ಅಂದು ಅಮರಗೊಂಡದ ಮಧ್ಯದಲ್ಲಿದ್ದ ದೇಶಾವರಪೇಟೆಯ ದೀಪು ಮನೆಯಲ್ಲಿ ಸಂಭ್ರಮವೋ ಸಂಭ್ರಮ! ಮಗ ಏಳನೇ ತರಗತಿಯಲ್ಲಿ ಶಾಲೆಗೇ ಎರಡನೆಯವನಾಗಿ ಪಾಸಾಗಿದ್ದಾನೆ ಎಂದು ಜಯಣ್ಣ ಬೀಗುತ್ತಿದ್ದರೆ, ಅಮ್ಮ ಮಂಜುಳಳಿಗೆ ಕೂತ ಕಡೆ ಕೂಡಲಾಗುತ್ತಿಲ್ಲ. “ನಮ್ಮನೇಲಿ ಯಾರೂ ಇಷ್ಟೊಂದು ಚೆನ್ನಾಗಿ ಓದಿರಲಿಲ್ಲ” ಎಂದು ಒಬ್ಬರಿಗೊಬ್ಬರು ಹೇಳಿಕೊಂಡು ಇಬ್ಬರೂ ಮಹದಾನಂದದಲ್ಲಿ ತೇಲುತ್ತಿದ್ದರು. ಅವರಿಬ್ಬರೂ ಅದಾಗಲೇ ಬೀದಿಯಲ್ಲೆಲ್ಲಾ ಮಗನ ಗುಣಗಾನ ಮಾಡಿ ಮನೆಗೆ ಬಂದು ವರಾಂಡದಲ್ಲಿ ಕುಳಿತು ಒಬ್ಬರನೊಬ್ಬರ ಮುಖ ನೋಡಿ ಸುಮ್ಮಸುಮ್ಮನೆ ನಗುತ್ತಿದ್ದಾರೆ. ಮಧ್ಯದಲ್ಲಿ “ಅವನು ನನ್ನ ಮಗ, ನನ್ನ ಮಗ” ಎಂದು ಹುಸಿ ಜಗಳವಾಡುತ್ತಿದ್ದಾರೆ.
ಆಗ ಇದ್ದಕ್ಕಿದ್ದಂತೆ ಏನೋ ಕಳೆದು ಕೊಂಡುವಳಂತೆ ವರಾಂಡದಲ್ಲೆಲ್ಲಾ ಕಣ್ಣಾಡಿಸಿದ ಮಂಜುಳ, “ದೀಪು ಎಲ್ರಿ ಕಾಣ್ತಿಲ್ಲಾ?” ಎಂದಳು. “ಯಾರೋ ಸ್ನೇಹಿತನ ಮನೆಗೆ ಹೋಗಿರ್ಬೇಕು, ಬರ್ತಾನೆ ಬಿಡೇ” ಎಂದ ಜಯಣ್ಣ ಮುಂದುವರಿಯುತ್ತಾ “ನಾವು ಆಚೆ ಹೋದಾಗ ಅವನು ಮನೆಯಲ್ಲೇ ಇದ್ದ, ಅಲ್ವಾ!?” ಎಂದು ಆಶ್ಚರ್ಯಭರಿತನಾಗಿ ಹೇಳುತ್ತಾ “ದೀಪು, ದೀಪು” ಎನ್ನುತ್ತಾ ಮನೆ ಒಳಗಡೆ ಹುಡುಕಲಾರಂಭಿಸಿದ. ಅಡುಗೆಮನೆ, ಮಲಗುವ ಕೋಣೆ, ಬಚ್ಚಲು ಮನೆಯಲ್ಲೆಲ್ಲಾ ಹುಡುಕಿದ ಮೇಲೆ ಗಾಬರಿಯಿಂದ ಹಿತ್ತಲಿನ ಕಡೆ ನೋಡಲು, ಹಿಂದಿನ ಕದ ತೆಗೆದಿರುವುದನ್ನು ಗಮನಿಸಿ, ಹಿತ್ತಿಲನ ಕಡೆ ನಡೆದ. ಆ ಸಣ್ಣ ಹಿತ್ತಲಿನಲ್ಲಿ ದೀಪು ದಾಳಿಂಬೆ ಗಿಡದ ಬಳಿ ನಿಂತು ಅಳುತ್ತಿದ್ದಾನೆ. ಬಳಿಗೆ ಬಂದ ಜಯಣ್ಣ ಮಗನನ್ನು ಸಂತೈಸುತ್ತಾ, “ಯಾಕೋ ಮಗಾ ಅಳ್ತಾ ಇದ್ಯಾ?” ಎಂದು ಕೇಳಲು, “ಅಪ್ಪಾ..., ಅಪ್ಪಾ...” ಎಂದು ದೀಪು ತೊದಲಿದನು. “ಯಾಕೋ ಮಗಾ ಏನಾಯ್ತು ಹೇಳಪ್ಪ, ಶಾಲೆಗೆ ಮೊದಲನೆಯವನ್ನಾಗಲಿಲ್ಲ ಅಂತಾ ಬೇಜಾರ? ಇಲ್ಲಾ...ನಾನಿನ್ನೂ ಸ್ವೀಟ್ಸ್ ತಂದು ಕೊಟ್ಟಿಲ್ಲಾ ಅಂತಾ ಸಿಟ್ಟಾ? ಹೇಳು ಕಂದಾ” ಎಂದನು. ಮಾತಾಡಲು ತಡವರಿಸುತ್ತಾ ದೀಪು “ಅಪ್ಪಾ, ನಾನು...ನಾನು...ಹೈಸ್ಕೂಲಿಗೆ ಹೊಗ್ಬೇಕು, ಚೆನ್ನಾಗಿ ಓದ್ಬೇಕು. ಆದರೆ, ನಮ್ಮನೆಲೀ ತುಂಬಾ ಬಡತನ ಇದೆ. ಅದಕ್ಕೆ ಓದೋಕೆ ಆಗುತ್ತೋ ಇಲ್ವಾ ಅಂತ...” ಬಿಕ್ಕಳಿಸುತ್ತಿದ್ದ ಮಗನನ್ನು ತಡೆದ ಜಯಣ್ಣ, “ಅಯ್ಯೋ ಅದಕ್ಯಾಕೆ ಅಷ್ಟೊಂದು ಯೋಚನೆ ಮಾಡ್ತಾ ಅಳ್ತೀದ್ದೀ. ಅದೆನಾದ್ರು ಆಗ್ಲಿ ನಾನು ನಿನ್ನ ಕಷ್ಟ ಪಟ್ಟು ಓದಿಸ್ತೀನಿ. ನೀ ಚೆನ್ನಾಗ್ ಓದು ಮಗಾ” ಎಂದು ಸಂತೈಸಲು ಖುಷಿಗೊಂಡ ದೀಪು ಕಣ್ಣೀರು ಒರೆಸಿಕೊಳ್ಳುತ್ತಾ ಅಪ್ಪನನ್ನು ಅಪ್ಪಿಕೊಂಡನು.
