ಮುಖಪುಟ ವಿನ್ಯಾಸ: ಅಜಿತ್ ಎಸ್.ಕೌಂಡಿನ್ಯ
ಮುಗುಳ್ನಗೆ
“ನಗು ಎಲ್ಲರಿಗಾಗಿ, ಪ್ರೀತಿ ಒಬ್ಬರಿಗಾಗಿ”
ಸಿನಿಮಾವಾಗುತ್ತಿರುವ ಜನಪ್ರಿಯ ಕಾದಂಬರಿ
‘A love story over a cup of coffee’
ಗುಬ್ಬಚ್ಚಿ ಸತೀಶ್
ಕತೆಯೊಂದು
ಕಾದಂಬರಿಯಾಗಿ…
2008ರ
ನಾಗತಿಹಳ್ಳಿಯ ಚಿತ್ರಕಥಾ ಶಿಬಿರವನ್ನು ಮುಗಿಸಿಕೊಂಡು ಬಂದ ನಂತರದ ದಿನಗಳಲ್ಲಿ, ಗೆಳೆಯ ಚಿದುವಿನ
(ಟಿ.ಜೆ. ಚಿದಾನಂದ ಮೂರ್ತಿ) ಮನೆಯಲ್ಲಿ, ಮತ್ತೊಬ್ಬ ಗೆಳೆಯರಾದ ಗುರುಪ್ರಸಾದ್ ಎಸ್. ಮತ್ತು ನಾನು
ಹೀಗೆ ಮಾತಿಗೆ ಕುಳಿತಾಗ, ಗುರುರವರು ಅವರ ಸ್ನೇಹಿತರಾದ ಧಾರಾವಾಹಿ ನಿರ್ಮಾಪಕರೊಬ್ಬರು ಮುಗುಳ್ನಗೆ
ಎಂಬ ಹೆಸರಿನಲ್ಲಿ ಚಲನಚಿತ್ರವೊಂದನ್ನು ನಿರ್ಮಿಸಲು ಕಥೆ ಹುಡುಕುತ್ತಿದ್ದಾರೆ ಎಂದು ಹೇಳಲಾಗಿ, ಗೆಳೆಯ
ಚಿದು ನಮ್ಮ ಮೇಷ್ಟ್ರೇ ಕಥೆ ಬರೆಯುತ್ತಾರೆ ಎಂದು ಹೇಳಿಬಿಟ್ಟರು. ನನ್ನನ್ನು ಹತ್ತಿರದಿಂದ
ಬಲ್ಲವರಿಗೆ ನಾನು ಮೇಷ್ಟ್ರು! ಆ ಕ್ಷಣದಲ್ಲಿ ನನ್ನಲ್ಲಿ ಮೊಳಕೆಯೊಡೆದ ಸಣ್ಣ ಕಥೆಯೊಂದು, ನಂತರದ ದಿನಗಳಲ್ಲಿ
ಒಮ್ಮೆ ಸದಾ ಹಸನ್ಮುಖಿಯಾಗಿರುವ ಗೆಳೆಯರಾದ ಟಿ.ಪಿ. ರಾಜಶೇಖರರವರು ತಮ್ಮ ಜೀವನದ ಅಮೃತಘಳಿಗೆಯೊಂದನ್ನು
ನನ್ನಲ್ಲಿ ಹಂಚಿಕೊಂಡಾಗ ತನ್ನ ಸ್ಪಷ್ಟ ನಿಲುವು ತಾಳಿತು. ಆ ಕಥೆಯು ಸಿನಿಮಾ ಭಾಷೆಯಲ್ಲಿ ಹೇಳುವಂತೆ
ಒಂದು ಸಾಲಿನ ಕಥೆಯಾಗಿ, ನಂತರ ಐದು ಸಾಲಾಗಿ, ಹದಿನೈದು ಸಾಲಾಗಿ, ಹದಿನೈದು ಪುಟಗಳಾಗಿ ಜೀವ ತಳೆಯಿತು.
ಆನಂತರ ಹಲವು ತಿಂಗಳುಗಳ ಕಾಲ ಸಿನಿಮಾಗಾಗಿಯೇ ಚಿತ್ರಕಥೆಯ ರೂಪ ಪಡೆಯಿತು.
ಆನಂತರ, ನನ್ನ ಶ್ರೀಮತಿ ಮತ್ತು ಹಲವು ಸಹೃದಯ ಗೆಳೆಯರು ಈ ಚಿತ್ರಕಥೆಯನ್ನು ಕಾದಂಬರಿ ರೂಪದಲ್ಲಿ ಹೊರತನ್ನಿ ಎಂದು ಹೇಳಿದಾಗ ಇಲ್ಲವೆನ್ನಲಾಗದೆ ಹಲವು ತಿಂಗಳುಗಳ ಕಾಲ ಪ್ರಯತ್ನಪಟ್ಟು ಕಾದಂಬರಿ ರೂಪಕ್ಕೆ ತಂದಿದ್ದೇನೆ. ಸಾಮಾನ್ಯವಾಗಿ ಕಾದಂಬರಿಗಳು ಚಲನಚಿತ್ರವಾಗುವುದು ವಾಡಿಕೆ. ಆದರಿಲ್ಲಿ ಸಿನಿಮಾವಾಗದ ನನ್ನ ಚಿತ್ರಕಥೆ ಕಾದಂಬರಿ ರೂಪದಲ್ಲಿದೆ. ಇದು ನನ್ನ ಮೊದಲ ಕಾದಂಬರಿ.
ಪ್ರೀತಿಯಿಂದ,
- ಗುಬ್ಬಚ್ಚಿ ಸತೀಶ್.
ಗೆಳೆಯರ ಕಾಫೀ
ಕೂಟ
ಇತ್ತ
ಹಳ್ಳಿಯೂ ಅಲ್ಲದ, ಅತ್ತ ನಗರವೂ ಅಲ್ಲದ ಅಮರಗೊಂಡ, ತುಮಕೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಸಂಜೆಯಾಯಿತೆಂದರೆ
ಅಮರಗೊಂಡದ ವಿಶಾಲವಾದ ಮೈದಾನದಲ್ಲಿ ಎಲ್ಲೆಲ್ಲೂ ಕ್ರಿಕೆಟ್, ಕ್ರಿಕೆಟ್! ಮೈದಾನದ ಒಂದು ತುದಿಗೆ ಇರುವ
ಬೆಂಗಳೂರು-ಹೊನ್ನಾವರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಪಕ್ಕಕ್ಕೆ, ಮೈದಾನದ ಮೂಲೆಗೆ ಅಂಟಿಕೊಂಡಂತೆ
ಇರುವ “ಶ್ರೀ ಧರ್ಮಸ್ಥಳ ಮಂಜುನಾಥ ಹೋಟೆಲ್” ನ ಫಿಲ್ಟರ್ ಕಾಫೀಯ ಘಮ, ಗಾಳಿಯಲ್ಲಿ ತೇಲಿ ಹೊರಟಿತೆಂದರೆ,
ರಸ್ತೆಯಲ್ಲಿ ಹೋಗುವ ವಾಹನಗಳೆಲ್ಲವೂ ಒಮ್ಮೆ ನಿಂತು, ಅವುಗಳ ಚಾಲಕರಿಗೆ, ಪ್ರಯಾಣಿಕರಿಗೆ ಇಲ್ಲಿ ಕಾಫೀ
ಕುಡಿದೇ ಹೋಗಬೇಕೆಂಬ ಒಂದು ಅದಮ್ಯ ಆಸೆಯನ್ನು ಮೂಡಿಸುತ್ತಿತ್ತು. ಅಷ್ಟೇ ಅಲ್ಲದೇ, ಮೈದಾನದ ಒಳಹೊಕ್ಕಿದ
ಕಾಫೀಯ ಪರಿಮಳವು, ಆಟವಾಡುವ, ವಾಕ್ ಮಾಡುವ ಎಲ್ಲರನ್ನೂ ಕಾಫೀ ಕುಡಿದು, ತುಸು ವಿಶ್ರಾಂತಿ ತೆಗೆದುಕೊಂಡು
ಹೋಗುವಂತೆ ಆಹ್ವಾನಿಸುತ್ತಿತ್ತು. ವಯಸ್ಸಾದವರಿಗಂತೂ ಶ್ರೀ ಧರ್ಮಸ್ಥಳ ಮಂಜುನಾಥ ಹೋಟೆಲ್‍ನ ಕಾಫೀಯನ್ನು
ಹೀರದಿದ್ದರೆ ರಾತ್ರಿ ನಿದ್ದೆ ಬರುತ್ತಿರಲ್ಲಿಲ್ಲವೆನೋ? ತಿಂಡಿ, ಊಟ ಸಿಗುತ್ತಿದ್ದರೂ, ಆ ಹೋಟೆಲ್ಲಿನಲ್ಲಿ
ಹೆಚ್ಚು ಖರ್ಚಾಗುತ್ತಿದ್ದದ್ದು ಕಾಫೀಯೊಂದೆ! ಅದಕ್ಕೆ ಆ ಹೋಟೆಲ್ಲಿಗೆ “ಕಾಡುವ ಕಾಫೀ ಹೋಟೆಲ್ಲು” ಎಂಬ
ಬಿರುದೂ ಬಂದಿತ್ತು.
ಚಿಕ್ಕ
ವಯಸ್ಸಿಗೇ ಧರ್ಮಸ್ಥಳದಿಂದ ಅಮರಗೊಂಡಕ್ಕೆ ಬಂದ ನಾರಾಯಣ ರಾವ್ ಎಂಬುವವರು ಅಡುಗೆ ಭಟ್ಟ, ಮಾಣಿ, ಮಾಲೀಕರಾಗಿ
ತುಸು ದೊಡ್ಡದು ಎಂಬ ಜಾಗದಲ್ಲಿಯೇ ಈ ಹೋಟೆಲ್ಲನ್ನು ಆರಂಭಿಸಿ, ಹೆಚ್ಚು ಮಾತಿಲ್ಲದ ತಮ್ಮ ನಗುಮೊಗದ
ಸೇವೆಯಿಂದ ಅಲ್ಪಕಾಲದಲ್ಲಿಯೇ ಹೆಸರುವಾಸಿಯಾಗಿದ್ದರು. ಆದರೆ, ಅಕಾಲಿಕ ಮರಣಕ್ಕೆ ತುತ್ತಾದರು. ಒಂದು
ಸಂಜೆ ಕೆಲಸ ಮಾಡುತ್ತಿದ್ದವರು ಯಾಕೋ ಎದೆ ನೋವು ಅನ್ನುತ್ತಲೇ ಹೋಟೆಲ್ಲನ್ನು ಬೇಗ ಮುಗಿಸಿ ಮನೆಗೆ ಹೋಗಿ
ಮಲಗಿದವರು ಮರುದಿನ ಬೆಳಿಗ್ಗೆ ಏಳಲೇ ಇಲ್ಲ. ಈ ಕಾರಣದಿಂದ, ಅಪರೂಪಕ್ಕಷ್ಟೆ ಹೋಟೆಲ್ಲಿಗೆ ಕಾಲಿಡುತ್ತಿದ್ದ
ನಾರಾಯಣ ರಾವ್‍ರವರ ಏಕೈಕ ಪುತ್ರ ಮಂಜುನಾಥನ ಮೇಲೆ ಹೋಟೆಲ್ಲಿನ ಜವಾಬ್ದಾರಿ ಬಿತ್ತು. ಆಗಷ್ಟೇ ಪಿ.ಯು.ಸಿಯಲ್ಲಿ
ಫೇಲಾಗಿದ್ದ ಮಂಜುನಾಥ, ಓದುವುದು ಹಾಳಾದುದಕ್ಕೆ ಬೇಸರಿಸಿಕೊಳ್ಳದಿದ್ದರೂ, ಸಂಜೆಯ ಹೊತ್ತು ಕ್ರಿಕೆಟ್
ಆಡುವುದು ತಪ್ಪಿದ್ದಕ್ಕೆ ಸ್ವಲ್ಪ ದಿನ ಬೇಜಾರು ಮಾಡಿಕೊಂಡೇ ಹೋಟೆಲ್ಲನ್ನು ತೆರೆಯಲಾರಂಭಿಸಿದ. ಅಪ್ಪನ
ಕೈರುಚಿ ರಕ್ತಗತವಾಗಿ ಬಂದಿದ್ದರಿಂದ ಹೋಟೆಲ್ಲಿನ ಖಾಯಂ ಗಿರಾಕಿಗಳೂ ಖಾಯಂ ಆಗಿಯೇ ಉಳಿದರು, ಜೊತೆಗೆ
ಇವನ ಗೆಳೆಯರೂ ಹೋಟೆಲ್ಲಿಗೆ ಬರುತ್ತಿದ್ದರಿಂದ ಮಂಜುನಾಥನ ಕಾಫೀಯೂ ಹೆಸರುವಾಸಿಯಾಯಿತು.
ಕಾಲ
ಕಳೆದಂತೆ, ಒಂದು ಕಾಲದಲ್ಲಿ ಕಾಫೀಯೆಂದರೆ ಮಂಜುನಾಥ ಹೋಟೆಲ್ ಎಂದೇ ಖ್ಯಾತವಾಗಿದ್ದ ಹೋಟೆಲ್ಲಿನ ಜೊತೆ
ಪೈಪೋಟಿಗಲ್ಲದಿದ್ದರೂ, ನಗರೀಕರಣಗೊಳ್ಳಲು ತವಕಿಸುತ್ತಿದ್ದ ಅಮರಗೊಂಡಕ್ಕೆ ಕಾಲಿರಿಸಿದ, ನಗರಗಳಲ್ಲಿ
ಅದರಲ್ಲೂ ಬೆಂಗಳೂರಿನಲ್ಲಿ ಗಲ್ಲಿಗೊಂದರಂತೆ ತಲೆಯೆತ್ತಿದ್ದ “ಕಾಫೀ ಡೇ” ನಮ್ಮಲ್ಲಿ ಎಲ್ಲೂ ಸಿಗದ ಅನುಭವವನ್ನು
ನೀಡುತ್ತೇವೆ ಎಂದು ಜನರನ್ನು ಕೈಬೀಸಿ ಕರೆಯತೊಡಗಿತು. ಊರಿಂದ ಸ್ವಲ್ಪ ದೂರವಿದ್ದರೂ, ತಾವು ಆಧುನೀಕರಣದ
ಪ್ರತೀಕವೆಂಬಂತೆ ಭಾವಿಸಿದ್ದ ಜನ ಅಲ್ಲಿಗೆ ಹೋಗಲಾರಂಭಿಸಿದರು. ನಾವೆಂದೂ ಕಾಫೀಯನ್ನೇ ಕುಡಿಯಲ್ಲಿಲ್ಲ,
ಕುಡಿದಿದ್ದೆಲ್ಲಾ ಪೆಪ್ಸಿ, ಕೋಕ-ಕೋಲ ಮಾತ್ರವೇ ಎನ್ನುತ್ತಿದ್ದ ಕಾಲೇಜು ಹುಡುಗ ಹುಡುಗಿಯರೂ ಕಾಫೀ
ಡೇಗೆ ಹೋಗಿ ಗಂಟೆಗಟ್ಟಲೆ ಕುಳಿತು ಕಾಫೀ ಹೀರತೊಡಗಿದರು. ದಿನಕಳೆದಂತೆ ವಾಹನಗಳೂ ಕಾಫೀ ಡೇ ಮುಂದೆಯೇ
ನಿಲ್ಲತೊಡಗಿದವು.
ನಿಧಾನವಾಗಿ
ಕಾಫೀ ಡೇಯ ಪರಿಣಾಮ ತನ್ನ ಹೋಟೆಲ್ಲಿನ ಮೇಲೆ ಆಗುತ್ತಿದೆ ಎಂದರಿತ ಮಂಜುನಾಥ ತನ್ನ ತಲ್ಲಣವನ್ನು ಗೆಳೆಯರ
ಜೊತೆಗೆ ಹೇಳಿಕೊಂಡ. ಹೋಟೆಲ್ಲನ್ನು ಮುಚ್ಚುವುದರವರೆವಿಗೂ ಹಲವು ಸಲಹೆಗಳು ಬಂದವು. ಆದರೆ, ಮಂಜುನಾಥನ
ಆಪ್ತ ಗೆಳೆಯ, ಸಹಪಾಠಿ, ಅಮರಗೊಂಡದಲ್ಲಿ ಪಿ.ಯು.ಸಿ. ಮುಗಿಸಿ ಬೆಂಗಳೂರಿನಲ್ಲಿ ಬಿ.ಇ. ಓದಲು ಹೋಗಿದ್ದ
ಗಣೇಶ್ ರಜೆಗೆ ಬಂದಾಗ ಒಂದು ಉಪಯುಕ್ತ ಸಲಹೆ ಕೊಟ್ಟಿದ್ದ. ಹೋಟೆಲ್ಲನ್ನು ಆಧುನೀಕರಣಗೊಳಿಸಿ, ಹೆಸರನ್ನು
ಬದಲಾಯಿಸುವುದು ಅದಾಗಿತ್ತು. ಜೊತೆಗೆ ಹಣದ ಸಹಾಯವನ್ನೂ ಮಾಡಿದ್ದ.
ಗೆಳೆಯನ
ಸಲಹೆಯನ್ನು ಪ್ರೀತಿಯಿಂದ ಆಲಂಗಿಸಿಕೊಂಡ ಮಂಜುನಾಥ ಅತ್ಯಲ್ಪ ಅವಧಿಯಲ್ಲೇ ಹೋಟೆಲ್ಲನ್ನು ಕಾಲಕ್ಕೆ ತಕ್ಕಂತೆ
ಆಧುನೀಕರಣಗೊಳಿಸಿ, ಒಂದು ವಿಶಾಲವಾದ ಮಹಡಿಯನ್ನೂ ನಿರ್ಮಿಸಿಕೊಂಡ. ಹೆಸರನ್ನು ಗೆಳೆಯನ ಸಲಹೆಯಂತೆ
“ಗೆಳೆಯರ ಕಾಫೀ ಕೂಟ” ಎಂದು ಬದಲಾಯಿಸಿ, ಅಡಿಬರಹವಾಗಿ “ಸ್ವಲ್ಪ ಸ್ನೇಹ, ಸ್ವಲ್ಪ ಪ್ರೀತಿ, ಸ್ವಲ್ಪ
ಕಾಫೀ” ಎಂದು ಬರೆಯಿಸಿ ಅಬ್ಬರದ ಪ್ರಚಾರದೊಂದಿಗೆ ಪುನರಾರಂಭಿಸಿದ.
ಹೊಸದಾಗಿ
ಸಿಂಗಾರಗೊಂಡ ಹೋಟೆಲ್ಲಿಗೆ ಮತ್ತೆ ಜನರು ಮುತ್ತಲಾರಂಭಿಸಿದರು. ಬದಲಾವಣೆಗೆ ತಕ್ಕಂತೆ ವಿಧ ವಿಧವಾದ
ಕಾಫೀಯೂ ದೊರೆಯಲಾರಂಭಿಸಿತು. ಕಾಲೇಜು ಹುಡುಗ-ಹುಡಗಿಯರಿಗೆ, ಪಾರ್ಟಿ ಮಾಡುವವರಿಗೆ ಮಹಡಿ ಪ್ರಶಸ್ತವಾಗಿತ್ತು.
ಮೊದಲಿನಿಂದಲೂ ಮಂಜುನಾಥ ಹೋಟೆಲ್ಲಿನ ಕಾಫೀ ಕುಡಿದೇ ಜೀವನ ಸಾರ್ಥಕ ಪಡಿಸಿಕೊಳ್ಳುತ್ತೇವೆಂದು ಬರುತ್ತಿದ್ದ
ಅಜ್ಜಂದಿರ ನಾಲಿಗೆಗೆ ನವೀಕರಣಗೊಂಡ ಹೋಟೆಲ್ಲಿನ ಕಾಫೀಯೂ ರುಚಿಸತೊಡಗಿತು. ಮನೆಯಲ್ಲಿ ಕಾಫೀ ಕುಡಿದು
ಬೋರಾಗಿದ್ದ ಹಲವು ಮಹಿಳೆಯರೂ ಗೆಳತಿಯರ ಜೊತೆ ಹರಟಲು ಬರತೊಡಗಿದರು. ದಿನಕ್ರಮೇಣ ವಾಹನಗಳೂ ನಿಲ್ಲತೊಡಗಿದವು.
ಮಂಜುನಾಥ ಹಲವರನ್ನು ಕೆಲಸಕ್ಕೆ ಸೇರಿಸಿಕೊಂಡದ್ದರಿಂದ ಇದೀಗ ಅವನ ಕೆಲಸ ಹೋಟೆಲ್ಲಿನ ಕ್ಯಾಶ್ ನೋಡಿಕೊಂಡು,
ಮ್ಯಾನೇಜ್ ಮಾಡುವುದು ಮಾತ್ರವಾಯಿತು.
ಇದೆಲ್ಲಾ
ಲೋಕಾರೂಢಿಯಂತೆ ನಡೆಯುತ್ತಿರುವಾಗಲೇ ಗೆಳೆಯರ ಕಾಫೀ ಕೂಟದ ಮಹಡಿಯಲ್ಲಿ ಕಾಫೀ ಕುಡಿಯುತ್ತಲೇ ಒಂದು ಪ್ರೇಮ
ಕಥೆಯ ಚರ್ಚೆಯಾಯಿತು.
***
ಕನಕಜ್ಜಿಯ ಕೊನೆ
ಆಸೆ.
ಅಮರಗೊಂಡದ
ಹೊಸ ಬಡಾವಣೆಯ ಕನಕಜ್ಜಿಯ ಮನೆಯಲ್ಲಿ ಹಬ್ಬದ ವಾತಾವರಣ. ಅಂದು ಆ ಮನೆಯ ಒಡತಿ ಕನಕಜ್ಜಿಯ 80ನೇ ಹುಟ್ಟುಹಬ್ಬ.
ಸುಮಾರು ಹತ್ತು ವರ್ಷಗಳ ಹಿಂದೆ ತನ್ನ ಗಂಡ ರುದ್ರಪ್ರಸಾದರ ಮರಣದಿಂದ ತತ್ತರಿಸಿದ ಕನಕಜ್ಜಿ, ಸಾವು
ನಿರೀಕ್ಷಿತವಾದರೂ ಗೆಳೆಯನಂತಿದ್ದ ಗಂಡನ ಸಾವಿನ ಶಾಕ್‍ನಿಂದಾಗಿ ಹಾಸಿಗೆ ಹಿಡಿದು, ಜೀವನ ಪೂರ್ತಿ ವ್ಹೀಲ್‍ಛೇರ್
ಅವಲಂಬಿಸುವಂತಾಯಿತು. ಮಾತೂ ನಿಂತುಬಿಟ್ಟಿತು. ಏನನ್ನಾದರೂ ಹೇಳಬೇಕೆಂದರೆ ತನ್ನ ಜೊತೆಗೆ ಯಾವಾಗಲೂ
ಇಟ್ಟುಕೊಂಡಿರುತ್ತಿದ್ದ ನೋಟ್ ಪ್ಯಾಡ್‍ನಲ್ಲಿ ಪೆನ್ನಿನಿಂದ ಬರೆದು ತೋರಿಸುತ್ತಿತ್ತು. ಜೀವನವಿಡಿ
ಕಷ್ಟಪಟ್ಟು ದುಡಿದ ಗಂಡ ಕೂತು ಉಣ್ಣುವ ಕಾಲದಲ್ಲಿ ಇಲ್ಲವಾದದ್ದೂ ಅಜ್ಜಿಯ ಸ್ಥೈರ್ಯವನ್ನು ಅಲ್ಲಾಡಿಸಿತ್ತಾದರೂ,
ಮಕ್ಕಳ, ಮೊಮ್ಮಕ್ಕಳ ಮೇಲಿನ ಪ್ರೀತಿ ಜೀವನವನ್ನು ಮುಂದುವರೆಸಿತ್ತು.
ಅಜ್ಜಿಯ
ಇಬ್ಬರು ಗಂಡು ಮಕ್ಕಳು (ಹರೀಶ, ರಮೇಶ), ಮಗಳು (ಪುಟ್ಟಿ), ಇಬ್ಬರು ಸೊಸೆಯರು (ಗಿರಿಜಾ, ರೇಖಾ), ಅಳಿಯ
(ಪ್ರಸನ್ನ) ಮತ್ತು ಇಬ್ಬರು ಚಿಕ್ಕಮಕ್ಕಳು (ಒಂದು ಗಂಡು, ಮತ್ತೊಂದು ಹೆಣ್ಣು - ರಮೇಶನ ಮಕ್ಕಳು) ಸಡಗರದಿಂದ
ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅಜ್ಜಿಯ ಮುಂದೆ ಒಂದು ದೊಡ್ಡ ಅಲಂಕೃತ ಕೇಕ್ ಇಟ್ಟಿದ್ದಾರೆ. ಅದರ
ಮೇಲೆ 80 - ಹ್ಯಾಪಿ ಬರ್ತ್‍ಡೇ ಕನಕಜ್ಜಿ ಎಂದು ಬರೆದಿದೆ. ಕೇಕಿನ ಮೇಲೆ ಒಂದು ಸುಂದರ ಮೊಂಬತ್ತಿಯನ್ನು
ಇಡಲಾಗಿದೆ. ಅಜ್ಜಿ ಮತ್ತೆ ಮತ್ತೆ ಬಾಗಿಲ ಕಡೆ ನೋಡುತ್ತಿದೆ. ಸಾಕಷ್ಟು ಜನ ಅತಿಥಿಗಳೂ ಅಲ್ಲಿದ್ದಾರೆ.
ಅಜ್ಜಿಯ 80ನೇ ಬರ್ತ್‍ಡೇಗೆ ಎಲ್ಲವೂ ಸಿದ್ಧವಾಗಿದೆ. ಆದರೆ, ಅಜ್ಜಿ ಮತ್ತೆ ಮತ್ತೆ ಬಾಗಿಲಕಡೆ ದೃಷ್ಟಿ
ಹರಿಸುತ್ತಿದೆ. ಇದನ್ನು ಗಮನಿಸಿದ ದೊಡ್ಡ ಮಗ ಹರೀಶ “ಅಮ್ಮಾ, ಗಣೇಶ ಇನ್ನೇನು ಬರುತ್ತಾನೆ. ನೀ ಆರಾಮಾಗಿ
ಕುಳಿತುಕೋ” ಎನ್ನುತ್ತಾನೆ.
ತಲೆಯಾಡಿಸಿದ
ಅಜ್ಜಿ ಮತ್ತೆ ಬಾಗಿಲ ಕಡೆಯೇ ನೋಡುತ್ತದೆ. ಅಜ್ಜಿಗೆ ಮೊಮ್ಮಗ ಗಣೇಶ ಬರಲಿಲ್ಲ ಎಂಬ ಯೋಚನೆ.
ಅಲ್ಲಿಗೆ
ಹರೀಶನ ಹೆಂಡತಿ ಗಿರಿಜಾ ತಟ್ಟೆಯೊಂದನ್ನು ತಂದಿಡುತ್ತಾ ಗಂಡನಿಗೆ, “ರೀ... ಗಣೇಶ ಇಷ್ಟೊತ್ತಿಗೆ ಬರಬೇಕಿತ್ತಲ್ವ?” ಎಂದು ಕೇಳುತ್ತಾಳೆ.
“ಇನ್ನೇನು
ಬರ್ತಾನೆ ಸುಮ್ನಿರೆ. ಅಮ್ಮನಿಗೆ ಟೆನ್ಷನ್ ಮಾಡಬೇಡ” ಎಂದು ಅವನೂ ಬಾಗಿಲ ಕಡೆಯೇ ನೋಡುತ್ತಾನೆ.
ಗಿರಿಜಾ
ಗಂಡನೆಡೆಗೆ ತುಸು ಕೋಪದಿಂದ ತಲೆಯಾಡಿಸುತ್ತಾ ಒಳಗೆ ಹೋಗುತ್ತಾಳೆ.
ಕನಕಜ್ಜಿ
ತನ್ನ ಪಕ್ಕದಲ್ಲಿದ್ದ ನೋಟ್ ಪ್ಯಾಡ್ ಮತ್ತು ಪೆನ್ ತೆಗೆದುಕೊಂಡು “ಗಣೇಶ ಬರಲಿಲ್ಲ” ಎಂದು ಬರೆದು ಎಲ್ಲರಿಗೂ
ಕಾಣುವಂತೆ ತೋರಿಸುತ್ತದೆ. ತಕ್ಷಣ ಇದನ್ನು ಗಮನಿಸಿದ ಹರೀಶ ಮತ್ತವನ ತಮ್ಮ ರಮೇಶ ಅಜ್ಜಿಯ ಬಳಿ ಬರುತ್ತಾರೆ.
“ಅಮ್ಮಾ... ಗಣೇಶ ಇವತ್ತು ಹಾಸ್ಟೆಲ್ಲಿನಿಂದ ಪ್ಯಾಕಪ್ ಮಾಡಿಕೊಂಡು ಬರಬೇಕು. ಅದಕ್ಕೆ ಎಲ್ಲೋ ಸ್ವಲ್ಪ
ಲೇಟಾಗಿದೆ. ಇನ್ನೇನು ಬರುತ್ತಾನೆ” ಎಂದು ರಮೇಶ ಸಮಾಧಾನ ಮಾಡಲೆತ್ನಿಸುತ್ತಾನೆ.
ಅಜ್ಜಿ
ತುಸು ಅಸಮಾಧಾನದಿಂದ ಎಡಕ್ಕೆ ಹೊರಳುತ್ತದೆ. ಗಮನಿಸಿದ ಹರೀಶ ಎಡಕ್ಕೊಂದು ದಿಂಬನ್ನಿಟ್ಟು ಸರಿಯಾಗಿ
ಕೂಡಿಸುತ್ತಾನೆ. ಅಜ್ಜಿಯ ಮುಖದಲ್ಲಿ ಬೇಜಾರು ಮೂಡುತ್ತದೆ. ಅಜ್ಜಿ ಮತ್ತೆ ಬಲಕ್ಕೆ ಹೊರಳುತ್ತದೆ. ಬಲಕ್ಕೊಂದು
ದಿಂಬನ್ನಿಡುತ್ತಾರೆ. ಅಜ್ಜಿ ಮತ್ತೆ ಬೇಜಾರು ಮಾಡಿಕೊಂಡು ಮುಂದಕ್ಕೆ ವಾಲುತ್ತದೆ. ಮುಂದಕ್ಕೂ ಒಂದು
ದಿಂಬಿಡುತ್ತಾ ಹರೀಶ, “ರಮೇಶ, ಅಮ್ಮನಿಗೆ ಬಹಳ ಹೊತ್ತು ಕೂತ್ಕೊಳೋಕೆ ಆಗ್ತಾ ಇಲ್ಲಾ ಅನ್ಸುತ್ತೆ. ಗಣೇಶನಿಗೆ
ಫೋನ್ ಮಾಡೋ” ಎಂದು ತಮ್ಮನಿಗೆ ಹೇಳುತ್ತಾನೆ.
ರಮೇಶ
ತನ್ನ ಮೊಬೈಲನ್ನು ಜೇಬಿನಿಂದ ತೆಗೆಯುತ್ತಾ, “ಆಯ್ತಣ್ಣ” ಎಂದು ಗಣೇಶನಿಗೆ ಕಾಲ್ ಮಾಡುವಷ್ಟರಲ್ಲಿ ಗಣೇಶ
ಅಲ್ಲಿಗೆ ಬರುತ್ತಾನೆ. ಎಲ್ಲರಿಗೂ ಸಂತೋಷವಾಗುತ್ತದೆ.
ಗಣೇಶ
ಬಂದವನೇ ಅಜ್ಜಿಯ ಕಾಲಿಗೆ ನಮಸ್ಕರಿಸುತ್ತಾ “ಅಜ್ಜಿ ಹೇಗಿದ್ದೀಯ?” ಎಂದು ತನ್ನ ಪ್ರೀತಿಯ ಅಜ್ಜಿಯ ಯೋಗಕ್ಷೇಮವನ್ನು
ವಿಚಾರಿಸುತ್ತಾನೆ.
ಅಜ್ಜಿ
ಸ್ವಲ್ಪ ಮುಖ ಗಂಟುಮಾಡಿಕೊಂಡು ನೋಟ್ ಪ್ಯಾಡ್ ತೆಗೆದುಕೊಂಡು ‘ಓಕೆ, ಆದ್ರೆ ಸ್ವಲ್ಪ ವಾಯು’ ಎಂದು ಬರೆದು
ಗಣೇಶನಿಗೆ ಮಾತ್ರ ತೋರಿಸುತ್ತದೆ. ತಕ್ಷಣ ಗಣೇಶ ಅಜ್ಜಿಯ ಸುತ್ತಾ ಇದ್ದ ದಿಂಬನ್ನೆಲ್ಲಾ ತೆಗೆದು “ಅಜ್ಜಿ,
ಈಗ ಆರಾಮಾಗಿ ಕುತ್ಕೋ” ಎನ್ನುತ್ತಾನೆ.
ಆಗ
ಅಜ್ಜಿ ಸ್ವಲ್ಪ ಎಡಕ್ಕೆ ಒರಗಿ ಒಂದು ಕ್ಷಣ ಮುಖ ಗಂಟಿಕ್ಕಿ ವಾಯು ಬಿಡುತ್ತದೆ, ಮತ್ತೆ ಆರಾಮಾಗಿ ಕುಳಿತು
ಆನಂದದಿಂದ ನಗುತ್ತದೆ. ಇದನ್ನು ಗಮನಿಸಿದ ಎಲ್ಲರ ಮುಖಗಳಲ್ಲೂ ಅಜ್ಜಿಯ ಕಷ್ಟವನ್ನು ಮೊಮ್ಮಗನು ಅರಿತದ್ದು ವ್ಯಕ್ತವಾಗುತ್ತದೆ.
ಗಣೇಶ
ನಗುತ್ತಾ ಅಪ್ಪ ಅಮ್ಮನ ಕಾಲಿಗೆ ಬೀಳುತ್ತಾನೆ. ರಮೇಶನ ಕಾಲಿಗೆ ಬೀಳಲು ಹೋದಾಗ ರಮೇಶ ಅವನನ್ನು ತಡೆದು
ಅಪ್ಪುತ್ತಾನೆ. ಚಿಕ್ಕಮ್ಮನ ಕಾಲಿಗೆ ಬೀಳಲು ಹೋದಾಗ ಆಕೆಯೂ ತಡೆಯುತ್ತಾಳೆ, ಅದಾಗ ಅವಳಿಗೆ ನಮಸ್ಕರಿಸುತ್ತಾನೆ.
ಅಲ್ಲಿದ್ದ ಸೋದರತ್ತೆ ಮತ್ತು ಮಾವನಿಗೂ ನಮಸ್ಕರಿಸುತ್ತಾನೆ. ಮಕ್ಕಳು ಬಂದು ಅವನಿಗೆ ಮುತ್ತಿಕ್ಕುತ್ತಾರೆ.
ಗಣೇಶ
ಬಂದನೆಂಬ ಸಂತೋಷದಲ್ಲಿ ಹರೀಶ ಕೇಕಿನ ಮೇಲಿದ್ದ ಮೊಂಬತ್ತಿಯನ್ನು ಹಚ್ಚಿ “ಅಮ್ಮಾ ಇನ್ನೇನು ಗಣೇಶ ಬಂದ್ನಲ್ಲಮ
ಕೇಕ್ ಕಟ್ ಮಾಡಮ್ಮ” ಎಂದು ಅಮ್ಮನನ್ನು ವಿನಂತಿಸುತ್ತಾನೆ.
ಅಜ್ಜಿ
ನಗುತ್ತಾ ಮೊಂಬತ್ತಿ ಆರಿಸಿ ಕೇಕ್ ಕಟ್ ಮಾಡುತ್ತದೆ.
ಹ್ಯಾಪಿ
ಬರ್ತ್‍ಡೆ ಟು ಯೂ . . .
ಹ್ಯಾಪಿ
ಬರ್ತ್‍ಡೆ ಟು ಯೂ . . .
ಹ್ಯಾಪಿ
ಬರ್ತ್‍ಡೆ ಟು ಯೂ . . . ಡಿಯರ್ ಕನಕಜ್ಜಿ
ಹ್ಯಾಪಿ
ಬರ್ತ್‍ಡೆ ಟು ಯೂ . . .
ಎಂದು
ಎಲ್ಲರೂ ಹಾಡುತ್ತಾರೆ.
ಅಜ್ಜಿ
ಕೇಕ್ ತುಂಡೊಂದನ್ನು ತೆಗೆದು ಮೊದಲು ಗಣೇಶನಿಗೆ ತಿನ್ನಿಸುತ್ತದೆ. ಗಣೇಶನು ಅಜ್ಜಿಗೆ ಕೇಕ್ ತಿನ್ನಿಸುತ್ತಾನೆ.
ಅಜ್ಜಿ ತನ್ನ ಮಕ್ಕಳಿಗೆ, ಸೊಸೆಯರಿಗೆ, ಮತ್ತಿಬ್ಬರು ಮೊಮ್ಮಕ್ಕಳಿಗೂ ಕೇಕ್ ತಿನ್ನಿಸುತ್ತದೆ.
ಎಲ್ಲರೂ
ಸಂತೋಷದಿಂದಿರುವಾಗ ಎಲ್ಲರಿಗೂ ಕೇಕ್ ಸ್ನ್ಯಾಕ್ಸ್ ನೀಡಲಾಗುತ್ತದೆ. ಈ ಸಮಯವನ್ನೇ ಕಾಯುತ್ತಿತ್ತೋ ಏನೋ
ಎನ್ನುವಂತೆ ಕನಕಜ್ಜಿಯು ನೋಟ್ ಪ್ಯಾಡ್ ತೆಗೆದುಕೊಂಡು ‘ಗಣೇಶನ ಮದುವೆ ನೋಡಬೇಕು' ಎಂದು ಬರೆದು ಎಲ್ಲರಿಗೂ
ಕಾಣುವಂತೆ ತೋರಿಸುತ್ತದೆ. ಇದನ್ನು ನೋಡಿ ಎಲ್ಲರೂ ಖುಷಿಯಾದಾಗ ಗಣೇಶ ಮುಖ ಸಪ್ಪೆ ಮಾಡಿಕೊಳ್ಳುತ್ತಾನೆ.
ಅಜ್ಜಿಯ ಬಳಿ ಬಂದು ಬೇಜಾರಿನಿಂದ “ನಂಗ್ ಮದ್ವೆ ಬೇಡ ಕಣಜ್ಜಿ” ಎಂದು ಸಂಕೋಚದಿಂದಲೇ ಹೇಳುತ್ತಾನೆ.
ಇಲ್ಲ
ಆಗಲೇಬೇಕು ಎನ್ನುವಂತೆ ಅಜ್ಜಿ ಮೇಲೆ ಕೆಳಗೆ ತಲೆ ಆಡಿಸುತ್ತದೆ.
“ಅಮ್ಮಾ,
ಗಣೇಶನಿಗೆ ನನ್ನ ಫ್ರೆಂಡ್ ಅದೇ ನಮ್ ಬಿಸಿನೆಸ್ ಪಾರ್ಟ್‍ನರ್ ರಂಗನಾಥ ಇದ್ದಾನಲ್ಲ ಅವನ ಮಗಳು ಅಖಿಲಾಳನ್ನು
ಮದ್ವೆ ಮಾಡ್ಕೊಳನ ಅಂತಾ... ರಂಗನಾಥನು ಒಪ್ಪಿದ್ದಾನೆ. ಅವನೇ ಇವತ್ತು ಬರ್ಬೇಕಿತ್ತು, ಏನೋ ಕೆಲಸ ಅಂತಾ
ಬರಲಿಲ್ಲ” ಎಂದು ಒಬ್ಬ ತಂದೆಯಾಗಿ ತನ್ನ ಕರ್ತವ್ಯವನ್ನು ನಿಭಾಯಿಸಲು ತಾನಾಗಲೇ ರೆಡಿಯಿರುವುದನ್ನು
ತಿಳಿಸುತ್ತಾನೆ.
ಅಜ್ಜಿ
ಕಣ್ಣಗಲಿಸಿ ಹೌದಾ! ಎಂಬಂತೆ ತಲೆಯಾಡಿಸುತ್ತದೆ. ಇದನ್ನು ನೋಡಿದ ಗಣೇಶ ಗಾಬರಿ ಬೀಳುತ್ತಾನೆ.
“ಅಪ್ಪಾ,
ಅಜ್ಜಿ, ನಾ ಆ ಹುಡುಗೀನೇ ನೋಡಿಲ್ಲ. ಅಷ್ಟಕ್ಕೂ ನನಗೆ ಮದ್ವೆ ಬೇಡ. ಆ ಗಾಡ್ ಗಣಪತಿ ಥರ ಆರಾಮಾಗಿ ಇದ್‍ಬಿಡ್ತೀನಿ”
ಎಂದು ತುಸು ಉಢಾಪೆಯಿಂದಲೇ ಹೇಳುತ್ತಾನೆ.
“ಡೋಂಟ್‍ವರಿ
ಗಣೇಶ, ಹುಡುಗೀನ ನಾಳೆ ನಿನ್ನ ಫ್ರೆಂಡ್ ಪ್ರಜ್ವಲ್ ಮದ್ವೆಲಿ ತೋರಿಸ್ತೀನಿ. ಅಖಿಲಾ ಮದ್ವೆ ಹೆಣ್ಣು
ಯಶೋಧಳ ಫ್ರೆಂಡಂತೆ. ಹೇಗಿದ್ರು ಮದ್ವೆಗೆ ಬಂದೇ ಬರ್ತಾಳೆ. ಅದು ಬಿಟ್ಟು ಮದ್ವೇನೆ ಬೇಡ ಅಂದ್ರೆ ಹೇಗೋ...”
ಎಂದು ಹರೀಶ ಮದುವೆಯ ಹುಡುಗಿಯ ಬಗ್ಗೆ ಹೇಳಿ ಮಗನನ್ನು ಓಲೈಸಲು ಪ್ರಯತ್ನಿಸುತ್ತಾನೆ.
ಗಣೇಶ
ಇಕ್ಕಟ್ಟಿಗೆ ಸಿಲುಕಿ ಗೊಂದಲಕ್ಕೆ ಬೀಳುತ್ತಾನೆ.
“ಗಣೇಶ,
ಒಳ್ಳೆ ಛಾನ್ಸ್ ಕಣೋ. ಸುಮ್ನೆ ಒಪ್ಕೊಂಡು ಬಿಡು” ಎಂದು ಚಿಕ್ಕಪ್ಪ ರಮೇಶನೂ ಅನ್ನುತ್ತಾನೆ.
“ಒಪ್ಕೊ
ಗಣೇಶ್” ಚಿಕ್ಕಮ್ಮ ರೇಖಾಳೂ ಒತ್ತಾಯಿಸುತ್ತಾಳೆ.
ಗಣೇಶ
ಅವನ ಅಮ್ಮನ ಕಡೆ ತಿರುಗುತ್ತಾನೆ.
“ಹೂಂ
ಗಣಿ. ಅಖಿಲಾ ತುಂಬಾ ಒಳ್ಳೆ ಹುಡ್ಗಿ ಅಂತಾ ನಾನೂ ಕೇಳಿದಿನಿ.” ಎಂದು ಅಮ್ಮಾ ಗಿರಿಜಾಳೂ ಸಹಮತ ವ್ಯಕ್ತಪಡಿಸುತ್ತಾಳೆ.
“ಅದು
ಹಾಗಲಮ್ಮಾ...” ಎಂದು ಗಣೇಶ ರಾಗ ಎಳೆಯತೊಡಗಿದಾಗ, ಅಜ್ಜಿ ನೋಟ್ ಪ್ಯಾಡ್ ತೆಗೆದುಕೊಂಡು ‘ಕೊನೆ ಆಸೆ’
ಎಂದು ಬರೆದು ತೋರಿಸುತ್ತದೆ. ಇದನ್ನು ನೋಡಿದ ಗಣೇಶ “ಆಯ್ತು” ಎಂದು ಹೇಳುತ್ತಾನೆ. ಎಲ್ಲರೂ ಸಂತೋಷದಿಂದ
ನಕ್ಕಾಗ ಗಣೇಶ ಹುಸಿ ನಕ್ಕು ಸುಮ್ಮನಾಗುತ್ತಾನೆ.
*
ರಾತ್ರಿ
ಡೈನಿಂಗ್ ಟೇಬಲ್ಲಿನ ಸುತ್ತಾ ಅಜ್ಜಿ, ಗಣೇಶ, ಹರೀಶ, ರಮೇಶ, ಪ್ರಸನ್ನ, ಇಬ್ಬರು ಮಕ್ಕಳು ಊಟ ಮಾಡುತ್ತಾ
ಕುಳಿತಿದ್ದಾರೆ. ಹರೀಶನ ಹೆಂಡತಿ ಗಿರಿಜಾ, ರಮೇಶನ ಹೆಂಡತಿ ರೇಖಾ, ಪುಟ್ಟಿ ಮತ್ತು ಅಡುಗೆ ಭಟ್ಟ ಊಟ
ಬಡಿಸುತ್ತಿದ್ದಾರೆ.
“ಹೆಂಗೋ,
ಗಣೇಶ ಮದ್ವೆಗೆ ಒಪ್ಪುದ್ನಲ್ಲ” ಎಂದು ರೇಖಾ ಗಣೇಶನನ್ನು ರೇಗಿಸಲು ನೋಡುತ್ತಾಳೆ.
ಗಣೇಶ
ಚಿಕ್ಕಮ್ಮನ ಕಡೆ ನೋಡುತ್ತಾ “ಹೆಂಗೋ ಅಲ್ಲಾ ಆಂಟಿ. ಅಜ್ಜಿ ಕಡೇ ಆಸೆ ಅಂತಾ. ಅಷ್ಟಕ್ಕೂ ನಾ ಹುಡ್ಗೀನ
ನೋಡಿದ ಮೇಲೇನೆ ಮುಂದಿನ ಮಾತು. ನಮ್ಮಪ್ಪ, ಬಿಸಿನೆಸ್ ಪಾರ್ಟನರ್ ಮಗಳು ಅಂತ ಕಾಸುಗೀಸು ನೋಡ್ಬಿಟಿದ್ರೆ
ಕಷ್ಟ” ಎಂದು ಅಪ್ಪನ ಕಡೆ ತಿರುಗಿ ಹೇಳುತ್ತಾನೆ.
ಹರೀಶನಿಗೆ
ನೆತ್ತಿಗೆ ಹತ್ತುತ್ತದೆ. ಎಲ್ಲರೂ ಗಾಬರಿಯಾಗುತ್ತಾರೆ. ಗಿರಿಜಾ ಹರೀಶನಿಗೆ ನೀರು ಕುಡಿಸುತ್ತಾ, “ಸುಮ್ನಿರೋ
ಗಣಿ. ನಮಗೇ ಸಾಕಷ್ಟು ದೇವ್ರು ಕೊಟ್ಟಿರ್ಬೇಕಾದ್ರೆ ರಂಗನಾಥೋರ ದುಡ್ಡು ಯಾಕೆ ಬೇಕು” ಎಂದು ಗಣೇಶನಿಗೆ
ಗದರುತ್ತಾಳೆ.
