ಭಾನುವಾರ, ಸೆಪ್ಟೆಂಬರ್ 3, 2023

ಓದಿದ್ದೀರ ಡಾ. ಎಸ್.‌ ಎಲ್‌. ಭೈರಪ್ಪನವರ ʼಯಾನʼ?

 ಪ್ರಿಯ ಸ್ನೇಹಿತರೇ,

ನಮ್ಮ ಭಾರತ ದೇಶದ ʼಚಂದ್ರಯಾನ-3ʼ ಯಶಸ್ವಿಯಾಗಿ, ಇದೀಗ ಸೂರ್ಯಯಾನವೂ ಉಡಾವಣೆ ಆಗಿದೆ. ಈ ಹೊತ್ತಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಬಾಹ್ಯಾಕಾಶವನ್ನೇ ಮುಖ್ಯ ವಸ್ತುವನ್ನಾಗಿಸಿಕೊಂಡು ಯಾವುದಾದರೂ ಸೃಜನಶೀಲ ಕೃತಿಗಳು ಪ್ರಕಟವಾಗಿವೆಯೇ ಎಂದು ಆಲೋಚಿಸಿದಾಗ ತಕ್ಷಣ ನೆನಪಿಗೆ ಬರುವುದು ಡಾ.‌ ಎಸ್.ಎಲ್.‌ ಭೈರಪ್ಪನವರ "ಯಾನ” ಕಾದಂಬರಿ. 



ಈ ಕಾದಂಬರಿಯು 2014ರಲ್ಲಿ ಮೊದಲ ಮುದ್ರಣ ಕಂಡಿದ್ದು, ಇದುವರೆವಿಗೂ ನಲ್ವತ್ತಮೂರು ಮುದ್ರಣಗಳನ್ನು ಕಂಡಿದೆ. ಈ ಕಾದಂಬರಿಯನ್ನು ಪ್ರಕಟವಾದ ಸಮಯದಲ್ಲೇ ನಾನು ಓದಿದ್ದು, ಇದೀಗ ನಮ್ಮ ಭಾರತ ದೇಶದ ಬಾಹ್ಯಾಕಾಶ ತಂತ್ರಜ್ಞಾನವನ್ನು ಇಡೀ ವಿಶ್ವವೇ ಬೆರಗಾಗಿ ನೋಡುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ಕೈಯಲ್ಲಿಡಿದು ಕೂತಿದ್ದೇನೆ. 

ನೀವು ಈಗಾಗಲೇ ಓದಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ… ಓದಿಲ್ಲವಾದರೇ, ಓದಿ ನಿಮ್ಮ ಅನಿಸಿಕೆ-ಅಭಿಪ್ರಾಯ ತಿಳಿಸಿ… ಜೊತೆಗೆ ಬಾಹ್ಯಾಕಾಶ ಯಾನ ಕುರಿತೇ ಪ್ರಕಟವಾಗಿರುವ ಯಾವುದಾದರೂ ಸೃಜನಶೀಲ ಕೃತಿಗಳು ನಿಮ್ಮ ಗಮನದಲ್ಲಿದ್ದರೆ ತಿಳಿಸಿ…

 

ಡಾ. ಎಸ್.ಎಲ್.‌ ಭೈರಪ್ಪನವರ ʼಯಾನʼ ಕೊಳ್ಳಲು ಅಮೇಜಾನ್‌ ಲಿಂಕ್: https://amzn.to/45PDvmA

 