ಅಮರಗೊಂಡದ ಬಸ್ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನವನ್ನು ಕಷ್ಟದಿಂದ ನಿಭಾಯಿಸುತ್ತಿದ್ದ ಜಯಣ್ಣನಿಗೆ ಅಪ್ಪ ಬಿಟ್ಟುಹೋದ ಮನೆಯೊಂದನ್ನು ಬಿಟ್ಟು ಬೇರೆಯೇನೂ ಇರಲಿಲ್ಲ. ಒಂದು ಒಳ್ಳೆಯ ದಿನ ನೋಡಿ ಹೇಗೋ ಹಣ ಹೊಂದಿಸಿಕೊಂಡು ಮಗನನ್ನು ಹೈಸ್ಕೂಲಿಗೆ ಸೇರಿಸಲು ದೀಪುವನ್ನು ಕರೆದುಕೊಂಡು ಹೈಸ್ಕೂಲಿಗೆ ಬಂದನು. ಜಯಣ್ಣನಿಗೆ ಆ ಶಾಲೆಯ ವಿಜ್ಜಾನದ ಶಿಕ್ಷಕರಾದ ನಾರಾಯಣಪ್ಪನವರು ಪರಿಚಯವಿದ್ದದರಿಂದ ಸೀದಾ ಅವರಿದ್ದ ಕೋಣೆಯನ್ನು ಕೇಳಿಕೊಂಡು ಅವರ ಬಳಿ ಹೋಗಿ ತನ್ನ ಪರಿಚಯವನ್ನು ಹೇಳಿಕೊಂಡು ತಾನು ಬಂದ ಕಾರಣವನ್ನು ನೀವೆದಿಸಿಕೊಂಡನು. ಶಿಸ್ತಿನ ಸಿಪಾಯಿಯಂತೆ ಕಾಣುತ್ತಿದ್ದ ಮಾಸ್ತರರನ್ನು ನೋಡಿ ದೀಪುವಿಗೆ ಸಣ್ಣ ನಡುಕವುಂಟಾದರೂ, ಧೈರ್ಯ ತಂದುಕೊಂಡು, “ನಮಸ್ಕಾರ ಸಾರ್” ಎಂದ. “ನಮಸ್ಕಾರ ಕಣಪ್ಪ, ಏನ್ ನಿನ್ನ ಹೆಸರು”? ಗಂಭೀರದಿಂದ ಮೇಷ್ಟರು ಕೇಳಿದರು. ಮೇಷ್ಟ್ರೇ ನಮಸ್ಕಾರ ಅಂತಾ ಇದ್ದಾರಲ್ಲ....? ಒಳ್ಳೆ ಮೇಷ್ಟ್ರಿರಬೇಕು ಎಂದು ಕೊಳ್ಳುತ್ತಾ, “ದೀಪಕ್ ಜೆ. ಸಾರ್” ಎಂದು ವಿನಯದಿಂದ ನುಡಿದ.
ಹೀಗೇ ವಿಚಾರಿಸುತ್ತಾ ಎಲ್ಲಾ ಕಾಲಂಗಳನು ಭರ್ತಿಮಾಡಿಕೊಂಡ ಮಾಸ್ತರರು, “ನೀ ಕನ್ನಡ ಮೀಡಿಯಂನಲ್ಲೇ ಓದಿರೋದ್ರಿಂದ ಎಂಟನೇ ತರಗತಿಗೂ ಕನ್ನಡ ಮೀಡಿಯಂ ಇರ್ಲಿ ಅಂತಾ ಅದನ್ನೇ ಟಿಕ್ ಮಾಡ್ತೀನಿ” ಅಂದ್ರು. ತಕ್ಷಣವೇ ದೀಪು “ಬೇಡ ಸರ್. ನನ್ನ ಫ್ರೇಂಡ್ಸೆಲ್ಲಾ ಇಂಗ್ಲೀಷ್ ಮೀಡಿಯಂ ಸೇರ್ತಿವಿ ಅಂತಾ ಹೇಳಿದ್ದಾರೆ. ನಂಗೂ ಇಂಗ್ಲೀಷ್ ಮೀಡಿಯಂ ಕೊಡಿ” ಎಂದು ವಿನಂತಿಸಿದ. ದೀಪುವನ್ನು ನೋಡಿದ ಮಾಸ್ತರರು ಮೀಸೆ ಮರೆಯಲ್ಲೇ ನಕ್ಕು, “ಆಯ್ತಪ್ಪಾ, ಆದರೆ ತುಂಬಾ ಕಷ್ಟ ಆಗುತ್ತೆ. ಚೆನ್ನಾಗಿ ಓದ್ಬೇಕು ಅಷ್ಟೆ” ಎಂದು ತುಸು ಜೋರಾಗಿಯೇ ಹೇಳಿದರು. “ಆಯ್ತು ಸರ್. ತುಂಬಾ ಥ್ಯಾಂಕ್ಸ್” ಎಂದು ಅವರ ಕಾಲಿಗೆ ನಮಸ್ಕರಿಸಿದ. ನಯವಾಗಿಯೇ ಬೇಡವೆಂದ ಮಾಸ್ತರರು ಹುಡುಗನ ವೇಗಕ್ಕೆ ತಕ್ಷಣ ಪ್ರತಿಕ್ರಿಯಿಸಿ ಅವನ ಕ್ರಿಯೆಯನ್ನು ತಡೆಯಲಾಗಲಿಲ್ಲ. ತನ್ನ ಮಗನ ಧೈರ್ಯವನ್ನು ಮೌನವಾಗಿ ಗಮನಿಸುತ್ತಿದ್ದ ಜಯಣ್ಣ, ಮೇಷ್ಟರಿಗೆ ವಂದಿಸಿ ಅಲ್ಲಿಂದ ಮಗನೊಡನೆ ಹೊರಟ.
ಶಾಲೆ ಆರಂಭವಾಯಿತು. ಮೊದಲ ವಾರದಲ್ಲೇ ದೀಪುವಿಗೆ ಇಂಗ್ಲೀಷ್ ಮೀಡಿಯಂ ಕಭ್ಭಿಣದ ಕಡಲೆಯಾಗತೊಡಗಿತು. ಎಲ್ಲಾ ವಿಷಯಗಳನ್ನು ಇಂಗ್ಲೀಷಲ್ಲಿ ಪಾಠ ಮಾಡಿ ನಂತರ ಕನ್ನಡದಲ್ಲೂ ಅರ್ಥೈಸುತ್ತಿದುದ್ದರಿಂದ ಸ್ವಲ್ಪ ಸ್ವಲ್ಪ ಅರ್ಥವಾದರೂ ಇಂಗ್ಲೀಷು ಏನೇನೂ ಅರ್ಥವಾಗದಂತಾಯಿತು. ಇದಕ್ಕೆ ಕಾರಣ ಇಂಗ್ಲೀಷ್ ಮೇಷ್ಟ್ರಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಜೊತೆಗೆ ದೀಪು ಕನ್ನಡ ಮೀಡಿಯಂನಲ್ಲಿ ಓದಿದ್ದು. ಗಾಯದ ಮೇಲೆ ಬರೆ ಎಳೆದಂತಾಗಿತ್ತು.
