ಮಂಗಳವಾರ, ಫೆಬ್ರವರಿ 13, 2024

‘ನೆನೆವುದೆನ್ನ ಮನಂ ಕ್ಯಾತಸಂದ್ರಮಂʼ

 ‘ನೆನೆವುದೆನ್ನ ಮನಂ ಕ್ಯಾತಸಂದ್ರಮಂʼ

 


ಕನ್ನಡ ಕುಲಕೋಟಿಯ ಮೇಟಿ ಮಹಾಕವಿ ಪಂಪ ‘ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದರೆ ನನ್ನ ಹೃದಯ ಸದಾ ‘ನೆನೆವುದೆನ್ನ ಮನಂ ಕ್ಯಾತಸಂದ್ರಮಂ’ ಎಂದು ಮಿಡಿಯುತ್ತದೆ ಎಂದು ಆರಂಭಿಸುತ್ತಾ ವಿವಿಧ ಅಧ್ಯಾಯಗಳಲ್ಲಿ ತಮಗೆ ಜನನ, ಬಾಲ್ಯ, ಶಿಕ್ಷಣ, ಸಕಲ ಅಭ್ಯುದಯವಿತ್ತ ಊರನ್ನು ತಾವು ಕಂಡಂತೆ ಒಬ್ಬ ಪ್ರಜೆಯಾಗಿ, ಸಾಹಿತಿಯಾಗಿ, ಸಂಶೋಧಕನಾಗಿ ಡಾ|| ವಿದ್ಯಾವಾಚಸ್ಪತಿ ಕವಿತಾಕೃಷ್ಣರವರು ‘ನಮ್ಮೂರು ಕ್ಯಾತಸಂದ್ರ’ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಚಾರಿತ್ರಿಕವಾಗಿ, ಭೌಗೋಳಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಹಾಗು ಸಾಂಸ್ಕೃತಿಕವಾಗಿ ತಮ್ಮ ಊರಿನ ಮಹತ್ವವನ್ನು ಪುಸ್ತಕ ರೂಪದಲ್ಲಿ ದಾಖಲಿಸಿ ಋಣ ತೀರಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಹಾಗೆ ನೋಡಿದರೆ ಯಾವ ಸಾಹಿತಿಯಾದರೂ ತನ್ನ ಊರನ್ನು ತನ್ನ ಸೃಜನಶೀಲ ಸೃಷ್ಠಿಯಲ್ಲಿ ನಿರೂಪಿಸಿರುತ್ತಾನೆ. ಆದರೆ, ಒಬ್ಬ ಸಂಶೋಧಕನಾಗಿ ವಸ್ತುನಿಷ್ಠವಾಗಿ ತನ್ನ ಊರನ್ನು ಅಕ್ಷರಗಳ ಮೂಲಕ ದಾಖಲಿಸುವುದು ನಿಜಕ್ಕೂ ಸಾಧನೆಯ ಕೆಲಸ. ಈ ಸಾಧನೆಗೆ ತಮ್ಮ ಇಳಿ ವಯಸ್ಸಿನಲ್ಲಿಯೂ ಯುವ ಸಂಶೋಧಕನಂತೆ ಕೆಲಸ ಮಾಡಿರುವ ವಿದ್ಯಾವಾಚಸ್ಪತಿಗಳ ಸಾಹಸವನ್ನು ಅಭಿನಂದಿಸಲೇಬೇಕು.

ತುಮಕೂರು ನಗರಕ್ಕೆ ಮೂಡಲ ಬಾಗಿಲಂತಿರುವ ಕೇತಸಮುದ್ರ ಕ್ಯಾತಸಂದ್ರ‍್ರ ಅಥವಾ ಕ್ಯಾತ್ಸಂದ್ರ ಆದ ಬಗೆಯನ್ನು ಚಾರಿತ್ರಿಕವಾಗಿ ಹಲವು ದಾಖಲೆಗಳ ಉಲ್ಲೇಖಗಳ ಮೂಲಕ ಪುಸ್ತಕದಲ್ಲಿ ದಾಖಲಿಸಲಾಗಿದೆ. ೧೮ನೇ ಶತಮಾನದ ಹೇರಂಬ ಎಂಬ ಕವಿಯು ಸಿದ್ಧಗಂಗಾ ಬೆಟ್ಟದಲ್ಲಿ ಗಂಗೋಧ್ಭವ ಆದ ಪ್ರಸಂಗವನ್ನು ವರ್ಣಿಸಿರುವ 