ಧನ್ಯವಾದಗಳು…

ಯಶಸ್ವಿಯಾಗಿ ಉಡಾವಣೆಯಾದ ʼಆದಿತ್ಯ ಎಲ್‌ 1ʼ 125 ದಿನಗಳ ಕ್ಷಣಗಣನೆ ಆರಂಭ…

 ಪ್ರಿಯ ಸ್ನೇಹಿತರೇ,

ʼಚಂದ್ರಯಾನ 3ʼ ರ ಯಶಸ್ಸಿನ ಬೆನ್ನಲ್ಲೇ ಇಸ್ರೋ ಸೂರ್ಯಾಯಾನ ʼಆದಿತ್ಯ ಎಲ್‌ 1ʼ ಸೋಲಾರ್‌ ಮಿಷನ್‌ ಕೈಗೊಂಡಿದ್ದು, ಇಂದು (02/09/2023) ಯಶಸ್ವಿಯಾಗಿ ಬೆಳಿಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣೆ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ʼಆದಿತ್ಯ-ಎಲ್‌ 1ʼ ಬಾಹ್ಯಾಕಾಶ ನೌಕೆಯನ್ನು ಹೊತ್ತು ಯಶಸ್ವಿಯಾಗಿ ಆಕಾಶಕ್ಕೆ ಜಿಗಿದಿದೆ. ಕೇಂದ್ರ ಸರಕಾರ ಈ ಯೋಜನೆಗಾಗಿ 380 ಕೋಟಿ ರೂಗಳ ಅನುದಾನ ನೀಡಿದ್ದು, ಸೂರ್ಯನ ಮೇಲೆ ಗಮನ ಇಡಲು ಇಸ್ರೋ ನಿಗದಿಪಡಿಸಿರುವ ನ್ಯೂಟನ್‌ ಲಾಂಗ್ರೇಜ್‌ ಪಾಯಿಂಟ್‌ ಎಲ್‌ 1 ತಲುಪಲು 125 ದಿನಗಳ ಸಮಯಾವಕಾಶ ಬೇಕಿದೆ. 

ಇಲ್ಲಿ ನೌಕೆಯಲ್ಲಿ ಕಳಿಸಿರುವ ಬಾಹ್ಯಾಕಾಶ ಆಧಾರಿತ ಭಾರತೀಯ ಪ್ರಯೋಗಾಲಯ ಸ್ಥಾಪಿತವಾಗಲಿದೆ. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದ ಎಲ್‌1 ಪಾಯಿಂಟಿನಿಂದ ಸೂರ್ಯನ ಅಧ್ಯಯನ ಮಾಡಲು ಭಾರತದ ಚೊಚ್ಚಲ ಸೌರಮಂಡಲ ಸಾಹಸ ಇದಾಗಿದೆ. ಮತ್ತಷ್ಟು ಹತ್ತಿರದಿಂದ ಸೂರ್ಯನ ಪ್ರಕ್ರಿಯೆಗಳನ್ನು ಗಮನಿಸುವುದು ನಮ್ಮ ಉದ್ದೇಶವಾಗಿದೆ ಎಂದು ಇಸ್ರೋ ಮುಖ್ಯಸ್ಥರಾದ ಎಸ್.‌ ಸೋಮನಾಥ್‌ ಅವರು ತಿಳಿಸಿದ್ದಾರೆ. ಈ ಯಾನವೂ ಯಶಸ್ವಿಯಾಗಲಿ ಎಂಬುದು ಎಲ್ಲ ಭಾರತೀಯರ ಹಾರೈಕೆ…

