್ವಾತಂತ್ರ್ಯದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಲಾಗಿದ್ದ ಸಂವಿಧಾನದ ಆರ್ಟಿಕಲ್‌ 370ನ್ನು ಆಗಸ್ಟ್‌ 5, 2019ರಂದು ಭಾರತ ಸರ್ಕಾರ ರದ್ದುಪಡಿಸಿದ ಹಿನ್ನೆಲೆಯ ಮತ್ತು ಮುನ್ನೆಲೆಯ ನೈಜಘಟನೆಗಳನ್ನಾಧರಿಸಿದೆ. ಇತಿಹಾಸದ ತಪ್ಪನ್ನು ಇತಿಹಾಸ ನಿರ್ಮಾಣದ ಮೂಲಕವೇ ಸರಿಪಡಿಸಿಬೇಕು ಎಂಬ ಆಶಯ ಸಿನಿಮಾದ್ದಾಗಿದೆ. Uri – The Surgical Strike ಸಿನಿಮಾವನ್ನು ನಿರ್ದೇಶಿಸಿ ದೇಶದ ಗಮನ ಸೆಳೆದು, ಈ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದ ಆದಿತ್ಯ ಸುಹಾಸ್‌ ಜಂಭಾಲೆ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ದೇಶದ ಇತಿಹಾಸದ ಪ್ರಮುಖ ಚಿತ್ರಣವನ್ನು ಬಹುಮುಖ್ಯವಾಗಿ NIA, PMO ಅಧಿಕಾರಿಗಳ ಮತ್ತು CRPF ಯೋಧರ ದೃಷ್ಠಿಯಿಂದ ಕಟ್ಟಿಕೊಡಲಾಗಿದೆ. ಗುಪ್ತಚಾರಿಣಿ, ನಂತರ NIA ಅಧಿಕಾರಿ ಜೂನಿ ಅಕ್ಸರ್‌ ಆಗಿ ಯಾಮಿ ಗೌತಮ್‌, PMO ಕಾರ್ಯದರ್ಶಿ ರಾಜೇಶ್ವರಿ ಸ್ವಾಮಿನಾಥನ್‌ ಆಗಿ ಪ್ರಿಯಾಮಣಿ ಮತ್ತು CRPF ಯೋಧ ಯಶ್‌ ಚೌಹಾಣ್‌ ಆಗಿ ವೈಭವ್‌ ತತ್ವವಾಡಿ ಗಮನ ಸೆಳೆಯುತ್ತಾರೆ. ಪ್ರಧಾನಮಂತ್ರಿಗಳಾಗಿ ಅರುಣ್‌ ಗೋವಿಲ್‌ ಇದ್ದಾರೆ.

ಈ ಸಿನಿಮಾದಲ್ಲಿ ಹಲವು ಅಧ್ಯಾಯಗಳ ಮೂಲಕ ಆರ್ಟಿಕಲ್‌ 370ರ ಅಡಿ ಕಣಿವೆ ಪ್ರದೇಶದಲ್ಲಿ ನಡೆಯುತ್ತಿದ್ದ ರಾಜಕೀಯ, ಸಾಮಾಜಿಕ ಮತ್ತು ಹುಸಿ ಹೋರಾಟದ ಚಿತ್ರಣವನ್ನು ನೀಡುತ್ತಲೇ ಅಲ್ಲಿ ನಡೆಯುತ್ತಿದ್ದ ಗಲಭೆ, ಹಿಂಸಾಚಾರ, ಮೋಸ ಮತ್ತು ಅನೈತಿಕ ವ್ಯಾಪಾರಗಳ ಚಿತ್ರಣವನ್ನು ನೀಡಲಾಗಿದೆ. ಯಾವ ಅಮಾಯಕರ ಬಲಿಯನ್ನು ಪಡೆಯದೇ ಯಶಸ್ವಿಯಾಗಿ ಹೇಗೆ “ಆರ್ಟಿಕಲ್‌ 370” ರ ರದ್ದಿನ ಆಪರೇಷನ್‌ ನಡೆಸಲಾಯಿತು ಎಂಬುದನ್ನು ಸಶಕ್ತವಾಗಿ ತೋರಿಸಲಾಗಿದೆ. ಸಂವಿಧಾನಕ್ಕೆ ಚ್ಯುತಿ ಬರದಂತೆ ಈ ವಿಧೇಯಕವನ್ನು ರದ್ದುಪಡಿಸಿದ ಚಾಕಚಕ್ಯತೆಯನ್ನು ತೆರೆಯಮೇಲೆ ನೋಡಿದರೆ ಚೆನ್ನ. ಹಿನ್ನೆಲೆಯ ಸಂಗೀತ ದೃಶ್ಯಗಳಿಗೆ ಅನುಗುಣವಾಗಿದ್ದು ಪ್ರೇಕ್ಷಕನನ್ನು ಕಟ್ಟಿಹಾಕುತ್ತದೆ. 70 ವರ್ಷಗಳಿಂದಲೂ ಕಾಶ್ಮೀರದ ಪ್ರಜೆಗಳು, ಅಧಿಕಾರಿಗಳು ಬಯಸಿದ್ದ ಬದುಕನ್ನು ನೀಡುವಲ್ಲಿ ಈ ವಿಧೇಯಕದ ರದ್ದು ಹೇಗೆ ಸಾಧ್ಯವಾಗಿಸಿದೆ ಎಂಬುದನ್ನು ಕೂಡ ಸಿನಿಮಾದ ಅಂತ್ಯದಲ್ಲಿ ತೋರಿಸಲಾಗಿದೆ.

ದೇಶದ ಪ್ರಜೆಗಳ ಹಿತರಕ್ಷಣೆಯ ದೃಷ್ಟಿಯಿಂದ ಹಾಗೂ ಜಮ್ಮು ಮತ್ತು ಕಾಶ್ಮೀರ ಎಂದಿದ್ದರೂ ದೇಶದ ಅವಿಭಾಜ್ಯ ಅಂಗ ಎಂದು ಸಾಬೀತುಪಡಿಸಿದ ಆರ್ಟಿಕಲ್‌ 370ರ ರದ್ದಿನ ಈ ಸಿನಿಮಾ ಬಾಲಿವುಡ್ಡಿನ ಅಂಗಳದಿಂದ ಬಂದಿದ್ದು, ಆಸಕ್ತರು ಒಮ್ಮೆ ನೋಡಬಹುದಾಗಿದೆ.‌ ಈ ಸಿನಿಮಾ ಕುರಿತು ಖುದ್ದು ಪ್ರಧಾನಮಂತ್ರಿಗಳೇ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಅಧಿಕಾರವನ್ನು ಆರ್ಟಿಕಲ್‌ 370 ರದ್ದು ಪಡಿಸುವ ಮೂಲಕ ಹೇಗೆ ತೆಗೆಯಲಾಯಿತು ಎಂಬುದನ್ನು ಹೇಳುತ್ತದೆ ಎಂದಿದ್ದಾರೆ. ನಿಮಗೂ ಈ ವಿಷಯ ಕುರಿತು ಆಸಕ್ತಿಯಿದ್ದರೆ ಕೂಡಲೇ ಈ ಸಿನಿಮಾ ನೋಡಿ. ಅಂದಹಾಗೆ ಈ ಸಿನಿಮಾ ಕಣಿವೆ ಪ್ರದೇಶದಲ್ಲೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ…

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮತ್ತೊಂದು ಪ್ರಮುಖ ಕಥೆ, ಕಾವ್ಯ ಸ್ಪರ್ಧೆ...

ಸ್ನೇಹಿತರೇ, ನನಗೆ ಮತ್ತೊಂದು ಪ್ರಮುಖ ಕಥೆ, ಕಾವ್ಯ ಸ್ಪರ್ಧೆಯ ವಿವರಗಳು ಲಭ್ಯವಾಗಿದ್ದು, ಇದನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.  ವಿವರಗಳಿಗೆ... ಶುಭವಾಗಲಿ, -...