“ಚೆಲುವೆತ್ತ ಕೇತ್ಸಮುದ್ರದ ಗ್ರಾಮದೆಡೆಯೊಂದು

ಬೆಳೆದು ಕಲ್ಲರೆ ಬಂಡೆಯಿಹುದು

        ಆಗ ಕಲ್ಲುಬಂಡೆಗೀಶನು ನಡೆತರ

        ಲಾಗ ಶರಣರೆಲ್ಲ ನೋಡಿ”

ಸಾಲುಗಳಲ್ಲಿ ಕ್ಯಾತ್ಸಂದ್ರ ಅದೆಷ್ಟು ಚೆಲುವಾಗಿತ್ತು ಎಂಬುದನ್ನು ಸವಿಯಬಹುದು. ಹಲವು ಶಾಸನಗಳ, ವೀರಗಲ್ಲು-ಮಾಸ್ತಿಕಲ್ಲುಗಳ ಬೀಡಾಗಿರುವ ಕ್ಯಾತಸಂದ್ರ ಒಂದು ಐತಿಹಾಸಿಕ ಮಹತ್ವದ ಸ್ಥಳವೂ ಆಗಿದೆ. 

ಸರ್ವಜನಾಂಗದ ತೋಟವಾಗಿರುವ ಕ್ಯಾತಸಂದ್ರದ ಊರು-ಕೇರಿ ಹೆಂಗಳೆಯರನ್ನು ಒಳಗೊಂಡು ಎಲ್ಲರನ್ನೂ ತನ್ನತ್ತ ಸೆಳೆಯುತ್ತಿತ್ತು ಎಂದು ದಾಖಲಾಗಿರುವ ಸಂದರ್ಭದಲ್ಲಿ ಕ್ಯಾತಸಂದ್ರದ ಹುಡುಗರನ್ನು ಮದುವೆಯಾಗಲು ಸುತ್ತೇಳು ಊರುಗಳ ಹೆಣ್ಣುಮಕ್ಕಳು ಬಯಸುತ್ತಿದ್ದರು ಎಂಬುದಕ್ಕೆ ಪುರಾವೆಯೆಂಬಂತೆ ಜನಪದಗೀತೆಯೊಂದು ಸ್ವಾರಸ್ಯಕರವಾಗಿ ಓದುಗರ ಗಮನ ಸೆಳೆಯುತ್ತದೆ: 

“ಕೈದಾಳ ಆಕಡೇ ಮೈದಾಳ ಈಕಡೇ

ಮಧ್ಯದ ಊರೇ ಕ್ಯಾಚಂದ್ರ? ಕೊಟ್ಟೆನ್ನ

ಮದುವೆಯ ಮಾಡೇ ನನ್ನವ್ವ||”