ಸುಧಾರಿಸಿಕೊಂಡ
ಹರೀಶ, “ಹುಡ್ಗಿನಾ ನೋಡು. ಆಮೇಲೆ ನೀನೆ ನನ್ಹತ್ರ ಬಂದು, ‘ಅಪ್ಪಾ ಅಪ್ಪಾ ಮದ್ವೆ ಯಾವಾಗ್ ಮಾಡ್ತ್ಯ,
ಅಂತ ಕೇಳ್ತ್ಯಾ ನೋಡು” ಎಂದು ನಗುತ್ತಲೇ ಹೇಳುತ್ತಾನೆ.
ಗಣೇಶ
ಕುಹಕದಿಂದ ಮೇಲೆ ನೋಡುತ್ತಾ, “ಗಾಡ್ ಗಣಪತಿ, ಅಂತಾ ಕಾಲ ಬರದೇ ಇರ್ಲಪ್ಪ” ಎಂದು ನಗುತ್ತಾನೆ.
“ಗಣೇಶಪ್ಪ,
ದೊಡ್ಡಮ್ನೊರು, ಎಲ್ರೂ ಆಸೆ ಪಟ್ಟೋರೆ. ಸುಮ್ನೆ ಬೇಗ ಮದ್ವೆ ಆಗ್ಬುಡಿ” ಎಂದು ಅಡುಗೆ ಭಟ್ಟನೂ ತನ್ನ
ಅನಿಸಿಕೆಯನ್ನು ಹೇಳುತ್ತಾನೆ.
“ರೀ
ಭಟ್ರೆ, ಮದ್ವೆ ಅಂದ್ರೆ ಸಾಂಬರ್‍ಗೆ ಒಗ್ಗರಣೆ ಹಾಕ್ದಗೆಂನ್ರೀ. ಸುಮ್ನಿರೀ ಇವರೊಬ್ರು ಬಾಕಿ ಇದ್ರು”
ಎಂದು ಗಣೇಶ ಅವರ ಮೇಲೂ ರೇಗುತ್ತಾನೆ.
ಎಲ್ಲರೂ
ಮುಸುಮುಸು ನಗುತ್ತಾರೆ. ಭಟ್ಟ ಮುಖ ಸಿಂಡರಿಸಿಕೊಳ್ಳುತ್ತಾನೆ.
ನಾವೇನು
ಕಮ್ಮಿ ಎಂದು ಚಿಕ್ಕಮಕ್ಕಳಿಬ್ಬರೂ, “ಗಣೇಶಣ್ಣಾ...” ಎಂದು ರಾಗ ಎಳೆಯಲು ಶುರುಮಾಡುತ್ತಾರೆ.
“ನೀವಿಬ್ರು
ಚಿಕ್ಕಮಕ್ಕಳು ಸುಮ್ನಿರ್ಬೇಕು. ಎಲ್ಲಿ “Pussy cat,
Pussy cat ರೈಮ್ಸ್ ಹೇಳಿ” ಎಂದು ಗಣೇಶ ಮಾತು ಬದಲಾಯಿಸಲು
ನೋಡುತ್ತಾನೆ.
ಚಿಕ್ಕಮಕ್ಕಳಿಬ್ಬರೂ
ನಗುತ್ತಾ, “Pussy cat, Pussy cat, where have you
been, I have been to London to see the queen… ಗಣೇಶಣ್ಣಾ... ಗಣೇಶಣ್ಣಾ... ಹುಡ್ಗೀನ್ ಯಾವಾಗ್ ನೋಡ್ತ್ಯಾ...?”
ಎಂದು ಜೋರಾಗಿ ನಗುತ್ತಲೇ ಹೇಳುತ್ತಾರೆ.
ಗಣೇಶ
ಹುಸಿಕೋಪದಿಂದ ಮಕ್ಕಳೆಡೆಗೆ ಕೈ ಎತ್ತುತ್ತಾ, “ಹೋಯ್... ಹೋಯ್... ನಿಮಗೆ...ನಿಮಗೆ...” ಎನ್ನಲು ಎಲ್ಲರೂ
ನಗುತ್ತಾರೆ. ಎಲ್ಲರೂ ನಗುವಾಗ ಪುಟ್ಟಿ ಅಳುತ್ತ ಕಣ್ಣೋರಿಸಿಕೊಳ್ಳುತ್ತಾಳೆ. ಅದನ್ನು ಹರೀಶ, ಗಿರಿಜಾ,
ಪ್ರಸನ್ನ ಮೊದಲು ಗಮನಿಸುತ್ತಾರೆ. ಎಲ್ಲರೂ ಆತಂಕದಿಂದ ನೋಡುವಷ್ಟರಲ್ಲಿ ಗಿರಿಜಾ ಅವಳ ತಲೆಯನ್ನು ನೇವೆರಿಸಿ
ಸಮಾಧಾನಿಸುತ್ತಾಳೆ.
*
ಊಟಮಾಡಿ
ಕನಕಜ್ಜಿ ತನ್ನ ರೂಮಿನಲ್ಲಿದ್ದಾಗ ಅಲ್ಲಿಗೆ ಬಂದ ಗಣೇಶ ಅಜ್ಜಿಯ ಕಾಲ ಬಳಿ ಕುಳಿತು, “ಅಜ್ಜಿ ನಿಂದೆನೋ
ಕೊನೆ ಆಸೆ ಅಂತ ಹೇಳ್ಬಿಟ್ಟೆ, ಆದ್ರೆ ಮದ್ವೆ ಆಗ್ಬೇಕಿರೋನು ನಾನಲ್ವ? ನಂಗ್ ಸರಿಯಾದ್ ಹುಡ್ಗಿ ಸಿಗೋದ್
ಬೇಡ್ವ? ನೀನಿನ್ನ ನೂರ್ ವರ್ಷ ಬದುಕಿರ್ತಿಯ ಕಣಜ್ಜಿ. ಸ್ವಲ್ಪ ನೋಡಿ ಹುಡ್ಗಿ ಇಷ್ಟ ಆದ್ಮೇಲೆ ಮದ್ವೆ
ಆಗ್ತೀನಿ, ತುಂಬಾ ಅರ್ಜೆಂಟ್ ಮಾಡ್ಬೇಡ. ಓಕೆನಾ?” ಎಂದು ಅಜ್ಜಿಯನ್ನು ಪುಸಲಾಯಿಸಲು ನೋಡುತ್ತಾನೆ.
ಕನಕಜ್ಜಿ
ನಗುತ್ತಾ ನೋಟ್ ಪ್ಯಾಡ್ ತೆಗೆದುಕೊಂಡು “ಓಕೆ” ಎಂದು ಬರೆದು ತೋರಿಸುತ್ತದೆ. ಗಣೇಶ ಅಜ್ಜಿಯ ಕೆನ್ನೆಗಳನ್ನು
ತನ್ನ ಅಂಗೈಗಳಿಂದ ಹಿಡಿದು ನಗುತ್ತಾ, “ಥ್ಯಾಂಕ್ಸ್ ಕಣಜ್ಜಿ. ಮೈ ಸ್ವೀಟ್ ಅಜ್ಜಿ. ಬಾರಜ್ಜಿ ಹೊತ್ತಾಯ್ತು
ಮಲಕ್ಕೋ...” ಎಂದು ಹೇಳಿದಾಗ ತಲೆಯಾಡಿಸಿದ ಅಜ್ಜಿಯನ್ನು ಅನಾಮತ್ತು ಎತ್ತಿಕೊಂಡು ಮಂಚದ ಮೇಲೆ ಮಲಗಿಸಿ,
ಹೊದ್ದಿಸಿ “ಗುಡ್ ನೈಟ್ ಅಜ್ಜಿ” ಎಂದು ಹೇಳಿ ಅಲ್ಲಿಂದ ತೆರಳುತ್ತಾನೆ.
***
ಮದುವೆಯ ಈ ಬಂಧ...
ಮರುದಿನ
ಬೆಳಿಗ್ಗೆ ಹರೀಶ, ಗಣೇಶ ಕಾರಿನಲ್ಲಿ ಯಶೋಧಳ ಮದುವೆಗೆ ಹೊರಡುತ್ತಾರೆ. ಮಾರ್ಗ ಮಧ್ಯದಲ್ಲಿ ಗಣೇಶ,
“ಅಪ್ಪಾ, ಯಾಕೋ ಈ ಹುಡ್ಗಿರಂದ್ರೆ ಭಯವಾಗುತ್ತೆ. ನಂಗೆ ಮದ್ವೆ-ಗಿದ್ವೆ ಏನೂ ಬೇಡ ಬಿಟ್ಬಿಡಪ್ಪ” ಎಂದು
ತಂದೆಯನ್ನು ಈ ಮದುವೆ ತಪ್ಪಿಸಿಕೊಂಡರೆ ಸಾಕು ಎಂಬಂತೆ ಮಗುವಿನಂತೆ ಗೋಗೆರೆಯುತ್ತಾನೆ.
“ಏನೋ
ಗಣಿ, ಹಿಂಗಂತ್ಯ. ಮೊದ್ಲೆಲ್ಲಾ ಯಾವಳೋ ರಾಜಕುಮಾರಿ, ನಂಗೋಸ್ಕರ ಏಳು ಬೆಟ್ಟ, ಏಳು ಸಾಗರ ದಾಟಿ ಬರ್ತಾಳೆ
ಅಂತಿದ್ದೆ” ಎಂದು ಹರೀಶ ನಗುತ್ತಾನೆ.
“ಈ
ಹುಡುಗೀರ ವಿಷಯದಲ್ಲಿ ನಾನೊಬ್ಬ ಮೂಢಾತ್ಮ ಕಣಪ್ಪ. ಹುಡುಗೀರ್ ನಕ್ರೆ ಸಾಕು ಸಕ್ರೆ ಸಿಕ್ದಂಗೆ ಅಂತಾ
ಅನ್ಕೊಂಬಿಟ್ಟಿದ್ದೆ. ಅವರ ನಗುನೂ ಬೇಡ, ಸಹವಾಸನೂ ಬೇಡ, ಹಿಂಗೆ ಒಬ್ನೆ ಗಾಡ್ ಗಣಪತಿ ಥರಾ ಆರಾಮಾಗಿ
ಬ್ಯಾಚುಲರ್ ಆಗೇ ಇರ್ತೀನಿ ಇದೇ ಸೊಗಸಾದ ಜೀವನ ಅನ್ನಿಸಿಬಿಟ್ಟಿದೆ” ಎಂದು ಗಣೇಶ ಮದುವೆಯ ಬಗ್ಗೆ ತನ್ನ
ನಿರಾಸಕ್ತಿಯನ್ನು ತೋರಿಸಲೆತ್ನಿಸುತ್ತಾನೆ.
“ಹಂಗಲ್ಲಾ
ಕಣೋ ಗಣಿ, ನೀ ಬೇರೆ ಹುಡುಗೀರನ್ನ ನೋಡಿರ್ಬೋದು, ಅವ್ರು ನಿನ್ನುನ್ನ ನೋಡಿಲ್ದೆನೂ ಇರ್ಬೋದು. ಒಂದು
ಸಾರಿ ನೀ ಅಖಿಲಾನ ನೋಡು, ಮಾತಾಡು, ಆಮೇಲೆ ತಾನೆ ಮುಂದಿನ ಮಾತು” ಎಂದು ಹರೀಶ ಅನುಭವದ ಮಾತನ್ನು ಹೇಳುತ್ತಾನೆ.
ಗಣೇಶ
ತಲೆಯಾಡಿಸುತ್ತಾನೆ. ಅಷ್ಟರಲ್ಲಿ ಕಾರು ಮದುವೆ ಛತ್ರದ ಬಳಿ ಬರುತ್ತದೆ. ಕಾರ್ ನಿಲ್ಲಿಸಿದ ಗಣೇಶ ಡೋರ್
ತೆಗೆಯುವ ಮುನ್ನ ಕಾರಿನ ಪಕ್ಕದಲ್ಲಿ ತಿಳಿ ನೀಲಿ ಚೂಡಿಯ ಹುಡುಗಿಯೊಬ್ಬಳು ಹೋಗುತ್ತಾಳೆ. ಗಣೇಶ ಡೋರ್
ತೆಗೆದು ನೋಡಲು ಪ್ರಯತ್ನಿಸಿದರೂ ಮುಖ ಕಾಣುವುದಿಲ್ಲ. ಮುಂದೆ ಹೋದ ಅವಳು ಸೂಸಿದ ಕಂಪಿನಲ್ಲಿ ನಿಂತಲ್ಲೇ
ಗಣೇಶ ಮೈಮರೆಯುತ್ತಾನೆ. ಹುಡುಗಿ ಮದುವೆ ಛತ್ರದ ಒಳಗೆ ಹೋಗುತ್ತಾಳೆ.
ಹರೀಶ,
ಗಣೇಶ ಛತ್ರದ ಒಳಗಡೆ ಬರುತ್ತಾರೆ. ಇಬ್ಬರೂ ಯಾರನ್ನೋ ಹುಡುಕುತ್ತಿರುತ್ತಾರೆ. ಆರತಕ್ಷತೆಯಲ್ಲಿ ನೂತನ
ವಧು-ವರರು, ಜೊತೆಗೆ “ಸೆವೆನ್ ಬ್ರದರ್ಸ್” ಎಂದು ಬ್ಯಾನರ್ ಕಟ್ಟಿಕೊಂಡ ಆರ್ಕೇಸ್ಟ್ರಾದ ಗಾಯನ ನಡೆಯುತ್ತಿರುತ್ತದೆ.
ಕೆಲವರು ಅದಾಗಲೇ ನೂತನ ವಧು-ವರರಿಗೆ ಶುಭ ಹಾರೈಸಿ ಫೋಟೋ ತೆಗೆಸಿಕೊಳ್ಳುತ್ತಿರುತ್ತಾರೆ.
ಧಡೂತಿಯಾಗಿದ್ದ
ಆರ್ಕೇಸ್ಟ್ರಾದ ಗಾಯಕ ತನ್ನ ದೇಹಕ್ಕೂ ಧ್ವನಿಗೂ ಯಾವುದೇ ಸಂಬಂಧವಿಲ್ಲ ಎನ್ನುವಂತಿದ್ದ ತನ್ನ ಮಧುರ
ಕಂಠದಲ್ಲಿ “ಶುಭಾಷಯ... ನವ ವಧು ವರರಿಗೆ ಶುಭಾಷಯ, ಮದುವೆಯ ಈ ಬಂಧ...” ಎಂಬ ಹಾಡನ್ನು ತನ್ಮಯನಾಗಿ
ಹಾಡುತ್ತಿದ್ದಾನೆ. ದೂರದಲ್ಲಿದ್ದ ರಂಗನಾಥ್ ಮತ್ತು ಅಖಿಲಾಳನ್ನು ನೋಡಿದ ಹರೀಶ್ ಅವರ ಬಳಿ ಧಾವಿಸುತ್ತಾ
ಬಂದು, “ಹಲೋ ರಂಗನಾಥ್!” ಎಂದು, ಅತ್ತಿತ್ತ ನೋಡುತ್ತಾ ಹಿಂದೆಯೇ ಬಂದ ಗಣೇಶನನ್ನು ತೋರಿಸಿ “ನನ್ನ
ಮಗ ಗಣೇಶ” ಎಂದು ಹೇಳುತ್ತಾನೆ.
ಗಣೇಶನ
ಕಣ್ಣು ಸುತ್ತಲೂ ಸರಿದಾಡಿ ರಂಗನಾಥನಿಗೆ ಕೈ ಮುಗಿದು, “ನಮಸ್ಕಾರ ಅಂಕಲ್” ಎನ್ನುತ್ತಾನೆ.
“ಹ್ಹ...ಹ್ಹ...
ಗಣೇಶ್! ಯಾರನ್ನೋ ಹುಡುಕೋ ಹಾಗಿದೆ” ಎಂದು ರಂಗನಾಥ್ ಭಾವಿ ಅಳಿಯ ಸಿಕ್ಕಿದ ಸಂತೋಷಕ್ಕೆ ಬೀಗುತ್ತಾನೆ.
“ಹಾಗೇನಿಲ್ಲ
ಅಂಕಲ್, ಅದೂ...” ಎಂದು ತೊದಲುತ್ತಾ ಗಣೇಶ್ ಏನನ್ನೋ ಹೇಳಲು ಯತ್ನಿಸಿದಾಗ ರಂಗನಾಥ್ ತನ್ನ ಮಗಳು ಅಖಿಲಾಳನ್ನು
ತೋರಿಸುತ್ತ “ಮೀಟ್ ಮೈ ಸ್ವೀಟ್ ಡಾಟರ್, ಅಖಿಲಾ” ಎಂದು ಮಗಳನ್ನು ಗಣೇಶನಿಗೆ ಪರಿಚಯಿಸುತ್ತಾನೆ.
ಗಣೇಶ
ಅವಳೆಡೆಗೆ ನಗುವಿನಿಂದ, “Hai!”
ಎನ್ನುತ್ತಾನೆ.
ಇವನೆಡೆಗೆ
ನಾಚಿಕೆಯಿಂದ ನಗುತ್ತಾ ಅಖಿಲಾ, “Hello!”
ಎಂದು ಹೇಳುವಷ್ಟರಲ್ಲಿ ಗಣೇಶನ ಕಣ್ಣುಗಳಿಗೆ ಕಾರಿನಲ್ಲಿದ್ದಾಗ
ಕಂಡ ತಿಳಿ ನೀಲಿ ಚೂಡಿಯ ಹುಡುಗಿ ದೂರದಲ್ಲಿ ಹೋಗುತ್ತಿರುವುದನ್ನು ಗಮನಿಸಿ “ಎಕ್ಸ್ ಕ್ಯೂಸ್ಮಿ...”
ಎಂದು ಆ ಕಡೆಗೆ ಧಾವಿಸುತ್ತಾನೆ.
“ಮದುವೆಯ
ಈ ಬಂಧ... ಅನುರಾಗದ ಅನುಬಂಧ...” ಹಾಡು ಮದುವೆ ಮನೆಯಲ್ಲಿ ತೇಲುತ್ತಿರುತ್ತದೆ.
ಗಣೇಶ
ಆ ಹುಡುಗಿಯ ಕಡೆಗೆ ಸ್ವಲ್ಪ ಜೋರಾಗಿ ನಡೆಯಲು ಶುರುಮಾಡುತ್ತಾನೆ. ಮದುವೆಯ ಜನರ ನಡುವೆ ಆ ಹುಡುಗಿ ಮಾಯವಾಗುತ್ತಾಳೆ.
ಇವನನ್ನೇ ಹಿಂಬಾಲಿಸಿ ಹರೀಶ ಬರುತ್ತಾನೆ. ಬಂದವನೇ, “ಯಾಕೋ ಗಣಿ? ಏನಾಯ್ತು? ನೀ ಮಾತಾಡುಸ್ದಲ್ಲ ಆ
ಹುಡುಗೀನೇ ಅಖಿಲಾ. ರಂಗನಾಥನ ಮಗಳು. ಏಳು ಬೆಟ್ಟ, ಏಳು ಸಾಗರ ದಾಟಿ ಯಾರೋ ರಾಜಕುಮಾರಿ ಬರ್ತಾಳೆ ಅನ್ನೋದನ್ನ
ಬಿಟ್ಟು ಅಖಿಲಾಳ ಜೊತೆ ಮಾತಾಡು. ತುಂಬಾ ಒಳ್ಳೆ ಹುಡ್ಗಿ” ಎಂದು ಗಣೇಶನ ಕಾತರಕ್ಕೆ ತಣ್ಣಿರೆರೆಚುತ್ತಾನೆ.
ಮಾಯವಾದ
ಹುಡುಗಿಯ ಗುಂಗಲ್ಲೇ ಗಣೇಶ ಅಪ್ಪನ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳದೆ ಇದ್ದರೂ “ಹ್ಞಾಂ!.. ಆಯ್ತಪ್ಪ”
ಎಂದವನೇ ಹಿಂದೆ ತಿರುಗಿ ಅಖಿಲಾಳೆಡೆಗೆ ಬರಲು ಶುರುಮಾಡುತ್ತಾನೆ. ಅಖಿಲಾಳು ಇವನೆಡೆಗೆ ಬರುತ್ತಿರುತ್ತಾಳೆ.
ಇದನ್ನು ನೋಡಿ ಹರೀಶ-ರಂಗನಾಥ ನಕ್ಕು ಪಕ್ಕಕ್ಕೆ ಹೋಗುತ್ತಾರೆ.
“...ಏಳೇಳು
ಜನ್ಮದಲೂ ಮರೆಯದ ಸಂಬಂಧ” ಆರ್ಕೇಸ್ಟ್ರಾದ ಹಾಡು ಮುಂದುವರಿದಿರುತ್ತದೆ.
ಎದುರಿಗೆ
ಬಂದ ಗಣೇಶನಿಗೆ ಅಖಿಲಾ, “ಯಾರನ್ನೋ ಹುಡುಕ್ತಿರೋ ಹಾಗಿದೆ?” ಎಂದು ಕೇಳುತ್ತಾಳೆ.
“ಹ್ಞಾಂ!
ಅದೂ... ಅದು ನನ್ನ ಫ್ರೆಂಡ್. ನನ್ನ ಫ್ರೆಂಡ್ ಥರಾನೇ ಯಾರೋ ಅಲ್ಲೊಬ್ಬ! ಹೋಗ್ಲಿ ಬಿಡಿ. ನೀವು ಸಿಕ್ಕುದ್ರಲ್ಲ...
ಇನ್ಯಾರನ್ನೂ ನಾ ಹುಡ್ಕಲ್ಲ” ಎಂದು ಗಣೇಶ ತೊದಲುತ್ತಾನೆ.
“ಹಾಡು
ತುಂಬಾ ಚೆನ್ನಾಗಿದೆ ಅಲ್ವಾ” ಎಂದು ಗಣೇಶನನ್ನು ಅಖಿಲಾ ಮಾತಿಗೆಳೆಯುತ್ತಾಳೆ.
“ಹೌದು.
ತುಂಬಾನೇ ಚೆನ್ನಾಗಿದೆ. ಹಳೇ ಹಾಡಾದ್ರು ಎದೆ ಒಳಗೆ ಸಕ್ಕರೆ ಹಾಕಿ ಸ್ಪೂನ್ ತಗೊಂಡು ಗಿರ್ ಅಂತ ಕಲಸ್ದಾಗಿದೆ.
ಒಳ್ಳೆ ಹಾಡುಕಣ್ರಿ. ನಿಮ್ಥರ” ಎಂದು ಗಣೇಶನೂ ಅವಳ ಮಾತಿಗೆ ಮಾತು ಬೆರೆಸುತ್ತಾನೆ.
“ನೀವು
ತಂಬಾ ಚೆನ್ನಾಗ್ ಮಾತಾಡ್ತಿರ” ಅಖಿಲಾ ನಾಚಿಕೆಯಿಂದ ನುಲಿಯುತ್ತಾಳೆ.
“ಹ್ಹ...
ಹ್ಹ... ನೀವೂ ತುಂಬಾ ಚೆನ್ನಾಗ್ ನಾಚ್ಕೋತಿರ. ಸರಿ ಸರಿ ಬನ್ನಿ. ಮಾತಾಡೋದು, ನಾಚ್ಕೊಳೋದು ಇದ್ದದ್ದೆ.
ಪಾಪ ಪ್ರಜ್ವಲ್, ಯಶೋಧ ನಿಂತೂ ನಿಂತೂ, ಸ್ಮೈಲ್ ಕೊಟ್ಟು ಕೊಟ್ಟೂ ಸಾಕಾಗಿ ಆಮೇಲೆ ಹನಿಮೂನ್ಗೆ ಅಂತ
ಓಡೋಗೋಕೆ ಮುಂಚೆ ವಿಶ್ ಮಾಡೋಣ ಬನ್ನಿ” ಎಂದು ಅಖಿಲಾಳ ಜೊತೆ ವೇದಿಕೆಯ ಬಳಿ ಹೋಗಿ ವಧು-ವರರಿಗೆ ಹಾರೈಸುತ್ತಾರೆ.
ಗಣೇಶ
ಪ್ರಜ್ವಲ್‍ಗೆ ನಗುತ್ತಾ “ಅವಾಗ್ಲಿಂದ ಎಷ್ಟು ಸರ್ತಿ ಯಶೋಧ ಹೆಸರ್ ಹೇಳ್ದೋ?” ಎಂದು ನಗಿಸುತ್ತಾ, ಎಲ್ಲರೂ
ನಗುವಾಗ ಮುಂದುವರಿಯುತ್ತಾ “ಇನ್ನಾ ಎಷ್ಟೊತ್ತು ಅಂತ ನಿಂತಿರ್ತಿರಾ? ಬೇಗ ಹನಿಮೂನ್‍ಗೆ ಹೋಗ್ಬಿಡಿ”
ಎಂದು ಅಲ್ಲಿಂದ ಅಖಿಲಾಳ ಜೊತೆ ನಿರ್ಗಮಿಸುತ್ತಾನೆ.
“ಗಣೇಶ್
ಮತ್ತೆ ಯಾವಾಗ್ ಸಿಗ್ತೀರಾ?” ಎಂದು ಅಖಿಲಾ ಗಣೇಶ ತನ್ನವನೆನೋ ಎಂಬಂತೆ ಕೇಳುತ್ತಾಳೆ.
“ಮತ್ತೆ
ಸಿಗೋದ!?” ಎಂದು ಗಾಬರಿಯಿಂದ ಕೇಳಿದ ಗಣೇಶ ತುಸು ನಿಲ್ಲಿಸಿ, ಗಾಬರಿಗೊಂಡ ಅಖಿಲಾಳನ್ನು ನೋಡಿ ಮುಂದುವರಿಯುತ್ತಾ,
“ಇನ್ಮೇಲೆ ಅದೇ ನನ್ನ ಕೆಲಸ ಅಲ್ವೇನ್ರಿ. ನಿಮ್ಮಪ್ಪ-ನಮ್ಮಪ್ಪ ಇಬ್ರೂ ಸೇರ್ಕಂಡು ನಮ್ಮಿಬ್ಬರ ಮದುವೇನ
ಮಾಡೋದು ಅಂತಾ ತೀರ್ಮಾನ ಮಾಡಿದ್ದಾರೆ. ನಿಮ್ಮ ಒಪ್ಪಿಗೆ ಕೇಳೋವ್ರೊ, ಇಲ್ವೊ ಗೊತ್ತಿಲ್ಲ. ಗಾಡ್ ಗಣಪತಿ
ಮೇಲಾಣೆ ನನ್ ಒಪ್ಗೆನೇ ಕೇಳಿಲ್ಲ” ಎಂದು ಹೇಳುತ್ತಿರುವಾಗ ಮಾತಿನ ಮಧ್ಯದಲ್ಲಿ ಅವಸರಿಸುವ ಅಖಿಲಾ,
“ನನ್ ಒಪ್ಗೆ ಇದೆ. ಡ್ಯಾಡಿ ನನ್ನುನ್ನ ಕೇಳ್ಬಿಟ್ಟೆ ಈ ನಿರ್ಧಾರಕ್ಕೆ ಬಂದ್ರು” ಎಂದು ಹೇಳುತ್ತಾಳೆ.
“ಆದರೆ
ನಾನೂ ಒಪ್ಕೊಬೇಕು ಅಲ್ವಾ? ಈಗ್ತಾನೆ ನೀವೇ ಚೆನ್ನಾಗಿದೆ ಅಂತ ಹೇಳುದ್ರಲ್ಲ, ಆ ಹಾಡಲ್ಲೇ ಇದೆ ಮದುವೆ
ಅಂದ್ರೆ ಏಳೇಳು ಜನ್ಮದ ಸಂಬಂಧ ಅಂತಾ. ನಾವಿಬ್ರು ಈಗ್ತಾನೆ ಭೇಟಿ ಆಗಿದೀವಿ. ನೋಡೋಣ ನಾವಿಬ್ರು ಫ್ರೆಂಡ್ಸ್
ಥರಾ ಇರೋಣ. ಏನಾದ್ರು ಫೀಲಿಂಗ್ಸ್ ಹುಟ್ಟಿ, ಇಷ್ಟ ಆದ್ರೆ ಮುಂದಿನ್ ಮಾತು” ಎಂದು ತುಸು ಬೇಸರದಿಂದಲೇ
ಹೇಳುತ್ತಾನೆ.
ಅಸಮಾಧಾನದಿಂದ
ಅಖಿಲಾ “OK, I will wait for your feelings”
ಎಂದು ಹೇಳಿ ಹೊರಡುತ್ತಾಳೆ. ಗಣೇಶ ಅವಳನ್ನು ಬೀಳ್ಕೊಡುತ್ತಾನೆ.
ಇಬ್ಬರೂ
ನಗುತ್ತಾ ಬೇರೆಯಾಗುತ್ತಾರೆ.
***
ಅರುಣೋದಯದಲ್ಲಿ...
ಮರುದಿನ
ಅರುಣೋದಯದಲ್ಲಿ ಹತ್ತಿರದ ಪಾರ್ಕ್‍ನಲ್ಲಿ ಗಣೇಶ ಜಾಗ್ ಮಾಡುತ್ತಾ ಯಾರನ್ನೋ ಹುಡುಕುತ್ತಾ ಹಿಂದೆ-ಮುಂದೆ
ಬರುವ ಹುಡುಗಿಯರನ್ನೆಲ್ಲಾ ನೋಡುತ್ತಾ ಬೇಜಾರು ಮಾಡಿಕೊಂಡವನಂತೆ ಕಾಣುತ್ತಿರುತ್ತಾನೆ. ಅಷ್ಟರಲ್ಲಿ
“Hello! ಗಣೇಶ್” ಎಂದು ಯಾರೋ ಕರೆದಂತಾಗುತ್ತದೆ.
ಗಣೇಶ
ಸುತ್ತಮುತ್ತ ತಿರುಗಿ ಅಖಿಲಾಳನ್ನು ನೋಡಿ, ಅಯ್ಯೋ ಇವಳಾ ಎಂದುಕೊಳ್ಳುತ್ತಾ ಬೇಜಾರಿನಿಂದಲೇ, “Hello!
Good Morning” ಎನ್ನುತ್ತಾನೆ.
“Good
Morning ಗಣೇಶ್.
ನೀವೂ ದಿನಾ ಇಲ್ಲೇ ಜಾಗ್‍ಗೆ ಬರ್ತೀರಾ?” ಎಂದು ಕೇಳುತ್ತಾಳೆ.
“ನೋ,
ನೋ... ಇವತ್ತೇ ಫಸ್ಟ್. ಯಾಕೋ ಇವತ್ತಿಂದ ಜಾಗ್ ಮಾಡೋಣ ಅನ್ನುಸ್ತು”
“OK,
OK... That’s good.ಆದ್ರೆ
ನೀವು ಅವಾಗ್ಲಿಂದಾ ಯಾರನ್ನೋ ಹುಡುಕ್ತಿರೋ ಹಾಗಿದೆ.”
ಗಣೇಶ
ತುಸು ಬೇಜಾರಿನಿಂದಲೇ, “ಅಯ್ಯೋ, ಅದೊಂದು ದೊಡ್ಡ ಕಥೆ ಬಿಡಿ. ನನ್ ಜೀವಮಾನವೆಲ್ಲಾ ಯಾರನ್ನೋ ಹುಡ್ಕೋದೆ
ಆಗಿದೆ. ಯಾರ್ಯಾರೋ ಸಿಗ್ತಾರೆ. ಸಿಗ್ಬೇಕಾದವ್ರೇ ಸಿಗಲ್ಲ” ಎಂದೆನ್ನುತ್ತಾನೆ.
“ಅಂದ್ರೆ?”
ಗಣೇಶ್
ವಾಚ್‍ನೋಡುತ್ತಾ “ಹೋಗ್ಲಿ ಬಿಡಿ. ಆಫೀಸಿಗೆ ಹೋಗ್ಬೇಕು, ಲೇಟಾಗ್ತಿದೆ. ನಾ ಇನ್ನ ಬರ್ತೀನಿ. ಬಾಯ್!”
ಎಂದು ಅಲ್ಲಿಂದ ಅಖಿಲಾಳ ಮಾತಿಗೂ ಕಾಯದೆ ತೆರಳುತ್ತಾನೆ.’
ಅಖಿಲಾ
ಏನನ್ನೋ ಹೇಳಲು ಪ್ರಯತ್ನಿಸುತ್ತಾಳೆ. ಗಣೇಶ ಗಮನಿಸದೆ ಅಲ್ಲಿಂದ ಓಡುತ್ತಾನೆ.
***
ಆಫೀಸಿನಲ್ಲೊಂದು ದಿನ...
ಎಲ್ಲರಿಗೂ
ಸಂತೋಷದಿಂದ ವಿಶ್ ಮಾಡುತ್ತಾ ಗಣೇಶ ಆಫೀಸಿನ ಒಳಗೆ ಬರುತ್ತಾನೆ. ಒಂದು ಛೇಂಬರಿನ ಕದ ತೆಗೆದು ನೋಡುತ್ತಾನೆ.
ಅಲ್ಲಿ ಯಾರೂ ಇರುವುದಿಲ್ಲ. ಗಲಿಬಿಲಿಗೊಂಡ ಗಣೇಶ ಏನೋ ಫ್ಲಾಶ್ ಆದವನಂತೆ ತನ್ನ ಛೇಂಬರಿಗೆ ಹೋಗಿ ಕುಳಿತು
ಯಾರಿಗೋ ಮೊಬೈಲ್ ಕರೆ ಮಾಡುತ್ತಾನೆ. ಏನನ್ನೋ ಮಾತಾಡುತ್ತಾನೆ. ಗಾಬರಿಗೊಂಡ ಗಣೇಶ ಯೋಚಿಸಲು ಆರಂಭಿಸುತ್ತಾನೆ.
ಏನೋ ಹೊಳೆದವನಂತೆ ನಗುತ್ತಾನೆ.
***
ಮದುವೆಗೊಂದು
ಮುನ್ನುಡಿ
ಕನಕಜ್ಜಿಯ
ಮನೆಯವರೆಲ್ಲರೂ ಊಟ ಮಾಡುತ್ತ, ಮಾತಾಡುತ್ತ ಇರುವಾಗ,
“ಏನೋ
ಗಣೇಶ, ಅಖಿಲಾನ್ನ ನೋಡ್ದಂತೆ, ನಂಗೇನೂ ಹೇಳ್ಲಿಲ್ಲ” ಎಂದು ಗಿರಿಜಾ ಕೇಳುತ್ತಾಳೆ.
ಕನಕಜ್ಜಿಯೂ
ಸೇರಿ ಎಲ್ಲರೂ ಇದೇ ಪ್ರಶ್ನೆ ಕೇಳಬೇಕೆಂದುಕೊಂಡವರಂತೆ ಗಣೇಶನೆಡೆಗೆ ನೋಡುತ್ತಾರೆ.
“ಹೇಳೋ
ಅಂತಾ ಹುಡ್ಗಿ ಏನ್ ಅಲ್ಲಾ ಬಿಡಮ್ಮ ಅಖಿಲಾ. ಅಜ್ಜಿ ಆಸೆ, ಅಪ್ಪನ ಬಿಸಿನೆಸ್ ಪಾರ್ಟ್‍ನರ್ ಮಗಳು ಅಂತಾ
ಒಪ್ಕೊಬೇಕು ಅಷ್ಟೆ” ಎಂದು ಅಸಮಾಧಾನದಿಂದಲೇ ನುಡಿಯುತ್ತಾನೆ.
“ಅಯ್ಯೋ
ಹಂಗಂತ ಇಷ್ಟ ಇಲ್ದಲೇ ಇರೋ ಹುಡ್ಗೀನ ಮದ್ವೆ ಆಗೋಕೆ ಆಗುತ್ತೇನೋ? ಬೇರೆ ಹುಡ್ಗಿ ನೋಡುದ್ರಾಯ್ತು” ಎಂದು
ಗಿರಿಜಾ ಮಗನ ಪರವಾಗಿ ಹೇಳುತ್ತಾಳೆ.
“ಏನೇ
ನೀ ಹೇಳ್ತಿರೋದು. ಅವರಿಬ್ರು ನೆನ್ನೆ ತಾನೇ ಒಬ್ಬರಿಗೊಬ್ರು ನೋಡವ್ರೆ. ಸ್ವಲ್ಪ ದಿನ ಜೊತೇಲಿ ಓಡಾಡಾಲಿ,
ಒಬ್ಬರಿಗೊಬ್ರು ಅರ್ಥ ಮಾಡ್ಕೊಂಡು ಒಂದು ತೀರ್ಮಾನಕ್ಕೆ ಬರಲಿ” ಎಂದು ಹರೀಶ ಈ ಸಂಬಂಧ ಮುಂದುವರಿಯಬೇಕು
ಎಂಬ ಅರ್ಥದಲ್ಲಿ ಹೇಳುತ್ತಾನೆ.
“ನಾನಾಗ್ಲೆ
ತೀರ್ಮಾನ ತಗೊಂಡು ಆಯ್ತು. ನಾ ಮದ್ವೆ ಆಗ್ಬೇಕ್ ತಾನೇ? ಖಂಡಿತಾ ಆಗ್ತಿನಿ. ಸ್ವಲ್ಪ ದಿನ ಟೈಮ್ ಕೊಡಿ
ಸಾಕು” ಎಂದು ವಿನಂತಿಸುತ್ತಾನೆ. ಎಲ್ಲರೂ ಆಶ್ಚರ್ಯದಿಂದ ಗಣೇಶನನ್ನು ನೋಡುತ್ತಿರುವಾಗ ಊಟ ಮುಗಿಸಿದ
ಅವನು ಎದ್ದು ಹೋಗುತ್ತಾನೆ.
*
ಗಣೇಶ
ಬೆಡ್‍ರೂಮಿನ ಒಳಕ್ಕೆ ಬಂದವನೇ ಕದವಿಕ್ಕಿ ತನ್ನ ಮೊಬೈಲ್ ತೆಗೆದುಕೊಂಡು ಅಖಿಲಾಳಿಗೆ ಕರೆ ಮಾಡುತ್ತಾನೆ.
ಇವನ
ಕರೆಗೆ ಕಾದವಳಂತೆ ಇದ್ದ ಅಖಿಲಾಳ ಕಡೆಯಿಂದ, “Hello
Ganesh. ಊಟ
ಆಯ್ತ?” ಎಂಬ ಪ್ರಶ್ನೆ ತೇಲಿ ಬರುತ್ತದೆ.
“ಆಯ್ತು.
ನಿಮ್ದು?” ಎಂದ ಗಣೇಶ ಏನ್ನನ್ನೋ ಹೇಳುವುದಕ್ಕೆ ಅವಸರಿಸುತ್ತಿದ್ದರೆ, “ಈಗ್ತಾನೆ ಆಯ್ತು ಗಣೇಶ್. ನೀವು
ಫೋನ್ ಮಾಡಿದ್ದು ತುಂಬಾ ಖುಷಿಯಾಗ್ತಿದೆ” ಎಂದು ಅಖಿಲಾ ಅವಸರವಾಗಿ ಮಾತನಾಡುತ್ತಾಳೆ.
ಅದಕ್ಕೆ
ಉತ್ತರವಾಗಿ ಗಣೇಶ, “ಬರೀ ಫೋನಿಗೆ ಇಷ್ಟೊಂದು ಖುಷಿಯಾದ್ರೆ ಹೇಗ್ರಿ. ನಾಳೆ ಬೆಳಿಗ್ಗೆ ಹತ್ತಕ್ಕೆ ಗೆಳೆಯರ
ಕಾಫೀ ಕೂಟದಲ್ಲಿ ಸಿಕ್ತೀರಾ? ಇನ್ನೂ ಖುಷಿಯಾಗುತ್ತೆ” ಎಂದು ಛೇಡಿಸುವ ಧ್ವನಿಯಲ್ಲಿ ಕೇಳುತ್ತಾನೆ.
“ಖಂಡಿತಾ
ಗಣೇಶ್. ನೀವು ಕರೆದರೆ ಬರ್ದಲೆ ಇರ್ತಿನಾ. ಏನಾದ್ರು Happy news?”
ಎಂದು ಪ್ರಶ್ನಿಸುತ್ತಾಳೆ.
“ನಾಳೆ
ಸಿಕ್ತೀರಲ್ಲಾ, ಆವಾಗ ಎಲ್ಲಾ ಮಾತಾಡೋಣ. ಚೆನ್ನಾಗಿ ನಿದ್ದೆಮಾಡಿ. Good
Night” ಎಂದು
ಹೇಳಿ ಅಖಿಲಾಳ ಉತ್ತರಕ್ಕೂ ಕಾಯದೇ ಮೊಬೈಲ್ ಕಟ್ ಮಾಡಿ ಹಾಸಿಗೆ ಮೇಲೆಸೆದು ಮೇಲಕ್ಕೆ ನೋಡುತ್ತಾ ಮಲಗುತ್ತಾನೆ...
***
ಗೆಳೆಯರ ಕಾಫೀ ಕೂಟ
ಕಾಫೀ #1
ಗೆಳೆಯರ
ಕಾಫೀ ಕೂಟದ ಬಳಿ ಅವರವರ ಕಾರಿನಲ್ಲಿ ಬಂದಿಳಿದ ಗಣೇಶ ಮತ್ತು ಅಖಿಲಾ ಕಾರ್ ಪಾರ್ಕ್ ಮಾಡಿ ಆಚೆ ಬರುತ್ತಾರೆ.
“ಗುಡ್‍ಮಾರ್ನಿಂಗ್,
ಗಣೇಶ್” ಎಂದು ಅಖಿಲಾ ವಿಶ್ ಮಾಡುತ್ತಾಳೆ.
ತುಂಬಾ
ಖುಶಿಯಲ್ಲಿದ್ದಂತೆ ತೋರುವ ಗಣೇಶ್, “ಗುಡ್‍ಮಾರ್ನಿಂಗ್ ಅಖಿಲಾ. ಸರಿಯಾದ ಟೈಮಿಗೆ ಬಂದಿದ್ದೀರಾ, ಪ್ರಪಂಚದಲ್ಲಿ
ನೀವೊಬ್ಬರೆ ಹುಡುಗಿ ಅನ್ಸುತ್ತೆ ಹೇಳಿದ ಟೈಮ್‍ಗೆ ಸರಿಯಾಗಿ ಬಂದಿರೋದು” ಎಂದು ಹೇಳುತ್ತಾನೆ.
“ಹಾಗೇನಿಲ್ಲಾ
ಗಣೇಶ್. ಜೀವನದಲ್ಲಿ ಟೈಮ್ ತುಂಬಾ ಇಂಪಾರ್ಟೆಂಟ್ ಅಲ್ವಾ” ಎಂದು ಅಖಿಲಾ ಕರಾರುವಕ್ಕಾಗಿ ಸಮಯಪಾಲಿಸುವವಳಂತೆ
ಮಾತನಾಡುತ್ತಾಳೆ.
“ಹೌದು
ಕಣ್ರೀ. ಆದ್ರೆ ಈ ಟೈಮಲ್ಲಿ ಗುಡ್ ಟೈಮ್, ಬ್ಯಾಡ್ ಟೈಮ್ ಅಂತಾ ಯಾಕಿರುತ್ತೋ?... ಹೋಗ್ಲಿ ಬಿಡಿ. ಕಾಫೀ
ಕೂಟದ ಬೋರ್ಡ್ ಕಡೆ ನೋಡುತ್ತಾ “ಸ್ವಲ್ಪ ಸ್ನೇಹ, ಸ್ವಲ್ಪ ಪ್ರೀತಿ, ಸ್ವಲ್ಪ ಕಾಫೀ” ಎಂಬುದನ್ನು ನೋಡಿ
A lot can happen over a cup of coffee ಎಂದು ಮನದಲ್ಲೇ ಅಂದುಕೊಳ್ಳುತ್ತಾ “ಬನ್ನಿ ಒಳಗೆ ಹೋಗೋಣ” ಎಂದು ಕಾಫೀ ಕೂಟದ
ಒಳಗೆ ಬರುತ್ತಾನೆ.
ಒಳಗೆ
ಒಂದು ಟೇಬಲ್ ಸುತ್ತಾ ಕುಳಿತಿದ್ದ ಮೂವರು ಮಹಿಳೆಯರು ಬಿಲ್ಲನ್ನು ನಾನ್ ಕೊಡ್ತೀನಿ, ನಾನ್ ಕೊಡ್ತೀನಿ
ಅಂತಾ ಕಿತ್ತಾಡುತ್ತಾ ಇರುವಾಗ, ಬಿಲ್ಲನ್ನ ಯಾರಿಗೆ ಕೊಡಬೇಕೆಂದು ತಿಳಿಯದೆ ನಿಂತಿದ್ದ ವೈಟರ್, “ನಂಗ್
ಕೊಡಿ, ನಾ ಟಿಪ್ಸ್ ಜಾಸ್ತಿ ಕೊಡ್ತೀನಿ” ಎಂದ ಮಹಿಳೆಗೆ ತಟಕ್ಕನೆ ಬಿಲ್ ಕೊಡುತ್ತಾನೆ. ಆ ಮಹಿಳೆ ಬಿಲ್
ನೀಡುತ್ತಾಳೆ.
ಇದನ್ನು
ನೋಡುತ್ತಾ, ನಗುತ್ತಾ ಕ್ಯಾಶ್‍ನಲ್ಲಿದ್ದ ಮಂಜುನಾಥನ ಹತ್ತಿರ ಹೋದ ಗಣೇಶ ಏನೋ ಮಾತನಾಡಿ, ಅಖಿಲಾಳ ಬಳಿ
ಬಂದು, “ನನ್ನ ಕ್ಲಾಸ್ ಮೆಟ್” ಎಂದು ಹೇಳಿ, “ಬನ್ನಿ ಮೇಲೆ ಹೋಗೋಣ” ಎಂದು ಅಖಿಲಾಳ ಜೊತೆ ಮಹಡಿಯ ಮೇಲೆ
ಹೋಗಿ ಒಂದು ಟೇಬಲ್ಲಿನ ಬಳಿ ಬಂದು ಕುಳಿತುಕೊಳ್ಳುತ್ತಾನೆ. ಅವನ ಹಿಂದೆಯೇ ಬಂದ ಅಖಿಲಾಳೂ ಕುಳಿತುಕೊಳ್ಳುತ್ತಾಳೆ.
ಕೂತವರು ಪರಸ್ಪರ ಮುಖ ನೋಡಿಕೊಂಡು ನಗುತ್ತಾರೆ. ಅಲ್ಲಿಯೇ ಮೂಲೆಯಲ್ಲಿ ನಿಂತಿದ್ದ ವೈಟರ್ ಇವರು ಬಂದದನ್ನು
ಗಮನಿಸಿ ಇವರ ಟೇಬಲ್ ಬಳಿಗೆ ಬರುತ್ತಾನೆ.
ಬಂದ
ವೈಟರನ್ನು ಗಮನಿಸಿ ಗಣೇಶ್, “ಎರಡು ಕಾಫೀ ತೆಗೆದುಕೊಂಡು ಬನ್ನಿ. ನಿಧಾನವಾಗಿ” ಎಂದು ಆರ್ಡರ್ ನೀಡುತ್ತಾನೆ.
ವೈಟರ್ ತಲೆಯಲ್ಲಾಡಿಸಿ ಅಲ್ಲಿಂದ ಹೋಗುತ್ತಾನೆ.
ನಿಟ್ಟುಸಿರಿಟ್ಟು
ಸುಮ್ಮನೆ ಕುಳಿತು ಕೊಂಡ ಗಣೇಶನನ್ನು, “ಹೇಳಿ ಗಣೇಶ್, ಏನೋ ಮಾತಾಡ್ಬೇಕು ಅಂದ್ರಲ್ಲ” ಎಂದು ಅಖಿಲಾ
ಮಾತಿಗೆಳೆಯುತ್ತಾಳೆ. ಅವಳ ಮಾತಿನಲ್ಲಿ ತಡೆಯಲಾಗದ ಕುತೂಹಲವಿರುತ್ತದೆ.
