ಬೇಟೆಯನ್ನೇ
ಪ್ರಧಾನ ವಸ್ತುವನ್ನಾಗಿಸಿಕೊಂಡು ಅನುಭವವೇ ನಿರೂಪಣೆಯಾಗಿ ಕೆದಂಬಾಡಿಯವರ “ಬೇಟೆಯ ನೆನಪುಗಳು”
1978ರಲ್ಲಿ ಪ್ರಕಟವಾಯಿತು. ಕಾಲದ ದೃಷ್ಟಿಯಿಂದ ಬಹಳ ಅಪರೂಪವಾದ ಈ ಕಥಾನಕ ಓದುಗರ ಮೆಚ್ಚುಗೆಗೆ ಪಾತ್ರವಾಯಿತು.
ಓದುಗರ ಈ ಮೆಚ್ಚುಗೆಗೆ ಬಹುಮಾನವಾಗಿ ಕೆದಂಬಾಡಿಯವರು “ಈಡೊಂದು ಹುಲಿಯೆರಡು”, “ಬೇಟೆಯ ಉರುಳು”, “ಬೆಟ್ಟದ
ತಪ್ಪಲಿನಿಂದ ಕಡಲ ತಡಿಗೆ” ಎಂಬ ಕೃತಿಗಳನ್ನು ನೀಡಿದರು.
ಹುಲಿ
ಮತ್ತು ಬೇಟೆಗಾರನ ಮುಖಾಮುಖಿಯ ಮಹಾಮೌನವನ್ನು, ಕಾಡಿನ ನಿಗೂಢತೆಯನ್ನು ಅಕ್ಷರಗಳಲ್ಲಿ ಸೆರೆಹಿಡಿದ ಬೇಟೆಗಾರ
ಜತ್ತಪ್ಪ ರೈ ಅವರು ತಮ್ಮ ಮೃಗಯಾನುಭವವನ್ನು ಕಟ್ಟಿಕೊಟ್ಟದ್ದು ಮುಂದೆ ಗುಂಡಿಕ್ಕಲಾರೆ ಎಂದು ಪ್ರಮಾಣ
ಮಾಡಿದ ಮೇಲೆ. ಆಗ ಅವರಿಗೆ ಅರವತ್ತು ವಯಸ್ಸು ದಾಟಿತ್ತು. ಮೃಗಯಾ ಸಾಹಿತ್ಯವನ್ನು ಬರೆಯಲು ರೈ ಅವರಿಗೆ
ಮೊದಲು ಪ್ರೇರೆಪಿಸಿದವರು ಜಾನಪದ ವಿದ್ಯಾಂಸರಾದ ಪ್ರೊ. ಅಮೃತ ಸೋಮೇಶ್ವರರು. ಈ ಮೂಲಕ “ಬೇಟೆಯ ನೆನಪುಗಳು”
ಮೊದಲು ಪ್ರಕಟಗೊಂಡು, ತದನಂತರ ಉಳಿದ ಕೃತಿಗಳು ಪ್ರಕಟವಾದವು. 11/02/1916ರಲ್ಲಿ ಪುತ್ತೂರಿನ ಕೆದಂಬಾಡಿಯಲ್ಲಿ
ಜನಿಸಿದ್ದ ಜತ್ತಪ್ಪ ರೈ ಅವರು 20/06/2003ರಲ್ಲಿ ತೀರಿಕೊಂಡರು. ರೈ ಅವರು ಇನ್ನಿಲ್ಲವಾದ ದಶಕ ಕಳೆದ
ಮೇಲೆ ಅವರ ಮಗ ಡಾ. ಕೆದಂಬಾಡಿ ತಿಮ್ಮಪ್ಪ ರೈ ಅವರ ಮೂಲಕ ಸಾಹಿತಿ-ಪತ್ರಕರ್ತ-ಉಪನ್ಯಾಸಕರೂ ಆದ ನರೇಂರ್ದ
ರೈ ದೇರ್ಲ ಅವರು, ಜತ್ತಪ್ಪ ರೈ ಅವರ ಕೆಲವು ಬಿಡಿಬಿಡಿ ಲೇಖನಗಳನ್ನು ಸಂಗ್ರಹಿಸಿ ಓದಿಕೊಂಡು ಹಲವಾರು
ಕಾರಣಗಳಿಗೆ ಮೆಚ್ಚಿಕೊಂಡು “ಬೇಟೆಗಾರನ ಹುಲಿಹೆಜ್ಜೆ” ಎಂದು ಸಂಕಲಿಸಿ ಪ್ರಕಟಿಸಿದರು. ಈ ಮೂಲಕ ಈ ಸಂಕಲನದ