ಇದ್ದುದರಲ್ಲೇ ವಿಜ್ಞಾನ ಬೋಧಿಸುತ್ತಿದ್ದ ನಾರಾಯಣಪ್ಪ ಮಾಸ್ತರರ ಪಾಠ ಅರ್ಥವಾಗುತಿತ್ತು ಎಂಬುದನ್ನು ಬಿಟ್ಟರೆ ಕನ್ನಡ ಮೀಡಿಯಂನಿಂದ ಬಂದ ವಿದ್ಯಾರ್ಥಿಗಳ ಗೋಳಿನ ಕಥೆ ಕೇಳುವವರು ಯಾರು ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಕನ್ನಡ ಮೀಡಿಯಂನಿಂದ ಬಂದ ಕೆಲವರು ಅವರವರಲ್ಲೇ ಮಾತಾಡಿಕೊಳ್ಳುತ್ತಿದ್ದಾಗ, ದೀಪುವಿನ ಗೆಳೆಯನೊಬ್ಬ “ನಾವೆಲ್ಲಾ ನಾರಾಯಣಪ್ಪ ಮಾಸ್ತರ ಮನೆಗೆ ಟ್ಯೂಷನ್‍ಗೆ ಹೋಗೋಣ. ಅವ್ರು ತುಂಬಾ ಚೆನ್ನಾಗಿ ಮನೆ ಪಾಠ ಮಾಡ್ತಾರಂತೆ. ವಿಜ್ಜಾನ, ಗಣಿತದ ಜೊತೆಗೆ, ಇಂಗ್ಲೀಷು ಮತ್ತು ಸಮಾಜವನ್ನು ಹೇಳಿ ಕೊಡ್ತಾರಂತೆ. ಇಂಗ್ಲೀಷಂತೂ ಎಂತವರಿಗೂ ಕಲಿಸ್ತಾರಂತೆ. ನಮ್ಮಕ್ಕ ಹೇಳ್ತಿದ್ರು” ಎಂದನು. ಕೇಳಿದ ಎಲ್ಲರಿಗೂ ಕಠಿಣವಾದ ಲೆಕ್ಕವೊಂದಕ್ಕೆ ಉತ್ತರ ದೊರೆತಂತಾಯಿತು. ಎಲ್ಲರೂ ಬಹಳ ಸಂತೋಷದಿಂದ ನಾಳೆಯಿಂದಲೇ ಟ್ಯೂಷನ್‍ಗೆ ಹೋಗೋಣ ಎಂದಾಗ ಇದಾಗಲೇ ಅಪ್ಪ ಹೈಸ್ಕೂಲಿಗೆ ಸೇರಿಸಿರುವುದೇ ತನ್ನ ಪುಣ್ಯ ಎಂದುಕೊಂಡಿದ್ದ ದೀಪುವಿಗೆ ಇದರ ಬಗ್ಗೆ ಅಪ್ಪನನ್ನು ಹೇಗೆ ಕೇಳುವುದು ಎಂದು ಯೋಚನೆಗೆ ಹತ್ತಿಕೊಂಡಿತು. “ಫೀಸ್ ಎಷ್ಟು ಕೊಡಬೇಕು” ತಡೆಯಲಾಗದೇ ಕೇಳಿಯೇಬಿಟ್ಟ. “ತಿಂಗಳಿಗೆ ನೂರು ರೂಪಾಯಿಗಳು” ಪ್ರಶ್ನೆಗೆ ಕಾಯುತ್ತಿದ್ದವನಂತೆ ಟ್ಯೂಷನ್ ಐಡಿಯಾ ಕೊಟ್ಟ ಗೆಳೆಯ ಹೇಳಿಯೇಬಿಟ್ಟ.
“ನೂರು ರೂಪಾಯಿಗಳು”! ದೀಪುವಿಗೆ ಮತ್ತೆ ಯೋಚನೆ ಕಾಡತೊಡಗಿತು. ಇದಾಗಲೇ ಅಪ್ಪ ಸಾಲ ಮಾಡಿ ಶಾಲೆಗೆ ಸೇರಿಸಿದ್ದಾಗಿದೆ. ಮತ್ತೆ ಹೇಗೆ ಕೇಳುವುದು. ತಿಂಗಳಿಗೆ ನೂರು ರೂಪಾಯಿಗಳು. ಏನು ಮಾಡುವುದು. ಟ್ಯೂಷನ್ನಿಗೆ ಹೋಗದಿದ್ದರೆ ಪಾಠ ಅರ್ಥವಾಗುವುದಿಲ್ಲ. ಅರ್ಥವಾಗದಿದ್ದರೆ ಫೇಲ್ ಆಗುತ್ತೇನೆ. ಬೇರೆ ದಾರಿಕಾಣದೆ ಅಪ್ಪನನ್ನೇ ಕೇಳೋಣವೆಂದು ಮನೆಯ ದಾರಿ ಹಿಡಿದನು.
ಮನೆಗೆ ಬಂದವನೇ, “ಅಪ್ಪಾ, ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಪಾಠ ಮಾಡುವುದು ಹೆಚ್ಚಾಗಿ ಇಂಗ್ಲೀಷ್ನಲ್ಲೆ. ಅಷ್ಟಾಗಿ ಅರ್ಥವಾಗುವುದಿಲ್ಲ. ಅದಕ್ಕೆ ಎಲ್ಲಾ ಹುಡುಗರು ನಾರಾಯಣಪ್ಪ ಸರ್ ಹತ್ತಿರ ಟ್ಯೂಷನ್ಗೆ ಸೇರಿಕೊಳ್ಳುತ್ತಿದ್ದಾರೆ. ನನ್ನನ್ನೂ ಸೇರಿಸಪ್ಪ. ಇಲ್ಲವಾದರೆ ತುಂಬಾ ಕಷ್ಟವಾಗುತ್ತದೆ” ಎಂದು ಪ್ರೀತಿಯಿಂದ ವಿನಂತಿಸಿದ. ಮುದ್ದಿನ ಮಗನ ವಿನಂತಿಯನ್ನು ಪ್ರೀತಿಯಿಂದ ಸಮ್ಮತಿಸಿದ ಜಯಣ್ಣ “ಆಯ್ತು ಮಗಾ, ಹೆಂಗೋ ನೀ ಚೆನ್ನಾಗಿ ಓದಿದರೆ ಅಷ್ಟೆ ಸಾಕು” ಎಂದವನ ಕಣ್ಣಲ್ಲಿ ನನ್ನ ಮಗ ಬಟ್ಟೆ ಬರೆ ಕೇಳದೆ ಓದಿಗೆ ಎಷ್ಟೆಲ್ಲಾ ಅಕ್ಕರೆ ತೋರಿಸುತ್ತಾನೆ ಎಂಬ ಭಾವ ಮಿಂಚಿ ಮಾಯವಾಯಿತು. ಕೂಲಿ ಕೆಲಸದಿಂದ ಆಗುತ್ತಿದ್ದ ಕಷ್ಟ, ಅವಮಾನಗಳು ಅವನಿಗೆ ಚೆನ್ನಾಗಿ ಗೊತ್ತಿತ್ತು. ಹಗಲು ರಾತ್ರಿ ದುಡಿದಾದರು ಸರಿ, ಮಗನನ್ನು ಚೆನ್ನಾಗಿ ಓದಿಸಬೇಕೆಂದು ಮನದಲ್ಲೇ ಪಣತೊಟ್ಟಿದ್ದ.
