ಇತ್ತೀಚಿಗೆ ತುಮಕೂರಿನ ಕೆಲವು
ಕಾಲೇಜುಗಳ ಸಮೀಪ ಡ್ರಗ್ಸ್ ಮಾರಾಟವಾಗುತ್ತಿತ್ತು ಎಂಬ ಸುದ್ಧಿಯೊಂದು ಪ್ರಕಟವಾಗಿ ಸದ್ದಿಲ್ಲದೆ ಮರೆಯಾಗಿ
ಹೋಯಿತು. ಆದರೆ, ನಗರದ ಕೆಲವು ನಾಗರೀಕರ ಗುಸುಗುಸು ಪಿಸುಪಿಸು ಮಾತುಗಳಲ್ಲಿ ಈ ಸುದ್ಧಿ ಇನ್ನೂ ಕೇಳಿ
ಬರುತ್ತಲೇ ಇದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲೂ ಕೂಡ ರಾಜ್ಯದ, ದೇಶದ ಕೆಲವು ಭಾಗಗಳಲ್ಲಿ ಡ್ರಗ್ಸ್
ಕುರಿತ ಸಂಬಂಧಿತ ಸುದ್ಧಿಗಳು ಪ್ರಕಟವಾಗುತ್ತಲೇ ಇರುತ್ತವೆ. ಸದ್ಧಿಲ್ಲದೆ ಡ್ರಗ್ಸ್ ಮಾರಾಟ ನಡೆಯುತ್ತಲೇ
ಇರುತ್ತದೆ. ಅಮಾಯಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ವ್ಯಸನಕ್ಕೆ ಬಲಿಯಾಗುತ್ತಲೇ ಇರುತ್ತಾರೆ. ಧೂಮಪಾನ,
ಮದ್ಯಪಾನದ ಚಟಗಳಂತೆ ಡ್ರಗ್ಸ್ ಚಟಕ್ಕೆ ಬಲಿಯಾಗುವವರನ್ನು ಈ ವ್ಯಸನದಿಂದ ಸುಲಭವಾಗಿ ಹೊರತರಲು ಆಗುವುದಿಲ್ಲ.
ಇದಕ್ಕೆ ಮದ್ದೆಂದರೆ ಬಲಿಯಾಗದಿರುವುದು ಮಾತ್ರ. Precaution is better than Cure.
ಈ ಪೀಠಿಕೆ ಯಾಕೆ ಹಾಕಿದೆನೆಂದರೇ,
ಇತ್ತೀಚಿಗೆ ನನ್ನ ಯೂಟ್ಯೂಬ್ ಚಾನೆಲ್ಲಿನ ಸಂದರ್ಶನಕ್ಕಾಗಿ ತುಮಕೂರಿನ ಹಿರಿಯರಾದ ಖ್ಯಾತ ವೈದ್ಯರಾದ
ಡಾ. ಕೆ ರಾಜಶೇಖರ್ ಅವರನ್ನು ಭೇಟಿಯಾಗಿದ್ದೆ. ಸಾಹಿತಿಯೂ ಆಗಿರುವ ಅವರು ತಮ್ಮ ಎರಡು ಪುಸ್ತಕಗಳನ್ನು
ನನಗೆ ನೀಡಿದರು. ಆ ಎರಡು ಪುಸ್ತಕಗಳಲ್ಲಿ ಒಂದಾದ “ವೃತ್ತಿ ಜೀವನ: ತೆರೆದ ಮನ – ವೈದ್ಯವೃತ್ತಿ ಜೀವನದ ಅನುಭವ
ಕಥನ” ಓದುವಾಗ ಹಲವು ಕುತೂಹಲಕರ ವಿಷಯಗಳು ನನ್ನ ಗಮನ ಸೆಳೆದವು. ಹಲವು ಅಧ್ಯಾಯಗಳಲ್ಲಿ ಡಾ. ರಾಜಶೇಖರ್
ಅವರ ಜೀವನ, ಅನುಭವಗಳು, ವಿಶ್ರಾಂತ ಜೀವನ ಅಕ್ಷರರೂಪದಲ್ಲಿ ಇಲ್ಲಿ ಹರಡಿಕೊಂಡಿವೆ. ತುಮಕೂರು ಜಿಲ್ಲಾ
ಆಸ್ಪತ್ರೆಯಲ್ಲಿ 1975ರ ಇಸವಿಯ ಅವಧಿಯಲ್ಲಿ ಸೇವೆಸಲ್ಲಿಸುತ್ತಿದ್ದ ಡಾ. ಕೆ. ರಾಜಶೇಖರ್ ಅವರ ಬಳಿಗೆ
ಸುಮಾರು 21 ವರ್ಷದ ಯುವಕನೊಬ್ಬ ಬಂದು, ಇವರ ಬಳಿ ಖಾಸಗಿಯಾಗಿ ಮಾತನಾಡಲು ಇಚ್ಛಿಸುತ್ತಾನೆ. ಇವರು ಒಪ್ಪಿದ
ಬಳಿಕ ಜೇಬಿನಲ್ಲಿದ್ದ ವಸ್ತುವೊಂದನ್ನು ತೋರಿಸುತ್ತಾನೆ. ಅದನ್ನು ನೋಡಿದ ಇವರಿಗೆ ಅದು ಬ್ರೌನ್ ಶುಗರ್
ಎಂದು ತಿಳಿದು ಬಂದಿರುವ ರೋಗಿ ಡ್ರಗ್ ಅಡಿಕ್ಟ್ ಎಂದು ಗೊತ್ತಾಗುತ್ತದೆ. ತುಮಕೂರಿನ ಹೆಸರಾಂತ ಇಂಜೀನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಇವನು ಎಂದು ಇವರಿಗೆ ತಿಳಿದು ಹುಡುಗನ ಪೋಷಕರಿಗೆ ವಿಷಯ
ತಿಳಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸುತ್ತಾರೆ.