ಸಂಪಾದಕರೇ ಆದ ನರೇಂದ್ರ ರೈ ದೇರ್ಲ ಅವರೇ ಹೇಳುವಂತೆ ʼಮನುಷ್ಯ ಜೀವನದಲ್ಲಿ ದಾರುಣವೂ ಅಸಹನೀಯವೂ ಆದ
ಸನ್ನಿವೇಶಗಳು ಉದ್ಭವಿಸಿದಾಗ, ಅವುಗಳಿಗೆ ಸ್ವಲ್ಪವೂ ಲಕ್ಷ್ಯಕೊಡದೆ ಪ್ರಕೃತಿ ತನ್ನ ಪಾಡಿಗೆ ತಾನು
ಸಹಜ ಕರ್ತವ್ಯದಲ್ಲಿ ತೊಡಗಿಸುತ್ತದೆ ಎಂಬುದಕ್ಕೆ ಇಲ್ಲಿಯ ಬರಹಗಳೇ ಸಾಕ್ಷಿʼ ಎಂಬ ಮಾತುಗಳು ಈ ಸಂಕಲನದ
ಪ್ರಬಂಧಗಳಿಗೆ ಸೂಕ್ತವಾಗಿವೆ. 2014ರಲ್ಲಿ ಮೊದಲ ಮುದ್ರಣ ಕಂಡ ಈ ಸಂಕಲನ ಇದೀಗ ಅಂದರೆ 2023ರಲ್ಲಿ
ಮರುಮುದ್ರಣ ಕಂಡಿದೆ.
ಈ
ಸಂಕಲನದಲ್ಲಿ ʼಬೈಪಡಿತ್ತಾಯರ ಪ್ರಾಣಿದಯೆʼ, ʼದೃಷ್ಟಿಯ ಹೊಡೆತ ನಾಲಿಗೆಯ ಕಡಿತʼ, ʼಅಜಿಲ ಬಂಟನೊಂದಿಗೆ
ಚಿಪ್ಪು ಹಂದಿ ಮತ್ತು ಪುನುಗು ಬೆಕ್ಕು ಶಿಕಾರಿʼ, ʼಅಜ್ಜಯ್ಯನ ರೈಲು ಪ್ರಯಾಣʼ, ʼಗಡಾಯಿಕಲ್ಲು-ಜಮಲಾಬಾದು
ಆವ್ಸೇ-ಜಾವ್ಸೇʼ, ʼಯಕ್ಷಗಾನ ದಿಗ್ಗಜ ಕವಿಭೂಷಣ ಕೆ.ಪಿ. ವೆಂಕಪ್ಪ ಶೆಟ್ಟಿʼ, ʼಕಡವೆಯ ರೂಪದಲ್ಲಿ ಕಾಡಿತ್ತು
ಮೃತ್ಯುʼ, ʼಸತ್ತವನು ಎದ್ದು ಬಂದಾಗʼ, ʼದ್ರೌಪದಿಯ ಮಾನಭಂಗ: ಆಚಾರ್ಯರು ತೆಪ್ಪಗಿದ್ದುದೇಕೆ?ʼ, ʼಕಂಬಳಿಯ
ಗಂಟೆಂದು ಬಗೆದದು ಕರಡಿಯಪ್ಪುಗೆʼ, ʼತುಂಬಿ ಮನೆಯ ಗೌಡರು ಮತ್ತು ನನ್ನಮ್ಮʼ, ʼಅಪ್ಪನ ಪಟ್ಟೆಶಾಲು
ಮತ್ತು ಮಗನ ಹೊಸ ಮೆಟ್ಟುʼ, ʼಮನಸೂರೆಗೊಂಡ ʼಸೂರೆʼʼ ಎಂಬ ಹದಿಮೂರು ಪ್ರಬಂಧಗಳಿದ್ದು ಓದುಗರನ್ನು ಮೂಕವಿಸ್ಮಿತರನ್ನಾಗಿಸುವ
ಗುಣಗಳು ಇಲ್ಲಿವೆ. ʼಅಜ್ಜಯ್ಯನ ರೈಲು ಪ್ರಯಾಣʼ ಪ್ರಬಂಧವನ್ನು ಓದಿದವರು ಕುವೆಂಪುರವರ ಅಜ್ಜಯ್ಯನ ಅಭ್ಯಂಜನʼವನ್ನು
ಖಂಡಿತ ನೆನಯುತ್ತಾರೆ. ಹೊಸ ಲೋಕವೊಂದನ್ನು ಕಾಣಿಸಿದ ಜತ್ತಪ್ಪ ರೈ ಅವರಿಗೆ ಓದುಗ ಶರಣು ಶರಣು ಎನ್ನದಿರಲಾರ.