ಬೆಳಿಗ್ಗೆ ಆರರಿಂದ ಎಂಟರವರೆಗೆ ನಾರಾಯಣಪ್ಪರ ಟ್ಯೂಷನ್ ಶುರುವಾಯಿತು. ಒಂದು ದಿನವೂ ತಪ್ಪಿಸದೆ ಐದಕ್ಕೆಲ್ಲ ಎದ್ದು ಸರಿಯಾಗಿ ಆರಕ್ಕೆ ದೀಪು ಟ್ಯೂಷನ್ಗೆ ಹೋಗುತ್ತಿದ್ದ. ಅವನ ಶಿಸ್ತನ್ನು ಕಂಡು ಜಯಣ್ಣ, ಮಂಜಮ್ಮನಿಗೆ ಬಹಳ ಹೆಮ್ಮೆಯಾಗುತ್ತಿತ್ತು. ಇತ್ತ ದೀಪು ತನ್ನ ಬುದ್ದಿವಂತಿಕೆಯಿಂದ ನಾರಾಯಣಪ್ಪ ಮಾಸ್ತರರ ಗಮನ ಸೆಳೆದಿದ್ದ. ನಾರಾಯಣಪ್ಪ ಮಾಸ್ತರರು ತಿಂಗಳಿಗೊಂದು ಪರೀಕ್ಷೆ ಮಾಡುತ್ತಿದ್ದರು. ಕಡಿಮೆ ಅಂಕಗಳನ್ನು ತೆಗೆದವರನ್ನು ಮುಲಾಜಿಲ್ಲದೆ ಶಿಕ್ಷಿಸುತ್ತಿದ್ದರು. ಅದರಲ್ಲೂ ಪಾಠ ಮಾಡುವಾಗ ಯಾರಾದರೂ ಆಕಳಿಸಿದರೆ, ತೂಕಡಿಸಿದರೆ ಮತ್ತೆ ಯಾವ ಜನ್ಮದಲ್ಲೂ ನಿದ್ರಿಸದಂತೆ ಒಳಶುಂಠಿ ನೀಡುತ್ತಿದ್ದರು. ತರಲೆ ಮಾಡಿದರಂತೂ ಮುಗಿದೇ ಹೋಯಿತು. ತಾವು ಕಟ್ಟಿದ್ದ ವಾಚನ್ನು ಬಿಚ್ಚಿಟ್ಟು, ಮುಂದೇ ಕುಳಿತ್ತಿದ್ದ ಹುಡುಗರನ್ನು ಹಿಂದೆ ಸರಿಸಿ, ತರಲೆ ಮಾಡಿದವನನ್ನು ತಮ್ಮ ಮುಂದೆ ಕೂರಿಸಿಕೊಂಡು ದನಕ್ಕೆ ಚಚ್ಚುವಂತೆ ಅವನ ಬೆನ್ನಿಗೆ ಹೊಡೆಯುತ್ತಿದ್ದರು. ಅದಕ್ಕೆ ಹೆದರಿಯೇ ಸೋಂಬೇರಿ, ತರಲೆ ಹುಡುಗರಾರು ಮುಂದೆ ಕೂಡಲು ಇಷ್ಟ ಪಡುತ್ತಿರಲಿಲ್ಲ. ಆದರೆ, ಮಾಸ್ತರರು ಇವತ್ತು ಶಿಕ್ಷೆಗೆ ಯಾರು ಗುರಿಯಾಗಬೇಕೆಂದು ಮೊದಲೇ ನಿರ್ಧರಿಸಿದಂತೆ ಅವರನ್ನು ಕರೆದು ಮುಂದೆ ಕೂಡಿಸಿಕೊಳ್ಳುತ್ತಿದರು. ಅದಕ್ಕೆಲ್ಲಾ ವಿದ್ಯಾರ್ಥಿಗಳ ಪೋಷಕರು ಕೊಟ್ಟ ಕಂಪ್ಲೇಟೂ ಕಾರಣವಾಗುತ್ತಿತ್ತು. ಯಾರನ್ನು ಕರೆದೂ ಕರೆದೂ ಮುಂದೆ ಕೂಡಿಸಿಕೊಂಡಿರುತ್ತಾರೋ ಅವರಿಗೆ ಏಟು ಬೀಳುವ ಘಳಿಗೆ ಕಲ್ಪಿಸಿಕೊಂಡು ಹಲವರು ಬೆವೆತಿರುತ್ತಿದ್ದರು ಅಂದಮೇಲೆ ಮುಂದೆ ಕೂತವರನ್ನು ದೇವರೂ ಕಾಪಾಡುವಂತಿರಲಿಲ್ಲ. ಅವರಿಗೆ, ಇವತ್ತು ಟ್ಯೂಷನ್ ಬೇಗ ಬಿಡಲಿ ಅಥವಾ ಮಾಸ್ತರರಿಗೆ ಯಾರಾದರು ಬೇರೆ ಕಡೆ ಗಮನಹರಿಸಲಿ ಎಂದು ಜಪಿಸುತ್ತಾ ಮಾಸ್ತರರನ್ನೇ ದಿಟ್ಟಿಸುತ್ತಾ ಗಾರೆ ಕಿತ್ತುಹೋದ ಜಾರಬಂಡಿಯ ಮೇಲೆ ಕೂತ ಅನುಭವವಾಗುತ್ತಿತ್ತು. ಜೊತೆಗೆ ಮಾಸ್ತರು ಬೈಯುವಾಗ, ಹೊಡೆಯುವಾಗ ಹುಡುಗಿಯರು ಯಾರದರೂ ಕಿಸಕ್ಕನ್ನೆ ನಕ್ಕರೆ ಆಗುವ ಅವಮಾನ ನೆನೆದು ಈ ಓದೋದು ಬೇಡ, ಟ್ಯೂಷನ್ ಬೇಡ ಎಂಬ ಭಾವನೆ ಇಣುಕುತ್ತಿತ್ತು. ಅಂದಮಾತ್ರಕ್ಕೆ ಮಾಸ್ತರರು ಹುಡುಗರನ್ನು ಮಾತ್ರ ಶಿಕ್ಷಿಸುತ್ತಿದ್ದರೆಂದು ಭಾವಿಸಬೇಕಿರಲಿಲ್ಲ. ಹುಡುಗಿಯರಿಗೆ ಬೈಯುವ, ಕೆಲವೊಮ್ಮೆ ಕೋಲಿನಿಂದ ಹೋಡೆಯುವ ಪ್ರಕ್ರಿಯೆಯೂ ಇರುತ್ತಿತ್ತು. ಆದರೆ, ಇದನ್ನು ನೋಡುವ ಭಾಗ್ಯ ಮಾತ್ರ ಹುಡುಗರಿಗಿರಲಿಲ್ಲ. ಏಕೆಂದರೆ, ಹುಡುಗರನೆಲ್ಲಾ ಐದು ನಿಮಿಷ ಮೊದಲೇ ಇವತ್ತಿಗೆ ಇಷ್ಟು ಸಾಕು ಎಂದು ಮನೆಗೆ ಕಳುಹಿಸದರೆಂದರೆ ಅವತ್ತು ಯಾವುದೋ ಹುಡುಗಿಗೋ ಇಲ್ಲಾ ಹುಡುಗಿಯರಿಗೋ ಲಾತ ಗ್ಯಾರಂಟಿ. ಪಾಪ, ಹುಡುಗಿಯರು ಒದೆ ತಿನ್ನುವದನ್ನು ಕಲ್ಪಿಸಿಕೊಂಡೇ ಹುಡುಗರು ಮನೆಕಡೆಗೆ ಅಲ್ಪತೃಪ್ತಿಯಿಂದ ತೆರುಳುತ್ತಿದ್ದರು. ಈ ವಿಷಯದಲ್ಲೂ ಅವರಿಗೆ ಅವಮಾನವಾಗುತ್ತಿತ್ತು.
