ಮಂಗಳವಾರ, ನವೆಂಬರ್ 14, 2023

ಜೀವದ ಗೆಳತಿಯರು (ಮಕ್ಕಳ ಕತೆ)

    ಗುಬ್ಬಿ ಎಂಬ ಪುಟ್ಟ ಹಳ್ಳಿಯಲ್ಲಿ ನಾಲ್ವರು ಗೆಳತಿಯರಿದ್ದರು. ಅವರ ಹೆಸರು ಲೇಖನ, ಶಾರದೆ, ಚಿತ್ರ ಮತ್ತು ವೈಷ್ಣವಿ. ಅವರೆಲ್ಲಾ ಊರಿನ ಅಮರ್ ಪಬ್ಲಿಕ್ ಸ್ಕೂಲಿನಲ್ಲಿ ಏಳನೇ ತರಗತಿ ಓದುತ್ತಿದ್ದರುಅವರೆಲ್ಲಾ ಜೀವದ ಗೆಳತಿಯರಾಗಿದ್ದರು. ಒಂದೇ ಊರಿನವರಾದ್ದರಿಂದ ಅವರು ಶಿಶುವಿಹಾರದಿಂದಲೂ ಒಂದೇ ಶಾಲೆ, ಒಂದೇ ಬೆಂಚು! ನಾಲ್ವರೂ ಒಟ್ಟಿಗೆ ಶಾಲೆಗೆ ಸರಿಯಾದ ಸಮಯಕ್ಕೆ ಬರುತ್ತಿದ್ದುದರಿಂದ ಹಿಡಿದು ಸಂಜೆ ಮನೆಗೆ ಹೋಗುವುವರೆಗೂ ಜೊತೆಜೊತೆಯಾಗಿಯೇ ಇರುತ್ತಿದ್ದರು. ಒಟ್ಟಾಗಿಯೇ ಓದುವುದು, ಆಡುವುದು, ಊಟ ಮಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಅವರು ಅದೆಷ್ಟು ಜೀವದ ಗೆಳತಿಯರಾಗಿದ್ದರೆಂದರೆ, ಯಾರಾದರೂ ಒಬ್ಬರಿಗೆ ಅನಾರೋಗ್ಯವಾದರೆ ಉಳಿದವರೆಲ್ಲಾ ಚಡಪಡಿಸುತ್ತಿದ್ದರು. ಅವರೂ ಒಟ್ಟಿಗೆ ಶಾಲೆಗೆ ರಜೆ ಹಾಕಿ, ಆರೋಗ್ಯ ಕೆಟ್ಟ ಗೆಳತಿಯ ಮನೆಗೆ ಹೋಗಿ ಅವಳ ಉಪಚಾರ ಮಾಡುತ್ತಿದ್ದರು. ಒಮ್ಮೊಮ್ಮೆ ವೈದ್ಯರ ಬಳಿಯೂ ಒಟ್ಟಿಗೆ ಹೋದದ್ದೂ ಇದೆ. ಪುಣ್ಯಕ್ಕೆ ವೈದ್ಯರು ಕೊಟ್ಟ ಔಷಧಿಗಳನ್ನು ಮಾತ್ರ ಒಟ್ಟಿಗೆ ತೆಗೆದುಕೊಳ್ಳುತ್ತಿರಲಿಲ್ಲ! ಅದರಿಂದ ಉಂಟಾಗಬಹುದಾದ ದುಷ್ಪರಿಣಾಮದ ಸಾಮಾನ್ಯ ತಿಳಿವಳಿಕೆ ಅವರಿಗಿತ್ತು. ನಾಲ್ವರು ಜೀವದ ಗೆಳತಿಯರನ್ನು ಕಂಡು ಹೊಟ್ಟೆ ಉರಿದುಕೊಳ್ಳುವವರು ತಣ್ಣೀರು ಕುಡಿದಷ್ಟೇ ತಮ್ಮ ಉರಿಯನ್ನು ಕಮ್ಮಿ ಮಾಡಿಕೊಳ್ಳಬೇಕಿತ್ತು. ಇವರ ನಡುವೆ ಜಗಳ ತಂದಿಡಲು ಪ್ರಯತ್ನ ಪಡುವವರು ಇವರ ಒಗ್ಗಟ್ಟನ್ನು ಮುರಿಯಲು ಸಾಧ್ಯವಾಗದೆ ಇಂಗು ತಿಂದ ಮಂಗನAತಾಗಿಬಿಡುತ್ತಿದ್ದರು

    ಹೀಗೆ ಜೀವದ ಗೆಳತಿಯರಾಗಿದ್ದ ಇವರ ಹವ್ಯಾಸಗಳು ಮಾತ್ರ ಬೇರೆಬೇರೆಯಾಗಿದ್ದವು. ಲೇಖನಳಿಗೆ ಚೆನ್ನಾಗಿ ಓದಿ ಪತ್ರಕರ್ತೆಯಾಗುವುದರ ಜೊತೆಗೆ ಸಾಹಿತಿಯೂ ಆಗಿ ಹೆಸರು ಮಾಡಬೇಕೆಂಬ ಆಸೆಯಿತ್ತು. ಪಠ್ಯೇತರ ಪುಸ್ತಕಗಳನ್ನು ಓದುವುದರ ಜೊತೆಗೆ ಕವನ, ಕತೆಗಳನ್ನು ಬರೆಯುತ್ತಿದ್ದಳು. ಶಾಲೆಯ ಗೋಡೆ ಪತ್ರಿಕೆಗೆ ಆಣಿ ಮುತ್ತುಗಳು ಮತ್ತು ಶಾಲೆಯ ಕಾರ್ಯಕ್ರಮಗಳ ವರದಿಯನ್ನು ಬರೆಯುತ್ತಿದ್ದಳು. ಶಾರದೆಗೆ ಚೆನ್ನಾಗಿ ಓದಿ ಶಿಕ್ಷಕಿಯಾಗಬೇಕೆಂಬ ಬಯಕೆಯಿತ್ತು. ಬಿಡುವಿನ ವೇಳೆಯಲ್ಲಿ ತನಗಿಂತ ಚಿಕ್ಕಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದಳು. ಅವಳ ಬರವಣಿಗೆ ಅಚ್ಚಾದ ಅಕ್ಷರಗಳಂತಿರುತ್ತಿದ್ದವು. ಇನ್ನು ಚಿತ್ರಳಿಗೆ ಹೆಸರಾಂತ ನಟಿಯಾಗಬೇಕೆಂಬ ಕನಸಿತ್ತು. ಅವಳ ಕನಸನ್ನು ನನಸಾಗಿಸಲು ಶಾಲೆಯ ನಾಟಕಗಳಲ್ಲಿ ಅಭಿನಯಿಸುವುದು, ಏಕಪಾತ್ರಭಿನಯದಲ್ಲಿ ಶಭಾಷ್ ಎನ್ನಿಸಿಕೊಳ್ಳುವುದು ಮತ್ತು ಶಾಲೆಯ ವಾರ್ಷಿಕೋತ್ಸವದಂದು ಚೆನ್ನಾಗಿ ನೃತ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸುವುದು ಸಾಮಾನ್ಯವಾಗಿತ್ತು. ಮೂವರದ್ದು ಒಂದೊAದು ದಾರಿಯಾದರೆ, ವೈಷ್ಣವಿಯದ್ದು ಮಾತ್ರ ಹೆಸರಾಂತ ವ್ಯಾಪಾರಿಯಾಗಬೇಕೆಂಬ ಹೆಬ್ಬಯಕೆ. ಆಕೆ ಚಿಕ್ಕಂದಿನಿAದಲೂ ಹಣ ಉಳಿಸುವುದರಲ್ಲಿ ಎತ್ತಿದ ಕೈ! ಉಳಿಸಿದ ಹಣದಲ್ಲಿ ಒಮ್ಮೆ ಒಂದು ಪುಟಾಣಿ ಚಿನ್ನದುಂಗರವನ್ನು ಖರೀದಿಸಿ, ಅದನ್ನು ಚಿನ್ನದ ಬೆಲೆ ಜಾಸ್ತಿಯಾದಾಗ ಮಾರಿ ಲಾಭ ಮಾಡಿಕೊಂಡದ್ದನ್ನು ಹೆಮ್ಮೆಯಿಂದ ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದಳು. ಹವಾಸ್ಯಗಳು ಬೇರೆಬೇರೆಯಾದರೂ ಇವರೆಲ್ಲಾ ಪರಸ್ಪರ ಒಬ್ಬರನ್ನೊಬ್ಬರ ಅಭಿರುಚಿಯನ್ನು ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು.

    ಆದರೆ, ಒಂದು ದಿನ ಇವರ ಜೇನುಗೂಡಿನಂತ ಸ್ನೇಹಕ್ಕೆ ಕಲ್ಲು ಬಿದ್ದೇ ಬಿಟ್ಟಿತ್ತು. ದಿನ ಅವರ ಜೀವನದ ಅತ್ಯಂತ ಒಳ್ಳೆಯ ಮತ್ತು ಅತಿ ಕೆಟ್ಟ ದಿನವೂ ಆಗಿತ್ತು. ದಿನ ಇವರ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬಂದಿತ್ತು. ಇವರೆಲ್ಲರೂ ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಮೊದಲಿಗರಾಗಿ ಪಾಸಾಗಿದ್ದರು. ಖುಷಿ ದಿನವನ್ನು ಒಳ್ಳೆಯ ದಿನವನ್ನಾಗಿಸಿದ್ದರೆ, ಮುಂದೆ ಏನು ಎಂಬ ಪ್ರಶ್ನೆ ದಿನವನ್ನು ಅವರ ಜೀವನದ ಅತ್ಯಂತ ಕೆಟ್ಟ ದಿನವೆಂದು ಸಾಬೀತುಮಾಡಿತ್ತು. ಯಾಕೆಂದರೆ, ಪುಟ್ಟ ಊರಿನ ಶಾಲೆಯಲ್ಲಿ ಎಂಟನೇ ತರಗತಿಯೇ ಇರಲಿಲ್ಲ! ಕಾರಣ ಮುಂದಿನ ವಿದ್ಯಾಭ್ಯಾಸಕ್ಕೆ ಅವರೆಲ್ಲಾ ತುಮಕೂರು ನಗರಕ್ಕೇ ಹೋಗಬೇಕಿತ್ತು.

