ಬುಧವಾರ, ಜೂನ್ 26, 2024

ನಿಮ್ಮೊಳಗಿನ ಗುರುವನ್ನು ಮೊದಲು ಅರಿಯಿರಿ

ನಿಮ್ಮೊಳಗಿನ ಗುರುವನ್ನು ಮೊದಲು ಅರಿಯಿರಿ




ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ||

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ||


ಮೊದಲಿಗೆ ಗುರುವಿಗೆ ವಂದಿಸಿ ನಮ್ಮ ಮೊದಲ ಹೆಜ್ಜೆಯಿಡೋಣ. ನಮ್ಮ ಮೊದಲ ಗುರು ಅಮ್ಮ. ಕೆಲವೊಮ್ಮೆ ಅಪ್ಪ ಕೂಡ. ಆ ನಂತರ ಅಕ್ಷರಗಳನ್ನು ಕಲಿಸಲು, ವಿದ್ಯಾಭ್ಯಾಸ ಮಾಡಿಸಲು ಗುರುಗಳು ಸಿಕ್ಕಿರುತ್ತಾರೆ. ಈ ಎಲ್ಲಾ ಗುರುಗಳು ಒಂದು ಹಂತದವರೆಗಷ್ಟೇ ನಮಗೆ ಕಲಿಸಲು ಶಕ್ತರಾಗಿರುತ್ತಾರೆ. ಆ ನಂತರ ನಮ್ಮ ವಿದ್ಯಾಭ್ಯಾಸದ ಮೇಲೆ, ಸಿಕ್ಕಿದ ವೃತ್ತಿಯ ಮೇಲೆ ಅಥವಾ ಆಯ್ಕೆಮಾಡಿಕೊಂಡ ಪ್ರವೃತ್ತಿ ಅಥವಾ ಹವ್ಯಾಸಕ್ಕೆ ಅನುಗುಣವಾಗಿ ನಮ್ಮ ಗುರುಗಳನ್ನು ನಾವೇ ಹುಡುಕಿಕೊಳ್ಳಬೇಕಾಗುತ್ತದೆ. ಆ ಗುರು ಯಾರು ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗುತ್ತದೆ. ಅವರ ಮಾರ್ಗದರ್ಶನದಲ್ಲಿ ನಡೆಯಬೇಕಾಗುತ್ತದೆ. ಕೆಲವು ಬೆರಳೆಣಿಕೆಯಷ್ಟು ಮಂದಿಗೆ ಮತ್ತು ಅದೃಷ್ಟವಿದ್ದವರಿಗೆ ಮಾತ್ರ ಈ ರೀತಿಯ ಗುರುಗಳು ಸಿಗುವ ಅವಕಾಶವಿರುತ್ತದೆ. ಆದರೆ, ಬಹಳ ಮಂದಿಗೆ ಈ ರೀತಿಯ ಗುರುಗಳು ಸಿಗುವುದಿಲ್ಲ. ಅವರು ನಿರಾಶರಾಗಬೇಕಿಲ್ಲ. ಯಾಕೆಂದರೆ, ನಿಜವಾದ ಅದೃಷ್ಟವೆಂದರೆ ಈ ಬಹುಸಂಖ್ಯಾತರೇ! ಕಾರಣ ಸ್ಪಷ್ಟ: ನಿಮ್ಮ ಗೆಲುವಿನ ಹಾದಿಯಲ್ಲಿ ನಿಮಗೊಬ್ಬ ಗುರುವಿದ್ದರೆ ನೀವು ಅವರು ಹೇಳಿದಂತೆ ನಡೆಯಬೇಕಾಗುತ್ತದೆ. ಮತ್ತು ಪ್ರತಿಯೊಂದು ಹೆಜ್ಜೆಯನ್ನಿಡಲು ಅವರನ್ನೇ ಅವಲಂಬಿಸಬೇಕಾಗುತ್ತದೆ. ಆದರೆ, ಗುರುವಿಲ್ಲದವನು ಹೀಗೆ ಯಾರೋ ಒಬ್ಬರ ಮೇಲೆಯೇ ಅವಲಂಬಿತವಾಗಬೇಕಿಲ್ಲ. ಆತನು ಮಾಡಬೇಕಾದ ಮೊದಲ ಕೆಲಸವೆಂದರೆ, ತನ್ನೊಳಗಿನ ಗುರುವನ್ನು ಹುಡುಕಿಕೊಳ್ಳುವುದು. ಹೌದು, ಪ್ರತಿಯೊಬ್ಬರಲ್ಲೂ ಒಬ್ಬ ಗುರುವಿರುತ್ತ್ತಾನೆ. ಅದೇ ‘ಅರಿವೆಂಬ ಗುರು’. ನೀವು ಈ ‘ಅರಿವೆಂಬ ಗುರು’ವನ್ನು ಹುಡುಕಿಕೊಂಡಿರೋ ಅಲ್ಲಿಗೆ ನಿಮಗೊಬ್ಬ ಜೀವನಪರ್ಯಂತ ನೆರವಾಗುವ, ಮಾರ್ಗದರ್ಶನ ನೀಡುವ ಪ್ರಚಂಡ ಗುರುವೊಬ್ಬ ಸಿಕ್ಕಿರುತ್ತಾನೆ. ಅವನನ್ನು ನಮ್ಮೊಳಗೆ ಮನಗಂಡು ಅವನನ್ನು ಗುರುವೆಂದು ಸ್ಥಾಪಿತಮಾಡಿಕೊಳ್ಳಬೇಕು.

ಈ ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗೆ ಮತ್ತು ಅರ್ಜುನನ ಬಗ್ಗೆ ಗೊತ್ತೇ ಇರುತ್ತದೆ. ನಾನೇನಾದರು ನಿಮಗೆ ದ್ರೋಣಾಚಾರ‍್ಯನಂತ ಗುರುವಿನ ಬಲವುಳ್ಳ ಅರ್ಜುನನಾಗುತ್ತಿರೋ ಇಲ್ಲಾ ಗುರುವಿಲ್ಲದ ಏಕಲವ್ಯನಂತಾಗುತ್ತಿರೋ ಎಂದರೆ, ನೀವು ಆರಾಮವಾಗಿ ಅರ್ಜುನ ಎಂದು ಹೇಳಿಬಿಡಬಹುದು. ಸಾಮಾನ್ಯವಾಗಿ ಅರ್ಜುನ ಸರಿಯಾದ ಆಯ್ಕೆಯೇ ಆಗಿರುತ್ತಾನೆ ಎಂಬುದರಲ್ಲಿ ತಪ್ಪಿಲ್ಲ. ಆದರೆ, ಮತ್ತೊಂದು ಕೋನದಿಂದ ನೋಡಿದರೆ ಏಕಲವ್ಯನೇ ಸೂಕ್ತನಾಗಿರುತ್ತಾನೆ!

ನೀವು ಈ ಸ್ಪರ್ಧೆಯನ್ನು ಊಹಿಸಿಕೊಳ್ಳಿ: ಅರ್ಜುನನಿಗೆ ಮರದ ಗೂಳಿಯೊಂದರ ಎಡಗಣ್ಣಿಗೆ ಗುರಿಯಿಡಬೇಕಿದೆ. ಗುರಿಯಿಟ್ಟ ಆತ ಎರಡು ಅಂಗುಲದಷ್ಟು ಗುರಿ ತಪ್ಪಿದ ಎಂದುಕೊಳ್ಳಿ. ಆತ ಆಗ ತನ್ನ ಗುರು ದ್ರೋಣರ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕೇಳುತ್ತಾನೆ. ಆಗವರು ಅರ್ಜುನನಿಗೆ ಮತ್ತೆ ಗುರಿಯಿಡುವಂತೆ ಹೇಳಿ ಈ ಬಾರಿ ಎಡಗಾಲಿನ ಮೇಲೆ ಹಾಕಿರುವ ಹೆಚ್ಚಿನ ಭಾರವನ್ನು ಬಲಗಾಲಿಗೂ ಸ್ವಲ್ಪ ವರ್ಗಾಯಿಸುವಂತೆ ಹೇಳುತ್ತಾರೆ. ಗುರುಗಳು ಹೇಳಿದಂತೆಯೇ ಅರ್ಜುನ ಮಾಡುತ್ತಾನೆ. ಆದರೆ, ಈ ಬಾರಿಯೂ ಸ್ವಲ್ಪದರಲ್ಲಿಯೇ ಗುರಿ ತಪ್ಪುತ್ತಾನೆ. ಮತ್ತೆ ಅವನು ಗುರುಗಳ ಮೊರೆಹೋಗುತ್ತಾನೆ. ಮತ್ತವರು ಮಾರ್ಗದರ್ಶನ ನೀಡುತ್ತಾರೆ. ಕಡೆಗೆ ಅರ್ಜುನ ತನ್ನ ಗುರಿ ಮುಟ್ಟುತ್ತಾನೆ.

ಅದೇ ಸ್ಪರ್ಧೆಯಲ್ಲೀಗ ಏಕಲವ್ಯನನ್ನು ಕಲ್ಪಿಸಿಕೊಳ್ಳಿ: ಆತನೂ ಮೊದಲ ಪ್ರಯತ್ನದಲ್ಲಿ ಗುರಿ ತಪ್ಪುತ್ತಾನೆ. ಆದರಿಲ್ಲಿ ಅವನಿಗೆ ಮಾರ್ಗದರ್ಶನ ಮಾಡಲು ಗುರುಗಳಿಲ್ಲ. ಸಿದ್ಧ ಉತ್ತರಗಳನ್ನು ನೀಡಬಲ್ಲ ಗುರು ಆತನ ಹಿಂದೆ ಬೆಂಗಾವಲಾಗಿ ನಿಂತಿಲ್ಲ. ಆಗ ಆತ ತನ್ನನ್ನೇ ಪ್ರಶ್ನಿಸಿಕೊಂಡು ತನ್ನಲ್ಲೇ ಉತ್ತರ ಹುಡುಕಿಕೊಳ್ಳಲು ಪ್ರಯತ್ನಿಸುತ್ತಾನೆ. ಮತ್ತೇ ಸೋಲುತ್ತಾನೆ. ಮತ್ತೆ ಮತ್ತೆ ಪ್ರಯತ್ನಿಸಿ ಮತ್ತೆ ಮತ್ತೆ ಸೋಲುತ್ತಾನೆ. ರಾತ್ರಿಯೆಲ್ಲಾ ನಿದ್ದೆಬರುವುದಿಲ್ಲ. ಮರುದಿನವು ಆತನ ಪ್ರಯತ್ನಕ್ಕೆ ಫಲವಿರುವುದಿಲ್ಲ. ಆದರೂ ಆತ ಛಲ ಬಿಡುವುದಿಲ್ಲ. ಮೂರನೇ ದಿನದ ಸತತ ಪ್ರಯತ್ನದಿಂದ ಆತನಿಗೆ ಅರಿವಾಗಿರುತ್ತದೆ; ತಾನು ತನ್ನ ಎಡಗಾಲಿನ ಮೇಲೆ ಹೆಚ್ಚು ಭಾರವನ್ನು ಹಾಕುತ್ತಿದ್ದೇನೆ ಎಂದು. ಅದನ್ನು ಬಲಗಾಲಿಗೆ ಸ್ವಲ್ಪವೇ ವರ್ಗಾಯಿಸಿದರೆ ತನಗೆ ಗೆಲುವು ನಿಶ್ಚಿತವೆಂದು ಖಚಿತವಾಗುತ್ತದೆ. ಆ ನಂತರದ ಪ್ರಯತ್ನದಲ್ಲಿ ಆ ಮರದ ಗೂಳಿಯ ಎಡಗಣ್ಣಿಗೆ ಸರಿಯಾಗಿ ಬಾಣ ಬಿಟ್ಟು ಗೆಲ್ಲುತ್ತಾನೆ. 

ಇವರಿಬ್ಬರನ್ನು ನೋಡಿದಾಗ ಅರ್ಜುನನಿಗೆ ಗುರುವೊಬ್ಬ ಜೊತೆಯಿರಲೇಬೇಕಾಗುತ್ತದೆ. ಆತನಿಗೆ ಕುರುಕ್ಷೇತ್ರದಲ್ಲಿ ಯುದ್ಧಮಾಡುವಾಗಲೂ ಕೃಷ್ಣನ ರೂಪದಲ್ಲಿ ಗುರುವೊಬ್ಬ ಸಾರಥಿಯಾಗಬೇಕಾಯಿತು. ಆತ ತನ್ನ ಸ್ವಂತ ಪರಿಶ್ರಮದಿಂದ ಸಾಧಿಸಿ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಿಕೊಂಡವನಲ್ಲ. ಆತನದ್ದು ಏನೇ ಆದರೂ ಪರಾವಲಂಬಿ ಬದುಕು. ಆದರೆ, ಏಕಲವ್ಯ ಹಾಗಲ್ಲ. ಆತ ತನ್ನ ಸ್ವಂತ ಪರಿಶ್ರಮದಿಂದ, ಸತತ ಪ್ರಯತ್ನಗಳಿಂದ ತನ್ನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡವನು. ತನ್ನಲ್ಲೇ ಅಡಗಿದ್ದ ಗುರುವೆಂಬ ಅರಿವನ್ನು ಅರಿತುಕೊಂಡವನು. ಬಿಲ್ವಿದ್ಯೆಯಲ್ಲಿ ಪರಿಣಿತಿ ಪಡೆದವನು. ಆದಕಾರಣ ಗೆಳೆಯರೇ, ನಾವು ನಮ್ಮಲ್ಲಿರುವ ಗುರುವನ್ನು ಮೊದಲು ಅರಿಯಬೇಕಿದೆ. ಅದಕ್ಕೇ ಹಿರಿಯರು ಹೇಳಿದ್ದು, “ಅರಿವೇ ಗುರು.”

ನೀವು ನೀವಾಗುವುದಕ್ಕೆ, ನಿಮಗೆ ನೆರವಾಗುವುದಕ್ಕೆ ಗುರುವೊಬ್ಬನ ಅವಶ್ಯಕತೆಯಿರಲೇಬೇಕು ಎಂದು ಸೂಫಿ ಸಂತರು ಕೂಡ ಹೇಳಿದ್ದಾರೆ. ಆ ಗುರುವು ಹೊರಗಿನವರಾದರೂ ಆಗಿರಬಹುದು ಇಲ್ಲಾ ನಿಮ್ಮೊಳಗೇ ಇರಬಹುದು. ಆದರೆ, ಆ ಗುರುವು ನಿಮ್ಮೊಳಗೇ ಇದ್ದರೆ ಆ ಗುರುವೇ ಶ್ರೇಷ್ಠ ಎಂದು ಅವರು ಪ್ರತಿಪಾದಿಸಿದ್ದಾರೆ. ಅದಕ್ಕೆ ಅನುಗುಣವಾಗಿ ಸೂಫಿ ಸಂತರು ಹೇಳಿದ ಗುರುಗಳ ಹುಡುಕಾಟದ ಕತೆ ಹೀಗಿದೆ:

ಒಮ್ಮೆ ಸೂಫಿ ಗುರುವೊಬ್ಬ ಇನ್ನೇನು ಮರಣವೊಂದುವವನಿದ್ದ. ಆತನಿಗೆ ತನ್ನ ಮೂವರು ಶಿಷ್ಯಂದಿರು ತನ್ನ ಮರಣಾನಂತರ ಯಾವ ಗುರುವಿನ ಮಾರ್ಗದರ್ಶನದಲ್ಲಿ ಮುನ್ನೆಡೆಯುವರು ಎಂಬ ಚಿಂತೆ ಕಾಡತೊಡಗಿತು. ಅವರಿಗೆ ಆತ ಸುಲಭವಾಗಿ ಇಂತಹ ಗುರುಗಳನ್ನು ನೀವೇ ಹುಡುಕಿಕೊಳ್ಳಿ ಅಥವಾ ಇಂತಹವರ ಬಳಿಗೆ ಹೋಗಿ ಎಂದು ಹೇಳಿಬಿಡಬಹುದಿತ್ತು. ಆದರೆ, ಆತ ತನ್ನ ಶಿಷ್ಯಂದಿರು ಅವರಾಗಿಯೇ ತಮ್ಮ ಗುರುಗಳನ್ನು ಹುಡುಕಿಕೊಳ್ಳುವಂತೆ ಮಾಡಬೇಕಿತ್ತು. ಯಾರಾದರೂ ಆಗಲಿ ಅವರೇ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಿಕೊಂಡರೆ ಅದು ಅತ್ಯುತ್ತಮವಾದದ್ದು ಮತ್ತು ಶ್ರೇಷ್ಠವಾದದ್ದು  ಎಂಬ ನಂಬಿಕೆಯಿತ್ತು. ಕುರುಡನೊಬ್ಬನಿಗೆ ಕೈ ನೀಡಿ ಮುನ್ನೆಡೆಸುವುದಕ್ಕಿಂತಲೂ, ಆ ಕುರುಡನೇ ತಾನೇತಾನಾಗಿ ಮುನ್ನೆಡೆಯುವುದನ್ನು ಕಲಿಸುವುದೇ ಶ್ರೇಷ್ಠ ಎಂದು ನಂಬಿದ್ದ ಆ ಗುರು. ಆಗಲೇ ಕುರುಡನಿಗೆ ತಾನು ಕತ್ತಲಲ್ಲೂ ಬೆಳಕನ್ನು ಅರಸಬಲ್ಲೆ ಎಂಬ ಅರಿವು ಬರುತ್ತದೆ ಎಂಬ ಅರಿವಿತ್ತು ಆ ಗುರುವಿಗೆ. ಆದಕಾರಣ ಆತ ತನ್ನ ಮೂವರು ಶಿಷ್ಯರನ್ನು ಕರೆದು, ಅವರಿಗೆ ಹದಿನೇಳು ಒಂಟೆಗಳನ್ನು ನೀಡಿ, ನೀವೆಲ್ಲಾ ನಾನು ಹೇಳಿದ ನಿಯಮದಂತೆಯೇ ಒಟ್ಟು ಹದಿನೇಳು ಒಂಟೆಗಳನ್ನು ಹಂಚಿಕೊಳ್ಳಬೇಕೆಂದು ಹೇಳಿದ. ಆತನ ಹಂಚಿಕೆಯ ನಿಯಮವು ಹೀಗಿತ್ತು, ‘ಒಟ್ಟು ಒಂಟೆಗಳಲ್ಲಿ ಹಿರಿಯ ಶಿಷ್ಯನಿಗೆ ಅರ್ಧಭಾಗ, ಮಧ್ಯ ವಯಸ್ಸಿನವನಿಗೆ ಮೂರರಲ್ಲಿ ಒಂದು ಭಾಗ ಮತ್ತು ಕಿರಿಯವನಿಗೆ ಒಂಭತ್ತರಲ್ಲಿ ಒಂದು ಭಾಗ’ ಎಂದು.

ಶಿಷ್ಯರೆಲ್ಲಾ ತಲೆಕೆಡಿಸಿಕೊಂಡರು. ಗುರುಗಳು ಹೇಳಿದ್ದರಲ್ಲಿ ಅವರಿಗೆ ಅರ್ಥವೇ ಕಾಣಲಿಲ್ಲ. ಇದು ಸಾಧ್ಯವೇ ಇಲ್ಲ ಎಂದು ಅವರಲ್ಲಿಯೇ ಮಾತನಾಡಿಕೊಂಡರು. ಈ ಗುರುಗಳಿಗೆ ಸರಿಯಾದ ಬುದ್ಧಿಯಿಲ್ಲ. ಗುರುಗಳು ಏನೋ ಅತರ್ಕವಾದುದ್ದನ್ನು ಹೇಳಿದ್ದಾರೆ. ಅವರಿಗೆ ಸಾಯುವ ಕಾಲದಲ್ಲಿ ಬುದ್ಧಿಭ್ರಮಣೆಯಾಗಿರುವಂತಿದೆ ಎಂದೆಲ್ಲಾ ಯೋಚಿಸತೊಡಗಿದರು. ಇವರಿಗೆ ಇದಕ್ಕೆ ಸರಿಯಾದ ಉತ್ತರವಿಲ್ಲ ಎಂದು ಸ್ವಲ್ಪದರಲ್ಲಿಯೇ ಮನದಟ್ಟಾಗುತ್ತದೆ ಎಂದು ಭಾವಿಸಿದರು. 

ಹೇಗೂ ಗುರುಗಳು ಇನ್ನೇನು ಸಾಯುತ್ತಾರೆ. ಆಗ ಎಲ್ಲರೂ ಹೇಗೆ ಬೇಕೋ ಹಾಗೆ ಹಂಚಿಕೊಂಡರಾಯಿತು ಎಂದು ಲೆಕ್ಕಾಚಾರವನ್ನು ತಮ್ಮೊಳಗೆ ಹಾಕಿಕೊಂಡರು. ಆದರೆ, ಅವರಲ್ಲೊಬ್ಬ ಏನಾದರೂ ಮಾಡಿ ಉತ್ತರ ಕಂಡುಕೊಳ್ಳಲೇಬೇಕು ಎಂದು ಮತ್ತಿಬ್ಬರನ್ನು ಕರೆದುಕೊಂಡು ಹಿರಿಯರೊಬ್ಬರ ಬಳಿ ಬಂದ. ಆ ಹಿರಿಯರು ಇವರ ಸಮಸ್ಯೆಯನ್ನು ಅರ್ಥಮಾಡಿಕೊಂಡು ನಿಮ್ಮ ಸಮಸ್ಯೆಗೆ ಸುಲಭ ಉತ್ತರವಿದೆ ಎಂದು ಹೇಳಿ, ನಾನೊಂದು ಒಂಟೆಯನ್ನು ನಿಮಗೆ ಕೊಟ್ಟು ಬಿಡುತ್ತೇನೆ. ಆಗ ಒಟ್ಟು ಹದಿನೆಂಟು ಒಂಟೆಗಳಾಗುತ್ತವೆ. ನೀವೀಗ ನಿಮ್ಮ ಗುರುಗಳು ಹೇಳಿದಂತೆ, ‘ಒಟ್ಟು ಒಂಟೆಗಳಲ್ಲಿ ಹಿರಿಯ ಶಿಷ್ಯನಿಗೆ ಅರ್ಧಭಾಗ ಅಂದರೆ ಒಂಭತ್ತು ಒಂಟೆಗಳು, ಮಧ್ಯ ವಯಸ್ಸಿನವನಿಗೆ ಮೂರರಲ್ಲಿ ಒಂದು ಭಾಗ ಅಂದರೆ ಆರು ಒಂಟೆಗಳು ಮತ್ತು ಕಿರಿಯವನಿಗೆ ಒಂಭತ್ತರಲ್ಲಿ ಒಂದು ಭಾಗ ಅಂದರೆ ಎರಡು ಒಂಟೆಗಳನ್ನು ಹಂಚಿಕೊಳ್ಳಿ. ಅಲ್ಲಿಗೆ ಹದಿನೇಳು ಒಂಟೆಗಳಾದವು. ಉಳಿದ ಒಂದು ಒಂಟೆ ನನ್ನದು. ಅದನ್ನು ನನಗೆ ಹಿಂದಿರುಗಿಸಿಬಿಡಿ’ ಎಂದು ಮುಗುಳ್ನಕ್ಕರು. 

ಅಲ್ಲಿಗೆ ಈ ಕಥೆ ಹೇಳುವುದು ನಿಮ್ಮಳೊಗಿಳಿದು ನಿಮ್ಮ ಸಮಸ್ಯೆಗೆ ಪರಿಹಾರ ನೀಡುವವರು ಮಾತ್ರ ನಿಮ್ಮ ಗುರುವಾಗಬಲ್ಲರು ಎಂದು. ನಿಮ್ಮಳೊಗಿನ ಆ ಹಿರಿಯನ ರೂಪದ ‘ಒಂದು ಒಂಟೆ’ ಎಂಬ ಅರಿವೇ ನಿಮಗೆ ಗುರುವಾಗಬಲ್ಲದು. 

ಆ ‘ಅರಿವೆಂಬ ಗುರು’ವೇ ಅನುಗಾಲವೂ ನಿಮ್ಮೊಂದಿಗಿರಬಲ್ಲರು. ಆತನನ್ನು ಮೊದಲು ಹುಡುಕಿಕೊಳ್ಳಿ. ಆಲ್ ದಿ ಬೆಸ್ಟ್... ಶುಭವಾಗಲಿ...

- ಗುಬ್ಬಚ್ಚಿ ಸತೀಶ್.

***


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ. ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವ...