ಬುಧವಾರ, ಜುಲೈ 3, 2024

ಕಾಲ... ಕ್ಷಣಿಕ ಕಣೋ...

ಕಾಲ... ಕ್ಷಣಿಕ ಕಣೋ...


ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ...

ನಿಂತಾಗ ಬುಗುರಿಯ ಆಟ ಎಲ್ಲಾ ಒಂದೇ ಓಟ...

ಕಾಲ... ಕ್ಷಣಿಕ ಕಣೋ...

    - ನಾದಬ್ರಹ್ಮ ಹಂಸಲೇಖ


ನಾನು ಕೋಟ್ ಮಾಡಿರುವ ಮೇಲಿನ ಹಾಡನ್ನು ನೀವು ಕೇಳಿರಬಹುದು. ಕನ್ನಡ ಸಿನಿಮಾ ರಂಗದಲ್ಲಿ ‘ನಾದಬ್ರಹ್ಮ’ರೆಂದೇ ಖ್ಯಾತವಾಗಿರುವ ಸಂಗೀತಗಾರ, ಸಾಹಿತಿ ಹಂಸಲೇಖಾರವರು ಡಾ|| ವಿಷ್ಣುವರ್ಧನ್ ಅಭಿನಯದ ‘ಮಹಾಕ್ಷತ್ರಿಯ’ ಸಿನಿಮಾಗಾಗಿ ಬರೆದ ಸಾಲುಗಳಿವು. ಹಂಸಲೇಖರವರೊಳಗಿನ ತತ್ವಜ್ಞಾನಿ ಈ ಹಾಡನ್ನು ಬರೆದಿದ್ದಾನೆ. ಕಾಲ ಕ್ಷಣಿಕ ಎನ್ನುವುದು ಅದೆಷ್ಟು ಸತ್ಯವಲ್ಲವೇ? ‘ಹುಟ್ಟು ಉಚಿತ, ಸಾವು ಖಚಿತ’ ಎಂಬುದನ್ನು ಬಸ್ಸುಗಳಲ್ಲಿಯೋ ಮತ್ತೇಲ್ಲಿಯೋ ನೀವು ಓದೇ ಇರುತ್ತೀರಿ. 

ವೇದವ್ಯಾಸರು ನಿಮಗೆಲ್ಲಾ ಗೊತ್ತೇ ಇದ್ದಾರೆ. ನಿಮಗೆ ಗೊತ್ತಿಲ್ಲದ ಅವರ ಸೋದರಮಾವನ ಕತೆಯೊಂದಿದೆ. ಒಂದು ದಿನ ವೇದವ್ಯಾಸರ ಸೋದರಮಾವ (ಮುದ್ದಿನ ಮಾಮ) ವೇದವ್ಯಾಸರಲ್ಲಿಗೆ ಬಂದು ಹೇಳುತ್ತಾರೆ, “ವ್ಯಾಸ, ನಿನಗೆ ಬ್ರಹ್ಮದೇವರು ಚೆನ್ನಾಗಿಯೇ ಪರಿಚಯವಿದ್ದಾರೆ. ಎಷ್ಟಾದರೂ ನೀನು ಬ್ರಹ್ಮಪುರಾಣವನ್ನೇ ಬರೆದವನಲ್ಲವೇ! ಹೇಗಾದರು ಮಾಡಿ ಆತನಿಂದ ನನಗೊಂದು ವರವನ್ನು ಕರುಣಿಸು. ನಾನು ಚಿರಂಜೀವಿಯಾಗಲು ಬಯಸಿದ್ದೇನೆ. ದಯಮಾಡಿ ಬ್ರಹ್ಮನಿಂದ ಚಿರಂಜೀವಿಯಾಗುವಂತೆ ನನ್ನನ್ನು ಹರಸಿಬಿಡು” ಎಂದು ಕೋರುತ್ತಾರೆ.

ಎಷ್ಟಾದರೂ ಮುದ್ದಿನ ಮಾಮನಲ್ಲವೇ? ವೇದವ್ಯಾಸರು ಆತನನ್ನು ಬ್ರಹ್ಮನಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಭೇಟಿಯ ಶಿಷ್ಟಾಚಾರಗಳೆಲ್ಲಾ ಮುಗಿದ ಮೇಲೆ ವೇದವ್ಯಾಸರು ತಾವು ಅಲ್ಲಿಗೆ ಬಂದ ಕಾರಣವನ್ನು ತಿಳಿಸುತ್ತಾರೆ. ವಿಷಯ ತಿಳಿದ ಬ್ರಹ್ಮನು ತನ್ನ ಅಸಾಯಕತೆಯನ್ನು ವ್ಯಕ್ತಪಡಿಸಿ, ವಿಷ್ಣುವು ಈ ಸಂಬಂಧ ಸಹಾಯ ಮಾಡಬಹುದೆಂದು ಅವರಿಬ್ಬರನ್ನು ವಿಷ್ಣುವಲ್ಲಿಗೆ ಕರೆದೊಯ್ಯುತ್ತೇನೆ ಎನ್ನುತ್ತಾರೆ. ಈ ಮಾತನ್ನು ಆಲಿಸಿದ ಸರಸ್ವತಿಯು, ತಾನೂ ಬರುವುದಾಗಿಯೂ, ಹಾಗೇ ಸೋದರಿ ಲಕ್ಷ್ಮಿಯನ್ನು ನೋಡಿಕೊಂಡು, ಅವಳ ಹೊಸ ವಡವೆಗಳನ್ನು ನೋಡುವ ಇಂಗಿತವನ್ನು ವ್ಯಕ್ತಪಡಿಸುತ್ತಾಳೆ. ಒಪ್ಪಿದ ಬ್ರಹ್ಮನು ಆ ಮೂವರನ್ನು ಕರೆದುಕೊಂಡು ವಿಷ್ಣುವಿನ ಸನ್ನಿಧಾನಕ್ಕೆ ಬರುತ್ತಾರೆ. ಕಾರಣ ತಿಳಿದ ವಿಷ್ಣುವು ತಾನೂ ಈ ವಿಷಯದಲ್ಲಿ ಅಸಾಯಕನಾಗಿರುವುದನ್ನು ತಿಳಿಸಿ, ಮಹೇಶ್ವರನು ಚಿರಂಜೀವಿ ವರವನ್ನು ಕರುಣಿಸಬಹುದೆಂದು ತಿಳಿಸಿ ಆತನಲ್ಲಿಗೆ ಹೊರಡಲು ಅನುವಾಗುತ್ತಾನೆ. ಆಗ ಲಕ್ಷ್ಮಿ ಮತ್ತು ಸರಸ್ವತಿಯರೂ ತಾವೂ ಬಂದು ಪಾರ್ವತಿಯನ್ನು ಮಾತನಾಡಿಸಿಕೊಂಡು ಬರುತ್ತೇವೆ ಎಂದು ಹೊರಡುತ್ತಾರೆ. ಈ ಆರು ಜನ ಕೈಲಾಸಕ್ಕೆ ಬಂದು ತಮ್ಮ ಆಗಮನದ ವಿಷಯವನ್ನು ಶಿವನಿಗೆ ಹೇಳುತ್ತಾರೆ. ತಾಳ್ಮೆಯಿಂದ ಕೇಳಿಸಿಕೊಂಡ ಶಿವ, ಇದು ತನ್ನ ಅಧೀನನಾದ ಯಮನೊಬ್ಬನಿಂದಲೇ ಸಾಧ್ಯವೆಂದು ತಿಳಿಸಿ, ಅಲ್ಲಿಗೆ ಯಮರಾಜನನ್ನು ಕರೆಸುತ್ತಾನೆ. ಕ್ಷಣಾರ್ಧದಲ್ಲಿ ಬಂದ ಯಮರಾಜ ವೇದವ್ಯಾಸರ ಮಾಮನ ಆಯುಷ್ಯದ ವಿವರಗಳು ಚಿತ್ರಗುಪ್ತನ ಲ್ಯಾಪ್‌ಟಾಪ್ಪಿನಲ್ಲಿ ಇರುವುದಾಗಿ ಹೇಳಿ ಅವರನ್ನು ಕೋರಬೇಕೆಂದು ಹೇಳುತ್ತಾನೆ. ಆ ಸಮಯದಲ್ಲಿ ಚಿತ್ರಗುಪ್ತ ಕಾಶಿಗೆ ಹೋಗಿದ್ದರಿಂದ ಆತ ಬರುವುದು ಸ್ವಲ್ಪ ತಡವಾಗುತ್ತದೆ. ಅಷ್ಟರಲ್ಲಿ ಎಲ್ಲರ ಪರಸ್ಪರ ಉಭಯ ಕುಶಲೋಪಚಾರ ನಡೆದು ಊಟವೂ ಮುಗಿದಿರುತ್ತದೆ. ಚಿತ್ರಗುಪ್ತನು ಬಂದ ಕ್ಷಣವೇ ಯಮರಾಜನು ವೇದವ್ಯಾಸರ ಮಾಮನ ಮರಣ ದಿನಾಂಕವನ್ನು ತಿಳಿಸುವಂತೆ ಕೋರುತ್ತಾನೆ. ಒಂದೆರಡು ನಿಮಿಷ ತಮ್ಮ ಲ್ಯಾಪ್‌ಟಾಪ್ಪಿನಲ್ಲಿ ವಿವರಗಳನ್ನು ಹುಡುಕುವ ಚಿತ್ರಗುಪ್ತರು ಒಮ್ಮೆಗೆ, “ಅಯ್ಯೋ...!” ಎಂದು ಕಿರುಚುತ್ತಾರೆ. ಆ ಕ್ಷಣವೇ ವೇದವ್ಯಾಸರ ಮಾಮ ಅಲ್ಲೇ ಅಸುನೀಗುತ್ತಾರೆ. ಎಲ್ಲರೂ ಆಶ್ಚರ್ಯಚಕಿತರಾದಾಗ ಯಮರಾಜನು ಚಿತ್ರಗುಪ್ತರ ಲ್ಯಾಪ್‌ಟಾಪ್ಪಿನಲ್ಲಿ ತೆರೆದಿದ್ದ ಫೈಲನ್ನು ನೋಡುತ್ತಾನೆ. ಅದರಲ್ಲಿ, ‘ಯಾವ ದಿನ ಬ್ರಹ್ಮ ಮತ್ತು ಸರಸ್ವತಿ, ವಿಷ್ಣು ಮತ್ತು ಲಕ್ಷ್ಮಿ, ಶಿವ ಮತ್ತು ಪಾರ್ವತಿ, ಯಮರಾಜ ಮತ್ತು ಚಿತ್ರಗುಪ್ತ ಹಾಗೂ ವೇದವ್ಯಾಸರು ಮತ್ತವರ ಮಾಮ ಸೇರುತ್ತಾರೋ ಅಂದೆ ವೇದವ್ಯಾಸರ ಮಾಮನ ಕಡೆಯ ದಿನ’ ವೆಂದು ದಾಖಲಾಗಿರುತ್ತದೆ.

ಅಂದಮೇಲೆ ಈ ಬದುಕು ಚಿರಂಜೀವಿಯಾಗಲು ಸಾಧ್ಯವೇ ಇಲ್ಲ. ಈ ಬದುಕು ಅನ್ನುವುದು ಸಾವೆಂಬ ಕಟ್ಟಕಡೆಯ ನಿದ್ದೆಯಲ್ಲಿ ಅಂತ್ಯವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಮನಗಂಡು ಈ ಅನಿಶ್ಚಿತ ಬದುಕಿನಲ್ಲಿ ಗೆಲ್ಲಲೇಬೇಕೆಂದು ಹೋರಾಡಬೇಕಾಗುತ್ತದೆ. ಏನಾದರೂ ಸಾಧಿಸುವುದಿದ್ದರೆ ಈ ಜನ್ಮದಲ್ಲಿಯೇ ಎಂದು ಪಣತೊಡಬೇಕಾಗುತ್ತದೆ. ಅಷ್ಟಕ್ಕೂ ಮುಂದಿನ ಜನ್ಮವನ್ನು ಕಂಡವರು ಯಾರು?

ಪ್ರಖ್ಯಾತ ವ್ಯಕ್ತಿತ್ವ ವಿಕಸನ ಗುರು ಸ್ಟೀಫನ್ ಆರ್ ಕೋವೆ ತನ್ನ ಜಗತ್ಪ್ರಸಿದ್ದ ಪುಸ್ತಕ ‘ಸೆವೆನ್ ಹ್ಯಾಬಿಟ್ಸ್ ಆಫ್ ಹೈಲಿ ಎಫೆಕ್ಟಿವ್ ಪೀಪಲ್’ ನಲ್ಲಿ ‘ಅಂತ್ಯದೊಂದಿಗೆ ಆರಂಭಿಸಿ’ ಎಂಬ ಒಂದು ಅಧ್ಯಾಯವನ್ನು ಸವಿವರವಾಗಿ ಬರೆದಿದ್ದಾರೆ. ಅವರ ಮಾತುಗಳನ್ನು ಸಂಕ್ಷಿಪ್ತಗೊಳಿಸುವುದಾದರೆ, ‘ನಿಮ್ಮ ಸಾವಿಗೆ ನೀವೇ ಹೋಗಿದ್ದೀರೆಂದು ಕಲ್ಪಿಸಿಕೊಳ್ಳಿ. ಅಲ್ಲಿ ನಿಮ್ಮ ಅಂತಿಮ ದರ್ಶನಕ್ಕೆ ನೆರೆದಿರುವವರು ನಿಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬುದು ನಿಮ್ಮ ಬದುಕನ್ನು ನಿರ್ಧರಿಸುತ್ತದೆ. ನೀವು ಒಬ್ಬ ಉತ್ತಮ ತಂದೆಯಾಗಬೇಕಿಂದಿದ್ದೀರಾ? ತಾಯಿಯಾಗಬೇಕಿಂದಿದ್ದೀರಾ? ಸ್ನೇಹಿತನಾಗಬೇಕೆಂದಿದ್ದೀರಾ? ಉತ್ತಮ ಕೆಲಸಗಾರನಾಗಬೇಕೆಂದಿದ್ದೀರಾ? ವಿಶ್ವವಿಖ್ಯಾತ ಕ್ರಿಕೆಟರ್ ಅಥವಾ ಅಥ್ಲೆಟ್ ಆಗಬೇಕೆಂದಿದ್ದೀರಾ? ಪ್ರಖ್ಯಾತ ಲೇಖಕ ಅಥವಾ ಪತ್ರಕರ್ತನಾಗಬೇಕೆಂದಿದ್ದೀರಾ? ಅತ್ಯುತ್ತಮ ಶಿಕ್ಷಕ ಅಥವಾ ಶಿಕ್ಷಣ ಸಂಸ್ಥೆಯ ಮಾಲೀಕನೋ ಅಥವಾ ಮತ್ತೇನೋ ನೀವು ಇಷ್ಟಪಟ್ಟದನ್ನು ಆಗಬೇಕೆಂದಿದ್ದೀರೋ ಅದನ್ನು ನಿಮ್ಮ ಸಾವಿನ ದಿನ ಅಲ್ಲಿಗೆ ಬಂದವರು ಆಡುವ ಮಾತುಗಳಲ್ಲಿ ನೀವು ಕಂಡುಕೊಳ್ಳಬಹುದು. ಯಾವನಾದರೂ ಒಬ್ಬ ಸ್ನೇಹಿತ ನಿಮ್ಮ ಮತ್ತೊಬ್ಬ ಸ್ನೇಹಿತನನ್ನು ಕೇಳಿದಾಗ ಮೊದಲನೆಯವನು, ‘ಅಯ್ಯೋ ಅವನು ಸತ್ತದ್ದೇ ಒಳ್ಳೆಯದಾಯ್ತು ಬಿಡೋ’ ಎಂದು ಬಿಟ್ಟರೆ ನಿಮ್ಮ ಬದುಕು ಹೇಗಿತ್ತು ಎಂದು ನಿಮಗೇ ತಿಳಿದುಬಿಡುತ್ತದೆ. ನಿಮ್ಮ ಮನೆಯವರು ಒಳ್ಳೆಯ ರಕ್ತಸಂಬಂಧಿಯನ್ನು ಕಳೆದುಕೊಂಡೆ ಎಂದರೆ, ನಿಮ್ಮ ಗೆಳೆಯರು ಜೀವದ ಗೆಳೆಯನನ್ನು ಕಳೆದುಕೊಂಡೆ ಎಂದರೇ, ನಿಮ್ಮ ವೃತ್ತಿಬಾಂಧವರು ಒಳ್ಳೆಯ ಕೆಲಸಗಾರನನ್ನು ಕಳೆದುಕೊಂಡರೆಂದರೆ, ನಿಮ್ಮ ಧರ್ಮದವರು ಧರ್ಮರಕ್ಷಕ, ಒಳ್ಳೆಯ ಮನುಷ್ಯನನ್ನು ಕಳೆದುಕೊಂಡರೆಂದರೆ, ಇನ್ಯಾರೋ ಒಳ್ಳೆಯ ಸಾಧಕನನ್ನು ಕಳೆದುಕೊಂಡರೆಂದರೆ, ನೀವು ಬದುಕಿದ್ದ ಬದುಕು ಸಾರ್ಥಕತೆಯನ್ನು ಪಡೆದಿರುತ್ತದೆ. ಇಲ್ಲವಾದರೆ ನೀವು ಬದುಕಿದ್ದೂ ಪ್ರಯೋಜನವೇನು? ಅದಕ್ಕೆ ಆತ ಹೇಳಿದ್ದು ‘ಅಂತ್ಯದಿಂದ ಆರಂಭಿಸಿ’ ಎಂದು.

ಆದಕಾರಣ ನಿಮ್ಮ ಸಾವು ಎಂದಾದರೂ ಒಂದು ದಿನ ನಿಶ್ಚಿತವಾಗಿರುವುದರಿಂದ ನಿಮ್ಮ ಸಾವಿನ ದಿನ ಜನರ ಪ್ರತಿಕ್ರಿಯೆ ಹೇಗಿರಬೇಕೆಂದು ಊಹಿಸಿಕೊಂಡು ಇಂದಿನಿಂದಲೇ ನೀವು ನಿಮ್ಮ ಬದುಕನ್ನು ಬದುಕಲು ಆರಂಭಿಸಿ. ನಿಮ್ಮ ಸಾಧನೆಯ ಹಾದಿಯಲ್ಲಿ ಪ್ರತಿಕ್ಷಣವನ್ನೂ ಸದುಪಯೋಗಪಡಿಸಿಕೊಂಡು ಬಾಳಿರಿ. ಆಗ ನಿಮ್ಮ ಸಾವಿಗೂ ಒಂದು ಅರ್ಥವಿರುತ್ತದೆ. ನೀವು ಏನಾಗಬೇಕೆಂದಿದ್ದೀರೋ ಅದನ್ನು ಈ ಕ್ಷಣದಿಂದಲೇ ಆರಂಭಿಸಿ ಯಶಸ್ಸು ಪಡೆದು ಗೆಲುವಿನ ಸರದಾರರಾಗಿರಿ. 

ಹೆಸರಾಂತ ಲೇಖಕರಾದ ಯಂಡಮೂರಿ ವೀರೆಂದ್ರನಾಥರು ಇದೇ ಕಾರಣಕ್ಕೆ ಒಂದು ದಿನದ ಇಪ್ಪತ್ನಾಲ್ಕು ಘಂಟೆಗಳನ್ನು ‘ಇಪ್ಪತ್ನಾಲ್ಕು ಅಮೂಲ್ಯ ವಜ್ರ’ಗಳೆಂದು ಕರೆದರು. ನಿಮಗೆ ಒಂದು ದಿನಕ್ಕೆ ಅದೆಷ್ಟು ವಜ್ರಗಳು ಬೇಕೋ ಅಷ್ಟನ್ನು ನಿಮ್ಮದಾಗಿಸಿಕೊಳ್ಳಿ. ಈ ಸದಾವಕಾಶ ನಿಮ್ಮದು. ಏಕೆಂದರೆ, ಈ ಅಮೂಲ್ಯ ಜನ್ಮ, ಜೀವನ ನಿಮ್ಮದು. ಅದಕ್ಕೆ ನೀವೇ ಹೊಣೆಗಾರರು. ನಿಮ್ಮ ಅಮೂಲ್ಯ ಜೀವನದ ಕಾಲ ನಿಮ್ಮ ಕೈಯಲ್ಲೇ ಇದೆ. ಅದು ಕ್ಷಣಿಕವಾದರೂ ಅತ್ಯಮೂಲ್ಯವಾದದ್ದು ಎಂಬುದನ್ನು ಮಾತ್ರ ಎಂದಿಗೂ ಮರೆಯಬೇಡಿ. ಮರೆತು ನಿರಾಶರಾಗದಿರಿ.

ಯಮನೊಂದಿಗೆ ನಮ್ಮ ಸಾವಿನ ಮುಹೂರ್ತ ಹೇಗೆ ಕೂಡಿ ಬರುತ್ತದೆ ಎಂಬುದನ್ನು ಅರಿಯಲು ಅಥವಾ ನೀತಿಗಾದರೂ ಮುಸ್ತಾಫನ ಕಥೆಯನ್ನು ನೀವು ಓದಬೇಕು. ಇಸ್ತಾನ್‌ಬುಲ್ಲಿಗೆ ಸುಮಾರು ಎರಡು ಘಂಟೆಯ ಪ್ರಯಾಣ ವೇಳೆ ತಗಲುವ ಒಂದು ಹಳ್ಳಿಯಲ್ಲಿ ಅಲ್ಲಾದ್ದೀನ್ ಎಂಬ ಶ್ರೀಮಂತ ವ್ಯಾಪಾರಿಯಿದ್ದ. ಆತನ ಬಳಿ ಹಲವು ಸೇವಕರಿದ್ದರು. ಅವರಲ್ಲಿ ಮುಸ್ತಾಫನೂ ಒಬ್ಬ. ಆತ ತನ್ನ ಒಡೆಯನಿಗೆ ಬಹಳ ಬೇಕಾದವನಾಗಿದ್ದ.

ಒಂದು ದಿನ ಅಲ್ಲಾದ್ದೀನ್ ಮುಸ್ತಾಫನನ್ನೂ ಏನೋ ತರಲು ಮಾರ್ಕೆಟ್ಟಿಗೆ ಕಳುಹಿಸಿದ್ದ. ಹೋದ ಸ್ವಲ್ಪ ಹೊತ್ತಿನಲ್ಲಿಯೇ ಮುಸ್ತಾಫನು ಬೆವರುತ್ತಾ ಭಯಭೀತನಾಗಿ ಹಿಂದಿರುಗಿ ಬಂದಿದ್ದ. ಇದನ್ನು ಕಂಡ ಅಲ್ಲಾದ್ದೀನ್ ಕಾರಣ ಕೇಳಲು, ಕಾರಣ ಆಮೇಲೆ ಹೇಳುತ್ತೇನೆಂದ ಮುಸ್ತಾಫಾ ತನ್ನ ಒಡೆಯನ ಕುದುರೆಯನ್ನು ಕೇಳಿ ಪಡೆದು ಅದನ್ನು ಹತ್ತಿ ವೇಗವಾಗಿ ಇಸ್ತಾನ್‌ಬುಲ್ ಕಡೆಗೆ ಮಿಂಚಿನ ವೇಗದಲ್ಲಿ ಹೋಗಿಯೇ ಬಿಟ್ಟ. 

ಅಲ್ಲಾದ್ದೀನನಿಗೆ ಇದೆಲ್ಲಾ ವಿಚಿತ್ರವಾಗಿ ಕಂಡಿತ್ತು. ಮಾರ್ಕೆಟ್ಟಿನಲ್ಲಿ ಏನೋ ವಿಚಿತ್ರ ಘಟನೆ ನಡೆದಿರಬಹುದೆಂದು ಊಹಿಸಿ ಅಲ್ಲಿಗೆ ಹೋದರೆ ಅಲ್ಲಿ ಯಮಧರ್ಮರಾಯ ಸುತ್ತಾಡುತ್ತಿದ್ದಾನೆ! ಆಶ್ಚರ್ಯದಿಂದ ಯಮನು ಯಾರನ್ನೋ ಹುಡುಕುತ್ತಿದ್ದಾನೆ. ಇದನ್ನು ಗಮನಿಸಿದ ಅಲ್ಲಾದ್ದೀನ್ ನೇರವಾಗಿ ಯಮನಲ್ಲಿಗೆ ಹೋಗಿ ಆತ ಅಲ್ಲಿ ಸುತ್ತಾಡುತ್ತಿರುವ ಕಾರಣವೇನು ಎಂದು ಕೇಳುತ್ತಾನೆ. ಆಗ ಯಮನು, “ಇಲ್ಲಿ ಸ್ವಲ್ಪ ಹೊತ್ತಿಗೆ ಮುಂಚೆ ಮುಸ್ತಾಫನನ್ನು ನೋಡಿದೆ. ಆತ ಇಲ್ಲೇನು ಮಾಡುತ್ತಿದ್ದಾನೆ ಎಂದು ಯೋಚಿಸುತ್ತಿರುವಷ್ಟರಲ್ಲಿ ಆತ ಮಂಗಮಾಯವಾದ. ಯಾಕೆಂದರೆ, ಇನ್ನು ಎರಡು ಘಂಟೆಯ ನಂತರ ಆತನ ಸಾವು ಇಸ್ತಾನ್‌ಬುಲ್‌ನಲ್ಲಿ ನಿಶ್ಚಯವಾಗಿದೆ” ಎಂದು ಹೇಳಿದ.

ಯಾರ ಸಾವು ಎಲ್ಲಿ ನಿಶ್ಚಯವಾಗಿದೆಯೋ? ಬಲ್ಲರ‍್ಯಾರು? 

ಕೊರೊನ ಕೂಡ ಇದನ್ನು ಪದೇಪದೇ ಹೇಳಿತಲ್ವ!?

- ಗುಬ್ಬಚ್ಚಿ ಸತೀಶ್.‌ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗೋಮಿನಿ ಪ್ರಕಾಶನದಲ್ಲಿ ಪುಸ್ತಕ ಪ್ರಕಟವಾಗಲು ಪ್ರಮುಖ ನಿಬಂಧನೆಗಳು

ಗೋಮಿನಿ ಪ್ರಕಾಶನದಲ್ಲಿ ಪುಸ್ತಕ ಪ್ರಕಟವಾಗಲು ಪ್ರಮುಖ ನಿಬಂಧನೆಗಳು 1. ಪ್ರಕಾಶನವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ಮೊದಲಿಗೆ ನೂರು ಪ್ರತಿಗಳನ್ನು...