ಧನ್ಯವಾದಗಳು…

“ಚಂದ್ರಯಾನ-3”ರ ಯಶಸ್ಸಿಗೆ ಮಸಾಲೆದೋಸೆ, ಫಿಲ್ಟರ್‌ ಕಾಫಿ ಕೂಡ ಕಾರಣವಂತೆ…

 ಪ್ರಿಯ ಸ್ನೇಹಿತರೇ,


ನಮ್ಮ ಭಾರತದ ಹೆಮ್ಮೆ ಇಸ್ರೋ ಚಂದ್ರಯಾನ-3ನ್ನು ಯಶಸ್ವಿಯಾಗಿ ಮುಗಿಸಿ ಸೂರ್ಯಯಾನಕ್ಕೆ ಆದಿತ್ಯ ಎಲ್‌ 1 ಉಡಾವಣೆಗೆ ಸಜ್ಜಾಗುತ್ತಿರುವ ಹೊತ್ತಲೇ ಚಂದ್ರಯಾನ-3ರ ಯಶಸ್ಸಿಗೆ ಕಾರಣವೇನು ಎಂಬ ಹಲವು ಚರ್ಚೆಗಳು ಶುರುವಾಗಿವೆ. ಚಂದ್ರಯಾನ-2ರ ಸೋಲಿನ ಬಳಿಕ ಗೆಲುವು ಸುಲಭವಾಗಿರಲಿಲ್ಲ. ಧೈರ್ಯಗುಂದಿದ ವಿಜ್ಞಾನಿಗಳಲ್ಲಿ ಹುರುಪು ತುಂಬಿ ಕೆಲಸಕ್ಕೆ ಹಚ್ಚಬೇಕಿತ್ತು. ನಿಗದಿತ ಸಂಬಳ ಬಿಟ್ಟರೆ ಯಾವುದೇ ಪ್ರೋತ್ಸಾಹಕ ಧನ ಅಥವಾ ಉಡುಗೊರೆಗಳ ಬೆಂಬಲವಿರಲಿಲ್ಲ. ಈ ನಿಟ್ಟಿನಲ್ಲಿ ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು, ಹುರಿದುಂಬಿಸಲು ಇಸ್ರೋ ಪ್ರತಿದಿನ ಸಂಜೆ 5ಕ್ಕೆ ಉಚಿತವಾಗಿ ಮಸಾಲೆದೋಸೆ ಮತ್ತು ಫಿಲ್ಟರ್‌ ಕಾಫಿಯನ್ನು ನೀಡುತ್ತಿತ್ತಂತೆ. ಹೌದು, ನೀವು ನಂಬಲೇ ಬೇಕು, ಉಚಿತ ಮಸಾಲದೋಸೆ ಮತ್ತು ಫಿಲ್ಟರ್‌ ಕಾಫಿ. ಮಸಾಲೆ ದೋಸೆ ಸವಿದು, ಫಿಲ್ಟರ್‌ ಕಾಫಿ ಹೀರಿದ ನಂತರ ಮತ್ತಷ್ಟು ಉತ್ಸುಕರಾಗಿ ಸಂತೋಷದಿಂದ ಇಸ್ರೋ ವಿಜ್ಞಾನಿಗಳು ಮಿಷನ್‌ ಚಂದ್ರಯಾನ-3ರಲ್ಲಿ ತೊಡಗುತ್ತಿದ್ದರಂತೆ. ಈಗ ಫಲಿತಾಂಶ ನಮ್ಮ ಕಣ್ಮುಂದೆಯೇ ಇದೆ… ಈ ಸಂಗತಿಯನ್ನು ಇಸ್ರೋದ ಪ್ರಮುಖ ವಿಜ್ಞಾನಿ ಮತ್ತು ಚಂದ್ರಯಾನ-3ರ ಪ್ರಮುಖ ರೂವಾರಿಯಲ್ಲೊಬ್ಬರೂ ಆಗಿರುವ ಶ್ರೀ ವೆಂಕಟೇಶ್ವರ ಶರ್ಮ ಅವರು ಪತ್ರಕರ್ತೆ ಬರ್ಖಾ ದತ್‌ ಅವರಲ್ಲಿ ಹಂಚಿಕೊಂಡಿದ್ದು, ಇದು ವಾಷಿಗ್ಟಂನ್‌ ಪೋಸ್ಟ್‌ನಲ್ಲಿ ವರದಿಯಾಗಿದೆ…

ಧನ್ಯವಾದಗಳು…

ಶುಕ್ರವಾರ, ಸೆಪ್ಟೆಂಬರ್ 1, 2023

“ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾ ಇಷ್ಟವಾಗಲು ಹತ್ತು ಅಂಶಗಳು… ಇಷ್ಟವಾಗದ ಒಂದೇ ಅಂಶ…

ಪ್ರಿಯ ಸ್ನೇಹಿತರೇ,

ರಕ್ಷಿತ್‌ ಶೆಟ್ಟಿ ಅವರ ಅಭಿನಯದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾ ಇಂದಿನಿಂದ ತೆರೆಕಂಡಿದ್ದು, ನಾನು ನೆನ್ನೆಯೇ ತುಮಕೂರಿನ ಐನಾಕ್ಸ್‌ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿದ್ದ ಪೇಯ್ಡ್‌ ಪ್ರಿಮೀಯರ್‌ ಶೋನಲ್ಲಿ ಸಿನಿಮಾವನ್ನು ನೋಡಿ, ನನಗೆ ಇಷ್ಟವಾದ ಹತ್ತು ಅಂಶಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ…

ಮೊದಲಿಗೆ, ಸಂಗೀತ…  ಸಿನಿಮಾದ ಕಥೆ… ಇದು ಪ್ರೇಮಕಥೆ… ಎಷ್ಟೋ ಪ್ರೇಮಕತೆಗಳು ಈಗಾಗಲೇ ಬಂದಿದೆಯೆನ್ನುವಷ್ಟರಲ್ಲಿ ಸಿನಿಮಾದ ಹಿನ್ನೆಲೆ ಸಂಗೀತ ನಿಮ್ಮನ್ನು ಕಟ್ಟಿಹಾಕಿರುತ್ತದೆ… ಸಂಗೀತ ಚರಣ್‌ ರಾಜ್…

ಎರಡನೆಯದಾಗಿ, ಚಿತ್ರಕಥೆ… ನಿರ್ದೇಶಕರು ಕಥೆ ಹೇಳಿರುವ ಶೈಲಿ ಬಹಳ ಇಷ್ಟವಾಗುತ್ತದೆ…‌ ರಚನೆ ಮತ್ತು ನಿರ್ದೇಶನ ಹೇಮಂತ ಎಮ್‌ ರಾವ್…

ಮೂರನೆಯದಾಗಿ, ಸಿನಿಮಾಟೋಗ್ರಫಿ ನಿರ್ದೇಶಕರ ತಾಳಕ್ಕೆ ತಕ್ಕಂತಿದೆ…‌ ಛಾಯಗ್ರಹಣ ಅದ್ವೈತ ಗುರುಮೂರ್ತಿ…