“ಮಾತಾಡೋಣ
ಅಂತಾನೇ ಬಂದಿದ್ದೀವಿ. ಸ್ವಲ್ಪ ನಿಧಾನ ಮಾಡಿ. ಇಷ್ಟೊಂದ್ ಫಾಸ್ಟ್ ಆದ್ರೆ ಹೇಗೆ?” ಎಂದು ಸಮಾಧಾನದಿಂದ
ಉತ್ತರಿಸುತ್ತಾನೆ.
“ಫಾಸ್ಟ್
ಅಂತ ಅಲ್ಲ. ಕುತೂಹಲ ಅಷ್ಟೆ! ನನ್ಬಗ್ಗೆ ಏನಾದ್ರು...?” ಎಂದು ನಗುತ್ತಾ ಕೇಳುತ್ತಾಳೆ.
ಇವಳ
ಪ್ರಶ್ನೆಗೆ ಕಾಯುತ್ತಿದ್ದವನಂತೆ ಗಣೇಶ, “ಅಯ್ಯೋ ಸದ್ಯಕ್ಕೆ ಅಂತಾದ್ದೇನೂ ಇಲ್ಲ” ಎಂದು ಚುಟುಕಾಗಿಯೇ
ಉತ್ತರಿಸುತ್ತಾನೆ.
“ಆದರೆ
ನಿಮ್ಮ ಮುಖದಲ್ಲಿ ಇವತ್ತು ನಗು ತೇಲಾಡ್ತಿದೆ. ಯಶೋಧ ಹೇಳ್ತಿದ್ಲು, ನೀವು ಸರಿಯಾಗಿ ನಗೋದೆ ಬಿಟ್ಟಿದ್ದೀರಂತೆ.
ಮೊದ್ಲೆಲ್ಲಾ ನಿಮ್ ಮುಗುಳ್ನಗೆಗೆ ಹುಡ್ಗೀರೆಲ್ಲಾ ಸಾಯೋವ್ರಂತೆ” ಎಂದು ಮತ್ತೊಂದು ಪ್ರಶ್ನೆ ಎಸೆಯುತ್ತಾಳೆ.
“ಹಾಗೇನಿಲ್ಲ
ಕಣ್ರಿ” ಎಂದು ಚುಟುಕಾಗಿಯೇ ಉತ್ತರಿಸಿದವನಿಗೆ, “ಮತ್ತೆ ಮದ್ವೇನೆ ಬೇಡ ಅಂತಿದ್ರಂತೆ?” ಎಂಬ ಮತ್ತೊಂದು
ಪ್ರಶ್ನೆ ತೇಲಿ ಬರುತ್ತದೆ.
ಇವಳನ್ನು
ಪ್ರಶ್ನೆ ಕೇಳೋಣ ಅಂತಾ ಬಂದರೆ, ನನಗೆ ಪ್ರಶ್ನೆಯ ಮೇಲೆ ಪ್ರಶ್ನೆ ಹಾಕುತ್ತಿದ್ದಾಳಲ್ಲಪ್ಪಾ ಎಂದು ಕೊಂಡ
ಗಣೇಶ, “ಹಾಗೇನಿಲ್ಲಪ್ಪಾ, ಈಗೀಗ ನನಗೂ ಮದ್ವೆ ಆಗ್ಬೇಕು ಅನ್ನುಸ್ತಿದೆ” ಎಂದು ಇವಳ ಎಲ್ಲಾ ಪ್ರಶ್ನೆಗೆ
ಒಂದೇ ಉತ್ತರವೆಂಬಂತೆ ಹೇಳುತ್ತಾನೆ.
“ವೆರಿ
ಇಂಟೆರೆಸ್ಟಿಂಗ್. ಸದ್ಯ ಬಿಡಿ ಈಗ್ಲಾದ್ರು ಅನ್ನುಸ್ತಲ್ಲಾ. ಕಾರಣ?” ಎಂದು ಮತ್ತೊಂದು ಪ್ರಶ್ನೆ ಕೇಳಿದ
ಅಖಿಲಾಳ ಮಾತಿನಲ್ಲಿ ಆ ಕಾರಣ ನಾನೇ ಇರಬಹುದಾ? ಬೇಗ ಹೇಳಿ ಎಂಬ ಆತುರವಿರುತ್ತದೆ.
“ಕಾರಣ?...
ನಮ್ಮಜ್ಜಿ ಕೊನೆ ಆಸೆ... ಅಷ್ಟೆ” ಎಂದ ಗಣೇಶನ ಉತ್ತರ ಇವಳಿಗೆ ನಿರಾಸೆಯನ್ನುಂಟು ಮಾಡುತ್ತದೆ.
“ಅಜ್ಜಿ
ಕೊನೆ ಆಸೆ ಅಷ್ಟೇನಾ? ಅಥವಾ ನಿಮ್ಮ ನಗು ಮತ್ತೆ ಮೂಡೋದಕ್ಕೆ ಯಾರಾದ್ರು ಹುಡ್ಗಿ...? ನಂಗೊತ್ತು ಅದು
ನಾನೇ ಇರ್ಬೇಕು” ಎಂದು ತಡೆಯಲಾಗದೇ ಮತ್ತೆರೆಡು ಪ್ರಶ್ನೆಗಳನ್ನು ಕೇಳಿ, ಎಲ್ಲಕ್ಕೂ ತಾನೇ ಉತ್ತರವೆಂಬಂತೆ
ಅವಳ ಮನದ ಇಂಗಿತವನ್ನು ಹೊರ ಹಾಕಿಯೇ ಬಿಡುತ್ತಾಳೆ.
“ನಾನು
ಮದ್ವೆಯಾಗಬಾರದು ಅಂತ ಡಿಸೈಡ್ ಮಾಡಿದ್ದೂ, ಮತ್ತೀಗ ಮದ್ವೆ ಆಗ್ಬೇಕು ಅಂತ ಅನ್ನುಸ್ತಿರೋ ಹಿಂದೆ ಒಂದು
ದೊಡ್ಡ ಕಥೇನೇ ಇದೇ ಕಣ್ರೀ ಅಖಿಲಾ” ಎಂದು ಅಖಿಲಾಳ ಎಲ್ಲಾ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಉತ್ತರಿಸುವವನಂತೆ
ಹೇಳುತ್ತಾನೆ.
ತನ್ನ
ಮನಸ್ಥಿತಿಯಿಂದ ಹೊರಗೆ ಬರಲಾಗದ ಹುಡುಗಿ ಅಖಿಲಾ, “ಅದೇನಪ್ಪಾ ಅಂತಾ ಕಥೆ? ಹೇಗಿದ್ರು ನಾ ನಿಮ್ಮ ಲೈಫ್
ಪಾರ್ಟ್‍ನರ್ ಆಗೋಳಲ್ವ, ನನ್ನತ್ರ ಹೇಳಿ ಪರ್ವಾಗಿಲ್ಲ” ಎಂದು ಅವಸರಿಸುತ್ತಾಳೆ.
ಅಷ್ಟರಲ್ಲಿ
ವೈಟರ್ ಎರಡು ಕಾಫೀ ತಂದಿಟ್ಟು, ಅಲ್ಲಿಂದ ತೆರಳುತ್ತಾನೆ.
“ನಿಮ್ಮತ್ರ
ಹೇಳ್ದಲೆ, ಇನ್ಯಾರತ್ರ ಹೇಳ್ಲಿ. ಖಂಡಿತಾ ಹೇಳ್ತಿನಿ. ಯಾಕಂದ್ರೆ ನೀವು ನನ್ನ ಜೀವನದಲ್ಲಿ ಕಾಲಿಟ್ಟ
ಮೇಲೇನೆ ನನ್ನ ಮುಖದಲ್ಲಿ ಮತ್ತೆ ನಗು ಮೂಡಿದ್ದು” ಎಂದು ಹೇಳಿ ಕಾಫೀ ತೆಗೆದುಕೊಂಡು ಒಂದು ಸಿಪ್ ಹೀರಿ
ನಗುತ್ತಾನೆ. ಅಖಿಲಾಳೂ ಕಾಫೀ ತೆಗೆದು ಕೊಳ್ಳುತ್ತಾಳೆ. ಗಣೇಶ್ ಕಾಫೀ ಲೋಟ ಕೆಳಗಿಟ್ಟು ಮುಂದುವರೆಯುತ್ತಾ,
“ನಾ ಹುಟ್ಟಿದ ದಿನದಿಂದಾನೇ ನನ್ನ ಜೀವನದಲ್ಲಿ ಹುಡ್ಗೀರು ಬರೋದಕ್ಕೆ ಶುರುಮಾಡಿದ್ರು. ಈ ಹುಡುಗೀರಿಗೂ
ನನಗೂ ಏನೋ ಒಂಥರಾ...”
***
ಸೋದರತ್ತೆ ಮಗು
ಅಮರಗೊಂಡದ
ಅಮರ್ ನರ್ಸಿಂಗ್ ಹೋಮಿನ ಆಪರೇಷನ್ ಥಿಯೇಟರ್ ಮುಂದೆ ರುದ್ರಪ್ರಸಾದರು, ಹರೀಶ, ಕನಕಜ್ಜಿ, ರಮೇಶ ಕಾತರದಿಂದ
ಓಡಾಡುತ್ತಿದ್ದಾರೆ. ಒ.ಟಿ.ಯಿಂದ ಲೇಡಿ ಡಾಕ್ಟರ್ ಮತ್ತು ನರ್ಸ್ ಗಂಡು ಮಗುವೊಂದನ್ನು ತಂದು,
“ಕಂಗ್ರಾಟ್ಸ್
ಹರೀಶ್. ಗಂಡು ಮಗು” ಎಂದು ಲೇಡಿ ಡಾಕ್ಟರ್ ಸಂತೋಷದಿಂದ ಹೇಳುತ್ತಾರೆ.
ಎಲ್ಲರೂ
ಕುತೂಹಲದಿಂದ ಮಗುವನ್ನು ನೋಡುತ್ತಾರೆ. ಮಗು ಮುಗುಳ್ನಗುವಂತೆ ತೋರುತ್ತದೆ.
“ಥ್ಯಾಂಕ್
ಯು ಡಾಕ್ಟರ್. ಥ್ಯಾಂಕ್ ಯು ವೆರಿಮಚ್” ಎಂದು ಹರೀಶ್ ಸಂತೋಷದ ವಿಷಯ ಹೇಳಿದ ಡಾಕ್ಟರಿಗೆ ತನ್ನ ಕೃತಜ್ಞತೆ
ಸೂಚಿಸುತ್ತಾನೆ.
“ಇಟ್ಸ್
ಅವರ್ ಡ್ಯೂಟಿ ಹರೀಶ್. ಸ್ವಲ್ಪ ಹೊತ್ತು ಬಿಟ್ಟು ಗಿರಿಜಾನ ನೋಡ್ಬೋದು” ಎಂದು ಹೇಳಿದ ಲೇಡಿ ಡಾಕ್ಟರ್
ಅಲ್ಲಿಂದ ತೆರಳುತ್ತಾರೆ. ಅವರ ಹಿಂದೆಯೇ ಮಗುವನ್ನು ಎತ್ತಿಕೊಂಡ ನರ್ಸ್ ಕೂಡ ಹೋಗುತ್ತಾರೆ.
ಅವರು
ಒಳಗೆ ಹೋದ ಮೇಲೆ ಕನಕಜ್ಜಿ, ಹರೀಶ ಏನನ್ನೋ ಮಾತನಾಡುತ್ತಿರುವಾಗ ಸ್ಟ್ರೆಚರ್ ಮೇಲೆ ಗರ್ಭಿಣಿಯೊಬ್ಬರನ್ನು
ಕರೆದುಕೊಂಡು ನರ್ಸ್‍ಗಳು, ವಾರ್ಡ್‍ಬಾಯ್‍ಗಳು ತರಾತುರಿಯಲ್ಲಿ ಬರುತ್ತಾರೆ. ಗರ್ಭಿಣಿಯ ಗಂಡನೂ ಅವರೊಡನೆಯೇ
ಬರುತ್ತಾನೆ. ಆ ಗರ್ಭಿಣಿಯನ್ನು ಒ.ಟಿ.ಯೊಳಗೆ ಕರೆದೊಯ್ಯಲಾಗುತ್ತದೆ. ಈ ಬೆಳವಣಿಗೆಯಿಂದ ಉಂಟಾದ ಆತಂಕದಲ್ಲಿ ಮುಳುಗಿದ್ದ ಹರೀಶನಿಗೆ
ಅಲ್ಲಿಗೆ ಬಂದ ನರ್ಸ್ ಒಬ್ಬರು “ಸಾರ್! ಸ್ಪೆಷಲ್ ವಾರ್ಡ್‍ಗಳೆಲ್ಲಾ ತುಂಬಿರೊದ್ರಿಂದ ತಾಯಿ-ಮಗುವನ್ನು
ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡ್ತ ಇದ್ದೇವೆ. ವಿ ಆರ್ ಸಾರಿ” ಎಂಬ ಧ್ವನಿ ಎಚ್ಚರಿಸುತ್ತದೆ. ಇಷ್ಟನ್ನು
ಹೇಳಿದ ಆಕೆ ಯಾವ ಉತ್ತರಕ್ಕೂ ಕಾಯದೆ ಒ.ಟಿ.ಯೊಳಗೆ ಓಡುತ್ತಾಳೆ. ಹರೀಶ ಗಲಿಬಿಲಿಗೊಂಡಂತೆ ಕಂಡರೂ ಅಸಹಾಯಕನಾಗಿ
ನಿಲ್ಲುತ್ತಾನೆ.
*
ನರ್ಸಿಂಗ್
ಹೋಂನ ಜನರಲ್ ವಾರ್ಡ್‍ನಲ್ಲಿ ಗಿರಿಜಾ ತನ್ನ ಮಗುವಿನ ಜೊತೆ ಹಾಸಿಗೆಯಲ್ಲಿ ಮಲಗಿದ್ದಾಳೆ. ಸುತ್ತಲೂ
ಹರೀಶ ಮತ್ತವನ ಬಂಧುಬಳಗ ಸಂತೋಷದಿಂದ ಮಾತನಾಡುತ್ತಿದ್ದಾರೆ. ಗಿರಿಜಾಳ ಬೆಡ್ಡಿನ ಎಡಗಡೆಯೊಂದು ಬಲಗಡೆಯೊಂದು
ಬೆಡ್ಡು ಬಿಟ್ಟರೆ ಮಿಕ್ಕೆಲ್ಲಾ ಬೆಡ್‍ಗಳಲ್ಲಿ ಬಾಣಂತಿಯರು ಮತ್ತವರ ಪುಟ್ಟ ಪುಟ್ಟ ಮಕ್ಕಳು. ಅಲ್ಲಿನ
ವಾತಾವರಣ ಎಂತಹವರಿಗೂ ಮುದನೀಡುವಂತಿರುತ್ತದೆ.
“ನನ್
ಮೊಮ್ಮಗ ತಂಬಾ ಗುಂಡ್ ಗುಂಡಾಗಿ ಮುದ್ದಾಗಿದ್ದಾನೆ. ಗಣೇಶ ಅಂತ ಕರುದ್ರೆ ಚೆನ್ನಾಗಿರುತ್ತೆ” ಎಂದು
ಕನಕಜ್ಜಿ ತನ್ನ ಮೊಮ್ಮಗನಿಗೆ ಅದಾಗಲೇ ಹೆಸರಿಡುವ ಪ್ರಕ್ರಿಯೆಯಲ್ಲಿ ತೊಡಗಿರುತ್ತಾರೆ.
“ಈಗಲೇ
ಅದಕ್ಕೆಲ್ಲಾ ಏನಮ್ಮ ಅವಸರ” ಎಂದು ಹರೀಶ ತನ್ನ ಅಮ್ಮನಿಗೆ ಹೇಳುತ್ತಿರುವಾಗ, ಅಲ್ಲಿಗೆ ಸ್ಟ್ರೆಚರ್
ಮೇಲೆ ಹರೀಶನ ತಂಗಿ ಪುಟ್ಟಿ, ಜೊತೆಗೊಂದು ಪಾಪು, ಪುಟ್ಟಿಯ ಗಂಡ ಪ್ರಸನ್ನ ನರ್ಸ್‍ಗಳೊಡನೆ ಬರುತ್ತಾರೆ.
ತನ್ನ ಭಾವನನ್ನು ನೋಡಿದ ಹರೀಶ, ಅಳಿಯ ಮಗಳನ್ನು ನೋಡಿದ ರುದ್ರಪ್ರಸಾದ್, ಕನಕಜ್ಜಿ ಎಲ್ಲರೂ ಆಶ್ಚರ್ಯಚಕಿತರಾಗಿ
ಅವರೆಡೆಗೆ ನೋಡುತ್ತಾರೆ. ಹರೀಶ ಬಿರುಸಾಗಿ ಭಾವನ ಬಳಿ ಬರುತ್ತಾನೆ. ಬಂದವನೇ “ಭಾವ! ಪುಟ್ಟಿ!! ಇದೇನಿದು,
ಏನಾಯ್ತು? ಡಾಕ್ಟ್ರು ಮುಂದಿನ್ ತಿಂಗಳಲ್ವಾ ಟೈಮ್ ಕೊಟ್ಟಿದ್ದಿದ್ದು” ಎಂದು ಆತಂಕದ ಧ್ವನಿಯಲ್ಲಿ ಕೇಳುತ್ತಾನೆ.
“ಹೌದು
ಭಾವ. ಆದ್ರೆ ಇವಳಿಗ್ಯಾಕೋ ಬೆಳಿಗ್ಗೆಯಿಂದ ತುಂಬಾ ಪೈನ್. ಡಾಕ್ಟ್ರುಗೆ ಫೋನ್ ಮಾಡಿದ್ದಕ್ಕೆ ಬೇಗ ಕರ್ಕೊಂಡ್
ಬನ್ನಿ ಅಂದ್ರ್ರು. ಸಿಸೇರಿಯನ್ ಮಾಡಿ ಮಗು ತೆಗೆದ್ರು. ಹೆಣ್ಣು ಮಗು” ಎಂದು ಪ್ರಸನ್ನ ಒಂದೇ ಉಸಿರಿಗೆ
ಹೇಳುತ್ತಾನೆ.
ಎಲ್ಲರೂ
ಮಗುವನ್ನು, ಪುಟ್ಟಿಯನ್ನು ನೋಡುತ್ತಿರುವಾಗ, ನರ್ಸ್‍ಗಳು ತಾಯಿ ಮಗುವನ್ನು ಗಿರಿಜಾಳ ಎಡಗಡೆಯ ಬೆಡ್ಡಿಗೆ
ಮಲಗಿಸುತ್ತಾರೆ.
“ಹೋಗ್ಲಿ
ಬಿಡಿ ಭಾವ, ಎಲ್ಲಾ ಒಳ್ಳೆದಾಯ್ತಲ್ಲ. ನಂಗೊಂದ್ ಫೋನ್ ಮಾಡೋದ್ ಅಲ್ವ?” ಎಂದು ಹರೀಶ ತನ್ನ ಭಾವನನ್ನು
ಕೇಳುತ್ತಾನೆ.
“ತುಂಬಾ
ಭಯ ಆಗೋಯ್ತು ಭಾವ. ಏನ್ಮಾಡ್ಬೇಕು ಅಂತಾನೇ ಗೊತ್ತಾಗ್ಲಿಲ್ಲ” ಎಂದು ಪ್ರಸನ್ನ ತನಗಾಗಿದ್ದ ಗಾಬರಿಯನ್ನು
ಹೊರಹಾಕುತ್ತಾನೆ.
“ನಾವು
ಏಳನೇ ತಿಂಗಳಿಗೆ ಕರ್ಕೊಂಡು ಹೋಗ್ತಿವಿ ಅಂದ್ರೆ ಕೇಳ್ಲಿಲ್ಲ ನೀವು” ಎಂದು ಕನಕಜ್ಜಿ ಪ್ರಸನ್ನನೆಡೆಗೆ
ಬೇಸರದಿಂದಲೇ ನೋಡುತ್ತಾರೆ.
“ಅದು
ಹಾಗಲ್ಲ ಅತ್ತೆ” ಎಂದು ಪ್ರಸನ್ನ ಏನೋ ಹೇಳಲು ಪ್ರಯತ್ನಿಸಿದಾಗ ಮಧ್ಯದಲ್ಲೇ ತಡೆದ ಕನಕಜ್ಜಿ ಬಹಳ ಖುಷಿಯಿಂದ
“ಹೋಗ್ಲಿ ಬಿಡಪ್ಪ, ಹೇಗಿದ್ರು ಹೆಣ್ ಮಗು ಆಗಿದೆ. ನಮ್ಮ ಗಣೇಶನಿಗೆ ಹೆಣ್ ನೋಡೋದೆ ತಪ್ಪುತ್ತೆ. ಸೋದರತ್ತೆ
ಮಗಳು ಕಣ್ಮುಚ್‍ಕೊಂಡು ಮದ್ವೆ ಆಗ್ತಾನೆ” ಎಂದು ಹೇಳುತ್ತಾ ಮಗಳ ಮಗುವನ್ನು ನೋಡುತ್ತಾರೆ. ಒಮ್ಮೆಗೆ
ಎರಡು ಮೊಮ್ಮಕ್ಕಳನ್ನು ನೋಡಿದ ಅಜ್ಜಿ, ತಾತನಿಗೆ ಮಹದಾನಂದವಾಗುತ್ತದೆ.
ಎಲ್ಲರೂ
ಆ ಸಂತಸದ ಸಂಭ್ರಮದಲ್ಲಿ ತೇಲುತ್ತಿದ್ದಾಗ ಪುಟ್ಟಿಯ ಮಗಳು ಯಾಕೋ ಒಂದೇ ಸಮನೆ ಅಳುತ್ತಾಳೆ. ಎಲ್ಲರಿಗೂ
ಗಾಬರಿಯಾಗುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಲೇಡಿ ಡಾಕ್ಟರ್ ಮಗುವನ್ನು ನೋಡಿ, ಪರೀಕ್ಷಿಸಿ “ಪಾಪುಗೆ
ಉಸಿರಾಡೋದಕ್ಕೆ ಸ್ವಲ್ಪ ಕಷ್ಟ ಆಗ್ತಿದೆ. ಅದುಕ್ಕೆ ಐಸಿಯುನಲ್ಲಿ ಇಡ್ತೀವಿ, ನೋಡೋಣ...” ಎಂದು ಹೇಳಿ
ಅಲ್ಲಿದ್ದ ನರ್ಸ್‍ನ ಸಹಾಯದಿಂದ ಪಾಪುವನ್ನು ತೆಗೆದುಕೊಂಡು ಹೊರಗೆ ಹೋಗುತ್ತಾ, “ಏನೂ ಹೆದರ್ಕೊಬೇಡಿ.
ಸ್ವಲ್ಪ ಹೊತ್ತು ಎಲ್ಲಾ ಸರಿಯಾಗುತ್ತೆ” ಎಂದು ಹೇಳಿ ಭಯಗೊಂಡ ಎಲ್ಲರಿಗೂ ಧೈರ್ಯ ತುಂಬುತ್ತಾರೆ. ಹರೀಶನೂ
ಪ್ರಸನ್ನನೂ ಡಾಕ್ಟರ್‍ರ ಹಿಂದೆಯೇ ಹೋಗುತ್ತಾರೆ. ಕನಕಜ್ಜಿ ಮತ್ತು ರುದ್ರಪ್ರಸಾದ್ ಪುಟ್ಟಿಯನ್ನು
ಸಂತೈಸಲು ಪ್ರಯತ್ನಿಸುತ್ತಾರೆ.
*
ಸ್ವಲ್ಪ
ಹೊತ್ತಿಗೇನೆ ಜನರಲ್ ವಾರ್ಡ್‍ಗೆ ಹರೀಶ ಮತ್ತು ದುಃಖದಿಂದ ಬಸವಳಿದ ಪ್ರಸನ್ನ ಲೇಡಿ ಡಾಕ್ಟರೊಂದಿಗೆ
ಹಿಂದಿರುಗುತ್ತಾರೆ.
“I am sorry
ಪುಟ್ಟಿ. ನಿಮ್ಮ ಪಾಪು ಉಳಿಸೋಕೆ ಆಗ್ಲಿಲ್ಲ”
ಎಂದು ಲೇಡಿ ಡಾಕ್ಟರ್ ತಮ್ಮ ಕರ್ತವ್ಯದ ಮಾತುಗಳನ್ನಾಡುತ್ತಾರೆ.
ಇದನ್ನು
ಕೇಳಿದ ಪುಟ್ಟಿ ಜೋರಾಗಿ ಅಳುತ್ತಾಳೆ. ಅಳುವನ್ನು ತಡೆದುಕೊಂಡು ಬಂದ ಪ್ರಸನ್ನನಿಗೆ ಅಳು ಮತ್ತೆ ಒತ್ತರಿಸಿ
ಬರುತ್ತದೆ. ಈಗಷ್ಟೇ ಅರಳಿದ್ದ ಹೂವೊಂದು ಇನ್ನಿಲ್ಲವಾಗಿ ಎಲ್ಲರೂ ದುಃಖದಿಂದ ಕೂಡುತ್ತಾರೆ. ಪುಟ್ಟ
ಗಣೇಶನೂ ಅಳುತ್ತಾನೆ.
***
ಗೆಳೆಯರ ಕಾಫೀ ಕೂಟ
ಕಾಫೀ #2
“ಅಯ್ಯೋ!...
ಅದೇನೋ ಸರಿ. ಆದ್ರೆ ಹುಟ್ಟಿದ ದಿನಾನೇ ನಿಮಗೆ ಇದೆಲ್ಲಾ ತಿಳಿಯೋಕೆ ಹೇಗ್ ಸಾಧ್ಯ?” ಎಂದು ಕಣ್ಣಲ್ಲಿ
ನೀರು ತುಂಬಿಕೊಂಡ ಗಣೇಶನನ್ನು ಅಖಿಲಾ ಪ್ರಶ್ನಿಸುತ್ತಾಳೆ.
“ಅದರಲ್ಲೇನೂ
ವಿಸ್ಮಯ ಇಲ್ಲ ಕಣ್ರೀ. ನಮ್ಮಜ್ಜಿ ಈ ಹಿಂದೆ ಇದನ್ನು ನನಗೆ ಹೇಳಿದ್ರು. ಯಾಕೆ ಹೇಳುದ್ರೋ ಗೊತ್ತಿಲ್ಲ.
ಬಹುಷಃ ಯಾವುದೋ ಕಥೆ ಹೇಳ್ತೀನಿ ಅಂತಾ ಹೇಳಿರ್ಬೇಕು ಅಷ್ಟೆ. ಆ ಮಗು ಮುಖದಲ್ಲಿದ್ದ ನಗು ತುಂಬಾ ಚೆನ್ನಾಗಿತ್ತು
ಅಂತಾ ಅಜ್ಜಿ ಹೇಳ್ತಾ ಇದ್ದರು” ಎಂದು ಗಣೇಶ ಹೇಳಿ, ವೈಟರ್‍ಗೆ ಸನ್ನೆ ಮಾಡಿ ಕರೆಯುತ್ತಾನೆ. ವೈಟರ್
ಬರುತ್ತಾನೆ. ಅವನಿಗೆ, “ಮತ್ತೆರಡು ಕಾಫೀ” ಎಂದು ಹೇಳುತ್ತಾನೆ. ತಲೆಯಾಡಿಸಿ ವೈಟರ್ ಹೋಗುತ್ತಾನೆ.
“ಪರವಾಗಿಲ್ಲ
ಕಣ್ರೀ. ಇವತ್ತಿಗೂ ಆ ಕಥೆ ಎಷ್ಟ್ ಚೆನ್ನಾಗಿ ಜ್ಞಾಪಕದಲ್ಲಿಟ್ಟು ಕೊಂಡಿದ್ದೀರಾ!”
“ಮತ್ತೆ
ಅದ್ಹೇಗೆ ಮರೆಯೋಕಾಗುತ್ತೆ. ಎಷ್ಟೇ ಆದರೂ ಅತ್ತೆ ಮಗಳು!”
ಇಬ್ಬರೂ
ನಗುತ್ತಾರೆ. ಎರಡನೆಯ ಕಾಫೀ ಬರುತ್ತದೆ. ಕಾಫೀ ತೆಗೆದುಕೊಳ್ಳುತ್ತಾರೆ.
“ಮುಂದೆ...?”
ಕುತೂಹಲ ತಡೆಯಲಾಗದ ಅಖಿಲಾ ಕೇಳುತ್ತಾಳೆ.
“ನಾ
ಏಳನೇ ಕ್ಲಾಸಿನಲ್ಲಿದ್ದಾಗ, ನಮ್ಮನೆ ಹತ್ತಿರಾನೇ ಇರೋ ಟ್ಯೂಷನ್‍ಗೆ ಹೋಗ್ತಿದ್ದೆ. ಅಲ್ಲಿಗೆ ಹುಡುಗರಿಗಿಂತ
ಜಾಸ್ತಿ ಹುಡುಗಿಯರೇ ಬರ್ತಿದ್ರು.”
***
ಟ್ಯೂಷನ್ ಮನೆಯ
ವಟವಟ
ಟ್ಯೂಷನ್‍ನಲ್ಲಿ
ಕೆಲವು ಹನ್ನೊಂದು ಹನ್ನೆರಡು ವರ್ಷದ ಹುಡುಗರು, ಅನೇಕ ಹುಡುಗಿಯರು ಮಾತಾಡುತ್ತ ಟೀಚರ್ ಬರುವುದನ್ನೇ
ಕಾಯುತ್ತಾ ಕುಳಿತಿದ್ದಾರೆ. ಗಣೇಶನೂ ಇದ್ದಾನೆ.
“ಏ!
ನಾನೊಂದು ಪ್ರಶ್ನೆ ಕೇಳ್ತಿನಿ ಉತ್ತರ ಹೇಳ್ತೀರಾ?” ಎಂದು ಅದಾಗಲೇ ತನ್ನ ಮಾತಿನಿಂದಲೇ ಖ್ಯಾತಳಾಗಿದ್ದ,
ವಟವಟ ವನಜಾಕ್ಷಿ ಎಂದೇ ಬಿರುದಾಂಕಿತಳಾಗಿದ್ದ ವನಜಾಕ್ಷಿ ಕೇಳುತ್ತಾಳೆ.
“ಆಯ್ತು
ಕೇಳೇ... ಬೇಗ ಕೇಳೇ ಟೀಚರ್ ಬರ್ತಾರೆ.” ಎಂದು ಹುಡುಗರು ಹುಡುಗಿಯರು ಒಟ್ಟಾಗಿ ಹೇಳುತ್ತಾರೆ.
“ರೈಲು
ಬರುವಾಗ ನಾವು ಹಳಿ ದಾಟೋ ಹತ್ತಿರ ಗೇಟ್ ಯಾಕೆ ಹಾಕ್ತಾರೆ?” ಎಂದು ವನಜಾಕ್ಷಿಯ ನಾಲಿಗೆಯ ತುದಿಯಲ್ಲಿದ್ದ
ಪ್ರಶ್ನೆ ಹೊರಬರುತ್ತದೆ.
ಹುಡುಗ
ಹುಡುಗಿಯರೆಲ್ಲರೂ ಗಲಿಬಿಲಿಯಲ್ಲಿ ಉತ್ತರಕ್ಕಾಗಿ ಯೋಚಿಸುವಾಗ, ಗಣೇಶ ನಗುತ್ತಾ, “ಅಯ್ಯೋ ಇದೆಂಥಾ ಪ್ರಶ್ನೆ.
ವೆರಿ ಸಿಂಪಲ್. ರೈಲ್ ಬರೋವಾಗ ಗೇಟ್ ಯಾಕಪ್ಪ ಹಾಕ್ತಾರೆ ಅಂದ್ರೆ ರೈಲು ಊರೊಳಗೆ ಬಂದ್ಬುಡುತ್ತೆ ಅಂತ”
ಎಂದು ತಕ್ಷಣ ಹೇಳಿ ಎಲ್ಲರನ್ನು ನಗಿಸುತ್ತಾನೆ.
ಎಲ್ಲರೂ
ಜೋರಾಗಿ ನಗುತ್ತಾರೆ. ವನಜಾಕ್ಷಿಗೆ ಅವಮಾನವಾದಂತಾಗುತ್ತದೆ. “ವೆರಿ ಸಿಂಪಲ್ ಪ್ರಶ್ನೆನ. ಹಾಗಾದ್ರೆ
ನೀನೆ ಏನಾದ್ರು ಪ್ರಶ್ನೆ ಕೇಳು ನೋಡೋಣ?” ಎಂದು ಗಣೇಶನನ್ನು ಕೇಳುತ್ತಾಳೆ.
“ನಾ
ಕೇಳೋ ಪ್ರಶ್ನೆಗೆ ಯಾರೂ ಉತ್ತರ ಕೊಡೋಕೆ ಆಗಲ್ಲ. ಕೇಳ್ಲಾ?” ಎಂದ ಗಣೇಶನ ಚಾಲೆಂಜಿಗೆ, “ಕೇಳು ನೋಡೋಣ”
ಎಂಬ ಮರು ಚಾಲೆಂಜ್ ವನಜಾಕ್ಷಿಯಿಂದ ಬರುತ್ತದೆ.
“ಆನೇನ
ಫ್ರಿಜ್ಡ್‍ನಲ್ಲಿ ಹೇಗಪ್ಪ ಇಡೋದು?”
ಎಲ್ಲರೂ
ಬಹಳ ಯೋಚಿಸುತ್ತಾರೆ.
“ಇದೆಂಥಾ
ಪ್ರಶ್ನೆನಪ್ಪ! ಫ್ರಿಜ್ಡ್‍ನಲ್ಲಿ ಎಲ್ಲಾದ್ರು ಆನೆ ಇಡೋಕಾಗುತ್ತ!” ಎಂದು ಕೋಪಗೊಂಡ ವನಜಾಕ್ಷಿ, ಉತ್ತರ
ಕೊಡದೆ ಪ್ರಶ್ನೆಯನ್ನೇ ಪ್ರಶ್ನಿಸುತ್ತಾಳೆ.
“ಯಾಕಾಗಲ್ಲ.
ಫ್ರಿಜ್ಡ್ ಬಾಗಿಲು ತೆಗೆಯೋದು. ಆನೇನಾ ಒಳ್ಗಡೆ ಇಡೋದು ಅಷ್ಟೆ” ಎಂದು ಗಣೇಶ ತಟ್ಟನೆ ಉತ್ತರಿಸಿ ಎಲ್ಲರನ್ನೂ
ನಗಿಸುತ್ತಾನೆ.
“ಆಹಾ!
ಎಂಥಾ ಜೋಕು” ಎಂದು ವನಜಾಕ್ಷಿ ಆಡಿಕೊಳ್ಳುತ್ತಾಳೆ.
“ಇನ್ನೊಂದು
ಪ್ರಶ್ನೆ” ಎಂದು ಗಣೇಶ ಮತ್ತೆ ಕೇಳುತ್ತಾನೆ.
“ಕೇಳು
ಕೇಳು. ಈ ಸರ್ತಿ ಖಂಡಿತಾ ಉತ್ತರ ಹೇಳ್ತೀನಿ” ಎಂದು ವನಜಾಕ್ಷಿ ಮತ್ತೆ ಸವಾಲೊಡ್ಡುತ್ತಾಳೆ.
“ಜಿರಾಫೆನ
ಫ್ರಿಜ್ಡ್‍ನಲ್ಲಿ ಹೇಗಪ್ಪ ಇಡೋದು?”
ಹಿಂದೆ
ಮುಂದೆ ಯೋಚಿಸಿದ ವನಜಾಕ್ಷಿ, “ಅದೇ, ಫ್ರಿಜ್ಡ್ ಬಾಗಿಲು ತೆಗೆಯೋದು ಜಿರಾಫೆನ ಒಳಗಡೆ ಇಡೋದು. ಅಷ್ಟೆ.
ಅಲ್ಲವಾ?” ಎಂದು ಒಂದೇ ಉಸಿರಿಗೆ ಹೇಳಿಬಿಡುತ್ತಾಳೆ.
ಗಣೇಶ
ಜೋರಾಗಿ ನಗುತ್ತಾ, “ಅಲ್ಲಾ ಕಣೆ. ಫ್ರಿಜ್ಡ್ ಒಳ್ಗಡೆ ಆನೆ ಇರಲ್ವ? ಮೊದ್ಲು ಆನೇನ ಹೊರಗಡೆ ತೆಗೆದು,
ಆಮೇಲ್ ತಾನೆ ಜಿರಾಫೆನ ಇಡ್ಬೇಕು” ಎಂದು ವನಜಾಕ್ಷಿಗೆ ಹೇಳುತ್ತಾನೆ.
ಎಲ್ಲರೂ
ನಗುತ್ತಿರುವಾಗ ವನಜಾಕ್ಷಿಗೆ ಮತ್ತೆ ಅವಮಾನವಾದಂತಾಗುತ್ತದೆ.
ವನಜಾಕ್ಷಿ
ತುಸು ಕೋಪದಿಂದ, “ಆಯ್ತು ಬಿಡೋ... ನಾ ನಿನ್ನ ಕೈಯಲ್ಲಿ ಇಂದ್ರ ಅಂತಾ ಹೇಳುಸ್ಲ?”
“ನಿನ್
ಕೈಯಲ್ಲಿ ಆಗೋಲ್ಲ ಬಿಡೆ”
“ಕೈಯಲ್ಲಿ
ಅಲ್ಲಾ ಕಣೋ, ಬಾಯಲ್ಲಿ ಹೇಳುಸ್ತಿನಿ.”
“ಚಾಲೆಂಜ್...
ಹೇಳ್ಸು ನೋಡೋಣ”
“ಆಕಾಶದಲ್ಲಿ
ಏನೇನಿರುತ್ತಪ್ಪಾ?”
“ಆಕಾಶದಲ್ಲಿ...
ಬೆಳಿಗ್ಗೆ ಹೊತ್ತು ಸೂರ್ಯ, ರಾತ್ರಿ ಹೊತ್ತು ಚಂದ್ರ, ನಕ್ಷತ್ರಗಳು ಇರ್ತಾವಪ್ಪ”
“ನೋಡಿದ್ಯ
ಚಂದ್ರ ಅಂತಾ ಹೇಳುಸ್ದೆ”
“ಅಯ್ಯೋ
ನೀ ಇಂದ್ರ ಅಂತ ಹೇಳುಸ್ತಿನಿ ಅಂತ ಅಲ್ವಾ ಹೇಳಿದ್ದು”
ವನಜಾಕ್ಷಿ
ಜೋರಾಗಿ ನಗುತ್ತಾ, “ಅದುನ್ನೆ ಈಗ ಹೇಳುದ್ಯಲ್ಲ... ಹ್ಹ ಹ್ಹ ಹ್ಹ” ಎಂದು ಸಂತೋಷದಿಂದ ಬೀಗುತ್ತಾ ತನಗಾದ
ಅವಮಾನವನ್ನು ಸರಿಮಾಡಿಕೊಂಡಂತೆ ನಗುತ್ತಾಳೆ.
ಗಣೇಶ
ಪೆಚ್ಚುಮೋರೆ ಹಾಕುತ್ತಾನೆ. ಅದಾಗ ಅಲ್ಲಿಗೆ ಟೀಚರ್ ಬರುತ್ತಾರೆ. ಎಲ್ಲರೂ ಸೈಲೆಂಟಾಗಿ ಕೂಡುತ್ತಾರೆ.
“ಆಹಾ!
ಎಲ್ರೂ ನಾ ಬರೋದು ತಡ ಆಯ್ತು ಅಂದ್ರೆ ಲಬ್ಬೊ ಅನ್ತೀರಲ್ಲಾ. ಸರಿ ಸರಿ ಪಾಠ ತೆಗಿರಿ. ವಿಜ್ಞಾನ, ನೆನ್ನೆ
ಯಾವ ಪಾಠ ಮಾಡಿದ್ದೆ” ಎಂದು ರಾಮಣ್ಣ ಮಾಸ್ಟರು ಕೋಪದಿಂದಲೇ ಹೇಳುತ್ತಾರೆ.
“Digestive System ಸರ್” ಎಂದು ಅವರೊಲ್ಲಬ್ಬ ಹುಡುಗ ಹೇಳುತ್ತಾನೆ.
“ವೆರಿ
ಗುಡ್ ಎಲ್ಲಿ, ಎಲ್ಲೋ ನೀ ಹೇಳು “Digestive System ಹೇಗ್ ವರ್ಕ್ ಆಗುತ್ತೆ” ಎಂದು ಅಲ್ಲಿದ್ದ ಇನ್ನೊಬ್ಬ ಹುಡುಗನನ್ನು ಕೇಳುತ್ತಾರೆ.
“ಸಾರ್...
ಅದೂ ... ಅದೂ... ಬಲಗೈಯಲಿ ಶುರುವಾಗಿ ಎಡಗೈಯಲ್ಲಿ ಮುಗಿಯುತ್ತೆ” ಎಂದು ಆ ತರಲೆ ಹುಡುಗ ಉತ್ತರ ನೀಡುತ್ತಾನೆ.
ಇವನ ಉತ್ತರದಿಂದ ಎಲ್ಲರಿಗೂ ನಗು ಬರುತ್ತದೆ. ಟೀಚರ್‍ಗಂತೂ ಅಸಾಧ್ಯ ಕೋಪ ಬರುತ್ತದೆ.
“ಏ!
ಸುಮ್ನೆ ಕೂತ್ಕಳ್ರೋ” ಎಂದು ಎಲ್ಲರಿಗೂ ಗದರಿ, ಆ ತರಲೆ ಹುಡುಗನಿಗೆ “ತರ್ಲೆ ತಗಂಬಂದು” ಎಂದು ಹೇಳಿ
ಅಲ್ಲಿದ್ದ ಕೋಲನ್ನು ತೆಗೆದುಕೊಂಡು ಎರೆಡೆಟು ಹಾಕುತ್ತಾರೆ.
ಇತ್ತ
ಟೀಚರ್ ಹೊಡೆಯುವುದರಲ್ಲಿ ಬ್ಯುಸಿಯಾದಾಡೊನೆ ಅತ್ತ ವನಜಾಕ್ಷಿ ತನ್ನ ಗೆಳತಿಯೊಬ್ಬಳ ಜೊತೆ ಪಿಸು ಪಿಸು
ಮಾತನಾಡುತ್ತಿರುವುದನ್ನು ಗಮನಿಸಿದ ಗಣೇಶ ತನ್ನ ಗೆಳಯನಿಗೆ ಪಿಸುಮಾತಿನಲ್ಲಿ, “ಲೋ, ಏನೋ, ಅವಳು ವಟವಟ
ಅಂತ ಮಾತಾಡ್ತನೆ ಇರ್ತಾಳೆ” ಎಂದು ಕೇಳುತ್ತಾನೆ.
ಗಣೇಶನ
ಗೆಳೆಯನೂ ಪಿಸುಮಾತಿನಲ್ಲಿ, “ಅದುಕ್ಕೆ ಕಣೋ ಅವಳನ್ನ ವಟವಟ ವನಜಾಕ್ಷಿ ಅಂತಾ ಕರೆಯೋದು” ಎಂದು ಉತ್ತರಿಸುತ್ತಾನೆ.
ಇವರ
ಪಿಸು ಮಾತನ್ನು ಗಮನಿಸಿದ ಟೀಚರ್ ಗಣೇಶನಿಗೆ, “ಏ ಗಣೇಶ ಏನೋ ಅದು ಮಾತಾಡೋದು. ಎಲ್ಲಿ ನೋಡನ 2, 4,
6, 8 ಈ ನಂಬರ್‍ಗಳ ಸಿಮಿಲಾರಿಟಿ ಏನು ಹೇಳು?” ಎಂದು ಪಾಠದ ವಿಷಯವನ್ನೇ ಬದಲು ಮಾಡುತ್ತಾರೆ.
ಗಣೇಶ
ತಟ್ಟನೆ “2 ಪೋಗೊ, 4 ಕಾರ್ಟೂನ್ ನೆಟ್‍ವರ್ಕ್, 6 ಡಿಸ್ಕವರಿ ಚಾನೆಲ್, 8 ಟೆನ್‍ಸ್ಪೋಟ್ರ್ಸ್, 10
. . .” ಎಂದು ಹೇಳುತ್ತಿದ್ದಂತೆ ಅಷ್ಟಕ್ಕೆ ಅವನನ್ನು ಟೀಚರ್ ತಡೆಯುತ್ತಾ, “ಸಾಕಪ್ಪ ಸುಮ್ನಿರು ಛಾನಲ್
ದೊರೆ. ಇವತ್ಯ್ತಾಕೋ ಎಲ್ರೂ ಜಾಲಿ ಮೂಡಲಿದ್ದೀರ. ಎಲ್ರೂ ಮನೆಗ್ಹೋಗಿ. ನನಗೆ ಸ್ವಲ್ಪ ಕೆಲ್ಸ ಇದೆ.
ನಾಳೆ ಅರ್ಧಗಂಟೆ ಜಾಸ್ತಿ ತಗೋತಿನಿ” ಎಂದು ಹೇಳಿ ಎಲ್ಲರನ್ನೂ ಅಲ್ಲಿಂದ ಅಟ್ಟುತ್ತಾರೆ.
ಎಲ್ಲರೂ
ಖುಷಿಯಿಂದ ಎದ್ದು ಹೊರಡುತ್ತಾರೆ. ವನಜಾಕ್ಷಿ ಗಣೇಶನ ಕಡೆಗೆ ತಿರುಗಿ ಏನನ್ನೋ ವಟಗುಟ್ಟುತ್ತಾಳೆ. ಗಣೇಶ
ನಗುತ್ತಾನೆ.
*
ಟ್ಯೂಷನ್
ಮನೆಯಲ್ಲಿ ಸಂಕ್ರಾಂತಿ ಹಬ್ಬದ ವಾತಾವರಣ. ಮನೆಯವರು ಒಳಗೂ-ಹೊರಗೂ ಓಡಾಡುತ್ತಾ ಹಬ್ಬದ ಸಂಭ್ರಮದಲ್ಲಿದ್ದರೆ,
ಟೀಚರ್ ಒಂದು ಕಡೆ ಕೂತಿದ್ದಾರೆ. ಅವರ ಟ್ಯೂಷನ್ನಿನ ಹುಡುಗ-ಹುಡುಗಿಯರು ಒಬ್ಬಬ್ಬರೇ ಬಂದು ಎಳ್ಳು-ಬೆಲ್ಲವನ್ನು
ಗುರುಗಳಿಗೆ ನೀಡಿ ಆಶೀರ್ವಾದ ಪಡೆದು ಹೋಗುತ್ತಿದ್ದಾರೆ. ಅದಾಗ ಅಲ್ಲಿಗೆ ಗಣೇಶ, ಆತನ ಗೆಳೆಯರು ಮತ್ತು
ವನಜಾಕ್ಷಿ, ಆಕೆಯ ಗೆಳತಿಯರು ಬರುತ್ತಾರೆ. ಎಲ್ಲರೂ ಹೊಸ ಬಟ್ಟೆಗಳಲ್ಲಿ ಮಿಂಚುತ್ತಿದ್ದಾರೆ. ಎಲ್ಲರೂ
ಗುರುಗಳ ಬಳಿ ಬಂದು ಆಶೀರ್ವಾದ ಪಡೆಯುತ್ತಾರೆ.