ದೇಗುಲಗಳ ಊರಾಗಿರುವ ಕ್ಯಾತಸಂದ್ರದ ಪುರಾತನ ದೇವಾಲಯಗಳ ಜೊತೆಜೊತೆಗೆ ಆಧುನಿಕ ದೇವಾಲಯಗಳ ಮಹತ್ವ ಮತ್ತು ವಿಶೇಷವನ್ನು ಲೇಖಕರು ‘ದೇಗುಲಗಳ ಊರು’ ಅಧ್ಯಾಯದಲ್ಲಿ ವಿವರವಾಗಿ ನೀಡಿದ್ದಾರೆ. ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗ ತಮ್ಮ ತಂದೆಯ ಪುಣ್ಯತಿಥಿಯಂದು ಬಂಧು-ಬಳಗದೊಂದಿಗೆ ಜೀಬಿ ಆಂಜನೇಯಸ್ವಾಮಿ ದೇವಾಲಯಕ್ಕೆ ತಲೆ ಬೋಳಿಸಿಕೊಂಡು ಬೆಳಗುವ ಹಿಟ್ಟಿನ ದೀಪ ಹಿಡಿದು ಬಂದ ಲೇಖಕರಿಗೆ ಆಗಿನ ಆರ್ಚಕರು ಇವರನ್ನು ದಕ್ಷಿಣಾಭಿಮುಖವಾಗಿ ನಿಲ್ಲಿಸಿ, ಬೆನ್ನಹಿಂದೆ ತಂದ ಎರಡೂ ಕೈಗಳಿಗೆ ಬೆಣ್ಣೆಸಹಿತ ಒಂದು ಪಾವಲಿ ನಾಣ್ಯವಿರಿಸಿ ಹೇಳಿಕೊಟ್ಟ, ‘ಓ ಆಂಜನೇಯಸ್ವಾಮಿ, ನನ್ನ ತಂದೆ ಅಗಲಿದ್ದಾರೆ. ಅವರಿಗೆ ಸ್ವರ್ಗ ಪದವಿ ನೀಡು. ನಾನು ಇಂದಿನಿಂದ ನನಗೆ ಕಲ್ಲಲ್ಲಿ ಎಸೆದವರಿಗೆ ಬೆಣ್ಣೆಯಿಂದ ಎಸೆಯುತ್ತೇನೆ’ ಎಂಬ ಪ್ರಮಾಣವಚನ ರೂಪದ ಮಾತುಗಳು ಆನಂತರ ಇವರ ಮೇಲೆ ಅದೆಷ್ಟು ಪ್ರಭಾವಬೀರಿದವು ಎಂಬುದು ಲೇಖಕರಲ್ಲಿ ಧನ್ಯತಾಭಾವ ಮೂಡಿಸಿದೆ. ಈ ಸಂದರ್ಭದಲ್ಲಿ ಒಂದು ಊರು ಮತ್ತು ಅದರ ಪ್ರಜೆಯ ನಡುವಿನ ಅವಿನಾಭಾವ ಸಂಬಂಧ ಬೆಳೆದ ಬಗೆಯನ್ನು ಗಮನಿಸುತ್ತಲೇ ಆ ಪ್ರಜೆಯ ಬೌದ್ಧಿಕ, ಸಾಮಾಜಿಕ ಬೆಳವಣಿಗೆಗೂ ಹೇಗೆ ಸಹಕಾರಿಯಾಗಬಲ್ಲದು ಎಂಬುದನ್ನು ನೋಡಬಹುದಾಗಿದೆ.

ಸ್ವಾತಂತ್ರ್ಯ ಹೋರಾಟಗಾರರ ತವನಿಧಿ ಮತ್ತು ನಮ್ಮೂರ ಸ್ವಾತಂತ್ರ್ಯ ಸೇನಾನಿಗಳು ಅಧ್ಯಾಯಗಳಲ್ಲಿ ಕ್ಯಾತಸಂದ್ರದ ಸ್ವಾತಂತ್ರ್ಯ ಹೋರಾಟಗಾರರ ಚಳವಳಿಗಳು ಮತ್ತು ಸಾಹಸಗಳು ದಾಖಲಾಗಿರುವುದರ ಜೊತೆಗೆ ಸಂಕ್ಷಿಪ್ತವಾಗಿ ಬಹುತೇಕ ಸೇನಾನಿಗಳ ಪರಿಚಯವನ್ನು ನೀಡಲಾಗಿದೆ. ಊರಿನ ಇತಿಹಾಸದಲ್ಲಿ ಸ್ಮರಣೀಯ ದಿನ ೧೯೩೪ನೇ ಇಸವಿ ಜನವರಿ ೪ರಂದು ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿ ಸ್ಥಳೀಯರ ಮೇಲೆ ಬೀರಿದ ಪ್ರಭಾವವೂ ಕೂಡ ದಾಖಲಾಗಿದೆ. ನಮ್ಮೂರ ಪ್ರಾತಃಸ್ಮರಣೀಯರು ಅಧ್ಯಾಯದಲ್ಲಿ ೬೦ ವರ್ಷಗಳ ಹಿಂದೆ ಪುಟ್ಟ ಊರಾಗಿದ್ದರೂ ಊರಮಂದಿಯೆಲ್ಲಾ ಅದೆಷ್ಟು ಮಾದರಿ ವ್ಯಕ್ತಿಗಳಾಗಿದ್ದರು ಎಂದು ನೆನೆಯುತ್ತಲೇ ೭೨ ವರ್ಷಗಳ ತಮ್ಮ ಸ್ಮೃತಿಪಟಲದಲ್ಲಿ ಅವರೆಲ್ಲಾ ಧ್ರುವನಕ್ಷತ್ರಗಳು ಎಂದಿದ್ದಾರೆ ವಿದ್ಯಾವಾಚಸ್ಪತಿಗಳು. ಗಂಡಸು-ಹೆಂಗಸೆನ್ನದೆ, ಮೇಲುಕೀಳೆನ್ನದೆ ಸಮಾಜದ ಎಲ್ಲ ಮಹನೀಯರನ್ನು ನೆನೆದಿದ್ದಾರೆ. ಸಿದ್ಧಗಂಗಾ ಮಠದ ಸಂಸ್ಕೃತ ಪಾಠಶಾಲೆಯ ನಿಮಿತ್ತ ಸಹಜವಾಗಿ ಕ್ಯಾತಸಂದ್ರವು ಪಂಡಿತಪುರಿಯೂ ಆಗಿದೆ. ಕಲೆಯ ತವರೂರಾದ ಕ್ಯಾತಸಂದ್ರದಲ್ಲಿ ಯಕ್ಷಗಾನ ಕಲೆ, ಪೌರಾಣಿಕ, ಐತಿಹಾಸಿಕ  ಹಾಗೂ ಸಾಮಾಜಿಕ ನಾಟಕಗಳು ವಿಜೃಂಭಿಸಿದ ಕಾಲಘಟ್ಟವನ್ನು ಸ್ವತಃ ನಾಟಕಕಾರರಾಗಿರುವ ಲೇಖಕರು ಕಲಾವಿದರ, ಹಾರ‍್ಮೋನಿಯಂ ಮೇಷ್ಟ್ರುಗಳ ಪರಿಚಯದ ಮೂಲಕ ನೀಡಿದ್ದಾರೆ. ಬೇಸಾಯ ಪ್ರಧಾನವಾದ ಊರಾದರೂ ತುಮಕೂರಿಗೆ ಬಹಳ ಹತ್ತಿರವಿದ್ದುದರಿಂದ ನಗರದ ನಾಗರೀಕತೆಯ ಪ್ರಭಾವದಿಂದ ಯುವಕರು ಕ್ರೀಡೆಗಳಲ್ಲಿ ಆಸಕ್ತಿ ಮೂಡಿ ಕ್ರೀಡಾಪಟುಗಳ ಆಡುಂಬೊಲವಾಗಿತ್ತು ಕ್ಯಾತಸಂದ್ರ, ಪುಟ್‌ಬಾಲ್ ಊರಿನ ಜನಪ್ರಿಯ ಆಟವಾಗಿತ್ತು ಮತ್ತು ವಿವಿಧ ಕ್ರೀಡೆಗಳ ಮುಖ್ಯ ಕ್ರೀಡಾಪಟುಗಳ ಪರಿಚಯವನ್ನು ಪ್ರತ್ಯೇಕ ಅಧ್ಯಾಯದಲ್ಲಿ ನೀಡಲಾಗಿದೆ. 

