ಗುರುವಾರ, ಡಿಸೆಂಬರ್ 28, 2023

1975ರಲ್ಲೇ ತುಮಕೂರಿನಲ್ಲಿ ಡ್ರಗ್ಸ್‌ ಸಿಗ್ತಾ ಇತ್ತಾ…!?


ಇತ್ತೀಚಿಗೆ ತುಮಕೂರಿನ ಕೆಲವು ಕಾಲೇಜುಗಳ ಸಮೀಪ ಡ್ರಗ್ಸ್‌ ಮಾರಾಟವಾಗುತ್ತಿತ್ತು ಎಂಬ ಸುದ್ಧಿಯೊಂದು ಪ್ರಕಟವಾಗಿ ಸದ್ದಿಲ್ಲದೆ ಮರೆಯಾಗಿ ಹೋಯಿತು. ಆದರೆ, ನಗರದ ಕೆಲವು ನಾಗರೀಕರ ಗುಸುಗುಸು ಪಿಸುಪಿಸು ಮಾತುಗಳಲ್ಲಿ ಈ ಸುದ್ಧಿ ಇನ್ನೂ ಕೇಳಿ ಬರುತ್ತಲೇ ಇದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲೂ ಕೂಡ ರಾಜ್ಯದ, ದೇಶದ ಕೆಲವು ಭಾಗಗಳಲ್ಲಿ ಡ್ರಗ್ಸ್‌ ಕುರಿತ ಸಂಬಂಧಿತ ಸುದ್ಧಿಗಳು ಪ್ರಕಟವಾಗುತ್ತಲೇ ಇರುತ್ತವೆ. ಸದ್ಧಿಲ್ಲದೆ ಡ್ರಗ್ಸ್‌ ಮಾರಾಟ ನಡೆಯುತ್ತಲೇ ಇರುತ್ತದೆ. ಅಮಾಯಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ವ್ಯಸನಕ್ಕೆ ಬಲಿಯಾಗುತ್ತಲೇ ಇರುತ್ತಾರೆ. ಧೂಮಪಾನ, ಮದ್ಯಪಾನದ ಚಟಗಳಂತೆ ಡ್ರಗ್ಸ್‌ ಚಟಕ್ಕೆ ಬಲಿಯಾಗುವವರನ್ನು ಈ ವ್ಯಸನದಿಂದ ಸುಲಭವಾಗಿ ಹೊರತರಲು ಆಗುವುದಿಲ್ಲ. ಇದಕ್ಕೆ ಮದ್ದೆಂದರೆ ಬಲಿಯಾಗದಿರುವುದು ಮಾತ್ರ. Precaution is better than Cure.

ಈ ಪೀಠಿಕೆ ಯಾಕೆ ಹಾಕಿದೆನೆಂದರೇ, ಇತ್ತೀಚಿಗೆ ನನ್ನ ಯೂಟ್ಯೂಬ್‌ ಚಾನೆಲ್ಲಿನ ಸಂದರ್ಶನಕ್ಕಾಗಿ ತುಮಕೂರಿನ ಹಿರಿಯರಾದ ಖ್ಯಾತ ವೈದ್ಯರಾದ ಡಾ. ಕೆ ರಾಜಶೇಖರ್‌ ಅವರನ್ನು ಭೇಟಿಯಾಗಿದ್ದೆ. ಸಾಹಿತಿಯೂ ಆಗಿರುವ ಅವರು ತಮ್ಮ ಎರಡು ಪುಸ್ತಕಗಳನ್ನು ನನಗೆ ನೀಡಿದರು. ಆ ಎರಡು ಪುಸ್ತಕಗಳಲ್ಲಿ ಒಂದಾದ  “ವೃತ್ತಿ ಜೀವನ: ತೆರೆದ ಮನ – ವೈದ್ಯವೃತ್ತಿ ಜೀವನದ ಅನುಭವ ಕಥನ” ಓದುವಾಗ ಹಲವು ಕುತೂಹಲಕರ ವಿಷಯಗಳು ನನ್ನ ಗಮನ ಸೆಳೆದವು. ಹಲವು ಅಧ್ಯಾಯಗಳಲ್ಲಿ ಡಾ. ರಾಜಶೇಖರ್‌ ಅವರ ಜೀವನ, ಅನುಭವಗಳು, ವಿಶ್ರಾಂತ ಜೀವನ ಅಕ್ಷರರೂಪದಲ್ಲಿ ಇಲ್ಲಿ ಹರಡಿಕೊಂಡಿವೆ. ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ 1975ರ ಇಸವಿಯ ಅವಧಿಯಲ್ಲಿ ಸೇವೆಸಲ್ಲಿಸುತ್ತಿದ್ದ ಡಾ. ಕೆ. ರಾಜಶೇಖರ್‌ ಅವರ ಬಳಿಗೆ ಸುಮಾರು 21 ವರ್ಷದ ಯುವಕನೊಬ್ಬ ಬಂದು, ಇವರ ಬಳಿ ಖಾಸಗಿಯಾಗಿ ಮಾತನಾಡಲು ಇಚ್ಛಿಸುತ್ತಾನೆ. ಇವರು ಒಪ್ಪಿದ ಬಳಿಕ ಜೇಬಿನಲ್ಲಿದ್ದ ವಸ್ತುವೊಂದನ್ನು ತೋರಿಸುತ್ತಾನೆ. ಅದನ್ನು ನೋಡಿದ ಇವರಿಗೆ ಅದು ಬ್ರೌನ್‌ ಶುಗರ್‌ ಎಂದು ತಿಳಿದು ಬಂದಿರುವ ರೋಗಿ ಡ್ರಗ್‌ ಅಡಿಕ್ಟ್‌ ಎಂದು ಗೊತ್ತಾಗುತ್ತದೆ. ತುಮಕೂರಿನ ಹೆಸರಾಂತ ಇಂಜೀನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಇವನು ಎಂದು ಇವರಿಗೆ ತಿಳಿದು ಹುಡುಗನ ಪೋಷಕರಿಗೆ ವಿಷಯ ತಿಳಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸುತ್ತಾರೆ. ಆದರೆ, ಒಂದು ವಾರದ ಬಳಿಕ ಆ ಹುಡುಗನ ಪರಿಸ್ಥಿತಿ ವಿಪರೀತಕ್ಕೆ ಹೋಗಿ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಡಾ. ಕೆ. ರಾಜಶೇಖರ್‌ ಅವರು ಈ ಪುಸ್ತಕ ಬರೆಯವ ಹೊತ್ತಿಗೆ ಅಂದರೆ 2020ರ ಸಮಯದಲ್ಲೂ ತುಮಕೂರಿನಲ್ಲಿ ಡ್ರಗ್ಸ್‌ ವಿಚಾರ ಇತ್ತು ಅಂತಲೇ ಈ ನೆನಪನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಂತಹ ಹಲವು ವಿಚಾರಗಳು ಈ ಪುಸ್ತಕದಲ್ಲಿರುವುದು ವಿಶೇಷ. ಈ ಪುಸ್ತಕವನ್ನು ತುಮಕೂರಿನ ಶಿಂಷಾ ಲಿಟರರಿ ಅಕಾಡೆಮಿ ಪ್ರಕಟಿಸಿದೆ.

ಇನ್ನು ಇತ್ತೀಚಿಗೆ ನಾಮಕರಣಗೊಂಡ ರಾಕಿಂಗ್‌ ಸ್ಟಾರ್‌ ಯಶ್‌ ಅವರ 19ನೇ ಸಿನಿಮಾ “ಟಾಕ್ಸಿಕ್”‌ ಕೂಡ ಡ್ರಗ್ಸ್‌ ಮಾಫಿಯಾ ಸುತ್ತಲೇ ಇದೆಯಂತೆ. ಸರ್ಕಾರಗಳು ಕಾನೂನುಗಳನ್ನು ಮಾಡುತ್ತವೆ. ಡ್ರಗ್ಸ್‌ ತಡೆಯೋಣ ಎಂದು ಜಾಹೀರಾತು ನೀಡುತ್ತವೆ. ಆದರೂ ಡ್ರಗ್ಸ್‌ ಹೊಸಹೊಸ ರೂಪದಲ್ಲಿ ಜನರಿಗೆ ಸಿಗುತ್ತಲೇ ಇರುತ್ತದೆ. ಅದರಲ್ಲೂ ಯುವಜನಾಂಗದವರು, ವಿದ್ಯಾರ್ಥಿಗಳು ಬಲಿಯಾಗುತ್ತಲೇ ಇದ್ದಾರೆ. ನಿಮ್ಮ ಮಕ್ಕಳ ಕೈಯಲ್ಲಿ ವಿಚಿತ್ರವಾದ ಚಾಕಲೇಟ್‌ ಅಥವಾ ಅಪರೂಪದ ತಿಂಡಿ-ತಿನಿಸುಗಳು ಓಡಾಡುತ್ತಿದ್ದರೆ ಒಮ್ಮೆ ಎಚ್ಚರಿಕೆಯಿಂದ ಗಮನಿಸಿ…

ಇನ್ನು ಡಾ. ಕೆ ರಾಜಶೇಖರ್‌ “ವೃತ್ತಿ ಜೀವನ: ತೆರೆದ ಮನ – ವೈದ್ಯವೃತ್ತಿ ಜೀವನದ ಅನುಭವ ಕಥನ” ಪುಸ್ತಕ ನಿಮಗೆ ಬೇಕಿದ್ದರೆ ಶಿಂಷಾ ಲಿಟರಲಿ ಅಕಾಡೆಮಿಯವರ ಮೊಬೈಲ್‌ 9845157308 ಸಂಪರ್ಕಿಸಬಹುದು.