ಆದರೆ, ಒಂದು ವಾರದ ಬಳಿಕ ಆ ಹುಡುಗನ ಪರಿಸ್ಥಿತಿ ವಿಪರೀತಕ್ಕೆ ಹೋಗಿ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಡಾ. ಕೆ. ರಾಜಶೇಖರ್ ಅವರು ಈ ಪುಸ್ತಕ ಬರೆಯವ ಹೊತ್ತಿಗೆ ಅಂದರೆ 2020ರ ಸಮಯದಲ್ಲೂ ತುಮಕೂರಿನಲ್ಲಿ
ಡ್ರಗ್ಸ್ ವಿಚಾರ ಇತ್ತು ಅಂತಲೇ ಈ ನೆನಪನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಂತಹ ಹಲವು
ವಿಚಾರಗಳು ಈ ಪುಸ್ತಕದಲ್ಲಿರುವುದು ವಿಶೇಷ. ಈ ಪುಸ್ತಕವನ್ನು ತುಮಕೂರಿನ ಶಿಂಷಾ ಲಿಟರರಿ ಅಕಾಡೆಮಿ
ಪ್ರಕಟಿಸಿದೆ.
ಇನ್ನು ಇತ್ತೀಚಿಗೆ ನಾಮಕರಣಗೊಂಡ
ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಸಿನಿಮಾ “ಟಾಕ್ಸಿಕ್” ಕೂಡ ಡ್ರಗ್ಸ್ ಮಾಫಿಯಾ ಸುತ್ತಲೇ ಇದೆಯಂತೆ.
ಸರ್ಕಾರಗಳು ಕಾನೂನುಗಳನ್ನು ಮಾಡುತ್ತವೆ. ಡ್ರಗ್ಸ್ ತಡೆಯೋಣ ಎಂದು ಜಾಹೀರಾತು ನೀಡುತ್ತವೆ. ಆದರೂ
ಡ್ರಗ್ಸ್ ಹೊಸಹೊಸ ರೂಪದಲ್ಲಿ ಜನರಿಗೆ ಸಿಗುತ್ತಲೇ ಇರುತ್ತದೆ. ಅದರಲ್ಲೂ ಯುವಜನಾಂಗದವರು, ವಿದ್ಯಾರ್ಥಿಗಳು
ಬಲಿಯಾಗುತ್ತಲೇ ಇದ್ದಾರೆ. ನಿಮ್ಮ ಮಕ್ಕಳ ಕೈಯಲ್ಲಿ ವಿಚಿತ್ರವಾದ ಚಾಕಲೇಟ್ ಅಥವಾ ಅಪರೂಪದ ತಿಂಡಿ-ತಿನಿಸುಗಳು
ಓಡಾಡುತ್ತಿದ್ದರೆ ಒಮ್ಮೆ ಎಚ್ಚರಿಕೆಯಿಂದ ಗಮನಿಸಿ…
ಇನ್ನು ಡಾ. ಕೆ ರಾಜಶೇಖರ್ “ವೃತ್ತಿ
ಜೀವನ: ತೆರೆದ ಮನ – ವೈದ್ಯವೃತ್ತಿ ಜೀವನದ ಅನುಭವ ಕಥನ” ಪುಸ್ತಕ ನಿಮಗೆ ಬೇಕಿದ್ದರೆ ಶಿಂಷಾ ಲಿಟರಲಿ
ಅಕಾಡೆಮಿಯವರ ಮೊಬೈಲ್ 9845157308 ಸಂಪರ್ಕಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