ಇವತ್ತಿಗೂ ಕ್ಯಾತಸಂದ್ರವೆಂದರೆ ಎಂಥಹವರಿಗೂ ಇಲ್ಲಿನ ಇಡ್ಲಿ ಹೋಟೆಲ್‌ಗಳು ಬಾಯಲ್ಲಿ ನೀರೂರಿಸುತ್ತವೆ. ನಮ್ಮೂರ ಹೋಟೆಲ್‌ಗಳು ಪುಟ್ಟ ಅಧ್ಯಾಯದಲ್ಲಿ ಹೋಟೆಲ್‌ಗಳ ಇತಿಹಾಸ ಮತ್ತು ವರ್ತಮಾನವನ್ನು ನೀಡಲಾಗಿದೆ. ಕ್ಯಾತ್ಸಂದ್ರದ ತಟ್ಟೆ ಇಡ್ಲಿ ಅದೆಷ್ಟು ಫೇಮಸ್ಸು ಅಂತ ಹೋಟೆಲ್‌ಗಳ ಬದಿಯಲ್ಲಿ ನಿಂತಿರುವ ವಾಹನಗಳನ್ನು ಲೆಕ್ಕ ಹಾಕಿಯೇ ಹೇಳಿಬಿಡಬಹುದು. ಊರ ಅಂಗಡಿ ಮುಂಗಟ್ಟುಗಳು ಅಧ್ಯಾಯದಲ್ಲಿ ಪ್ರಮುಖ ಉದ್ಯಮಗಳು ಮತ್ತು ಉದ್ಯಮಿಗಳ ಪರಿಚಯವಿದೆ. ಸಾಮಾನ್ಯವಾಗಿ ವಾರದ ಯಾವುದಾದರೊಂದು ದಿನ ಎಲ್ಲಾ ಊರುಗಳಲ್ಲಿ ಸಂತೆಯಾದರೆ ಕ್ಯಾತ್ಸಂದ್ರದಲ್ಲಿ ಮಂಗಳವಾರ ಸಂತೆ! ಅದು ಇವತ್ತಿಗೂ ನನಗೆ ಆಶ್ಚರ್ಯದ ಸಂಗತಿಯೇ ಆಗಿದೆ. ಅದಕ್ಕೆ ಪೂರಕವೆಂಬಂತೆ ಯಾವುದೇ ವಿಶೇಷವಿಲ್ಲದಿದ್ದರೂ ಹಳ್ಳಿಗರಿಗೆ ಅಂದು ಸಂತಸದ ದಿನವಾಗಿದೆ. ಜಟಕಾ ಬಂಡಿ – ಎತ್ತಿನ ಗಾಡಿಗಳ ವಿವರ ವರ್ಣನೆಗಳನ್ನು ಓದುತ್ತಿದ್ದರೆ ನಮಗೂ ಅವುಗಳಲ್ಲಿ ಓಡಾಡುವ ಮನಸ್ಸಾಗುತ್ತದೆ. ಊರಿಗೆ ಶತಮಾನದ ಹಿಂದೆಯೇ ರೈಲಿನ ಸಂಪರ್ಕಕ್ಕೆ ಬಂದಂತಹ ಇತಿಹಾಸವಿದೆ. ನಮ್ಮೂರ ಶಾಲೆಗಳು ಅಧ್ಯಾಯದಲ್ಲಿ ಶೈಕ್ಷಣಿಕವಾಗಿ ಊರನ್ನು ರೂಪಿಸಿದ ಶಾಲೆಗಳ, ಪಾಠದ ಮನೆಗಳ, ಶಿಕ್ಷಕರ ಪರಿಚಯವಿದೆ. ನಮ್ಮೂರ ಸಂಘ ಸಂಸ್ಥೆಗಳು ಅಧ್ಯಾಯದಲ್ಲಿ ಊರಿನ ಸಂಘ ಸಂಸ್ಥೆಗಳ, ಭಕ್ತಮಂಡಲಿಗಳ, ರೈತ ಸಮಿತಿಗಳ, ಸಹಕಾರ ಸಂಘಗಳ, ಇಂದಿರಾ ಮಹಿಳಾ ಸಮಾಜದ ಕೆಲಸಕಾರ್ಯಗಳನ್ನು ದಾಖಲಿಸಲಾಗಿದೆ. ಊರಿನ ರಾಜಕಾರಣಿಗಳ ದಾಖಲೆ ನೀಡುವ ನಮ್ಮೂರ ರಾಜಕಾರಣ ಅಧ್ಯಾಯವಿದೆ. ಊರಿನ ಗಣ್ಯರಾಗಿ ಸಮಾಜಸೇವೆಯಲ್ಲಿ ತೊಡಗಿದ ಧುರೀಣರ ಪರಿಚಯವಿದೆ. ಅಷ್ಟೇ ಅಲ್ಲದೆ ಊರಿನ ಪ್ರಮುಖ ವಿದ್ಯಾಸಂಸ್ಥೆಗಳ ಮಾಲೀಕರ, ಹೋಟೆಲ್ ಉದ್ಯಮಿಗಳ, ವೈದ್ಯರ, ಪತ್ರಿಕಾ ಪ್ರತಿನಿಧಿಗಳ, ಟೈಲರ್‌ಗಳ, ಕೇಬಲ್ ಆಪರೇಟರ್‌ಗಳ ಪರಿಚಯವಿದೆ. ಊರಿನ ಬಗ್ಗೆ ಅತೀವ ಆಸಕ್ತಿ ಹೊಂದಿರುವವರ ಜ್ಞಾನದಾಹ ತಣಿಸಲು ಪ್ರಥಮ ದಾಖಲೆ ಸಂಗತಿಗಳ ಪಟ್ಟಿಯಿದೆ. 