“ಎಲ್ಲರಿಗೂ
ಸಂಕ್ರಾಂತಿ ಹಬ್ಬದ ಶುಭಾಶಯಗಳು. ಆ ದೇವರು ನಿಮಗೆಲ್ಲಾ ಒಳ್ಳೆಯದು ಮಾಡಲಿ. ಪರೀಕ್ಷೆ ಹತ್ರ ಬರ್ತಿದೆ.
ನಿಮ್ಮೆಲ್ಲಾ ತರ್ಲೆಗಳನ್ನು ಬಿಟ್ಟು ಚೆನ್ನಾಗಿ ಓದಿಕೊಳ್ಳಿ” ಎಂದು ಟೀಚರ್ ನಗುತ್ತಲೇ ಹೇಳುತ್ತಾರೆ.
“ಆಯ್ತು
ಸಾರ್. ನಿಮಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು” ಎಂದು ಎಲ್ಲಾ ಹುಡುಗರು ಒಟ್ಟಿಗೆ ಹೇಳಿ ಅಲ್ಲಿಂದ ತೆರಳುತ್ತಾರೆ.”
*
ಹದಿನೈದು
ಹದಿನಾರು ವರ್ಷದ ಹುಡುಗ-ಹುಡುಗಿಯರು ಹೈಸ್ಕೂಲಿನ ಮುಂಭಾಗದಲ್ಲಿ ಸಂತೋಷದಿಂದ ಮಾತನಾಡುತ್ತಾ ಶಾಲೆಯ
ಕಡೆಗೆ ಬರುತ್ತಿರುತ್ತಾರೆ. ಅಲ್ಲಿಗೆ ಹೊಸಬರಂತೆ ಕಾಣುವ ಹಲವು ಹುಡುಗರು-ಹುಡುಗಿಯರೂ ಇರುತ್ತಾರೆ.
ತರಾತುರಿಯುಲ್ಲಿ ಅಲ್ಲಿಗೆ ಬಂದ ಗಣೇಶ ಗೆಳೆಯರನ್ನು ಗುರುತು ಹಿಡಿದು ಮಾತಾನಾಡಿಸುತ್ತಾ, ಕೆಲವು ಗೆಳತಿಯರನ್ನೂ
ಮಾತನಾಡಿಸುತ್ತಾನೆ. ಆದರೂ ಯಾರನ್ನೋ ಹುಡುಕುವಂತೆ ಕಾಣುತ್ತಾನೆ. ಇದನ್ನು ಗಮನಿಸಿದ ಅವನ ಗೆಳೆಯನೊಬ್ಬ,
“ಏನೋ ಗಣೇಶ... ಯಾರನ್ನೋ ಹುಡುಕ್ತಿದ್ದೀಯ?” ಎಂದು ಕೇಳುತ್ತಾನೆ.
“ನಂಜೊತೆ
ಏಳನೇ ಕ್ಲಾಸ್‍ನಲ್ಲಿ ಟ್ಯೂಷನ್‍ಗೆ ಬರ್ತಿದೋವ್ರೆಲ್ಲಾ ಇದೇ ಹೈಸ್ಕೂಲಿಗೆ ಸೇರಿದ್ದಾರೆ. ಆದರೆ ವಟವಟ
ವನಜಾಕ್ಷಿ...?” ಎಂದು ಅವನನ್ನು ಕೇಳುತ್ತಾ ಗಣೇಶ ಮತ್ತೆ ಆ ಗುಂಪಿನಲ್ಲಿ ವನಜಾಕ್ಷಿಗೆ ಹುಡುಕಾಡುತ್ತಾನೆ.
“ವನಜಾಕ್ಷಿ
ಏನೋ... ಅವ್ಳು ಬೇರೆ ಊರಿಗೆ ಅವರಪ್ಪನಿಗೆ ವರ್ಗ ಆಯ್ತು ಅಂತಾ ರಜದಲ್ಲೇ ಹೊರಟೋದ್ಲು. ನೀ ಆವಾಗ ಊರಲ್ಲಿರಲಿಲ್ಲ
ಅಂತ ಅನ್ಸುತ್ತೆ” ಎಂದು ನಿರ್ಭಾವುಕವಾಗಿ ಹೇಳುತ್ತಾನೆ. ಇದನ್ನು ಕೇಳಿದ ಗಣೇಶನಿಗೆ ಬಹಳ ನಿರಾಸೆಯಾಗುತ್ತದೆ.
ಬೇಜಾರಿನಿಂದ ಶಾಲೆಯ ಒಳಗೆ ಹೋಗುತ್ತಾನೆ.
***
ಗೆಳೆಯರ ಕಾಫೀ ಕೂಟ
ಕಾಫೀ #3
ಗಣೇಶ
ನಿಟ್ಟುಸಿರು ಬಿಡುತ್ತಾ, “ಅವಳ ವಟವಟ ಮಾತುಗಳು ಈಗ್ಲೂನೂ ಕಿವೀಲಿ ವಟಗುಟ್ತಾ ಇದೆ ಕಣ್ರೀ” ಎಂದು ಅಖಿಲಾಳನ್ನು
ನೋಡುತ್ತಾನೆ.
“Fantastic!” ಎಂಬ ಉದ್ಗಾರ ಅಖಿಲಾಳಿಂದ ಬರುತ್ತದೆ.
“ಅವಳಿಗೆ
ನಂಬರ್ ಎರಡು ಫೇವರೆಟ್. ನಂ.2 ಅಂತ ಆಡ್ಕೊಳ್ತಿದೆ. ನಂಗೆ ನಂಬರ್ 7 ಫೇವರೆಟ್. ಏಳು-ಬೀಳು ಅಂತ ಆಡ್ಕೋಳೋಳು.
ಹೇಳ್ದೆ-ಕೇಳ್ದೆ ಹೋಗ್ಬುಟ್ಳು” ಎಂದು ಬಹಳ ನೊಂದುಕೊಂಡವನಂತೆ ಹೇಳುತ್ತಾನೆ.
ಇವನನ್ನೇ
ನೋಡುತ್ತಾ ಕುಳಿತಿದ್ದ ಅಖಿಲಾ ನೋ ಕಾಮೆಂಟ್ಸ್ ಎಂಬಂತೆ ನೋಡಲು, ಗಣೇಶ ವೈಟರ್ ಕಡೆ ತಿರುಗಿ ಮತ್ತೆರಡು
ಕಾಫೀ ತರಲು ಸಂಜ್ಞೆ ಮಾಡುತ್ತಾನೆ.
“ನಿಮ್
ಸೋದರತ್ತೆ ಮಗಳದು ಸ್ಪೆಷಲ್ ಸ್ಮೈಲ್, ವಟವಟ ವನಜಾಕ್ಷಿದು ಏನ್ ಸ್ಪೆಷಲ್?” ಎಂದು ಅಖಿಲಾ ಸ್ವಲ್ಪ ಛೇಡಿಸುವ
ಧ್ವನಿಯಲ್ಲಿಯೇ ಕೇಳುತ್ತಾಳೆ.
“ಮಾತು!
ಮಾತು ಕಣ್ರೀ. ಅವಳು ಮಾತಾಡ್ತ ಇದ್ದರೆ ಕೇಳ್ತಾನೆ ಇರೋಣ ಅನ್ಸೋದು” ಎಂದು ಗಣೇಶ ಮತ್ತೆ ಅವಳ ನೆನಪಿಗೆ
ಜಾರುವಷ್ಟರಲ್ಲಿ ಮೂರನೆಯ ಕಾಫೀ ಬರುತ್ತದೆ.
“ಕಾಫೀ
ತುಂಬಾ ಜಾಸ್ತಿ ಆಯ್ತೆನೋ” ಎಂದು ಅಖಿಲಾ ಆತಂಕದಿಂದ ನುಡಿಯುತ್ತಾಳೆ.
“ಸ್ವಲ್ಪ
ಸ್ವಲ್ಪ ತಗಳೋದ್ರಿಂದ ಏನೂ ಆಗಲ್ಲ. ನನಗೆ ಕಥೆ ಓದ್ಬೇಕು ಅಂದ್ರೆ, ಕಥೆ ಹೇಳ್ಬೇಕು ಅಂದರೆ ಕಾಫೀ ಬೇಕೇ
ಬೇಕು” ಎಂದು ಹೇಳುತ್ತಾನೆ.
“ಓಕೆ
ಓಕೆ. ನಿಮ್ಮಿಷ್ಟಾನೇ ನನ್ನಿಷ್ಟ” ಎಂದು ಅಖಿಲಾಳು ಸಹಮತ ವ್ಯಕ್ತಪಡಿಸಿ, “ಮುಂದೇನಾಯ್ತು ಗಣೇಶ್?”
ಎಂದು ಕೇಳುತ್ತಾಳೆ.
“ಮುಂದೆ
ನಾ ಹೈಸ್ಕೂಲಲ್ಲಿ ಒಂಭತ್ತನೆ ಕ್ಲಾಸಿನಲ್ಲಿರೋವಾಗ”
***
ಖೋ ಖೋ
ಅಮರಗೊಂಡದ
ವಿಶಾಲ ಆಟದ ಮೈದಾನದಲ್ಲಿ ಅಂತರಶಾಲಾ ಪಂದ್ಯಾವಳಿಗಳು ನಡೆಯುತ್ತಿರುತ್ತದೆ. ಗಣೇಶನ ಟೀಂ ಖೋಖೋ ಪಂದ್ಯವನ್ನಾಡುತ್ತಿರುತ್ತದೆ.
ಸುತ್ತಲೂ ಹುಡುಗ ಹುಡುಗಿಯರು ಕುಳಿತು ಆಟ ನೋಡುತ್ತಿರುತ್ತಾರೆ. ಗಣೇಶ ಚೆನ್ನಾಗಿ ಆಡಿ ಅವನ ಟೀಂ ಪಂದ್ಯ
ಗೆಲ್ಲುತ್ತದೆ. ಎಲ್ಲರೂ ಅವನ ತಂಡವನ್ನು ಅಭಿನಂದಿಸುತ್ತಾರೆ. ಹೊರಡಲು ಅನುವಾಗುತ್ತಾರೆ.
ಅದಾಗ
ಒಂದು ಅನೌನ್ಸ್^ಮೆಂಟ್ ಕೇಳಿಸುತ್ತದೆ, “ಮುಂದಿನ ಪಂದ್ಯ ಬಾಲಕಿಯರದು. ಸರ್ಕಾರಿ ಪ್ರೌಢಶಾಲೆ ವರ್ಸಸ್
ಹೊಂಗಿರಣ ಹೈಸ್ಕೂಲ್.”
ಹೊರಡಲು
ಅನುವಾಗುತ್ತಿದ್ದ ಹುಡುಗರೆಲ್ಲರೂ ಬಾಲಕಿಯರ ಪಂದ್ಯವೆಂದ ತಕ್ಷಣ ಅಲ್ಲೇ ಕೂಡುತ್ತಾರೆ. ಪಂದ್ಯ ಶುರುವಾಗುತ್ತದೆ.
ಸರ್ಕಾರಿ ಪ್ರೌಢಶಾಲೆಯವರದು ಮೊದಲಿಗೆ ಛೇಸಿಂಗ್. ಗಣೇಶನ ಸರ್ಕಾರಿ ಪ್ರೌಢಶಾಲೆಯ ಹುಡುಗಿಯೊಬ್ಬಳು ತುಂಬಾ
ಚೆನ್ನಾಗಿ ಛೇಸ್ ಮಾಡಿ ಎದುರಾಳಿ ತಂಡದವರನ್ನು ಔಟ್ ಮಾಡುತ್ತಿರುತ್ತಾಳೆ. ಪ್ರೇಕ್ಷಕರ ಕಡೆಯಿಂದ ಚಪ್ಪಾಳೆಗಳ
ಸುರಿಮಳೆಯಾಗುತ್ತಿರುತ್ತದೆ. ಇವಳನ್ನೇ ಗಮನಿಸುವ ಗಣೇಶ ಅವನ ಗೆಳೆಯನನ್ನು ಕೇಳುತ್ತಾನೆ.
“ಲೋ...
ಯಾರೋ ಇವ್ಳು, ಜಿಂಕೆಮರಿ ಥರಾ ಓಡ್ತಾಳಲ್ಲೋ...” ಎಂದು ಗಣೇಶ ಆಶ್ಚರ್ಯದಿಂದ ಕೇಳಲು, “ಅವಳು ಸಲ್ಮಾ
ಅಂತ ಕಣೋ ಗಣೇಶ. ಈ ಸರ್ತಿ ಎಂಟನೇ ಕ್ಲಾಸು” ಎಂದು ಹೇಳುತ್ತಾನೆ.
“ಹೌದೇನೋ...
ಗೊತ್ತೇ ಇರ್ಲ್ಲಿಲ್ಲ” ಎಂದು ಗಣೇಶ ಆಶ್ಚರ್ಯ ವ್ಯಕ್ತಪಡಿಸುತ್ತಾನೆ.
ಛೇಸಿಂಗ್
ಮುಗಿಯುತ್ತದೆ. ಸರ್ಕಾರಿ ಪ್ರೌಢಶಾಲೆಯ ರೈಡಿಂಗ್ ಶುರುವಾಗುತ್ತದೆ. ಸಲ್ಮಾ ಇನ್ನಿಬ್ಬರ ಜೊತೆ ನಿಂತಿರುತ್ತಾಳೆ.
ಅಂಪೈರ್ ವಿಶಲ್ ಹಾಕಿದ ತಕ್ಷಣ ಆಟ ಶುರುವಾಗುತ್ತದೆ. ಎದುರಾಳಿ ತಂಡದವರು ಸೇಡು ತೀರಿಸುಕೊಳ್ಳುವವರಂತೆ
ಮೊದಲು ಸಲ್ಮಾಳನ್ನೇ ಛೇಸ್ ಮಾಡಲು ಶುರುಮಾಡುತ್ತಾರೆ. ಚಪ್ಪಾಳೆಗಳ ಸುರಿಮಳೆಯಲ್ಲಿ ಎಲ್ಲರ ಗಮನ ಸಲ್ಮಾಳ
ಮೇಲೆ ಇರುತ್ತದೆ. ಗಣೇಶ ಸೀಟಿ ಊದುತ್ತಾ ಜೋರಾಗಿ ಚಪ್ಪಾಳೆ ತಟ್ಟುತ್ತಾ ಸಲ್ಮಾಳನ್ನೇ ನೋಡುತ್ತಾನೆ.
ಸಲ್ಮಾಳೇ ಏಳು ನಿಮಿಷವೂ ಆಡಿಸುತ್ತಾಳೆ. ಲಾಂಗ್ ವಿಶಲ್ ಕೇಳಿದ ಕೂಡಲೇ ಆಟ ಮುಗಿಯುತ್ತದೆ. ಸರ್ಕಾರಿ
ಪ್ರೌಢಶಾಲೆಯ ಬಾಲಕಿಯರು ಸಲ್ಮಾಳಿಂದ ನಿರಾಯಾಸವಾಗಿ ಗೆಲ್ಲುತ್ತಾರೆ. ಎಲ್ಲರೂ ಸಲ್ಮಾಳನ್ನು ಅಭಿನಂದಿಸುತ್ತಾರೆ.
ಗಣೇಶ ಗರಬಡಿದವನಂತೆ ಅವಳನ್ನೇ ನೋಡುತ್ತಾನೆ.
ಇತ್ತ
“ಬಾಲಕಿಯರ 100ಮೀ ಓಟ” ಎಂದು ಅನೌನ್ಸ್^ಮೆಂಟ್ ಕೇಳುತ್ತದೆ. ರನ್ನಿಂಗ್ ರೇಸ್ ಟ್ರಾಕಿನ ಹತ್ತಿರ ಬಂದ
ಗಣೇಶ, ಎಲ್ಲರೂ ನೋಡುತ್ತಿದ್ದಂತೆ ಅಲ್ಲೂ ನಿಂತಿದ್ದ ಸಲ್ಮಾ ಜೋರಾಗಿ ಓಡಿ ಫಸ್ಟ್ ಬರುತ್ತಾಳೆ. ಅಲ್ಲಿಯೇ
ಮುಂದುವರೆದ ಬಾಲಕಿಯರ 200ಮೀ ಓಟ, 400ಮೀ ಓಟ ಎಲ್ಲದರಲ್ಲೂ ಸಲ್ಮಾಳೇ ಫಸ್ಟ್ ಬರುತ್ತಾಳೆ. ರಿಲೇಯಲ್ಲೂ
ಸಲ್ಮಾಳ ಟೀಮೇ ಮೊದಲ ಸ್ಥಾನ ಗಳಿಸುತ್ತದೆ.
*
ಮುಸ್ಸಂಜೆಯಲ್ಲಿ
ಬಹುಮಾನ ವಿತರಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳು, ಶಾಲಾ ಮುಖ್ಯೋಪಾಧ್ಯಾಯರು ವೇದಿಕೆ ಮೇಲೆ ಆಸೀನರಾಗಿರುತ್ತಾರೆ.
ಮುಂದೆ ಸುತ್ತಲೂ ಹುಡುಗರು-ಹುಡುಗಿಯರು ಕುಳಿತಿರುತ್ತಾರೆ. ಪಿ.ಟಿ.ಮಾಸ್ಟರ್ ಲಿಸ್ಟ್ ಹಿಡಿದು ಕೊಂಡು
ಮೈಕಿನ ಬಳಿ ಬರುತ್ತಾರೆ. ಹಲವು ಬಹುಮಾನಗಳನ್ನು ಜೋಡಿಸಿರುತ್ತಾರೆ.
“ಸರ್ಕಾರಿ
ಪ್ರೌಢಶಾಲೆಯ ಬಾಲಕರ ಖೋ-ಖೋ ತಂಡ ಪ್ರಥಮ ಸ್ಥಾನ” ಎಂದು ಅನೌನ್ಸ್^ಮೆಂಟ್ ಕೇಳಿದ ಕೂಡಲೇ ಗಣೇಶನ ಟೀಂ
ಬಹುಮಾನ ತೆಗೆದುಕೊಳ್ಳಲು ಡಯಾಸ್ ಬಳಿಗೆ ಬಂದು ಅತಿಥಿಗಳಿಂದ ಬಹುಮಾನ ಸ್ವೀಕರಿಸುತ್ತದೆ. ಚಪ್ಪಾಳೆಗಳ
ಸುರಿಮಳೆಯಾಗುತ್ತದೆ.
ಪಿ.ಟಿ.ಮಾಸ್ಟರ್
ಮುಂದುವರೆಯುತ್ತಾ, “ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ಖೋ-ಖೋ ತಂಡ ಪ್ರಥಮ ಸ್ಥಾನ” ಎಂದು ಅನೌನ್ಸ್
ಮಾಡಿದ ಕೂಡಲೇ ಸಲ್ಮಾ ಜೊತೆಗೆ ಬಾಲಕಿಯರ ತಂಡವು ಬಹುಮಾನ ತೆಗೆದುಕೊಳ್ಳುತ್ತದೆ. ಹುಡುಗರ ಚಪ್ಪಾಳೆಗಳ
ಸುರಿಮಳೆಗಳ ಜೊತೆಗೆ ಗಣೇಶ ಜೋರಾಗಿ ಚಪ್ಪಾಳೆ ಹೊಡೆಯುತ್ತಾನೆ.
ಮುಂದುವರೆದ
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಥ್ಲೆಟಿಕ್ಸ್ ಪ್ರಶಸ್ತಿಗಳು ಎಲ್ಲವೂ ಸಲ್ಮಾಳ ಪಾಲಾಗುತ್ತವೆ. ಸಲ್ಮಾ
ಓಡೋಡಿ ಬಂದು ಬಹುಮಾನ ತೆಗೆದುಕೊಳ್ಳುತ್ತಾಳೆ. ಗಣೇಶ ಅವಳನ್ನೇ ನೋಡುತ್ತಾ ಚಪ್ಪಾಳೆ ಹೊಡೆಯುತ್ತಾನೆ.
ಅವಳು ವಾಪಸ್ಸು ಬರುವಾಗಲೂ ಗಣೇಶ ಅವಳನ್ನೇ ನೋಡುತ್ತಾ ಇರುತ್ತಾನೆ.
*
ಮರುದಿನ
ಸಂಜೆ ನಿರ್ಜನವಾದ ರಸ್ತೆಯಲ್ಲಿ ಗಣೇಶ ಒಬ್ಬನೇ ಖುಷಿಯಿಂದ ಹಾಡುತ್ತಾ ಬರುತ್ತಿರುತ್ತಾನೆ. ಆಗ ಇದ್ದಕ್ಕಿದ್ದಂತೆ
ಅವನ ಮುಂದೆ ಹುಡುಗನೊಬ್ಬ ಪ್ರತ್ಯಕ್ಷನಾಗುತ್ತಾನೆ. ಗಣೇಶನ ದಾರಿಗೆ ಅಡ್ಡಲಾಗಿ ನಿಂತು, “ಏನೋಲೇ...
ಮೊನ್ನೆಯಲ್ಲಾ ಇಸ್ಪೋಟ್ಸ್ ನಡೆವಾಗ ನಮ್ದುಕೆ ಸಲ್ಮಾನ್ನ ಯಾಕೋ ಅಂಗ್ ನೋಡ್ತಿದ್ದೆ. ಇದೆಲ್ಲಾ ಸರಿಗಿರಲ್ಲ
ನೋಡು” ಎಂದು ದಬಾಯಿಸಿ ಕೇಳುತ್ತಾನೆ. ಇದನ್ನು ಕೇಳಿದ ಗಣೇಶನಿಗೆ ಭಯವಾಗುತ್ತದೆ. ಬಂದ ಹುಡುಗ ಇದನ್ನು
ಹೇಳಿದವನೇ ಗಣೇಶನ ಕಪಾಳಕ್ಕೆ ಛಟೀರನೇ ಬಾರಿಸಿದಾಗ, ಕೋಪ ತಡೆಯಲಾಗದ ಗಣೇಶನೂ ಒಂದೇಟು ಹಾಕುತ್ತಾನೆ. ಇಬ್ಬರಿಗೂ ಹೊಡೆದಾಟ ಶುರುವಾಯಿತು
ಅನ್ನುವಷ್ಟರಲ್ಲಿ ಗಣೇಶನ ಮೂಗಲ್ಲಿ ರಕ್ತ ಬರುತ್ತದೆ. ಆಗ ಆ ದಾರಿಯಲ್ಲಿ ಯಾರೋ ಬಂದದ್ದನ್ನು ನೋಡಿ
ಆ ಹುಡುಗ ಅಲ್ಲಿಂದ ಓಡಿ ಹೋಗುತ್ತಾನೆ. ಗಣೇಶ ರಕ್ತವನ್ನೊರೆಸುತ್ತಾ ಆ ಹುಡುಗ ಓಡಿದ ದಾರಿಯನ್ನು ನೋಡುತ್ತಾ
ನಿಲ್ಲುತ್ತಾನೆ.
ಮರುದಿನ
ಶಾಲೆಯಲ್ಲಿ ಗೆಳೆಯನೊಬ್ಬ, “ಏನೋ ಗಣಿ ಮೂಗ್ ಹತ್ರ ಗಾಯ ಆಗೈತೆ” ಎಂದು ಆಶ್ಚರ್ಯದಿಂದ ಕೇಳುತ್ತಾನೆ.
“ಹೂಂ ಕಣೋ, ಯಾರೋ ಒಬ್ಬ ನೆನ್ನೆ ಸಂಜೆ ನಾ ಮನೇಗೆ ಹೋಗ್ತಿರಬೇಕಾದ್ರೆ ಅಡ್ಡ ಬಂದು ನಮ್ದುಕೆ ಸಲ್ಮಾನ
ಯಾಕೋ ನೋಡೋದು ಅಂತ ಹೊಡೆದ. ನಾನೂ ಹೊಡೆದೆ. ಅಷ್ಟರಲ್ಲಿ ಯಾರೋ ಬರ್ತಾ ಇದ್ದುದನ್ನು ನೋಡಿ ಓಡೋದ. ಅವರ್ಯಾರೋ
ಬರ್ದಲೆ ಇದ್ದಿದ್ರೆ...” ಎಂದು ಹೇಳಿದಾಗ ಅಲ್ಲಿದ್ದ ಗಣೇಶನ ಮತ್ತೊಬ್ಬ ಗೆಳೆಯ ಕಾಲಿದ್ ಎಂಬುವವನು
“ಲೋ ಗಣಿ ಅವನೇನೋ. ಅವನ್ ಹೆಸ್ರು ಅಮೀರ್ ಅಂತ. ಅವನ್ಗೆ ಸಲ್ಮಾನ ಕೊಡೋದ್ ಅಂತಾ ನಿಶ್ವಯ ಆಗೈತೆ. ಅದುಕ್ಕೆ
ಅವ್ನು ಸಲ್ಮಾನ ಯಾರೇ ನೋಡುದ್ರು ಹಿಂಗೇ ಮಾಡ್ತಾನೆ” ಎಂದು ಎಲ್ಲ ತಿಳಿದವನಂತೆ ಹೇಳುತ್ತಾನೆ. ಇದನ್ನು
ಕೇಳಿದ ಗಣೇಶನ ಮುಖದ ಮೇಲೆ ಹುಸಿನಗೆ ಮೂಡುತ್ತದೆ.
***
ಗೆಳೆಯರ ಕಾಫೀ ಕೂಟ
ಕಾಫೀ #4
ಗಣೇಶ
ನಿಟ್ಟುಸಿರಿಡುತ್ತಾ, “ಜಿಂಕೆಮರಿ ಮಾಯಾ ಜಿಂಕೆಯಾಗೋದ್ಲು ಕಣ್ರಿ. ಅದೇನು ಸ್ಪೀಡ್ ಅಂತೀರಾ ಅವುಳ್ದು”
ಎಂದು ಹೇಳುತ್ತಾನೆ.
“ಏನ್
ಗಣೇಶ್, ಹೈಸ್ಕೂಲಿಗೆ ಮೂರು ಲವ್ ಫ್ಲಾಪ?” ಎಂದು ಅಖಿಲಾ ಕಿಚಾಯಿಸುತ್ತಾಳೆ.
“ಆ...!?
ಅದೆಲ್ಲಾ ಲವ್ ಅನ್ನೋದು ಏನು ಅಂತ ಅರ್ಥ ಆಗೋ ವಯಸ್ಸೇ ಅಲ್ಲಾರೀ. ನನ್ನ ಜೀವನದಲ್ಲಿ ಬಂದ ಮೂರು ಹುಡುಗಿಯರ
ಬಗ್ಗೆ ಹೇಳಿದೆ ಅಷ್ಟೆ” ಎಂದು ಹೇಳಿ ವೈಟರ್ ಕಡೆ ನೋಡುತ್ತಾನೆ. ಇದನ್ನು ನೋಡಿದ ವೈಟರ್ ಮತ್ತೆರೆಡು
ಕಾಫೀ ತರುತ್ತಾನೆ. ನಗುನಗುತ್ತಲೆ ಗಣೇಶ, ಅಖಿಲಾ ಕಾಫೀ ತೆಗೆದುಕೊಳ್ಳುತ್ತಾರೆ.
“ಮುಂದೇನಾಯ್ತು
ಗಣೇಶ್” ಎಂದು ಅಖಿಲಾ ತನ್ನ ಅತೀವ ಕುತೂಹಲದಿಂದ ಗಣೇಶನನ್ನು ಮಾತಿಗೆಳೆಯುತ್ತಾಳೆ.
“ಎಸ್.ಎಸ್.ಎಲ್.ಸಿ
ಪಾಸಾಗಿ ಪಿ.ಯು.ಸಿ.ಗೆ ಸೇರ್ದೆ. ನಮ್ಮೂರಲ್ಲಿ ಕಾಲೇಜಿದ್ದರೂ ತುಮಕೂರಿನ ಹೆಸರಾಂತ ಸರಸ್ವತಿ ಸೈನ್ಸ್
ಕಾಲೇಜಿಗೆ ಮುಂದೆ ಬಿ.ಇ. ಓದೋ ಆಸೆಯಿಂದ ಸಿ.ಇ.ಟಿ. ಕೋಚಿಂಗೋಸ್ಕರ ಸೇರಬೇಕಾಯ್ತು. ತುಮಕೂರು ಇಪ್ಪತ್ತು
ಕಿಲೋಮೀಟರ್ ಇದ್ದುದ್ದರಿಂದ ದಿನಾ ಬಸ್ಸಲ್ಲಿ ಓಡಾಡ್ತಿದ್ದೆ. ಬಸ್ ತುಂಬಾ ಹುಡ್ಗೀರೋ ಹುಡ್ಗೀರು! ಬೇಡ
ಬೇಡ ಅಂದ್ರು ಈ ಹಾಳಾದ ಮನಸ್ಸು ಅವರ ಕಡೇನೇ ನನ್ನ ಕಣ್ಣುಗಳನ್ನು ಎಳೆದುಬಿಡೋದು. ಎಲ್ಲಾ ಹುಡುಗೀರು
ಮಾತಾಡ್ತಾ ಇದ್ದರೆ, ಒಬ್ಳು ಮಾತ್ರ ಯಾವಾಗ್ಲೂ ಸೈಲೆಂಟಾಗಿ ಇರೋಳು. ನಂಗೇ ಗೊತ್ತಿಲ್ದಂಗೆ ನನ್ ಮನಸ್ಸು
ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ...” ಎಂದು ಹಾಡುತ್ತಿತ್ತು.
***
ಮೌನವೇ ಆಭರಣ,
ಮುಗುಳ್ನಗೆ ಶಶಿಕಿರಣ...
ಅಮರಗೊಂಡದ
ಬಸ್‍ಸ್ಟಾಪಿನೊಳಗೆ ತುಮಕೂರು, ಬೆಂಗಳೂರಿಗೆ ಹೋಗುವವರನ್ನು ಹತ್ತಿಸಿಕೊಂಡ ಬಸ್ಸಿನಲ್ಲಿ ತುಮಕೂರಿನಲ್ಲಿ
ಕಾಲೇಜಿಗೆ ಹೋಗುವ ಹುಡುಗ-ಹುಡುಗಿಯರೇ ಹೆಚ್ಚೆಚ್ಚು ಇರುತ್ತಿದ್ದರು. ಸಾಕಷ್ಟು ಪ್ರಯಾಣಿಕರ ಜೊತೆಗೇ
ನಿಂತ ಹುಡುಗ-ಹುಡುಗಿಯರು ತಮ್ಮ ಪಾಡಿಗೆ ತಾವು ಮಾತನಾಡಿಕೊಳ್ಳುತ್ತಾ ಪ್ರಯಾಣಿಸುತ್ತಿದ್ದರು. ಹುಡುಗಿಯರು
ಹುಡುಗರನ್ನು ಕಣ್ಣಲೇ ಕೆಣಕುತ್ತಿದ್ದರೆ, ಹುಡುಗರಂತೂ ಹುಡುಗಿಯರನ್ನು ತಿನ್ನುವವರಂತೆ ನೋಡುತ್ತಿದ್ದರು.
ಹದಿಹರೆಯದ ಲವಲವಿಕೆಯಿಂದ ಕೂಡಿದ ಹುಡುಗಿಯರ ಗುಂಪಿನಲ್ಲಿ ಸುಂದರವಾದ ಹುಡುಗಿಯೊಬ್ಬಳು ಯಾವಾಗಲೂ ಮೌನದಿಂದಲೇ
ಇರುತ್ತಿದ್ದಳು. ಅವಳು ಯಾರನ್ನೂ ಕಣ್ಣೆತ್ತಿಯೂ ನೋಡಬಾರದೆನ್ನುವ ಗಣೇಶನ ಕಣ್ಣಿಗೆ ಬೇಡ ಬೇಡವೆಂದರೂ
ಒಮ್ಮೆ ಬಿದ್ದಳು.
ಆ
ಕ್ಷಣದಿಂದಲೇ ಗಣೇಶನ ಮನದಲ್ಲಿ “ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ” ಗುನುಗತೊಡಗಿತು. ಆ ದಿನವಂತೂ
ಬಸ್ ಮುಂದೆ ಮುಂದೆ ಹೋಗುತ್ತಾ ಇದ್ದಾಗ ಗಣೇಶ ಅವಳನ್ನೇ ದಿಟ್ಟಿಸಿಕೊಂಡು ನಿಂತುಬಿಟ್ಟ. “ಕಾಲೇಜ್...
ಯಾರ್ರೀ ಕಾಲೇಜ್...” ಎಂದು ಕೂಗುತ್ತಾ ಕಂಡಕ್ಟರ್ ವಿಶಲ್ ಹಾಕುವವರೆವಿಗೂ ಗಣೇಶ ಕಳೆದುಹೋಗಿದ್ದ. ಬಸ್
ನಿಂತರೂ, ಕಾಲೇಜಿಗೆ ಹೋಗುವವರು ಇಳಿದರೂ ಗಣೇಶ ಮಾತ್ರ ಇಳಿಯುವ ಹಾಗೇ ಕಾಣಲಿಲ್ಲ. ಅವನ ಗಮನವೆಲ್ಲಾ
ಆ ಮೌನ ಗೌರಿಯೆಡೆಗೆ ನೆಟ್ಟಿತ್ತು. ಮೌನ ಗೌರಿಯು ಇಳಿದ ಮೇಲೆ ಗಣೇಶನ ಕಣ್ಣು ಮಾತ್ರ ಅವಳನ್ನೇ ಅನುಸರಿಸತೊಡಗಿದವು.
ಇದನ್ನು ಗಮನಿಸಿದ ಕಂಡಕ್ಟರ್ ವ್ಯಂಗ್ಯವಾಗಿ “ಸಾರ್... ಸಾರ್... ಇಳೀರಿ ಸಾರ್... ಅವರಾಗ್ಲೆ ಇಳಿದ್
ಹೋದ್ರು. ನಿಮ್ದು ಇದೇ ಸ್ಟಾಪ್ ಅಲ್ವಾ.?” ಎಂದು ಕುಟುಕಲು, ಬೆಚ್ಚಿಬಿದ್ದ ಗಣೇಶ ತಡವರಿಸಿಕೊಂಡು ಇಳಿಯುತ್ತಾನೆ. ಕಂಡಕ್ಟರ್ ಮತ್ತು ಬಸ್ಸಿನಲ್ಲಿದ್ದ ಕೆಲವರು ಮುಸಿಮುಸಿ ನಗುತ್ತಾರೆ.
ಬಸ್ಸಿನಿಂದಿಳಿದ
ಹುಡುಗಿಯರ ಗುಂಪು ಮಾತನಾಡಿಕೊಳ್ಳುತ್ತಾ ಕಾಲೇಜಿನ ಕಡೆಗೆ ಹೋಗುತ್ತಿರುವಾಗ ಗಣೇಶ ಆ ಗುಂಪಿನ ಹಿಂದೆಯೇ
ಬರುತ್ತಾನೆ. ಅವನ ನೋಟವೆಲ್ಲವೂ ಮೌನ ಗೌರಿಯ ಕಡೆಗಿರುತ್ತದೆ. ಇದನ್ನು ಗಮನಿಸಿದ ಹುಡುಗಿಯೊಬ್ಬಳು,
“ಲೇ ಬಿಂದು, ಯಾರೇ ಅದು ನಿನ್ನುನ್ನ ಫಾಲೋ ಮಾಡ್ತಾ ಇದ್ದಾನೆ” ಎಂದು ಆತಂಕದಿಂದ ಕೇಳುತ್ತಾಳೆ.
`ಬಿಂದು’
ಎಂದು ಅವಳ ಹೆಸರು ಗಣೇಶನಿಗೆ ಕೇಳಿ ಏನೋ ಸಿಕ್ಕಿದವನಂತೆ ಆಡುವಷ್ಟರಲ್ಲಿ ಬಿಂದು ಇವನ ಕಡೆ ನೋಡಿ ಹೆದರಿಕೊಂಡು
ಲಗುಬಗೆಯಿಂದ ಹೆಜ್ಜೆ ಮುಂದೆ ಹಾಕುತ್ತಾಳೆ. ಬಿಂದು ಹಿಂದೆ ತಿರುಗಿದಾಗ ಹಿಂದೆ ತಿರುಗುವ ಗಣೇಶ ಮತ್ತೆ
ಅವಳು ಹೋದ ಕಡೆ ತಿರುಗಿ ಅಲ್ಲೇ ನಿಂತುಕೊಂಡು ನಗುತ್ತಾ, “ಬಿಂದು. ವಾಟ್ ಎ ನೇಮ್? ಮೌನವೇ ಆಭರಣ...
ಮುಗುಳ್ನಗೆ ಶಶಿಕಿರಣ... ನೋಟವೇ ಹೂ ಬಾಣ...” ಎಂದು ತನ್ನಲೇ ಹೇಳಿ ಕೊಳ್ಳುತ್ತಾನೆ.
*
ಒಂದು
ದಿನ ಬಸ್ ತುಂಬಾ ಜನವೋ ಜನ! ಆ ಜನಜಂಗುಳಿಯ ನಡುವೆ ಗಣೇಶ ಬಿಂದುವನ್ನೇ ಹುಡುಕುತ್ತಾ ಬಸ್ಸಿನಲ್ಲಿ ನಿಂತಿರುವಾಗ
ಅವನ ಕಣ್ಣಿಗೆ ಬಿಂದು ಕಾಣುವುದಿಲ್ಲ. ಕಂಡಕ್ಟರ್ ಹುಡುಗಿಯರ ಕಡೆಯಿಂದ ನುಸುಳಿಕೊಂಡು ಬರುತ್ತಾ, “ಜಾಗ
ಬಿಡಿ, ಮುಂದೆ ಬನ್ನಿ, ಯಾರ್ರೀ ಟಿಕೆಟ್ ಟಿಕೆಟ್” ಎಂದು ಹುಡುಗಿಯರನ್ನು ಸ್ವಲ್ಪ ತಳ್ಳಿಕೊಂಡೇ ಬರುತ್ತಾನೆ.
“ರೀ
ಕಂಡಕ್ಟ್ರೆ... ಸ್ವಲ್ಪ ನಿಧಾನಕ್ಕೆ ಹೋಗ್ರಿ. ಬಸ್ ರಶ್ಶಿದೆ ಅಂತ ಹೀಗಾ ತಳ್ಕೊಂಡು ಹೋಗೋದು” ಎಂದು
ಒಬ್ಬಳು ಹುಡುಗಿ ದಬಾಯಿಸುತ್ತಾಳೆ. ಗಣೇಶ ಆ ಧ್ವನಿಯ ಕಡೆ ತಿರುಗಿ ನೋಡುತ್ತಾನೆ...? ಆ ಹುಡುಗಿ ಮೌನ
ಗೌರಿ ಬಿಂದುವಾಗಿರುತ್ತಾಳೆ. ಅವಳು ಸಿಟ್ಟಿನಿಂದ ಕಂಡಕ್ಟರ್ ಕಡೆಗೆ ದುರುಗುಟ್ಟಿಕೊಂಡು ನೋಡುತ್ತಿರುತ್ತಾಳೆ.
“ಏನಮ್ಮ
ನಿಧಾನಕ್ಕೆ ಹೋಗೋದು. ಬಸ್ ರಶ್ಶಿದೆ ಅಂತಾ ಗೊತ್ತಾಗೊಲ್ವಾ. ಎಲ್ಲಾರ್ಗು ಟಿಕೆಟ್ ಕೊಡ್ಬೇಕು. ಇಲ್ಲಾಂದ್ರೆ
ನನ್ ಕೆಲ್ಸ ಹೋಯ್ತದೆ” ಎಂದು ಕಂಡಕ್ಟರ್ ಗೊಣಗುತ್ತಾನೆ. “ಹಂಗಂತಾ ಹುಡ್ಗಿರ್ನೆಲ್ಲಾ ತಳ್ಕೊಂಡು ಹೋಗೋದ”
ಎಂದು ಬಿಂದು ವಾದಿಸುತ್ತಾಳೆ. ಇದನ್ನು ಗಮನಿಸಿದ ಗಣೇಶ ನುಸುಳಿಕೊಂಡು ಕಂಡಕ್ಟರಿನ ಬಳಿ ಬಂದು, “ಏನ್
ಸಾರ್, ಅದು ಗಲಾಟೆ?” ಎಂದು ಕೇಳುತ್ತಾನೆ. “ನೋಡಿ ಸಾರ್, ಬಸ್ ತುಂಬಾ ರಶ್ಶಿದೆ ಇವತ್ತು. ಟಿಕೆಟ್
ಕೊಟ್ಕೋಂಡು ಬರೋವಾಗ ಎಲ್ಲೋ ಸ್ವಲ್ಪ ಟಚ್ಚಾಗಿದೆ. ಅದುಕ್ಕೆ ಈ ಹುಡ್ಗಿ..” ಎಂದು ಕಂಡಕ್ಟರ್ ರಾಗ ಎಳೆಯುತ್ತಾನೆ.
ಬಿಂದು
ಕಂಡಕ್ಟರ್^ನನ್ನು ಕೆಕ್ಕರಿಸಿಕೊಂಡು ನೋಡುತ್ತಾಳೆ. ಇದನ್ನು ಗಮನಿಸುವ ಗಣೇಶ ಕಂಡಕ್ಟರ್‍ಗೆ, “ರೀ
ಕಂಡಕ್ಟರ್, ಏನ್ರೀ ಅದು ಹಂಗ್ ಮಾತಾಡ್ತಿರ. ರಶ್ಶಿದೆ ಅಂತ ತಳ್ಳಾಡ್ಕಂಡು ಏನ್ಬೇಕಾದ್ರು ಟಚ್ ಮಾಡ್ಬೋದ.
ಸ್ವಲ್ಪ ನಿಧಾನವಾಗಿ ಬರೋಕಾಗಲ್ವ...” ಎಂದು ದಬಾಯಿಸುತ್ತಾನೆ.
“ಸಾರ್
ಅದೂ...” ಎಂದು ಕಂಡಕ್ಟರ್ ತಡವರಿಸುವಷ್ಟರಲ್ಲಿ, ಗಣೇಶ “ಅದೂ ಇಲ್ಲ, ಇದೂ ಇಲ್ಲ...” ಎಂದು ಜಗಳ ಕಾಯುವವನಂತೆ
ಹೇಳುವುದನ್ನು ಕಂಡ ಕಂಡಕ್ಟರ್ ತನ್ನ ಸಹಾಯಕ್ಕೆ ಬರಬಹುದೆಂದುಕೊಂಡಿದ್ದವನು ಜಗಳಕ್ಕೇ ಬರುತ್ತಿದ್ದಾನೆಂಬುದನ್ನು
ಅರಿತು “ರೀ ಮಿಸ್ಟರ್ ನಿಮಗ್ಯಾಕ್ರಿ ಅದೆಲ್ಲ. ನಿಮ್ ಪಾಡಿಗ್ ನೀವ್ ನಿಂತ್ಕೊಳ್ರಿ...” ಎಂದು ಗಣೇಶನನ್ನು
ಸುಮ್ಮನಿರಿಸಲು ನೋಡುತ್ತಾನೆ.
“ನಮ್
ಪಾಡಿಗೆ ನಾವು ನಿಂತ್ಕೊಳೋಕೆ ಆಗೋಲ್ಲ ಕಣ್ರೀ. ಅಷ್ಟಕ್ಕು ನಾವ್ಯಾರ್ ಗೊತ್ತ?” ಎಂದು ಹೇಳುತ್ತಾ ತನ್ನ
ಹಿಂದೆ ನಿಂತಿದ್ದ ಹುಡುಗರ ಕಡೆ ತಿರುಗಿ “ಅಲ್ವೇನ್ರೋ...?” ಎಂದು ತುಸು ಜೋರಾಗಿಯೇ ಕೇಳಿದಾಗ, “ಹೌದು...
ಹೌದು...” ಎಂಬ ಕೂಗು ಕೇಳಿ ಬರುತ್ತದೆ.
ಇವರ
ಮಾತುಗಳು ಹಳಿ ತಪ್ಪುತ್ತಿರುವುದನ್ನು ಕಂಡ ಕಂಡಕ್ಟರ್ ಗೊಣಗುತ್ತ, “ಆಹಾ! ಹುಡ್ಗಿ ವಹಿಸ್ಕೊಂಡು ಎಲ್ಲಾ
ಬಂದ್ಬುಟ್ರಪ್ಪ. ಹಂಗೆ ಎಲ್ಲಾದಕ್ಕೂ ಹೋಗ್ಬೇಕಪ್ಪ” ಎಂದು ಹೇಳಿ ಕಾಲೇಜ್ ಸ್ಟಾಪ್ ಬಂದದ್ದನ್ನು ಗಮನಿಸಿ
“ಆಯ್ತು, ಆಯ್ತು ಕಾಲೇಜ್ ಸ್ಟಾಪ್ ಬಂತು ಎಲ್ಲಾ ಇಳ್ಕೋಳಿ” ಎಂದು ವಿಶಲ್ ಹಾಕುತ್ತಾನೆ.
ಸದ್ಯ
ಕಾಲೇಜ್ ಸ್ಟಾಪ್ ಬಂತಲ್ಲಾ, ಈ ಹಾಳಾದ ಹುಡುಗರು ಇಳಿಯುತ್ತಾರೆ ಎಂದರಿತ ಡ್ರೈವರ್ ವಿಶಲ್‍ಗಾಗಿ ಕಾಯುತ್ತಿದ್ದವನಂತೆ
ಬಸ್ಸನ್ನು ಸಡನ್ನಾಗಿ ನಿಲ್ಲಿಸುತ್ತಾನೆ. ಜನರ ನಡುವೆ ಸಾಕಪ್ಪೋ ಸಾಕು ಎಂದು ನಿಟ್ಟುಸಿರುಬಿಟ್ಟ ಹುಡುಗ-ಹುಡುಗಿಯರು
ಇಳಿಯಲು ಅವಸರಿಸುತ್ತಿರುವಾಗ, ಗಣೇಶ ಕಂಡಕ್ಟರನ್ನು ನೋಡುತ್ತಾ ಇಳಿಯುತ್ತಾನೆ. ಬಿಂದು ಗಣೇಶನನ್ನು
ನೋಡುತ್ತಾ ಇಳಿಯುತ್ತಾಳೆ.
ಇವರನ್ನಿಳಿಸಿದ
ಬಸ್ ಮುಂದೆ ಹೋಗುತ್ತದೆ. ಬಸ್ ಇಳಿದ ಬಿಂದು ಗಣೇಶನೆಡೆಗೆ ನಿಧಾನವಾಗಿ ಬರುತ್ತಾಳೆ. ಇದನ್ನು ನೋಡುವ
ಗಣೇಶ ಚಡಪಡಿಸುತ್ತಾನೆ. ಗಣೇಶನ ಹತ್ತಿರ ಬಿಂದು ಬರುತ್ತಾಳೆ. ಗಣೇಶನ ಎದೆ ಹಿಂದೆಂದಿಗಿಂತಲೂ ಜೋರಾಗಿ
ಒಡೆದುಕೊಳ್ಳತೊಡಗುತ್ತದೆ. ಹತ್ತಿರ ಬಂದವಳೇ ಗಣೇಶನ ಮುಖವನ್ನೊಮ್ಮೆ ಅಳೆದು ತೂಗಿದವಳಂತೆ ನೋಡಿ,
“...ಅಣ್ಣಾ, ಥ್ಯಾಂಕ್ಯೂ...” ಎಂದು ನಿರ್ಲೀಪ್ತವಾಗಿ ಹೇಳುತ್ತಾಳೆ.