ನಾಲ್ಕನೇಯದಾಗಿ, ಕವಿ ಗೋಪಾಲಕೃಷ್ಣ ಅಡಿಗ ಟ್ರಸ್ಟಿಗೆ ಕೃತಜ್ಞತೆಗಳನ್ನು ಸಲ್ಲಿಸಿರುವುದು. ಕವಿ ಅಡಿಗರ ʼಯಾವ ಮೋಹನ ಮುರಳಿ ಕರೆಯಿತುʼ ಗೀತೆಯಲ್ಲಿ ಈ ಸಿನಿಮಾದ ಹೆಸರು “ಸಪ್ತ ಸಾಗರದಾಚೆ ಎಲ್ಲೋ” ಬರುತ್ತದೆ…

ಐದನೆಯದು, ಈ ಸಿನಿಮಾದ ಎಡಿಟಿಂಗ್‌ ಇಷ್ಟವಾಯ್ತು. ಸಂಕಲನ ಸುನಿಲ್‌ ಎಸ್‌ ಭಾರಧ್ವಾಜ್…

ಆರನೆಯದು, ಪೋಷಕ ಪಾತ್ರಗಳು… ಅವರುಗಳ ಆಯ್ಕೆ, ಸಂಭಾಷಣೆ… ಅಭಿನಯ‌ ಬಹಳ ಇಷ್ಟವಾಗುತ್ತೆ…

ಏಳನೆಯದು, ನಿರ್ದೇಶಕರು… ಓನ್‌ ಅಂಡ್‌ ಓನ್ಲಿ ಹೇಮಂತ್‌ ಎಮ್ ರಾವ್… ಸಿನಿಮಾವನ್ನು ಎರಡು ಭಾಗಗಳಲ್ಲಿ ಹೇಳಿರುವುದು ಇಷ್ಟವಾಗುತ್ತದೆ.

ಎಂಟನೇಯದು, ನಾಯಕಿ ರುಕ್ಮಿಣಿ ವಸಂತ್‌ ಅಭಿನಯ

ಒಂಭತ್ತನೆಯದು, ರಕ್ಷಿತ್‌ ಶೆಟ್ಟಿ ಅಭಿನಯ‌…

ಹತ್ತನೆಯದು, ಸಿನಿಮಾದ ಕತೆ… ಪ್ರೇಮಕತೆ… ಇದು ಕನ್ನಡ ಸಿನಿಮಾಗಳ ಮತ್ತೊಂದು ಕ್ಲಾಸಿಕ್‌ ಪ್ರೇಮಕತೆಯಾಗುತ್ತದೆ.

ಮತ್ತು ಇನ್ನು ಇಷ್ಟವಾಗುವ ಅಂಶಗಳಿದ್ದರೂ ಇಷ್ಟ ಆಗದೇ ಇದ್ದ ಅಂಶವೆಂದರೆ ಚಿತ್ರಗಳಲ್ಲಿ ಕತೆಗೆ ತಕ್ಕಂತೆ ಪೂರಕವಾಗಿ ಹಾಡುಗಳು ಅರ್ಥಾತ್‌ ಸಾಹಿತ್ಯ ಬಂದಾಗ ಹಿನ್ನಲೆ ಸಂಗೀತವೇ ಜೋರಾಗಿ ಕೇಳುವುದು…

ಸದ್ಯಕ್ಕೆ ಸೈಡ್‌ ಎ ನೋಡಿರಿ… ಅಕ್ಟೋಬರ್‌ 20ಕ್ಕೆ ಸೈಡ್‌ ಬಿ ನೋಡೋದು ಇದ್ದೇ ಇದೆ… ಥ್ಯಾಂಕ್ಯು…

ಬುಧವಾರ, ಆಗಸ್ಟ್ 30, 2023

ಅಡುಗೆ ಅನಿಲ ದರದಲ್ಲಿ ರೂ. 200/- ಇಳಿಕೆ COOKING GAS CYLINDER PRICE REDUCED BY RS. 200/-

 


ನೆನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಡುಗೆ ಅನಿಲ ದರದಲ್ಲಿ ರೂ. 200/- ಇಳಿಸುವ ಪ್ರಸ್ತಾವನೆಗೆ ಸಮ್ಮತಿ ದೊರೆತಿದ್ದು, ಇಂದಿನಿಂದ ದೇಶಾದ್ಯಂತ ಅಡುಗೆ ಅನಿಲ ದರದಲ್ಲಿ ರೂ. 200/- ಇಳಿಕೆಯಾಗಲಿದೆ. ಪ್ರಧಾನ ಮಂತ್ರಿಗಳು ಓಣಂ ಮತ್ತು ರಕ್ಷಾಬಂಧನದ ಉಡುಗೊರೆಯಾಗಿ ದೇಶದ ಮಹಿಳೆಯರಿಗೆ ಈ ಸಿಹಿಸುದ್ಧಿ ನೀಡಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ. ಅಡುಗೆ ಅನಿಲ ಸಿಲಿಂಡರ್‌ ದರ ಕರ್ನಾಟಕದಲ್ಲಿ ರೂ. 1107.50 ಇದ್ದು ಪರಿಷ್ಕೃತ ದರ ರೂ. 907.50 ಆಗಲಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಡಬಲ್‌ ಬೆನಿಫಿಟ್‌ ಆಗಲಿದ್ದು, ಈಗೀರುವ 200/- ರೂ ಸಬ್ಸಿಡಿ ಮುಂದುವರಿಸಿರುವುದರಿಂದ ಒಟ್ಟು ರೂ. 400/- ಕಡಿತವಾಗಲಿದೆ. ಹಲವು ರಾಜ್ಯಗಳ ವಿಧಾನಸಭೆ ಮತ್ತೆ 2024ರ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳಲ್ಲೂ ಇಳಿಕೆಗೂ ಸರ್ಕಾರ ಮುಂದಾಗುವ ನಿರೀಕ್ಷೆಯಿದ್ದು, ಇದು ಚುನಾವಣೆ ದೃಷ್ಠಿಯಿಂದ ಮಾತ್ರವಲ್ಲದೆ ಹೆಚ್ಚುತ್ತಿರುವ ಹಣದುಬ್ಬರ ಇಳಿಸಲು ಕೇಂದ್ರ ಮುಂದಾಗಿರುವ ಕ್ರಮ ಎಂದು ಕೂಡ ಹೇಳಲಾಗುತ್ತಿದೆ.

ಮಂಗಳವಾರ, ಆಗಸ್ಟ್ 29, 2023

ಮೈಸೂರು ದಸರಾ… ನಾದಬ್ರಹ್ಮ ಹಂಸಲೇಖ…

 ಸ್ನೇಹಿತರೇ,

ಈ ಬಾರಿಯ ದಸರಾ ಹಬ್ಬಕ್ಕೆ ಸಿದ್ಧತೆಗಳು ಶುರುವಾಗಿದ್ದು, ವಿಶ್ವವಿಖ್ಯಾತ ಮೈಸೂರು ದಸರಾವನ್ನು ನಾಡಿನ ಹೆಮ್ಮೆಯ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಸುದ್ಧಿಯು ಹಂಸಲೇಖ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಕನ್ನಡ ನಾಡು-ನುಡಿಯ ಮೇಲೆ ಅಪಾರ ಅಭಿಮಾನ ಹೊಂದಿರುವ ಹಂಸಲೇಖ ಅವರು ನಾಡಿನ ಹೆಸರಾಂತ ಸಂಗೀತ ನಿರ್ದೇಶಕರಾಗಿದ್ದಾರೆ. ನಾಡಿನ ಮೈಸೂರು ದಸರಾ ಹಬ್ಬ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ನಾಡಿನ ಸಂಗೀತದ ಪ್ರತೀಕವಾಗಿರುವ ಹಂಸಲೇಖ ಅವರ ಉದ್ಘಾಟನೆಯಿಂದ ಮತ್ತಷ್ಟು ಕಳೆಗಟ್ಟಲಿದೆ…

-        ಧನ್ಯವಾದಗಳು…

ಶನಿವಾರ, ಆಗಸ್ಟ್ 26, 2023

ಕೆದಂಬಾಡಿ ಜತ್ತಪ್ಪರೈ ಅವರ “ಬೇಟೆಗಾರನ ಹುಲಿಹೆಜ್ಜೆ” ಬಂದಿದೆ…


ಬೇಟೆಯನ್ನೇ ಮುಖ್ಯ ವಸ್ತುವನ್ನಾಗಿಸಿಕೊಂಡು ಕನ್ನಡದಲ್ಲಿ ಬರೆದವರಲ್ಲಿ ಕೆದಂಬಾಡಿ ಜತ್ತಪ್ಪರೈ ಪ್ರಮುಖರು. ಇಂಗ್ಲೀಷಿನಲ್ಲಿ ಬರೆದ ಕೆನೆತ್‌ ಆಂಡಸರ್ನ್‌ ಬ್ರಿಟೀಷ್‌ ಅಧಿಕಾರಿ. ಕುವೆಂಪು, ತೇಜಸ್ವಿಯವರೂ ಬರೆದಿದ್ದಾರೆ. ತಮ್ಮ ಕೃತಿಗಳಲ್ಲಿ ಕುವೆಂಪು ಕಾಡನ್ನು ಸೊಗಸಾಗಿ ತಂದಿದ್ದಾರೆ. ಇಂತಹ ಮೇರುಸಾಹಿತಿಯಿಂದಲೇ ಮೆಚ್ಚುಗೆಗೆ ಪಾತ್ರವಾದವರು ʼಕೆದಂಬಾಡಿ ಜತ್ತಪ್ಪ ರೈ!”

ಬೇಟೆಯನ್ನೇ ಪ್ರಧಾನ ವಸ್ತುವನ್ನಾಗಿಸಿಕೊಂಡು ಅನುಭವವೇ ನಿರೂಪಣೆಯಾಗಿ ಕೆದಂಬಾಡಿಯವರ “ಬೇಟೆಯ ನೆನಪುಗಳು” 1978ರಲ್ಲಿ ಪ್ರಕಟವಾಯಿತು. ಕಾಲದ ದೃಷ್ಟಿಯಿಂದ ಬಹಳ ಅಪರೂಪವಾದ ಈ ಕಥಾನಕ ಓದುಗರ ಮೆಚ್ಚುಗೆಗೆ ಪಾತ್ರವಾಯಿತು. ಓದುಗರ ಈ ಮೆಚ್ಚುಗೆಗೆ ಬಹುಮಾನವಾಗಿ ಕೆದಂಬಾಡಿಯವರು “ಈಡೊಂದು ಹುಲಿಯೆರಡು”, “ಬೇಟೆಯ ಉರುಳು”, “ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ” ಎಂಬ ಕೃತಿಗಳನ್ನು ನೀಡಿದರು.

ಹುಲಿ ಮತ್ತು ಬೇಟೆಗಾರನ ಮುಖಾಮುಖಿಯ ಮಹಾಮೌನವನ್ನು, ಕಾಡಿನ ನಿಗೂಢತೆಯನ್ನು ಅಕ್ಷರಗಳಲ್ಲಿ ಸೆರೆಹಿಡಿದ ಬೇಟೆಗಾರ ಜತ್ತಪ್ಪ ರೈ ಅವರು ತಮ್ಮ ಮೃಗಯಾನುಭವವನ್ನು ಕಟ್ಟಿಕೊಟ್ಟದ್ದು ಮುಂದೆ ಗುಂಡಿಕ್ಕಲಾರೆ ಎಂದು ಪ್ರಮಾಣ ಮಾಡಿದ ಮೇಲೆ. ಆಗ ಅವರಿಗೆ ಅರವತ್ತು ವಯಸ್ಸು ದಾಟಿತ್ತು. ಮೃಗಯಾ ಸಾಹಿತ್ಯವನ್ನು ಬರೆಯಲು ರೈ ಅವರಿಗೆ ಮೊದಲು ಪ್ರೇರೆಪಿಸಿದವರು ಜಾನಪದ ವಿದ್ಯಾಂಸರಾದ ಪ್ರೊ. ಅಮೃತ ಸೋಮೇಶ್ವರರು. ಈ ಮೂಲಕ “ಬೇಟೆಯ ನೆನಪುಗಳು” ಮೊದಲು ಪ್ರಕಟಗೊಂಡು, ತದನಂತರ ಉಳಿದ ಕೃತಿಗಳು ಪ್ರಕಟವಾದವು. 11/02/1916ರಲ್ಲಿ ಪುತ್ತೂರಿನ ಕೆದಂಬಾಡಿಯಲ್ಲಿ ಜನಿಸಿದ್ದ ಜತ್ತಪ್ಪ ರೈ ಅವರು 20/06/2003ರಲ್ಲಿ ತೀರಿಕೊಂಡರು. ರೈ ಅವರು ಇನ್ನಿಲ್ಲವಾದ ದಶಕ ಕಳೆದ ಮೇಲೆ ಅವರ ಮಗ ಡಾ. ಕೆದಂಬಾಡಿ ತಿಮ್ಮಪ್ಪ ರೈ ಅವರ ಮೂಲಕ ಸಾಹಿತಿ-ಪತ್ರಕರ್ತ-ಉಪನ್ಯಾಸಕರೂ ಆದ ನರೇಂರ್ದ ರೈ ದೇರ್ಲ ಅವರು, ಜತ್ತಪ್ಪ ರೈ ಅವರ ಕೆಲವು ಬಿಡಿಬಿಡಿ ಲೇಖನಗಳನ್ನು ಸಂಗ್ರಹಿಸಿ ಓದಿಕೊಂಡು ಹಲವಾರು ಕಾರಣಗಳಿಗೆ ಮೆಚ್ಚಿಕೊಂಡು “ಬೇಟೆಗಾರನ ಹುಲಿಹೆಜ್ಜೆ” ಎಂದು ಸಂಕಲಿಸಿ ಪ್ರಕಟಿಸಿದರು. ಈ ಮೂಲಕ ಈ ಸಂಕಲನದ ಸಂಪಾದಕರೇ ಆದ ನರೇಂದ್ರ ರೈ ದೇರ್ಲ ಅವರೇ ಹೇಳುವಂತೆ ʼಮನುಷ್ಯ ಜೀವನದಲ್ಲಿ ದಾರುಣವೂ ಅಸಹನೀಯವೂ ಆದ ಸನ್ನಿವೇಶಗಳು ಉದ್ಭವಿಸಿದಾಗ, ಅವುಗಳಿಗೆ ಸ್ವಲ್ಪವೂ ಲಕ್ಷ್ಯಕೊಡದೆ ಪ್ರಕೃತಿ ತನ್ನ ಪಾಡಿಗೆ ತಾನು ಸಹಜ ಕರ್ತವ್ಯದಲ್ಲಿ ತೊಡಗಿಸುತ್ತದೆ ಎಂಬುದಕ್ಕೆ ಇಲ್ಲಿಯ ಬರಹಗಳೇ ಸಾಕ್ಷಿʼ ಎಂಬ ಮಾತುಗಳು ಈ ಸಂಕಲನದ ಪ್ರಬಂಧಗಳಿಗೆ ಸೂಕ್ತವಾಗಿವೆ. 2014ರಲ್ಲಿ ಮೊದಲ ಮುದ್ರಣ ಕಂಡ ಈ ಸಂಕಲನ ಇದೀಗ ಅಂದರೆ 2023ರಲ್ಲಿ ಮರುಮುದ್ರಣ ಕಂಡಿದೆ.

ಈ ಸಂಕಲನದಲ್ಲಿ ಶ್ರೀ ಅಮೃತ ಸೋಮೇಶ್ವರ ಅವರ ʼಕೆದಂಬಾಡಿ ಜತ್ತಪ್ಪ ರೈ ನೆನಪುಗಳುʼ ಲೇಖನ ಕೆದಂಬಾಡಿಯವರ ಅನನ್ಯ ವ್ಯಕ್ತಿತ್ವವನ್ನು, ಅವರ ಕನ್ನಡ ಮತ್ತು ತುಳು ಸಾಹಿತ್ಯದ ಸಾಧನೆಯನ್ನು ಆಪ್ತವಾಗಿ ಓದುಗರಿಗೆ ಕಟ್ಟಿಕೊಟ್ಟಿದೆ.

ಈ ಸಂಕಲನದಲ್ಲಿ ʼಬೈಪಡಿತ್ತಾಯರ ಪ್ರಾಣಿದಯೆʼ, ʼದೃಷ್ಟಿಯ ಹೊಡೆತ ನಾಲಿಗೆಯ ಕಡಿತʼ, ʼಅಜಿಲ ಬಂಟನೊಂದಿಗೆ ಚಿಪ್ಪು ಹಂದಿ ಮತ್ತು ಪುನುಗು ಬೆಕ್ಕು ಶಿಕಾರಿʼ, ʼಅಜ್ಜಯ್ಯನ ರೈಲು ಪ್ರಯಾಣʼ, ʼಗಡಾಯಿಕಲ್ಲು-ಜಮಲಾಬಾದು ಆವ್ಸೇ-ಜಾವ್ಸೇʼ, ʼಯಕ್ಷಗಾನ ದಿಗ್ಗಜ ಕವಿಭೂಷಣ ಕೆ.ಪಿ. ವೆಂಕಪ್ಪ ಶೆಟ್ಟಿʼ, ʼಕಡವೆಯ ರೂಪದಲ್ಲಿ ಕಾಡಿತ್ತು ಮೃತ್ಯುʼ, ʼಸತ್ತವನು ಎದ್ದು ಬಂದಾಗʼ, ʼದ್ರೌಪದಿಯ ಮಾನಭಂಗ: ಆಚಾರ್ಯರು ತೆಪ್ಪಗಿದ್ದುದೇಕೆ?ʼ, ʼಕಂಬಳಿಯ ಗಂಟೆಂದು ಬಗೆದದು ಕರಡಿಯಪ್ಪುಗೆʼ, ʼತುಂಬಿ ಮನೆಯ ಗೌಡರು ಮತ್ತು ನನ್ನಮ್ಮʼ, ʼಅಪ್ಪನ ಪಟ್ಟೆಶಾಲು ಮತ್ತು ಮಗನ ಹೊಸ ಮೆಟ್ಟುʼ, ʼಮನಸೂರೆಗೊಂಡ ʼಸೂರೆʼʼ ಎಂಬ ಹದಿಮೂರು ಪ್ರಬಂಧಗಳಿದ್ದು ಓದುಗರನ್ನು ಮೂಕವಿಸ್ಮಿತರನ್ನಾಗಿಸುವ ಗುಣಗಳು ಇಲ್ಲಿವೆ. ʼಅಜ್ಜಯ್ಯನ ರೈಲು ಪ್ರಯಾಣʼ ಪ್ರಬಂಧವನ್ನು ಓದಿದವರು ಕುವೆಂಪುರವರ ಅಜ್ಜಯ್ಯನ ಅಭ್ಯಂಜನʼವನ್ನು ಖಂಡಿತ ನೆನಯುತ್ತಾರೆ. ಹೊಸ ಲೋಕವೊಂದನ್ನು ಕಾಣಿಸಿದ ಜತ್ತಪ್ಪ ರೈ ಅವರಿಗೆ ಓದುಗ ಶರಣು ಶರಣು ಎನ್ನದಿರಲಾರ.