 


ಭಾನುವಾರ, ಡಿಸೆಂಬರ್ 24, 2023

ʼಕಾಟೇರʼ ಸಿನಿಮಾದಲ್ಲಿ ತುಮಕೂರಿನ ಕವಿ, ರಂಗಕರ್ಮಿ, ಖ್ಯಾತ ಯೂಟ್ಯೂಬರ್…‌


 

ಚಾಲೆಂಜಿಂಗ್‌ ಸ್ಟಾರ್‌, ಡಿ-ಬಾಸ್‌ ದರ್ಶನ್‌ ಅವರು ನಾಯಕನಾಗಿ ಅಭಿನಯಿಸಿರುವ “ಕಾಟೇರ” ಸಿನಿಮಾ ಇದೇ ತಿಂಗಳ 29ರಂದು ಬಿಡುಗಡೆಯಾಗುತ್ತಿದೆ. ನಿರ್ದೇಶಕ ತರುಣ್‌ ಕಿಶೋರ್‌ ಸುಧೀರ್‌ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದಾರೆ. ನಾಯಕಿಯಾಗಿ ಕನ್ನಡ ಚಲನಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಮತ್ತು ಕೋಟಿ ನಿರ್ಮಾಪಕರೆಂದೇ ಖ್ಯಾತರಾಗಿದ್ದ ದಿವಂಗತ ರಾಮು ಅವರ ಮಗಳು ಆರಾಧನಾ ರಾಮ್‌ ಅಭಿನಯಿಸುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾವು ಹೌದು.

ದರ್ಶನ್‌ ಅವರ 56ನೇ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ, ಸುಧಾಕರ್‌ ಎಸ್.‌ ರಾಜ್‌ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಅವರ ಸಂಕಲನವಿದೆ. 70ರ ದಶಕದ ನೈಜ ಘಟನೆಯನ್ನಾಧಾರಿಸಿದ ರೈತರ ಚಿತ್ರವೆಂದು ಹೇಳಲಾಗುತ್ತಿರುವ “ಕಾಟೇರ”ದಲ್ಲಿ ತೆಲುಗಿನ ಖ್ಯಾತ ನಟರಾದ ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿದ್ದಾರೆ. ಜೊತೆಗೆ ʼಶ್!‌ʼ ಖ್ಯಾತಿಯ ಕುಮಾರ್‌ ಗೋವಿಂದ್‌, ಅವಿನಾಶ್‌, ಶ್ರುತಿ, ಬಿರಾದಾರ್‌ ಇನ್ನು ಮುಂತಾದ ಘಟಾನುಘಟಿ ನಟನಟಿಯರು ಅಭಿನಯಿಸಿದ್ದಾರೆ.



ಇವರೆಲ್ಲರ ಜೊತೆಗೆ ತುಮಕೂರಿನ ಜಿಲ್ಲೆಯ ಸಿರಾ ತಾಲ್ಲೂಕಿನ ರಂಗನಟರಾದ ಗೋಮಾರದಹಳ್ಳಿ ಮಂಜುನಾಥ್‌ ಅವರು ನಟಿಸಿರುವುದು ಮಂಜುನಾಥ್‌ ಅವರ ಅಭಿಮಾನಿಗಳಿಗೆ ಖುಷಿಯನ್ನು ತಂದಿದೆ. ಗೋಮಾರದಹಳ್ಳಿ ಮಂಜುನಾಥ್‌ ಅವರು ಕನ್ನಡದ ಖ್ಯಾತ ಕತೆಗಾರರಾದ ಜ್ಞಾನಪೀಠ ಪುರಸ್ಕೃತ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ ಕತೆಗಳನ್ನು ರಂಗಭೂಮಿಯಲ್ಲಿ ಏಕವ್ಯಕ್ತಿ ಪ್ರದರ್ಶನದ ಮೂಲಕ ಕೋಲನ್ನು ಕುಟ್ಟುತ್ತಾ ಪ್ರಸ್ತುತಪಡಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ! ಕವಿಯೂ ಆಗಿರುವ ಮಂಜುನಾಥ್‌ ಅವರ ಕವನಗಳು ಕನ್ನಡದ ಖ್ಯಾತ ಕವಿಗಳಾದ ಜಯಂತ ಕಾಯ್ಕಿಣಿ ಅವರ ಮುನ್ನುಡಿಯೊಂದಿಗೆ ಪ್ರಕಟವಾಗಲು ಕೂಡ ಹವಣಿಸುತ್ತಿವೆ. ಇವರ ಈ ಪ್ರತಿಭೆಗಳಿಗೆಲ್ಲಾ ಕಳಶವಿಟ್ಟಂತೆ ತಮ್ಮ ಕಂಚಿನ ಕಂಠದ ಮೂಲಕ ನಿರೂಪಿಸುವ  ಇವರ ಯೂಟ್ಯೂಬ್‌ ಚಾನೆಲ್‌ “ನೇಟಿವ್‌ ನೆಸ್ಟ್‌ (Native Nest)” ನೋಡುವುದೇ ಚೆಂದ.



ಇಷ್ಟೆಲ್ಲಾ ಪ್ರತಿಭೆಯ ಮಂಜುನಾಥ್‌ ಅವರು ಈ ಹಿಂದೆ ‌ಖ್ಯಾತ ನಟ ಶರಣ್‌ ಅವರ “ಗುರುಶಿಷ್ಯರು” ಸಿನಿಮಾದಲ್ಲಿ, ಮತ್ತು ಇನ್ನು ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರೀಗ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಹೊಸ ಸಿನಿಮಾ “ಕಾಟೇರ” ದಲ್ಲಿ ಅಭಿನಯಿಸಿದ್ದು, ಈ ಚಿತ್ರವು ಡಿಸೆಂಬರ್‌ 29ಕ್ಕೆ ಅದ್ದೂರಿ ಬಿಡುಗಡೆಯಾಗುತ್ತಿದೆ. “ಕಾಟೇರ” ಸಿನಿಮಾವು ಯಶಸ್ವಿಯಾಗಲಿ, ಈ ಮೂಲಕ ಮಂಜುನಾಥ್‌ ಅವರಿಗೆ ಮತ್ತಷ್ಟು ಅವಕಾಶಗಳು ಸಿಗಲಿ ಎಂದು ಹಾರೈಸುತ್ತೇನೆ.

ಪ್ರೀತಿಯಿಂದ,

-        - ಗುಬ್ಬಚ್ಚಿ ಸತೀಶ್.

ಶನಿವಾರ, ಡಿಸೆಂಬರ್ 23, 2023

ʼಜೋಗಿʼಯವರನ್ನು ಓದಿದವರು ʼಲಂಕೇಶʼರನ್ನೂ ಓದ್ತಾರ!?

 

ಒಂದು ರಾತ್ರಿ ಊಟದ ಸಮಯದಲ್ಲಿ ಈಟಿವಿ ನ್ಯೂಸ್‌ ನೋಡುತ್ತಿದ್ದಾಗ ʼಹಾಯ್‌ ಬೆಂಗಳೂರುʼ ವಾರಪತ್ರಿಕೆಯಲ್ಲಿ ʼಜಾನಕಿ ಕಾಲಂʼ ಬರೆಯುತ್ತಿರುವವರು ಜೋಗಿ ಅಂದರೆ ಜ್ಯೋತಿಯ ಗಂಡ ಗಿರೀಶ್‌ ಎಂದು ಗಿರೀಶ್‌ ರಾವ್‌ ಹತ್ವಾರ್ ಅವರನ್ನು ಪರಿಚಯಿಸಿದಾಗ ನನಗೆ ಶಾಕ್‌ ಆಗಿದ್ದಂತೂ ಸತ್ಯ. ಕೂಡಲೇ ಊರಿನಲ್ಲಿದ್ದ ನನ್ನ ಗೆಳೆಯರಿಗೆ ಫೋನ್‌ ಮಾಡಿ ವಿಷಯ ತಿಳಿಸಿದೆ. ಅವರಿಗೂ ಶಾಕ್‌ ಆಯಿತು. ಅಲ್ಲಿಯವರೆಗೂ ಜಾನಕಿ ಎಂದರೆ ಬೆಂಗಳೂರಿನ ವಿವಿಯಲ್ಲಿ ಅಧ್ಯಾಪಕಿಯಿರಬಹುದು ಎಂದು ಭ್ರಮಿಸಿದ್ದ ಸಂಗತಿಯೇ ನಮ್ಮ ಶಾಕಿಗೆ ಕಾರಣವಾಗಿತ್ತು. ಕನ್ನಡ ಸಾಹಿತ್ಯದ ಬಗ್ಗೆ, ಬೆಂಗಳೂರಿನ ಬಗ್ಗೆ, ಆ ಕಾಲಕ್ಕೇ ಓದುಗರ ನಾಡಿ ಹಿಡಿದಂತೆ ಬರೆಯುತ್ತಿದ್ದವರು ಕನ್ನಡ ಉಪನ್ಯಾಸಕರೇ ಇರಬಹುದೆಂಬುದು ನಮ್ಮ ಬಹುಕಾಲದ ನಂಬಿಕೆಯಾಗಿತ್ತು. ರವಿ ಬೆಳಗೆರೆ ಅವರ ʼಹಾಯ್‌ ಬೆಂಗಳೂರ್‌ʼ ವಾರಪತ್ರಿಕೆಯಂತೆ, ಲಂಕೇಶರ ʼಲಂಕೇಶ್‌ ಪತ್ರಿಕೆʼಯನ್ನು ಓದುತ್ತಿದ್ದ ನಮಗೆ ಥೇಟ್‌ ಲಂಕೇಶರಂತೇ ಜಾನಕಿ ಅವರೂ ಉಪನ್ಯಾಸಕರೇ ಇರಬೇಕೆಂದು ನಾವು ಭಾವಿಸಿದ್ದೆವು. ಆದರೆ, ಅಂದು ಜಾನಕಿ ಎಂದರೆ ಜೋಗಿಯೆಂಬುದು ಮನದಟ್ಟಾಗಿತ್ತು.