ಬೆನ್ನುಡಿಯಲ್ಲಿ
ಸಾಹಿತಿ-ಪತ್ರಕರ್ತ ಜೋಗಿಯವರು “ಬೇಟೆ ಸಾಹಿತ್ಯ ಎಂದಾಕ್ಷಣ ನೆನಪಾಗುವುದು ಕೆದಂಬಾಡಿ ಜತ್ತಪ್ಪ ರೈ.
… ಇವತ್ತಿಗೂ ಅವರ ʼಬೇಟೆಯ ನೆನಪುಗಳುʼ ಪುಸ್ತಕವನ್ನು ಕೈಲಿ ಹಿಡಿದುಕೊಂಡು ಕುಳಿತರೆ ಮನಸ್ಸು ಕಾಡಿಗೆ
ನೆಗೆಯುತ್ತದೆ… ಅಲ್ಲೊಂದು ಹುಲಿ ಎದುರಾಗುತ್ತದೆ. ಅದನ್ನು ತನ್ಮಯರಾಗಿ ನೋಡುತ್ತಾ ಕುಳಿತು ಬೇಟೆಯಾಡುವುದನ್ನು
ನಾವು ಮರೆಯುತ್ತೇವೆ. ಆದರೆ ಕೆದಂಬಾಡಿ ಮರೆಯುವುದಿಲ್ಲ. ಈ ʼಹುಲಿ ಹೆಜ್ಜೆʼಯಲ್ಲಿ ಹುಲಿಯಿಲ್ಲ. ಆದರೆ
ಅದೇ ಬೇಟೆಗಾರ ಇದ್ದಾನೆ” ಎಂದಿದ್ದಾರೆ.
ಕಲಾವಿದ
ಮೋನಪ್ಪ ಅವರ ಆಕರ್ಷಕ ಮುಖಪುಟ ಮತ್ತು ರೇಖಾಚಿತ್ರಗಳೊಡನೆ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಈ ಕೃತಿಯನ್ನು
ಪ್ರಕಟಿಸಿದ್ದು, ಇದರ ಮೌಲ್ಯ ರೂ. 220/- ಆಗಿರುತ್ತದೆ.
“ಬೇಟೆಗಾರನ ಹುಲಿಹೆಜ್ಜೆ” ಪುಸ್ತಕ ಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ.
ಕೆದಂಬಾಡಿ ಜತ್ತಪ್ಪ ರೈ ಅವರ ಪುಸ್ತಕಗಳನ್ನು ಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
- ಧನ್ಯವಾದಗಳು, ಪ್ರೀತಿಯಿಂದ – ಗುಬ್ಬಚ್ಚಿ ಸತೀಶ್.
(ವಿಶೇಷ
ಸೂಚನೆ: ಈ ಲೇಖನವನ್ನು ನನ್ನ ಲಿಖಿತ ಅನುಮತಿಯಿಲ್ಲದೆ ಯಾವುದೇ ರೀತಿಯ ಮುದ್ರಣ-ಡಿಜಿಟಲ್-ದೃಶ್ಯ ಮಾಧ್ಯಮಗಳು
ಬಳಸುವಂತಿಲ್ಲ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