ಗುಬ್ಬಿ ಎಂಬ ಪುಟ್ಟ ಹಳ್ಳಿಯಲ್ಲಿ ನಾಲ್ವರು ಗೆಳತಿಯರಿದ್ದರು. ಅವರ ಹೆಸರು ಲೇಖನ, ಶಾರದೆ, ಚಿತ್ರ ಮತ್ತು ವೈಷ್ಣವಿ. ಅವರೆಲ್ಲಾ ಆ ಊರಿನ ಅಮರ್ ಪಬ್ಲಿಕ್ ಸ್ಕೂಲಿನಲ್ಲಿ ಏಳನೇ ತರಗತಿ ಓದುತ್ತಿದ್ದರು. ಅವರೆಲ್ಲಾ ಜೀವದ ಗೆಳತಿಯರಾಗಿದ್ದರು. ಒಂದೇ ಊರಿನವರಾದ್ದರಿಂದ ಅವರು ಶಿಶುವಿಹಾರದಿಂದಲೂ ಒಂದೇ ಶಾಲೆ, ಒಂದೇ ಬೆಂಚು! ನಾಲ್ವರೂ ಒಟ್ಟಿಗೆ ಶಾಲೆಗೆ ಸರಿಯಾದ ಸಮಯಕ್ಕೆ ಬರುತ್ತಿದ್ದುದರಿಂದ ಹಿಡಿದು ಸಂಜೆ ಮನೆಗೆ ಹೋಗುವುವರೆಗೂ ಜೊತೆಜೊತೆಯಾಗಿಯೇ ಇರುತ್ತಿದ್ದರು. ಒಟ್ಟಾಗಿಯೇ ಓದುವುದು, ಆಡುವುದು, ಊಟ ಮಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿತ್ತು. ಅವರು ಅದೆಷ್ಟು ಜೀವದ ಗೆಳತಿಯರಾಗಿದ್ದರೆಂದರೆ, ಯಾರಾದರೂ ಒಬ್ಬರಿಗೆ ಅನಾರೋಗ್ಯವಾದರೆ ಉಳಿದವರೆಲ್ಲಾ ಚಡಪಡಿಸುತ್ತಿದ್ದರು. ಅವರೂ ಒಟ್ಟಿಗೆ ಶಾಲೆಗೆ ರಜೆ ಹಾಕಿ, ಆರೋಗ್ಯ ಕೆಟ್ಟ ಗೆಳತಿಯ ಮನೆಗೆ ಹೋಗಿ ಅವಳ ಉಪಚಾರ ಮಾಡುತ್ತಿದ್ದರು. ಒಮ್ಮೊಮ್ಮೆ ವೈದ್ಯರ ಬಳಿಯೂ ಒಟ್ಟಿಗೆ ಹೋದದ್ದೂ ಇದೆ. ಪುಣ್ಯಕ್ಕೆ ವೈದ್ಯರು ಕೊಟ್ಟ ಔಷಧಿಗಳನ್ನು ಮಾತ್ರ ಒಟ್ಟಿಗೆ ತೆಗೆದುಕೊಳ್ಳುತ್ತಿರಲಿಲ್ಲ! ಅದರಿಂದ ಉಂಟಾಗಬಹುದಾದ ದುಷ್ಪರಿಣಾಮದ ಸಾಮಾನ್ಯ ತಿಳಿವಳಿಕೆ ಅವರಿಗಿತ್ತು. ಈ ನಾಲ್ವರು ಜೀವದ ಗೆಳತಿಯರನ್ನು ಕಂಡು ಹೊಟ್ಟೆ ಉರಿದುಕೊಳ್ಳುವವರು ತಣ್ಣೀರು ಕುಡಿದಷ್ಟೇ ತಮ್ಮ ಉರಿಯನ್ನು ಕಮ್ಮಿ ಮಾಡಿಕೊಳ್ಳಬೇಕಿತ್ತು. ಇವರ ನಡುವೆ ಜಗಳ ತಂದಿಡಲು ಪ್ರಯತ್ನ ಪಡುವವರು ಇವರ ಒಗ್ಗಟ್ಟನ್ನು ಮುರಿಯಲು ಸಾಧ್ಯವಾಗದೆ ಇಂಗು ತಿಂದ ಮಂಗನAತಾಗಿಬಿಡುತ್ತಿದ್ದರು.