ನಂತರದ ದಿನಗಳಲ್ಲಿ ಉದಯವಾಣಿಯ ಭಾನುವಾರದ ಪುರವಣಿ “ಸಾಪ್ತಾಹಿಕ ಸಂಪದʼದಲ್ಲಿ ದೀಪಾವಳಿ ಕುರಿತ ಲೇಖನವೊಂದರಲ್ಲಿ ಕೃಷ್ಣ ಆಲನಹಳ್ಳಿಯವರ ಪರಿಚಯ ನನಗಾಯಿತು. ಆ ಲೇಖನವನ್ನು ಬರೆದವರು ಇದೇ ಜೋಗಿ. ಆ ಲೇಖನವನ್ನು ಓದದೇ ಇದ್ದರೆ ಬಹುಶಃ ನಾನು ಕೃಷ್ಣ ಆಲನಹಳ್ಳಿಯವರ “ಸುಟ್ಟ ತಿಕದ ದೇವರು” ಎಂಬ ಅಪರೂಪದ ಕತೆಯಿಂದ, ಕೃಷ್ಣ ಎಂಬ ಅನನ್ಯ ಸಾಹಿತಿಯ ಪರಿಚಯದಿಂದ ವಂಚಿತನಾಗುತ್ತಿದ್ದನೆನೋ!? ಇದಕ್ಕೂ ಸ್ವಲ್ಪ ವರುಷಗಳ ಮುಂಚೆ ನಮ್ಮೂರಿನ ಲೈಬ್ರರಿಯಲ್ಲಿ “ರವಿ ಕಂಡದ್ದು, ರವಿ ಕಾಣದ್ದುʼ ಎಂಬ ಪುಸ್ತಕವೊಂದನ್ನು ನೋಡಿದ್ದೆ. ಅದನ್ನು ಬರೆದಿದ್ದವರು ರವಿ ಬೆಳಗೆರೆ ಮತ್ತು ಜೋಗಿ. ಹೀಗೇ ಜೋಗಿಯವರ ಓದಿಗೆ ಬಿದ್ದವನು ನಾನು. ಮುಂದೊಂದು ದಿನ ತುಮಕೂರಿನ ನಮನ ಬುಕ್‌ ಪ್ಯಾಲೇಸಿನಲ್ಲಿ ಜೋಗಿಯವರ “ನದಿಯ ನೆನಪಿನ ಹಂಗುʼ ಕಾದಂಬರಿ ಓದಿದ ಮೇಲೆ ಇವರ ಅಭಿಮಾನಿಯಾದರೂ ನಂತರ ನನಗೆ ಓದಲು ಸಾಧ್ಯವಾದದ್ದು ಜೋಗಿಯವರ ಇತ್ತೀಚಿನ “ಅಶ್ವತ್ಥಾಮನ್”‌ ಕಾದಂಬರಿ ಮಾತ್ರ.

ಹಾಗೂ, 2014ರಲ್ಲಿ ಶ್ರವಣ ಬೆಳಗೊಳದ ಸಾಹಿತ್ಯ ಸಮ್ಮೇಳನದಲ್ಲಿ ಅದೇ ವರ್ಷ ಪ್ರಕಟವಾಗಿದ್ದ ನನ್ನ “ಉಘೇ ಉಘೇ” ಕಥಾಸಂಕಲನವನ್ನು ಮಾರಾಟಮಾಡಬೇಕೆಂದು ಬ್ಯಾಂಕಿನಲ್ಲಿ ಅಕ್ಷರಶಃ ಜಗಳ ಮಾಡಿಕೊಂಡು ರಜೆ ಪಡೆದು ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಳಿಗೆ ಮಾಡಿದ್ದೆ. ಆಗ ಅಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಪುಸ್ತಕಗಳಲ್ಲಿ ಜೋಗಿಯವರ “ಲೈಫ್‌ ಇಸ್‌ ಬ್ಯೂಟಿಪುಲ್” ಪುಸ್ತಕವೂ ಒಂದು! ಅಲ್ಲಿಯೇ ಗೆಳೆಯ ಕೊಟ್ಟ ಆ ಪುಸ್ತಕದ ಒಂದು ಅಧ್ಯಾಯವನ್ನು ಓದಿ ಇದೇನು ಜೋಗಿ ಈ ರೀತಿ ಬರೆದಿದ್ದಾರಲ್ಲ ಎಂದು ಬೇಜಾರಾಗಿ ಪುಸ್ತಕವನ್ನು ಪಕ್ಕಕ್ಕಿಟ್ಟಿದ್ದೆ. ತದನಂತರ ತಿಳಿದದ್ದು ಅದು ಜೋಗಿಯವರು ಬರೆದಿರುವುದು ನಮ್ಮಂಥ ಓದುಗರಿಗಲ್ಲ, ಹೊಸ ಅಂದರೆ ಹೊಸ ತಲೆಮಾರಿನ ಓದುಗರಿಗೆ ಎಂದು. ಹೊಸ ಓದುಗರನ್ನು ಕನ್ನಡದ ಪುಸ್ತಕಗಳೆಡೆಗೆ ಸೆಳೆಯಬೇಕೆಂಬ ಅವರ ಪ್ರಯತ್ನ ಫಲ ಕೊಟ್ಟಿತ್ತು. ಇದೇ ಕಾರಣಕ್ಕೆ ಇದೇ ಮಾದರಿಯ ಸರಣಿ ಪುಸ್ತಕಗಳು ಪ್ರಕಟವಾಗಿ ಹೆಚ್ಚು ಓದುಗರನ್ನು, ಹೊಸ ಓದುಗರನ್ನು ಸೆಳೆಯತೊಡಗಿದವು. ʼಲೈಫ್‌ ಇಸ್‌ ಬ್ಯೂಟಿಪುಲ್‌ʼ ನಂತರ ʼತಂದೆ ತಾಯಿ ದೇವರಲ್ಲ,ʼ ʼಪ್ರೀತಿಸುವವರನ್ನು ಕೊಂದುಬಿಡಿ,ʼ ʼನೀವು ದೇವರನ್ನು ನಂಬಬೇಡಿ,ʼ ʼನಾನು ಬಡವ ನಾನೇ ಸುಖಿ,ʼ ʼಐ ಹೇಟ್‌ ಮೈ ವೈಫ್‌,ʼ ಪುಸ್ತಕಗಳು ಪ್ರಕಟವಾಗಿ ಅಪಾರ ಜನಮನ್ನಣೆಯನ್ನು ಗಳಿಸುವುದರ ಜೊತೆಗೆ ಹೊಸ ಓದುಗರನ್ನು ಕೂಡ ಸೆಳೆದದ್ದಂತೂ ನಿಜ. ಇದಕ್ಕೆ ಪ್ರಮುಖ ಕಾರಣವೇಂದರೆ, ಜೋಗಿಯವರ ಬರವಣಿಗೆ, ಪುಸ್ತಕದ ಸ್ಮಾರ್ಟ್‌ಫೋನಿನಂತಹ ಸೈಜು ಎಂದೇ ಹೇಳಬೇಕು. ಮತ್ತು ನನ್ನ ಅಭಿಪ್ರಾಯವೊಂದನ್ನು ಸೇರಿಸಿಬೇಕೆಂದರೇ, ಇಲ್ಲಿನ ನೆಗೆಟಿವ ಟೈಟಲ್‌ಗಳೇ ಈ ಪುಸ್ತಕಗಳೆಡೆಗೆ ಯುವ ಮನಸ್ಸುಗಳನ್ನು ಸೆಳೆಯುತ್ತವೆ ಎಂದು ನಾನು ಭಾವಿಸಿದ್ದೇನೆ. ಉದಾಹರಣೆಗೆ ಹೇಳಬೇಕೆಂದರೆ, ಇವನ್ಯಾರಪ್ಪ, ʼತಂದೆ ತಾಯಿ ದೇವರಲ್ಲʼ ಅಂತಾನೇ, ʼಪ್ರೀತಿಸುವವರನ್ನು ಕೊಂದುಬಿಡಿʼ ಅಂತಾನೇ ಎಂದೆಲ್ಲಾ ಹೊಸ ಓದುಗರು ಹಾಗೂ ಓದುಗರೂ ಕೂಡ ಈ ಪುಸ್ತಕಗಳೆಡೆಗೆ ಆಕರ್ಷಿತರಾಗಿರಬಹುದು. ಈ ಪುಸ್ತಕಗಳ ಮಾರಾಟವನ್ನು ಕಂಡು ಹಲುಬಿದವರು ಜೋಗಿ ಮಾರಾಟಕ್ಕೆಂದೇ ಈ ರೀತಿಯ ಪುಸ್ತಕಗಳನ್ನು ಬರೆಯುತ್ತಾರೆ ಎಂದರು. ಅದು ಅವರ ಹೊಟ್ಟೆಹುರಿಯಷ್ಟೇ! ಪುಸ್ತಕಗಳನ್ನು ಬರೆಯುವುದು, ಪ್ರಕಟಿಸುವುದು ಮಾರಾಟವಾಗಲಿ ಅಂದರೆ ಓದುಗರನ್ನು ತಲುಪಲಿ ಎಂಬ ಉದ್ದೇಶದಿಂದ ಅಲ್ಲವೇ. ಪ್ರಶಸ್ತಿಗಳಿಗೇ ಬರೆಯುವುದು ಕೂಡ ಉಂಟು. ಅದು ಬೇರೆ ವಿಚಾರ ಮತ್ತು ಅಂತಹವರೇ ಹೆಚ್ಚಿದ್ದಾರೆ. ಅದಿರಲಿ, ಜೋಗಿಯವರು ಈ ರೀತಿಯ ಪುಸ್ತಕಗಳನ್ನು ಯಂಗ್‌ ಅಡಲ್ಟ್‌ ಫಿಕ್ಷನ್‌ ಎಂದು ಎಲ್ಲೋ ಬರೆದದ್ದನ್ನು ಓದಿದಾಗ ನನಗೆ ಇವು ಯಂಗ್‌ ಅಡಲ್ಟ್‌ ಫಿಕ್ಷನ್‌ ಮಾದರಿಯ ಪುಟ್ಟ ಪುಟ್ಟ ಕತೆಗಳಷ್ಟೇ ಎಂದನಿಸಿತು. ಕಾರಣ, ಇಂಗ್ಲೀಷಿನಲ್ಲಿ ಕಾದಂಬರಿಗಳಿಗೆ ಯಂಗ್‌ ಅಡಲ್ಟ್‌ ಫಿಕ್ಷನ್‌ ಅನ್ನುತ್ತಾರೆ. ಈ ಚೇತನ್‌ ಭಗತ್‌, ರವೀಂದರ್‌ ಸಿಂಗ್‌, ಸವಿ ಶರ್ಮಾ… ಅವರುಗಳು ಬರೆಯುವ ರೀತಿಯ ಕಾದಂಬರಿಗಳು.

ನಂತರ ಜೋಗಿಯವರು ನನ್ನ ಕತೆಗಳನ್ನು ಕುರಿತು ಬರೆದು ಮೈಲ್‌ ಮಾಡಿದರು, ನಾನು ಅವರ ʼಕತೆ ಚಿತ್ರಕಥೆ ಸಂಭಾಷಣೆ ಜೋಗಿʼ ಎಂಬ ಅವರ ಪುಸ್ತಕವನ್ನು ಕುರಿತು ನನ್ನ ʼರೆಕ್ಕೆ ಪುಕ್ಕ ಬುಕ್ಕʼ ಅಂಕಣದಲ್ಲಿ ಬರೆದೆ. ಒಂದೆರೆಡು ಸಲ ಅವರನ್ನು ಭೇಟಿಯಾಗಿದ್ದೂ ಇದೆ.


ಈಗ ವಿಷಯಕ್ಕೆ ಬರುತ್ತೇನೆ. ಜೋಗಿಯವರ ʼಲೈಫ್‌ ಇಸ್‌ ಬ್ಯೂಟಿಪುಲ್‌ʼ ಸರಣಿಯ ಏಳನೇ ಪುಸ್ತಕ “ಚಿಯರ್ಸ್‌! – Drink Like a Fish” ಓದಲು ಶುರುಮಾಡಿದಾಗ ಈ ಪುಸ್ತಕ ಕುರಿತು ಜೋಗಿಯವರು ಬರೆದ ʼಇದು ಕಡ್ಲೆಬಜಿಲ್!‌ʼ ಮಾತುಗಳಲ್ಲಿ ಮಂಗಳೂರಿನ ಸಭೆಯೊಂದರಲ್ಲಿ ಸಿಗುವ ವಿದ್ಯಾರ್ಥಿನಿಯೊಬ್ಬರು ʼನಿಮ್ಮ ಪುಸ್ತಕದಿಂದ ಓದು ಆರಂಭಿಸಿದೆ. ಈಗ ನಿಮ್ಮನ್ನು ಓದುವುದಿಲ್ಲ. ಲಂಕೇಶರನ್ನು ಓದಲು ಶುರು ಮಾಡಿದ್ದೇನೆʼ ಎಂದು ಹೇಳಿದ್ದನ್ನು ಉಲ್ಲೇಖಿಸಿದ್ದಾರೆ. ಇದು ಓಂದು ಉದಾಹರಣೆಯಷ್ಟೆ. ಈ ರೀತಿಯ ಅಸಂಖ್ಯ ತರುಣ ತರುಣಿಯರು ಕನ್ನಡದ ಓದುಗರಾಗಿ ರೂಪುಗೊಂಡಿದ್ದಾರೆ. ಅದನ್ನು ಬಹಳ ಹತ್ತಿರದಿಂದ ನಾನು ಕೂಡ ಗಮನಿಸಿದ್ದೇನೆ. ಸಾಹಿತ್ಯದ ಯಾವುದೇ ಪ್ರಕಾರದ ಪುಸ್ತಕಗಳನ್ನು ಈ ಸರಣಿ ಪುಸ್ತಕಗಳಿಗೆ ಹೋಲಿಸಲಾಗದಿದ್ದರೂ ಈ ಪುಸ್ತಕಗಳಲ್ಲಿ ಸಾಹಿತ್ಯದ ಎಲ್ಲಾ ಪ್ರಕಾರಗಳಿವೆ. ಸುಮ್ಮನೇ ಹೇಳಬೇಕೆಂದರೆ, ಒಂದಷ್ಟು ಜನ ಕುವೆಂಪು ಅವರನ್ನು ಓದುತ್ತಾ, ತೇಜಸ್ವಿಯವರನ್ನು ಓದುತ್ತಾ, ಭೈರಪ್ಪನವರನ್ನು ಓದುತ್ತಾ,  ಲಂಕೇಶರನ್ನು ಓದುತ್ತಾ, ರವಿ ಬೆಳಗೆರೆಯನ್ನು ಓದುತ್ತಾ, ಸಾಯಿಸುತೆಯವರನ್ನು ಓದುತ್ತಾ, ಇನ್ನೂ ಅವರಿವರನ್ನು ಓದುತ್ತಾ ಸಾಹಿತ್ಯದೆಡೆಗೆ ತೆರೆದುಕೊಂಡರೆ ಇತ್ತೀಚಿನ ಬಹುತೇಕ ಓದುಗರನ್ನು ಸಾಹಿತ್ಯದೆಡೆಗೆ ಸೆಳೆದ ಕೀರ್ತಿ ನಿಸ್ಸಂಶಯವಾಗಿ ಜೋಗಿಯವರಿಗೆ ಸಲ್ಲುತ್ತದೆ. ಇಂತಹ ಜೋಗಿಯವರಿಗೆ ನಾನಂತೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಓದಿನ ರುಚಿ ಹತ್ತಿಸಿಕೊಂಡವರಿಗೂ ತಿಂಡಿಯ ರುಚಿ ಹತ್ತಿಸಿಕೊಂಡವರಿಗೂ ವ್ಯತ್ಸಾಸವೇ ಇರುವುದಿಲ್ಲ. ಇದೊಂಥರ ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಅಂತಾರಲ್ಲ ಹಾಗೇ!

“ಚಿಯರ್ಸ್”‌ ಪುಸ್ತಕದ ಒಳಗೆ ʼತೊಂಬತ್ತರ ತಾರುಣ್ಯದಲ್ಲಿ ಸಾಯೋಣ,ʼ ಕಥಾಪ್ರಸಂಗ,ʼ ಅಧಿಕಪ್ರಸಂಗ,ʼ ವಿಚಾರ ಪ್ರಸಂಗʼ ಮತ್ತು ʼನಿಮ್ಮನ್ನು ಅಭಿನಂದಿಸುತ್ತಾ…ʼ ಎಂಬ ಐದು ಅಧ್ಯಯಗಳಿವೆ. ʼಕಥಾಪ್ರಸಂಗʼ ಅಧ್ಯಾಯದಲ್ಲಿ ಐದು ಕತೆಗಳಿವೆ. ʼತೇರೆ ಮನ್‌ ಕೀ ಜಮುನಾ!ʼ ಕತೆ ಓದಿದೆ. ಇನ್ನೂ ಹೊರಬರಲಾಗಿಲ್ಲ.

ನೀವೂ ಒಳಬರಲು ಇಚ್ಚಿಸುವುದಾದರೇ…

ನಿಮಗೂ ಚಿಯರ್ಸ್!‌ https://amzn.to/41xUDfI

 

 

ಶುಕ್ರವಾರ, ಡಿಸೆಂಬರ್ 22, 2023

ಒಂದು ಪರಿಪೂರ್ಣ ಸಿನಿಮಾ “ಡಂಕಿ”