ಇದನ್ನು
ಕೇಳಿದ ಕ್ಷಣ ಗಣೇಶನ ಹೃದಯ ತನ್ನ ಬಡಿತ ತಪ್ಪಿದಂತೆ ಚಡಪಡಿಸುತ್ತದೆ. ನಿಂತ ಭೂಮಿ ಬಾಯ್ಬಿಟ್ಟಂತೆ ಭಾಸವಾಗುತ್ತದೆ.
ಅಲ್ಲೋಲ ಕಲ್ಲೋಲವಾದ ತನ್ನ ಜಗತ್ತಿನಿಂದ ಗಣೇಶ ಹಿಂತಿರುಗುವಷ್ಟರಲ್ಲಿ ಬಿಂದು ಹಿಂತಿರುಗಿ ಹುಡುಗಿಯರ
ಕಡೆ ಹೋಗುತ್ತಿರುತ್ತಾಳೆ.
*
ಇದೆಲ್ಲಾ
ಕಳೆದು ಕೆಲವು ದಿನಗಳಾದ ನಂತರ ಒಮ್ಮೆ ಗಣೇಶ ಬೇಜಾರಿನಿಂದ ಬಸ್‍ಸ್ಟಾಪಿನಲ್ಲಿ ನಿಂತಿರುವಾಗ ಅಲ್ಲಿಗೆ
ಬಂದ ಬಿಂದು ತನ್ನ ಬ್ಯಾಗ್‍ನಲ್ಲಿದ್ದ ರಾಖಿಯೊಂದನ್ನು ತೆಗೆದು ತಬ್ಬಿಬ್ಬಾದ ಅವನಿಗೆ ಕಟ್ಟುತ್ತಾಳೆ.
ಅವಳ ಮುಖ ನೋಡುವ ಗಣೇಶನೆಡೆಗೆ ಕೈ ಚಾಚುತ್ತಾಳೆ. ಗಲಿಬಿಲಿಯಿಂದ ಪರ್ಸ್ ತೆಗೆಯುವ ಗಣೇಶ ಅದರಿಂದ ಅವಳಿಗೆ
ನೂರು ರೂಪಾಯಿಗಳನ್ನು ನೀಡುತ್ತಾನೆ. ಅವನ ಮುಖ ಇನ್ಯಾಕೆ ಬದುಕಿರುವೆಯೋ ಪಾಪಿ ಎಂದು ಹೇಳುತ್ತಿರುವಂತೆ
ಗೋಚರಿಸುತ್ತದೆ. ಅವನು ಕೊಟ್ಟ ಹಣವನ್ನು ಪಡೆದ ಬಿಂದು, ಸಂತೋಷದಿಂದ “ಥ್ಯಾಂಕ್ ಯೂ ಬ್ರದರ್!” ಎಂದು
ಹೇಳಿ ಅಲ್ಲಿ ನಿಲ್ಲದೆ ತನ್ನನ್ನೆ ಕಾಯುತ್ತಿದ್ದ ಹುಡುಗಿಯರ ಕಡೆ ಹೋಗುತ್ತಾಳೆ. ಗಣೇಶ ರಾಖಿಯನ್ನೊಮ್ಮೆ,
ಬಿಂದುವನ್ನೊಮ್ಮೆ ನೋಡುತ್ತಾ ತನ್ನಲೇ, “ಥ್ಯಾಂಕ್ಸ್...” ಎಂದು ಗೊಣಗಿಕೊಳ್ಳುತ್ತಾ ಗರಬಡಿದವನಂತೆ
ನಿಲ್ಲುತ್ತಾನೆ.
***
ಗೆಳೆಯರ ಕಾಫೀ ಕೂಟ
ಕಾಫೀ #5
“ಹ್ಹ...ಹ್ಹ...ಹ್ಹ...”
ಎಂದು ಅಖಿಲಾಳ ನಗು ಕಾಫೀ ಕೂಟದ ತುಂಬ ಮಾರ್ದನಿಸುತ್ತದೆ. “ರೀ...ಮೆಲ್ಲಗೆ ನಗ್ರಿ” ಎಂದು ಪಿಸುಗುಟ್ಟುವ
ಗಣೇಶ ಬೇಜಾರಿನಿಂದ ಕಾಫೀ ಲೋಟ ಕೆಳಗಿಡುತ್ತಾನೆ. ಅಖಿಲಾ ನಗು ನಿಲ್ಲಿಸಿ ವ್ಯಂಗ್ಯದಿಂದ, “ಹೋಗ್ಲಿ
ಬಿಡಿ ಗಣೇಶ್. ಕಡೆಗೆ ನಿಮಗೊಬ್ಬಳು ತಂಗಿನಾದ್ರೂ ಸಿಕ್ಕುದ್ಲಲ್ಲ”
ಎಂದು ಮೆಲ್ಲಗೆ ನಗುತ್ತಾಳೆ.
“ಏನ್
ತಂಗಿನೋ ಏನೋ!? ನನ್ ಶಾಪನೋ ಏನೋ ಪಾಪ”, ಸೆಕೆಂಡ್ ಪಿಯುಸಿ ಫೇಲಾಗಿ ಅವರಪ್ಪ ತೋರ್ಸಿದವ್ನ ಕೈಲಿ ತಾಳಿ
ಕಟ್ಟಿಸ್ಕೊಂಡ್ಲು. ಮೌನ ಆವರಣವಾಯ್ತು. ಈ ಹುಡುಗೀರ Defense mechancism
ಅವಳಿಂದ ಅರ್ಥ ಆಯ್ತು, ಅಷ್ಟೆ” ಎಂದು ಗಣೇಶ ಹೇಳುತ್ತಾನೆ.
ಅಖಿಲಾ
ಅಣಕಿಸುತ್ತಾ, “ಸಾಹೇಬ್ರು ಮತ್ತವರ ಹುಡುಗಿಯರ ಕಥೆ ಮುಗಿತೋ... ಅಥವಾ ಇನ್ನಾ ಇದೆಯೋ?” ಎಂದು ಕೇಳುತ್ತಾಳೆ.
ಮತ್ತೊಂದು
ಕಾಫೀ ಬರುತ್ತದೆ.
“ನಾನ್ಯಾವತ್ತೂ
ಯಾರ್ ಬಗ್ಗೇನೂ ಜಾಸ್ತಿ ತಲೆ ಕೆಡಿಸ್ಕೊಳಿಲ್ಲ ಕಣ್ರೀ. ನಿಜವಾದ ಪ್ರೀತಿಯಂದ್ರೆ ಏನೂಂತ ಅರ್ಥ ಮಾಡ್ಕೊಳೋ
ಮುಂಚೆನೇ ಇದೆಲ್ಲಾ ಆಗೋಯ್ತು. ಪಿ.ಯು.ಸಿ. ಪಾಸಾಗಿ ಬಿ.ಇ ಸೇರ್ಕೊಂಡೆ. ಕಾಲೇಜಿಗೆ ಕಾಲಿಡೋ ಮೊದಲ ದಿನದಿಂದಾನೇ
ಯಾವ ಹುಡುಗೀರ ಕಣ್ಣಿಗೂ ಬೀಳಬಾರ್ದು, ಯಾವುದೇ ಕಾರಣಕ್ಕೂ ಪ್ರೀತಿಯ ಬಲೆಗೆ ಬೀಳಬಾರ್ದು ಅಂತಾ ಡಿಸೈಡ್
ಮಾಡಿದ್ದೆ. ಆಕಸ್ಮಾತ್ ಯಾವುದಾದ್ರು ಹುಡ್ಗಿ ಇಷ್ಟ ಪಟ್ರೆ ಅಥವಾ ನಂಗೆನಾದ್ರು ಇಷ್ಟ ಆದ್ರೆ ಅವಳನ್ನ
ಜಸ್ಟ್ ಫ್ರೆಂಡಂತ ಕನ್ಸಿಡರ್ ಮಾಡಿ ಓದಿನ ಕಡೆ ಗಮನ ಹರಿಸಬೇಕೆಂದು ನನ್ಮೇಲೆ ನಾನೇ ಪ್ರಮಾಣ ಮಾಡ್ಕೊಂಡಿದ್ದೆ.
ನಾಲ್ಕೂವರೆ ವರ್ಷ ಕಷ್ಟಪಟ್ಟು ಓದ್ಬೇಕಿತ್ತು. ಮೊದಲನೇ ಸೆಮಿಸ್ಟರ್ ಮುಗಿದದ್ದೇ ಗೊತ್ತಾಗ್ಲಿಲ್ಲ.
ಎರಡನೇ ಸೆಮಿಸ್ಟರ್^ನಲ್ಲಿದ್ದಾಗ ಲ್ಯಾಬ್‍ನಲ್ಲೊಂದಿನ...”
***
ಹಾಳು ಹೃದಯ
ಕಂಪ್ಯೂಟರ್
ಲ್ಯಾಬಿನಲ್ಲಿ ಗಣೇಶ ಕಂಪ್ಯೂಟರ್ ಮುಂದೆ ಕುಳಿತು ಏನನ್ನೋ ಮಾಡುತ್ತಿರುತ್ತಾನೆ. ಯಾರನ್ನೋ ಹುಡುಕುವಂತೆ
ಕಾಣುವ ಹುಡುಗಿಯೊಬ್ಬಳು ಇವನ ಬಳಿ ಬಂದವಳೇ, “ಎಕ್ಸ್^ಕ್ಯೂಸ್ಮಿ!” ಎಂದು ವಿನಯದಿಂದ ಕೇಳುತ್ತಾಳೆ.
ಇದನ್ನು ಕೇಳಿಯೂ ಕೇಳದಂತೆ ಗಣೇಶ ತನ್ನ ಪಾಡಿಗೆ ಯಾವುದೋ ಪ್ರೋಗ್ರಾಂಮಿಂಗ್‍ನಲ್ಲಿ ಮಗ್ನನಾದಂತೆ ನಟಿಸುತ್ತಾನೆ.
ಇವನಿಗೆ ತೊಂದರೆ ಮಾಡುತ್ತಿದ್ದೇನೇನೋ ಎಂದು ಚಡಪಡಿಸುವ ಆ ಹುಡುಗಿ ಮತ್ತೊಮ್ಮೆ ನಿಧಾನವಾಗಿ, ಮತ್ತಷ್ಟು
ವಿನಯದಿಂದ, “ಎಕ್ಸ್^ಕ್ಯೂಸ್‍ಮಿ... ಒಂದ್ನಿಮಿಷ...” ಎಂದು ಕೋರುತ್ತಾಳೆ.
ಗಣೇಶ
ಅವಳ ಕಡೆ ತಿರುಗಿ ಒಲ್ಲದ ಮನಸ್ಸಿನಿಂದ, “ಎಸ್...!” ಎನ್ನುತ್ತಾನೆ.
“ರೀ
ನನ್ ಹೆಸರು ತೇಜಸ್ವಿನಿ ಅಂತಾ. ನನ್ ಸಿ ಪ್ರೋಗ್ರಾಂ ಯಾಕೋ ಕಂಪೈಲ್ ಆಗ್ತಿಲ್ಲ ಸ್ವಲ್ಪ ನೋಡ್ತಿರಾ?”
ಎಂದು ಕೇಳುತ್ತಾಳೆ. ಅವಳ ಮಾತಿನಲ್ಲಿ ಮುಗ್ಧತೆ ಎದ್ದು ಕಾಣುತ್ತಿರುತ್ತದೆ.
ಇದನ್ನು
ಕೇಳಿದ ಗಣೇಶ ಸ್ವಲ್ಪ ಗಂಭೀರವಾಗಿಯೇ, “ಅಲ್ಲಿ ಲ್ಯಾಬ್ ಇನ್ ^ಸ್ಟ್ರಕ್ಟರ್ ಹತ್ರ ಹೇಳೋಗಿ. ನನ್ ಯಾಕ್
ಸುಮ್ ಸುಮ್‍ನೆ ಡಿಸ್ಟರ್ಬ್ ಮಾಡ್ತೀರ” ಎಂದು ಗೊಣಗುತ್ತಾನೆ.
“ಲ್ಯಾಬ್
ಇನ್^ಸ್ಟ್ರಕ್ಟರ್ ಅಲ್ಲಿಲ್ಲಾ. ಅದುಕ್ಕೆ ನಿಮ್ಮನ್ನ ಕೇಳಿದ್ದು. ನಿಮ್ಮುನ್ನ ಡಿಸ್ಟರ್ಬ್ ಮಾಡ್ಬೇಕು
ಅಂತಾ ಅಲ್ಲ. ಈಗೇನು ಬಂದ್ ನೋಡ್ತಿರಾ ಇಲ್ವಾ?” ಎಂದು ತೇಜಸ್ವಿನಿ ಕೇಳುವಷ್ಟರಲ್ಲಿ ಅವಳ ಮುಖದಲ್ಲಿದ್ದ
ಮುಗ್ಧತೆ ಮಾಯವಾಗಿರುತ್ತದೆ.
ಇವಳು
ಜೋರು ಮಾಡಿದ್ದನ್ನು ಅರಿತ ಗಣೇಶ ತುಟಿಕ್ ಪಿಟಿಕ್ ಎನ್ನದೆ ಎದ್ದು ನಿಲ್ಲುತ್ತಾನೆ. ತೇಜಸ್ವಿನಿ ಅವಳ
ಕಂಪ್ಯೂಟರ್ ಕಡೆಗೆ ಹೋಗುತ್ತಾಳೆ. ಗಣೇಶ ಅವಳ ಹಿಂದೆ ಹೋಗಿ ಅವಳು ನಿಂತಲ್ಲಿ ನಿಲ್ಲುತ್ತಾನೆ. ಅವಳು
ತನ್ನ ಕಂಪ್ಯೂಟರ್‍ನಲ್ಲಿ ಸಿ ಪ್ರೋಗ್ರಾಂ ತೋರಿಸುತ್ತಾಳೆ. ಗಣೇಶ ಸರಿಮಾಡಿ, ಪ್ರೋಗ್ರಾಂ ಕಂಪೈಲ್ ಮಾಡುತ್ತಾನೆ.
ಕಂಪೈಲ್ ಸರಿಯಾಗಿ ಆಗುತ್ತದೆ. ತೇಜಸ್ವಿನಿ ಖುಷಿಯಿಂದ ಕುಪ್ಪಳಿಸುತ್ತಾಳೆ. ಗಣೇಶ ತನ್ನ ಕಂಪ್ಯೂಟರಿನಿಡೆಗೆ
ಹೆಜ್ಜೆ ಹಾಕುತ್ತಾನೆ. ಇದನ್ನು ಗಮನಿಸಿದ ತೇಜಸ್ವಿನಿ, “ಹಲೋ... ಥ್ಯಾಂಕ್ಸ್ ಕಣ್ರೀ” ಎಂದು ನಗುತ್ತಾಳೆ.
ಹಿಂದೆ
ತಿರುಗಿದ ಗಣೇಶ ನಕ್ಕು, “ಯು ಆರ್ ನಾಟ್ ವೆಲ್‍ಕಂ!” ಎಂದು ಗೊಣಗಿಕೊಂಡು ಮುಂದೆ ಹೋಗುತ್ತಾನೆ.
*
ಮರುದಿನ
ಕಾಲೇಜ್ ಕ್ಯಾಂಪಸ್ಸಿನಲ್ಲಿ ಗಣೇಶ ಒಬ್ಬನೇ ಬರುತ್ತಿರುವಾಗ, ತೇಜಸ್ವಿನಿ ಹಿಂದೆಯೇ ಓಡಿಬಂದು, “ರೀ...
ರೀ... ಸ್ವಲ್ಪ ನಿಂತ್ಕೋಳ್ರಿ. ನೀವು ನೆನ್ನೆ ಎಷ್ಟು ಬೇಗ ಪ್ರೋಗ್ರಾಂ ಸರಿ ಮಾಡ್ಕೊಟ್ರಿ. ಥ್ಯಾಂಕ್ಸ್
ಹೇಳುದ್ರೆ, ಯು ಆರ್ ನಾಟ್ ವೆಲ್‍ಕಂ ಅಂತಾನ ಹೇಳೋದು” ಎಂದು ಒಂದೇ ಉಸಿರಿಗೆ ಹೇಳುತ್ತಾಳೆ.
“...!?”
ಏನು ಗೊತ್ತಿಲ್ಲದವನಂತೆ ಗಣೇಶ ಅವಳನ್ನೇ ನೋಡಲು, ತೇಜಸ್ವಿನಿ ಮುಂದುವರೆಯುತ್ತಾ, “ಬನ್ನಿ ಕಾಫೀ ಕುಡಿಯೋಣ”
ಎಂದು ಅವನನ್ನು ಕಾಫೀಗೆ ಆಮಂತ್ರಿಸುತ್ತಾಳೆ. ಹುಡುಗಿಯರ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡಿದ್ದ ಗಣೇಶ,
“ನೋ ಥ್ಯಾಂಕ್ಸ್. ನಂಗೆ ಕ್ಲಾಸಿದೆ” ಎಂದು ಅವಳ ಆಮಂತ್ರಣವನ್ನು ನಿರಾಕರಿಸುತ್ತಾನೆ. ಬೇಜಾರಿನಿಂದ
ತೇಜಸ್ವಿನಿ ನಿಂತದ್ದನ್ನು ನೋಡಿ ಇವನಿಗೆ ಏನೂ ನಷ್ಟವಿಲ್ಲದವನಂತೆ ಮುಂದೆ ಹೋಗುತ್ತಾನೆ. ತೇಜಸ್ವಿನಿ
ಅಲ್ಲೇ ನಿಲ್ಲುತ್ತಾಳೆ.
ಮುಂದೆ
ಹೋದ ಗಣೇಶನ ಬಳಿ ಅವನ ಗೆಳೆಯನೊಬ್ಬನು ಬಂದು, “ಏನೋ ಗಣೇಶ, ತೇಜಸ್ವಿನಿ ಹತ್ರ ಮಾತಾಡ್ತಿದ್ದೆ. ಏನಂದ್ಲು?
ಏನ್ಸಮಾಚಾರ?” ಎಂದು ಕಿಚಾಯಿಸುತ್ತಾನೆ.
“ಲೋ
ಅಂತಾದ್ದ್ ಏನೂ ಇಲ್ಲ ಕಣೋ. ಬೇಡ ಬೇಡ ಅಂದ್ರು ಮೇಲ್ಬಿದ್ದು ಮಾತಾಡುಸ್ತಾಳೆ. ಏನೇ ಆದ್ರು ಈ ಹುಡುಗೀರ
ಹಿಂದೆ ಮಾತ್ರ ಬೀಳಲ್ಲಪ್ಪಾ” ಎಂದು ಗಣೇಶ ತನ್ನ ಅಚಲ ನಿರ್ಧಾರವನ್ನು ಹೇಳುತ್ತಾನೆ.
ಇದನ್ನು
ಕೇಳಿದ ಅವನ ಗೆಳೆಯ, “ಲೋ ಲೋ ಗಣೇಶ! ಇಡೀ ಕಾಲೇಜ್ ಹುಡುಗ್ರೆಲ್ಲಾ ಅವಳಿಂದೆ ಬಿದ್ದವ್ರೆ ಕಣೋ. ಅಂತಾದ್ರಲ್ಲಿ...”
ಎಂದು ರಾಗ ಎಳೆಯುತ್ತಾನೆ.
“ಕಾಲೇಜ್
ಹುಡುಗ್ರೆಲ್ಲಾ ಬೀಳ್ಲಿ ಅಥವಾ ಕಾಲೇಜೇ ಅವಳಿಂದೆ ಬೀಳ್ಲಿ, ನಾನ್ ಮಾತ್ರ ಯಾವ್ ಹುಡುಗಿರಿಂದೆನೂ ಬೀಳಲ್ಲಪ್ಪಾ.
ನನ್ನ ಬಿಟ್ಬುಡು ತಂದೆ” ಎಂದು ಹೇಳಿ ಮಾತು ಸಾಕೆಂಬಂತೆ ಗಣೇಶ ಮುಂದೆ ಹೋಗುತ್ತಾನೆ. ನಿರಾಸೆಯಿಂದ ಗೆಳೆಯ
ಅತ್ತ ಹೋಗುತ್ತಾನೆ.
*
ಕಾಲೇಜಿನ
ಲೈಬ್ರರಿಯಲ್ಲಿ ಗಣೇಶ ಪುಸ್ತಕವೊಂದನ್ನು ಹುಡುಕುತ್ತಿರುತ್ತಾನೆ. ತೇಜಸ್ವಿನಿ ಅವನ ಹತ್ತಿರ ಬರುತ್ತಾಳೆ.
ಇದನ್ನು ಗಮನಿಸಿದ ತಕ್ಷಣ ಗಣೇಶ ಅವಳಿಗೆ ‘ಸೈಲೆನ್ಸ್ ಪ್ಲೀಸ್’ ಬೋರ್ಡ್ ತೋರಿಸುತ್ತಾನೆ. ತೇಜಸ್ವಿನಿ
ತನ್ನ ಬ್ಯಾಗಿನಿಂದ ಪೆನ್ ಮತ್ತು ಹಾಳೆಯೊಂದನ್ನು ತೆಗೆದು, ಹಾಳೆಯ ಮೇಲೆ ‘ಬೆಸ್ಟ್ ‘ಸಿ’ ಬುಕ್ ಆಥರ್
ಪ್ಲೀಸ್’ ಎಂದು ಬರೆದು ತೋರಿಸುತ್ತಾಳೆ. ಗಣೇಶ ತನ್ನ ಪೆನ್ನಿನಿಂದ ಅದೇ ಹಾಳೆಯ ಮೇಲೆ `ಬಾಲಗುರುಸ್ವಾಮಿ’
ಎಂದು ಬರೆದು ತನ್ನ ಹುಡುಕಾಟದಲ್ಲಿ ಮಗ್ನನಾಗುತ್ತಾನೆ. ಖುಷಿಯಾದ ತೇಜಸ್ವಿನಿ ಅದರ ಕೆಳಗೆಯೇ ‘ಥ್ಯಾಂಕ್ಸ್…
ಕಾಫೀ?’ ಎಂದು ಬರೆದು ತೋರಿಸುತ್ತಾಳೆ. ಮುಗುಳ್ನಕ್ಕ
ಗಣೇಶ ಅದರ ಕೆಳಗೆ ‘ಓಕೆ’ ಎಂದು ಬರೆದು ಪುಸ್ತಕವೊಂದನ್ನು ತೆಗೆದುಕೊಳ್ಳುತ್ತಾನೆ.
*
ಕಾಲೇಜ್
ಕ್ಯಾಂಟೀನ್ನಿನಲ್ಲಿ ಎದುರುಬದುರು ಕುಳಿತ ತೇಜಸ್ವಿನಿ ಗಣೇಶ ಕಾಫೀ ಹೀರುತ್ತಾ ನಗುತ್ತಲೇ ಮಾತಿಗಿಳಿದಾಗ,
“ನೀವು ತುಂಬಾ ಓದ್ತೀರಾ ಅನ್ಸುತ್ತೆ?” ಎಂದು ತೇಜಸ್ವಿನಿ ಕೇಳುತ್ತಾಳೆ.
“ತುಂಬಾನೋ,
ಅರ್ಧನೋ ಓದ್ಲೇ ಬೇಕಲ್ಲ” ಎಂದು ಗಣೇಶ ಲಘುಧಾಟಿಯಲ್ಲಿ ಉತ್ತರಿಸುತ್ತಾನೆ.
“ಅದ್ಸರಿ
ಒಬ್ಳು ಹುಡುಗಿ ತಾನೇ ತಾನಾಗಿ ನಿಮ್ಮನ್ನ ಮಾತಾಡ್ಸುದ್ರೆ ಅವಳನ್ನ ಸರಿಯಾಗಿ ಮಾತಾಡ್ಸೋಕು ಬರೋದಿಲ್ವ
ನಿಮಗೆ” ಎಂದು ಮಾತನ್ನು ಇದ್ದಕ್ಕಿದ್ದಂತೆ ಎಲ್ಲಿಗೋ ಎಳೆಯುತ್ತಾಳೆ.
ಮಾತಿನ
ದಾರಿ ಎತ್ತಲೋ ಹೋದದ್ದನ್ನು ಗಮನಿಸುವ ಗಣೇಶ, “ಅದು ಹಾಗಲ್ಲ. ಓದೋ ಟೈಮಲ್ಲಿ ಹುಡುಗೀರು... ಪ್ರೀತಿ,
ಪ್ರೇಮ ಅಂತಾ ಹಾಳಾಗ್ಬಾರ್ದಲ್ವ ಅದುಕ್ಕೆ, ಆದಷ್ಟು ನಾನೇ ಸುಮ್ಮನೇ ಇರೋ ಪ್ರಯತ್ನ ಅಷ್ಟೆ” ಎಂದು ತನ್ನ
ಮನದ ಇಂಗಿತವನ್ನು ಹೇಳುತ್ತಾನೆ.
“ಹುಡುಗಿ
ಮಾತಾಡ್ಸುದ್ರೆ ಸಾಕು ಪ್ರೀತಿ, ಪ್ರೇಮ ಅಂತೆಲ್ಲಾ ಯಾಕ್ ಅನ್ಕೋಬೇಕು. ಒಳ್ಳೆ ಫ್ರೆಂಡ್ ಅನ್ಕೊಂಡ್ರೆ
ಆಯ್ತಪ್ಪ. ಅಲ್ವಾ?” ಎಂದು ಗಣೇಶನಿಗೆ ತನಗನ್ನಿಸಿದನ್ನು ತೇಜಸ್ವಿನಿ ಹೇಳುತ್ತಾಳೆ.
“ಒಳ್ಳೆ
ಫ್ರೆಂಡ್, ಫ್ರೆಂಡ್‍ಶಿಪ್ಪೂ... ಅಷ್ಟಕ್ಕೆ ನಿಂತ್ರೆ ನೋ ಪ್ರಾಬ್ಲಂ” ಎಂದು ಗಣೇಶ ಹೇಳಿದಾಗ ಇಬ್ಬರಿಗೂ
ನಗು ಬರುತ್ತದೆ.
*
ಒಂದು
ದಿನ ಕಾಲೇಜಿನ ಆವರಣದಲ್ಲಿ ಗಣೇಶ-ತೇಜಸ್ವಿನಿ ನಗುನಗುತ್ತಾ ಮಾತಾಡಿಕೊಂಡು ಓಡಾಡುತ್ತಿರುವುದನ್ನು ಗಮನಿಸಿದ
ಗಣೇಶನ ಗೆಳೆಯ, ತೇಜಸ್ವಿನಿ ಗಣೇಶನಿಗೆ ಬಾಯ್ ಎಂದು ಕೈ ಸನ್ನೆಮಾಡಿ ಹೋದ ಮೇಲೆ ಅವಳನ್ನೇ ನೋಡುತ್ತಾ
ನಿಂತ ಗಣೇಶನ ಬಳಿ ಬಂದು, “ಲೋ ಗಣೇಶ... ಮೊನ್ನೆ ತಾನೇ ಇಡೀ ಕಾಲೇಜೇ ಬಿದ್ರು ಯಾರಿಂದೇನೂ ಬೀಳಲ್ಲ
ಅಂದಿದ್ದಲ್ಲೋ... ಈಗ್ ನೋಡಿದ್ರೆ...?” ಎಂದು ಅನುಮಾನ ಭರಿತ ಪ್ರಶ್ನೆಯನ್ನೆಸೆಯುತ್ತಾನೆ.
ಗಣೇಶ
ನಾಚಿಕೊಳ್ಳುತ್ತಾ, “ಅದೆಲ್ಲಾ ಏನಿಲ್ಲ ಕಣೋ... (ತನ್ನ ಎದೆ ಮುಟ್ಟಿಕೊಳುತ್ತಾ) ಆದ್ರೂ ಯಾಕೋ ನಾನೇ
ಬಿದ್ಬುಟ್ಟೆ ಅನ್ಸುತ್ತೆ” ಎಂದು ಉತ್ತರಿಸಿ, ಅವಳು ಹೋದ ಕಡೆಯೇ ನೋಡುತ್ತಾನೆ. ಗೆಳೆಯ ಅರ್ಥವಾದವನಂತೆ
ಗಣೇಶನನ್ನು ನೋಡುತ್ತಾನೆ.
*
ಗಣೇಶ
ತೇಜಸ್ವಿನಿ ತನ್ನನ್ನು ಪ್ರೀತಿಸುತ್ತಾಳೆಂಬ ಭ್ರಮೆಯಲ್ಲೇ ದಿನಗಳು ಕಳೆದಂತೆ, ಆಟವಾಡಿಕೊಂಡಂತೆ ಸೆಮಿಸ್ಟರ್‍ಗಳು
ಕಳೆದು ಇವರ ಬ್ಯಾಚಿನ ಬಿ.ಇ. ಮುಗಿಯುತ್ತದೆ. ಅದ್ದೂರಿಯಾಗಿ ಬೀಳ್ಕೊಡುಗೆ ಸಮಾರಂಭವೂ ನಡೆಯುತ್ತದೆ.
ಸಮಾರಂಭದ ನಂತರ ಗಣೇಶ-ತೇಜಸ್ವಿನಿ ಊಟ ಮಾಡುತ್ತಾ, ಮಾತಾಡುತ್ತಾ ಒಟ್ಟಿಗೆ ಕುಳಿತಿರುವಾಗ ಗಣೇಶ ಏನನ್ನೋ
ಹೇಳಲು ಪ್ರಯತ್ನಿಸಿ ಏನನ್ನೋ ಮಾತನಾಡುತ್ತಿರುತ್ತಾನೆ. ತೇಜಸ್ವಿನಿ ಮಾತ್ರ ಎಂದಿನಂತೆ ಫ್ರೆಂಡ್ಲಿಯಾಗಿ
ಮಾತನಾಡುತ್ತಿರುತ್ತಾಳೆ.
ಮನಸ್ಸಿನಲ್ಲೇ
‘ಇವಳೇನೂ ಹೇಳ್ತ ಇಲ್ವಲ್ಲಪ್ಪ ಗಾಡ್ ಗಣಪತಿ. ಮತ್ತೆ ಸಿಕ್ತಾಳೋ ಇಲ್ವೋ...’ ಎಂದು ಚಡಪಡಿಸುತ್ತಾ ಗಣೇಶ
ಕಡೆಗೂ ಧೈರ್ಯ ಮಾಡಿ “ಮುಂದೇನ್ಮಾಡ್ತಿರ...?” ಎಂದು ಕೇಳಿಯೇ ಬಿಡುತ್ತಾನೆ.
“...ಯಾವುದಾದ್ರು
ಜಾಬ್‍ನಲ್ಲಿ ಸೆಟ್ಲ್ ಆಗ್ತಿನಿ. ಅಷ್ಟೆ!” ಎಂದು ತನ್ನ ಪೂರ್ವ ನಿರ್ಧಾರಿತ ಉತ್ತರವನ್ನು ಹೇಳುತ್ತಾಳೆ.
“ನಾ
ಕೇಳಿದ್ದು ಜಾಬ್ ಬಗ್ಗೆ ಅಲ್ಲ” ಎಂದು ಗಣೇಶ ತುಸು ಖಾರವಾಗಿಯೇ ಪ್ರತಿಕ್ರಿಯಿಸುತ್ತಾನೆ.
“ಮತ್ತೆ...?”
ತೇಜಸ್ವಿನಿ ಕುತೂಹಲದಿಂದ ಪ್ರಶ್ನಿಸುತ್ತಾಳೆ.
“ಮತ್ತೆ
ಅಂದ್ರೆ... ಮದುವೆ ಬಗ್ಗೆ, ನಿಮ್ಮ ಮದುವೆ ಬಗ್ಗೆ” ಎಂದು ಗಣೇಶ ಹೇಳುತ್ತಾನೆ.
“ಮದುವೇನಾ...?
ಖಂಡಿತ ಆಗ್ತೀನಪ್ಪಾ... ಯಾರಾದ್ರೂ ಒಳ್ಳೆ ಹುಡುಗ ಸಿಕ್ಕುದ್ರೆ...?” ಎಂದು ಹೇಳಿ ಏನೋ ಯೋಚಿಸುತ್ತಿರುವಂತೆ
ಕಂಡಾಗ ಗಣೇಶನಿಗೆ ಕುತೂಹಲ ತಡೆಯಲಾಗುವುದಿಲ್ಲ. “ಆದ್ರೆ ನಿನ್ನೊಬ್ಬನನ್ನು ಬಿಟ್ಟು” ಎಂದು ಮಾತು ಮುಂದುವರಿಸಿದ
ತೇಜಸ್ವಿನಿ ಮೆಲ್ಲಗೆ ನಗುತ್ತಾಳೆ.
ಗಣೇಶನಿಗೆ
ದಿಗ್ಭ್ರಮೆಯಾಗುತ್ತದೆ. ಅದನ್ನು ವ್ಯಕ್ತಪಡಿಸದೆ ತಮಾಷೆಯಿರಬಹುದೆಂದುಕೊಳ್ಳುತ್ತಾ, “ಯಾಕೆ...?” ಎಂದು
ಕೇಳುತ್ತಾನೆ.
“ನೀನೊಬ್ಬ
ಒಳ್ಳೆ ಫ್ರೆಂಡ್ ಕಣೋ ಗಣೇಶ್. ನೀನ್ ನಂಗೆ ಗಂಡ ಆಗ್ಬೋದು ಅಂತ ಯಾವತ್ತೂ ಅನ್ನಿಸ್ಲಿಲ್ಲ. ಯು ಆರ್
ನಾಟ್ ಮೈ ಡ್ರೀಮ್ ಬಾಯ್” ಎಂದು ಹೇಳಿ ತನ್ನ ಕೈ ತೊಳೆದುಕೊಂಡು ಮುಂದುವರೆಯುತ್ತಾ, “ಈ ಫ್ರೆಂಡ್‍ನ
ಮರಿಬೇಡ. ನಾನು ಅಷ್ಟೆ ಯಾವತ್ತು ನಿನ್ನ ಮರೆಯೊಲ್ಲ. ಬಾಯ್...” ಎಂದು ಹೇಳಿ ಗಣೇಶನ ಮನದ ಇಂಗಿತವನ್ನು
ಅರ್ಥ ಮಾಡಿಕೊಂಡವಳಂತೆ, ಇನ್ನು ಇಲ್ಲಿಯೇ ಕುಳಿತಿರುವುದು ಅಷ್ಟು ಸಮಂಜಸವಲ್ಲ, ಅಂತಲೋ ಏನೋ ಅಲ್ಲಿಂದ
ಹೊರಟು ಹೋಗುತ್ತಾಳೆ. ಗಣೇಶನ ಕಣ್ಣುಗಳಲ್ಲಿ ಅಶ್ರುಧಾರೆ ಸುರಿಯತೊಡಗುತ್ತದೆ.
***
ಗೆಳೆಯರ ಕಾಫೀ
ಕೂಟ
#ನೋ ಮೋರ್ ಕಾಫೀ
ಪ್ಲೀಸ್
ಗಣೇಶನ
ಕಣ್ಣಾಲಿಗಳಲ್ಲಿ ನೀರನ್ನು ಗಮನಿಸಿದ ಅಖಿಲಾ, “ಯಾಕೆ ಗಣೇಶ್ ಅಳ್ತಾ ಇದ್ದೀರಾ?” ಎಂದು ಸಮಾಧಾನಿಸುವಂತೆ
ಕೇಳುತ್ತಾಳೆ.
ಗಣೇಶ
ದುಃಖದಿಂದಲೇ, “ಒಬ್ಳು ಹುಡುಗೀನ ನಿಜವಾದ ಫ್ರೆಂಡಾಗಿ ನೋಡೋಕೆ ಆಗ್ಲಿಲ್ಲ. ಈ ಹಾಳು ಹೃದಯಕ್ಕೆ” ಎಂದು
ಬೇಸರಿಸಿಕೊಳ್ಳುತ್ತಾನೆ.
“ಹೋಗ್ಲಿ
ಬಿಡಿ ಗಣೇಶ್, ಇದರಲ್ಲಿ ನಿಮ್ದೇನೂ ತಪ್ಪಿಲ್ಲ. ಮೋಸ್ಟ್ಲಿ ನಿಮ್ಮಂಥ ಹುಡುಗನ್ನ ಪಡೆಯೋಕೆ ತೇಜಸ್ವಿನಿಗೆ
ಅದೃಷ್ಟ ಇರಲಿಲ್ಲ ಅಂತಾ ಕಾಣುತ್ತೆ” ಎಂದು ಅಖಿಲಾ ಸಮಾಧಾನದ ಮಾತನಾಡುತ್ತಾಳೆ.
ಗಣೇಶ
ಸ್ವಲ್ಪ ಸಮಾಧಾನಗೊಂಡು ನಿಟ್ಟುಸಿರು ಬಿಡುವಷ್ಟರಲ್ಲಿ ವೈಟರ್ ಮತ್ತೊಂದು ಕಾಫೀ ಅವನಾಗೇ ತರುತ್ತಾನೆ.
ಇದನ್ನು ಗಮನಿಸಿದ ಅಖಿಲಾ, “ಕಾಫೀ ಕುಡಿದು ಕುಡಿದು ಸಾಕಾಯ್ತು ಗಣೇಶ್. ಆಗ್ಲೆ ಮಧ್ಯಾಹ್ನ ಆಗ್ತಾ ಬಂತು.
ಊಟ ಮಾಡೋಣ” ಎಂದು ಕೇಳುತ್ತಾಳೆ.
“ನೋ!...”
ಎಂದು ಗಣೇಶ ಹೇಳಿದ್ದು ಕೂಗಿದಂತೆಯೇ ಭಾಸವಾಗುತ್ತದೆ.
“ಯಾಕೆ
ಗಣೇಶ್?” ಎಂದು ಅಖಿಲಾ ಗಾಬರಿಯಾಗುತ್ತಾಳೆ.
“ಯಾಕಂದ್ರೆ...
ನಾವಿಬ್ರು ಒಟ್ಟಿಗೆ ಊಟ ಮಾಡೋದು ನಮ್ ಮದ್ವೇಲಿ ಮಾತ್ರ ಅಂತ ನಂದೇ ಒಂದು ಶರತ್ತಿದೆ, ಅದಕ್ಕೆ. ಕಾಫೀ
ಬೇಡಂದ್ರೆ ನೋ ಪ್ರಾಬ್ಲಮ್. ಮಾತಾಡ್ಬೋದಲ್ಲ!” ಎಂದು ಗಣೇಶ ತನ್ನ ನಿರ್ಧಾರವನ್ನು ಹೇಳಿ, ಕಾಫೀ ಬೇಡವೆಂದು
ವೈಟರಿಗೆ ಕಣ್ಸನ್ನೆಯಲ್ಲೇ ಹೇಳುತ್ತಾನೆ. ವೈಟರ್ ಕಾಫೀ ವಾಪಸ್ಸು ತೆಗೆದುಕೊಂಡು ಹೋಗುತ್ತಾನೆ.
ಅಖಿಲಾ
ಕೊಂಕಿನಿಂದ, “ಓಕೆ. ಆ್ಯಸ್ ಯು ವಿಶ್. ನಿಮ್ಮ ಜೀವನದಲ್ಲಿ ಇನ್ನೂ ಎಷ್ಟು ಜನ ಹುಡುಗಿಯರಿದ್ದಾರೆ?”
ಎಂದು ಕೇಳುತ್ತಾಳೆ.
“ಇನ್ನಿಬ್ರೆ!”
ಎಂದು ಗಣೇಶ ತಟಕ್ಕನೆ ಉತ್ತರಿಸುತ್ತಾನೆ.
ರೆಡಿಮೇಡ್
ಉತ್ತರದಿಂದ ಅಖಿಲಾಳಿಗೆ ಆಶ್ಚರ್ಯವಾಗುತ್ತದೆ. “ಇನ್ನಿಬ್ರೆ! ಯಾರಪ್ಪ ಆ ಸುಂದರಿಯರು?” ಎಂದು ಕುತೂಹಲದಿಂದ
ಗಣೇಶನನ್ನೇ ನೋಡುತ್ತಾಳೆ.
“ನನ್
ಜೀವನದಲ್ಲಿ ಬಂದ ಏಳನೇ ಹುಡುಗಿ...” ಎಂದು ಗಣೇಶ ರಾಗ ಎಳೆಯುವುದನ್ನು ಗಮನಿಸಿದ ಅಖಿಲಾ, “ಒಂದ್ನಿಮಿಷ,
ನೀವು ಆರನೇ ಹುಡ್ಗಿ ಬಗ್ಗೆ ಹೇಳ್ಬೇಕಲ್ವಾ? ಏಳು ಅಂತೀದೀರಾ...” ಎಂದು ಗಣೇಶನನ್ನು ತಡೆಯುತ್ತಾಳೆ.
“ಆರನೇ
ಹುಡ್ಗಿ ಬಗ್ಗೆ ಲಾಸ್ಟಿಗೆ ಹೇಳ್ತೀನಿ. ಈಗ ಮೊದ್ಲು ಏಳನೆಯವಳ ಬಗ್ಗೆ ಕೇಳಿ” ಎಂದು ಗಣೇಶ ಅಖಿಲಾಳಿಗೆ
ಆಗ್ರಹಿಸುತ್ತಾನೆ.
“ಅದ್ಯಾಕೆ?”
ಇವಳ ಮತ್ತೊಂದು ಪ್ರಶ್ನೆ ತೇಲಿ ಬರುತ್ತದೆ.
“ಅದೇ
ಸಸ್ಪೆನ್ಸ್...”
“ಹ್ಞೂಂ...
ಓಕೆ... ನಿಮ್ಮಿಷ್ಟ”
“ಆಶ್ಚರ್ಯ
ಅಂದ್ರೆ, ಆರನೆಯವಳ ಪರಿಚಯವಾಗಿ ಹತ್ತೇ ನಿಮಿಷದಲ್ಲಿ ಏಳನೆಯವಳನ್ನು ನೋಡಿದೆ. ಅವಳನ್ನು ನೋಡಿದ ತಕ್ಷಣ
ಇವಳೇ ನನ್ನ ಬಾಳ ಸಂಗಾತಿ, ಜನುಮ ಜನುಮದ ಗೆಳತಿ ಅಂತಾ ಅನ್ಸೋಕೆ ಶುರುವಾಯ್ತು. ಅವಳ ಹೆಸರು ಲಕ್ಷ್ಮೀ...”
ಎಂದು ಗಣೇಶ ಮುಂದುವರಿಯುತ್ತಾನೆ.
***
ನೂರೂ ಜನ್ಮಕೂ...
ನೂರಾರು ಜನ್ಮಕೂ...
ಅಖಿಲಾಳನ್ನು
ಬೀಳ್ಕೊಟ್ಟ ಗಣೇಶ ಏನೋ ಯೋಚಿಸುವವನಂತೆ ತಲೆತಗ್ಗಿಸುತ್ತಾ ನಡೆಯುತ್ತಿರುತ್ತಾನೆ. ನಡೆಯುತ್ತಿದ್ದವನ
ಬಳಿಗೆ ಗೆಜ್ಜೆಯೊಂದು ನೆಲದ ಮೇಲೆ ಜಾರಿಕೊಂಡು ಬಂದು ಬಲಗಾಲಿಗೆ ತಾಗುತ್ತದೆ. ಆರ್ಕೇಸ್ಟ್ರಾದಲ್ಲಿ
ಅಮೆರಿಕ ಅಮೆರಿಕ ಚಿತ್ರದ ನೂರೂ ಜನ್ಮಕೂ... ನೂರಾರು ಜನ್ಮಕೂ... ಹಾಡಿನ ಟ್ಯೂನ್ ಕೇಳಿ ಬರುತ್ತದೆ.
ಗಣೇಶ ಆ ಗೆಜ್ಜೆಯನ್ನು ಪ್ರೀತಿಯಿಂದ ಎತ್ತಿಕೊಂಡು ಅದರತ್ತ ಒಮ್ಮೆ ನೋಡಿ ನಗುತ್ತಾ, ತಲೆಯೆತ್ತಿ ನೋಡಿ
ಯಾರೂ ಕಾಣದೇ ನೋಟವನ್ನು ಆರ್ಕೇಸ್ಟ್ರಾದ ಗಾಯಕನೆಡೆಗೆ ಹರಿಸುತ್ತಾನೆ. ಆ ಗಾಯಕ ಗಣೇಶನೆಡೆಗೆ ಹೂನಗು
ಸೂಸುತ್ತಾ “ನೂರೂ ಜನ್ಮಕೂ... ನೂರಾರು ಜನ್ಮಕೂ...” ಎಂದು ತನ್ಮಯನಾಗಿ ಹಾಡಲು ತೊಡಗುತ್ತಾನೆ. ಹಾಡಲ್ಲೇ
ಮೈಮರೆಯುವ ಗಣೇಶ ಎದುರಿಗೆ ಯಾರೋ ಬಂದಂತಾಗಿ ಇತ್ತ ತಿರುಗಿ ನೋಡುತ್ತಾನೆ. ಎದುರಿಗೆ... ಎದುರಿಗೆ ತಿಳಿ
ನೀಲಿ ಚೂಡಿಯ ಹುಡುಗಿ ನಗುತ್ತಾ ತನ್ನ ಬಲಗೈ ಮುಂದೆ ಚಾಚಿ ನಿಂತಿರುತ್ತಾಳೆ. ಗಣೇಶನಿಗೆ ಮಿಂಚಿನ ಸಂಚಾರವಾಗುತ್ತದೆ.
ಆ ಹುಡುಗಿಗೂ ಧನ್ಯತಾಭಾವ ಉಂಟಾಗುತ್ತದೆ. ಟೋಟಲಿ ಲವ್ ಅಟ್ ಫಸ್ಟ್ ಸೈಟ್! ಗಣೇಶ ಗೆಜ್ಜೆಯನ್ನು ಆ ಹುಡುಗಿಗೆ
ನೀಡುತ್ತಾನೆ. ಅವಳು ಅದನ್ನು ಪ್ರೀತಿಯಿಂದ ತೆಗೆದುಕೊಂಡು, “ನಿಮ್ಮ ಹತ್ರ ಸ್ವಲ್ಪ ಮಾತಾಡಬೇಕು. ಟೆರೆಸ್
ಮೇಲೆ ಬರ್ತೀರಾ, ಪ್ಲೀಸ್...?” ಎಂದು ಕೋರುತ್ತಾಳೆ.