ಹೀಗೆ ಜೀವದ ಗೆಳತಿಯರಾಗಿದ್ದ ಇವರ ಹವ್ಯಾಸಗಳು ಮಾತ್ರ ಬೇರೆಬೇರೆಯಾಗಿದ್ದವು. ಲೇಖನಳಿಗೆ ಚೆನ್ನಾಗಿ ಓದಿ ಪತ್ರಕರ್ತೆಯಾಗುವುದರ ಜೊತೆಗೆ ಸಾಹಿತಿಯೂ ಆಗಿ ಹೆಸರು ಮಾಡಬೇಕೆಂಬ ಆಸೆಯಿತ್ತು. ಪಠ್ಯೇತರ ಪುಸ್ತಕಗಳನ್ನು ಓದುವುದರ ಜೊತೆಗೆ ಕವನ, ಕತೆಗಳನ್ನು ಬರೆಯುತ್ತಿದ್ದಳು. ಶಾಲೆಯ ಗೋಡೆ ಪತ್ರಿಕೆಗೆ ಆಣಿ ಮುತ್ತುಗಳು ಮತ್ತು ಶಾಲೆಯ ಕಾರ್ಯಕ್ರಮಗಳ ವರದಿಯನ್ನು ಬರೆಯುತ್ತಿದ್ದಳು. ಶಾರದೆಗೆ ಚೆನ್ನಾಗಿ ಓದಿ ಶಿಕ್ಷಕಿಯಾಗಬೇಕೆಂಬ ಬಯಕೆಯಿತ್ತು. ಬಿಡುವಿನ ವೇಳೆಯಲ್ಲಿ ತನಗಿಂತ ಚಿಕ್ಕಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದಳು. ಅವಳ ಬರವಣಿಗೆ ಅಚ್ಚಾದ ಅಕ್ಷರಗಳಂತಿರುತ್ತಿದ್ದವು. ಇನ್ನು ಚಿತ್ರಳಿಗೆ ಹೆಸರಾಂತ ನಟಿಯಾಗಬೇಕೆಂಬ ಕನಸಿತ್ತು. ಅವಳ ಕನಸನ್ನು ನನಸಾಗಿಸಲು ಶಾಲೆಯ ನಾಟಕಗಳಲ್ಲಿ ಅಭಿನಯಿಸುವುದು, ಏಕಪಾತ್ರಭಿನಯದಲ್ಲಿ ಶಭಾಷ್ ಎನ್ನಿಸಿಕೊಳ್ಳುವುದು ಮತ್ತು ಶಾಲೆಯ ವಾರ್ಷಿಕೋತ್ಸವದಂದು ಚೆನ್ನಾಗಿ ನೃತ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸುವುದು ಸಾಮಾನ್ಯವಾಗಿತ್ತು. ಈ ಮೂವರದ್ದು ಒಂದೊAದು ದಾರಿಯಾದರೆ, ವೈಷ್ಣವಿಯದ್ದು ಮಾತ್ರ ಹೆಸರಾಂತ ವ್ಯಾಪಾರಿಯಾಗಬೇಕೆಂಬ ಹೆಬ್ಬಯಕೆ. ಆಕೆ ಚಿಕ್ಕಂದಿನಿAದಲೂ ಹಣ ಉಳಿಸುವುದರಲ್ಲಿ ಎತ್ತಿದ ಕೈ! ಉಳಿಸಿದ ಹಣದಲ್ಲಿ ಒಮ್ಮೆ ಒಂದು ಪುಟಾಣಿ ಚಿನ್ನದುಂಗರವನ್ನು ಖರೀದಿಸಿ, ಅದನ್ನು ಚಿನ್ನದ ಬೆಲೆ ಜಾಸ್ತಿಯಾದಾಗ ಮಾರಿ ಲಾಭ ಮಾಡಿಕೊಂಡದ್ದನ್ನು ಹೆಮ್ಮೆಯಿಂದ ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದಳು. ಹವಾಸ್ಯಗಳು ಬೇರೆಬೇರೆಯಾದರೂ ಇವರೆಲ್ಲಾ ಪರಸ್ಪರ ಒಬ್ಬರನ್ನೊಬ್ಬರ ಅಭಿರುಚಿಯನ್ನು ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು.
ಆದರೆ, ಒಂದು ದಿನ ಇವರ ಜೇನುಗೂಡಿನಂತ ಸ್ನೇಹಕ್ಕೆ ಕಲ್ಲು ಬಿದ್ದೇ ಬಿಟ್ಟಿತ್ತು. ಆ ದಿನ ಅವರ ಜೀವನದ ಅತ್ಯಂತ ಒಳ್ಳೆಯ ಮತ್ತು ಅತಿ ಕೆಟ್ಟ ದಿನವೂ ಆಗಿತ್ತು. ಆ ದಿನ ಇವರ ವಾರ್ಷಿಕ ಪರೀಕ್ಷೆಯ ಫಲಿತಾಂಶ ಬಂದಿತ್ತು. ಇವರೆಲ್ಲರೂ ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಮೊದಲಿಗರಾಗಿ ಪಾಸಾಗಿದ್ದರು. ಈ ಖುಷಿ ಆ ದಿನವನ್ನು ಒಳ್ಳೆಯ ದಿನವನ್ನಾಗಿಸಿದ್ದರೆ, ಮುಂದೆ ಏನು ಎಂಬ ಪ್ರಶ್ನೆ ಆ ದಿನವನ್ನು ಅವರ ಜೀವನದ ಅತ್ಯಂತ ಕೆಟ್ಟ ದಿನವೆಂದು ಸಾಬೀತುಮಾಡಿತ್ತು. ಯಾಕೆಂದರೆ, ಆ ಪುಟ್ಟ ಊರಿನ ಆ ಶಾಲೆಯಲ್ಲಿ ಎಂಟನೇ ತರಗತಿಯೇ ಇರಲಿಲ್ಲ! ಆ ಕಾರಣ ಮುಂದಿನ ವಿದ್ಯಾಭ್ಯಾಸಕ್ಕೆ ಅವರೆಲ್ಲಾ ತುಮಕೂರು ನಗರಕ್ಕೇ ಹೋಗಬೇಕಿತ್ತು.
@@@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