ನಾಳೆಗೆ ಯಾವ ಪುಸ್ತಕವನ್ನು ಓದಿ ಬರೆಯಲಿ ಎಂದು ಯೋಚಿಸುತ್ತಿದ್ದವನು, ಅರೇ ನಾಳೆ ಶುಕ್ರವಾರ! ಅಂದರೆ ಯಾವುದಾದರೂ ಸಿನಿಮಾ ನೋಡಬೇಕು ಎಂದುಕೊಂಡೆ. “ಸಲಾರ್”‌ ರಿಲೀಸ್‌ ಆಗುವುದು ಗೊತ್ತಿತ್ತು. ಆದರೆ, “ಕಬ್ಜ” ಸಿನಿಮಾವನ್ನು ನೋಡಿದ ನಂತರ ಯಾವುದೇ ಕಾರಣಕ್ಕೂ ಕತ್ತಲೆ ಸಾಮ್ರಜ್ಯದ ಕತೆ ಇರುವ ಸಿನಿಮಾವನ್ನು ಮೊದಲ ದಿನವೇ ನೋಡಬಾರದೆಂದು ನಿರ್ಧರಿಸಿರುವುದರಿಂದ ಬೇಡ ಎಂದ ಸುಮ್ಮನಾದೆ. ಆದರೆ, ಬುಕ್‌ಮೈಶೋನಲ್ಲಿ ಚೆಕ್‌ ಮಾಡಿದಾಗ ಶಾರುಖ್‌ ಖಾನ್‌ ಅಭಿನಯದ “ಡಂಕಿ” ಸಿನಿಮಾ ಇಂದೇ (ಗುರುವಾರ – 21/12/2023) ರಾತ್ರಿ ಏಳು ಹತ್ತಕ್ಕೆ ಶೋ ಇರುವುದು ಗೊತ್ತಾಗಿ ಬೇಗಬೇಗ ಕೆಲಸ ಮುಗಿಸಿ ಸ್ವಲ್ಪ ಒತ್ತಡದಲ್ಲೇ ಎಸ್-ಮಾಲ್‌ ತಲುಪಿದೆ. ಅಲ್ಲಿ ಟಿಕೆಟ್‌ ತೆಗೆದುಕೊಳ್ಳಲು ಹೋದಾಗಲೇ ತಿಳಿದದ್ದು ಸಿನಿಮಾ ಹತ್ತು ನಿಮಿಷ ತಡವಾಗಿ ಶುರುವಾಗುತ್ತದೆ ಎಂದು. ವಿಷಯ ತಿಳಿದು ಸ್ವಲ್ಪ ನಿರಾಳವಾಯಿತು. ಆದರೂ, ಟಿಕೆಟ್‌ ಮೆಸೇಜ್‌ ಬರದೇ ಸ್ವಲ್ಪ ಗಡಿಬಿಡಿಯಾಯಿತು. ಎಸ್‌-ಮಾಲಿನಲ್ಲಿ ಇರುವ ಐನೋಕ್ಸ್‌ ಮಲ್ಟಿಪ್ಲೆಕ್ಸಿನಲ್ಲಿ ಇದು ಮೊದಲ ಅನುಭವ. ಯಾವತ್ತೂ ಸರಿಯಾಗಿ ಬರುತ್ತಿದ್ದ ಮೆಸೇಜ್‌ ಮೊದಲ ಬಾರಿಗೆ ತಾಂತ್ರಿಕ ಕಾರಣದಿಂದ ಬರಲಿಲ್ಲ. ಟಿಕೆಟನ್ನು ಒಂದು ಚೀಟಿಯಲ್ಲಿ ಗುರುತು ಹಾಕಿ ಕೊಟ್ಟಿದ್ದರು.

ಸರಿಯಾದ ಸಮಯದಿಂದ ಹತ್ತು ನಿಮಿಷ ಜಾಹೀರಾತುಗಳು ಬಂದು ಸಿನಿಮಾ ತಡವಾಗಿಯೇ ಶುರುವಾಯಿತು. “ಡಂಕಿ” ಸಿನಿಮಾದಲ್ಲಿ ಮೊದಲ ಹೆಸರು ತೋರಿಸಿದ್ದು ತಾಪ್ಸಿ ಪನ್ನು! ನಂತರ, ಶಾರುಕ್‌ ಖಾನ್.‌ ಈ ವಿಷಯವನ್ನು ಕನ್ನಡ ಸಿನಿಮಾ ನಿರ್ಮಾಪಕರಾದ ವೀರೆಂದ್ರ ಮಲ್ಲಣ್ಣನವರು ಫೇಸ್‌ಬುಕ್ಕಿನಲ್ಲಿ ಬರೆದಿದ್ದರೂ ಕೂಡ. ಇಲ್ಲಿಯೇ ಸಿನಿಮಾದಲ್ಲಿ ಯಾರಿಗೆಲ್ಲಾ ಪ್ರಾಮುಖ್ಯತೆ ಇದೆ ಎಂದು ಗೊತ್ತಾಗುತ್ತದೆ. ಸಿನಿಮಾ ಆರಂಭವಾಗಿದ್ದೇ ತಡ ನನ್ನನ್ನು ಒಳಗೆ ಎಳೆದುಕೊಂಡು ಬಿಟ್ಟಿತು. ಒಂದು ಒಳ್ಳೆಯ ಸಿನಿಮಾದ ಮೊದಲ ಲಕ್ಷಣವೇ ಇದು.

ಪಂಜಾಬ್‌ ಗ್ರಾಮವೊಂದನ್ನು ಸಾಂಕೇತಿಕವಾಗಿಟ್ಟುಕೊಂಡು ಹೇಗಾದರೂ ವಿದೇಶಕ್ಕೆ  ಹೋಗಿ ಸಂಪಾದಿಸಿ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಪ್ರತಿಯೊಬ್ಬ ಭಾರತೀಯನ ಕನಸನ್ನು ತೆರೆಯಮೇಲೆ ಅಚ್ಚುಕಟ್ಟಾಗಿ ಎಲ್ಲಿಯೂ ಬೋರಾಗದಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ. ಸಿನಿಮಾದ ಸಂಗೀತ (ಪ್ರೀತಮ್)‌ ಸಿನಿಮಾ ನೋಡುಗನನ್ನು ತಲ್ಲೀನನಾಗಿಸುತ್ತದೆ. ಇದು ಸೂಪರ್‌ ಸ್ಟಾರ್‌ ಶಾರುಕಿನ ಪಠಾಣ್‌, ಜವಾನ್‌ ಸಿನಿಮಾಗಳಂತಲ್ಲ. ಒಂದು ಕನಸಿನ, ಸ್ನೇಹದ, ಪ್ರೇಮದ ಕಥೆ. ಸಿನಿಮಾ ಆರಂಭವಾದ ಪಾತ್ರದಿಂದಲೇ ಸಿನಿಮಾ ಮುಗಿದು ಒಂದು ಅತ್ಯುತ್ತಮ ಸಿನಿಮಾ ನೋಡಿದ ಅನುಭವವಾಯಿತು. ಇಂಟರ್ವಲ್‌ವರೆಗೂ ಒಂದು ಮಗ್ಗುಲಾದರೆ, ನಂತರ ಮತ್ತೊಂದು ಮಜಲು. ಈ “ಡಂಕಿ” ಭಾರತೀಯರ ಇಂಗ್ಲೀಷ್‌ ಜೀವನದ ಕನವರಿಕೆಗಳನ್ನು, ತೊಳಲಾಟಗಳನ್ನು, ಸುಖ-ದುಃಖಗಳನ್ನು ತೆರೆಯಮೇಲೆ ಸಮಂಜಸವಾಗಿ ತೆರೆದಿಟ್ಟಿದೆ. ತಮ್ಮ ಕನಸನ್ನು ಸರಿಯಾದ ದಾರಿಯಲ್ಲಿ ಈಡೇರಿಸಿಕೊಳ್ಳಲಾಗದೇ, ಅನಿವಾರ್ಯವಾಗಿ ಅಡ್ಡದಾರಿ ಹಿಡಿದ ಬದುಕ ಚಿತ್ರಣ ನಮ್ಮದೇ ಬದುಕೆಂಬಂತೇ ಭಾಸವಾಗುವುದು ಕೂಡ ನೋಡುಗನಿಗೆ ಲಭಿಸುವ ಭಾಗ್ಯವೆಂದೇ ಹೇಳಬೇಕು. ಮುಖ್ಯವಾಗಿ ಸಿನಿಮಾ ನೋಡುವಾಗ ಪ್ರೇಕ್ಷಕ ಹೇಗೆ ಪ್ರತಿಕ್ರಿಯಿಸುತ್ತಾನೆ (ಹೀರೋಯಿಸಂ ಆರಾಧನೇಯದ್ದೇ ಬೇರೆ ಆಯಾಮ) ಎಂಬುದರ ಮೇಲೆ ಒಂದು ಸಿನಿಮಾದ ಗೆಲುವಿರುತ್ತದೆ. ಈ ದೃಷ್ಟಿಯಲ್ಲಿ ನೋಡುಗ ಪ್ರತಿಕ್ರಿಯಿಸುವಂತೆ ಮಾಡುವ ಹಲವಾರು ದೃಶ್ಯಗಳಿವೆ. ನೋಡುಗನ ಊಹೆಯಂತೆಯೂ ಸಿನಿಮಾ ಸಾಗುವುದು ಕೂಡ “ಡಂಕಿ”ಯ ಪ್ಲಸ್‌ ಪಾಯಿಂಟ್‌ ಎಂದೇ ಹೇಳಬೇಕು. ಚಿತ್ರಮಂದಿರದಿಂದ ಹೊರಬಂದ ಮೇಲೆಯೂ ಕಾಡುವ “ಡಂಕಿ” ಒಂದು ಪರಿಪೂರ್ಣ ಸಿನಿಮಾವೆಂದೇ ಹೇಳಬೇಕು.

ಸ್ಟಾರ್‌ ನಟನ ಹಮ್ಮಿಲ್ಲದೆ ಇಂತಹ ಸಿನಿಮಾದಲ್ಲಿ ನಟಿಸಿದ ಶಾರುಖ್‌, ನಿರ್ದೇಶಕ  ಹಿರಾನಿ, ನಟನಟಿಯರಾದ ತಾಪ್ಸಿ, ವಿಕ್ಕಿ ಕೌಶಲ್, ಬೊಮಾನ್‌ ಇರಾನಿ ಇನ್ನು ಮುಂತಾದವರು ಮತ್ತು ಇಡೀ‌ ಚಿತ್ರತಂಡ ಇಷ್ವವಾಗಿಬಿಡುತ್ತದೆ. ಒಂದು ಉತ್ತಮ ಒಳ್ಳೆಯ ಸಿನಿಮಾ ನೋಡಲು ಬಯಸುವವರು ಮಿಸ್‌ ಮಾಡದೇ ನೋಡಿ “ಡಂಕಿ.”

ಇನ್ನು, ಇಂಟರ್ವಲ್‌ನಲ್ಲಿ ಅದು-ಇದು ತಿನ್ನಿ ಎಂದು ಮಲ್ಟಿಪ್ಲೆಕ್ಸ್ನವರು ಪುಸಲಾಯಿಸುತ್ತಾ ಹೆಚ್ಚಿನ ಸಮಯವನ್ನು ವ್ಯಯಿಸಿದ್ದರಿಂದ ನನ್ನ ಸಮಯವೂ ವ್ಯರ್ಥವಾಗಿ ತಡರಾತ್ರಿಯಾಯಿತು. ಹೊಟ್ಟೆ ಹಸಿಯುತ್ತಿದ್ದದನ್ನು ಗಮನಿಸಿ ಅಲ್ಲಿದ್ದ ಮಾಲಿನ ಒಂದು ಹೋಟೆಲ್ಲಿನ ಮೆನುವಿನ ದುಬಾರಿ ರೇಟ್‌ ನೋಡಿ ಇಲ್ಲಿ ಬೇಡವೆಂದುಕೊಂಡು, ಊಟ ಮಾಡಲು ಟೌನ್‌ಹಾಲಿನ ಪ್ರಸಾದ್‌ ಹೋಟೆಲ್‌ ಮುಚ್ಚಿರಬಹುದೆಂದುಕೊಂಡು ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ಲಿನಲ್ಲಿರುವ ಪುಡ್‌ಕೋರ್ಟಿಗೆ ಹೋಗಿದ್ದಾಯಿತು. ಅಲ್ಲಿ ಇನ್ನೇನು ಮುಚ್ಚುತ್ತಿದ್ದ ಹೋಟೆಲ್‌ ಒಂದರಲ್ಲಿ ರುಚಿಯಾದ ಅಕ್ಕಿರೊಟ್ಟಿ, ಚಿತ್ರಾನ್ನ ದೊರೆಯಿತು. ತಿಂದು ಮನೆ ದಾರಿ ಹಿಡಿದಾಗಲೇ ಗೊತ್ತಾಗಿದ್ದು ಪ್ರಸಾದ್‌ ಹೊಟೇಲ್‌ ಇನ್ನೂ ತೆರೆದಿತ್ತು ಎಂದು. ಅಲ್ಲಿನ ಮಸಾಲೆ ದೋಸೆ ಮಿಸ್‌ ಆದರೂ ಒಂದು ಒಳ್ಳೆಯ ಸಿನಿಮಾ ಮಿಸ್‌ ಆಗಲಿಲ್ಲ ಎಂಬ ಸಂತೋಷದಲ್ಲಿ ಮನೆ ಸೇರಿದೆ.

ಬೆಳಿಗ್ಗೆ ಎದ್ದು ಪತ್ರಿಕೆಯೊಂದರಲ್ಲಿ “ಡಂಕಿ” ಸಿನಿಮಾ ಕುರಿತ ಕಥೆ ಹೇಳುವ ಮಾದರಿಯ ವಿಮರ್ಶೆಯನ್ನು ಓದಿ ಸಖತ್‌ ಬೇಜಾರಾಗಿದ್ದಂತೂ ನಿಜ…

                                                                             - ಗುಬ್ಬಚ್ಚಿ ಸತೀಶ್.

ಗುರುವಾರ, ಡಿಸೆಂಬರ್ 21, 2023

ಬೆಂಗಳೂರಿನಲ್ಲಿಯೇ ಬದುಕಿ-ಬಾಳಿದ “ಕೊನೆಯ ಬಿಳಿ ಬೇಟೆಗಾರ”

 



ಖ್ಯಾತ ಬ್ರಿಟಿಷ್‌ ಬೇಟೆಗಾರ-ಬರಹಗಾರ ಕೆನೆತ್‌ ಆಂಡರ್ಸನ್‌ ಅವರ ಮಗ ಡೊನಾಲ್ಡ್‌ ಆಂಡರ್ಸನ್‌ (1934-2014) ಅವರ ಜೀವನಗಾಥೆ “ಕೊನೆಯ ಬಿಳಿ ಬೇಟೆಗಾರ – ವಸಾಹತು ಶಿಕಾರಿಯೊಬ್ಬನ ನೆನಪುಗಳು” ಕನ್ನಡಕ್ಕೆ ಬಂದಿರುವುದು ಸಂತಸದ ಸಂಗತಿ. ಮೂಲ ಇಂಗ್ಲೀಷಿನಲ್ಲಿ ಜೋಷುವಾ ಮ್ಯಾಥ್ಯೂ ಅವರ ನಿರೂಪಣೆಯಲ್ಲಿರುವ “ದ ಲಾಸ್ಟ್‌ ವೈಟ್‌ ಹಂಟರ್” ಕೃತಿಯನ್ನು ಕನ್ನಡಕ್ಕೆ ಡಾ. ಎಲ್‌.ಜಿ. ಮೀರಾ ಅವರು ಅನುವಾದಿಸಿದ್ದಾರೆ. ಕಾಲೇಜಿನ ದಿನಗಳಿಂದಲೂ ತೇಜಸ್ವಿಯವರ ಓದುಗರು-ಅಭಿಮಾನಿಯೂ ಆಗಿರುವ ಮೀರಾ ಅವರು ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕಿ. ಈ ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ತಂದಿರುವುದಕ್ಕೆ ಅವರಿಗೆ ಅಭಿನಂದನೆಗಳು ಸಲ್ಲಲೇಬೇಕು. ತೇಜಸ್ವಿಯವರ ನೆನಪಿಗೆ ಈ ಕೃತಿ ಅರ್ಪಣೆಯಾಗಿರುವುದೂ ಕೂಡ ಮೀರಾ ಅವರ ತೇಜಸ್ವಿ ಅಭಿಮಾನಕ್ಕೆ ಸಾಕ್ಷಿಯಾಗಿದೆ.




ಈ ಕೃತಿಗೆ ಡೊನಾಲ್ಡ್‌ ಅವರಿಗಿಂತ ಕೊಂಚ ಹಿರಿಯರಿದ್ದ, ಆದರೆ  ಡೊನಾಳ್ಡ್‌ ಅವರನ್ನು ಹತ್ತಿರದಿಂದ ಕಂಡಿದ್ದ ಭಾರತದ ಅಗ್ರಗಣ್ಯ ವನ್ಯಜೀವಿ ಛಾಯಾಗ್ರಾಹಕರಾದ ಟಿ.ಎನ್.ಎ ಪೆರುಮಾಳ್‌ ಅವರ ಆಪ್ತ ಮುನ್ನುಡಿಯಿದೆ. ʼಲೋಕದಲ್ಲಿ ಎಲ್ಲ ಬಗೆಯ ಜನರಿದ್ದಾರೆ ಮತ್ತು ಡೊನಾಲ್ಡ್‌ ಆಂಡರ್ಸನ್‌ ಒಬ್ಬ ಅನನ್ಯ ವ್ಯಕ್ತಿ ಮತ್ತು ಚರಿತ್ರೆಯಲ್ಲಿ ಅವರಿಗೆ ತಮ್ಮದೇ ಆದ ನ್ಯಾಯಬದ್ಧ ಸ್ಥಾನವಿದೆʼ ಎಂದಿರುವುದು ಈ ಕೃತಿಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ. ಶಿಕಾರಿ ಮತ್ತು ಛಾಯಾಗ್ರಹಣಕ್ಕೆ ಅಂತಹ ವ್ಯತ್ಯಾಸವೇನಿಲ್ಲ, ಡೊನಾಲ್ಡ್‌ ತನ್ನ ತಂದೆಯಂದೆ ಬಂದೂಕು ಆರಿಸಿಕೊಂಡರೆ, ತಮ್ಮ ಶಿಕ್ಷಕ ಓ.ಸಿ.ಎಡ್‌ವಾರ್ಡ್ಸ್‌ ಅವರ ಪ್ರಭಾವದಿಂದ ಕ್ಯಾಮೆರಾ ಆರಿಸಿಕೊಂಡೆ ಎಂದಿದ್ದಾರೆ ಪೆರುಮಾಳ್.‌ ಡೊನಾಲ್ಡ್‌ ಅವರಿಗೆ ಶಿಕಾರಿಯಲ್ಲಿದ್ದ ಪರಿಣತಿಯನ್ನು ತಾವು ಕಂಡಂತೆ ದಾಖಲಿಸಿದ್ದಾರೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಕೆ. ಉಲ್ಲಾಸ ಕಾರಂತ ಅವರು ತಂದೆಯನ್ನು ಮೀರಿಸಿದ ಮಗ ಡೊನಾಲ್ಡ್‌ ಅನುಭವಗಳು ಕನ್ನಡದ ಓದುಗರಿಗೆ ಒಂದು ರೋಚಕ ಹೊಸ ಪ್ರಪಂಚವನ್ನು ತೆರೆದಿಟ್ಟಿವೆ ಎಂದಿದ್ದಾರೆ.



ಇಂಗ್ಲೀಷ್‌ ವಾರಪತ್ರಿಕೆಯಲ್ಲಿ ಮ್ಯಾಥ್ಯೂ ಜೋಷುವಾ ಅವರ “ದ ಲಾಸ್ಟ್‌ ವೈಟ್‌ ಹಂಟರ್”‌ ಪುಸ್ತಕದ ಬಗ್ಗೆ ಪರಿಚಯ ಲೇಖನ ಓದಿದ ಡಾ. ಎಲ್.ಜಿ. ಮೀರಾ ಅವರು ತಾವು ತೇಜಸ್ವಿಯವರ ಅನುವಾದದಲ್ಲಿ ಓದಿದ್ದ ಕೆನೆತ್‌ ಆಂಡರ್ಸನ್‌ ಅವರ ಮಗ ಡೊನಾಲ್ಡ್‌ ಆಂಡರ್ಸನ್‌ ಬೆಂಗಳೂರಿನಲ್ಲಿಯೇ ಅದೂ ಕಬ್ಬನ್‌ ಪಾರ್ಕ್‌ ಪಕ್ಕದಲ್ಲಿಯೇ ಎಂಬತ್ತು ವರ್ಷ ಬದುಕಿ ಬಾಳಿದ್ದರು ಎಂಬ ವಿವರಗಳನ್ನು ಓದಿ ಆಶ್ಚರ್ಯಚಕಿತರಾಗಿ ಈ ಕೃತಿ ಕನ್ನಡದ ಓದುಗರಿಗೆ ಲಭಿಸಬೇಕು ಎಂದು ನಿರ್ಧರಿಸಿದ ಕಾರಣ ಈ ಕೃತಿಯೀಗ “ಕೊನೆಯ ಬಿಳಿ ಬೇಟೆಗಾರ” ಎಂದು ಕನ್ನಡದ ಓದುಗರಿಗೆ ಲಭ್ಯವಿದೆ.