ಟೆರೆಸ್
ಮೇಲಕ್ಕೆ ಓಡಿದ ಅವಳ ಹಿಂದೆಯೇ ಗಣೇಶನೂ ಹೋಗುತ್ತಾನೆ. ಇಬ್ಬರೂ ಆ ಮದುವೆ ಮನೆಯ ವಿಶಾಲವಾದ ಟೆರೆಸ್
ಮೇಲೆ ಬರುತ್ತಾರೆ. ಅಲ್ಲೊಂದು ಸುಂದರ ಜಗತ್ತೇ ಸೃಷ್ಟಿಯಾಗಿರುತ್ತದೆ. ದೂರದಲ್ಲಿ ಕಾಣುವ ದೇವರಾಯನದುರ್ಗದ
ಬೆಟ್ಟದ ಸಾಲುಗಳು, ಬೆಟ್ಟದ ಪಾದಕ್ಕೆ ತಂಪೆರೆಯುವಂತೆ ಕಾಣುವ ಕೆರೆಯ ನೀರು, ಈವೆರಡರ ಸಂಗಮಕ್ಕೆ ಸಾಕ್ಷಿಯಾದ
ಬಾನ ಬೆಳದಿಂಗಳು. ವಾವ್! ಎಂತವರನ್ನು ತನ್ನ ರಮ್ಯಲೋಕದಲ್ಲಿ ಮೈಮರೆಸುವಂತ ಆ ನೋಟಕ್ಕೆ ಮನ ಸೋಲದವರ್ಯಾರು
ಎಂದ ಮೇಲೆ ಪ್ರೀತಿಗಾಗಿ ತುಡಿಯುತ್ತಿರುವ ಈ ಎರಡು ಹೃದಯಗಳಿಗೆ ಇನ್ನೇನು ಬೇಕು? ಬಹಳ ಹೊತ್ತು ಈ ರಮ್ಯಲೋಕದಲ್ಲಿ
ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ ಏನು ಮಾತನಾಡುವುದೆಂದು ತೋಚದೆ ಕಾಲಕಳೆಯುತ್ತಿದ್ದಾಗ ಗಣೇಶನೇ
ಮೌನ ಮುರಿದು, “ನಿಮ್ಮನ್ನ ಇವತ್ತು ನೋಡ್ದಾಗ್ಲಿಂದ ಏನೋ ಒಂಥರಾ ಆಗ್ತಿದೆ ಕಣ್ರೀ. ಹಲವಾರು ವರ್ಷದಿಂದ
ಜೊತೆಗಿರೋ ನಿಮ್ಮುನ್ನ, ಇವತ್ ನೋಡ್ತಾ ಇದ್ದಿನೇನೋ ಅನ್ನಿಸ್ತಿದೆ...”
“ಬರಿ
ಅಷ್ಟೇನಾ?” ಎಂದು ಆ ಹುಡುಗಿ ಚುಟುಕಾಗಿಯೇ ಕೇಳುತ್ತಾಳೆ.
“ಅಷ್ಟೇನಾ...?
ಈಗ್ಲೆ ನಿಮ್ಗೆ ಐ ಲವ್ ಯು ಹೇಳ್ಬೇಕು ಅಂತಾ ಅನ್ನಿಸ್ತಿದೆ...” ಎಂದು ತೊದಲುತ್ತಾನೆ.
“ಮತ್
ಇನ್ನಾ ಯಾಕ್ ತಡ ಮಾಡ್ತಿದೀರಾ?” ಬೇಗ ಹೇಳಿ. ಹುಡುಗಿ ಅವಸರದಿಂದ ನುಡಿಯುತ್ತಾಳೆ.
“ನೀವೇನ್ರಿ
ಹಿಂಗ್ ಮಾತಾಡ್ತೀರ?” ಗಣೇಶ ತನ್ನ ಗಾಬರಿ ವ್ಯಕ್ತಪಡಿಸುತ್ತಾನೆ.
“ಅನ್ಸಿದ್ದನ್ನ
ಮಾಡೋದಿಕ್ಕೆ ಯೋಚನೆ ಮಾಡ್ಬಾರ್ದು. ಕಾಲ ಯಾವತ್ತೂ, ಯಾರ್ಗೂ ಕಾಯೋದಿಲ್ಲ. ಇದು ನಿಮಗಾಗಲೇ ಅರ್ಥವಾಗಿರ್ಬೇಕು.
ಅಲ್ವಾ?” ಎಂದು ಹೇಳುತ್ತಾಳೆ. ಅವಳ ಪ್ರಶ್ನೆಯಲ್ಲಿ ಎಲ್ಲಾ ಗೊತ್ತಿರುವುವಳ ಭಾವವಿರುತ್ತದೆ.
“ನಂಗೇನೋ
ಅನಿಸ್ತಾ ಇದೆ ಅಂತಾ ನಾ ಅದುನ್ನ ಮಾಡ್ಬಿಟ್ರೆ? ಆಮೇಲೆ...” ಎಂದು ತನ್ನ ಭಯವನ್ನು ಮುಂದಿಡುತ್ತಾನೆ
ಗಣೇಶ.
“ಮೊದ್ಲು
ಅನ್ಕೊಂಡಿದ್ನ ಮಾಡ್ಬಿಡ್ಬೇಕು. ಆಮೇಲೆ ಏನಾಗ್ಬೇಕೋ ಅದ್ ಆಗೇ ಆಗುತ್ತೆ” ಎಂದು ಚುಡಾಯಿಸುವ ಧ್ವನಿಯಲ್ಲಿ
ಆ ಹುಡುಗಿ ಹೇಳುತ್ತಾಳೆ.
ಗಣೇಶ
ಸ್ವಲ್ಪ ಯೋಚಿಸಿ, ಅವಳನ್ನೇ ನೋಡುತ್ತಾ... “ಐ ಲವ್ ಯು ಕಣ್ರೀ. ಐ ಲವ್ ಯು...” ಎಂದು ಹೇಳಿಯೇಬಿಡುತ್ತಾನೆ.
ಅಷ್ಟು ಹೇಳಿದವನು ತಡಮಾಡದೆ ಅವಳನ್ನು ಆಲಂಗಿಸಿ ಅವಳ ಹಣೆಗೊಂದು ಹೂಮುತ್ತನಿತ್ತು ಅವಳ ಕಣ್ಣುಗಳನ್ನೇ
ನೋಡುತ್ತಾನೆ. ತುಸು ಸಂಕೋಚವನ್ನೂ ವ್ಯಕ್ತಪಡಿಸದ ಆ ಹುಡುಗಿಯೂ ಇವನ ಕಣ್ಣುಗಳನ್ನೇ ನೋಡುತ್ತಾಳೆ. ಇಬ್ಬರೂ
ಪರಸ್ಪರರ ಕಣ್ಣುಗಳನ್ನು ನೋಡಿಕೊಳ್ಳುತ್ತಾ ಇರುವಾಗ “ಐ ಟೂ ಲವ್ ಯು... ಗಣೇಶ್” ಎಂದು ಆ ಹುಡುಗಿ ಸಿಹಿಯಾಗಿ
ನಗುತ್ತಾಳೆ.
ಗಣೇಶ
ಆಶ್ಚರ್ಯದಿಂದ, “ಅರೇ, ನನ್ ಹೆಸರು ನಿಮ್ಗೆ... ಹೇಗೊತ್ತು?” ಎಂದು ತೆಕ್ಕೆಯನ್ನು ಸಡಿಲಿಸುತ್ತಾ ಕೇಳುತ್ತಾನೆ.
“ನಿಮ್ಮ
ಹೆಸರೇನು? ನಿಮ್ಮ ಬಗ್ಗೆ ನಂಗೆಲ್ಲಾ ಗೊತ್ತು. ಅದ್ಸರಿ, ನನ್ ಹೆಸರನ್ನ ಸಹ ಕೇಳ್ದಲೆ ಐ ಲವ್ ಯು ಅಂತಾ
ಹೇಳ್ಬಿಟ್ರಲ್ಲ!” ಎಂದು ಆ ಹುಡುಗಿ ಕೇಳುತ್ತಾಳೆ.
“ಹೆಸರಲ್ಲೇನಿದೆ...
ನಿಮ್ಮನ್ನ ನೋಡ್ದಾಗಿಂದ ನನ್ ಮನಸ್ಸಲ್ಲಿ ಏನೋ ಒಂಥರಾ ಅನ್ನುಸ್ತಲ್ಲ? ಆ ಪ್ರೀತಿ ಇದ್ರೆ ಸಾಕು. ಪ್ರೀತಿ
ಮಾಡೋಕೆ ಹೆಸರೇಕೆ ಬೇಕು. ಆದ್ರೂ ಪ್ರೀತಿಯಿಂದ ಕರೆಯೋಕೆ ಒಂದು ಹೆಸರು ಅಂತಾ ಬೇಕಲ್ಲ? ಅದಕ್ಕೆ ಕೇಳ್ತಿನಿ
ನಿಮ್ಮ ಹೆಸರು?” ಎಂದು ಕೇಳುತ್ತಾನೆ.
“ನನ್ನ
ಹೆಸರು ಲಕ್ಷ್ಮೀ” ಇಲ್ಲಿಯವರೆಗೂ ಇರದ ನಾಚಿಕೆಯಿಂದ ಲಕ್ಷ್ಮೀ ನುಡಿಯುತ್ತಾಳೆ.
“ವಾವ್!
ಲಕ್ಷ್ಮೀ!! ಲವ್ಲಿ ನೇಮ್. ಅದ್ಸರಿ, ನಂಗೇನೋ ನೀವು ನನ್ ಜನುಮ ಜನುಮದ ಗೆಳತಿ ಅಂತ ಅನ್ನುಸ್ತು ಅದುಕ್ಕೆ
ಧೈರ್ಯವಾಗಿ ಐ ಲವ್ ಯು ಅಂತಾ ಹೇಳ್ದೆ. ಓಕೆ. ಆದ್ರೆ... ನೀವೂ ಸಹ...!? ನಿಮ್ಗೂ ನನಗನ್ನಿಸಿದಂತೆಯೇ
ಅನ್ನುಸ್ತಾ...?” ಎಂದು ಆಶ್ಚರ್ಯಭರಿತನಾಗಿ ಕೇಳುತ್ತಾನೆ.
“ಈ
ಹುಡುಗ್ರೆ ಹೀಗೆ ಅನ್ಸುತ್ತೆ! ನಂಗೆ ಅನ್ಸೋದಲ್ಲ, ಈ ಕ್ಷಣಕ್ಕೋಸ್ಕರ ಎಷ್ಟು ವರ್ಷದಿಂದ ಕಾಯ್ತಿದ್ದೀನಿ
ಗೊತ್ತಾ? ಒಂದಲ್ಲಾ ಒಂದಿನ ನಾವಿಬ್ಬರು ಎದುರು ಬದುರು ನಿಂತು ನಮ್ಮ ಪ್ರೀತಿನ ನಿವೇದಿಸಿಕೋತಿವೀ, ಹಂಚಿಕೋತಿವಿ
ಅನ್ನೋ ಕನಸು ಇವತ್ತು ನನ್ ಕಾಲ್ಗೆಜ್ಜೆ ಕಳಚಿ ನಿಮ್ಮ ಹತ್ರ ಬೀಳೋದ್ರಿಂದ ನನಸಾಯ್ತು, ಗೊತ್ತಾ?” ಎಂದು
ಪ್ರಶ್ನೆಗಳ ಮಳೆಯನ್ನೇ ಸುರಿಸುತ್ತಾಳೆ. ಅವಳ ಪ್ರಶ್ನೆಗಳಲ್ಲಿ ಹುಸಿಮುನಿಸು ಮನೆ ಮಾಡಿರುತ್ತದೆ.
“ನಂಗೆನೋ
ಎಲ್ಲಾ ಅಯೋಮಯವಾಗಿದೆ. ನೀವ್ಯಾರು? ನನ್ ಹೆಸರು ನಿಮ್ಗೆ ಹೇಗೊತ್ತು. ಇನ್ನಾದ್ರೂ ಹೇಳ್ತಿರ ಪ್ಲೀಸ್...”
ಎಂದು ವಿನಯದಿಂದ ಕೋರುತ್ತಾನೆ.
“ಹೇಳ್ಲೆ
ಬೇಕಾ? ಓಕೆ. ಆದರೆ, ಈ ಮಧುರ ಕ್ಷಣದ ಸಂಭ್ರಮದಲ್ಲಿ ಅದೂ ಆಗಿ ಹೋಗಲಿ ಅಂದ್ರೆ ಈಗ ತುಂಬಾ ಟೈಮಾಯ್ತು.
ನಾಳೆ ಬೆಳಿಗ್ಗೆ ನಿಮ್ಮನೆ ಹತ್ರ ಇರೋ ಪಾರ್ಕಲ್ಲಿ ಜಾಗ್‍ಗೆ ಬಂದಾಗ ಹೇಳ್ತೀನಿ. ಪ್ಲೀಸ್, ಒತ್ತಾಯ
ಮಾಡಬೇಡಿ. ನಾಳೆ ಖಂಡಿತಾ ಹೇಳ್ತೀನಿ” ಎಂದು ತನ್ನ ಅಭಿಪ್ರಾಯವನ್ನು ಹೇಳುತ್ತಾಳೆ.
ಇಷ್ಟು
ವರ್ಷಗಳ ತಪಸ್ಸಿನ ಫಲದಲ್ಲಿ ಮೈಮರೆತ ಗಣೇಶ ಒಲ್ಲದ ಮನಸ್ಸಿನಿಂದಲೇ ಅವಳನ್ನು ಬೀಳ್ಕೊಡುತ್ತಾನೆ. ಮುಗುಳ್ನಗುತ್ತಾ
ಲಕ್ಷ್ಮೀ ಅಲ್ಲಿಂದ ತೆರಳುತ್ತಾಳೆ. ಬಾನ ಚಂದಿರ ಮತ್ತಷ್ಟು ಅರಳುತ್ತಾನೆ.
***
ಗೆಳೆಯರ ಕಾಫೀ ಕೂಟ
ಒಲವ ಧಾರೆಯೇ... ಒಲಿದೊಲಿದು ಬಾರೆಲೇ...
“ಲಕ್ಷ್ಮೀ
ಆ ದಿನ ಪಾರ್ಕ್ ಹತ್ರ ಬರ್ಲೆ ಇಲ್ಲಾ ಕಣ್ರೀ. ಈ ಹುಡುಗೀರ ವಿಷಯದಲ್ಲಿ ನನ್ ಅದೃಷ್ಟಾನೇ ಸರಿ ಇಲ್ಲ
ಅನ್ಸುತ್ತೆ” ಎಂದು ಗಣೇಶ ಬೇಸರದಿಂದ ಹೇಳುತ್ತಾನೆ.
“ನಿಮ್
ಅದೃಷ್ಟ ಚೆನ್ನಾಗೇ ಇದೆ...” ಎಂಬ ಮಧುರವಾದ ಧ್ವನಿ ಕೇಳಿಬರುತ್ತದೆ. ಇಬ್ಬರೂ ಆ ಧ್ವನಿಯೆಡೆಗೆ ತಿರುಗಿ
ನೋಡುತ್ತಾರೆ.
ಅಲ್ಲಿ
ಲಕ್ಷ್ಮೀ ನಿಂತಿರುತ್ತಾಳೆ. ಇವರಿಬ್ಬರೂ ಅವಳನ್ನು ಕುತೂಹಲದಿಂದ ನೋಡುವುದನ್ನು ನೋಡಿ ಅವರ ಟೇಬಲ್ಲಿಗೆ
ಬಂದು ಕೂರುತ್ತಾಳೆ. ಕೂತವಳೇ, “ನಿಮ್ ಅದೃಷ್ಟ ಚೆನ್ನಾಗೇ ಇದೆ ಗಣೇಶ್. ಆ ದಿನ ಪಾರ್ಕ್‍ಗೆ ಬರೋಕೆ
ಆಗ್ಲಿಲ್ಲ ಸಾರಿ” ಎಂದು ಕ್ಷಮೆಯಾಚಿಸುತ್ತಾಳೆ.
“ಇಟ್ಸ್
ಒಕೆ ಲಕ್ಷ್ಮೀ. ಪಾರ್ಕ್‍ಗೆ ಬರ್ದಲೆ ಇದ್ರೂ, ಕಾಫೀಗಾದ್ರು ಬಂದ್ರಲ್ಲ. ಅಷ್ಟಕ್ಕೂ ಸರ್‍ಪ್ರೈಸ್ ಕೊಡೋದೇ
ನಿಮ್ಮ ಕೆಲಸ ಅಲ್ವಾ? ಎನಿ ಹೌ ಮೀಟ್ ಮೈ ಫ್ರೆಂಡ್ ಅಖಿಲಾ” ಎಂದು ಹೇಳುತ್ತಾ ಅಖಿಲಾಳನ್ನು ಪರಿಚಯಿಸುತ್ತಾನೆ.
“ಹಲೋ!”
ಎಂದು ಲಕ್ಷ್ಮೀ ಅಖಿಲಾಡೆಗೆ ಕೈ ಚಾಚುತ್ತಾಳೆ.
“ಹಾಯ್!”
ಎಂದು ಅಖಿಲಾ ಲಕ್ಷ್ಮೀಯ ಕೈಕುಲುಕುತ್ತಾಳೆ.
ಅವಳ
ಕೈ ಗಣೇಶನೆಡೆಗೆ ದೃಢವಾಗಿರುವಂತೆ ಅಖಿಲಾಳಿಗೆ ತೋರುತ್ತದೆ.
“ಈಗ್ಲಾದ್ರು
ನಮ್ ಕಥೆ ಹೇಳ್ತೀರಾ...ಪ್ಲೀಸ್. ನನಗಿನ್ನ ಅಖಿಲಾ ತುಂಬ ಕ್ಯೂರಿಯಸ್ ಆಗಿದ್ದಾರೆ” ಎಂದು ಗಣೇಶ ಲಕ್ಷ್ಮೀಯನ್ನು
ಕೋರುತ್ತಾನೆ.
“ಓಕೆ.
ಇಟ್ಸ್ ಮೈ ಪ್ಲೆಷರ್. ನನ್ ಹೆಸರು ಲಕ್ಷ್ಮೀ. ನಂದೂ ಇದೇ ಊರು. ಇನ್ ಫ್ಯಾಕ್ಟ್ ನಾ ಹುಟ್ಟಿದ್ದು ಗಣೇಶ್
ಹುಟ್ಟಿದ್ ಆಸ್ಪತ್ರೇಲೆ” ಎಂದು ಶುರುಮಾಡಿದ ಲಕ್ಷ್ಮೀ ಮುಂದುವರಿಯುತ್ತಾ, “ಏಳನೇ ಕ್ಲಾಸಲ್ಲಿ ನಾನೂ
ಗಣೇಶ್ ಬರ್ತಿದ್ದ ಟ್ಯೂಷನ್‍ಗೆ ಬರ್ತಿದ್ದೆ. ಯಾವಾಗಲೂ ವಟವಟ ವನಜಾಕ್ಷಿ ಮಾತಲ್ಲಿ ಗಣೇಶ್ ಕಳೆದು ಹೋಗ್ತಿದ್ದರಿಂದ
ನನ್ನುನ್ನ ಗಮನಿಸಿಯೂ ಇರಲಿಲ್ಲ. ನಾನೂ ಮಾತಾಡ್ತಿದ್ದೆ, ಆದ್ರೆ ವನಜಾಕ್ಷಿಯಷ್ಟು ಅಲ್ಲ. ಸಂಕ್ರಾಂತಿ
ಹಬ್ಬದ ದಿನ ಮಾಸ್ಟರ್ ಮನೇಲಿ ಹೊಸ ರೇಷ್ಮೆ ಲಂಗ ತೊಟ್ಟು ಗಣೇಶ್‍ಗೆ ಎಳ್ಳು-ಬೆಲ್ಲ ಕೊಟ್ಟಿದ್ದೆ, ಆದ್ರೆ
ಅವರ ಗಮನವೆಲ್ಲಾ ವಟವಟ ವನಜಾಕ್ಷಿ ಕಡೆಗೇನೆ ಇತ್ತು.”
“ಹೈಸ್ಕೂಲಲ್ಲಿ
ಹುಡುಗೀರ ಖೋ-ಖೋ ಟೀಂ ಕ್ಯಾಪ್ಟನ್ನೇ ನಾನು. ಪಾಪ ಗಣೇಶ ಕಣ್ಣೆಲ್ಲಾ ಜಿಂಕೆಮರಿ ಸಲ್ಮಾ ಕಡೆಗಿತ್ತು.
ಆಹಾ! ಏನ್ ಚಪ್ಪಾಳೆ ಹೊಡೆದದ್ದೇ ಹೊಡೆದದ್ದು... ಸಾಹೇಬರು. ಆಮೇಲೆ ಒದೆ... ಹ್ಹ ಹ್ಹ, ಒಕೆ ಲೆಟ್ಸ್
ಫರ್‍ಗೆಟ್ ಇಟ್”
“ಆಮೇಲೆ,
ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ. ಕೈಗೆ ರಾಖಿಯಣ್ಣ” ಎಂದು ಹಾಡುತ್ತಾ, ನಗುತ್ತಾ, “ಬಿಂದು ನನ್
ಕ್ಲೋಸ್ ಫ್ರೆಂಡ್, ಅವಳ್ಯಾವಾಗ್ಲು ಅಷ್ಟೆ ಯಾರಾದ್ರು ಹುಡುಗ್ರು ಅವಳ್ ಹಿಂದೆ ಬಿದ್ದಿದ್ದಾರೆ ಅಂತಾ
ಗೊತ್ತಾಗಿದ್ ತಕ್ಷಣ ಅಣ್ಣಾ ಅಂದುಬಿಡೋಳು. ಪಾಪ ಅವಳ್ ಮದುವೇಲಿ ಅಣ್ಣಾವ್ರು ಯಾವ್ ಫೀಲಿಂಗ್‍ನಲ್ಲಿ
ಇದ್ರೋ...?” ಎಂದು ಗಣೇಶನೆಡೆಗೆ ಚುಡಾಯಿಸುವ ನೋಟದಲ್ಲಿ ನೋಡುತ್ತಾಳೆ.
ಗಣೇಶ
ನಾಚಿಕೆಯಿಂದ ನಗುವುದನ್ನು ಕಂಡು, ಮತ್ತೆ ಮುಂದುವರೆಯುತ್ತಾ, “ಪಿಯುಸಿ ಮುಗಿಯೋವರ್ಗೂ ಗಣೇಶನ ಮುಗುಳ್ನಗೆಗೆ
ಮನಸೋತು ಒಂದಲ್ಲ ಒಂದಿನ ನಾವಿಬ್ಬರೂ ಎದುರು ಬದುರು ಭೇಟಿಯಾಗ್ತೀವಿ, ನನ್ ಮನಸ್ಸು ಗಣೇಶ್‍ಗೆ ಅರ್ಥ
ಆಗುತ್ತೆ ಅಂತ ಇದ್ದೆ. ಆದ್ರೆ ಪಿ.ಯು. ಆದ್ಮೇಲೆ ಗಣೇಶ್ ಬಿ.ಇ. ಸೇರ್ಕೊಂಡ್ರಂತೆ ಅಂತ ಗೆಳತಿಯೊಬ್ಬಳು
ಹೇಳಿದ್ಲು. ನಾನು ಬಿ.ಎಸ್ಸಿ., ಹೋಮ್ ಸೈನ್ಸ್^ಗೆ ಸೇರ್ಕೊಂಡೆ. ಒಂದೇ ಊರಾದರೂ ಇನ್ನೆಂದೂ ಗಣೇಶ್ ಭೇಟಿಯಾಗಲ್ವೇನೋ
ಅನ್ನೋ ಭಯ ಇತ್ತು. ಆ ದೇವ್ರುಗೆ ನಂಗೆ ಮೋಸ ಮಾಡೋಕೆ ಇಷ್ಟ ಇಲ್ಲ ಅನ್ಸುತ್ತೆ. ಆತನ ಪ್ರಕಾರ ವಿ ಆರ್
ಮೇಡ್ ಫಾರ್ ಈಚ್ ಅದರ್ ಅನ್ಸುತ್ತೆ. ಒಂದಿನ ಗಣೇಶ್ ನಮ್ಮನೇಗೇ ಬಂದ್ಬಿಟ್ರು...”
ಕುತೂಹಲ
ತಡೆಯಲಾಗದ ಅಖಿಲಾ ಮಧ್ಯದಲ್ಲಿ ತಡೆದು, “ನಿಮ್ಮನೆಗಾ? ಅವ್ರು ಯಾಕ್ ಬರ್ತಾರೆ?” ಎಂಬ ಪ್ರಶ್ನೆಯನ್ನು
ಕೇಳಿಯೇ ಬಿಡುತ್ತಾಳೆ.
“ಹೇಳ್ತೀನಿ.
ಯಾಕ್ ಬರ್ತಾರೆ ಅಂದ್ರೆ ಗಣೇಶ್ ಬಿ.ಇ. ಓದ್ತಾ ಇದ್ದ ಕಾಲೇಜಿನಲ್ಲಿ ನನ್ ತಂದೆ ಯೋಗರಾಜ್ ಮ್ಯಾಥ್ಮೆಟಿಕ್ಸ್
ಲೆಕ್ಚರರ್. ಸಾಮಾನ್ಯಕ್ಕೆ ಅವ್ರು ಯಾವ ಸ್ಟೂಡೆಂಟ್ಸನ್ನು ಮನೆಗೆ ಕರೆತರುತ್ತಿರಲಿಲ್ಲ. ಗಣೇಶ್ ಅವರಿಗೆ
ಕೆಲವು ರೌಡಿಗಳಂಥಾ ವಿದ್ಯಾರ್ಥಿಗಳಿಂದ ಬಿಡಿಸ್ಕೋಳಕೆ ಹೆಲ್ಪ್ ಮಾಡಿದ್ರಂತೆ. ಅದುಕ್ಕೆ ಗಣೇಶ್‍ಗೆ
ಏನಾದ್ರು ಡೌಟ್ಸ್ ಇದ್ರೆ ಮನೇಗ್ ಬಂದು ಕೇಳಿ ಅಂತ ಪರ್ಮಿಷನ್ ಕೊಟ್ಟಿದ್ರು. ಒಂದು ದಿನ ಗಣೇಶ್, ತಮ್ಮ
ಕ್ಲೋಸ್ ಫ್ರೆಂಡ್ ತೇಜಸ್ವಿನಿ ಜೊತೆಗೆ ಮನೆಗೆ ಬಂದಾಗ ನಂಗೆ ತುಂಬಾನೇ ಖುಷಿಯಾಯ್ತು. ಕಾಫೀನೂ ಕೊಟ್ಟೆ.
ಆದ್ರೆ ಈ ಗಣೇಶ್ ಮ್ಯಾಥ್ಮೆಟಿಕ್ಸ್ ನಲ್ಲೇ ಮುಳುಗಿದ್ರೋ, ಅಥವಾ ಕ್ಲೋಸ್‍ಫ್ರೆಂಡ್ ತೇಜಸ್ವಿನಿ ಚಿಂತೇಲೇ
ಮುಳುಗ್ ಹೋಗಿದ್ರೋ ಗೊತ್ತಿಲ್ಲ” ಎಂದು ಮತ್ತೆ ಗಣೇಶನನ್ನು ಕಿಚಾಯಿಸುವಂತೆ ನೋಡುತ್ತಾಳೆ.
ಮುಂದುವರೆಯುತ್ತಾ,
“ನನ್ ಕಡೆ ನೋಡ್ಲೆ ಇಲ್ಲ. ಮತ್ತೆ ಹಲವಾರು ಬಾರಿ ನಮ್ಮನೆಗೇ ಬಂದ್ರೂ ಸಹ ನನ್ ಕಡೆ ಗಮನನೇ ನೀಡ್ಲಿಲ್ಲ.
ಗಮನ ಕೊಡೋ ಟೈಮು ಬರುತ್ತೆ ಅಂತ ಕಾಯ್ತಾ ಇದ್ದೆ. ಆ ಟೈಮು ಇತ್ತೀಚೆಗಷ್ಟೆ ಬಂತು” ಎಂದು ಸಮಾಧಾನದಿಂದ
ಗಣೇಶನೆಡೆಗೆ ನೋಡುತ್ತಾಳೆ.
“ವಾಹ್!
ವಾಟ್ ಆ್ಯನ್ ಅಮೇಜಿಂಗ್ ಸ್ಟೋರಿ!!” ಎಂದು ಅಖಿಲಾ ತನ್ನ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ.
“ನನ್
ರಾಜ್‍ಕುಮಾರಿ ಏಳ್ ಬೆಟ್ಟ, ಏಳ್ ಸಾಗರ ದಾಟಿ ಬರ್ತಾಳೆ ಅನ್ನೋ ನನ್ ಕನಸು ಅಂತೂ ನಿಜವಾಯ್ತು. ನನ್ನತ್ತೆ
ಮಗಳ ನಗು, ವಟವಟ ವನಜಾಕ್ಷಿಗಿಂತ ಸ್ವಲ್ಪ ಕಮ್ಮಿ ಮಾತು, ಜಿಂಕೆಮರಿ ಸಲ್ಮಾಳಿಗಿಂತ ವೇಗ ಕಮ್ಮಿಯಾದ್ರೂ.
ನನ್ ವೇಗಕ್ಕೆ ಜೊತೆ, ಮೌನವೇ ಆಭರಣ ಮುಗುಳ್ನಗೆ ಶಶಿಕಿರಣ ಅಂತಾ ಸಿಕ್ಕಿದ ಹುಡುಗ್ರುಗೆಲ್ಲಾ ಅಣ್ಣಾ
ಅನ್ನದೇ ಇರೋ ಬುದ್ಧಿ, ಸರಿಯಾಗಿ ಎದುರುಬದುರು ಕುಳಿತು ನೋಡದೇ ಇದ್ರೂ ನನ್ನೆಡೆಗೆ ಅವಳಿಗಿರೋ ಆಕರ್ಷಣೆ,
ಗೆಳೆತನ, ಪ್ರೀತಿ, ಇದೆಲ್ಲಾ ನಾ ಲಕ್ಷ್ಮೀನ ನೋಡಿದ ತಕ್ಷಣ ಒಪ್ಪೋ ಹಾಗೆ, ಅವಳ ಮೇಲೆ ಪ್ರೀತಿ ಮೂಡುವ
ಹಾಗೆ ಮಾಡಿದೆ ಅನ್ಸುತ್ತೆ. ರಿಯಲಿ ಐ ಆ್ಯಮ್ ವೆರಿ ಲಕ್ಕಿ” ಎಂದು ಹೇಳುತ್ತಾ ಗಣೇಶ ಯಾವುದೋ ಲೋಕದಲ್ಲಿ
ತೇಲುವವನಂತೆ ಆಡುತ್ತಾನೆ.
“ಒಂದ್ನಿಮಿಷ.
ನಂಗೊಂದು ಡೌಟ್” ಎಂದು ಅಖಿಲಾ ಮತ್ತೊಂದು ಪ್ರಶ್ನೆ ಹಾಕುತ್ತಾಳೆ.
ಲಕ್ಷ್ಮೀ
ಎದ್ದು ನಿಂತು, “ಐ ಆ್ಯಮ್ ಸಾರಿ. ನಂಗೆ ಅರ್ಜೆಂಟಾಗಿ ಸ್ವಲ್ಪ ಕೆಲ್ಸ ಇದೆ. ನಾ ಹೋಗ್ಬೇಕು” ಎಂದು
ಹೇಳುತ್ತಾಳೆ.
“ನನ್
ಡೌಟ್ ಕ್ಲಿಯರ್ ಮಾಡಿ ಹೋಗಿ” ಎಂದು ಅಖಿಲಾ ಕೇಳುತ್ತಾಳೆ.
“ನೊ,
ನೊ. ಐ ಆ್ಯಮ್ ಎಕ್ಸ್ಟ್ರೀಮ್ಲಿ ಸ್ಸಾರಿ. ನಿಮ್ ಡೌಟ್‍ಗೆ ಗಣೇಶೇ ಆನ್ಸರ್ ಮಾಡ್ತಾರೆ. ಬಾಯ್! ಬಾಯ್
ಗಣೇಶ್!” ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ.
“ರೀ...
ಸ್ವಲ್ಪ ಕಾಫೀ ಕುಡಿದು ಹೋಗ್ರಿ” ಎಂದು ಗಣೇಶ ಹೇಳುತ್ತಿದ್ದರೂ ಲಕ್ಷ್ಮೀ ಸರಸರನೆ ಅಲ್ಲಿಂದ ಹೋಗಿ ಬಿಡುತ್ತಾಳೆ.
ಅವಳು ಹೋದ ದಾರಿಯನ್ನೇ ನೋಡುವ ಗಣೇಶ್-ಅಖಿಲಾ ಮತ್ತೆ ಮಾತಿಗೆ ಕೂಡುತ್ತಾರೆ.
“ನನ್
ಡೌಟ್ ಕೇಳ್ಲ?” ಅಖಿಲಾ ಕೇಳುತ್ತಾಳೆ.
“ಕೇಳಿ”
ಗಣೇಶ ನಿರಾತಂಕದಿಂದ ಹೇಳುತ್ತಾನೆ.
“ಮತ್ತೆ
ಇಲ್ಲೇನು ಪ್ರಾಬ್ಲಂ?” ಅಖಿಲಾಳ ನಿರೀಕ್ಷಿತ ಪ್ರಶ್ನೆ ಬರುತ್ತದೆ.
“ಇಲ್ಲಿ
ಲಕ್ಷ್ಮೀದೂ, ಅವರಪ್ಪ ಯೋಗರಾಜ್ ಸರ್‍ದೂ ಮತ್ತು ನಂದು ಏನೂ ಪ್ರಾಬ್ಲಂ ಇಲ್ಲ. ಸಮಸ್ಯೆ ಇರೋದು ನನ್ನ
ಜೀವನದಲ್ಲಿ ಬಂದ ಆರನೇ ಹುಡುಗಿ, ಅವರಪ್ಪ ಮತ್ತು ನಮ್ಮಪ್ಪಂದು” ಎಂದು ಗಣೇಶ ಒಂದೇ ಮಾತಿಗೆ ಹೇಳುತ್ತಾನೆ.
“ಆರನೇ
ಹುಡುಗಿ! ಆ ಹುಡುಗಿ ಯಾರು? ಏನ್ ಪ್ರಾಬ್ಲಂ?” ಅಖಿಲಾಳ ಪ್ರಶ್ನೆಗಳು ಒಂದೇ ಉಸಿರಿಗೆ ಮೂಡುತ್ತವೆ.”
“ಆ...
ಆ... ಆರನೇ ಹುಡುಗಿ ನೀವೇ ಕಣ್ರೀ ಅಖಿಲಾ” ಎಂದು ಗಣೇಶ ಹೇಳುತ್ತಿದ್ದಂತೆ ಅಖಿಲಾಳಿಗೆ ಧಿಗ್ಬ್ರಮೆಯಾಗುತ್ತದೆ.
ಇದನ್ನು ಗಮನಿಸಿದ ಗಣೇಶ ಇದೇ ಸರಿಯಾದ ಸಮಯವೆಂದು ನಿರ್ಧರಿಸಿ ಮುಂದುವರೆಯುತ್ತಾ, “ನಿಮ್ಮುನ್ನ ನೋಡಿದ
ಮೇಲೆ ಲಕ್ಷ್ಮೀನ ನೋಡ್ಲಿಲ್ಲ ಅಂದಿದ್ರೆ ನಾವಿಬ್ರು ಮದ್ವೆಯಾಗಿ ಇಷ್ಟೊತ್ತಿಗೆ ಮೂರು ಮಕ್ಕಳಾಗುತ್ತಿದ್ವು.
ಆ ದಿನ ಮದುವೇಲಿ ನಿಮ್ಮುನ್ನ ತೋರ್ಸಿ ನಮಪ್ಪ, ಗಣಿ ಆ ಹುಡುಗಿ ನನ್ನ ಸ್ನೇಹಿತನ ಮಗಳು ಕಣೋ. ನಿನ್ನುನ
ಯಾರೋ ಹುಡುಗಿ ಏಳು ಬೆಟ್ಟ, ಏಳು ಸಾಗರ ದಾಟಿ ಬಂದು ಮದ್ವೆಯಾಗ್ತಾಳೆ ಅನ್ನೋದನ್ನ ಬಿಟ್ಟು, ಎಲ್ಲಾ
ತರ್ಲೆಗಳನ್ನು ಬದಿಗಿಟ್ಟು ನಿಮ್ಮುನ್ನೆ ಪರಿಚಯಮಾಡಿಕೊಂಡು ಮದ್ವೆಯಾಗು ಅಂತ ಆರ್ಡರ್ ಮಾಡಿದ್ರು. ನನ್ನ
ಜೀವನದಲ್ಲಿ ಹುಡ್ಗೀರೇ ಬೇಡ ಅಂತಿದ್ದೆ. ಹೇಗೂ ಮದ್ವೆ ಆಗ್ಬೇಕಲ್ಲಾ ಅಂತ, ಜೊತೆಗೆ ನಮ್ಮ ತಂದೆ ನೋಡಿದಾರೆ
ಅಂತ ನಿಮ್ಮುನ್ನ ನೋಡಿ, ಮಾತಾಡಿಸ್ದೆ. ಆದ್ರೆ ನಿಮ್ಮುನ ನೋಡ್ದಾಗ ನಂಗೆ ಬೇರೆ ಯಾವ ರೀತೀನೂ ಫೀಲಿಂಗ್ಸ್
ಆಗ್ಲಿಲ್ಲ ಕಣ್ರೀ. ಆವಾಗ್ಲೂ ನನ್ ಮನಸ್ಸು, `ಗಣಿ ಸ್ವಲ್ಪ ಕಾಯಿ’ ಅಂತ ಇತ್ತು. ಅದೇ ನಿಮ್ಮುನ್ನ ನೋಡಿ
ಹತ್ತು ನಿಮಿಷ ಆದ್ಮೇಲೆ ಸಿಕ್ಕುದ್ಲಲ್ಲ ಲಕ್ಷ್ಮೀ, ಅವಳನ್ನ ನೋಡಿದ ತಕ್ಷಣ ನಂಗೋಸ್ಕರ ಏಳು ಬೆಟ್ಟ,
ಏಳು ಸಾಗರ ದಾಟಿ ಬಂದವ್ಳೆ ಅಂತ ಅನ್ನುಸ್ತು. ನನ್ ಹೃದಯ ಆ ಕ್ಷಣದಲ್ಲಿ ಕಳೆದೋಯ್ತು. ಏನೇ ಆದ್ರು ಲಕ್ಷ್ಮೀನೇ
ನಾ ಮದ್ವೆಯಾಗೋದು ಅಂತ ಡಿಸೈಡ್ ಮಾಡ್ಬಿಟ್ಟೆ. ಯಾಕೆ ಅಂತ ನಿಮ್ಗೆ ಗೊತ್ತಲ್ಲ. ಆದ್ರೆ ಈಗ ಆ ದಾರೀಲಿ
ನೀವಿದ್ದೀರಾ. ನೀವು ಲೈನ್ ಕ್ಲಿಯರ್ ಮಾಡ್ಕೊಟ್ರೆ, ನಮ್ಮಪ್ಪ ನಿಮಪ್ಪನ್ನ ಲೈನ್ ನಾನೇ ಕ್ಲಿಯರ್ ಮಾಡ್ಕೋತೀನಿ”
ಎಂದು ಹೇಳಿ ಅಖಿಲಾಳ ಉತ್ತರಕ್ಕೆ ಕಾದನು.
“ಅಲ್ಲಾ
ಗಣೇಶ್, ನಂಗೂ ನೀವು ಅಂದ್ರೆ ತುಂಬಾ ಇಷ್ಟ. ನಮ್ಮಿಬ್ಬರ ಅಪ್ಪಂದಿರೂ ಒಪ್ಪಿರೋದ್ರಿಂದ ನಮ್ಮಿಬ್ಬರ
ಮದುವೆಗೆ ಯಾವ ತೊಂದ್ರೆನೂ ಇಲ್ಲ. ನೀವು ಒಪ್ಪುದ್ರೆ, ಲಕ್ಷ್ಮೀನ ಮರ್ತು, ನಾವಿಬ್ರು ಮದ್ವೆಯಾಗಿ ಆರಾಮಾಗಿ
ಇರೋಣ” ಎಂದು ಇಷ್ಟೆಲ್ಲಾ ಕೇಳಿದ ಹುಡುಗಿ ತನಗೆ ಇದನ್ನೆಲ್ಲಾ ಕೇಳಿ ಏನೂ ಅನ್ನಿಸಲೇ ಇಲ್ಲವೆಂಬಂತೆ
ಹೇಳಿದಾಗ ಗಣೇಶನಿಗೆ ಪಿಕಲಾಟಕ್ಕೆ ಇಟ್ಟುಕೊಂಡಿತು.
“ನಾ
ಆವಾಗ್ಲೆ ಹೇಳಿದ್ನಲ್ಲ. ನಂಗೆ ನೀವೊಳ್ಳೆ ಫ್ರೆಂಡ್ ಅನ್ನೋ ಫೀಲಿಂಗ್ ಬಿಟ್ರೆ ಬೇರೆ ಯಾವ ರೀತಿ ಭಾವನೆನೂ
ಇಲ್ಲ” ಎಂದು ಗಣೇಶ ಖಡಾಖಂಡಿತವಾಗಿ ಎನ್ನುವಂತೆ ತನ್ನ ಮನದ ಇಂಗಿತವನ್ನು ಹೇಳುತ್ತಾನೆ.
“ನಿಮ್ಮ
ಮನಸ್ಸಲ್ಲಿ ಲಕ್ಷ್ಮೀನೇ ತುಂಬಿರೋದ್ರಿಂದ, ನನ್ನ ಬಗ್ಗೆ ಯಾವುದೇ ಭಾವನೇನೂ ಇಲ್ದಲೇ ಇರ್ಬೋದು. ಲಕ್ಷ್ಮೀನ
ಮರೆತ್ಬುಡಿ ಗಣೇಶ್. ಆಗ ಎಲ್ಲಾ ಸರಿಹೋಗುತ್ತೆ” ಎಂದು ಹೇಳಿದ ಅಖಿಲಾ ಯಾಕೋ ಮೊಂಡು ಹಿಡಿದವಳಂತೆ ಕಾಣಿಸಿದಳು.
“ಮರೆಯೋದು
ಅಷ್ಟು ಸುಲಭ ಅಲ್ರೀ. ಅಷ್ಟಕ್ಕೂ ಮರೆಯೋಕೆ ನಾನೇನು ಅಖಿಲಾನ?” ಎಂದು ಅಲ್ಲಿಯವರೆಗೆ ತಡೆದದ್ದನ್ನು
ಗಣೇಶ ಹೇಳಿಯೇ ಬಿಡುತ್ತಾನೆ.
ಅಖಿಲಾಳಿಗೆ
ಗಾಬರಿಯಾಗುತ್ತದೆ. ಗಾಬರಿ ತೋರ್ಪಡಿಸದೆ, “ಮರೆಯೋದ? ನಾ ಏನ್ ಮರ್ತಿದ್ದೀನಿ ಅಂತ ನೀವು ಈ ರೀತಿ ಮಾತಾಡ್ತಾ
ಇದ್ದೀರಾ?” ತುಸು ಕೋಪದಿಂದಲೇ ಎಂಬಂತೆ ಕೇಳುತ್ತಾಳೆ.
“ಅಲ್ಲಾರಿ,
ನಾನು ನನ್ನ ಬ್ಯಾಗ್ರೌಂಡ್, ಲಕ್ಷ್ಮೀ ಕಥೆ ಎಲ್ಲಾನೂ ನೀವೊಳ್ಳೆ ಫ್ರೆಂಡ್ ಅಂತ ಹೇಳ್ಕೊಂಡೆ. ನಿಜವಾಗ್ಲೂ
ನೀವೊಳ್ಳೆ ಫ್ರೆಂಡ್ ಅಲ್ವಾ? ಹೋಗ್ಲಿ ನಿಮ್ ಬ್ಯಾಗ್ರೌಂಡ್ ಸ್ವಲ್ಪ ಹೇಳ್ಕೊಳಿ” ಎಂದು ಗಣೇಶ ವಿನಯದಿಂದ
ಕೇಳುತ್ತಾನೆ.
ಅಖಿಲಾ
ಚಡಪಡಿಸುತ್ತಾ, “ನನ್ ಬ್ಯಾಗ್ರೌಂಡ್‍ಗೆ ಏನಾಗಿದೆ ಗಣೇಶ್. ತುಂಬಾ ಕ್ಲಿಯರಾಗಿದೆ. ಶ್ರೀಮಂತರ ಮನೇಲಿ
ಹುಟ್ಟಿ ಬೆಳೆದಿದ್ದೇನೆ. ಯಾವುದಕ್ಕೂ ತೊಂದ್ರೆ ಇಲ್ಲದಂತೆ ತಂದೆ ಬೆಳೆಸಿದ್ದಾರೆ. ಅದಕ್ಕೆ ಅವರ ಇಷ್ಟದಂತೆ
ನಿಮ್ಮನ್ನ ಮದ್ವೆಯಾಗೋಕೆ ರೆಡಿ ಇದ್ದೇನೆ. ಅಷ್ಟೆ” ಎಂದು ಸುಮ್ಮನೆ ಕೂರುತ್ತಾಳೆ.
“ಅಷ್ಟೇನಾ?”
ಎಂಬ ಗಣೇಶನ ಒಂದೇ ಪದದ ಪ್ರಶ್ನೆಯಲ್ಲಿ ನಿವೇನೋ ಮುಚ್ಚಿಡ್ತಿದ್ದೀರಾ ಎಂಬ ನಿಲುವು ಕಾಣುತ್ತದೆ.
“ಅಷ್ಟೆ”
ಎಂದು ಅಖಿಲಾ ಮತ್ತೆ ಸುಮ್ಮನೆ ಕೂರುತ್ತಾಳೆ.
“ಯಾಕ್ರಿ
ಸುಳ್ ಹೇಳ್ತಿರಾ?” ಎಂದು ಗಣೇಶ ತನಗೆ ಎಲ್ಲಾ ಗೊತ್ತಿರುವವನಂತೆ ಕೆಣಕುತ್ತಲೇ ಕೇಳುತ್ತಾನೆ.
“ಸುಳ್ಳಾ!?”
ಎಂದು ಅಖಿಲಾ ಇಲ್ಲದ ಆಶ್ಚರ್ಯವ್ಯಕ್ತಪಡಿಸುತ್ತಾಳೆ.
“ಸುಳ್ಳಲ್ದಲೆ
ಮತ್ತಿನ್ನೇನ್ರಿ? ನನ್ನ ಜೀವನದಲ್ಲಿ ಏಳು ಹುಡ್ಗೀರು ಬಂದ್ರು. ನಿಮ್ ಜೀವನದಲ್ಲಿ ಯಾರು ಹುಡುಗ್ರು
ಬರ್ಲೆ ಇಲ್ವಾ?” ಎಂದು ಮತ್ತೊಂದು ಸಿದ್ಧ ಪ್ರಶ್ನೆ ಗಣೇಶನಿಂದ ಬರುತ್ತದೆ. ಅವನ ಮಾತಿನಲ್ಲಿ ಇವಳೆಂಥ
ಮೊಂಡು ಹಿಡಿದ ಹುಡುಗಿಯಪ್ಪಾ ಎಂಬ ಭಾವವಿರುತ್ತದೆ.
“ಹುಡುಗ್ರಾ...!
ಅದು... ಅದು ನೀವೇ ಗಣೇಶ್. ನೀವೇ ನನ್ನ ಜೀವನದಲ್ಲಿ ಬಂದ ಮೊದ್ಲುನೆ ಹುಡುಗ ಮತ್ತು ಕಡೇ ಹುಡ್ಗಾನೂ
ನೀವೇ” ಎಂದು ಅಖಿಲಾ ಹೇಳಿದ್ದು ಸುಳ್ಳು ಎಂದು ಕೇಳಿದವರ್ಯಾರೇ ಇದ್ದರೂ ಅರ್ಥವಾಗುವಂತೆ ಹೇಳುತ್ತಾಳೆ.
ಗಣೇಶ
ಅಖಿಲಾಳನ್ನೇ ದಿಟ್ಟಿಸುತ್ತಾ, “ಏನ್ರೀ, ಗಣೇಶ ಸಿಕ್ಕಿದ ಅಂತ, ಅವನ ಗೆಳೆಯ ಸುಬ್ಬುನೇ ಮರ್ತುಬಿಡೋದೆ.