 ನಾಲ್ವರೂ ಒಲ್ಲದ ಮನಸ್ಸಿನಿಂದಲೇ ಒಂದು ತೀರ್ಮಾನಕ್ಕೆ ಬಂದಿದ್ದರು. ಮೊದಲು ತಮ್ಮ ತಮ್ಮ ಮನೆಗಳಿಗೆ ಹೋಗಿ ತಂದೆ-ತಾಯಿಗಳಿಗೆ ತಮ್ಮ ಫಲಿತಾಂಶವನ್ನು ತಿಳಿಸಿ, ಮುಂದಿನ ವಿದ್ಯಾಭ್ಯಾಸಕ್ಕೆ ತುಮಕೂರಿನ ಯಾವುದಾದರೂ ಒಂದೇ ಶಾಲೆಗೆ ಸೇರಿಸಿ ಎಂದು ಕೇಳಿಕೊಳ್ಳುವುದೆಂದು. ಅವರವರ ಮನೆಗಳಿಗೆ ಹೋದಾಗ ವಿಧಿ ಅಲ್ಲಿ ಬೇರೆಯದೆ ಆಟವಾಡಿತ್ತು. ಚಿಕ್ಕಂದಿನಿA ಕೈಬಿಡದ ಅದೃಷ್ಟ ಇವರ ಕೈಗಳನ್ನು ಒಮ್ಮೆಗೇ ಕೊಡವಿಕೊಂಡುಬಿಟ್ಟಿತ್ತು. ಎಲ್ಲರ ಮನೆಯಲ್ಲೂ ಮಕ್ಕಳು ಪ್ರಥಮ ದರ್ಜೆಯಲ್ಲಿ ಪಾಸಾದ ವಿಷಯ ಸಂತಸ ತುಂಬಿದ್ದರೆ, ಒಬ್ಬಬ್ಬರ ಮನೆಯಲ್ಲೂ ನಡೆದ ಮಾತುಕತೆಗಳು ಇವರನ್ನು ನಡುಗಿಸಿ ದುಃಖದ ಮಡುವಿನಲ್ಲಿ ತೋಯಿಸಿದ್ದವು. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಲೇಖನಳ ತಂದೆಗೆ ಮೈಸೂರಿಗೆ ವರ್ಗವಾಗಿದ್ದರೆ, ಶಿಕ್ಷಕರಾಗಿದ್ದ ಶಾರದೆಯ ತಂದೆ ಪ್ರಮೋಷನ್ ಮೇಲೆ ತುಮಕೂರಿಗೆ ಹೊರಟ್ಟಿದ್ದರು. ಹಳ್ಳಿಯವರಿಗೆ ನಾಟಕ ಹೇಳಿಕೊಡುತ್ತಿದ್ದ ಚಿತ್ರಳ ತಂದೆಗೆ ಬೆಂಗಳೂರಿನಲ್ಲಿ ಟಿವಿ ಛಾನೆಲ್ಲೊಂದಕ್ಕೆ ಧಾರಾವಾಹಿ ನಿರ್ದೇಶಿಸುವ ಅಮೂಲ್ಯ ಅವಕಾಶ ಸಿಕ್ಕಿಬಿಟ್ಟಿತ್ತು! ಇನ್ನು ವೈಷ್ಣವಿಯ ತಂದೆ ತಮ್ಮ ಜವಳಿ ಉದ್ಯಮವನ್ನು ಮತ್ತಷ್ಟು ಬೆಳೆಸಲು ದಾವಣಗೆರೆಗೆ ಗಂಟು ಮೂಟೆ ಕಟ್ಟಲು ನಿರ್ಧರಿಸಿದ್ದರು. ನಮ್ಮ ಮನೆಯಲ್ಲಿ ಮಾತ್ರ ಹೀಗಾಗಿದೆ, ಇದನ್ನು ಗೆಳತಿಯರಿಗೆ ಹೇಗೆ ಹೇಳುವುದು ಎಂದು ನಾಲ್ವರೂ ಒಂಟಿಯಾಗಿಯೇ ರಾತ್ರಿಯೆಲ್ಲಾ ದುಃಖಿಸುತ್ತಲೇ ಕಳೆದಿದ್ದರು.

 ಮರುದಿನ, ಶಾಲೆಯ ಹೂದೋಟದಲ್ಲಿ ನಾಲ್ವರೂ ಒಟ್ಟಿಗೆ ಕಳೆಗುಂದಿದ ಹೂಗುಚ್ಛದಂತೆ ಕಾಣುತ್ತಿದ್ದರು. ತಮ್ಮ ತಮ್ಮ ಮನೆಗಳಲ್ಲಿ ನಡೆದ ವಿಷಯಗಳನ್ನು ಹಂಚಿಕೊAಡಾಗ, ಎಲ್ಲರಿಗೂ ಒಮ್ಮೆಗೆ ಆಶ್ಚರ್ಯವಾಗಿ ನಗುವುದೋ, ಅಳುವುದೋ ತಿಳಿಯದಾಯಿತು. ನಮ್ಮ ಕೈಲೇನಿದೆ, ಬಂದದ್ದನೆಲ್ಲಾ ಎದುರಿಸಿಯೇ ಬಿಡೋಣವೆಂದು ನಿರ್ಧರಿಸಿದರು. ದೈಹಿಕವಾಗಿ ದೂರದಲ್ಲಿದ್ದರೂ ಮಾನಸಿಕವಾಗಿ ಹತ್ತಿರವಾಗೇ ಇರುವುದು ಹೇಗೆ ಎಂದು ಚಿಂತಿಸತೊಡಗಿದರು. ಅವರಿಗೆ ಏನೂ ತೋಚದೆ ಶಿಕ್ಷಕರನ್ನು ಕೇಳುವುದೆಂದು ಮೊದಲು ಕನ್ನಡದ ಶಿಕ್ಷಕಿಯ ಬಳಿಗೆ ಹೋದರು. ಅವರು ಪರಸ್ಪರ ಪತ್ರಗಳನ್ನು ಬರೆಯುವ ಅಭ್ಯಾಸ ಮಾಡಿಕೊಳ್ಳಿ ಎಂದು ಸಲಹೆಯಿತ್ತರು. ನಂತರ ವಿಜ್ಞಾನದ ಶಿಕ್ಷಕರು ಎಲ್ಲರೂ ಒಂದೊAದು ಮೊಬೈಲ್ ಕೊಂಡುಕೊಳ್ಳಿ ಎಂದರೆ, ಇಂಗ್ಲೀಷ್ ಶಿಕ್ಷಕರು ಎಲ್ಲರೂ ವರ್ಷಕ್ಕೊಮ್ಮೆ ಗೆಟ್ ಟು ಗೆದರ್ ಪಾರ್ಟಿ ಮಾಡಿಬಿಡಿ ಎಂದರು. ಯಾರ ಸಲಹೆಯೂ ಜೀವದ ಗೆಳತಿಯರಿಗೆ ಸಮಂಜಸವೆನಿಸಲಿಲ್ಲ. ಕಡೆಗೆ ಇವರೆಲ್ಲಾ ಕಂಪ್ಯೂಟರ್ ಶಿಕ್ಷಕರ ಬಳಿ ಹೋದರು. ಅವರು ಒಂದು ಕ್ಷಣ ಯೋಚಿಸಿ ನೀವೆಲ್ಲಾ ಫೇಸ್ಬುಕ್ಕಿನಲ್ಲಿ ಒಂದಾಗಿ ಬಿಡಿ. ಅಲ್ಲಿ ನಿಮ್ಮ ಎಲ್ಲಾ ಚಟುವಟಿಕೆಗಳನ್ನು ದಾಖಲಿಸಿ. ನಿಮ್ಮ ನಾಲ್ಕೇ ಜನರ ಒಂದು ಗುಂಪನ್ನು ಮಾಡಿಕೊಂಡು ನಿಮ್ಮ ಜೇನುಗೂಡನ್ನು ಮತ್ತೆ ಕಟ್ಟಿಕೊಳ್ಳಿ ಎಂದರು. ಸಲಹೆಯು ಎಲ್ಲಾ ಗೆಳತಿಯರಿಗೂ ಹಿಡಿಸಿತು. ಕಂಪ್ಯೂಟರ್ ಶಿಕ್ಷಕರು ಇವರಿಗೆ ಫೇಸ್ಬುಕ್ಕಿನ ಉಪಯೋಗ ಮತ್ತು ದುರುಪಯೋಗ ಎಲ್ಲವನ್ನೂ ಮನದಟ್ಟಾಗುವಂತೆ ತಿಳಿಸಿ ಬೀಳ್ಕೊಟ್ಟರು. ಶಿಕ್ಷಕರ ಉಪಯುಕ್ತ ಸಲಹೆ ಮತ್ತು ಮಾಹಿತಿಗೆ ಧನ್ಯವಾದ ಹೇಳಿ ಎಲ್ಲಾ ಗೆಳತಿಯರು ತಮ್ಮ ಮನೆಗಳ ದಾರಿ ಹಿಡಿದರು.

 ಇದೀಗ ಪ್ರತಿದಿನ ಒಂದೇ ಸಮಯದಲ್ಲಿ ಜೀವದ ಗೆಳತಿಯರು ತಮ್ಮ ಫೇಸ್ಬುಕ್ ಖಾತೆಗಳನ್ನು ತೆರೆದುಕೊಂಡು ಕೂಡುತ್ತಾರೆ. ಅರಮನೆÀ ನಗರಿ ಮೈಸೂರಿನಿಂದ ಲೇಖನ, ವಿದ್ಯಾನಗರಿ ತುಮಕೂರಿನಿಂದ ಶಾರದೆ, ಕನಸಿನ ನಗರಿ ಬೆಂಗಳೂರಿನಿA ಚಿತ್ರ ಮತ್ತು ವಾಣಿಜ್ಯ ನಗರಿ ದಾವಣಗೆರೆಯಿಂದ ವೈಷ್ಣವಿ ತಮ್ಮ ಸ್ಟೇಟಸ್ ಅಪ್ಡೇಟ್ ಮಾಡುತ್ತಲೋ, ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡುವುದರಲ್ಲಿಯೋ, ಚಾಟ್ ಮಾಡುತ್ತಲೋ, ಲೈಕಿಸುವುದರಲ್ಲಿಯೋ, ಕಾಮೆಂಟಿಸುವುದರಲ್ಲಿಯೋ ತೊಡಗಿದರೆಂದರೆ ಫೇಸ್ಬುಕ್ಕಿಗೂ ಹೊಟ್ಟೆ ಉರಿಯತೊಡಗುತ್ತದೆ! 

                                         -    ಗುಬ್ಬಚ್ಚಿ ಸತೀಶ್

@@@

ಶುಕ್ರವಾರ, ಅಕ್ಟೋಬರ್ 20, 2023

ಲೈಬ್ರರಿಲಿ ಇಲಿ ಇದೆ, ಜೊತೆಗೆ ಪುಸ್ತಕಗಳೂ ಇವೆ

ಈಗ್ಗೆ ಬಹಳ ವರ್ಷಗಳ ಹಿಂದೆ ನಮ್ಮ ಮನೆಗೊಬ್ಬ ಹುಡುಗ ಬಂದ. ಆತ ನನ್ನ ಶ್ರೀಮತಿಯ ಗೆಳತಿಯ ತಮ್ಮ. ಯಾವುದೋ ಕೆಲಸದ ಮೇಲೆ ನಮ್ಮ ಮನೆಗೆ ಬಂದವನು ನನ್ನಾಕೆ ಅಡುಗೆಮನೆಯಲ್ಲಿ ಇದ್ದುದರಿಂದ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ. ಅವನನ್ನು ಮಾತಿಗೆ ಎಳೆದ ನಾನು, ಹೆಸರು, ಊರು, ಓದು ಎಂದು ಔಪಚಾರಿಕವಾಗಿ ವಿಚಾರಿಸಿಕೊಂಡು ಆತನ ಹವ್ಯಾಸಗಳ ಬಗ್ಗೆ ವಿಚಾರಿಸಿದೆ. ಟಿವಿ ನೋಡ್ತೇನೆ ಎಂದೆ. ಅಷ್ಟೇನಾ ಎಂದೆ. ಅವನ ಬಳಿ ಇನ್ನೊಂದು ಮಾತಿರಲಿಲ್ಲ. ಟಿವಿಯಲ್ಲಿ ಏನ್ ನೋಡ್ತೀಯ ಎಂದೆ? ಅದಕ್ಕೂ ಆತನ ಬಳಿ ಉತ್ತರವಿರಲಿಲ್ಲ. ಸುಮ್ಮನೆ ಕುಳಿತುಬಿಟ್ಟ. ನಾನೂ ಸುಮ್ಮನಾದೆ.



ಈ ಹವ್ಯಾಸಗಳೆ ಹಾಗೆ. ನಾವು ಯಾವ ಹವ್ಯಾಸ ರೂಢಿಸಿಕೊಳ್ಳುತ್ತೇವೆಯೋ ಅದರ ಮೇಲೆ ನಮ್ಮ ನಮ್ಮ ವ್ಯಕ್ತಿತ್ವವೂ ರೂಪುಗೊಳ್ಳುತ್ತಾ ಹೋಗುತ್ತದೆ. ಹವ್ಯಾಸಗಳು ಹಲವಾರಿವೆ. ಒಳ್ಳೆಯ ಮತ್ತು ಕೆಟ್ಟ ಹವ್ಯಾಸಗಳೂ ಇವೆ. ಅದರಲ್ಲೂ ಕೆಲವರು ಟಿವಿ ನೋಡುವುದನ್ನೇ ಹವ್ಯಾಸವೆಂದುಕೊಂಡಿರುತ್ತಾರೆ. ಅದು ಹವ್ಯಾಸವಲ್ಲ, ಚಟ. ಹವ್ಯಾಸಕ್ಕೂ, ಚಟಕ್ಕೂ ಬಹಳ ವ್ಯತ್ಯಾಸವಿದೆ. ಹವ್ಯಾಸ ಅಭ್ಯಾಸದ ಮೂಲಕ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುವುದರ ಜೊತೆಗೆ ನಮ್ಮ ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗಿರುತ್ತದೆ. ಚಟ ಸುಮ್ಮನೆ ಕಾಲಹರಣ ಮಾಡಿಸುವುದರ ಮೂಲಕ ನಮ್ಮನ್ನು ನಿರುಪಯೋಗಿಯನ್ನಾಗಿ ಮಾಡುತ್ತದೆ. ಆದರೆ, ಹವ್ಯಾಸ ಹಾಗಲ್ಲ ಅದು ನಿಮಗೊಂದು ಭೂಷಣಪ್ರಾಯವೂ ಆಗಿಬಿಡಬಹುದು. ನೀವು ಯಾವುದೇ ಹವ್ಯಾಸಗಳನ್ನು ರೂಢಿಸಿಕೊಂಡರೂ ಅದು ಬಾಲ್ಯದಿಂದಲೇ ಆರಂಭವಾದರೆ ಅದರ ಉಪಯೋಗಗಳು ಹೆಚ್ಚು. ಮನುಷ್ಯನಾದವನಿಗೆ ಒಂದು ಒಳ್ಳೆಯ ಹವ್ಯಾಸವಿದ್ದರೆ ಅದು ಆತನಿಗೆ ಕಳಶವಿಟ್ಟಂತೆ.

ಅಂದಿಗೂ ಇಂದಿಗೂ ಎಂದೆಂದಿಗೂ ನನ್ನ ನೆಚ್ಚಿನ ಹವ್ಯಾಸ ಓದು. ಓದು ಎಂದರೆ ವಿದ್ಯಾರ್ಜನೆಗಷ್ಟೇ ಓದುವುದಲ್ಲ, ಅದು ಪುಸ್ತಕಗಳ ಓದು. ಜ್ಞಾನಾರ್ಜನೆಯ ಓದು. ಮನಸ್ಸಿಗೆ ಮುದ ಕೊಡುವ ಓದು. ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಮನೆಯಲ್ಲಿ ಜೀವನ ನಿರ್ವಹಣೆಗಾಗಿ ಪೇಪರ್ ಕವರ್‌ಗಳನ್ನು ಮಾಡುತ್ತಿದ್ದರು. ಅವುಗಳನ್ನು ಮಾಡುವುದಕ್ಕೆಂದೇ ಹಳೆಯ ನ್ಯೂಸ್ ಪೇಪರ್‌ಗಳನ್ನು, ಮ್ಯಾಗಜೀನ್‌ಗಳನ್ನು ಕೆಜಿಗಟ್ಟಲೆ ತರುತ್ತಿದ್ದರು. ಅವುಗಳಲ್ಲಿ ಮಕ್ಕಳ ಕತೆಗಳಿರುತ್ತಿದ್ದ ಪುಟಗಳನ್ನು ತೆಗೆದುಕೊಂಡು ಬಿಡುವಿನ ವೇಳೆಯಲ್ಲಿ ನಾಲ್ಕನೇ ತರಗತಿಯನ್ನಷ್ಟೇ ಓದಿದ್ದ ನಮ್ಮಮ್ಮ ಜೋರಾಗಿ ಓದುತ್ತಿದ್ದರು. ಅವರು ಜೋರಾಗಿ ಓದಲು ಇದ್ದ ಬಲವಾದ ಕಾರಣವೇನೆಂದರೆ ಅವರಿಗೆ ಸರಿಯಾಗಿ ಓದಲು ಬರುತ್ತಿರಲಿಲ್ಲ. ಆಗ ನಾನು ಅವರ ಓದನ್ನು ಸರಿಪಡಿಸುವ ನೆಪದಲ್ಲಿ ಕತೆಗಳ ಓದಿನೆಡೆಗೆ ಆಕರ್ಷಿತನಾದೆ. ಆ ಆಕರ್ಷಣೆಯಲ್ಲಿ ಯಾವುದೋ ಸಾರ್ಥಕತೆಯೂ ಮೂಡುತ್ತಿತ್ತು. ಇನ್ನು ಅಪ್ಪ ಸಮಯ ಸಿಕ್ಕಾಗಲೆಲ್ಲಾ ದಿನಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದರು. ಅವರೂ ಓದಿದ್ದು ಏಳನೇ ತರಗತಿಯಷ್ಟೆ. ನಮ್ಮ ಮನೆಯಲ್ಲಿ ಸುದ್ಧಿಪತ್ರಿಕೆಗಳನ್ನೇನು ತರಿಸುತ್ತಿರಲಿಲ್ಲ. ಹತ್ತಿರದ ಯಾವುದಾದರೂ ಮನೆಯಲ್ಲಿ ಅಥವಾ ಅಂಗಡಿಗಳಿಗೆ ಬರುತ್ತಿದ್ದ ಪತ್ರಿಕೆಗಳನ್ನು ಕೇಳಿ ಪಡೆದುಕೊಂಡು ಓದುತ್ತಿದ್ದರು. ಈ ಕಾರಣಗಳಿಂದಾಗಿ ನನಗೆ ಅರಿವಿಲ್ಲದೆ ನಾನು ಓದಿನೆಡೆಗೆ ಆಕರ್ಷಿತನಾದೆ. ಓದಿನಲ್ಲಿ ಯಾವುದೋ ಒಂದು ಹೊಸ ಪ್ರಪಂಚವನ್ನು ಕಂಡುಕೊಂಡೆ.

ಮನೆಗೆ ಬರುತ್ತಿದ್ದ ಹಳೆಪೇಪರ್, ಮ್ಯಾಗಜೀನ್‌ಗಳಿಂದಲೇ ಮಕ್ಕಳ ಪುಟಗಳನ್ನು, ಬಾಲಮಂಗಳ, ಚಂದಮಾಮ, ಬಾಲಮಿತ್ರಗಳನ್ನು ಎತ್ತಿಟ್ಟುಕೊಂಡು ನಾನು ಓದುವುದನ್ನು ಗಮನಿಸಿದ್ದ ಅಪ್ಪ ಒಂದು ದಿನ ನನ್ನನ್ನು ನಮ್ಮ ಊರಿನ ಸರ್ಕಲ್ ಬಳಿ ಇರುವ ಲೈಬ್ರರಿಯ ಬಳಿ ಕರೆದುಕೊಂಡು ಹೋಗಿ ಇದು ನಮ್ಮೂರಿನ ಟೌನ್ ಹಾಲ್. ಒಳಗೆ ಹೋಗಿ ಓದು ಎಂದರು. ಇದೇನಿದು ಟೌನ್ ಹಾಲ್ ಎನ್ನುತ್ತಿದ್ದಾರೆ ಎಂದುಕೊಂಡೆ. ಆ ನಂತರ ಗೊತ್ತಾಯಿತು ಅದು ಟೌನ್ ಹಾಲಿನ ಲೈಬ್ರರಿಯೆಂದು. ಹಿಂದಿನ ದಿನಗಳಲ್ಲಿ ಲೈಬ್ರರಿಗಳಿಗೆ ಟೌನ್ ಹಾಲ್ ಎಂದು ಕರೆಯುತ್ತಿದ್ದದ್ದೂ ಉಂಟು.



ಸರಿ, ಹಳೆಯ ಬ್ರಿಟಿಷರ ಕಾಲದ ಕಟ್ಟಡದಂತಿದ್ದ ಲೈಬ್ರರಿಗೆ ಕಾಲಿಟ್ಟ ಮೊದಲ ದಿನದಿಂದ ಇಂದಿನವರೆಗೂ ನನಗೆ ಲೈಬ್ರರಿಯೆಂದರೆ ನೆನಪಿಗೆ ಬರುವುದು ‘ತಬರನ ಕತೆ’ ಸಿನಿಮಾದ ‘ಲೈಬ್ರರಿಲಿ ಇಲಿ ಇದೆ’ ಎಂಬ ಡೈಲಾಗ್. ನಮ್ಮ ನೆಚ್ಚಿನ ಕತೆಗಾರರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ತಬರನ ಕತೆ’ ಕತೆಯು ಅದೇ ಹೆಸರಿನ ಸಿನಿಮಾವಾಗಿ ನಮ್ಮ ಹೆಮ್ಮೆಯ ಸಿನಿಮಾ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಆ ದಿನಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ತನ್ನ ವೈಯಕ್ತಿಕ ನೋವುಗಳಿಂದ, ವ್ಯವಸ್ಥೆಯ ಭ್ರಷ್ಟಾಚಾರಗಳಿಂದ ತಬರಸೆಟ್ಟಿ ಬುದ್ಧಿಮಾಂದ್ಯನಾಗುವುದು ಕತೆಯ ಹಂದರ. ಈ ಸಿನಿಮಾದಲ್ಲಿ ‘ಲೈಬ್ರರಿಲಿ ಇಲಿ ಇದೆ’, ‘ಲೈಬ್ರರಿಲಿ ಇಲಿ ಇದೆ’ ಎಂದು ಆತ ಬರುವ ದೃಶ್ಯ ನನ್ನ ಮನಸ್ಸಲ್ಲಿ ಅಚ್ಚೊತ್ತಿ ಅಂದಿಗೂ ಇಂದಿಗೂ ಮನೆಮಾಡಿಕೊಂಡಿದೆ. ಅದಕ್ಕೆ ಏನೋ ಲೈಬ್ರರಿ ಎಂದರೆ ಇಲಿಯೂ ನೆನಪಿಗೆ ಬರುವುದು. ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದಲ್ಲಿ ‘ತಬರನ ಕತೆ’ ಕತೆಯಿದೆ. ಒಮ್ಮೆ ಓದಿ. ಸಾಧ್ಯವಾದರೆ ಸಿನಿಮಾವನ್ನೂ ನೋಡಿ.



ಮೊದಲಿಗೆ ಲೈಬ್ರರಿಗೆ ಕಾಲಿಟ್ಟಾಗ ಹುಷಾರಾಗಿ ಇಲಿಯನ್ನು ಹುಡುಕಿದೆನಾದರೂ, ಅಲ್ಲಿ ಇಲಿಯ ಬದಲು ಪುಸ್ತಕಗಳು, ಪತ್ರಿಕೆಗಳನ್ನು ನೋಡಿ ಬೆರಗಾದೆ. ಅಂದಿನಿಂದ ಲೈಬ್ರರಿ ನನ್ನ ಎರಡನೆಯ ಮನೆಯಾಯಿತು. ಕಾಲೇಜಿಗೆ ತುಮಕೂರಿಗೆ ಬರುವ ಸಮಯದಲ್ಲೂ ತುಮಕೂರಿನ ಟೌನ್ ಹಾಲಿನಲ್ಲಿರುವ ಗ್ರಂಥಾಲಯದಲ್ಲಿ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಂಡೆ. ಇನ್ನು ವೃತ್ತಿಯ ನೆಪದಲ್ಲಿ ತುಮಕೂರಿನಲ್ಲಿ ಮನೆಮಾಡಿಕೊಂಡ ಮೇಲೆ ಗ್ರಂಥಾಲಯಕ್ಕೆ ಸದಸ್ಯನೂ ಆದೆ. ನೀವು ಓದುತ್ತಿರೋ ಬಿಡುತ್ತಿರೋ ಒಮ್ಮೆ ನಿಮ್ಮೂರಿನ ಗ್ರಂಥಾಲಯಕ್ಕೆ ಕಾಲಿಟ್ಟು ಬನ್ನಿ. ಪುಸ್ತಕವೊಂದರ ಮುಖಪುಟವೊಂದನ್ನು ತನ್ಮಯರಾಗಿ ನೋಡಿ, ಪುಟಗಳ ಮೇಲೆ ಪ್ರೀತಿಯಿಂದ ಕಣ್ಣಾಡಿಸಿ, ನಿಮ್ಮಲ್ಲೂ ಓದುವ ಆಸೆ ಮೂಡಬಹುದು. ಇನ್ನು ಓದುವ ಹವ್ಯಾಸ ಇರುವವರಿಗೆ, ಗ್ರಂಥಾಲಯಗಳಿಗೆ ಆಗಾಗ ಭೇಟಿ ಕೊಡುವವರಿಗೆ ನಾ ಏನನ್ನೂ ಹೇಳುವ ಅಗತ್ಯವಿಲ್ಲ. ನಾನಂತೂ ಗ್ರಂಥಾಲಯಗಳೆಂದರೆ ದೇವಾಲಯಗಳು ಎಂದುಕೊಂಡಿದ್ದೇನೆ. ದೇವಾಲಯಗಳಿಗೆ ನೀಡುವ ಮಹತ್ವವನ್ನು ಗ್ರಂಥಾಲಯಗಳಿಗೂ ನೀಡಬೇಕಿದೆ.

ಮೊನ್ನೆ ತುಮಕೂರಿನ ಗ್ರಂಥಾಲಯದ ಬಳಿ ಇತ್ತೀಚಿಗಷ್ಟೇ ಪರಿಚಯವಾದ ಯುವಕವಿಯೊಬ್ಬ ಸುಳಿದಾಡುತ್ತಿದ್ದನ್ನು ನೋಡಿ ಮಾತನಾಡಿಸಿದೆ. ಕಾಲೇಜು ಓದುತ್ತಿರುವ ಆತ ತನ್ನ ಬಿಡುವಿನ ವೇಳೆಯಲ್ಲಿ ಗ್ರಂಥಾಲಯಕ್ಕೆ ಬರುತ್ತೇನೆಂದು ಹೇಳಿದ. ಬಹಳ ಖುಷಿಯಾಯಿತು. ನನ್ನ ಕಾಲೇಜಿನ ದಿನಗಳು ಕಾರಂಜಿಯಂತೆ ಚಿಮ್ಮುತ್ತಾ ನೆನಪಿಗೆ ಬಂದವು.



ಸಾಧ್ಯವಾದರೆ ಒಮ್ಮೆ ಬೆಂಗಳೂರಿಗೆ ಹೋದಾಗ ನೂರು ವರ್ಷ ಪೂರೈಸಿರುವ ಕಬ್ಬನ್ ಪಾರ್ಕಿನ ಗ್ರಂಥಾಲಯಕ್ಕೆ ಹೋಗಿಬನ್ನಿ.



ಈಗ ನಮ್ಮೂರಿನಲ್ಲೂ ಹೊಸ ಲೈಬ್ರರಿ ಆಗಿದೆ. ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಲೈಬ್ರರಿ ಆಗಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ...

***

ಭಾನುವಾರ, ಅಕ್ಟೋಬರ್ 8, 2023

"ಅಮೇಜಾನ್‌ ಗ್ರೇಟ್‌ ಇಂಡಿಯನ್‌ ಫೇಸ್ಟಿವಲ್‌ - 2023"

ಸ್ನೇಹಿತರೇ,



ಇಂದಿನಿಂದ ಅಕ್ಟೋಬರ್‌ 14ರವರೆಗೆ "ಅಮೇಜಾನ್‌ ಗ್ರೇಟ್‌ ಇಂಡಿಯನ್‌ ಫೇಸ್ಟಿವಲ್‌ - 2023" ಶುರುವಾಗಿದೆ. ಸ್ಮಾರ್ಟ್‌ ಪೋನ್‌ಗಳು, ಸ್ಮಾರ್ಟ್‌ ಟಿವಿಗಳು, ಲ್ಯಾಪ್‌ ಟಾಪ್‌ಗಳು, ಗೃಹಪಯೋಗಿ ವಸ್ತುಗಳು ಮತ್ತು ಇನ್ನಿತರ ವಸ್ತುಗಳನ್ನು ಕೊಳ್ಳಲು ಸಕಾಲ. ಪುಸ್ತಕಗಳನ್ನು ಕೊಳ್ಳುವವರಿಗೂ ಇದು ಸಕಾಲ...

ಆಸಕ್ತರಿಗೆ ಈ ಸೇಲಿನ ಲಿಂಕ್‌ https://amzn.to/3Q5Ktiy

ಹ್ಯಾಪಿ ಶಾಪಿಂಗ್...
ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್...


ಶುಕ್ರವಾರ, ಅಕ್ಟೋಬರ್ 6, 2023

ಕ್ರಿಕೆಟ್‌ ನೋಡಿ ಇಂಗ್ಲೀಷ್‌ ಕಲಿಯಬಹುದೇ!?

Learn English Through Cricket Commentary

ಸ್ನೇಹಿತರೇ,

ನೆನ್ನೆಯಿಂದ (ಅಕ್ಟೋಬರ್‌ 5ರಿಂದ ನವೆಂಬರ್‌ 19ರವರೆಗೆ) ಐಸಿಸಿ ಪುರುಷರ ವಿಶ್ವ ಕಪ್‌ ಕ್ರಿಕೆಟ್‌ ಶುರುವಾಗಿದೆ. ಭಾರತ ಸೇರಿದಂತೆ ಒಟ್ಟು ಹತ್ತು ರಾಷ್ಟ್ರಗಳು ಪ್ರಶಸ್ತಿಗೆ ಸೆಣಸಲಿವೆ. ಈ ಬಾರಿಯ ವಿಶ್ವ ಕಪ್‌ನಲ್ಲಿ ವೆಸ್ಟ್‌ ಇಂಡೀಸ್‌ ತಂಡ ಇಲ್ಲದಿರುವುದು ದುರಂತ. ಈ ಹಿಂದೆ ಇತರೆ ನೆರೆರಾಷ್ಟ್ರಗಳ ಜೊತೆ ಅಂದರೆ ಭಾರತ ಉಪಖಂಡದಲ್ಲಿ ನಮ್ಮ ದೇಶ ಆತಿಥ್ಯವನ್ನು ಹಂಚಿಕೊಂಡಿತ್ತು. ಈ ಬಾರಿ ನಮ್ಮ ದೇಶದ್ದೇ ಪೂರ್ಣ ಆತಿಥ್ಯ… ಇದು 13ನೇ ವಿಶ್ವಕಪ್‌…

ಈಗ ನಾನು ವಿಷಯಕ್ಕೆ ಬರುತ್ತೇನೆ. ಕ್ರಿಕೆಟ್‌ ನೋಡಿ ಇಂಗ್ಲೀಷ್‌ ಕಲಿಯಬಹುದೇ!? ಹೌದು, ಎನ್ನುವುದು ನನ್ನ ಉತ್ತರ. ಹೇಗೆಂದರೆ, ಕಾಮೆಂಟರಿ ಕೇಳುತ್ತಾ… ಹೌದಾ…!? ಕ್ರಿಕೆಟ್‌ ನೋಡುತ್ತಾ ಕಾಮೆಂಟರಿ ಕೇಳುತ್ತಾ ಇಂಗ್ಲೀಷ್‌ ಕಲಿಯಬಹುದಾ ಎಂದು ಹುಬ್ಬೇರಿಸಬೇಡಿ. ಖಂಡಿತಾ ಕಲಿಯಬಹುದು. ಅದೂ ಸ್ಪೋಕನ್‌ ಇಂಗ್ಲೀಷ್...‌ ಕ್ರಿಕೆಟ್‌ ನೋಡುವವರಿಗೆ ಗೊತ್ತಿರುತ್ತೆ, ಜೋರಾಗಿ ಸೌಂಡ್‌ ಕೊಟ್ಟಿಕೊಂಡು ಕ್ರಿಕೆಟ್‌ ನೋಡುವ ಮಜಾ! ಆ ಮಜಾದಲ್ಲಿಯೇ ಇಂಗ್ಲೀಷ್‌ ಕಲಿತುಬಿಡಬಹುದು.

ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಷ್ಟೇ ನಾವು ಕನ್ನಡದಲ್ಲಿ ಕಾಮೆಂಟರಿ ಕೇಳುತ್ತಿರುವುದು. ಮೊದಲೆಲ್ಲಾ ಕಾಮೆಂಟರಿ ಅಂದರೆ ಅದು ಇಂಗ್ಲೀಷ್‌ನಲ್ಲಿ ಮಾತ್ರ ಅಲ್ವಾ? ಟಿವಿ ಬರುವ ಮುಂಚೆ ರೇಡಿಯೋವೇ ಗತಿ! ಆಗ ಇಂಗ್ಲೀಷ್‌ ಕಾಮೆಂಟರಿ ಕೇಳುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಆ ಕಾಲದವರು ಇನ್ನೂ ಚೆನ್ನಾಗಿ ಇಂಗ್ಲೀಷ್‌ ಕಲಿಯಬಹುದಾಗಿತ್ತು, ಕೆಲವರಂತೂ ಈ ಮೂಲಕವೇ ಇಂಗ್ಲೀಷ್‌ ಕಲಿತಿದ್ದಾರೆ.

ಸದ್ಯಕ್ಕೆ ನಾನು ಟಿವಿಯ ಕಾಮೆಂಟರಿ ಬಗ್ಗೆ ಹೇಳ್ತೇನೆ. ನಾನು ಟಿವಿಯಲ್ಲಿ ಕ್ರಿಕೆಟ್‌ ನೋಡುವ ಕಾಲಕ್ಕೆ ಕಾಮೆಂಟರಿಗಾರರಾಗಿ ಫೇಮಸ್‌ ಆಗಿದ್ದವರು ಟೋನಿ ಗ್ರೇಗ್, ಜೆಫ್ರಿ ಬಾಯ್ಕಾಟ್‌, ಸುನೀಲ್‌ ಗವಾಸ್ಕರ್...‌ ಬೆರಳೆಣಿಕೆಯಷ್ಟು ಮಾತ್ರ. ಇವರ ಕಾಮೆಂಟರಿ ಕೇಳುತ್ತಲೇ 80-90ರ ದಶಕದ ಕ್ರಿಕೆಟ್‌ ಪ್ರೇಮಿಗಳು ಬೆಳೆದದ್ದು. ಜೊತೆಗೆ ಇಂಗ್ಲೀಷ್‌ ಕಲಿತದ್ದು. ಅಷ್ಟು ಅಚ್ಚುಕಟ್ಟಾದ ಸೊಗಸಾದ ಭಾಷೆ ಇವರದಾಗಿರುತ್ತಿತ್ತು. ನಂತರ ರವಿ ಶಾಸ್ತ್ರಿ, ಕಪಿಲ್‌ ದೇವ್‌, ಸಿಕ್ಸರ್‌ ಸಿಧು, ಮೈಕೇಲ್‌ ಆರ್ಥಟನ್‌, ಇಯಾನ್‌ ಬಿಷಪ್, ನಾಸೀರ್‌ ಹುಸೇನ್‌, ಸಂಜಯ್‌ ಮಂಜ್ರೇಕರ್‌, ‌ ಹರ್ಷ ಬೋಗ್ಲೆ… ಇನ್ನು ಮುಂತಾದವರು ಫೇಮಸ್‌ ಆಗಿದ್ದಾರೆ. ಹರ್ಷ ಬೋಗ್ಲೆ ಕ್ರಿಕೆಟ್‌ ಕಾಮೆಂಟರಿಯ ದಂತಕಥೆಯೇ ಆಗಿದ್ದಾರೆ.