ʼಇದು ಸಂದುಹೋದ ಕಾಲದ ಜನಗಳ ಮತ್ತು ಸ್ಥಳಗಳ ಕಥೆʼ ಎಂದು ಪೀಠಿಕೆಯ ಮೊದಲ ಸಾಲಿನಲ್ಲಿಯೇ ಡೊನಾಲ್ಡ್‌ ಮಾಲ್ಕಮ್‌ ಸ್ಟುವಾರ್ಟ್‌ ಆಂಡರ್ಸನ್‌ ಹೇಳಿರುವುದು ಈ ಕೃತಿಯ ಆಶಯವನ್ನು ವ್ಯಕ್ತಪಡಿಸಿದೆ. ಡೊನಾಲ್ಡ್‌ ಅವರು ಬೆಂಗಳೂರಿನಲ್ಲಿ ಬೆಳೆದದ್ದು, ಅವರ ಕುಟುಂಬ, ಸ್ನೇಹಿತರು, ಶಿಕಾರಿ ದಿನಗಳು, ಕಳೆದ ವರ್ಷಗಳು, ತಿರುಗಾಟಗಳು, ತನ್ನ ತಂದೆ ಕೆನೆತ್‌ ನೆನಪು ಮತ್ತು ಡೊನಾಲ್ಡ್‌ ಅವರ ಕೊನೆಯ ದಿನಗಳು ಇಲ್ಲಿ ಅಪರೂಪದ ಚಿತ್ರಗಳೊಂದಿಗೆ ದಾಖಲಾಗಿವೆ. ದೇಶದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರೋತ್ತರ ದಿನಗಳ ಒಂದು ಅಪೂರ್ವ ದಾಖಲೆ ಬ್ರಿಟಿಷ್‌ ಭಾರತದ ಕೊನೆಯ ಸ್ಕಾಟ್‌ ವ್ಯಕ್ತಿ ಕಂಡಂತೆ ನಿರೂಪಿತವಾಗಿದೆ.  ಡೊನಾಲ್ಡ್‌ ಅವರ ರೋಚಕ ಕಥೆಯಷ್ಟೇ ಅಲ್ಲ ಕೊನೆಗಾಲದಲ್ಲಿ ಒಬ್ಬಂಟಿಯಾಗಿ ಇಲ್ಲುಳಿದ ವ್ಯಥೆಯ ಪರಿಚಯವೂ ಇಲ್ಲಿದೆ.

ಬೆಂಗಳೂರಿನ ಆಕೃತಿ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದ್ದು, ಇದರ ಮೌಲ್ಯ ರೂ. 395/- ಆಗಿರುತ್ತದೆ.

ಈ ಕೃತಿಯನ್ನು ಅಮೇಜಾನಿನಲ್ಲಿ ಕೊಳ್ಳಲು: https://amzn.to/3RzI0fC



ಬುಧವಾರ, ಡಿಸೆಂಬರ್ 20, 2023

ರಹಮತ್‌ ಅವರ ʼದೀಪʼದಂತಹ ಆತ್ಮಕಥೆ "ಕುಲುಮೆ"

 


ರಹಮತ್‌ ತರೀಕೆರೆ ಎಂದರೆ ಕೆಲವರಿಗೆ ಮೇಷ್ಟ್ರು, ಹಲವರಿಗೆ ವಿಮರ್ಶಕ, ಒಂದಷ್ಟು ಮಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ದೇಶಾಂತರ ಸುತ್ತುವ ಅಲೆಮಾರಿ,  ಲೇಖಕ, ಸೃಜನಶೀಲ ಸಾಹಿತ್ಯ ಪ್ರಿಯ ಓದುಗರಿಗೆ ನೆಚ್ಚಿನ ಲಲಿತ ಪ್ರಬಂಧಕಾರ, ಇತ್ಯಾದಿ… ಇತ್ಯಾದಿ… ಇವೆಲ್ಲವೂ ಅಥವಾ ಮೇಲಿನ ಯಾವುದೇ ಒಂದು ವಿಶೇಷಣ ಗೊತ್ತಿಲ್ಲದವರಿಗೆ ʼಬುದ್ಧಿ ಜೀವಿ” ಮಾತ್ರ! ಇಂತಹ ವಿಶೇಷತೆಗಳ ವ್ಯಕ್ತಿಯೊಬ್ಬರ ಆತ್ಮಕಥೆ ಪ್ರಕಟವಾಗುತ್ತದೆ ಎಂದು ತಿಳಿದಾಗ ಖುಷಿಯಿಂದ ಓದಬೇಕೆಂದುಕೊಂಡವರಲ್ಲಿ ನಾನೂ ಒಬ್ಬ.

ರಹಮತ್‌ ತರೀಕೆರೆ ಅವರ ಆತ್ಮಕಥನ “ಕುಲುಮೆ – ಬಾಳ ಚಿತ್ರಗಳು” ಶ್ರೀಮತಿ ಬಾನು ಅವರ ಮುಖಪುಟ ಚಿತ್ರದೊಂದಿಗೆ ಪ್ರಕಟವಾಗಿದ್ದು, ಮುಖಪುಟವೇ ರಹಮತ್‌ ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದೆ. ನಾನು ಮೇಲೆ ಹೇಳಿದ ಎಲ್ಲಾ ವಿಶೇಷಣಗಳು ಇದೊಂದು ಚಿತ್ರದಲ್ಲಿಯೇ ಮೈದೆಳೆದಿವೆ ಎಂದರೂ ಸರಿ.



ರಹಮತ್‌ ಅವರೇ ತಮ್ಮ ಬಾಳಕಥನವನ್ನು “ಕುಲುಮೆ” ಎಂದು ಕರೆದಿರುವ ಕಾರಣವನ್ನು ತಿಳಿಸಿದ್ದಾರೆ: ʼನಮ್ಮ ಕುಟುಂಬದ ಕಸುಬು ಕಮ್ಮಾರಿಕೆ. ಬೆಂಕಿ ಹೊಗೆ ಹೊಡೆತ ಕಡಿತಗಳ ಈ ಕಸುಬು, ಹೆತ್ತಬ್ಬೆಯಂತೆ ಎದೆಹಾಲು ಕುಡಿಸಿ ನಮ್ಮನ್ನು ಪೊರೆಯಿತು; ಆತ್ಮಸಂಗಾತಿಯಂತೆ ವಿವಿಧ ಜಾತಿ ವೃತ್ತಿ ಧರ್ಮಗಳ ಜನರೊಟ್ಟಿಗೆ ನಂಟನ್ನು ಬೆಸೆಯಿತುʼ ಎಂದು. ಆದಕಾರಣದಿಂದ ʼಒಬ್ಬ ವ್ಯಕ್ತಿ ಕಬ್ಬಿಣದಂತೆ ಕುಲುಮೆಯಲ್ಲಿ ಬೆಂದು, ಬಡಿಸಿಕೊಂಡು ಒಂದು ರೂಪ ತಳೆಯಬೇಕು. ಈ ಶೀರ್ಷಿಕೆ ಸೂಕ್ತವಾಗಿದೆʼ  ಎಂದೆಲ್ಲಾ ನಾನು ಹೇಳಲು ಹೋಗುವುದಿಲ್ಲ. ಆದರೆ “ಕುಲುಮೆ” ರಹಮತ್‌ ತರೀಕೆರೆ ಅವರ ಕುಲಕಸುಬಿನ ಹೊರತಾಗಿಯೂ ಒಂದು ಆತ್ಮಕಥನಕ್ಕೆ ಬಹಳ ಸೂಕ್ತವಾದ ಹೆಸರಾಗಿದೆ ಎಂದು ಹೇಳಲು ಇಚ್ಛಿಸುತ್ತೇನೆ.

ತಮ್ಮ ಮಾತುಗಳಲ್ಲಿ ಈ ಆತ್ಮಕಥೆಯನ್ನು ಬಾಳ ಚಿತ್ರಗಳಂತೆಯೇ ಓದಿಕೊಳ್ಳಬಹುದು ಎಂದಿರುವುದು ಸೂಕ್ತವಾಗಿದೆ. ಬಹಳ ಅರ್ಥಪೂರ್ಣವಾಗಿ, ಮನಸ್ಸಿಗೆ ಆಪ್ತವೆನಿಸುವ ಲಲಿತ ಪ್ರಬಂಧಗಳನ್ನು ಬರೆಯುವ ರಹಮತ್‌ ಅವರ ಇಲ್ಲಿನ ಬರವಣಿಗೆಯೂ ಲಲಿತ ಪ್ರಬಂಧಗಳಂತೆಯೇ ಓದಿಸಿಕೊಳ್ಳುತ್ತವೆ. ಅವರೇ ಹೇಳಿರುವಂತೆ ಸ್ವಾರಸ್ಯಕರ ವ್ಯಕ್ತಿಚಿತ್ರಗಳೂ ಕೂಡ ಓದುಗನಿಗೆ ಸಿಗುತ್ತವೆ. ಆತ್ಮಕಥನದ ಹೆಸರಿನ ಸೊಗಸಿನ ಜೊತೆಗೆ ಇಲ್ಲಿನ ಪರಿವಿಡಿಯೂ ಗಮನಸೆಳೆಯುತ್ತದೆ. ಮೊದಲನೇ ಅಧ್ಯಾಯ ಗರಿಕೆಬಳ್ಳಿ. ಅದರಲ್ಲಿ ಒಂದಷ್ಟು ಉಪ-ಅಧ್ಯಾಯಗಳ ಹೆಸರನ್ನು ಓದಿದರೆ ಎಷ್ಟು ಶ್ರದ್ಧೆಯಿಂದ ತಮ್ಮ ಬಾಳಕಥನವನ್ನು ರಹಮತ್‌ ಓದುಗರಿಗೆ ನೀಡಿದ್ದಾರೆ ಎಂಬುದೇ ಒಂದು ಸೋಜಿಗದಂತಿದೆ. ಇಂತಹ ಒಟ್ಟು ಹನ್ನೆರೆಡು ಅಧ್ಯಾಯಗಳ ಆತ್ಮಕಥೆಯ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಅಭಿಮಾನಿಗಳಿಗೆ  ತಮ್ಮ ಜೀವನವನ್ನು ಕಟ್ಟಿಕೊಟ್ಟಿದ್ದಾರೆ ರಹಮತ್‌ ತರೀಕೆರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಕೃತಿಯೊಂದು "ದೀಪ"ದಂತಹ ಜೀವನಾನುಭವ ಕಥನ. 

ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ಪ್ರಕಾಶನದ ಅಕ್ಷತಾ ಅವರು ಹೇಳಿರುವಂತೆ ರಹಮತ್‌ ಅವರ ಬಾಲ್ಯದ ಅನಾರೋಗ್ಯದ ದುರಂತ, ಕನ್ನಡ ಲೋಕಕ್ಕೆ ಲಾಭಕರವಾಗಿದ್ದಂತೂ ಸತ್ಯ.

ರೂ. 330/-ರ ಮೌಲ್ಯದ ರಹಮತ್‌ ತರೀಕೆರೆ ಅವರ “ಕುಲುಮೆ”ಯನ್ನು ನೀವು ರಿಯಾಯಿತಿ ದರದಲ್ಲಿ ಅಮೇಜಾನಿನಲ್ಲಿ ಕೊಂಡು ಓದಬಹುದು.. ‌

ಲಿಂಕ್… https://amzn.to/3NBvFq3

ಭಾನುವಾರ, ಡಿಸೆಂಬರ್ 3, 2023

ವಕೀಲರ ದಿನದಂದು ಸಿ.ಎಚ್.‌ ಹನುಮಂತರಾಯ ಅವರ “ವಕೀಲರೊಬ್ಬರ ವಗೈರೆಗಳು” ಪುಸ್ತಕ ನೆನೆಯುತ್ತಾ…

ಪ್ರತಿವರ್ಷ ಡಿಸೆಂಬರ 3ರಂದು “ವಕೀಲರ ದಿನ”ವನ್ನಾಗಿ ಆಚರಿಸುತ್ತಾರೆ. ನಮ್ಮ ಭಾರತ ದೇಶದ ಖ್ಯಾತ ವಕೀಲರು ಮತ್ತು ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ (3 ಡಿಸೆಂಬರ್ 1884 - 28 ಫೆಬ್ರವರಿ 1963) ಅವರ ಜನ್ಮದಿನದ ಸವಿನೆನಪಿಗಾಗಿ ಈ ದಿನವನ್ನು “ರಾಷ್ಟ್ರೀಯ ವಕೀಲರ ದಿನ”ವನ್ನಾಗಿ ಆಚರಿಸಲಾಗುತ್ತದೆ. ಡಾ. ರಾಜೇಂದ್ರ ಪ್ರಸಾದ್‌ ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಪ್ರಭಾವಿ ವಕೀಲರೂ ಆಗಿದ್ದವರು.

ಈ ದಿನದಂದು ಎಲ್ಲಾ ವಕೀಲರಿಗೂ ಶುಭಾಶಯಗಳು. ಈ ನೆಪದಲ್ಲಿ ಇಂದು ನನ್ನ ನೆನಪಿಗೆ ಬಂದ ಪುಸ್ತಕ ನ್ಯಾಯವಾದಿಗಳಾದ ಸಿ.ಎಚ್.‌ ಹನುಮಂತರಾಯ ಅವರ "ವಕೀಲರೊಬ್ಬರ ವಗೈರೆಗಳು.” ಈ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರವು 2007ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದೆ. 2008ರಲ್ಲಿ ಈ ಪುಸ್ತಕಕ್ಕೆ ಸಂಕೀರ್ಣ ವಿಭಾಗದಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ನೀಡಲಾಗಿದೆ. ಅಲ್ಲಿಗಾಗಲೇ ಮೂರು ಮುದ್ರಣಗಳನ್ನು ಕಂಡಿದ್ದ ಈ ಪುಸ್ತಕವನ್ನು 2010ರಲ್ಲಿ ಬೆಂಗಳೂರಿನ ಸಪ್ನ ಪ್ರಕಟಿಸಿದ್ದು, ಇದುವರೆವಿಗೂ ನಾಲ್ಕು ಮರುಮುದ್ರಣಗಳನ್ನು ಕಂಡಿದೆ. ವೃತ್ತಿ ಬಾಂಧವರಿಗೆ ಈ ಪುಸ್ತಕವನ್ನು ಲೇಖಕರು ಅರ್ಪಿಸಿದ್ದಾರೆ.



ಹಳ್ಳಿಯಿಂದ ನಗರಕ್ಕೆ ಬಂದು ಯಶಸ್ವಿಯಾದ ಖ್ಯಾತ ನ್ಯಾಯವಾದಿಗಳಾದ ಸಿ.ಎಚ್.‌ ಹನುಮಂತರಾಯ ಅವರ ನೂರು ಅನುಭವಜನ್ಯ ಲೇಖನಗಳು ಈ ಪುಸ್ತಕದಲ್ಲಿವೆ. ಹಳ್ಳಿಯಲ್ಲಿ ಚೆನ್ನಾಗಿ ಮಾತನಾಡುವ ಹುಡುಗನೊಬ್ಬ ವಕೀಲನಾಗಿ ಯಶಸ್ವಿಯಾಗಿ, ಸಾಹಿತ್ಯದೆಡೆಗೂ ಅಪರಿಮಿತವಾದ ಪ್ರೀತಿಯನ್ನು ಇರಿಸಿಕೊಂಡು ಈ ಲೇಖನಗಳಲ್ಲಿ ತಮ್ಮ ಅನುಭವವಗಳನ್ನು ದಾಖಲಿಸಿ ಓದುಗನನ್ನು ವಕೀಲರ ಲೋಕಕ್ಕೆ ಕರೆದೊಯ್ಯುತ್ತಾನೆ. ಮೊದಲಿಗೆ ಲಂಕೇಶರು ಲೇಖಕರ ಶಕ್ತಿಯನ್ನು ಗುರುತಿಸಿದರೂ ಬರೆಸುವಲ್ಲಿ ಅಷ್ಟೇನು ಯಶಸ್ವಿಯಾಗಿರುವುದಿಲ್ಲ. ತದನಂದರ ಇಂದ್ರಜಿತ್‌ ಲಂಕೇಶ್‌ ಹಠಬಿಡದೆ “ಲಂಕೇಶ್‌ ಪತ್ರಿಕೆ"ಗೆ “ವಗೈರೆಗಳು” ಅಂಕಣ ಬರೆಸಿದ ಪರಿಣಾಮವೇ ಈ ಪುಸ್ತಕ. ಪತ್ರಕರ್ತ ಗಂಗಾಧರ ಕುಷ್ಟಗಿ ಈ ಲೇಖನಗಳನ್ನು ನಿರೂಪಿಸಿದ್ದಾರೆ.

ಈ ಪುಸ್ತಕದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕವಿ ಡಾ. ಸಿದ್ಧಲಿಂಗಯ್ಯ ಅವರ ಮೊದಲ ಮಾತುಗಳಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಯು. ಆರ್.‌ ಅನಂತಮೂರ್ತಿಯವರ ಮುನ್ನುಡಿಯಿದೆ. ಜೊತೆಗೆ ಕವಿ ಕಿ.ರಂ. ನಾಗರಾಜ ಅವರ ಅನಿಸಿಕೆಯೂ ಇದೆ. ವಕೀಲರ ಲೋಕಕ್ಕೆ ನಿಮಗೊಂದು ಅಧಿಕೃತ ಪ್ರವೇಶ ಬೇಕಿದ್ದರೆ ಈ ಪುಸ್ತಕವನ್ನು ಓದಬಹುದಾಗಿದೆ.

ಪುಸ್ತಕದ ಸಂಕ್ಷಿಪ್ತ ಪರಿಚಯ ಮಾಡುವ ಉದ್ದೇಶವಷ್ಟೇ ನನ್ನದು.

ಈ ಪುಸ್ತಕವನ್ನು ಅಮೇಜಾನಿನಲ್ಲಿ ಕೊಳ್ಳಲು… https://amzn.to/414Bemu


 

 


 

“ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು…

  ಆತ್ಮೀಯ ಸ್ನೇಹಿತರೇ, “ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು… ನನ್ನ ಅನಿಸಿಕೆಯಯನ್ನು ನನ್ನ ಯೂಟ್ಯೂಬ್‌ ಚಾನೆಲ್ಲಿನಲ್ಲಿ ವೀಕ್ಷಿಸಿ… ಧನ್ಯವಾದಗಳೊಂದಿಗೆ, ಗುಬ್ಬಚ್ಚಿ ...