ಏನ್ ಹುಡ್ಗೀರಪ್ಪ” ಎಂದು ನಗುತ್ತಾನೆ. ಅವನ ನಗುವಿನಲ್ಲಿ ವ್ಯಂಗ್ಯವಿರುತ್ತದೆ.
ಅಖಿಲಾ
ವಿಚಲಿತಳಾಗಿ ತೊದಲುತ್ತಾಳೆ, “ಸುಬ್ಬು...? ಯಾವ್ ಸುಬ್ಬು?”
ಗಣೇಶ
“ಸುಬ್ಬು. ಮೈ ಫ್ರೆಂಡ್ ಸುಬ್ರಹ್ಮಣ್ಯ, ಹುಚ್ಚ ಆಗಿದ್ದಾನೇ ಕಣ್ರೀ. ನಿಮ್ಮುನ್ನ ಪ್ರೀತ್ಸಿದ ತಪ್ಪಿಗೆ
ಬದುಕೇ ಬೇಡ ಅನ್ನೋ ಸ್ಥಿತಿಗೆ ಬಂದಿದ್ದಾನೆ. ಅವನು ನನ್ನ ಜೀವದ ಗೆಳೆಯ ಕಣ್ರೀ. ಬಿ.ಇ. ಓದ್ಬೇಕಾದ್ರೆ...”
ಎಂದು ಸುಬ್ಬುವಿನ ಬಗ್ಗೆ ಹೇಳಲು ತೊಡಗುತ್ತಾನೆ...
***
ಕಾಲೇಜಿನ ದಿನಗಳು
ಗಣೇಶ
ಸುಬ್ಬು ಕಾಲೇಜ್ ಬಿಟ್ಟಾಗ ಪರಸ್ಪರ ಮಾತನಾಡಿಕೊಳ್ಳುತ್ತಾ ಬರುತ್ತಿದ್ದಾಗ ಸುಬ್ಬು, “ಗಣಿ, ನಮ್ ತಾಯಿಗೆ
ಯಾಕೋ ತುಂಬಾ ಹುಷಾರಿಲ್ವಂತೆ ಕಣೋ. ನಾನು ರಾತ್ರಿ ಬಸ್ಸಿಗೆ ಊರಿಗ್ ಹೋಗ್ತಿದೀನಿ. ಸೋಮವಾರ ಕಾಲೇಜ್‍ನಲ್ಲಿ
ಸಿಗ್ತೀನಿ. ಬಾಯ್!” ಎಂದು ಹೇಳಿ ಅವನಿಂದ ಬೇರ್ಪಡಲು ನೋಡುತ್ತಾನೆ.
“ಲೋ...
ಲೋ... ಒಂದ್ನಿಮಿಷ ತಡೆಯೋ. ತಾಯಿಗೆ ಹುಷಾರಿಲ್ಲ ಅಂತೀಯ. ಕಾಲೇಜಿಗೆ ಫೀಸ್ ಬೇರೆ ಕಟ್ಬೇಕು. ದುಡ್ಡೇನಾದ್ರು
ಬೇಕಿದ್ರೆ ಕೇಳೋ, ಸಂಕೋಚ ಪಟ್ಕೋಬೇಡ” ಎಂದು ಗಣೇಶ ಸ್ನೇಹದಿಂದ ಕೇಳುತ್ತಾನೆ.
“No Thanks ಗಣಿ. ನಾ ಬರ್ತೀನಿ” ಎಂದಷ್ಟೇ ಹೇಳಿದ ಗೆಳಯನಿಗೆ ಗಣೇಶ “ಓಕೆ. ಬಾಯ್” ಎಂದು
ವಿದಾಯ ಹೇಳುತ್ತಾನೆ.
*
ಗಣೇಶ
ಒಬ್ಬನೇ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಸುಬ್ಬುವನ್ನು ಹುಡುಕುತ್ತಾ ಬಂದವನು, ಮನಸ್ಸಿನಲ್ಲಿ ‘ಇವನ್ಯಾಕಪ್ಪ
ಇನ್ನಾ ಬರ್ಲಿಲ್ಲ? ಅವನ್ ತಾಯಿಗೇನಾದ್ರು...? ಛೇ ಹಾಗೇನೂ ಆಗ್ದಲೆ ಇರ್ಲಿ’ ಎಂದು ಅಂದುಕೊಳ್ಳುತ್ತಾ
ಬೇಜಾರಿನಿಂದಲೇ ಕ್ಲಾಸಿನೊಳಗೆ ಹೋಗುತ್ತಾನೆ.
*
ಸ್ವಲ್ಪ
ಸಮಯದ ನಂತರ ಕ್ಲಾಸಿನಿಂದ ಹೊರಗಡೆ ಬಂದ ಗಣೇಶ ಮತ್ತೆ ಸುಬ್ಬುವನ್ನು ಹುಡುಕುತ್ತಾ ಬಂದು ಅಲ್ಲೇ ಹತ್ತಿರದಲ್ಲಿ
ಬರುತ್ತಿದ್ದ ಒಬ್ಬ ಪರಿಚಿತ ಹುಡುಗನನ್ನು ಕರೆದು, “ದೀಪು... ದೀಪು... ಒಂದ್ನಿಮಿಷ. ಸುಬ್ಬುನ ಎಲ್ಲಾದ್ರು
ನೋಡಿದ್ಯ?” ಎಂದು ಪ್ರಶ್ನಿಸುತ್ತಾನೆ.
“ಇಲ್ಲಾ
ಗಣೇಶ್. ಬೆಳ್ಳಿಗ್ಗೆಯಿಂದ ಕಾಲೇಜ್ ಹತ್ರ ಕಾಣುಸ್ತಿಲ್ಲ. Mostly ಹಾಸ್ಟೆಲಲ್ಲೇ
ಇರ್ಬೇಕು” ಎಂದು ದೀಪು ಹೇಳುತ್ತಾನೆ.
“Ok! Thanks ಕಣಮ್ಮ” ಎಂದಷ್ಟೆ ಹೇಳಿದ ಗಣೇಶ್ ಆತಂಕದಿಂದ ಹಾಸ್ಟೆಲ್ ಕಡೆ ಹೆಜ್ಜೆ ಹಾಕುತ್ತಾನೆ.
*
ಕಾಲೇಜಿನ
ಹಾಸ್ಟೆಲ್ ಬಳಿ ಬಂದ ಗಣೇಶ ದಿಗಿಲಿನಿಂದ ಸುಬ್ಬುವಿನ ರೂಮಿನೊಳಕ್ಕೆ ಬರುತ್ತಾನೆ. ಕದ ತೆರೆದಿರುತ್ತದೆ.
ಸುಬ್ರಹ್ಮಣ್ಯ ಅಲ್ಲೇಲ್ಲೂ ಕಾಣದಿರುವುದನ್ನು ಕಂಡು, “ಸುಬ್ಬು... ಸುಬ್ಬು...” ಎಂದು ಕರೆಯುತ್ತಾ
ಹುಡುಕುತ್ತಾನೆ. ಸುಬ್ಬು ಎಲ್ಲೂ ಕಾಣುವುದಿಲ್ಲ.
ಗಣೇಶ
ಹುಡುಕುವುದನ್ನು ಕಂಡ ಸುಬ್ಬುವಿನ ರೂಂಮೇಟ್ ಒಬ್ಬ ಗಣೇಶನ ಬಳಿ ಬಂದು, “ಗಣೇಶ್, ಸುಬ್ಬು ಈಗ್ ತಾನೇ
ಲಗ್ಗೇಜೆಲ್ಲಾ ತಗೊಂಡು ಅವನ್ ತಾಯಿಗೆ ತುಂಬಾ ಹುಷಾರಿಲ್ಲ. ಮನೇಲಿರೋ ದುಡ್ಡೆಲ್ಲಾ ಖಾಲಿಯಾಗಿದೆ. ನಾ
ಇನ್ನ ಕಾಲೇಜಿಗೆ ಬರೋಕಾಗಲ್ಲ. ಯಾವ್ದಾದ್ರು ಕೆಲ್ಸಕ್ಕೆ ಸೇರಿ ಅಮ್ಮನ್ನ ನೋಡ್ಕೋತಿನಿ, ಗಣೇಶ್ ಬಂದ್ರೆ
ಹೇಳ್ಬುಡು ಅಂತ ಹೇಳಿ ಹೋದ” ಎಂದು ಒಂದೇ ಉಸಿರಲ್ಲಿ ಹೇಳುತ್ತಾನೆ.
ಇದನ್ನು
ಕೇಳಿದ ತಕ್ಷಣವೇ ಗಣೇಶ ಅಲ್ಲಿಂದ ಓಡಿ, ಹೊರಗಡೆ ಬಂದು ಬೈಕ್ ಏರಿ, ಒಂದೇ ಕಿಕ್ಕಿಗೆ ಸ್ಟಾರ್ಟ್ ಮಾಡಿಕೊಂಡು
ಹೊರಡುತ್ತಾನೆ.
ತಲೆಯಲ್ಲಿ
ಏನೇನೋ ಯೋಚಿಸಿಕೊಂಡು ಬಸ್ಟಾಂಡ್ ತಲುಪುವ ಗಣೇಶ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿ, ಬಸ್ಟಾಂಡಿನ
ಒಳಹೊಕ್ಕು ಅಲ್ಲಿದ್ದ ಬಸ್ಸುಗಳಲ್ಲಿ ಹೊರಗಡೆಯಿಂದ ಸುಬ್ಬುವನ್ನು ಹುಡುಕುತ್ತಾನೆ. ಅಲ್ಲೆಲ್ಲೂ ಕಾಣದಿರಲು
ಆಗ ತಾನೆ ಹೊರಡಲಿದ್ದ ಬಸ್ಸಿನ ಒಳಗಡೆ ಹತ್ತಿ ನೋಡುತ್ತಾನೆ. ಆ ಬಸ್ಸಿನ ಮೂಲೆಯ ಸೀಟೊಂದರಲ್ಲಿ ಸುಬ್ಬು
ಕುಳಿತಿರುತ್ತಾನೆ. ಗಣೇಶ ಸುಬ್ಬುವಿಗೆ ಹೇಳದೆ ಕೇಳದೆ ಅವನ ಲಗೇಜನ್ನು ಅವನ ವಿರೋಧದ ನಡುವೆಯೂ ಎತ್ತಿಕೊಂಡು
ಬಸ್ಸಿನಿಂದ ಕೆಳಗಿಳಿಯುತ್ತಾನೆ. ವಿಧಿಯಿಲ್ಲದೆ ಸುಬ್ಬುವೂ ಗಣೇಶನ ಹಿಂದೆಯೇ ಕೆಳಗಿಳಿಯುತ್ತಾನೆ. ಬಸ್
ಹೊರಡುತ್ತದೆ.
ಕೆಳಗಿಳಿದ
ಗಣೇಶ ಸಿಟ್ಟಿನಿಂದ ಸುಬ್ಬುವಿನ ಮುಖ ನೋಡದೆ ನಿಂತುಕೊಳ್ಳುತ್ತಾನೆ. ಅವನನ್ನು ಮಾತನಾಡಿಸಲು ಹೆದರುವ
ಸುಬ್ಬು ತಡೆದೂ ತಡೆದೂ “ಸಾರಿ ಕಣೋ ಗಣಿ” ಎಂದು ಹೇಳುತ್ತಾನೆ.
“ಏನೋ
ಸಾರಿ... ನಾ ಅವತ್ತೆ ಹೇಳ್ಲಿಲ್ವ. ದುಡ್ಡು ಬೇಕಾದ್ರೆ ಕೇಳು ಕೊಡ್ತೀನಿ ಅಂತಾ. ಇನ್ನೋಂದ್ ಸೆಮಿಸ್ಟರ್
ಮುಗಿದ್ರೆ ಬಿ.ಇ.ನೇ ಮುಗಿಯುತ್ತೆ. ಅಂತಾದ್ರಲ್ಲಿ ಈ ಮಹಾತ್ಮ ಕಾಲೇಜೇ ಬೇಡ ಅಂತ ಹೊರಟವ್ನೆ. ತಾಯಿಗೆ
ಹುಷಾರಿಲ್ಲ ಅಂತ ನೀ ಕಾಲೇಜ್ ಬಿಟ್ಬಿಟ್ರೆ ನಿಮ್ ತಾಯಿ ಹುಷಾರಾಗ್ತರ? ಚೆನ್ನಾಗ್ ಓದಿ ಒಳ್ಳೆ ಕೆಲ್ಸಕ್
ಸೇರ್ಕೋಂಡು ಒಳ್ಳೆ ಟ್ರೀಟ್‍ಮೆಂಟ್ ಕೊಡ್ಸುದ್ರೆ ಎಲ್ಲಾ ಸರಿಹೋಗುತ್ತಪ್ಪ... ಅದ್ಬಿಟ್ಟು...” ಎಂದು
ಜೋರಾಗಿಯೇ ಗೆಳೆಯನಿಗೆ ಹೇಳುತ್ತಾನೆ.
“ಅದೂ...
ಅದೂ “ ಎಂದು ಸುಬ್ಬು ತಡವರಿಸುವುದನ್ನು ಕಂಡ ಗಣೇಶ, “ಅದೂನು ಇಲ್ಲ, ಇದೂನು ಇಲ್ಲ. ಕಾಲೇಜಿನ ಫೀಸ್
ನಾನ್ ಕಟ್ತೀನಿ. ನಿಮ್ ತಾಯಿ ಆಸ್ಪತ್ರೆ ಖರ್ಚಿಗೂ ದುಡ್ಡು ಕೊಟ್ಟಿರ್ತೀನಿ. ನಿಂಗ್ ಕೆಲ್ಸ ಸಿಕ್ಕಿದ್
ಮೇಲೆ ಎಲ್ಲಾ ವಾಪಸ್ ಕೊಡಿವಂತೆ, ಆಯ್ತ...? ನಿನ್ನಂಥ ಬ್ರಿಲಿಯಂಟ್ ಹುಡುಗ್ರು ಅದ್ರಲ್ಲೂ ನನ್ ಕ್ಲೋಸ್
ಫ್ರೆಂಡ್ಗೇ ಹಿಂಗಾದ್ರೆ ಚೆನ್ನಾಗಿರಲ್ಲ. ನಡಿಯೋ ಹಾಸ್ಟೆಲ್ಲಿಗೆ ಬಿಡ್ತೀನಿ” ಎಂದು ನೋವಿನಿಂದ ನುಡಿಯುತ್ತಾನೆ.
ಏನೂ
ತೋಚದವನಂತೆ ಸುಬ್ಬು ಗಣೇಶನನ್ನು ತಬ್ಬುತ್ತಾನೆ. ಗಣೇಶನೂ ಸುಬ್ಬುವನ್ನು ತಬ್ಬುತ್ತಾನೆ.
***
ಗೆಳೆಯರ ಕಾಫೀ ಕೂಟ
ಗಣೇಶ-ಅಖಿಲಾ
“ನಮ್
ಬಿ.ಇ. ಮುಗಿದ್ಮೇಲೆ, ಬೇರೆ ಕಡೆ ಯಾಕ್ ಕೆಲ್ಸ ಮಾಡ್ಬೇಕು ಅಂತಾ ನಾನು ಸುಬ್ಬುನ ನಮ್ಮಪ್ಪಂಗೆ ಹೇಳಿ
ನಮ್ ಕಂಪನಿಗೆ ಸೇರುಸ್ಕೊಂಡ್ವಿ. ಸುಬ್ಬು ಚೆನ್ನಾಗೇ ಕೆಲ್ಸ ಮಾಡ್ತಾನೆ ಅಂತ ಅಪ್ಪ ಹೇಳ್ತಿದ್ರು. ಅದೇ
ಆವತ್ತು ಬೆಳಿಗ್ಗೆ ನಾ ಪಾರ್ಕ್‍ನಲ್ಲಿ ನಿಮಗೆ ಸಿಕ್ಕಿದ್ನಲ್ಲ ಆ ದಿನ ನಾ ಆಫೀಸಿಗೆ ಹೋದೆ...” ಎಂದು
ಗಣೇಶ ಸುಬ್ಬುವಿನ ಕಥೆಯನ್ನು ಮುಂದುವರೆಸುತ್ತಾನೆ.
***
ಆಫೀಸಿನಲ್ಲೊಂದು ದಿನ…
ಮುಂದುವರೆದ ಭಾಗ
ಸುಬ್ಬುವಿಗೆ
ಫೋನ್ ಮಾಡುವ ಗಣೇಶ ಸುಬ್ಬು ಬಹಳ ಹೊತ್ತಿನ ನಂತರ ಮೊಬೈಲ್ ರಿಸೀವ್ ಮಾಡಿದ್ದರಿಂದ ತುಸು ಕೋಪದಿಂದಲೇ,
“ಸುಬ್ಬು ಯಾಕೋ ಆಫೀಸಿಗ್ ಬಂದಿಲ್ಲ” ಎಂದು ಕೇಳುತ್ತಾನೆ.
“ನಾ
ಇನ್ಮೇಲೆ ನಿಮ್ ಆಫೀಸಿಗ್ ಬರಲ್ಲ ಗಣೇಶ್. I am sorry”
ಎಂದು
ಸುಬ್ಬುವಿನ ತಣ್ಣನೆಯ ಧ್ವನಿ ಕೇಳಿದ ಗಣೇಶ “ಯಾಕೋ... ಏನಾಯ್ತು?” ಎಂದು ಸಮಾಧಾನದಿಂದಲೇ ಕೇಳುತ್ತಾನೆ.
“ಅದೆಲ್ಲಾ
ಬೇಡ ಬಿಡು ಗಣೇಶ್” ಎಂದು ಸುಬ್ಬು ಉತ್ತರಿಸುತ್ತಾನೆ.
“ಬಿಡೋದೆಲ್ಲ
ಬೇಡ, ಏನಾಯ್ತು ಹೇಳು. ಇಲ್ಲಾಂದ್ರೆ ನೀ ಎಲ್ಲಿದ್ದೀಯಾ ಹೇಳು ನಾ ಅಲ್ಲಿಗೇ ಬರ್ತಿನಿ” ಎಂದು ಗಣೇಶ
ದಬಾಯಿಸುತ್ತಾನೆ.
“ಬೇಡ!
ಬೇಡ!! ಈ ವಿಷ್ಯ ನೇರವಾಗಿ ಹೇಳೋದ್ಕಿನ್ನ ಫೋನಲ್ಲೇ ಹೇಳ್ಬಿಡ್ತಿನಿ” ಎಂದು ಸುಬ್ಬು ಹೇಳಿದ್ದನ್ನು
ಕೇಳಿ ಕುತೂಹಲ ತಡೆಯಲಾಗದ ಗಣೇಶ “ಅದೇನ್ ಮತ್ತೆ ಬೇಗ ಹೇಳೋ...” ಎಂದು ಸಿಟ್ಟಿನಿಂದ ಕೂಗುತ್ತಾನೆ.
“ನಿನಗೆ
ನಿಮ್ ತಂದೆ ಅಖಿಲಾ ಅನ್ನೋ ಹುಡ್ಗಿ ನೋಡಿದ್ದಾರಂತೆ. ಅವಳನ್ನ ನಿನಿಗ್ ಮದ್ವೆ ಮಾಡ್ಕೊಂಡ್ರೆ ಸದ್ಯಕ್ಕೆ
ಬಿಸಿನೆಸ್ ಪಾರ್ಟನರ್ ಆಗಿರೋ ನಿಮ್ ತಂದೆ ಕಂಪನಿಗೆ ಓನರ್ ಆಗ್ತಾರಂತೆ...” ಎಂದು ಸುಬ್ಬು ಹೇಳುತ್ತಿದ್ದಂತೆ,
“ಅದಕ್ಕೂ, ನೀ ಕೆಲ್ಸಕ್ಕೆ ಬರೊಲ್ಲ ಅನ್ನೋದಕ್ಕು ಏನೋ ಸಂಬಂಧ?” ಎಂದು ಗಣೇಶ ಏನೂ ಅರ್ಥವಾಗದೇ ಕೇಳುತ್ತಾನೆ.
“ಆ
ಕಥೆ ಬೇಡ ಗಣೇಶ್. ನಾವಿಬ್ರು ಒಳ್ಳೆ ಫ್ರೆಂಡ್ಸಾಗಿ ಇರೋಣ ಓಕೆ...? ಬಾಯ್!” ಎಂದು ಹೇಳಿದ ಸುಬ್ಬು
ಮೊಬೈಲ್ ಕಟ್ ಮಾಡುತ್ತಾನೆ.
“ಲೋ...
ಲೋ... ಒಂದ್ನಿಮಿಷ ಇರೋ...” ಎಂದು ಗಣೇಶ ಹೇಳುವಷ್ಟರಲ್ಲಿ ಸುಬ್ಬುವಿನ ಮೊಬೈಲ್ ಕಟ್ ಆಗಿರುತ್ತದೆ.
ಮತ್ತೊಮ್ಮೆ ಗಣೇಶ ಪ್ರಯತ್ನಿಸಿದಾಗ ಸುಬ್ಬುವಿನ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗುತ್ತದೆ.
ಕ್ಷಣಕಾಲ ಏನೂ ತೋಚದ ಗಣೇಶ ಸ್ವಲ್ಪ ಹೊತ್ತಿನ ನಂತರ ಏನೋ ಹೊಳೆದವನಂತೆ ನಗುತ್ತಾನೆ. ತಕ್ಷಣ ಆಫೀಸ್
ರೂಮಿನಿಂದ ಎದ್ದು ಯಾರಿಗೋ ಕರೆಮಾಡುತ್ತಾ ಹೊರಗಡೆ ಬರುತ್ತಾನೆ.
***
ನಿನ್ ನೋವಲ್ಲಿ ನಾನ್ ನಗ್ಬೇಕಾ?
ಇತ್ತ
ಜೀವನದಲ್ಲಿ ಜಿಗುಪ್ಸೆಗೊಂಡ ಸುಬ್ಬು ಹಿಂದೆ-ಮುಂದೆ ಯೋಚಿಸದೆ ಆತ್ಮಹತ್ಯೆ ಮಾಡಿಕೊಳ್ಳುವುದೆಂದು ನಿರ್ಧರಿಸಿ
ಎತ್ತರವಾದ ಬಿಲ್ಡಿಂಗಿನ ತುದಿಯೇರಿ ಕೆಳಗೊಮ್ಮೆ ಕಣ್ಣಾಡಿಸಿ ಏನನ್ನೋ ಯೋಚಿಸುತ್ತಾ ನಿಂತುಕೊಳ್ಳುತ್ತಾನೆ.
ಅವನ ಕಣ್ಣಿಗೆ ಬಿಲ್ಡಿಂಗಿನ ಕೆಳಗೆ ಮತ್ತು ಸುತ್ತಮುತ್ತ ಕೆಲವು ಜನರು ಓಡಾಡುತ್ತಿರುವುದು ಕಾಣುತ್ತದೆ.
ಸ್ವಲ್ಪ ಸಮಯದ ನಂತರ ಏನನ್ನೋ ಡಿಸೈಡ್ ಮಾಡಿದಂತೆ ಕಾಣುವ ಸುಬ್ಬು ಆ ಬಿಲ್ಡಿಂಗಿನ ತುದಿಯಲ್ಲಿ ನಿಂತುಕೊಳ್ಳುತ್ತಾನೆ.
ಕೆಳಗೊಮ್ಮೆ ನೋಡುತ್ತಾನೆ, ಭಯವಾಗುತ್ತದೆ. ಧೈರ್ಯ ಮಾಡಿ ಬೀಳುವವನಂತೆ ಸ್ವಲ್ಪ ಮುಂದೆ ಬಂದ ಕ್ಷಣದಲ್ಲಿ
ಅವನಿಗೆ ಕೆಳಗೆ ಎರಡೂ ಕೈಗಳಿಲ್ಲದ ವ್ಯಕ್ತಿಯೊಬ್ಬ ಕುಣಿಯುವಂತೆ ಕಾಣುತ್ತದೆ. ಆತ ಜೋರಾಗಿಯೇ ಕುಣಿಯುತ್ತಿರುತ್ತಾನೆ.
ಕೆಲವರು ನೋಡಿದರೂ ನೋಡದಂತೆ ಹೋಗುತ್ತಿರುತ್ತಾರೆ. ಮತ್ತೆ ಕೆಲವರು ಅಲ್ಲೇ ನಿಲ್ಲುತ್ತಾರೆ. ಸುಬ್ಬು
ಕುತೂಹಲ ತಡೆಯಲಾಗದೆ ಆ ಕ್ಷಣಕ್ಕೆ ಸಾಯುವ ನಿರ್ಧಾರವನ್ನು ಕೈಬಿಟ್ಟು ಕೆಳಗಿಳಿದು ಓಡೋಡಿ ಬರುತ್ತಾನೆ.
ಆ ಕುಣಿಯುತ್ತಿದ್ದ ವ್ಯಕ್ತಿಯ ಬಳಿ ಬಂದು ಬುಸುಗುಡುತ್ತಾ ನಿಲ್ಲುತ್ತಾನೆ. ಆಶ್ಚರ್ಯದಿಂದ ಆತನಿಗೆ,
“ಯಾಕ್ರೀ ಹಿಂಗ್ ಡ್ಯಾನ್ಸ್ ಮಾಡ್ತಿದ್ದೀರಾ?” ಎಂದು ಒಂದೇ ಉಸಿರಿಗೆ ಕೇಳುತ್ತಾನೆ.
ಕೈ
ಇಲ್ಲದವ ಜೋರಾಗಿ, “ಸುಮ್ನೆ ಹೋಗಿ ಸಾರ್, ನಿಮ್‍ಗೇನ್ ಗೊತ್ತು ನನ್ ಕಷ್ಟ” ಎಂದು ಹೇಳಿ, “ಕೆಳಗಡೆ
ಕಡಿತಾ ಐತೆ, ಕೆರ್ಕೊಳೋಕೆ ಆಗ್ತಿಲ್ವಲಪ್ಪಾ ದೇವ್ರೆ ಅಂತ ನಾನಿದ್ರೆ...” ಎಂದು ಗೊಣಗಿಕೊಳ್ಳುತ್ತಾನೆ.
ಅಲ್ಲಿದ್ದ
ಕೆಲವರಿಗೂ, ಸುಬ್ಬುವಿಗೂ ಮನಸ್ಸಿಗೆ ತುಂಬಾ ನೋವಾಗುತ್ತದೆ. ಕೆಲವರು ಮುಸು ಮುಸು ನಗುತ್ತಾರೆ. ಕೈ
ಇಲ್ಲದವ ಪೆಚ್ಚಾಗುತ್ತಾನೆ.
ಅದಾಗ
ಅಲ್ಲಿಗೆ ಬಂದ ಗಣೇಶ ಸುಬ್ಬು ಅಲ್ಲಿರುವುದನ್ನು ಗಮನಿಸಿ ಅವನ ಹತ್ತಿರ ಬಂದು ಜನಗಳ ನಡುವಿನಿಂದ ಸ್ವಲ್ಪ
ದೂರ ಕರೆದುಕೊಂಡು ಹೋಗಿ, “ಏನೋ ಸುಬ್ಬು, ಎಲ್ಲಿದ್ಯಾ ಅಂತನಾದ್ರೂ ಹೇಳೋದ್ ಬೇಡ್ವೇನೋ. ಮೊಬೈಲ್ ಸರ್ವೀಸ್‍ಗೆ
ಪೋನ್ ಮಾಡಿ ತಿಳ್ಕೊಂಡು ಬಂದಿದ್ದಾಯ್ತು. ಇಲ್ಲೇನ್ ಮಾಡ್ತಿದ್ಯ?” ಎಂದು ಕೇಳುತ್ತಾನೆ.
“ಯಾಕೋ
ತುಂಬಾ ಬೇಜಾರಾಯ್ತು, ಜೀವನವೇ ಬೇಡ ಅನ್ನುಸ್ತು,” ಬಿಲ್ಡಿಂಗ್ ತೋರಿಸುತ್ತಾ “ಅದುಕ್ಕೆ ಸಾಯನ ಅಂತ
ಆ ಬಿಲ್ಡಿಂಗ್ ಮೇಲೆ ಹೋಗಿದ್ದೆ” ಎಂದು ತನ್ನ ಜೀವದ ಗೆಳಯನ ಬಳಿ ಮುಗ್ಧತೆಯಿಂದ ಹೇಳುತ್ತಾನೆ.
“ಗೊತ್ತಾಯ್ತು
ಬಿಡೋ... ಲವ್ ಡಿಸಪಾಯಿಂಟ್‍ಮೆಂಟ್! ಆ ಹುಡ್ಗಿನ್ ನಾನೇನ್ ಆಗ್ಲೆ ಮದ್ವೆ ಆಗ್ಬಿಟ್ನ...? ಇನ್ನಾ ನೋಡಿರೋದು
ಅಷ್ಟೇನಪ್ಪಾ. ಅಷ್ಟಕ್ಕೂ ಅವ್ಳು ನಿನ್ ಲವರ್ ಅಂತಾ ಗೊತ್ತಿದ್ರೆ ನೋಡೋದಕ್ಕೂ ಹೋಗ್ತಿರ್ಲಿಲ್ಲ. ಇದನ್
ಯಾಕೋ ನೀ ಮೊದ್ಲೆ ನಂಗ್ ಹೇಳ್ಲಿಲ್ಲ?” ಎಂದು ಗಣೇಶ ಸುಬ್ಬುವನ್ನು ಸಮಾಧಾನಿಸುತ್ತಾನೆ.
“ನಂಗೆಂತಾ
ಲವರ್ರೋ ಅವ್ಳು! ಬ್ಲಡಿ ಚೀಟ್, ಮೋಸ ಮಾಡ್ಬಿಟ್ಲು” ಎಂದು ಸುಬ್ಬು ತನ್ನ ಕೋಪ ವ್ಯಕ್ತಪಡಿಸುತ್ತಾನೆ.
“ಅವ್ಳು
ಮೋಸ ಮಾಡುದ್ಲು ಅಂತ, ನಿಂಗ್ಯಾಕೋ ನೀ ಮೋಸ ಮಾಡ್ಕೋಂತ್ಯ? ನಿಮ್ಮಪ್ಪಾಮ್ಮ ಏನ್ಮಾಡ್ಬೇಕು? ಅವರ ಬಗ್ಗೆನೂ
ಸ್ವಲ್ಪ ಯೋಚನೆ ಮಾಡು” ಎಂದು ಗಣೇಶ ಹೇಳುತ್ತಾನೆ.
“ಇಲ್ಲಾ
ಗಣಿ ನಾ ಸಾಯೋದಿಲ್ಲ,” ಕೈ ಇಲ್ಲದವನನ್ನು ತೋರಿಸಿ “ಎರಡೂ ಕೈ ಇಲ್ದಲೇ ಇರೋ ಈತನೇ ತನ್ ಜೀವನ ನಡೆಸ್ತಿರೋವಾಗ,
ನಾ ಯಾಕ್ ಸಾಯ್ಲಿ?” ಎಂದು ನಿಟ್ಟುಸಿರು ಬಿಡುತ್ತಾನೆ.
ಗಣೇಶ
ಕೈಯಿಲ್ಲದವನನ್ನು ನೋಡುತ್ತಾ, “ಯಾರೋ ನಿನ್ ಪಾಲಿಗ್ ದೇವ್ರು ಬಂದಾಗ್ ಬಂದವ್ನೆ ಕಣೋ. ಥ್ಯಾಂಕ್ ಯು
ಗಾಡ್ ಗಣಪತಿ. ಸರಿ ನಡಿ ಹೋಗೋಣ ನಾ ಎಲ್ಲಾ ಸರಿ ಮಾಡ್ತೀನಿ” ಎಂದು ಹೇಳಿ ಗೆಳೆಯನ ಹೆಗಲ ಮೇಲೆ ಕೈ ಹಾಕಿ
ನಡೆಯುತ್ತಾನೆ.
“ನೀ
ಏನೂ ಸರಿ ಮಾಡೋದು ಬೇಡ ಗಣಿ. ನಂಗೆ ಅವ್ಳು ಬೇಡ. ನೀನೇ ಅವ್ಳುನ್ನ ಮದ್ವೆಯಾಗಿ ಆರಾಮಾಗಿ ಇರು” ಎಂದು
ಸುಬ್ಬು ಹೇಳುತ್ತಾನೆ.
“ಲೋ...
ನೀನ್ ಲವ್ ಮಾಡಿರೋ ಹುಡ್ಗೀನ ನಾ ಮದ್ವೆಯಾಗ್ಲೇನೋ? ನಿನ್ ನೋವಲ್ಲಿ ನಾನ್ ನಗ್ಬೇಕಾ? ಬಾ ಬಾ ಸುಮ್ನೆ
ಗಾಡಿ ಹತ್ತು” ಎಂದು ಸುಬ್ಬುವನ್ನು ಕರೆಯುತ್ತಾನೆ.
“ಗಣಿ
ಪ್ಲೀಸ್...” ಎಂದು ಸುಬ್ಬು ಗೋಗೆರೆಯುತ್ತಿದ್ದಾಗ,
“ಪ್ಲೀಸ್...
ನೀನೀಗ ಬಾರಪ್ಪ” ಎಂದು ಹೇಳಿದ ಗಣೇಶ ಕೈಹಿಡಿದೆಳೆದು ಸುಬ್ಬುವನ್ನು ಗಾಡಿಯ ಬಳಿ ಕರೆತಂದು ಬೈಕ್ ಸ್ಟಾರ್ಟ್
ಮಾಡಿ ಕುಳಿತು, ಸುಬ್ಬುವನ್ನು ಹಿಂದೆ ಕೂಡಿಸಿಕೊಂಡು ಹೊರಡುತ್ತಾನೆ.
***
ಗೆಳೆಯರ ಕಾಫೀ ಕೂಟ
ಗಣೇಶ-ಅಖಿಲಾ
“ಒಬ್ಬ
ಹುಡ್ಗ, ಒಬ್ಳು ಹುಡ್ಗಿಗೋಸ್ಕರ ಅಮೂಲ್ಯವಾದ ಪ್ರಾಣ ಕಳ್ಕಳೋದು ತುಂಬಾ ನಾಚ್ಕೆಗೇಡಿನ ವಿಷಯ ಕಣ್ರೀ.
ಈ ಪ್ರೀತಿನೇ ಅಂಥಾದ್ದು ಅನ್ಸುತ್ತೆ. ಯಾಕ್ರೀ ಹಿಂಗ್ ಮಾಡುದ್ರಿ?” ಎಂದು ಗಣೇಶ ಒಂದೇ ಏಟಿಗೆ ಅಖಿಲಾಳಿಗೆ
ಕೇಳುತ್ತಾನೆ.
ಅಖಿಲಾ
ತನ್ನದೇನೂ ತಪ್ಪಿಲ್ಲದವಳಂತೆ “ಅದು ನಮ್ಮಪ್ಪ...” ಎಂದು ರಾಗ ಎಳೆಯುತ್ತಿದ್ದಾಗ,
“ನೀವಾ...
ನಿಮ್ಮಪ್ಪಾನ, ಸುಬ್ಬುನ ಪ್ರೀತ್ಸಿದ್ದು?” ಎಂದು ಗಣೇಶ ಕೋಪದಿಂದ ಕೇಳುತ್ತಲೇ ಅಖಿಲಾ ಅಳಲು ಶುರುಮಾಡುತ್ತಾಳೆ.
ಗಣೇಶ ಮುಂದುವರೆಯುತ್ತಾ, “ಅಳೋದ್ ಬಿಟ್ಟು ನಂಗೆ ಸರಿಯಾದ ಕಾರಣ ಹೇಳಿ ಅಷ್ಟೆ” ಎಂದು ದಬಾಯಿಸುತ್ತಾನೆ.
ಅಖಿಲಾ
ಕಣ್ಣೀರು ಒರೆಸಿಕೊಳ್ಳುತ್ತಾ, “ಅದು ನಮ್ಮಪ್ಪ, ಆತ ಬಡವ ಬೇಡ ಅಂದ್ರು” ಎಂದು ಹೇಳುತ್ತಾಳೆ.
“ಪ್ರೀತ್ಸೋವಾಗ್ಲೆ
ಸುಬ್ಬು ಸಾಹುಕಾರನೋ, ಬಡವನೋ ಅಂತ ತಿಳ್ಕೊಬೇಕಿತ್ರಿ. ನಾನಿವತ್ತು ಸಾವ್ಕಾರಾ, ನಮ್ ಬಿಸಿನೆಸ್ ಲಾಸಾಗಿ
ನಾವು ಬಡವರಾದ್ರೇ? ನಿಮ್ಮಪ್ಪ ಇನ್ನೊಬ್ಬ ಸಾವ್ಕಾರನ್ನ ನೋಡ್ತೀನಿ, ನಿನ್ ಗಂಡನ್ನ ಡೈವೋರ್ಸ್ ಮಾಡ್ಬಿಡು
ಅಂದ್ರೆ, ಹಂಗೆ ಮಾಡ್ತೀರ” ಎಂದು ವ್ಯಂಗ್ಯದಿಂದ ನಗುತ್ತಾನೆ.
“ಅದು
ಹಾಗಲ್ಲ ಗಣೇಶ್...” ಎಂದು ಅಖಿಲಾ ಏನನ್ನೋ ಹೇಳುವವಳಿದ್ದಾಗ,
“ನೋ!
ನೀವಿನ್ನೇನೂ ಹೆಚ್ಚು ಹೇಳ್ಬೇಡಿ. ನಿಮ್ಗೆ ಸುಬ್ಬು ಇಷ್ಟನೋ, ಇಲ್ವೋ ಹೇಳ್ಬಿಡಿ. ಅಷ್ಟು ಸಾಕು” ಎಂದು
ಅವಳನ್ನು ತಡೆಯುತ್ತಾನೆ.
ಅಖಿಲಾ
ಸ್ವಲ್ಪ ಸುಧಾರಿಸಿಕೊಳ್ಳುತ್ತಾ, “ಇಷ್ಟ ಏನೋ ಇದೆ. ಆದ್ರೆ ಅಪ್ಪನ ಭಯ” ಎಂದು ತನ್ನ ಅಭಿಪ್ರಾಯವನ್ನು
ಹೊರಹಾಕುತ್ತಾಳೆ.
ಗಣೇಶ
ಮುಗುಳ್ನಗುತ್ತಾ, “ಇಷ್ಟ ಇದೆ ಅಂದ್ಮೇಲೆ ಅಷ್ಟು ಸಾಕು. ನಿಮ್ಮಪ್ಪನ ವಿಷ್ಯ ನಂಗ್ ಬಿಡಿ” ಎಂದು ಹೇಳಿ
ಮೇಲೆ ನೋಡುತ್ತಾ, “ಅಪ್ಪಾ! ಗಾಡ್ ಗಣಪತಿ ಕಡೇಗೂ ನನ್ ಲಕ್ಷ್ಮೀ ನಂಗೆ, ನನ್ ಸುಬ್ಬುಗೆ ಅವನ ಅಖಿಲಾ
ಸಿಗೋ ಹಾಗೆ ಮಾಡ್ದಲ್ಲ. ನಿಂಗೆ ಹ್ಯಾಟ್ಸ್ ಆಫ್” ಎಂದು ಹೇಳುತ್ತಾನೆ.
ಆ
ಸಮಯಕ್ಕೆ ಸರಿಯಾಗಿ ಅಲ್ಲಿಗೆ ಲಕ್ಷ್ಮೀ-ಸುಬ್ಬು ಬರುತ್ತಾರೆ. ಸುಬ್ಬುವನ್ನು ನೋಡಿದ ತಕ್ಷಣ ಅಖಿಲಾ
ಎದ್ದು ಅವನ ಬಳಿ ಓಡಿ ಅವನನ್ನು ಆಲಂಗಿಸಿಕೊಂಡು, “I
am sorry Subbu, I love you. I love you very much” ಎಂದು ಅಳುತ್ತಾಳೆ.
ಸುಬ್ಬು
ಗಣೇಶನನ್ನು ನೋಡುತ್ತಾನೆ. ಗಣೇಶ ಗೆಲುವಿನ ನಗೆಸೂಸುತ್ತಾನೆ.
ಸುಬ್ಬುವೂ
ಅಖಿಲಾಳನ್ನು ತಬ್ಬಿ, “I
too love you Akhila” ಎಂದು ಹೇಳುತ್ತಾನೆ.
ಇವರಿಬ್ಬರೂ
ಆನಂದಬಾಷ್ಪ ಸುರಿಸುವಾಗ ಗಣೇಶ ಲಕ್ಷ್ಮೀಯೆಡೆಗೆ ತನ್ನ ಕೈಚಾಚುತ್ತಾನೆ. ನಾಚುತ್ತಾ ಲಕ್ಷ್ಮೀ ತನ್ನ
ಕೈ ನೀಡುತ್ತಾಳೆ.
***
ಕ್ಷಮಿಸಿಬಿಡಿ
ಒಂದು
ಸುಂದರ ಮುಂಜಾವು ಗಣೇಶ-ಲಕ್ಷ್ಮೀ, ಸುಬ್ಬು-ಅಖಿಲಾ ಪಾರ್ಕ್‍ನಲ್ಲಿ ಮಾತಾಡಿಕೊಂಡು ನಡೆದುಕೊಂಡು ಬರುತ್ತಿದ್ದಾರೆ.
“ರೀ...
ಅಖಿಲಾ ಐ ಯಾಮ್ ಸಾರಿ ಕಣ್ರೀ” ಎಂದು ಗಣೇಶ ಅಖಿಲಾಳಲ್ಲಿ ಕ್ಷಮೆ ಕೋರುತ್ತಾನೆ.
“ಸಾರಿ
ಯಾಕ್ ಗಣೇಶ್?” ಅಖಿಲಾ ಆಶ್ಚರ್ಯವ್ಯಕ್ತಪಡಿಸುತ್ತಾಳೆ.
“ಅದು
ಸಾವಿರ ಸುಳ್ ಹೇಳಿ ಒಂದ್ ಮದ್ವೆ ಮಾಡು ಅಂತಾರೆ. ನಾನು ನಿಮ್ ಮದ್ವೆ ಸುಬ್ಬು ಜೊತೆ ಮಾಡಿಸ್ಬೇಕು ಅಂತಾ
ಒಂದೇ ಒಂದು ಸುಳ್ ಹೇಳ್ದೆ, ಅದಕ್ಕೆ.”
“ಹೌದಾ...?
ಅದೇನಪ್ಪಾ ಅಂತಾ ಸುಳ್ಳು?”
“ಅವತ್ತು
ಬೆಳಿಗ್ಗೆ ಪಾರ್ಕಲ್ಲಿ ನೀವು ಹೋದ್ಮೇಲೆ ಲಕ್ಷ್ಮೀ ಸಿಕ್ಕಿದ್ರು. ಆದರೆ, ನಾ ನಿಮ್ಮತ್ರ ಇಲ್ಲಾ ಅಂತ
ಹೇಳಿದ್ದೆ.”
“ಅಷ್ಟೇನಾ...?”
“ಅಷ್ಟೆ.
ಜೊತೆಗೆ ನಾವೆಲ್ಲಾ ಸೆರ್ಕೊಂಡು ನಿಮ್ಗೆ ಬುದ್ಧಿ ಕಲಿಸ್ಬೇಕು ಅಂತ... ನಿಮ್ಗೆ ನಿಜವಾದ ಪ್ರೀತಿ ಏನೂಂತ
ಗೊತ್ತಾಗ್ಲಿ ಅಂತ ನನ್ ಕಥೆಯೆಲ್ಲಾ ಹೇಳ್ಬೇಕಾಯ್ತು” ಎಂದು ಗಣೇಶ ಹೇಳುತ್ತಾನೆ.
ಗಣೇಶ,
ಲಕ್ಷ್ಮೀ, ಸುಬ್ಬು ಎಲ್ಲರೂ ಒಟ್ಟಾಗಿ, We are Sorry ಅಖಿಲಾ...” ಎಂದು ಅಖಿಲಾಳ
ಮುಂದೆ ಕೈಕಟ್ಟಿ ತಲೆಬಾಗುತ್ತಾರೆ.
“ಅಯ್ಯೋ,
ನೀವೆಲ್ಲಾ ಯಾಕ್ ಸಾರಿ ಕೇಳ್ಬೆಕು. ನಾನೇ ನಿಮ್ಗೆಲ್ಲಾ ಸಾರಿ ಕೇಳಿ, ಥ್ಯಾಂಕ್ಸ್ ಹೇಳ್ಬೇಕು. ನೀವೆಲ್ಲಾ
ಇರ್ಲಿಲ್ಲಾ ಅಂದಿದ್ರೆ ನಾ ಸುಬ್ಬುನ ಕಳ್ಕೊಂಡ್ ಬಿಡ್ತಿದ್ದೆ” ಎಂದು ಹೇಳಿದ ಅಖಿಲಾಳ ಕಣ್ಣುಗಳಲ್ಲಿ
ನೀರು ತುಂಬಿಕೊಳ್ಳುತ್ತದೆ.
ಅಖಿಲಾ
ಅಳುತ್ತಾ ಸುಬ್ಬುವಿನ ತೆಕ್ಕೆಗೆ ಬೀಳುತ್ತಾಳೆ.
“ಹೋಗ್ಲಿ
ಬಿಡು ಅಖಿಲಾ. ಹೇಗೋ ಕಡೆಗೆಲ್ಲಾ ಒಳ್ಳೆದೇ ಆಯ್ತಲ್ಲ” ಎಂದು ಹೇಳಿ ಸುಬ್ಬು ಅವಳನ್ನು ಸಮಾಧಾನಿಸುತ್ತಾನೆ.
“ಗಣೇಶ್
ಥರಾ ಫ್ರೆಂಡ್ ಇದ್ರೆ, ಎಲ್ಲಾ ಒಳ್ಳೇದೇ ಆಗುತ್ತೆ...” ಎಂದು ಹೇಳುತ್ತಾ ಅಖಿಲಾ ಗಣೇಶನೆಡೆಗೆ ಮೆಚ್ಚುಗೆಯ
ನಗು ಸೂಸುತ್ತಾಳೆ.
ಗಣೇಶ್
ಮುಗುಳ್ನಗುತ್ತಾ, “ಇನ್ನಾ ಇಷ್ಟಕ್ಕೆ ಕಥೆ ಮುಗಿಲಿಲ್ವೋ ಸುಬ್ಬು. ಇನ್ನೂ ರಾವಣ ಉರ್ಫ್ ನಿಮ್ ಮಾವನ್ನ
ಒಪ್ಪುಸ್ಬೇಕಲ್ಲಾ?” ಎಂದು ಹೇಳುತ್ತಾನೆ.
ಅಲ್ಲಿಯವರೆವಿಗೂ
ಸುಮ್ಮನಿದ್ದ ಲಕ್ಷ್ಮೀ, “ಅವರನ್ನ ನೀವೇ ಏನಾದ್ರು ಮಾಡಿ ಒಪ್ಪಿಸ್ಬಿಡಿ ಗಣೇಶ್” ಎಂದು ಗಣೇಶನನ್ನು
ಕೋರುತ್ತಾಳೆ.
“ಓಕೆ…”
ಎಂದು ತನ್ನ ಒಪ್ಪಿಗೆಯನ್ನು ಸೂಚಿಸುತ್ತಾನೆ.
“All the Best ಗಣೇಶ್!” ಮೂವರೂ ಒಟ್ಟಿಗೆ ಹಾರೈಸುತ್ತಾರೆ.
***
ಮದುವೆಗೊಂದು ಪೀಠಿಕೆ
ರಾತ್ರಿಯ
ಊಟದ ನಂತರ ಗಣೇಶ ಅಜ್ಜಿಯ ರೂಮಿಗೆ ಅಮ್ಮನೊಡನೆ ಬಂದು, “ಅಜ್ಜಿ... ಅಮ್ಮಾ... ಮದುವೆ ಅಂದ್ರೆ ಏಳೇಳು
ಜನ್ಮದ ಅನುಬಂಧ ಅಲ್ವಾ?” ಎಂದು ಏನನ್ನೋ ಹೇಳಲು ತೊಡಗಿದಂತೆ ನುಡಿಯುತ್ತಾನೆ. ಅಜ್ಜಿ ಅಮ್ಮ ಕುತೂಹಲದಿಂದ
ಗಣೇಶನನ್ನೇ ನೋಡುತ್ತಾರೆ. ಆಗ ಅವನು ಮುಂದುವರೆಯುತ್ತಾ, “ನನ್ ಜೀವನದಲ್ಲಿ ಒಬ್ಳು ಹುಡ್ಗಿ ಬಂದೇ ಬರ್ತಾಳೆ
ಅನ್ನೋ ನಂಬಿಕೆ ನಂಗಿತ್ತು ಕಣಜ್ಜಿ. ಕಡೆಗೂ ನನ್ ಲಕ್ಷ್ಮೀ ನಂಗೆ ಸಿಕ್ಕುದ್ಲು. ನಾನು ಅಖಿಲಾನ ಮದ್ವೆ
ಆಗಲ್ಲ, ಲಕ್ಷ್ಮೀನೇ ಆಗ್ತಿನಿ” ಎಂದು ಹೇಳಿದೊಡನೆ,
“ಏನೋ
ಗಣಿ ಹಿಂಗ್ ಅಂತಿದ್ಯಾ? ಯಾರೋ ಲಕ್ಷ್ಮೀ?” ಎಂದು ಗಿರಿಜಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ.
“ಲಕ್ಷ್ಮೀ
ನಾನು ಹುಟ್ಟಿದಾಗಿನಿಂದ ನಂಜೊತೆನೆ ಇದ್ದಾಳೆ ಕಣಮ್ಮ. ನಾನು ಗಮನಿಸಿಯೇ ಇರಲಿಲ್ಲ” ಎಂದು ತನಗೂ ಆಶ್ಚರ್ಯವಾಗಿರುವುದನ್ನು
ಹೊರಹಾಕುತ್ತಾನೆ.
“ಮತ್ತೆ
ನಿಮ್ಮ ತಂದೆ ಅಖಿಲಾನ್ನೇ ನಿನಗೆ ಮದ್ವೆ ಮಾಡ್ಕೊಳೋದು ಅಂತ ಅವರ ಫ್ರೆಂಡ್‍ಗೆ ಮಾತು ಕೊಟ್ಟವ್ರೆ” ಎಂದು
ಗಿರಿಜಾ ಹರೀಶನ ಮಾತನ್ನು ನೆನಪಿಸುತ್ತಾಳೆ.
“ಲಕ್ಷ್ಮೀ
ಸಿಗ್ದಲೆ ಇದ್ದಿದ್ರೆ... ಅಖಿಲಾ ಸುಬ್ಬುನ ಲವ್ ಮಾಡ್ದಲೆ ಇದ್ದಿದ್ರೆ... ಅವರ ಮಾತು ನಡೀತಿತ್ತು”
ಎಂದು ಗಣೇಶ ಇದು ತಮಾಷೆಯ ವಿಷಯವೆಂಬಂತೆ ಹೇಳುತ್ತಾನೆ.
“ಸುಬ್ಬುನಾ…?”
ಗಿರಿಜಾ ಗಾಬರಿಯಾಗುತ್ತಾಳೆ.
“ಹೌದಮ್ಮ
ಸುಬ್ಬುನೇ… ಅಖಿಲಾ ಸುಬ್ಬು ಒಬ್ರುನೊಬ್ರು ತುಂಬಾ ಇಷ್ಟಪಟ್ಟಿದ್ದಾರೆ. ಅಖಿಲಾನ್ನ ಅವನೇ ಮದ್ವೆಯಾಗ್ಬೇಕು.
ಅದೇ ಸರಿ. ಹೇಗಿದ್ರೂ ನನಗೆ ನನ್ನ ಲಕ್ಷ್ಮೀ ಸಿಕ್ಕುದ್ಲಲ್ಲ” ಎಂದು ಹೇಳಿ ಇವರಿಬ್ಬರ ತಣಿಯದ ಕುತೂಹಲವನ್ನು
ಗಮನಿಸಿ, “ಅಮ್ಮಾ... ನೀನು ಅಜ್ಜಿ ಸೇರ್ಕೊಂಡು ಹೇಗಾದ್ರೂ ಅಪ್ಪುನ್ನ ಒಪ್ಪಿಸ್ಬೇಕು. ಒಂದಿನ ಲಕ್ಷ್ಮೀನ
ಮನೇಗೆ ಕರ್ಕೊಂಡು ಬಂದು ಎಲ್ರಿಗೂ ಪರಿಚಯ ಮಾಡಿಕೊಡ್ತೀನಿ. ಅವಳನ್ನ ನೋಡಿದ್ರೆ ಎಂಥವ್ರೂ ಒಪ್ಕೋಬೇಕು,
ಹಂಗಿದ್ದಾಳೆ” ಎಂದು ಅಪ್ಪನನ್ನು ಒಪ್ಪಿಸಲು ಅಮ್ಮ ಮತ್ತು ಅಜ್ಜಿಗೆ ಪೀಠಿಕೆ ಹಾಕುತ್ತಾನೆ.
ಅಜ್ಜಿ
ನಗುತ್ತಾ ತಲೆಯಾಡಿಸುತ್ತದೆ. ಗಿರಿಜಾ ಏನೋ ಯೋಚಿಸುವವಳಂತೆ ಕ್ಷಣ ಕಾಲ ತಡೆದು, “ನಿನ್ನಿಷ್ಟಾನೇ ನಮ್
ಇಷ್ಟ ಗಣಿ. ನೋಡನ, ಅವ್ರಿಗೆ ಹೇಳ್ ನೋಡ್ತಿನಿ” ಎಂದು ಹೇಳಿ ರೂಮಿನಿಂದ ಹೊರಗೆ ಹೋಗುತ್ತಾಳೆ.
ಗಣೇಶ
ಅಜ್ಜಿಯ ಬಳಿ ಬಂದು ಕಾಲು ಊರಿ ಕುಳಿತು, “ಮೈ ಸ್ವೀಟ್ ಅಜ್ಜಿ...” ಎಂದು ಅಜ್ಜಿಯ ಕೆನ್ನೆ ಹಿಂಡುತ್ತಾನೆ.
ಅಜ್ಜಿ ಪ್ರೀತಿಯಿಂದ ಅವನ ತಲೆ ನೇವರಿಸುತ್ತದೆ.
***
ಎಲ್ಲಾ ಗಣೇಶನಿಚ್ಚೆ
ಊಟಮಾಡಿ
ಬೆಳಗಿನ ನ್ಯೂಸ್ ಪೇಪರನ್ನು ಹರೀಶ ತಿರುವಿಹಾಕುವ ಸಮಯಕ್ಕೆ ತಾಂಬೂಲದ ತಟ್ಟೆಯೊಂದಿಗೆ ಅಲ್ಲಿಗೆ ಬಂದ
ಗಿರಿಜಾ ಮಂಚದ ಮೇಲೆ ಅವನ ಪಕ್ಕ ಬಂದು ಕುಳಿತುಕೊಂಡು ತಾಂಬೂಲ ಬೆರೆಸಿ ಹರೀಶನ ಬಾಯಿಗೆ ಇಡುತ್ತಾ,
“ರೀ... ಗಣೇಶನ ಮದ್ವೆ...” ಎಂದು ಮಾತನ್ನು ಶುರುಮಾಡುತ್ತಾಳೆ.
“ಅದು
ಅಖಿಲಾ ಜೊತೆ ನಡೆಯುತ್ತಲ್ಲಾ... ಹುಡುಗರು ಸ್ವಲ್ಪ ದಿನ ಓಡಾಡಿಕೊಂಡು ಇರಲಿ. ಆಮೇಲೆ ಒಂದು ಒಳ್ಳೆಯ
ದಿನ ನೋಡಿ ಇಬ್ಬರಿಗೂ ಮದ್ವೆ ಮಾಡೋಣ” ಎಂದು ಹೇಳಿ ಪೇಪರ್ ಮಡಚಿಟ್ಟು ಹೆಂಡತಿಯನ್ನು ನೋಡುತ್ತಾನೆ.
“ಆದ್ರೆ...
ಅದು... ಗಣೇಶ ಲಕ್ಷ್ಮೀನಾ...” ಎಂದು ಗಿರಿಜಾ ಹೇಳುತ್ತಿದ್ದಂತೆ,
“ಏನು?
ಯಾರೇ ಅದು ಲಕ್ಷ್ಮೀ?” ಎಂದು ಆಶ್ಚರ್ಯಚಕಿತನಾಗಿ ಕೇಳುತ್ತಾನೆ. ಅವನ ಧ್ವನಿಯಲ್ಲಿ ಆತಂಕವಿರುತ್ತದೆ.
“ಗಣೇಶನ
ಗರ್ಲ್ ಫ್ರೆಂಡ್ ಕಣ್ರೀ. ಅವಳು ಮೊದ್ಲಿಂದಾನು ಗಣೇಶನ್ನ ನೋಡಿದ್ದಾಳಂತೆ. ಇವನ ಮೇಲೆ ಅವಳಿಗೆ ತುಂಬಾ
ಪ್ರೀತಿಯಂತೆ. ಇವನಿಗೂ ಅವಳು ಇಷ್ಟ ಆಗಿದ್ದಾಳೆ” ಎಂದು ಗಿರಿಜಾ ಸಹಜವೆಂಬಂತೆ ಹೇಳಿಬಿಡುತ್ತಾಳೆ.
“ಏನೇ
ನೀನು ಹೇಳೋದು? ಈಗಾಗ್ಲೆ ಅಖಿಲಾನ ಸೊಸೆ ಮಾಡ್ಕೊಳೋದು ಅಂತ ಮಾತಾಗಿದೆ. ಏನೇ ನೀನು ಹೀಗ್ ಮಾತಾಡ್ತಿದ್ಯ?”
ಎಂದು ದನಿ ಜೋರು ಮಾಡುತ್ತಾನೆ.
“ನೋಡ್ರಿ...
ಈ ಕಾಲದಲ್ಲಿ ಹುಡುಗ ಹುಡುಗಿ ಇಬ್ಬರೂ ಒಪ್ಪುದ್ರೇನೆ ಅದು ಮದ್ವೆ ಅಂತ ಅನ್ನುಸ್ಕೊಳೋದು... ಇದು ನನಗಿಂತ
ನಿಮಗೇನೆ ಚೆನ್ನಾಗಿ ಗೊತ್ತಲ್ಲ. ಇಷ್ಟ ಇಲ್ಲದಲೇ ಇರೋ ಮದುವೇನ ಬಲವಂತದಿಂದ ಮಾಡಬಾರದು” ಎಂದು ಗಣೇಶನ
ವಕಾಲತ್ತು ವಹಿಸುತ್ತಾಳೆ.
ಹೆಂಡತಿ
ಹೇಳಿದ್ದನ್ನು ಕೇಳಿ, ತುಸು ಚಿಂತಿಸಿದಂತೆ ಕಂಡ ಹರೀಶ, “ಅದೇನೋ ಸರಿ ಅನ್ನು. ಆದರೆ ರಂಗನಾಥ್ ಒಪ್ಕೋಬೇಕಲ್ಲ?
ಅಷ್ಟಕ್ಕೂ ಅವನಿಗೆ ಇರೋದು ಒಬ್ಳೇ ಮಗ್ಳು. ನಮ್ ಗಣೇಶನೇ ಅವ್ಳುನ್ನ ಮದ್ವೆ ಆಗಿದ್ರೆ ಚೆನ್ನಾಗಿರೋದು”
ಎಂದು ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವವನಂತೆ ಹೇಳುತ್ತಾನೆ.
“ನಿಮಗೆ
ಮಗನ ಇಷ್ಟಕ್ಕಿಂತ, ರಂಗನಾಥ್ ಆಸ್ತಿ ಮೇಲೆ ಕಣ್ಣು, ಅದುಕ್ಕೆ ಈ ರೀತಿ ಮಾತಾಡ್ತೀರ” ಎಂದು ಗಿರಿಜಾ
ಕೋಪಿಸಿಕೊಳ್ಳುತ್ತಾಳೆ.
“ಅದು
ಹಂಗಲ್ಲಾ ಕಣೆ...” ಎನ್ನುತ್ತಾ ಹರೀಶ ಹೆಂಡತಿಯನ್ನು ಸಮಾಧಾನಿಸಲು ನೋಡುತ್ತಾನೆ.
“ಹಂಗೂ
ಇಲ್ಲ, ಹಿಂಗೂ ಇಲ್ಲ. ನೀವೇ ಏನಾದ್ರು ಮಾಡಿ ರಂಗನಾಥವ್ರನ್ನ ಒಪ್ಸಿ. ಅಷ್ಟಕ್ಕೂ ರಂಗನಾಥ್ ಮಗ್ಳು ಅಖಿಲಾ
ಸುಬ್ಬುನಾ ಇಷ್ಟ ಪಟ್ಟಿದ್ದಾಳಂತೆ” ಎಂದು ತಣ್ಣನೆಯ ಧ್ವನಿಯಲ್ಲಿ ಪಟಾಕಿ ಸಿಡಿಸುತ್ತಾಳೆ.
“ಏನು...!?
ಸುಬ್ಬುನಾ...!? ಹೀಗೋ ಕಥೆ... ಅದ್ಸರಿ ಗಣೇಶ ಎಲ್ಲಿದ್ದಾನೆ?” ಎಂದು ತುರ್ತಾಗಿ ಗಣೇಶನ ಜೊತೆ ಮಾತಾಡುವ
ಇರಾದೆ ವ್ಯಕ್ತಪಡಿಸುತ್ತಾನೆ.
“ಇನ್ನೆಲಿ
ಇರ್ತಾನೆ. ಒಂದು ಅಜ್ಜಿ ರೂಮಲ್ಲಿ, ಇಲ್ಲಾಂದ್ರೆ ಅವನ ರೂಮಲ್ಲಿ” ಎಂದ ಗಿರಿಜಾಳ ಮಾತಿನಲ್ಲಿ ನಗುವಿರುತ್ತದೆ.
ಅಲ್ಲಿಗೆ ತನ್ನ ಗಂಡ ತನ್ನ ಮಾತನ್ನು ಕೇಳುತ್ತಾರೆಂಬುದು ಅವಳಿಗೆ ಮನದಟ್ಟಾಗುತ್ತದೆ.
ಮಂಚದಿಂದ
ಎದ್ದ ಹರೀಶ ಸೀದಾ ಅಮ್ಮನ ರೂಮಿನ ಕಡೆಗೆ ನಡೆಯುತ್ತಾನೆ. ಅವನ ಹಿಂದೆಯೇ ಗಿರಿಜಾ ಬರುತ್ತಾಳೆ. ಇಬ್ಬರೂ
ಕನಕಜ್ಜಿಯ ರೂಮಿನೊಳಗೆ ಬರುತ್ತಾರೆ. ಗಣೇಶ ಅಜ್ಜಿಯ ಕಾಲಿನ ಬಳಿ ಕುಳಿತು ಅವಳ ಕಾಲುಗಳನ್ನು ಮೆಲ್ಲಗೆ
ಒತ್ತುತ್ತಿರುತ್ತಾನೆ. ಇದ್ದಕ್ಕಿದ್ದಂತೆ ಇವರಿಬ್ಬರೂ ಬಂದದ್ದನ್ನು ನೋಡಿ ಗಣೇಶ ಮತ್ತು ಅಜ್ಜಿ ಇವರೆಡೆಗೆ
ನೋಡುತ್ತಾರೆ.
“ಅಮ್ಮಾ...
ಗಣೇಶ ಲಕ್ಷ್ಮೀ ಅನ್ನೋ ಹುಡ್ಗೀನಾ ಇಷ್ಟಪಟ್ಟಿದ್ದಾನಂತೆ. ಆದ್ರೆ ನಾನು ರಂಗನಾಥನಿಗೆ ಅಖಿಲಾನ ಸೊಸೆ
ಮಾಡ್ಕಂತಿನಿ ಅಂತ ಮಾತ್ ಕೊಟ್ಟಿದ್ದೀನಿ. ಅಂತಾದ್ರಲ್ಲಿ ಗಣೇಶ ಹೀಗಂದ್ರೆ ಹೇಗೆ? ಏನ್ಮಾಡೋದು?” ಎಂದು
ಅಮ್ಮನಿಗೆ ಕೇಳುತ್ತಾನೆ. ಜೊತೆಗೆ ಅವನ ಕಣ್ಣುಗಳು ಗಣೇಶನನ್ನು ನೋಡುತ್ತಿರುತ್ತವೆ.
ಎಲ್ಲಾ
ಗೊತ್ತಿರುವ ಅಜ್ಜಿ ನಗುತ್ತಾ ನೋಟ್‍ಪ್ಯಾಡ್ ತೆಗೆದುಕೊಂಡು “ಎಲ್ಲಾ ಗಣೇಶನಿಚ್ಚೆ” ಎಂದು ಬರೆದು ತೋರಿಸುತ್ತದೆ.
ಗಣೇಶ ಅಪ್ಪನೆಡೆಗೆ ಮುಗುಳ್ನಗುತ್ತಾನೆ.
ಇನ್ನೇನು
ಮಾಡಲು ಸಾಧ್ಯ ಎಂದರಿತ ಹರೀಶ, “ಆಯ್ತಮ್ಮ, ರಂಗನಾಥನಿಗೆ ಹೇಗಾದ್ರು ಹೇಳಿ ಒಪ್ಪುಸ್ತೀನಿ” ಎಂದು ಹೇಳಿ
ಗಣೇಶನೆಡೆಗೆ ತಿರುಗಿ, “ನಿನ್ನಿಷ್ಟಾನೇ ನಮ್ಮಿಷ್ಟ ಗಣಿ” ಎಂದು ಸೊಂತೋಷದಿಂದಲೇ ಹೇಳುತ್ತಾನೆ. ಗಿರಿಜಾಳಿಗೂ
ಸಂತೋಷವಾಗುತ್ತದೆ.
ಗಣೇಶ
ಅಜ್ಜಿಯನ್ನು ಅನಾಮತ್ತು ಎತ್ತಿಕೊಂಡು ಹಾಸಿಗೆ ಮೇಲೆ ಮಲಗಿಸಿ “ಅಜ್ಜಿ ನೀ ಕೂತಿದ್ದು ಸಾಕು. ಮಲಗು.
ಗುಡ್ ನೈಟ್” ಎಂದು ಹೇಳಿ ನಗುತ್ತಾ ಅಪ್ಪ, ಅಮ್ಮನೊಡನೆ ಹೊರಗೆ ಬರುತ್ತಾನೆ.
ಆಗ
ಹರೀಶ ಗಣೇಶನ ಹೆಗಲ ಮೇಲೆ ಕೈ ಹಾಕಿ, “ಅಂತೂ ಏಳು ಬೆಟ್ಟ... ಏಳು ಸಾಗರ... ಹ್ಹ... ಹ್ಹ... ಸರಿ ನಮಗೆಲ್ಲಾ
ಹುಡುಗೀನಾ ಯಾವಾಗ್ ತೋರಿಸ್ತ್ಯಾ?” ಎಂದು ಕೇಳುತ್ತಾನೆ.
“ನಾಳೇನೆ”
ಎಂದು ಗಣೇಶನ ಸಿದ್ಧ ಉತ್ತರ ಬರುತ್ತದೆ.
“ಓಕೆ.
ನಾಳೇನೆ ರಂಗನಾಥ್‍ಗೂ ಬರೋದಿಕ್ಕೆ ಹೇಳ್ತೀನಿ. ಹಾಗೇ ಸುಬ್ಬುಗೂ ಕರೆಸು. ರಂಗನಾಥನನ್ನು ಒಪ್ಪಿಸೋಣ”
“ಸರೀನಪ್ಪಾ”
“ಓಕೆ.
ಗುಡ್ ನೈಟ್” ಎಂದು ಹೇಳಿ ಹರೀಶ್-ಗಿರಿಜಾ ಅಲ್ಲಿಂದ ತಮ್ಮ ರೂಮಿನತ್ತ ನಡೆಯುತ್ತಾರೆ.
“ಗುಡ್
ನೈಟ್ ಅಪ್ಪ, ಗುಡ್ ನೈಟ್ ಅಮ್ಮ” ಎಂದು ಗಣೇಶ ತನ್ನ ರೂಮಿನತ್ತ ಜಿಗಿಯುತ್ತಾನೆ.
***
ಮದುವೆಯ ಮಾತುಕಥೆ
ಕನಕಜ್ಜಿಯ
ಮನೆಯ ವಿಶಾಲ ಹಾಲಿನಲ್ಲಿ ಕನಕಜ್ಜಿ, ಹರೀಶ, ಗಿರಿಜಾ, ರಮೇಶ, ರೇಖಾ, ರಂಗನಾಥ್ ಎಲ್ಲರೂ ಸ್ವಲ್ಪ ಸೀರಿಯಸ್ಸಾಗಿ
ಕುಳಿತಿದ್ದಾರೆ. ಗಣೇಶ-ಸುಬ್ಬು, ಅಖಿಲಾ ಜೊತೆಗಿದ್ದಾರೆ.
“ಏನೋ
ಹರೀಶ್? ಮಾತಾಡ್ಬೇಕು ಅಂತ ಕರೆದ್ಬುಟ್ಟು ಸೈಲಂಟಾಗಿ, ಸೀರಿಯಸ್ಸಾಗಿ ಕೂತಿದ್ದೀಯಾ?” ಎಂದು ರಂಗನಾಥನೇ
ಮೌನ ಮುರಿಯುತ್ತಾನೆ.
“ಅದೂ...
ರಂಗನಾಥ್... ವಿಷಯ ಹೇಗೇಳ್ಬೇಕೋ ಗೊತ್ತಾಗ್ತಿಲ್ಲ” ಎಂದು ಹರೀಶ ಹೇಳಲೋ ಬೇಡವೋ ಎಂದು ಎಲ್ಲರ ಮುಖವನ್ನೊಮ್ಮೆ
ನೋಡುತ್ತಾನೆ. ಒಬ್ಬಬ್ಬರ ಮುಖವೂ ಹೂಂ... ಹೇಳಿಬಿಡಿ ಎಂಬಂತೆ ತೋರುತ್ತಲೇ ಮುಂದುವರೆಯಲು ಅನುವಾಗುತ್ತಿದವನ
ಮಾತು ಬರುವ ಮೊದಲೇ ರಂಗನಾಥ್, “ಗಣೇಶ-ಅಖಿಲಾ ಮದ್ವೆ ವಿಷಯ ತಾನೇ?” ಎಂದು ಹೇಳುತ್ತಾನೆ.
“ವಿಷಯ
ಏನೋ ಮದ್ವೆದೆ... ಆದರೆ? ಗಣೇಶ-ಅಖಿಲಾ ಮದ್ವೆ ಅಲ್ಲಾ” ಎಂದು ಹೆದರಿಕೊಂಡೇ ಹರೀಶ ಹೇಳುತ್ತಾನೆ. ಅವನಿಗೆ
ಗೆಳೆಯನನ್ನು ಕಂಡರೆ ಮೊದಲಿನಿಂದಲೂ ಸ್ವಲ್ಪ ಭಯ.
ರಂಗನಾಥ್
ಕೋಪದಿಂದ, “ಮತ್ತೆ?” ಎಂದು ಕೇಳುತ್ತಾನೆ.
“ಅದು,
I am sorry ರಂಗನಾಥ್. ನಿನಗೆ ನಾ ಕೊಟ್ಟ ಮಾತು ಉಳಿಸ್ಕೊಳೋಕೆ ಆಗ್ತಿಲ್ಲ” ಎಂದು ಹರೀಶ
ಹೇಳುತ್ತಿದ್ದಂತೆ, ಕೋಪಗೊಂಡ ರಂಗನಾಥ್, “ಅಂದ್ರೆ?” ಎಂದು ಜೋರಾಗಿ ಕೂಗುತ್ತಾನೆ.
ಸಹನೆಯನ್ನು
ಕಳೆದುಕೊಳ್ಳದ ಹರೀಶ, "ಲಕ್ಷ್ಮೀ ಅಂತ ಗಣೇಶನ ಬಾಲ್ಯದ ಗೆಳತಿ. ಅವಳನ್ನೇ ಮದ್ವೆ ಆಗ್ಬೇಕು ಅಂತ
ನಮ್ಮ ಹುಡ್ಗ ಹೇಳ್ತಾ ಇದ್ದಾನೆ” ಎಂದು ತಾಳ್ಮೆಯಿಂದ ನುಡಿಯುತ್ತಾನೆ.
ಕೋಪಗೊಂಡ
ರಂಗನಾಥ ನಿಲ್ಲುತ್ತಾನೆ. ಹರೀಶನೂ ನಿಲ್ಲುತ್ತಾನೆ.
“ಅಂದ್ರೆ
ಅಖಿಲಾನ ಗಣೇಶ್ ಮದ್ವೆ ಆಗೋಲ್ಲ ಅಂತ ತಾನೆ. ನೋಡು ಹರೀಶ್, ನನ್ ಮಗ್ಳು ಈ ಮನೆ ಸೊಸೆಯಾಗ್ಬೇಕು. ಇಲ್ಲಾ
ಅಂದ್ರೆ ನನ್ನ ನಿನ್ನ ಪಾರ್ಟ್‍ನರ್^ಶಿಪ್ ಕಟ್ ಆಗುತ್ತೆ” ಎಂದು ತನ್ನ ನಿರ್ಧಾರ ಅಚಲವಾದದ್ದು ಎಂಬಂತೆ
ಹೇಳುತ್ತಾನೆ.
“ಅದು
ಹಾಗಲ್ಲ ರಂಗನಾಥ್. ಸುಬ್ಬು ಅಖಿಲಾಳನ್ನು ತುಂಬಾ ಇಷ್ಟ ಪಟ್ಟಿದ್ದಾನೆ” ಎಂದು ಹೇಳಿ ಸುಬ್ಬುವನ್ನು
ತೋರಿಸುತ್ತಾ, “ಸುಬ್ಬುನೂ ಒಳ್ಳೆ ಹುಡುಗ... ಚೆನ್ನಾಗಿ ಓದಿಕೊಂಡಿದ್ದಾನೆ” ಎಂದು ತನ್ನ ಮಾತನ್ನು
ನಿಲ್ಲಿಸುತ್ತಾನೆ.
“ಸುಬ್ಬು
ಏನು ಅಂತ, ನಿನಗಿಂತಾ ನನಗೇ ಚೆನ್ನಾಗೊತ್ತು” ಎಂದು ಹೇಳಿ ಸುಬ್ಬುವಿನೆಡೆಗೆ ತಿರುಗಿ, “ಈ ಪೂರ್ ಫೆಲೊಗೆ
ನನ್ ಮಗ್ಳುನ ಕೊಡೋಲ್ಲ” ಎಂದು ಅರಚುತ್ತಾನೆ.
ಅಲ್ಲಿಯವರೆವಿಗೂ
ಸುಮ್ಮನೆ ಎಲ್ಲವನ್ನೂ ಗಮನಿಸುತ್ತಿದ್ದ ಗಣೇಶ ರಂಗನಾಥನ ಮುಂದೆ ಬಂದು, “ಅಂಕಲ್, ಸುಬ್ಬು ಫೈನಾನ್ಶಿಯಲಿ
ಪೂರ್ ಇರ್ಬೋದು, ಆದ್ರೆ ತುಂಬಾ ಬ್ರಿಲಿಯಂಟ್! ಅಷ್ಟಕ್ಕೂ ನಿಮ್ಮ ಮಗಳಿಗೂ ಅವನನ್ನ ಕಂಡರೆ ತುಂಬಾ ಇಷ್ಟ
ಇದೆ” ಎಂದು ನಿಜವಾದ ವಿಷಯವನ್ನು ನೇರವಾಗಿಯೇ ತಿಳಿಸುತ್ತಾನೆ.
“ಅದೆಲ್ಲಾ
ನನಗೆ ಬೇಕಿಲ್ಲಪ್ಪಾ. ನೀ ಅಖಿಲಾನ್ನ ಮದ್ವೆ ಆಗೋಲ್ಲ ಅಂದ್ರೆ ನನ್ನ ನಿಮ್ಮಪ್ಪನ ಪಾರ್ಟ್‍ನರ್^ಶಿಪ್
ಕಥೆ ಮುಗೀತು ಅಷ್ಟೆ” ಎಂದು ರಂಗನಾಥ ಸೆಟೆದು ನಿಲ್ಲುತ್ತಾನೆ.
“ಅದ್ಯಾಕ್
ಹಂಗ್ ಅಂತೀರಾ ಅಂಕಲ್. ನೀವು ನಮ್ ತಂದೆ ಬಿಸಿನೆಸ್ ಶುರು ಮಾಡ್ದಾಗ ಪೂರ್ ಆಗಿದ್ರಿ ಅಲ್ವಾ? ಈಗ ಸುಬ್ಬುನ
ಪೂರ್ ಅಂತಾ ತಾನೇ ಒಪ್ತಿಲ್ಲ? ನಾನು ಸುಬ್ಬುನ ಪಾರ್ಟನರ್ ಆಗಿ ಮಾಡ್ಕೊಂಡು ಹೊಸ ಬಿಸಿನೆಸ್ ಶುರುಮಾಡ್ತಿದ್ದೀನಿ.
ಒಂದಿನ ಅವನೂ ನಿಮ್ಮಂತೆ ಬಿಸಿನೆಸ್ ಮ್ಯಾಗ್ನೆಟ್ ಆಗೇ ಆಗ್ತಾನೆ” ಎಂದ ಗಣೇಶ ಸುಬ್ಬುವಿನ ಹೆಗಲ ಮೇಲೆ
ಪ್ರೀತಿಯಿಂದ, ಸ್ನೇಹದಿಂದ ಕೈಹಾಕುತ್ತಾನೆ.
ಸುಬ್ಬು
ಆಶ್ಚರ್ಯದಿಂದ ಗಣೇಶನನ್ನು ನೋಡುತ್ತಾನೆ.
ಅಖಿಲಾಳೂ
ತಂದೆಯ ಮುಂದೆ ಬಂದು ನಿಂತು, “ಹೌದು ಡ್ಯಾಡಿ, ನನಗೆ ಸುಬ್ಬು ಅಂದ್ರೆ ತುಂಬಾ ಇಷ್ಟ. ಪ್ಲೀಸ್ ಇಲ್ಲಾ
ಅನ್ಬೇಡಿ” ಎಂದು ಗೋಗೆರೆಯುತ್ತಾಳೆ.
ರಂಗನಾಥ
ತಡಬಡಾಯಿಸುತ್ತಿರುವಾಗ, “ಒಪ್ಕಂಬಿಡೋ ರಂಗನಾಥ, ಮಕ್ಕಳ ಇಷ್ಟಾನೇ ನಮ್ಮಿಷ್ಟ ಅಲ್ವಾ? ಅವರ ಮನಸ್ಸಿಗೆ
ನೋವ್ ಮಾಡಿ ನಾವೇನ್ ಸುಖ ಕಾಣ್ಬೇಕೋ...” ಎಂದು ಹರೀಶ ಹೇಳುತ್ತಾನೆ.
ತುಂಬಾ
ಯೋಚಿಸಿದವನಂತೆ ಕಂಡ ರಂಗನಾಥ, “ಆಯ್ತು ಬಿಡಪ್ಪ. ಮಕ್ಕಳಿಷ್ಟಾನೆ ನನ್ನಿಷ್ಟ. ಅಷ್ಟಕ್ಕೂ ನಂಗೇ ಅಂತ
ಇರೋದು ನನ್ನ ಮಗಳು ಒಬ್ಬಳೆ” ಎಂದು ಕರಗುತ್ತಾನೆ. ಅವನಿಗೆ ಮಗಳ ಮೇಲಿನ ಮಮಕಾರವೇ ಆಸ್ತಿಗಿಂತ ಹೆಚ್ಚಾಗಿ
ಕಾಣುತ್ತದೆ.
ಅಖಿಲಾ
ಅಪ್ಪನನ್ನು ತಬ್ಬಿ ಆನಂದಬಾಷ್ಪ ಸುರಿಸುತ್ತಾ, “ಥ್ಯಾಂಕ್ ಯು ಡ್ಯಾಡಿ...” ಎನ್ನುತ್ತಾಳೆ.
ರಂಗನಾಥ
ಸುಬ್ಬುವನ್ನು ಕಣ್ಸನ್ನೆಯಲ್ಲೇ ಹತ್ತಿರ ಕರೆಯುತ್ತಾನೆ. ಹೆದರುತ್ತಲೇ ಬಳಿ ಬಂದ ಸುಬ್ಬುವಿನ ಕೈ ಹಿಡಿದು
ಅಖಿಲಾಳ ಕೈಯನ್ನು ಅವನಿಗೆ ನೀಡುತ್ತಾನೆ. ಸುಬ್ಬು ಕೃತಜ್ಞತೆಯಿಂದ ರಂಗನಾಥನನ್ನು ನೋಡುತ್ತಾನೆ.
“ತುಂಬಾ
ಥ್ಯಾಂಕ್ಸ್ ಅಂಕಲ್...” ಎಂದು ಗಣೇಶ ತನ್ನ ಕೃತಜ್ಞತೆಯನ್ನು ಹೇಳುವ ಹೊತ್ತಿಗೆ;
“ಸುಬ್ಬು-ಅಖಿಲಾ
ಒಂದಾದ್ರು, ಓಕೆ” ಎಂಬ ಅಶರೀರ ಧ್ವನಿ ಕೇಳುತ್ತದೆ. ಎಲ್ಲರೂ ಧ್ವನಿ ಬಂದ ಕಡೆಗೆ ತಿರುಗುತ್ತಾರೆ. ಅಲ್ಲಿ
ಯೋಗರಾಜ್-ಲಕ್ಷ್ಮೀ ಇವರೆಡೆಗೇ ಬರುತ್ತಿರುತ್ತಾರೆ.
ಇವರೆಲ್ಲರ
ಹತ್ತಿರ ಬಂದ ಯೋಗರಾಜ್, “ಆದರೆ, ಗಣೇಶ-ಲಕ್ಷ್ಮೀ ಒಂದಾಗೋದಿಕ್ಕೆ ನಂದೊಂದು ಕಂಡಿಷನ್ ಇದೆ” ಎಂದು ಎಲ್ಲರನ್ನೂ
ಆತಂಕಕ್ಕೀಡುಮಾಡುತ್ತಾರೆ.
ಇದನ್ನು
ಗಮನಿಸಿದ ಯೋಗರಾಜ್ ನಗುತ್ತಾ, “ಅಯ್ಯೋ! ಯಾಕ್ ಎಲ್ಲರೂ ಇಷ್ಟೊಂದು ಗಾಬರಿಯಾದ್ರಿ? ಹೆದರ್ಕೊಬೇಡಿ ನಂದು
ವೆರಿ ಸಿಂಪಲ್ ಕನ್‍ಸ್ಟ್ರಕ್ಟಿವ್ ಕಂಡಿಷನ್ ಅಷ್ಟೇ” ಎಂದು ನಗುತ್ತಾರೆ.
“ಸರ್,
ಅದು ಏನೂ ಅಂತ ಬೇಗ ಹೇಳುದ್ರೆ...” ಎಂದು ಗಣೇಶ ತನ್ನ ಮಾವನಾಗುತ್ತಿರುವ ಗುರುವು ಕಡೆಘಳಿಗೆಯಲ್ಲಿ
ಇದೇನಪ್ಪಾ ಹೀಗೆ ಹೇಳ್ತಾ ಇದ್ದಾರೆ ಎಂಬ ಆತಂಕದಲ್ಲೇ ಕೇಳುತ್ತಾನೆ.
“ಇನ್ನಾ
ನೀನು ನನ್ನ ಸರ್ ಅಂತಾ ಇದ್ರೆ... ನಾ ನಿನ್ನ ಕೈಲಿ ಮಾವ ಅಂತ ಕರಸ್ಕೊಳೋದ್ ಯಾವಾಗ?” ಎಂದು ತಮಾಷೆ
ಮಾಡುತ್ತಾರೆ.
“ಮಾವ
ಅಂತಾನೇ ಕರಿಬೋದಿತ್ತು. ಆದ್ರೆ ನೀವೇನೋ ಕಂಡಿಷನ್ ಅಂತಾ ಇದ್ದೀರಾ... ಯಾಕೋ ಭಯವಾಗ್ತಿದೆ” ಎಂದು ತನ್ನ
ಆತಂಕ ಹೊರಹಾಕುತ್ತಾನೆ.
“ನಾ
ಮೊದ್ಲೆ ಹೇಳುದ್ನಲ್ಲ, ನನ್ ಕಂಡಿಷನ್ ತುಂಬಾ ಸಿಂಪಲ್ ಅಂತಾ. ನೀನು ಯಾವಾಗ್ಲು ನಗ್ತಾ ನಗ್ತಾ ಇರ್ಬೇಕು.
ಜೊತೆಗೆ ಮದ್ವೆಯಾಗಿ ವರ್ಷದೊಳ್ಗೆ ಮರಿ ಗಣೇಶನ್ನ ಕೊಡ್ಬೇಕು. ಅದೇ ನನ್ ಕಂಡಿಷನ್. ಇದುಕ್ಕೆ ನೀ ಒಪ್ಪೋದಾದ್ರೆ
ನಂದೇನೂ ಅಭ್ಯಂತರವಿಲ್ಲ” ಎಂದ ಯೋಗರಾಜ್ ಹಸನ್ಮುಖಿಯಾಗುತ್ತಾರೆ.
“ಅಷ್ಟೇನಾ...ಸರ್,
ಸಾರಿ ಮಾವ” ಎಂದು ಗಣೇಶ ನಗುತ್ತಾನೆ. ಎಲ್ಲರೂ ನಗುತ್ತಾರೆ. ಮುಗುಳ್ನಗುತ್ತಾ ಮುಂದುವರೆದ ಗಣೇಶ,
“ಆಯ್ತು ಮಾವ! ಲಕ್ಷ್ಮೀ ನಂಜೊತೆ ಇರೋವಾಗ ಈ ನಗು ಎಲ್ಲೂ ಹೋಗಲ್ಲ” ಎಂದು ಲಕ್ಷ್ಮೀಯ ಮುಖ ನೋಡುತ್ತಾ,
“ನಿಮ್ಮ ಮಗಳು ಒಪ್ಪಿದರೆ, ನೀವು ತಾತನೂ ಆಗ್ತೀರಾ” ಎಂದು ಹುಬ್ಬು ಹಾರಿಸುತ್ತಾನೆ.
ಲಕ್ಷ್ಮೀ
ನಾಚಿ ತಲೆ ತಗ್ಗಿಸುತ್ತಾಳೆ.
***
“ನಗು ಎಲ್ಲರಿಗಾಗಿ, ಪ್ರೀತಿ ಒಬ್ಬರಿಗಾಗಿ”
ಅಜ್ಜಿ,
ಮತ್ತೆಲ್ಲಾ ಹಿರಿಯರ ಸಮ್ಮುಖದಲ್ಲಿ ಗಣೇಶ-ಲಕ್ಷ್ಮೀ, ಸುಬ್ಬು-ಅಖಿಲಾರ ಮದುವೆ ನಡೆಯುತ್ತದೆ.
ಹೊಸ
ಜೋಡಿಗಳು ಅಜ್ಜಿಯ ಕಾಲಿಗೆ ನಮಸ್ಕರಿಸುತ್ತಾರೆ. ಅಜ್ಜಿ ತನ್ನ ನೋಟ್‍ಪ್ಯಾಡ್ ತೆಗೆದುಕೊಂಡು `ಮುಗುಳ್ನಗೆ
ಚಿರಾಯುವಾಗಲಿ’ ಎಂದು ಬರೆದು ನವ ವಧು-ವರರಿಗೆ ತೋರಿಸಿ ಹಾರೈಸುತ್ತದೆ.
***
ಅಖಿಲಾ
ಮೊದಲ ರಾತ್ರಿಯ ಕೋಣೆಗೆ ಬಂದಾಗ, “ಸುಬ್ಬು ನಾ ನಿನ್ನನ್ನ ತುಂಬಾ ಪ್ರೀತಿಸ್ತೀನಿ. ನನ್ನ ಮೇಲೆ ಬೇಜಾರಿಲ್ಲ
ತಾನೆ?” ಎಂದು ಸುಬ್ಬುವನ್ನು ಕೇಳುತ್ತಾಳೆ.
“ಇಲ್ಲಾ
ಅಖಿಲಾ ನೀನ್ ತಾನೇ ಏನ್ಮಾಡೋಕೆ ಆಗುತ್ತೆ” ಎಂದು ಹೇಳುತ್ತಿದ್ದಂತೆ ಅಖಿಲಾ ಸುಬ್ಬುವಿನ ಮಾತನ್ನು ಮಧ್ಯದಲ್ಲೇ
ತಡೆದು “ನಮ್ ಮದ್ವೆಗೆ ಗಣೇಶನೆ ಕಾರಣ ಅಲ್ವಾ ಸುಬ್ಬು?” ಎಂದು ಹೇಳಿ, ರೇಗಿಸುವ ಧ್ವನಿಯಲ್ಲಿ, “ಯಾಕೋ
ಏನೋ ಗಣೇಶನ ಮುಗುಳ್ನಗೆ ಕಾಡ್ತಾ ಇದೆ. ಮರೆಯೋಕೆ ಆಗ್ತಿಲ್ಲ” ಎನ್ನುತ್ತಾಳೆ.
“ಏ...!”
ಎಂದ ಸುಬ್ಬು ಅಖಿಲಾಳನ್ನು ಆಲಂಗಿಸಿ, “ಆ ಮುಗುಳ್ನಗೇನ ಮರೆಯೋದೆ ಬೇಡ. ಆ ನಗುವೇ ಬಾಳಿಗೆ ಬೆಳಕಾಗಿದೆ.
ಈ ಬೆಳಕು ಹೀಗೆಯೇ ಇರಲಿ...” ಎನ್ನುತ್ತಾನೆ.
*
ಇತ್ತ
ಗಣೇಶ ತನ್ನ ರೂಮಿನಲ್ಲಿ ಲಕ್ಷ್ಮೀಗಾಗಿ ಕಾಯುತ್ತಿದ್ದಾಗ, ಅಲ್ಲಿಗೆ ಹಾಲಿನ ಲೋಟದೊಂದಿಗೆ ಲಕ್ಷ್ಮೀ
ಬರುತ್ತಾಳೆ. ನಗುತ್ತಾ ಗಣೇಶ ನಿಲ್ಲುತ್ತಾನೆ. ಲಕ್ಷ್ಮೀ ಅವನ ಹತ್ತಿರ ಬಂದು ಲೋಟ ನೀಡುತ್ತಾ, “ನಿಮ್ಮ
ನಗು ನೋಡ್ತಾ ಇದ್ದರೆ, ಈ ಪ್ರಪಂಚಾನೇ ಮರೆತು ಹೋಗುತ್ತೆ ಗಣೇಶ್. ಬೇರೆ ಏನೂ ಬೇಡ ಅನ್ಸುತ್ತೆ” ಎಂದು
ನುಲಿಯುತ್ತಾಳೆ.
ಗಣೇಶ
ಲೋಟವನ್ನು ಅಲ್ಲಿದ್ದ ಟೇಬಲ್ ಮೇಲಿಟ್ಟು ಹುಸಿ ಕೋಪದಿಂದ “ರೀ... ರೀ... ಲಕ್ಷ್ಮೀ ಬೇರೆ ಏನೂ ಬೇಡ
ಅಂದರೆ ಹೇಗ್ರಿ. ನಿಮ್ಮ ತಂದೆ ಕಂಡಿಷನ್ ಏನಾಗ್ಬೇಕು? ನಮ್ಮ ಮಕ್ಕಳ ಸ್ಕೂಲ್ ಓಪನ್ ಮಾಡೋ ಪ್ರಾಜೆಕ್ಟ್
ಏನಾಗ್ಬೇಕು?” ಎಂದು ಕೇಳುತ್ತಾನೆ.
ಲಕ್ಷ್ಮೀ
ನಾಚುತ್ತಾ, “ಅಯ್ಯೋ ನಿಮ್ಮ... ಸ್ಕೂಲಾ! ಅದೆಲ್ಲದ್ದಕ್ಕೂ ಒಂದು ಸ್ಪೆಷಲ್ ಕಂಡಿಷನ್ ಇದೆ” ಎಂದು ಹೇಳುತ್ತಾಳೆ.
“ಅಪ್ಪಂದು
ಸಿಂಪಲ್ ಕಂಡಿಷನ್, ಮಗಳದ್ದು ಸ್ಪೆಷಲ್ ಕಂಡಿಷನ್. ಅದೇನಪ್ಪಾ ಇಂಥಾ ಟೈಮಲ್ಲಿ ಸ್ಪೆಷಲ್ ಕಂಡಿಷನ್?”
ಎಂದು ಆಶ್ಚರ್ಯದಿಂದ ಕೇಳುತ್ತಾನೆ.
ಲಕ್ಷ್ಮೀ
ರಾಗ ಎಳೆಯುತ್ತಾ, “ಆ ಸ್ಪೆಷಲ್ ಕಂಡಿಷನ್ ಏನಪ್ಪಾ ಅಂದ್ರೆ...” ಎಂದಾಗ,
ಗಣೇಶ
ಮತ್ತೆ ಕೋಪದಿಂದ, “ರೀ, ಇಲ್ಲೇನ್ ಹಾಡೇಳೋ ಕಾಂಪಿಟೇಷನ್ ಇದ್ಯಾ? ರಾಗ ಎಳೀದಲೆ ಅದೇನ್ ಬೇಗ ಹೇಳ್ರಿ.
ಗಾಡ್ ಗಣಪತಿ! ಏನಪ್ಪ ನಿನ್ನ ಲೀಲೆ” ಎನ್ನುತ್ತಾನೆ.
“ರೀ
ಗಣೇಶ್, ನಿಮ್ಮ ಈ ಮುಗುಳ್ನಗೆ ಎಲ್ರಿಗೂ ಇರಲಿ. ಆದರೆ,
ನಿಮ್ಮ ಪ್ರೀತಿ ಮಾತ್ರ ನನಗೊಬ್ಬಳಿಗೇ ಇರ್ಬೇಕು. ಆಯ್ತಾ?” ಎಂದು ಹೇಳಿ ಮಧುಮಂಚದ ಬಳಿ ಹೋಗಿ “ನಗು
ಎಲ್ಲರಿಗಾಗಿ, ಪ್ರೀತಿ ಒಬ್ಬರಿಗಾಗಿ” ಎಂದು ಹೂವಿನಿಂದ ಅದರ ಮೇಲೆ ಬರೆಯುತ್ತಾಳೆ.
ಗಣೇಶ
ಒಪ್ಪಿಗೆಯೆಂಬಂತೆ ನಗುತ್ತಾ ಲಕ್ಷ್ಮೀಯ ಬಳಿ ಬಂದು ಅವಳನ್ನು ಆಲಂಗಿಸುತ್ತಾನೆ.
***
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