ಪುಸ್ತಕದ ಕಡೆಯ ಭಾಗದಲ್ಲಿ ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಚೊಚ್ಚಲ ಕೃತಿ ಬರೆದು ಸಾರಸ್ವತ ಲೋಕ ಪ್ರವೇಶಿಸಿ ಇಂದಿಗೂ ಲವಲವಿಕೆಯಿಂದ ಸಾಹಿತ್ಯದ ಮತ್ತು ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾ, ಹಿರಿಯರನ್ನು ಗೌರವಿಸುತ್ತಾ, ಕಿರಿಯರನ್ನು ಪ್ರೋತ್ಸಾಹಿಸುತ್ತಾ ತಮ್ಮ ಜೀವನವನ್ನು ಸಾಕಾರಗೊಳಿಸಿಕೊಂಡಿರುವ ಡಾ|| ವಿದ್ಯಾವಾಚಸ್ಪತಿ ಕವಿತಾಕೃಷ್ಣರವರ ಕಿರುಪರಿಚಯವಿದೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿಗೆ ಅನ್ವರ್ಥವಾಗುವಂತೆ ತಮ್ಮ ನೆಚ್ಚಿನ ಊರನ್ನು ಹಲವಾರು ದಾಖಲೆಗಳ ನೆರವಿನೊಂದಿಗೆ, ಚಿತ್ರಗಳ ಸಹಕಾರದೊಂದಿಗೆ ವಿದ್ಯಾವಾಚಸ್ಪತಿಗಳು ಅಕ್ಷರಗಳ ಮೂಲಕ ಸಂಕಲಿಸಿ ನಮ್ಮ ಕೈಗಿಟ್ಟಿದ್ದಾರೆ. ಆಸಕ್ತರು ತಮ್ಮ ಸಂಗ್ರಹದಲ್ಲಿ ಇಟ್ಟುಕೊಳ್ಳಬೇಕಾದ ಪುಸ್ತಕವಿದಾಗಿರುವುದರ ಜೊತೆಗೆ ಪ್ರತಿಯೊಬ್ಬ ಸಾಹಿತಿಯೂ ತನ್ನ ಏಳ್ಗೆಗೆ ಕಾರಣವಾದ ಊರನ್ನು ಹೇಗೆ ಅಕ್ಷರಗಳಲ್ಲಿ ಹಿಡಿದಿಟ್ಟು ಮುಂದಿನ ಪೀಳಿಗೆಗೆ ಅದನ್ನು ಉಡುಗೊರೆಯಾಗಿ ನೀಡಿ ಹುಟ್ಟಿದ ಊರಿನ ಋಣವನ್ನು ತೀರಿಸಬೇಕು ಎಂಬುದಕ್ಕೆ ಮಾದರಿಯೂ ಆಗಿದ್ದಾರೆ. 

ನಾಡುಕೊಂಡ ಶ್ರೇಷ್ಠ ಭಾಷಣಕಾರರಾಗಿರುವ ಡಾ|| ವಿದ್ಯಾವಾಚಸ್ಪತಿ ಕವಿತಾಕೃಷ್ಣರವರ ಭಾಷಣವನ್ನು ಕೇಳಿದವರು ಈ ಪುಸ್ತಕವನ್ನು ಓದಿದಾಗ ಅವರ ನಿರರ್ಗಳ ಭಾಷಣದಂತೆಯೇ ಈ ಪುಸ್ತಕವು ಓದಿಸಿಕೊಳ್ಳುವದರಲ್ಲಿ ಅಚ್ಚರಿಯಿಲ್ಲ. ಓದುಗ ಪುಸ್ತಕ ಓದಲು ಆರಂಭಿಸಿದ ಕೆಲವು ಕ್ಷಣಗಳಲ್ಲೇ ‘ನೆನೆವುದೆನ್ನ ಮನಂ ಕ್ಯಾತಸಂದ್ರಮಂ’ ಎಂಬ ಸಾಲಿನಲ್ಲಿ ‘ಕ್ಯಾತಸಂದ್ರಮಂ’ ಎಂಬ ಪದದ ಜಾಗದಲ್ಲಿ ತನ್ನ ಊರನ್ನು ಪ್ರತಿಷ್ಠಾಪಿಸಿಕೊಂಡರೆ ಸೋಜಿಗವೇನಿಲ್ಲ.

***


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಡಾ|| ರಾಜಕುಮಾರ್‌ರವರ ವೃತ್ತಿಪರತೆ

 ಡಾ|| ರಾಜಕುಮಾರ್‌ರವರ ವೃತ್ತಿಪರತೆ “ಡಾ|| ರಾಜಕುಮಾರ್‌ರವರನ್ನು ನಾನು ‘ಬಂಗಾರದ ಮನುಷ್ಯ’       ಎನ್ನುವ ಬದಲು ‘ಬೆವರಿನ ಮನುಷ್ಯ’ ಎನ್ನುತ್ತೇನೆ”  – ಡಾ...