ಪಾಠದಲ್ಲಿ ಮತ್ತು ಶಿಕ್ಷಿಸುವುದರಲ್ಲಿ ಎತ್ತಿದ ಕೈ ಆಗಿದ್ದ ಮಾಸ್ತರರು ಟ್ಯೂಷನ್ ಫೀ ವಸೂಲು ಮಾಡುವುದರಲ್ಲೂ ಮುಲಾಜು ನೋಡುತ್ತಿರಲಿಲ್ಲ. ಎಲ್ಲರ ಫೀಯನ್ನು ಪ್ರತಿ ತಿಂಗಳು ಐದನೇ ತಾರೀಖಿಗೆ ಕೇಳಿ ಪಡೆಯುತ್ತಿದ್ದರು. ಕೆಲವರಂತೂ ಮುಂಚೆಯೇ ನೀಡುತ್ತಿದ್ದರೆ ಮತ್ತೆ ಕೆಲವರಿಗೆ ಅನಿವಾರ್ಯ ಕಾರಣಗಳಿಂದ ಕೊಡಲಾಗುತ್ತಿರಲಿಲ್ಲ. ಅಂತವರಿಗೆಲ್ಲಾ ಹತ್ತನೇ ತಾರೀಖಿನ ಒಳಗೆ ತಂದು ಕೊಡುವಂತೆ ಮಾಸ್ತರರು ಹೇಳುತ್ತಿದ್ದರು. ಯಾವುದೇ ಕಾರಣಕ್ಕೂ ಹತ್ತನೇ ತಾರೀಖಿನವರೆಗೂ ಮತ್ತೆ ಕೇಳುತ್ತಿರಲಿಲ್ಲ. ಅವಾಗಲೂ ಕೊಡಲಿಲ್ಲವೆಂದರೆ ಫೀ ಕೊಡದವರನ್ನು ಕೂಡಿಸಿಕೊಂಡು, ಉಳಿದವರನ್ನು ಕಳುಹಿಸಿ, ಕಾರಣ ಕೇಳಿ ಅವರ ತಂದೆಯನ್ನೊ, ತಾಯಿಯನ್ನೊ ಕರೆದುಕೊಂಡು ಬರುವಂತೆ ಹೇಳುತ್ತಿದ್ದರು. ಕೆಲವು ಮಕ್ಕಳ ಪೋಷಕರೇ ಬಂದು ಫೀ ಕೊಟ್ಟು ತಮ್ಮ ಮಕ್ಕಳ ಓದಿನ ಬಗ್ಗೆ ಕೇಳುತ್ತಿದ್ದರು ಮತ್ತು ಸಾಧ್ಯವಾದರೇ ಚಾಡಿ ಹೇಳುತ್ತಿದ್ದರು. ನಾನು ನೋಡಿಕೊಳ್ಳುತ್ತೇನೆ ಬಿಡಿ ಎಂಬ ಭರವಸೆಯೊಂದಿಗೆ ಮಾಸ್ತರರು ಅವರನ್ನು ಸಾಗಹಾಕುತ್ತಿದ್ದರು. ಜಯಣ್ಣ ಸಾಧ್ಯವಾದಷ್ಟು ಬೇಗ ಫೀಯನ್ನು ದೀಪು ಕೈಯಲ್ಲೇ ಕೊಟ್ಟು ಕಳುಹಿಸುತ್ತಿದ್ದ. ಆದುದರಿಂದ ಯಾವುದೇ ಯೋಚನೆಯಿಲ್ಲದೆ ದೀಪುವಿಗೆ ಚೆನ್ನಾಗಿ ಓದುವುದಷ್ಟೇ ಕೆಲಸವಾಯಿತು.
ಹೀಗೆ ಆರು ತಿಂಗಳು ಕಳೆಯಿತು. ದೀಪು ಚೆನ್ನಾಗಿಯೇ ಓದುತ್ತಿದ್ದ ವಿಷಯ, ಶಾಲೆಯ ತಿಂಗಳ ಪರೀಕ್ಷೆಗಳಲ್ಲಿ ಮತ್ತು ಟ್ಯೂಷನ್ ಪರೀಕ್ಷೆಗಳಲ್ಲಿ ಅವನು ತೆಗೆಯುತ್ತಿದ್ದ ಮಾರ್ಕ್ಸ್ ಗಳಿಂದಲೇ ತಿಳಿಯುತ್ತಿತ್ತು. ಎಲ್ಲಾ ಸುಸೂತ್ರವಾಗಿ ನಡೆಯುತ್ತಿದೆ ಎಂದುಕೊಳ್ಳುವಾಗಲೇ ಜಯಣ್ಣನಿಗೆ ಸಣ್ಣಗೆ ಕಾಣಿಸಿಕೊಂಡ ಜ್ವರ ದಿನಕಳೆದಂತೆಲ್ಲಾ ಏರಿ ಅವನನ್ನು ದಿನಗಟ್ಟಲೆ ಮನೆಯಲ್ಲೇ ಮಲಗುವಂತೆ ಮಾಡಿತು. ಸರಿಯಾಗಿ ಔಷಧಿ ತೆಗೆದು ಕೊಳ್ಳಲೂ ಆಗದಂತಹ ಬಡತನ ಹಗಲು ರಾತ್ರಿ ಮೂಟೆ ಹೋರುತ್ತಿದ್ದವನನ್ನು ತನ್ನ ಬೆಡ್ ಶೀಟ್ ತಾನೆ ಹೊದಿಯಲಾಗದಂತೆ ನಿತ್ರಾಣನನ್ನಾಗಿಸಿತು. ಸರ್ಕಾರಿ ಆಸ್ಪತ್ರೆಯ ವೈದ್ಯರು ಒಂದೆರಡು ತಿಂಗಳ ವಿಶ್ರಾಂತಿ ಒಳ್ಳೆಯದೆಂದು ಹೇಳಿ ಒಂದಷ್ಟು ಮಾತ್ರೆ ಕೊಟ್ಟು ಕಳುಹಿಸಿದ್ದರು. ಕೂಲಿಯವನಾದರು ನೆರೆಹೊರೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದ ಜಯಣ್ಣ ಮತ್ತು ಆತನಿಗೆ ಹೇಳಿ ಮಾಡಿಸಿದ ಜೋಡಿಯಂತಿದ್ದ ಮಂಜಮ್ಮನಿಗೆ, ಕೆಲವು ದಿನ ನೆರೆಹೊರೆಯವರ ನೆರವಿನಿಂದ ಊಟಕ್ಕೆ ಅಗತ್ಯ ನೆರವು ಒದಗಿಬಂತು. ಆದರೆ, ಆ ತಿಂಗಳು ಐದಾದರೂ ಟ್ಯೂಷನ್ ಫೀಗೆ ಕೊಡಲು ಜಯಣ್ಣನ ಬಳಿ ಹಣವಿರಲಿಲ್ಲ. ಗಂಡನ ಅನಾರೋಗ್ಯದಿಂದ ತತ್ತರಿಸಿದ್ದ ಮಂಜಮ್ಮಳಿಗೆ ಸಾಧ್ಯವೇ ಇರಲಿಲ್ಲ. ದೀಪುವಿಗೂ ಪರಿಸ್ಥಿತಿ ಅರ್ಥವಾಗಿತ್ತು. ಆರೋಗ್ಯವಿಲ್ಲದ ತಂದೆಯನ್ನು ಹೇಗೆ ಕೇಳುವುದು? ಮಾಸ್ತರರಿಗೆ ಏನು ಹೇಳುವುದು? ಅಮ್ಮ ತಾನೆ ಏನು ಮಾಡಿಯಾಳು? ಪುಟ್ಟ ತಲೆಯಲ್ಲಿ ದೊಡ್ಡ ದೊಡ್ಡ ಯೋಚನೆಗಳು ಮೂಡತೊಡಗಿದವು. ಬೇರೆ ದಾರಿಕಾಣದೆ ಮನಸ್ಸಿಲ್ಲದ ಮನಸ್ಸಿನಲ್ಲಿ ಅಂದು ಟ್ಯೂಷನ್ ಗೆ ಹೊರಡುವ ಮುನ್ನ ತಂದೆಯ ಮುಖವನ್ನೊಮ್ಮೆ ನೋಡಿದ. ಮಗನನ್ನು ನೋಡಿದ ಜಯಣ್ಣ, “ಇಂದು ಹೋಗಿಬಾರಪ್ಪ, ಮಾಸ್ತರರಿಗೆ ಮುಂದಿನ ತಿಂಗಳು ಕೊಡುತ್ತೇನೆಂದು ಹೇಳು” ಎಂದು ಅಸಾಯಕತೆಯಿಂದ ನುಡಿದರು. ದೀಪು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವನಿಗೆ ಟ್ಯೂಷನ್ ಬಿಡಬೇಕಾಗುವುದೇನೋ ಎಂಬ ಚಿಂತೆ ತಲೆಗೆ ಹತ್ತಿ ಹಗಲು ರಾತ್ರಿ ಕಾಡತೊಡಗಿತು.
ಅಂದು ಟ್ಯೂಷನ್ ಬಿಟ್ಟ ನಂತರ, ಮಾಸ್ತರರ ಬಳಿ ಬಂದ ದೀಪು “ಸಾರ್, ನಮ್ಮ ತಂದೆಗೆ ಆರೋಗ್ಯ ಸರಿಯಿಲ್ಲ. ಈ ತಿಂಗಳ ಟ್ಯೂಷನ್ ಫೀಯನ್ನು ಮುಂದಿನ ತಿಂಗಳು ಕೊಡುತ್ತಾರಂತೆ” ಎಂದು ನಡುಗುವ ದನಿಯಲ್ಲೇ ಹೇಳಿದ. “ಆಗ್ಲಪ್ಪಾ, ನಿಮ್ಮ ತಂದೆ ನನಗೆ ಚೆನ್ನಾಗಿ ಗೊತ್ತು. ಪರವಾಗಿಲ್ಲಾ. ಮುಂದಿನ ತಿಂಗಳೇ ಕೊಡು. ಆದರೆ ಟ್ಯೂಷನ್ನಿಗೆ ಬರೋದು ಬಿಡಬೇಡ ಅಷ್ಟೆ” ಎಂದು ನಗುಮೊಗದಿಂದಲೇ ಉತ್ತರಿಸಿದರು. “ಥ್ಯಾಂಕ್ಯು ಸರ್” ಎಂದ ದೀಪು ನಿಶ್ಚಿಂತನಾಗಿ ಮನೆಯ ದಾರಿ ಇಡಿದ.
ತಿಂಗಳು ಕಳೆದರೂ ಜಯಣ್ಣನ ಆರೋಗ್ಯ ಸುಧಾರಿಸಲಿಲ್ಲ. ಮನೆಯಲ್ಲಿ ಕಷ್ಟಗಳ ಸುರಿಮಳೆಯಾಗುತ್ತಿದೆ ಎಂದರಿತ ದೀಪು ಅಪ್ಪನನ್ನು ಟ್ಯೂಷನ್ ಫೀ ಕೇಳುವ ಗೊಡವೆಗೆ ಹೋಗಲಿಲ್ಲ. ಅವನಿಗೆ ಅಪ್ಪ ಬೇಗ ಹುಷಾರಾದರೆ ಹೇಗಾದರೂ ಹಣ ಹೊಂದಿಸುತ್ತಾರೆಂಬ ಭರವಸೆಯಿತ್ತು. ಆದರಿಂದ ಅಮ್ಮ ಕೊಟ್ಟದ್ದನ್ನೇ ತಿಂದುಕೊಂಡು ಚೆನ್ನಾಗಿ ಓದಬೇಕೆಂಬ ಛಲವನ್ನು ಬಿಡದೆ ಟ್ಯೂಷನ್ನಿಗೆ, ಶಾಲೆಗೆ ಹೋಗುತ್ತಿದ್ದ. ಪ್ರತಿ ತಿಂಗಳ ಐದನೇ ತಾರೀಖು ಮೇಷ್ಟರ ಮುಖವನೊಮ್ಮೆ ದಿಟ್ಟಿಸಿ ಭಯದಿಂದ ನೋಡುತ್ತಿದ್ದ. ಮೇಷ್ಟರು ಎಲ್ಲಾ ಅರಿತವರಂತೆ ನಗುತ್ತಾ ತಲೆಯಾಡಿಸುತ್ತಿದ್ದರು. “ಕೊಡುವಿಯಂತೆ ಹೋಗು” ಎಂಬ ಮಾತು ಅವರ ಭಾವನೆಯಲ್ಲಿ ವ್ಯಕ್ತವಾಗುತ್ತಿತ್ತು. ದೀಪು ಸಮಾಧಾನದಿಂದ ಹೋಗುತ್ತಿದ್ದ.
ಎಂಟನೇ ತರಗತಿಯ ವಾರ್ಷಿಕ ಪರೀಕ್ಷೆ ಮುಗಿಯುವ ಹೊತ್ತಿಗೆ ಜಯಣ್ಣ ಸ್ವಲ್ಪ ಸುಧಾರಿಸಿಕೊಂಡು ಮತ್ತೆ ಕೆಲಸಕ್ಕೆ ಹೋಗಲು ಶುರುಮಾಡಿದ್ದ. ಚೆನ್ನಾಗಿಯೆ ಪರೀಕ್ಷೆ ಬರೆದಿದ್ದ ದೀಪು ಅದಕ್ಕೆಲ್ಲಾ ಕಾರಣರಾದ ನಾರಾಯಣಪ್ಪ ಮಾಸ್ತರರನ್ನು ಮನದಲ್ಲೇ ಅಭಿನಂದಿಸಿದರೂ ಅವರಿಗೆ ಟ್ಯೂಷನ್ ಫೀಯನ್ನು ಕೊಡಲಾಗದಿದ್ದಕ್ಕೆ ನೊಂದುಕೊಳುತ್ತಿದ್ದ. ಪರೀಕ್ಷೆ ಮುಗಿದ ಮೇಲೆ ಮಾಸ್ತರರನ್ನು ಕಂಡು ಧನ್ಯವಾದ ಹೇಳಿಬರಬೇಕು ಎಂದುಕೊಂಡವನಿಗೆ ಫೀಸ್ ಇಲ್ಲದೆ ಅವರನ್ನು ನೋಡಲು ಧೈರ್ಯಬರಲಿಲ್ಲ. ಹೇಗಿದ್ದರೂ ಅಪ್ಪ ಹುಷಾರಾಗಿದ್ದರೆ, ಇನ್ನು ಸ್ವಲ್ಪ ದಿನದಲ್ಲಿ ಫೀಸು ಕೊಡುತ್ತಾರೆ. ಆವಾಗ ಮೇಷ್ಟರ ಬಳಿ ಹೋಗುವುದು ಎಂದುಕೊಂಡು ದೀಪು ಸ್ವಲ್ಪ ಧೈರ್ಯತಂದುಕೊಂಡು ಸುಮ್ಮನಾದ.
ಅಪ್ಪ ಮತ್ತೆ ಕೆಲಸಕ್ಕೆ ಹೋಗುತ್ತಿದ್ದರಿಂದ ಬಂದ ಹಣ ಅವರ ಅನಾರೋಗ್ಯದ ದಿನಗಳಲ್ಲಿ ಆದ ಸಾಲಕ್ಕೆ ಹೋಗುತ್ತಿದ್ದುದರಿಂದ ಟ್ಯೂಷನ್ ಫೀಗೆ ಸದ್ಯಕ್ಕೆ ಹಣ ಒದಗಿಬರುವುದಿಲ್ಲವೆಂಬುದು ದೀಪುವಿಗೂ ಮನದಟ್ಟಾಗಿತ್ತು. ಆದರೂ ಅಳುಕು ಅವನನ್ನು ಕಾಡುತ್ತಿತ್ತು. ಇವನು ಕುಳಿತಲ್ಲಿ, ನಿಂತಲ್ಲಿ ಮೇಷ್ಟರು ಬಂದು ಇವನಿಗೆ “ಟ್ಯೂಷನ್ ಫೀ” ಎಲ್ಲಿ ಎಂದು ಕೇಳಿದಂತೆ ಭಾಸವಾಗುತ್ತಿತ್ತು. ದೀಪುವಿಗೆ ಎಲ್ಲಾದರೂ ನಡೆದು ಹೋಗುವಾಗಲು ಮೇಷ್ಟರು ಎದುರುಗಡೆಯಿಂದಲೋ, ಹಿಂದಿನಿಂದಲೋ ಬಂದು ಹಿಡಿದುಕೊಂಡು ಕೇಳಿದರೆ ಏನು ಮಾಡುವುದು ಎಂಬ ದಿಗಿಲು ಅವನನ್ನು ನಿಶ್ಚಿಂತನಾಗಿ ಬೇಸಿಗೆಯ ರಜಾದಿನಗಳನ್ನು ಕಳೆಯಲು ಬಿಡಲಿಲ್ಲ. ರಜೆಯೆಲ್ಲಾ ಮುಗಿದು ಶಾಲೆ ಶುರುವಾಗಲು ಇನ್ನೊಂದು ವಾರ ಬಾಕಿ ಇದೆ ಎನ್ನುವಾಗ ಒಬ್ಬಂಟಿಯಾಗಿ ದೀಪು ಅಮರಗೊಂಡದ ಮುಖ್ಯರಸ್ತೆಯ ಬದಿಯಲ್ಲಿ ನಡೆಯುತ್ತಾ ಗೆಳೆಯನ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬಲಿಷ್ಟ ಕೈ ಅವನ ಹೆಗಲನ್ನು ಬಳಸಿ ಹಿಡಿಯಿತು. ಮೊದಲೇ ದಿಗಿಲಿಂದ ಓಡಾಡುತ್ತಿದ್ದ ದೀಪು ಆದ ಶಾಕಿನಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಅದು ಮೇಷ್ಟರೇ ಎಂಬುದು ನಿಚ್ಚಳವಾಗಿತ್ತು. ಮೇಷ್ಟರು ಅದೇ ನಗುಮೊಗದಿಂದ ಅವನ ಭುಜವನ್ನು ಬಿಗಿಯಾಗಿ ಅಮುಕುತ್ತಾ “ಎಕ್ಸಾಮ್ ಎಲ್ಲಾ ಚೆನ್ನಾಗಿ ಬರೆದ? ನನಗೆ ಹೇಳೋಕೆ ಬರ್ಲಿಲ್ಲ ನೀನು” ಎಂದರು. “ಸರ್, ಅದು...ಅದು..” ಎಂದು ದೀಪು ತಡವರೆಸುತ್ತಿದ್ದಾಗಲೆ, “ನಂಗೆಲ್ಲಾ ಗೊತ್ತು. ನಿಮ್ಮಪ್ಪ ಫೀಸು ಕೊಟ್ಟರೆ ಅದರಲ್ಲಿ ಚೆನ್ನಾಗಿರೋ ಎರಡು ಅಂಗಿ ತಗೋ. ಒಂಭತ್ತನ್ನೇ ಕ್ಲಾಸಿಗೆ ಟ್ಯೂಷನ್ಗೆ ಬರೋದು ಮರಿಬೇಡ. ಆಯ್ತಾ?” ಎಂದು ಅವನ ಮುಖವನ್ನೊಮ್ಮೆ ದಿಟ್ಟಿಸುತ್ತಾ ಭುಜದ ಮೇಲಿನ ಕೈತೆಗೆದು ಮೃದುವಾಗಿ ದೀಪುವಿನ ಬೆನ್ನಿಗೊಂದು ತಟ್ಟಿ ಮುಂದೆ ನಡೆದರು. ಮೇಷ್ಟರ ಈ ಮಾತು, ನಡೆವಳಿಕೆಯನ್ನು ಅರ್ಥೈಸಿಕೊಂಡ ದೀಪು ತನ್ನ ಬಲ ಹೆಗಲೊನ್ನಮ್ಮೆ ನೋಡಿಕೊಂಡ. ತೊಟ್ಟಿದ್ದ ಅಂಗಿ ಹರಿದದ್ದು ಸ್ಪಷ್ಟವಾಗಿತ್ತು. ಅದರ ಮೇಲೆ ಕೈಯಿಟ್ಟಿದ್ದ ಮೇಷ್ಟರ ಬಲಿಷ್ಟಕೈ ಇನ್ನೂ ಅಲ್ಲೇ ಇದೆ ಎನ್ನುವಂತೆ ದೀಪುವಿಗೆ ಭಾಸವಾಗುತ್ತಿತ್ತು. ತನ್ನ ಎಡಗೈಯಿಂದ ಬಲಭುಜವನ್ನು ಮುಟ್ಟಿಕೊಂಡ ದೀಪುವಿಗೆ ಮೇಷ್ಟರ ಬಲಗೈ ಮುಟ್ಟಿದಂತಾಯಿತು. “ಅಬ್ಬಾ ಮೇಷ್ಟರು ಎಷ್ಟು ಒಳ್ಳೆಯವರು” ಎಂದು ಅವನ ಮನ ಹಿಗ್ಗಿತು. ಅದೇ ಖುಷಿಯಲ್ಲಿ ಮೇಷ್ಟರು ಹೋದ ದಾರಿಯತ್ತಲ್ಲೇ ನೋಡಿದ. ನಾರಾಯಣಪ್ಪ ಮೇಷ್ಟರು ಬಹಳ ವೇಗವಾಗಿ ಮುಂದೆ ಹೋಗುತ್ತಿದ್ದರು. ಅವರನ್ನು ಧನ್ಯತಾಭಾವದಿಂದ ನೋಡುತ್ತಿದ್ದ ದೀಪುವಿಗೆ ಅವನ ಬೆನ್ನನ್ನು ಮೇಷ್ಟರು ಇನ್ನೂ ತಟ್ಟುತ್ತಿದ್ದಾರೆ ಎಂದೆನಿಸುತ್ತಿತ್ತು.
- ಗುಬ್ಬಚ್ಚಿ ಸತೀಶ್.
ಕಥೆ ಚೆನ್ನಾಗಿದೆ.ಮನಸ್ಸನ್ನು ಭಾವುಕಗೊಳಿಸಿತು.ದೀಪುವಿನ ಭಾವನೆ ಹಾಗೂ ನಾರಾಯಣಪ್ಪ ಮೇಸ್ಟ್ರ ವ್ಯಕ್ತಿತ್ವ ತು೦ಬಾ ಚೆನ್ನಾಗಿ ವ್ಯಕ್ತವಾಗಿದೆ.
ಪ್ರತ್ಯುತ್ತರಅಳಿಸಿಸತೀಶು..
ಪ್ರತ್ಯುತ್ತರಅಳಿಸಿನನಗೂ ಇಂಥಹ ಮೇಷ್ಟ್ರು ಸಿಕ್ಕಿದ್ದರು...
ಓದುವ ಹಂಬಲಕ್ಕೆ ಉಪಾಧ್ಯಾಯರ ಬೆಂಬಲ ಸಿಕ್ಕ ಖುಷಿ ಅದನ್ನು ಅನುಭವಿಸಿದವರಿಗೆ ಗೊತ್ತು..
ಆ ಆನಂದವನ್ನು ನಮಗೂ ಮಾಡಿಸಿದ್ದಕ್ಕೆ ಧನ್ಯವಾದಗಳು..
Aha! Manatattuva kathe!
ಪ್ರತ್ಯುತ್ತರಅಳಿಸಿಈ ಥರ ಮೇಸ್ಟ್ರು ಈ ಕಾಲದಲ್ಲಿ ಸಿಕ್ತಾರೆ ಅನ್ನೋದು ಡೌಟ್...! ಕಥೆ ಚನ್ನಾಗಿದೆ ಸರ್..!
ಪ್ರತ್ಯುತ್ತರಅಳಿಸಿkate tumba channaagide...deepuvina parishrama haagu naarayana meshtra vyaktitva bahu ishtavaayitu.
ಪ್ರತ್ಯುತ್ತರಅಳಿಸಿtumba chenagide... baari ista aytu... very nice
ಪ್ರತ್ಯುತ್ತರಅಳಿಸಿಸತೀಶ್, ಹಲವು ಕಡೆ ಇಂತಹ ಅಪರೂಪದ ಮಾನವೀಯತೆ ಮೆರವ್ ಮೇಷ್ಟ್ರುಗಳು ಇರುತ್ತಾರೆ. ಇದಕ್ಕೆ ಬೆಂಗಳೂರು ಮಾತ್ರ ಅಪವಾದ ಎನ್ನಬಹುದು. ಬೆಂಗಳೂರಿನಲ್ಲಿ ಮೇಷ್ಟಿಗೂ ಬದುಕು ಸಾಗಿಸಲು ಹಣಬೇಕಲ್ಲ. ಹಿಂದೆಲ್ಲಾ ಇಂತಹ ಮಾನವೀಯತೆ, ಸಹಾಯ-ಸಹಕಾರ ಬಹಳ ಇದ್ದವು. ಇಂದು ಎಲ್ಲರಿಗೊ ಹಣವೇ ಮುಖ್ಯ. ಮಂದಿರ-ಮಸೀದಿ,ಮಠ ಎಲ್ಲೆಂದರೂ ಹಣದ ಝಣತ್ಕಾರ. ಬಡತನದಲ್ಲಿ ತನ್ನ ಅನಿವಾರ್ಯತೆಯಲ್ಲಿ ಫೀಸು ಕೊಡಲಾಗದೇ ತೊಳಲಾಡಿದ ಹುಡುಗನ ಮನಸ್ಸಿನ ಮೃದುಮಧುರ ಭಾವನೆಗಳು ಮತ್ತು ಅಪ್ಪನ ಅಸಹಾಯಕತೆ ಎರಡೂ ಕಥೆಯಲ್ಲಿ ನೋವನ್ನು ತರುತ್ತವೆ. ನಾರಯಣಪ್ಪ ಮೇಷ್ಟ್ರಂಥವರು ಸಾವಿರ ಸಾವಿರ ಸಂಖ್ಯೆಯಲ್ಲಿ ಬೇಕಾಗಿದೆ. ಕಥೆ ಸಹಜ ನಿರೂಪಣೆಯಿಂದ ಕೂಡಿದೆ.
ಪ್ರತ್ಯುತ್ತರಅಳಿಸಿದೀಪು ಹಾಗೂ ಮಾಸ್ತರರ ಪಾತ್ರಗಳು ವಿಧ್ಯಾರ್ಥಿಗಳಿಗೂ ,ಶಿಕ್ಷಕರಿಗೂ ಮಾದರಿ... ಎಲ್ಲಕ್ಕಿಂತ ಮುಖ್ಯವಾಗಿ ಹುಡುಗನ ಕಲಿಯಲೇ ಬೇಕು ಎಂಬ ಛಲ,ಮಾಸ್ತರರ ಪ್ರೋತ್ಸಾಹ ಅನುಕರಣೀಯ..
ಪ್ರತ್ಯುತ್ತರಅಳಿಸಿಧನ್ಯವಾದಗಳು,
ಇತಿ ನಿಮ್ಮನೆ ಹುಡುಗ
ಚಿನ್ಮಯ ಭಟ್