ಇನ್ನು ನಮ್ಮ ನೆಚ್ಚಿನ ಕೆಲವು ಕ್ರಿಕೆಟರ್‌ಗಳು ಕೂಡ ಕಾಮೆಂಟರಿ ಮಾಡುತ್ತಲೇ ಇರುತ್ತಾರೆ. ಇವರ ಇಂಗ್ಲೀಷ್‌ ಕೂಡ ಚೆನ್ನಾಗಿರುತ್ತದೆ. ಇವರ ಇಂಗ್ಲೀಷ್‌ ಕೇಳುತ್ತಲೇ ಸುಲಭವಾಗಿ ನಾವು ಕೂಡ ಇಂಗ್ಲೀಷ್‌ ಕಲಿಯಬಹುದು. ಅದೂ ನಾನು ಹೇಳಿದಂತೆ ಸ್ಪೋಕನ್‌ ಇಂಗ್ಲೀಷ್!‌ ಇದು ನನ್ನ ಮಟ್ಟಿಗೆ ನಿಜ ಮತ್ತು ನನ್ನಂತೆಯೇ ಕೋಟ್ಯಾನುಕೋಟಿ ಕನ್ನಡಿಗರಷ್ಟೆ ಅಲ್ಲದೆ ಇತರೆ ಭಾಷಿಕರೂ ಸಹ ಇಂಗ್ಲೀಷ್‌ ಕಲಿತಿದ್ದಾರೆ. ನೀವು ಕನ್ನಡದಲ್ಲೇ ಕಾಮೆಂಟರಿ ಕೇಳುವುದಾದರೆ ಅದು ನಿಮ್ಮಿಷ್ಟ. ಕನ್ನಡದ ಜೊತೆಗೆ ಇಂಗ್ಲೀಷ್‌ ಕೂಡ ಕ್ರಿಕೆಟ್‌ ನೋಡುವ ಸಮಯದಲ್ಲೇ ಕಲಿತಿನೀ ಅನ್ನುವುದಾದರೇ ಇನ್ಮುಂದೆ ಕ್ರಿಕೆಟ್‌ ನೋಡುವತ್ತಲೇ ಹರಿಸುವ ಗಮನವನ್ನು ಸ್ಪಲ್ಪ ಕಾಮೆಂಟರಿ ಕೇಳುವ ಕಡೆಗೂ ಹರಿಸಿ ಒಂದಷ್ಟು ಇಂಗ್ಲೀಷ್‌ ನಿಮ್ಮದಾಗಿಸಿಕೊಳ್ಳಿ.

ಈ ಬಾರಿ ಮತ್ತೊಮ್ಮೆ ನಮ್ಮ ಭಾರತ ದೇಶ ಕಪ್‌ ಗೆಲ್ಲಲಿ ಎಂದು ಆಶಿಸುತ್ತಾ…

ಪ್ರೀತಿಯಿಂದ, - ಗುಬ್ಬಚ್ಚಿ ಸತೀಶ್. 

ಬುಧವಾರ, ಅಕ್ಟೋಬರ್ 4, 2023

ಒಂದೇ ತಿಂಗಳಲ್ಲಿ ಐದು ಮುದ್ರಣಗಳು…!

ಒಂದೇ ತಿಂಗಳಲ್ಲಿ ಐದು ಮುದ್ರಣಗಳು…!

ಆತ್ಮೀಯ ಸ್ನೇಹಿತರೇ,

ಸುಮಾರು ಒಂದು ತಿಂಗಳ ಹಿಂದಷ್ಟೇ ಬಿಡುಗಡೆಯಾದ ರಂಗಸ್ವಾಮಿ ಮೂಕನಹಳ್ಳಿ ಅವರ “ಹಣ ಏನಿದು ನಿನ್ನ ವಿಚಿತ್ರ ಗುಣ!” ಪುಸ್ತಕ ಇದಾಗಲೇ ಐದು ಮುದ್ರಣಗಳನ್ನು ಕಂಡು ಯಶಸ್ವಿಯಾಗಿ ಮಾರಾಟವಾಗುತ್ತಲೇ ಇದೆ. ಈ ಗೆಲುವಿಗೆ ಪ್ರಮುಖ ಕಾರಣಗಳೇನು ಅಂತ ನೋಡೋಣ ಬನ್ನಿ…



ಈ ಪುಸ್ತಕ ರಂಗಸ್ವಾಮಿ ಮೂಕನಹಳ್ಳಿ ಅವರ ಇಪ್ಪತ್ತೈದನೇ ಪುಸ್ತಕವೆನ್ನುವುದನ್ನು ಮುಖ್ಯವಾಗಿ ಗಮನಿಸಬೇಕು. ಹಣಕಾಸಿನ ಕುರಿತೇ ಬಹಳಷ್ಟು ಪುಸ್ತಕಗಳನ್ನು ಬರೆದಿರುವ ರಂಗಸ್ವಾಮಿಯವರು ʼಹಣದ ಜೊತೆಗಿನ ನನ್ನ ಸಂಬಂಧ ನನ್ನ ವಯಸ್ಸಿನಷ್ಟೇ ಹಳೆಯದು!ʼ ಎನ್ನುತ್ತಲ್ಲೇ ಹಣ ಕುರಿತು ತಮ್ಮ ಅನುಭವವನ್ನೇಲ್ಲಾ ಇಲ್ಲಿ ಧಾರೆಯೆರೆದಿದ್ದಾರೆ. ನಿಮಗೆ ಜಗತ್ತಿನಲ್ಲಿ ಶಿಕ್ಷಣ ಸಿಗುತ್ತದೆ. ಆದರೆ, ಹಣಕಾಸಿನ ಬಗ್ಗೆ ಸಿಗುವುದಿಲ್ಲ. ಆಗ ಇಂತಹ ಪುಸ್ತಕಗಳಷ್ಟೇ ನಿಮ್ಮ ಹಣಕಾಸಿನ ಅಜ್ಞಾನವನ್ನು ಹೊಡದೊಡಿಸಬಲ್ಲವು.

ಈ ಪುಸ್ತಕದ ಮುಖಪುಟದಲ್ಲಿ ಹಣವಿದೆ. ಜೊತೆಗೆ, ‌ಶೀರ್ಷಿಕೆಯ ಟ್ಯಾಗ್‌ ಲೈನ್‌ – ʼಬಯಸಿದರೆ ದೂರಾಗುತ್ತದೆ; ಬಯಸದಿದ್ದರೆ ಸಿಗುವುದೇ ಇಲ್ಲ!ʼ ಎಂಬ ಸಾಲು ʼಎಲಾ ಹಣವೇ!ʼ ಎಂದು ಓದುಗನನ್ನು ಪುಸ್ತಕ ಕೈಗೆತ್ತುಕೊಳ್ಳುವಂತೆ ಮಾಡುತ್ತಿದೆ.

ಈ ಪುಸ್ತಕದಲ್ಲಿ ಇಪ್ಪತ್ತೈದು ಅಧ್ಯಾಯಗಳಿದ್ದು, ರಂಗಸ್ವಾಮಿಯವರು ಹಣದ ಎಲ್ಲಾ ಮಜಲುಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದಾರೆ. ಹಣ ಕುರಿತು ಬಹುತೇಕ ಧರ್ಮಗಳ ನಂಬಿಕೆಗಳನ್ನು ಕೂಡ ಓದುಗರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಈ ಪುಸ್ತಕದ ಲೇಖಕರು ಮತ್ತು ಪ್ರಕಾಶಕರು (ಬೆಂಗಳೂರಿನ ಸಾವಣ್ಣ ಪ್ರಕಾಶನ) ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ಪ್ರಚಾರ ಮಾಡುತ್ತಲೇ ಇದ್ದಾರೆ. ಪ್ರತಿಯೊಬ್ಬ ಲೇಖಕರು, ಪ್ರಕಾಶಕರು ಇದನ್ನು ಗಮನಿಸಬೇಕು. ನಾನು ಕೂಡ ಪುಸ್ತಕದ ಬೆನ್ನಿನಲ್ಲಿದ್ದ ಮಾತುಗಳನ್ನು ಓದುತ್ತಾ ಈ ಪುಸ್ತಕವನ್ನು ಪ್ರಮೋಟ್‌ ಮಾಡಿದ್ದೆ. ಯೂಟ್ಯೂಬಿನಲ್ಲಿ ನಾನು ಹಾಕಿದ್ದ ಅಮೇಜಾನ್‌ ಲಿಂಕ್‌ ಅನ್ನು ನೂರಾರು ಜನ ಕ್ಲಿಕ್‌ ಮಾಡಿ, ಕೆಲವರು ಪುಸ್ತಕವನ್ನು ಕೂಡ ಕೊಂಡಿದ್ದಾರೆ. ಗೌರೀಶ್‌ ಅಕ್ಕಿ ಸ್ಟೂಡಿಯೋ ಯೂಟ್ಯೂಬ್‌ ಚಾನೆಲ್ಲಿನಲ್ಲಿ ಲೇಖಕರ ಸಂದರ್ಶನವೂ ಕೂಡ ಪ್ರಸಾರವಾಗಿತ್ತು.



ಈ ಪುಸ್ತಕವು ಅಮೇಜಾನ್‌ ಕನ್ನಡ ಟಾಪ್‌ ಸೆಲ್ಲಿಂಗ್‌ ಪುಸ್ತಕವಾಯಿತು. ಕಾರಣ, ಅಮೇಜಾನಿನಲ್ಲಿ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುವುದು ಸುಲಭ ಮತ್ತು ಬಹಳಷ್ಟು ಮಾರಾಟಗಾರರು ಅತಿ ಹೆಚ್ಚು ಮಾರಾಟವಾಗುವ ಪುಸ್ತಕಗಳಿಗೆ ರಿಯಾಯಿತಿ ಮತ್ತು ಬೋನಸ್‌ ಎನ್ನುವಂತೆ ಕೆಲವು ಮಾರಾಟಗಾರರು ಶಿಪ್ಪಿಂಗ್‌ ಶುಲ್ಕ ಹಾಕುವುದಿಲ್ಲ. ಇದು ಅವರಿಗೆ ಹೇಗೆ ಲಾಭ ತರುತ್ತದೋ ಗೊತ್ತಿಲ್ಲ, ಆದರೆ, ಓದುಗನಿಗಂತೂ ಲಾಭವಿದೆ. ಕುಳಿತಲ್ಲೇ ಕಡಿಮೆ ಹಣಕ್ಕೆ ಸಮಯವನ್ನೂ ಉಳಿಸಿಕೊಂಡು ಪುಸ್ತಕವನ್ನು ಖರೀದಿಸುವ ಲಾಭ. ಈ ರೀತಿ ಪುಸ್ತಕಗಳನ್ನು ಖರೀದಿಸುವ ಓದುಗರು ದಿನೇದಿನೇ ಹೆಚ್ಚುತ್ತಿದ್ದಾರೆ. ಈ ಪುಸ್ತಕದ ಮೂಲಕ ಇದು ಮತ್ತೊಮ್ಮೆ ಸಾಬೀತಾಗಿದೆ.

ಹಣ ಎಂದರೆ ಹೆಣ ಕೂಡ ಎದ್ದು ಕೂರುತ್ತೆ ಅಂತಾರೆ. ಅಂತಹದ್ದರಲ್ಲಿ ಬದುಕಿರುವವರು ಬಯಸುವುದರಲ್ಲಿ ತಪ್ಪೇನು ಇಲ್ಲ. ಹಣದ ಮಹತ್ವ ಕುರಿತು ಕೆಲವರು ಹೇಳುತ್ತಾರೆ, ಬಹುತೇಕರು ಹೇಳುವುದೇ ಇಲ್ಲ.



ʼಬೆಚ್ಚನೆಯಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು

ಇಚ್ಛೆಯನರಿವ ಸತಿ ಇರಲು

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞʼ

ಎಂದು ಸರ್ವಜ್ಞನ ವಚನವೇ ಇದೆ.


ಹಣಕ್ಕೂ ಒಂದು ಮನೋಧರ್ಮವಿದೆ. ಒಂದು ವಿಜ್ಞಾನವೂ ಇದೆ. (ʼಹಣದ ಮನೋವಿಜ್ಞಾನʼ ಪುಸ್ತಕ ನೆನಪಿಸಿಕೊಳ್ಳಬಹುದು.) ಮತ್ತೆ ಹಣವನ್ನು ನಮ್ಮದಾಗಿಸಿಕೊಳ್ಳಬಾರದೇ!?

ಈ ಕಾರಣಗಳಿಂದ ರಂಗಸ್ವಾಮಿ ಮೂಕನಹಳ್ಳಿ ಅವರ “ಹಣ ಏನಿದು ನಿನ್ನ ವಿಚಿತ್ರ ಗುಣ!” ಪುಸ್ತಕ ಓದುಗರನ್ನು ತನ್ನತ್ತ ಸೆಳೆಯುತ್ತಲೇ ಇದೆ.

ಇನ್ಯಾಕೆ ತಡ ಈ ಪುಸ್ತಕವನ್ನು ನೀವು ಅತ್ಯಂತ ಕಡಿಮೆ ಹಣಕ್ಕೆ ಅಮೇಜಾನಿನಲ್ಲಿ ಕೊಳ್ಳಬಹುದು. ನಿಮ್ಮ ಪ್ರತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ... https://amzn.to/3QAsPUS

ಪ್ರೀತಿಯಿಂದ, ಗುಬ್ಬಚ್ಚಿ ಸತೀಶ್.

ಸೋಮವಾರ, ಅಕ್ಟೋಬರ್ 2, 2023

ನಿಮ್ಮ ಸಂಕಲ್ಪ ಸಿಂಹದಂತಿರಲಿ!

 ನನ್ನ ಅಜ್ಜ ಯಾರೆಂದು ನನಗೆ ಗೊತ್ತಿಲ್ಲ; ಆದರೆ ಆತನ

ಮೊಮ್ಮಗ ಏನಾಗಬೇಕೆಂದು ನನಗೆ ಗೊತ್ತಿದೆ

-    ಅಬ್ರಹಾಂ ಲಿಂಕನ್, ಅಮೇರಿಕಾದ ಅಧ್ಯಕ್ಷ

ಸ್ನೇಹಿತರೇ, ನಾವು ಜೀವನದಲ್ಲಿ ಏಕೆ ಸೋಲ್ತೀವಿ? ಈ ಪ್ರಶ್ನೆ ಬಹಳ ಮುಖ್ಯವಾದುದು. ನಾವು ನಮ್ಮ ಗುರಿಯನ್ನು ಹುಡುಕಿಕೊಂಡಿರ‍್ತೀವಿ. ಆದರೆ, ಆ ಗುರಿಯೆಡೆಗೆ ಸರಿಯಾದ ದಾರಿಯಲ್ಲಿ ನಿರಂತರವಾಗಿ ನಡೆಯಲ್ಲ. ಅದಕ್ಕಿಂತ ಮುಖ್ಯವಾಗಿ ನಮ್ಮ ಗುರಿಯೆಡೆಗಿನ ಪಯಣವನ್ನು ಆರಂಭಿಸುವುದೇ ಇಲ್ಲ. ಜೊತೆಗೆ ನಾವು ಏನಾಗಬೇಕೆಂದು ನಿರ್ಧಾರ ತಳೆದಿರುತ್ತೇವೋ ಆ ಕುರಿತು ಸಂಕಲ್ಪವೊಂದನ್ನು ಮಾಡಿಕೊಂಡಿರುವುದೇ ಇಲ್ಲ. ಇದೇ ಕಾರಣಕ್ಕೆ ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಾಹಂ ಲಿಂಕನ್ ಅವರ ಮಾತೊಂದನ್ನು ನಾನು ಮೇಲೆ ಉಲ್ಲೇಖಿಸಿರುವುದು.

ಹೌದು ಸ್ನೇಹಿತರೇ. ಜೀವನದಲ್ಲಿ ನಾವು ಏನಾಗಬೇಕೋ ಅದನ್ನು ಮೊದಲು ನಮ್ಮ ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿಕೊಳ್ಳಬೇಕು. ಸಂಕಲ್ಪ ಮಾಡಿಕೊಳ್ಳುವುದೆಂದರೆ, ದೃಢ ನಿಶ್ಚಯ ತಳೆಯುವುದು. ಯಾವುದಾದರೂ ಪೂಜೆಗೆ ಕೂಡುವ ಮೊದಲು ಅಥವಾ ದೇವರ ವ್ರತಗಳನ್ನು ಮಾಡುವ ಮೊದಲು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಿ ಎನ್ನುವ ರೂಢಿಯಿದೆ. ಮನುಷ್ಯನನ್ನು ಒಳಗೊಂಡಂತೆ ಎಲ್ಲಾ ಪ್ರಾಣಿ ಪಕ್ಷಿಗಳಲ್ಲಿ ಸಂಕಲ್ಪ ಮಾಡಿಕೊಳ್ಳುವ ಗುಣವಿರುತ್ತದೆ. ವಿಶೇಷವಾಗಿ ಕಾಡಿನ ರಾಜ ಅಥವಾ ಮೃಗರಾಜ ಸಿಂಹದ ಸಂಕಲ್ಪ ಶಕ್ತಿ ಅದ್ವಿತೀಯವಾದದ್ದು.


ನಮಗೆಲ್ಲಾ ಗೊತ್ತಿರುವ ಸಂಗತಿಯೆಂದರೆ, ಕಾಡಿನಲ್ಲಿ ವಾಸವಾಗಿರುವ ಪ್ರಾಣಿಗಳಲ್ಲಿ ಎಲ್ಲಕ್ಕಿಂತ ದೊಡ್ಡದಾದ ಪ್ರಾಣಿ ಆನೆ, ಎತ್ತರವಾದ ಪ್ರಾಣಿ ಜಿರಾಫೆ, ಬುದ್ಧಿವಂತ ಪ್ರಾಣಿ ನರಿ, ವೇಗವಾಗಿ ಓಡುವ ಶಕ್ತಿ ಇರುವ ಪ್ರಾಣಿ ಚಿರತೆ. ಹೀಗೆ ಒಂದೊಂದು ಪ್ರಾಣಿಯೂ ಒಂದೊಂದು ವಿಶೇಷವಾದ ಶಕ್ತಿಯನ್ನು ಪಡೆದಿವೆ. ಆದರೆ, ಈ ಯಾವ ಗುಣಗಳೂ ತನ್ನಲ್ಲಿಲ್ಲದ ಸಿಂಹ ಕಾಡಿನ ರಾಜ! ಏತಕ್ಕೆ ಎನ್ನುವ ಪ್ರಶ್ನೆಗೆ ಉತ್ತರ: ಸಿಂಹ ನಿರ್ಭಯಿ, ಧೈರ್ಯಶಾಲಿ. ಎಂಥಹ ಸವಾಲನ್ನು ಬೇಕಾದರೂ ಎದುರಿಸಬಲ್ಲ ಚಾಕಚಕ್ಯತೆ ಅದಕ್ಕಿದೆ. ಎಲ್ಲ ಅಡೆತಡೆಗಳನ್ನು ಮೀರಬಲ್ಲ ಚೈತನ್ಯವಿದೆ. ಅದರದ್ದು ಆತ್ಮವಿಶ್ವಾಸಭರಿತ ಧೀಮಂತ ನಡಿಗೆ, ಅದು ಯಾವುದಕ್ಕೂ ಎದೆಗುಂದುವುದಿಲ್ಲ, ಎಂದಿಗೂ ಹೆದರುವುದಿಲ್ಲ, ತನ್ನನ್ನು ಯಾರೂ ತಡೆಯಲಾರರೆಂಬ ವಿಶ್ವಾಸ ಅದಕ್ಕಿದೆ. ಎಂಥಹ ಗಂಡಾಂತರಗಳನ್ನು ಬೇಕಾದರೂ ಎದುರಿಸುವ ವಿಶ್ವಾಸ ಅದಕ್ಕಿದೆ. ಅದರ ಆಲೋಚನೆಯಲ್ಲಿ ಪ್ರತಿಯೊಂದು ಪ್ರಾಣಿಯೂ ಅದರ ಆಹಾರವೇ ಸರಿ. ಸಿಕ್ಕ ಪ್ರತಿ ಅವಕಾಶವನ್ನೂ ತಾನು ಪ್ರಯತ್ನಿಸಿ ನೋಡಲು ಯೋಗ್ಯವಾದದ್ದೆಂದು ಭಾವಿಸಿ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಈ ಎಲ್ಲಾ ಗುಣಗಳಿಂದ ಅದು ಮೃಗರಾಜ!

ಇಂಥಹ ಆಕರ್ಷಕ ಗುಣಗಳುಳ್ಳ ಸಿಂಹದಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ನೀವು ಎಲ್ಲರಿಗಿಂತ ಎತ್ತರವಾಗಿರಬೇಕಿಲ್ಲ, ಎಲ್ಲರಿಗಿಂತ ಹೆಚ್ಚು ಬುದ್ಧಿವಂತರಾಗಿರಬೇಕಿಲ್ಲ, ಹೆಚ್ಚು ಚಾಣಾಕ್ಷರಾಗಬೇಕಿಲ್ಲ, ಹೆಚ್ಚು ಮೇಧಾವಿಯೂ ಆಗಿರಬೇಕಿಲ್ಲ, ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಎಲ್ಲರೂ ನಿಮ್ಮನ್ನು ಒಪ್ಪಿಕೊಳ್ಳಬೇಕಿಲ್ಲ. ನಿಮಗೆ ಬೇಕಿರುವುದೆಲ್ಲವೂ ‘ಧೈರ್ಯ’, ‘ಎದೆಗಾರಿಗೆ’, ‘ಮತ್ತೆ ಮತ್ತೆ ಪ್ರಯತ್ನಿಸುವ ಛಲ’, ‘ಇದು ನನ್ನಿಂದ ಸಾಧ್ಯವೆಂಬ ಆತ್ಮವಿಶ್ವಾಸ’. ಈ ರೀತಿಯ ಸಿಂಹದ ಸಂಕಲ್ಪ ಶಕ್ತಿ ನಿಮ್ಮಲ್ಲಿ ಬಂದು ಅದು ದೃಢವಾದರೆ ನಿಮ್ಮನ್ನು ತಡೆಯುವವರು ಯಾರು?

ಒಂದೇ ಒಂದು ಕ್ಷಣದ ಸಂಕಲ್ಪ ನಿಮ್ಮ ಭವಿಷ್ಯವನ್ನೇ ಬದಲಿಸಬಲ್ಲದು. ನಾವು ಏನಾಗಬೇಕೆಂದುಕೊಂಡಿದ್ದೇವೋ ಅದನ್ನು ಸಂಕಲ್ಪ ಮಾಡಿಕೊಂಡು ಅದನ್ನೇ ಸಾಧಿಸುವ ನಿಟ್ಟಿನಲ್ಲಿ ಅಭ್ಯಾಸ ಮಾಡುತ್ತ ಹೋದಂತೆ ನಮ್ಮ ಸಂಕಲ್ಪ ಶಕ್ತಿಯೂ ಸದೃಢವಾಗಿ ನಮ್ಮ ಗೆಲುವಿನ ಹಾದಿಯು ಕೂಡ ಸುಲಭವಾಗಿಬಿಡುತ್ತದೆ. ಗೆಲುವಿಗಾಗಿ ಹಾತೊರೆಯುವವರು ದೃಢಸಂಕಲ್ಪ ತೆಗೆದುಕೊಂಡ ಕೂಡಲೇ ಸಮಯವನ್ನು ಮಹತ್ವಪೂರ್ಣವೆಂದು ಪರಿಗಣಿಸಿ ತಮ್ಮ ಕೆಲಸದಲ್ಲಿ ನಿರತರಾಗಬೇಕು. ಜಗತ್ತಿನಲ್ಲಿ ಎಲ್ಲರಿಗೂ ಇಪ್ಪತ್ತನಾಲ್ಕೇ ಗಂಟೆಗಳು. ಸಾಧಿಸದವರಿಗೂ ಮತ್ತು ಸಾಧಿಸಿದವರಿಗೂ… ಸಮಯದ ಸರಿಯಾದ ಸದುಪಯೋಗ ಪಡೆದುಕೊಂಡವರು ಮಾತ್ರ ಸಾಧಿಸಿಯೇ ವಿರಮಿಸುತ್ತಾರೆ ಎಂಬುದು ಜಗತ್ತಿನ ಸತ್ಯಗಳಲ್ಲೊಂದು. ಸಂಕಲ್ಪ ಗಟ್ಟಿಯಾದರೇ ಸಮಯ ತಂತಾನೇ ಒಲಿದಿರುತ್ತದೆ.


‘ಸಂಕಲ್ಪ’ದ ಅರ್ಥ ಏನು ಎಂಬುದನ್ನು ಸರಿಯಾಗಿ ಅರಿಯಲು ಓಶೋ ಅವರು ಹೇಳುವ ಈ ಕಥೆಯನ್ನು ಓದಬೇಕು: ಒಮ್ಮೆ ವ್ಯಕ್ತಿಯೋರ್ವ ಪರಮಾತ್ಮನನ್ನು ಹೊಂದುವ ಮಾರ್ಗ ಏನೆಂದು ಓರ್ವ ಫಕೀರನನ್ನು ಕೇಳಿದ. ಆತನ ಕಣ್ಣುಗಳಲ್ಲಿ ಇಣುಕಿದಾಗ, ಆತನಲ್ಲಿಯ ತೃಷೆ ಫಕೀರರಿಗೆ ಕಂಡಿತು. ಫಕೀರ ನದಿಸ್ನಾನಕ್ಕೆ ಹೋಗುತ್ತಿದ್ದರು. ಜೊತೆಗೆ ಬಂದಲ್ಲಿ, ಮಿಂದ ಬಳಿಕ ಪರಮಾತ್ಮನನ್ನು ಹೊಂದುವ ಮಾರ್ಗವನ್ನು ತೋರಿಸುವುದಾಗಿ ವಾಗ್ದಾನ ನೀಡಿದರು. ಅವರಿಬ್ಬರೂ ನದಿಯ ಬಳಿಗೆ ಬಂದರು. ಆ ವ್ಯಕ್ತಿ ನೀರಿನಲ್ಲಿ ಇಳಿದೊಡನೆ, ಫಕೀರ ಆತನ ತಲೆಯನ್ನು ಗಟ್ಟಿಯಾಗಿ ನೀರಿನಲ್ಲಿ ಅದುಮಿಟ್ಟುಕೊಂಡರು. ಆ ವ್ಯಕ್ತಿ ಫಕೀರರ ಹಿಡಿತದಿಂದ ಬಿಡಿಸಿಕೊಳ್ಳಲು ಹರಸಾಹಸಪಟ್ಟ. ಆತನ ಜೀವ ಅಪಾಯದಲ್ಲಿತ್ತು, ಆತ ಫಕೀರರ ತುಲನೆಯಲ್ಲಿ ನಿಶ್ಯಕ್ತನಾಗಿದ್ದರೂ ಸಹಿತ ಆತನ ಸುಪ್ತ ಶಕ್ತಿ ನಿಧಾನವಾಗಿ ಜಾಗೃತಗೊಂಡಿತು. ಸ್ವಲ್ಪ ಹೊತ್ತಿನಲ್ಲೇ ಫಕೀರರಿಗೆ ಆತನನ್ನು ಮುಳುಗಿಸಿಡುವುದು ಅಸಾಧ್ಯವಾಯಿತು. ಆ ವ್ಯಕ್ತಿ ತನ್ನೆಲ್ಲ ಶಕ್ತಿಯನ್ನು ಬಳಸಿ ನದಿಯಿಂದ ಹೊರಬರುವುದರಲ್ಲಿ ಸಫಲನಾದ. ಫಕೀರ ಜೋರಾಗಿ ನಗುತ್ತಿದ್ದುದನ್ನು ಕಂಡು ಆತ ಚಕಿತನಾದ. ಅವರ ವರ್ತನೆ ಆತನಿಗೆ ಅರ್ಥವಾಗಲಿಲ್ಲ. ಆತ ತುಸು ಶಾಂತನಾದ ಮೇಲೆ ಫಕೀರ ಕೇಳಿದರು. ‘ನೀರಿನಲ್ಲಿ ಮುಳುಗಿದ್ದಾಗ ನಿನ್ನ ಮನದಲ್ಲೇನು ಬಯಕೆಗಳಿದ್ದವು?’ ಆತನೆಂದ, ‘ಬಯಕೆಗಳು...! ಬಯಕೆಗಳು ಇರಲಿಲ್ಲ, ಒಂದೇ ಒಂದು ಬಯಕೆ ಮಾತ್ರ ಇತ್ತು – ಉಸಿರು ಒಳಕ್ಕೆಳೆದುಕೊಳ್ಳುವ ಬಯಕೆ.’ ಫಕೀರ ಹೇಳಿದರು, ‘ಪರಮಾತ್ಮನನ್ನು ಹೊಂದುವ ರಹಸ್ಯವೂ ಇದೇನೆ. ಈ ಸಂಕಲ್ಪ, ನಿನ್ನ ದೃಢಸಂಕಲ್ಪ ನಿನ್ನೆಲ್ಲ ಸುಪ್ತ ಶಕ್ತಿಗಳನ್ನು ಜಾಗೃತಗೊಳಿಸಿತು.’

ಈ ಕತೆಯಿಂದಲೇ ಸಂಕಲ್ಪದ ಪ್ರಾಮುಖ್ಯತೆಯನ್ನು ಅರಿತು ಇದೆಷ್ಟು ಅತ್ಯವಶ್ಯಕವೆಂದು ಮನಗಾಣಬಹುದಾಗಿದೆ. ಸಂಕಲ್ಪದ ಜೊತೆಗೆ ಸಾಧನೆ ನಿರಂತರವಾಗಿರಬೇಕು. ಆ ನಿರಂತರತೆ ಜಲಪಾತದಂತೆ ಸದಾ ಧುಮ್ಮಿಕ್ಕುತ್ತಿರಬೇಕು.

ಸ್ವಾಮಿ ವಿವೇಕಾನಂದರು ಅಮೇರಿಕಾಕ್ಕೆ ಹೋಗಿದ್ದಾಗ ಒಂದು ಸಂಜೆ ನದಿಯ ಮೇಲಿದ್ದ ಸೇತುವೆಯಲ್ಲಿದ್ದ ಹುಡುಗರು ನೀರಿನ ಮೇಲೆ ತೇಲುತ್ತಿದ್ದ ಶಂಖಗಳಿಗೆ ಪಿಸ್ತೂಲಿನಿಂದ ಶೂಟ್ ಮಾಡುತ್ತಿದ್ದನ್ನು ಗಮನಿಸಿದರು. ಆ ಶಂಖಗಳು ಮುಳುಗುತ್ತಾ ತೇಲುತ್ತಾ ಇದ್ದವು. ಈ ಹುಡುಗರಿಗೆ ಗುರಿಯಿಟ್ಟು ಒಂದು ಶಂಖಕ್ಕೂ ಹೊಡೆಯಲಾಗಲಿಲ್ಲ. ಸ್ವಾಮಿ ವಿವೇಕಾನಂದರು ಇವರನ್ನು ಗಮನಿಸುತ್ತಿದ್ದದ್ದನ್ನು ಅರಿತ ಹುಡುಗರು, “ನೀವು ನಮ್ಮನ್ನು ನೋಡುತ್ತಿದ್ದೀರಿ. ನೀವು ನಮಗಿಂತ ಚೆನ್ನಾಗಿ ಹೊಡೆಯಬಲ್ಲಿರಾ?” ಎಂದು ಕೇಳಿದರು. ನಗುತ್ತಾ ಸ್ವಾಮಿ ವಿವೇಕಾನಂದರು, “ನಾನು ಪ್ರಯತ್ನಿಸುತ್ತೇನೆ” ಎಂದು ಹೇಳಿ ಆ ಪಿಸ್ತೂಲನ್ನು ತೆಗೆದುಕೊಂಡರು. ಆ ಪಿಸ್ತೂಲಿನಿಂದ ಶಂಖಗಳಿಗೆ ಗುರಿಯಿಟ್ಟು ಒಂದೆರಡು ಕ್ಷಣಗಳ ಕಾಲ ತನ್ಮಯರಾಗಿ ನಿಂತರು. ನಂತರ ತಮ್ಮ ಪಿಸ್ತೂಲಿನಿಂದ ಗುಂಡನ್ನು ಹಾರಿಸಿದರು. ಸತತವಾಗಿ ಹನ್ನೆರೆಡು ಬಾರಿ ಒಂದೇ ಸಮನೆ ಅವರು ಹಾರಿಸಿದ ಗುಂಡುಗಳು ಶಂಖಗಳಿಗೆ ಬೀಳುವಂತೆ ಹೊಡೆದಿದ್ದರು. ಇದನ್ನು ನೋಡಿದ ಹುಡುಗರು ಆಶ್ಚರ್ಯಚಕಿತರಾದರು. ಒಬ್ಬ ಮನುಷ್ಯ ಈ ರೀತಿ ಗುರಿಯಿಟ್ಟು ಹೊಡೆಯಬಹುದೆಂದು ಆ ಹುಡುಗರು ಕನಸಿನಲ್ಲಿಯೂ ಎಣಿಸಿರಲಿಲ್ಲ. ತುಸು ಯೋಚಿಸಿ “ಸ್ವಾಮಿ, ಈ ರೀತಿ ಗುರಿಯಿಡುವುದಕ್ಕೆ ನಿಮಗೆ ಹೇಗೆ ಸಾಧ್ಯವಾಯಿತು?” ಎಂದು ವಿನಮ್ರರಾಗಿ ಕೇಳಿದರು. ಸ್ವಾಮಿ ವಿವೇಕಾನಂದರು ಅವರೆಡೆಗೆ ಮುಗುಳ್ನಕ್ಕು, “ನೀವು ಏನನ್ನೇ ಮಾಡುತ್ತಿರಿ, ಅದರಲ್ಲೇ ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ನೀವು ಪಿಸ್ತೂಲಿನಿಂದ ಗುರಿಯಿಡುವ ಆಟವಾಡುತ್ತಿದ್ದರೆ, ಗುರಿಯೆಡೆಗೆ ನಿಮ್ಮ ಪೂರ್ತಿ ಗಮನವಿರಬೇಕು. ನೀವು ಏನನ್ನಾದರು ಕಲಿಯುತ್ತಿದ್ದರೆ, ಆ ಕಲಿಯುವಿಕೆಯೆಡೆಗೆ ನಿಮ್ಮ ಮನಸ್ಸಿರಬೇಕು. ನಿಮ್ಮ ಏಕಾಗ್ರತೆ ಆ ಮಟ್ಟದಲ್ಲಿದ್ದಾಗ ಮಾತ್ರ ನೀವು ಏನನ್ನಾದರೂ ಗೆಲ್ಲಬಲ್ಲಿರಿ. ನಮ್ಮ ಭಾರತದೇಶದಲ್ಲಿ ನಾವು ಮಕ್ಕಳಿಗೆ ಇದನ್ನು ಹೇಳಿಕೊಡುತ್ತೇವೆ” ಎಂದು ಹೇಳಿದರು. ಇದನ್ನೇ ದೃಢಸಂಕಲ್ಪ ಅನ್ನುತ್ತಾರೆ ಅಲ್ಲವೇ?

ನಾನು ನಿಮಗೆ ಇಲ್ಲಿ ಒಂದು ನನ್ನ ಅನುಭವದ ಉದಾಹರಣೆಯೊಂದನ್ನು ಕೊಡಲು ಇಚ್ಚಿಸುತ್ತೇನೆ. ನನ್ನ ಗೆಳೆಯರೊಬ್ಬರು ಅವರ ನೆಂಟರ ಮನೆಯ ಗೃಹಪ್ರವೇಶಕ್ಕೆ ಒಮ್ಮೆ ಹೋಗಿದ್ದರಂತೆ. ಮನೆಯನ್ನೆಲ್ಲಾ ನೋಡಿ, ಊಟ ಮಾಡಿ ಅಲ್ಲೆಲ್ಲಾ ಹುಡುಕಿದರೂ ಪಿ.ಯು.ಸಿ. ಓದುತ್ತಿದ್ದ ನೆಂಟರ ಮಗಳು ಕಾಣಲೇ ಇಲ್ಲವಂತೆ! ನೆಂಟರನ್ನು ವಿಚಾರಿಸಿದಾಗ ಅವಳು ಹತ್ತಿರದ ತೋಟದಮನೆಯಲ್ಲಿ ಇರುವಳೆಂದು ಹೇಳಿದರಂತೆ. ಸರಿ, ಇವರು ಅಲ್ಲಿ ಹೋಗಿ ನೋಡಿದ್ದಾರೆ. ಆಕೆ ಅಲ್ಲಿ ತನ್ನ ಪಾಡಿಗೆ ತಾನು ಓದುತ್ತಾ ಕುಳಿತ್ತಿದ್ದಳಂತೆ! ಏನಶ್ಚಾರ್ಯ!? ಏನಮ್ಮ, ನಿನ್ನ ತಂದೆ ತಾಯಿ ಕಟ್ಟಿರುವ ಮನೆಯ ಗೃಹಪ್ರವೇಶದಲ್ಲಿ ಖುಷಿಯಿಂದ ಓಡಾಡುವುದನ್ನು ಬಿಟ್ಟು ಇಲ್ಲಿ ಓದುತ್ತಾ ಕುಳಿತ್ತಿದ್ದೀಯಾ ಎಂದು ಕೇಳಿದರಂತೆ. ಅದಕ್ಕೆ ಆಕೆ, ಅಣ್ಣಾ, ಈ ಮನೆ ನನ್ನ ಅಪ್ಪ ಅಮ್ಮ ಕಟ್ಟಿರುವುದು. ಅವರು ಸಂಭ್ರಮಿಸಲಿ. ನಾನು ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಿ ಮನೆ ಕಟ್ಟುತ್ತೇನೆ. ಆಗ ಎಲ್ಲರನ್ನೂ ಕರೆದು ಸಂಭ್ರಮಿಸುತ್ತೇನೆ ಎಂದು ಹೇಳಿದಳಂತೆ. ಅಪ್ಪ ಅಮ್ಮ ಕಟ್ಟಿರುವ ಮನೆಯ ಗೃಹಪ್ರವೇಶದ ಸಂಭ್ರಮವಿದ್ದರೂ ತನ್ನ ಓದಿನಲ್ಲಿ ಏಕಾಗ್ರತೆಯಿಂದ ತೊಡಗಿಕೊಂಡ ಆಕೆಯನ್ನು ನಾವು ಮೆಚ್ಚಲೇಬೇಕಲ್ಲವೇ? ಅವಳ ಸಂಕಲ್ಪ ಎಂತಹದಿತ್ತು ನೋಡಿ. ಆಕೆ ಇವತ್ತು ಪ್ರತಿಷ್ಟಿತ ಐಬಿಎಂ ಉದ್ಯೋಗಿ. ಲಕ್ಷಾಂತರ ಸಂಬಳ ಪಡೆಯುತ್ತಾಳೆ. ಬೆಂಗಳೂರಿನಲ್ಲಿ ಸ್ವಂತ ಅಪಾರ್ಟ್ಮೆಂಟ್ ಹೊಂದಿದ್ದಾಳೆ. ಮತ್ತು ಇಂದು ಗಂಡ ಮಗುವಿನೊಂದಿಗೆ ಸುಖಸಂಸಾರ ಆಕೆಯದು.

ನೀವು ಏನನ್ನೇ ಮಾಡುತ್ತಿರಿ, ಆ ಕೆಲಸದಲ್ಲಿ ಯಶಸ್ವಿಯಾಗಲು ಏಕಾಗ್ರತೆ ಕೂಡ ತುಂಬಾ ಮುಖ್ಯ. ಏಕಾಗ್ರತೆ ಇಲ್ಲದೆ ನೀವು ನಿಮ್ಮ ಕೆಲಸವನ್ನು ಸಂಪೂರ್ಣವಾಗಿ ಮುಗಿಸಲಾರಿರಿ. ಮನುಷ್ಯನ ಮನಸ್ಸು ಏನೇ ಮಾಡಿದರೂ ಒಂದು ಕೆಲಸದಲ್ಲಿ ಶೇ 10ರಷ್ಟು ಮಾತ್ರ ತೊಡಗಿಕೊಳ್ಳಬಲ್ಲದಂತೆ. ಉಳಿದ ಶೇ 90ರಷ್ಟು ಮನಸ್ಸು ಎಲ್ಲೆಲ್ಲೋ ಹರಿದಾಡಿ ಹೋಗುತ್ತದಂತೆ. ಅಂತಹ ಶೇ 10ರಷ್ಟು ಮನಸ್ಸನ್ನು ಏಕಾಗ್ರತೆಗೊಳಿಸಿ ಕೆಲಸ ಮಾಡಿ ಅದೆಷ್ಟೋ ಸಾಧನೆಗಳು ಆಗಿರುವಾಗ, ಇನ್ನೂ ಹೆಚ್ಚು ಶೇಕಡಾ ಮನಸ್ಸನ್ನು ಏಕಾಗ್ರತೆಯಿಂದ ಒಂದೇ ಕಡೆ ಇಟ್ಟು ಕೆಲಸ ಮಾಡಿದರೆ ಎಂಥಹ ಅದ್ಭುತವನ್ನಾದರೂ ಸಾಧಿಸಿ ಬಿಡಬಹುದು. ಸೂರ‍್ಯನ ಚೆದುರಿದ ಕಿರಣಗಳನ್ನು ಭೂತಗನ್ನಡಿಯ ಮೂಲಕ ಒಂದೇ ಕಡೆ ಕೇಂದ್ರಿಕರಿಸಿದರೆ ಅದು ಏನನ್ನಾದರು ಸುಡುವ ಬೆಂಕಿಯೇ ಆಗಿಬಿಡುತ್ತದೆ. ಅದೇ ರೀತಿ ನಮ್ಮ ಮನಸ್ಸನ್ನು ಒಂದೇ ಕಡೆ ಕೇಂದ್ರಿಕರಿಸಿ ದೊರೆಯುವ ಏಕಾಗ್ರತೆಯಿಂದ ನಾವು ಏನಾನ್ನಾದರೂ ಸಾಧಿಸಿ ಬಿಡಬಹುದು. ನಮ್ಮ ಗುರಿಯನ್ನು ಬೇಗ ಮುಟ್ಟಬಹುದು. ಈ ರೀತಿಯ ಏಕಾಗ್ರತೆ ನಿಮ್ಮದಾಗಬೇಕಾದರೆ ನಿಮ್ಮ ಸಂಕಲ್ಪ ಗಟ್ಟಿಯಾಗಿರಬೇಕು, ದೃಢವಾಗಿರಬೇಕು. ಅದು ಸಿಂಹದ ಸಂಕಲ್ಪದಂತಿರಬೇಕು.

ನೋಡಿ, ಈ ʼಸಂಕಲ್ಪʼ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ಹೃದಯ ಮತ್ತು ಮನಸ್ಸಿನಿಂದ ರೂಪುಗೊಂಡ ಉದ್ದೇಶ ಎಂದು. ನಿಮ್ಮ ಉದ್ದೇಶ ಅಥವಾ ಗುರಿ ಏನೇ ಆಗಿರಲಿ ಅದು ನಿಮ್ಮ ಹೃದಯ ಮತ್ತು ಮನಸ್ಸಿನಿಂದ ರೂಪುಗೊಂಡಿದ್ದರೆ ನಿಮ್ಮನ್ನು ಯಾರೂ ಕೂಡ ಸೋಲಿಸಲು ಸಾಧ್ಯವಿಲ್ಲ. ಸದಾಕಾಲ ಗೆಲುವೇ ನಿಮ್ಮ ಜೀವನವಾಗಲಿದೆ. ಈಗಲೇ ಸಂಕಲ್ಪ ಮಾಡಿಕೊಳ್ಳಿ. ಶುಭವಾಗಲಿ.

 ಪ್ರೀತಿಯಿಂದ, ‌

- ಗುಬ್ಬಚ್ಚಿ ಸತೀಶ್

***

“ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು…

  ಆತ್ಮೀಯ ಸ್ನೇಹಿತರೇ, “ಕಾಂತಾರ ಚಾಪ್ಟರ್‌ ೧” ಸಿನಿಮಾ ಕುರಿತು… ನನ್ನ ಅನಿಸಿಕೆಯಯನ್ನು ನನ್ನ ಯೂಟ್ಯೂಬ್‌ ಚಾನೆಲ್ಲಿನಲ್ಲಿ ವೀಕ್ಷಿಸಿ… ಧನ್ಯವಾದಗಳೊಂದಿಗೆ, ಗುಬ್ಬಚ್ಚಿ ...