ಬೆನ್ನುಡಿಯಲ್ಲಿ ಸಾಹಿತಿ-ಪತ್ರಕರ್ತ ಜೋಗಿಯವರು “ಬೇಟೆ ಸಾಹಿತ್ಯ ಎಂದಾಕ್ಷಣ ನೆನಪಾಗುವುದು ಕೆದಂಬಾಡಿ ಜತ್ತಪ್ಪ ರೈ. … ಇವತ್ತಿಗೂ ಅವರ ʼಬೇಟೆಯ ನೆನಪುಗಳುʼ ಪುಸ್ತಕವನ್ನು ಕೈಲಿ ಹಿಡಿದುಕೊಂಡು ಕುಳಿತರೆ ಮನಸ್ಸು ಕಾಡಿಗೆ ನೆಗೆಯುತ್ತದೆ… ಅಲ್ಲೊಂದು ಹುಲಿ ಎದುರಾಗುತ್ತದೆ. ಅದನ್ನು ತನ್ಮಯರಾಗಿ ನೋಡುತ್ತಾ ಕುಳಿತು ಬೇಟೆಯಾಡುವುದನ್ನು ನಾವು ಮರೆಯುತ್ತೇವೆ. ಆದರೆ ಕೆದಂಬಾಡಿ ಮರೆಯುವುದಿಲ್ಲ. ಈ ʼಹುಲಿ ಹೆಜ್ಜೆʼಯಲ್ಲಿ ಹುಲಿಯಿಲ್ಲ. ಆದರೆ ಅದೇ ಬೇಟೆಗಾರ ಇದ್ದಾನೆ” ಎಂದಿದ್ದಾರೆ.

ಕಲಾವಿದ ಮೋನಪ್ಪ ಅವರ ಆಕರ್ಷಕ ಮುಖಪುಟ ಮತ್ತು ರೇಖಾಚಿತ್ರಗಳೊಡನೆ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ಇದರ ಮೌಲ್ಯ ರೂ. 220/- ಆಗಿರುತ್ತದೆ.

“ಬೇಟೆಗಾರನ ಹುಲಿಹೆಜ್ಜೆ” ಪುಸ್ತಕ ಕೊಳ್ಳಲು ಈ ಲಿಂಕ್ ಕ್ಲಿಕ್‌ ಮಾಡಿ. ‌

ಕೆದಂಬಾಡಿ ಜತ್ತಪ್ಪ ರೈ ಅವರ ಪುಸ್ತಕಗಳನ್ನು ಕೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ

                                            -        ಧನ್ಯವಾದಗಳು, ಪ್ರೀತಿಯಿಂದ – ಗುಬ್ಬಚ್ಚಿ ಸತೀಶ್.‌

(ವಿಶೇಷ ಸೂಚನೆ: ಈ ಲೇಖನವನ್ನು ನನ್ನ ಲಿಖಿತ ಅನುಮತಿಯಿಲ್ಲದೆ ಯಾವುದೇ ರೀತಿಯ ಮುದ್ರಣ-ಡಿಜಿಟಲ್‌-ದೃಶ್ಯ ಮಾಧ್ಯಮಗಳು ಬಳಸುವಂತಿಲ್ಲ)

ಅರ್ಜುನ V/s ಏಕಲವ್ಯ

ಅರ್ಜುನ V/s ಏಕಲವ್ಯ ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗ...