ನನ್ನ ಅಜ್ಜ ಯಾರೆಂದು ನನಗೆ ಗೊತ್ತಿಲ್ಲ; ಆದರೆ ಆತನ
ಮೊಮ್ಮಗ ಏನಾಗಬೇಕೆಂದು ನನಗೆ ಗೊತ್ತಿದೆ
- ಅಬ್ರಹಾಂ ಲಿಂಕನ್, ಅಮೇರಿಕಾದ
ಅಧ್ಯಕ್ಷ
ಸ್ನೇಹಿತರೇ, ನಾವು ಜೀವನದಲ್ಲಿ ಏಕೆ ಸೋಲ್ತೀವಿ? ಈ ಪ್ರಶ್ನೆ ಬಹಳ ಮುಖ್ಯವಾದುದು. ನಾವು ನಮ್ಮ ಗುರಿಯನ್ನು ಹುಡುಕಿಕೊಂಡಿರ‍್ತೀವಿ. ಆದರೆ, ಆ ಗುರಿಯೆಡೆಗೆ ಸರಿಯಾದ ದಾರಿಯಲ್ಲಿ ನಿರಂತರವಾಗಿ ನಡೆಯಲ್ಲ. ಅದಕ್ಕಿಂತ ಮುಖ್ಯವಾಗಿ ನಮ್ಮ ಗುರಿಯೆಡೆಗಿನ ಪಯಣವನ್ನು ಆರಂಭಿಸುವುದೇ ಇಲ್ಲ. ಜೊತೆಗೆ ನಾವು ಏನಾಗಬೇಕೆಂದು ನಿರ್ಧಾರ ತಳೆದಿರುತ್ತೇವೋ ಆ ಕುರಿತು ಸಂಕಲ್ಪವೊಂದನ್ನು ಮಾಡಿಕೊಂಡಿರುವುದೇ ಇಲ್ಲ. ಇದೇ ಕಾರಣಕ್ಕೆ ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಾಹಂ ಲಿಂಕನ್ ಅವರ ಮಾತೊಂದನ್ನು ನಾನು ಮೇಲೆ ಉಲ್ಲೇಖಿಸಿರುವುದು.
ಇಂಥಹ ಆಕರ್ಷಕ ಗುಣಗಳುಳ್ಳ ಸಿಂಹದಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ನೀವು ಎಲ್ಲರಿಗಿಂತ ಎತ್ತರವಾಗಿರಬೇಕಿಲ್ಲ, ಎಲ್ಲರಿಗಿಂತ ಹೆಚ್ಚು ಬುದ್ಧಿವಂತರಾಗಿರಬೇಕಿಲ್ಲ, ಹೆಚ್ಚು ಚಾಣಾಕ್ಷರಾಗಬೇಕಿಲ್ಲ, ಹೆಚ್ಚು ಮೇಧಾವಿಯೂ ಆಗಿರಬೇಕಿಲ್ಲ, ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಎಲ್ಲರೂ ನಿಮ್ಮನ್ನು ಒಪ್ಪಿಕೊಳ್ಳಬೇಕಿಲ್ಲ. ನಿಮಗೆ ಬೇಕಿರುವುದೆಲ್ಲವೂ ‘ಧೈರ್ಯ’, ‘ಎದೆಗಾರಿಗೆ’, ‘ಮತ್ತೆ ಮತ್ತೆ ಪ್ರಯತ್ನಿಸುವ ಛಲ’, ‘ಇದು ನನ್ನಿಂದ ಸಾಧ್ಯವೆಂಬ ಆತ್ಮವಿಶ್ವಾಸ’. ಈ ರೀತಿಯ ಸಿಂಹದ ಸಂಕಲ್ಪ ಶಕ್ತಿ ನಿಮ್ಮಲ್ಲಿ ಬಂದು ಅದು ದೃಢವಾದರೆ ನಿಮ್ಮನ್ನು ತಡೆಯುವವರು ಯಾರು?
ಒಂದೇ ಒಂದು ಕ್ಷಣದ ಸಂಕಲ್ಪ ನಿಮ್ಮ ಭವಿಷ್ಯವನ್ನೇ ಬದಲಿಸಬಲ್ಲದು. ನಾವು ಏನಾಗಬೇಕೆಂದುಕೊಂಡಿದ್ದೇವೋ ಅದನ್ನು ಸಂಕಲ್ಪ ಮಾಡಿಕೊಂಡು ಅದನ್ನೇ ಸಾಧಿಸುವ ನಿಟ್ಟಿನಲ್ಲಿ ಅಭ್ಯಾಸ ಮಾಡುತ್ತ ಹೋದಂತೆ ನಮ್ಮ ಸಂಕಲ್ಪ ಶಕ್ತಿಯೂ ಸದೃಢವಾಗಿ ನಮ್ಮ ಗೆಲುವಿನ ಹಾದಿಯು ಕೂಡ ಸುಲಭವಾಗಿಬಿಡುತ್ತದೆ. ಗೆಲುವಿಗಾಗಿ ಹಾತೊರೆಯುವವರು ದೃಢಸಂಕಲ್ಪ ತೆಗೆದುಕೊಂಡ ಕೂಡಲೇ ಸಮಯವನ್ನು ಮಹತ್ವಪೂರ್ಣವೆಂದು ಪರಿಗಣಿಸಿ ತಮ್ಮ ಕೆಲಸದಲ್ಲಿ ನಿರತರಾಗಬೇಕು. ಜಗತ್ತಿನಲ್ಲಿ ಎಲ್ಲರಿಗೂ ಇಪ್ಪತ್ತನಾಲ್ಕೇ ಗಂಟೆಗಳು. ಸಾಧಿಸದವರಿಗೂ ಮತ್ತು ಸಾಧಿಸಿದವರಿಗೂ… ಸಮಯದ ಸರಿಯಾದ ಸದುಪಯೋಗ ಪಡೆದುಕೊಂಡವರು ಮಾತ್ರ ಸಾಧಿಸಿಯೇ ವಿರಮಿಸುತ್ತಾರೆ ಎಂಬುದು ಜಗತ್ತಿನ ಸತ್ಯಗಳಲ್ಲೊಂದು. ಸಂಕಲ್ಪ ಗಟ್ಟಿಯಾದರೇ ಸಮಯ ತಂತಾನೇ ಒಲಿದಿರುತ್ತದೆ.
ಈ ಕತೆಯಿಂದಲೇ ಸಂಕಲ್ಪದ ಪ್ರಾಮುಖ್ಯತೆಯನ್ನು ಅರಿತು ಇದೆಷ್ಟು ಅತ್ಯವಶ್ಯಕವೆಂದು ಮನಗಾಣಬಹುದಾಗಿದೆ. ಸಂಕಲ್ಪದ ಜೊತೆಗೆ ಸಾಧನೆ ನಿರಂತರವಾಗಿರಬೇಕು. ಆ ನಿರಂತರತೆ ಜಲಪಾತದಂತೆ ಸದಾ ಧುಮ್ಮಿಕ್ಕುತ್ತಿರಬೇಕು.
ನಾನು ನಿಮಗೆ ಇಲ್ಲಿ ಒಂದು ನನ್ನ ಅನುಭವದ ಉದಾಹರಣೆಯೊಂದನ್ನು ಕೊಡಲು ಇಚ್ಚಿಸುತ್ತೇನೆ. ನನ್ನ ಗೆಳೆಯರೊಬ್ಬರು ಅವರ ನೆಂಟರ ಮನೆಯ ಗೃಹಪ್ರವೇಶಕ್ಕೆ ಒಮ್ಮೆ ಹೋಗಿದ್ದರಂತೆ. ಮನೆಯನ್ನೆಲ್ಲಾ ನೋಡಿ, ಊಟ ಮಾಡಿ ಅಲ್ಲೆಲ್ಲಾ ಹುಡುಕಿದರೂ ಪಿ.ಯು.ಸಿ. ಓದುತ್ತಿದ್ದ ನೆಂಟರ ಮಗಳು ಕಾಣಲೇ ಇಲ್ಲವಂತೆ! ನೆಂಟರನ್ನು ವಿಚಾರಿಸಿದಾಗ ಅವಳು ಹತ್ತಿರದ ತೋಟದಮನೆಯಲ್ಲಿ ಇರುವಳೆಂದು ಹೇಳಿದರಂತೆ. ಸರಿ, ಇವರು ಅಲ್ಲಿ ಹೋಗಿ ನೋಡಿದ್ದಾರೆ. ಆಕೆ ಅಲ್ಲಿ ತನ್ನ ಪಾಡಿಗೆ ತಾನು ಓದುತ್ತಾ ಕುಳಿತ್ತಿದ್ದಳಂತೆ! ಏನಶ್ಚಾರ್ಯ!? ಏನಮ್ಮ, ನಿನ್ನ ತಂದೆ ತಾಯಿ ಕಟ್ಟಿರುವ ಮನೆಯ ಗೃಹಪ್ರವೇಶದಲ್ಲಿ ಖುಷಿಯಿಂದ ಓಡಾಡುವುದನ್ನು ಬಿಟ್ಟು ಇಲ್ಲಿ ಓದುತ್ತಾ ಕುಳಿತ್ತಿದ್ದೀಯಾ ಎಂದು ಕೇಳಿದರಂತೆ. ಅದಕ್ಕೆ ಆಕೆ, ಅಣ್ಣಾ, ಈ ಮನೆ ನನ್ನ ಅಪ್ಪ ಅಮ್ಮ ಕಟ್ಟಿರುವುದು. ಅವರು ಸಂಭ್ರಮಿಸಲಿ. ನಾನು ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಿ ಮನೆ ಕಟ್ಟುತ್ತೇನೆ. ಆಗ ಎಲ್ಲರನ್ನೂ ಕರೆದು ಸಂಭ್ರಮಿಸುತ್ತೇನೆ ಎಂದು ಹೇಳಿದಳಂತೆ. ಅಪ್ಪ ಅಮ್ಮ ಕಟ್ಟಿರುವ ಮನೆಯ ಗೃಹಪ್ರವೇಶದ ಸಂಭ್ರಮವಿದ್ದರೂ ತನ್ನ ಓದಿನಲ್ಲಿ ಏಕಾಗ್ರತೆಯಿಂದ ತೊಡಗಿಕೊಂಡ ಆಕೆಯನ್ನು ನಾವು ಮೆಚ್ಚಲೇಬೇಕಲ್ಲವೇ? ಅವಳ ಸಂಕಲ್ಪ ಎಂತಹದಿತ್ತು ನೋಡಿ. ಆಕೆ ಇವತ್ತು ಪ್ರತಿಷ್ಟಿತ ಐಬಿಎಂ ಉದ್ಯೋಗಿ. ಲಕ್ಷಾಂತರ ಸಂಬಳ ಪಡೆಯುತ್ತಾಳೆ. ಬೆಂಗಳೂರಿನಲ್ಲಿ ಸ್ವಂತ ಅಪಾರ್ಟ್ಮೆಂಟ್ ಹೊಂದಿದ್ದಾಳೆ. ಮತ್ತು ಇಂದು ಗಂಡ ಮಗುವಿನೊಂದಿಗೆ ಸುಖಸಂಸಾರ ಆಕೆಯದು.
ನೀವು ಏನನ್ನೇ ಮಾಡುತ್ತಿರಿ, ಆ ಕೆಲಸದಲ್ಲಿ ಯಶಸ್ವಿಯಾಗಲು ಏಕಾಗ್ರತೆ ಕೂಡ ತುಂಬಾ ಮುಖ್ಯ. ಏಕಾಗ್ರತೆ ಇಲ್ಲದೆ ನೀವು ನಿಮ್ಮ ಕೆಲಸವನ್ನು ಸಂಪೂರ್ಣವಾಗಿ ಮುಗಿಸಲಾರಿರಿ. ಮನುಷ್ಯನ ಮನಸ್ಸು ಏನೇ ಮಾಡಿದರೂ ಒಂದು ಕೆಲಸದಲ್ಲಿ ಶೇ 10ರಷ್ಟು ಮಾತ್ರ ತೊಡಗಿಕೊಳ್ಳಬಲ್ಲದಂತೆ. ಉಳಿದ ಶೇ 90ರಷ್ಟು ಮನಸ್ಸು ಎಲ್ಲೆಲ್ಲೋ ಹರಿದಾಡಿ ಹೋಗುತ್ತದಂತೆ. ಅಂತಹ ಶೇ 10ರಷ್ಟು ಮನಸ್ಸನ್ನು ಏಕಾಗ್ರತೆಗೊಳಿಸಿ ಕೆಲಸ ಮಾಡಿ ಅದೆಷ್ಟೋ ಸಾಧನೆಗಳು ಆಗಿರುವಾಗ, ಇನ್ನೂ ಹೆಚ್ಚು ಶೇಕಡಾ ಮನಸ್ಸನ್ನು ಏಕಾಗ್ರತೆಯಿಂದ ಒಂದೇ ಕಡೆ ಇಟ್ಟು ಕೆಲಸ ಮಾಡಿದರೆ ಎಂಥಹ ಅದ್ಭುತವನ್ನಾದರೂ ಸಾಧಿಸಿ ಬಿಡಬಹುದು. ಸೂರ‍್ಯನ ಚೆದುರಿದ ಕಿರಣಗಳನ್ನು ಭೂತಗನ್ನಡಿಯ ಮೂಲಕ ಒಂದೇ ಕಡೆ ಕೇಂದ್ರಿಕರಿಸಿದರೆ ಅದು ಏನನ್ನಾದರು ಸುಡುವ ಬೆಂಕಿಯೇ ಆಗಿಬಿಡುತ್ತದೆ. ಅದೇ ರೀತಿ ನಮ್ಮ ಮನಸ್ಸನ್ನು ಒಂದೇ ಕಡೆ ಕೇಂದ್ರಿಕರಿಸಿ ದೊರೆಯುವ ಏಕಾಗ್ರತೆಯಿಂದ ನಾವು ಏನಾನ್ನಾದರೂ ಸಾಧಿಸಿ ಬಿಡಬಹುದು. ನಮ್ಮ ಗುರಿಯನ್ನು ಬೇಗ ಮುಟ್ಟಬಹುದು. ಈ ರೀತಿಯ ಏಕಾಗ್ರತೆ ನಿಮ್ಮದಾಗಬೇಕಾದರೆ ನಿಮ್ಮ ಸಂಕಲ್ಪ ಗಟ್ಟಿಯಾಗಿರಬೇಕು, ದೃಢವಾಗಿರಬೇಕು. ಅದು ಸಿಂಹದ ಸಂಕಲ್ಪದಂತಿರಬೇಕು.
ನೋಡಿ, ಈ ʼಸಂಕಲ್ಪʼ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ಹೃದಯ ಮತ್ತು ಮನಸ್ಸಿನಿಂದ ರೂಪುಗೊಂಡ ಉದ್ದೇಶ ಎಂದು. ನಿಮ್ಮ ಉದ್ದೇಶ ಅಥವಾ ಗುರಿ ಏನೇ ಆಗಿರಲಿ ಅದು ನಿಮ್ಮ ಹೃದಯ ಮತ್ತು ಮನಸ್ಸಿನಿಂದ ರೂಪುಗೊಂಡಿದ್ದರೆ ನಿಮ್ಮನ್ನು ಯಾರೂ ಕೂಡ ಸೋಲಿಸಲು ಸಾಧ್ಯವಿಲ್ಲ. ಸದಾಕಾಲ ಗೆಲುವೇ ನಿಮ್ಮ ಜೀವನವಾಗಲಿದೆ. ಈಗಲೇ ಸಂಕಲ್ಪ ಮಾಡಿಕೊಳ್ಳಿ. ಶುಭವಾಗಲಿ.
- ಗುಬ್ಬಚ್ಚಿ ಸತೀಶ್
***