ನಿಮಗೆ ವೇದವ್ಯಾಸರ ಮಾಮನ ಕತೆ ಗೊತ್ತೇ!?
ವೇದವ್ಯಾಸರು ನಿಮಗೆಲ್ಲಾ ಗೊತ್ತೇ ಇದ್ದಾರೆ. ನಿಮಗೆ ಗೊತ್ತಿಲ್ಲದ ಅವರ ಸೋದರಮಾವನ ಕತೆಯೊಂದಿದೆ. ಒಂದು ದಿನ ವೇದವ್ಯಾಸರ ಸೋದರಮಾವ (ಮುದ್ದಿನ ಮಾಮ) ವೇದವ್ಯಾಸರಲ್ಲಿಗೆ ಬಂದು ಹೇಳುತ್ತಾರೆ, “ವ್ಯಾಸ, ನಿನಗೆ ಬ್ರಹ್ಮದೇವರು ಚೆನ್ನಾಗಿಯೇ ಪರಿಚಯವಿದ್ದಾರೆ. ಎಷ್ಟಾದರೂ ನೀನು ಬ್ರಹ್ಮಪುರಾಣವನ್ನೇ ಬರೆದವನಲ್ಲವೇ! ಹೇಗಾದರು ಮಾಡಿ ಆತನಿಂದ ನನಗೊಂದು ವರವನ್ನು ಕರುಣಿಸು. ನಾನು ಚಿರಂಜೀವಿಯಾಗಲು ಬಯಸಿದ್ದೇನೆ. ದಯಮಾಡಿ ಬ್ರಹ್ಮನಿಂದ ಚಿರಂಜೀವಿಯಾಗುವಂತೆ ನನ್ನನ್ನು ಹರಸಿಬಿಡು” ಎಂದು ಕೋರುತ್ತಾರೆ.
ಎಷ್ಟಾದರೂ ಮುದ್ದಿನ ಮಾಮನಲ್ಲವೇ? ವೇದವ್ಯಾಸರು ಆತನನ್ನು ಬ್ರಹ್ಮನಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಭೇಟಿಯ ಶಿಷ್ಟಾಚಾರಗಳೆಲ್ಲಾ ಮುಗಿದ ಮೇಲೆ ವೇದವ್ಯಾಸರು ತಾವು ಅಲ್ಲಿಗೆ ಬಂದ ಕಾರಣವನ್ನು ತಿಳಿಸುತ್ತಾರೆ. ವಿಷಯ ತಿಳಿದ ಬ್ರಹ್ಮನು ತನ್ನ ಅಸಾಯಕತೆಯನ್ನು ವ್ಯಕ್ತಪಡಿಸಿ, ವಿಷ್ಣುವು ಈ ಸಂಬಂಧ ಸಹಾಯ ಮಾಡಬಹುದೆಂದು ಅವರಿಬ್ಬರನ್ನು ವಿಷ್ಣುವಲ್ಲಿಗೆ ಕರೆದೊಯ್ಯುತ್ತೇನೆ ಎನ್ನುತ್ತಾರೆ. ಈ ಮಾತನ್ನು ಆಲಿಸಿದ ಸರಸ್ವತಿಯು, ತಾನೂ ಬರುವುದಾಗಿಯೂ, ಹಾಗೇ ಸೋದರಿ ಲಕ್ಷ್ಮಿಯನ್ನು ನೋಡಿಕೊಂಡು, ಅವಳ ಹೊಸ ಒಡವೆಗಳನ್ನು ನೋಡುವ ಇಂಗಿತವನ್ನು ವ್ಯಕ್ತಪಡಿಸುತ್ತಾಳೆ. ಒಪ್ಪಿದ ಬ್ರಹ್ಮನು ಆ ಮೂವರನ್ನು ಕರೆದುಕೊಂಡು ವಿಷ್ಣುವಿನ ಸನ್ನಿಧಾನಕ್ಕೆ ಬರುತ್ತಾರೆ. ಕಾರಣ ತಿಳಿದ ವಿಷ್ಣುವು ತಾನೂ ಈ ವಿಷಯದಲ್ಲಿ ಅಸಾಯಕನಾಗಿರುವುದನ್ನು ತಿಳಿಸಿ, ಮಹೇಶ್ವರನು ಚಿರಂಜೀವಿ ವರವನ್ನು ಕರುಣಿಸಬಹುದೆಂದು ತಿಳಿಸಿ ಆತನಲ್ಲಿಗೆ ಹೊರಡಲು ಅನುವಾಗುತ್ತಾನೆ. ಆಗ ಲಕ್ಷ್ಮಿ ಮತ್ತು ಸರಸ್ವತಿಯರೂ ತಾವೂ ಬಂದು ಪಾರ್ವತಿಯನ್ನು ಮಾತನಾಡಿಸಿಕೊಂಡು ಬರುತ್ತೇವೆ ಎಂದು ಹೊರಡುತ್ತಾರೆ. ಈ ಆರು ಜನ ಕೈಲಾಸಕ್ಕೆ ಬಂದು ತಮ್ಮ ಆಗಮನದ ವಿಷಯವನ್ನು ಶಿವನಿಗೆ ಹೇಳುತ್ತಾರೆ. ತಾಳ್ಮೆಯಿಂದ ಕೇಳಿಸಿಕೊಂಡ ಶಿವ, ಇದು ತನ್ನ ಅಧೀನನಾದ ಯಮನೊಬ್ಬನಿಂದಲೇ ಸಾಧ್ಯವೆಂದು ತಿಳಿಸಿ, ಅಲ್ಲಿಗೆ ಯಮರಾಜನನ್ನು ಕರೆಸುತ್ತಾನೆ. ಕ್ಷಣಾರ್ಧದಲ್ಲಿ ಬಂದ ಯಮರಾಜ ವೇದವ್ಯಾಸರ ಮಾಮನ ಆಯುಷ್ಯದ ವಿವರಗಳು ಚಿತ್ರಗುಪ್ತನ ಲ್ಯಾಪ್ಟಾಪ್ಪಿನಲ್ಲಿ ಇರುವುದಾಗಿ ಹೇಳಿ ಅವರನ್ನು ಕೋರಬೇಕೆಂದು ಹೇಳುತ್ತಾನೆ. ಆ ಸಮಯದಲ್ಲಿ ಚಿತ್ರಗುಪ್ತ ಕಾಶಿಗೆ ಹೋಗಿದ್ದರಿಂದ ಆತ ಬರುವುದು ಸ್ವಲ್ಪ ತಡವಾಗುತ್ತದೆ. ಅಷ್ಟರಲ್ಲಿ ಎಲ್ಲರ ಪರಸ್ಪರ ಉಭಯ ಕುಶಲೋಪಚಾರ ನಡೆದು ಊಟವೂ ಮುಗಿದಿರುತ್ತದೆ. ಚಿತ್ರಗುಪ್ತನು ಬಂದ ಕ್ಷಣವೇ ಯಮರಾಜನು ವೇದವ್ಯಾಸರ ಮಾಮನ ಮರಣ ದಿನಾಂಕವನ್ನು ತಿಳಿಸುವಂತೆ ಕೋರುತ್ತಾನೆ. ಒಂದೆರಡು ನಿಮಿಷ ತಮ್ಮ ಲ್ಯಾಪ್ಟಾಪ್ಪಿನಲ್ಲಿ ವಿವರಗಳನ್ನು ಹುಡುಕುವ ಚಿತ್ರಗುಪ್ತರು ಒಮ್ಮೆಗೆ, “ಅಯ್ಯೋ...!” ಎಂದು ಕಿರುಚುತ್ತಾರೆ. ಆ ಕ್ಷಣವೇ ವೇದವ್ಯಾಸರ ಮಾಮ ಅಲ್ಲೇ ಅಸುನೀಗುತ್ತಾರೆ. ಎಲ್ಲರೂ ಆಶ್ಚರ್ಯಚಕಿತರಾದಾಗ ಯಮರಾಜನು ಚಿತ್ರಗುಪ್ತರ ಲ್ಯಾಪ್ಟಾಪ್ಪಿನಲ್ಲಿ ತೆರೆದಿದ್ದ ಫೈಲನ್ನು ನೋಡುತ್ತಾನೆ. ಅದರಲ್ಲಿ, ʼಯಾವ ದಿನ ಬ್ರಹ್ಮ ಮತ್ತು ಸರಸ್ವತಿ, ವಿಷ್ಣು ಮತ್ತು ಲಕ್ಷ್ಮಿ, ಶಿವ ಮತ್ತು ಪಾರ್ವತಿ, ಯಮರಾಜ ಮತ್ತು ಚಿತ್ರಗುಪ್ತ ಹಾಗೂ ವೇದವ್ಯಾಸರು ಮತ್ತವರ ಮಾಮ ಸೇರುತ್ತಾರೋ ಅಂದೆ ವೇದವ್ಯಾಸರ ಮಾಮನ ಕಡೆಯ ದಿನʼವೆಂದು ದಾಖಲಾಗಿರುತ್ತದೆ.
👌🏻
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