“ಚಿಕ್ಕವಸ್ತುಗಳನ್ನು ಕಡೆಗಣಿಸಬೇಡಿ, ಗಾಳಿಪಟ ಹಾರುವುದು ಅದರ ಬಾಲದಿಂದಲೇ”.
- ಹವೈನ್ ಗಾದೆ.
ಆಷಾಢವೆಂಬ ಗಾಳಿಮಾಸ ಶುರುವಾಗುತ್ತಿರುವ ಮುನ್ಸೂಚನೆ ನಮಗೆಲ್ಲಾ ಸ್ವಲ್ಪ ದಿನಗಳ ಮುಂಚೆಯೇ ಸಿಗುತ್ತಿತ್ತು. ಶಾಲೆಯಿಂದ ಹೊರಟಾಗಲೇ ಸುಯ್ ಎಂದು ಬೀಸುತ್ತಿದ್ದ ಗಾಳಿ ನಮ್ಮನ್ನೆಲ್ಲಾ ಒಂದೇ ಬಾರಿ ಮನೆಯ ಹತ್ತಿರಕ್ಕೆ ಹೊತ್ತಯ್ಯಬಾರದೇ ಎಂಬ ಆಸೆ ಇಣುಕುತ್ತಿತ್ತು. ಮೋಡ ಕವಿದ ವಾತಾವರಣ, ಇದ್ದಕ್ಕಿದ್ದಂತೆ ಯಾವ ಆರ್ಭಟವೂ ಇಲ್ಲದೆ ಸುರಿಯುತ್ತಿದ್ದ ಮಳೆ, ದೇಹ ಮತ್ತು ಮನಸ್ಸು ಎರಡನ್ನೂ ತಂಪಾಗಿಸುತ್ತಿದ್ದ ತಂಗಾಳಿ ಬೆಚ್ಚನೆಯ ಮುದ ಕೊಡುತ್ತಿತ್ತು.
ಆ ದಿನಗಳಲ್ಲಿ ಶನಿವಾರದ ಮಾರ್ನಿಂಗ್ ಸ್ಕೂಲ್ ಮುಗಿಸಿಕೊಂಡು ನಾವೊಂದಷ್ಟು ಹುಡುಗರು ಮನೆಯಲ್ಲಿ ಕೊಟ್ಟ ಎನನ್ನಾದರೂ ತಿಂಡಿಯನ್ನು ತಿಂದುಕೊಂಡು ಮಧ್ಯಾಹ್ನದ ಹೊತ್ತಿಗೆ ನನ್ನ ಗುಬ್ಬಿ ಮನೆಯ ಎದುರಿಗಿದ್ದ ಹಿಟ್ಟಿನ ಗಿರಣಿಯ ಮಾಲೀಕರಾದ ಆದಿರಾಜುರವರಿಗೆ “ಆದಣ್ಣ...ಆದಪ್ಪಜ್ಜಿ...ಗಾಳಿಪಟ ಮಾಡಿಕೊಡಿ” ಎಂದು ದಂಬಾಲು ಬೀಳುತ್ತಿದ್ದೆವು. ನಮ್ಮ ಗುಂಪಿನ ಹುಡುಗರು ಅಷ್ಟೇನು ಸ್ಥಿತಿವಂತರಲ್ಲದ ಕಾರಣ ಸೇಠು ಅಂಗಡಿಗಳಲ್ಲಿ ಸಿಗುತ್ತಿದ್ದ ರೆಡಿಮೇಡ್ ಗಾಳಿಪಟವನ್ನು ಕೊಂಡುಕೊಳ್ಳಲು ಹಣವಿರುತ್ತಿರಲಿಲ್ಲ, ನಾವೆಲ್ಲಾ ಪ್ರೀತಿಯಿಂದ ಆದಣ್ಣನ ಕೈಹಿಡಿದು ಜಗ್ಗತೊಡಗಿದರೆ ಅವರೆಂದೂ ಇಲ್ಲ ಎಂದದ್ದೇ ಇಲ್ಲ. “ಬರ್ತೀನಿ ಕೈ ಬಿಡಿ” ಎಂದು ಬೀದಿಯ ಯಾವುದಾದರೊಂದು ಮನೆಯ ವಿಶಾಲವಾದ ಜಗುಲಿಯಲ್ಲಿ ಆಸೀನರಾಗುತ್ತಿದ್ದರು. “ಏಯ್, ನೀನ್ ಹೋಗಿ ಮನೇಲಿ ಹೊಗೆಸೊಪ್ಪಿನ ಡಬ್ಬ ತೆಗೆದುಕೊಂಡು ಬಾ” ಅಂತಿದ್ರು. ಅವರು ಯಾರಿಗೆ ಹೇಳುವರೋ ಅವರು ಮೊದಲೇ ಇವರ ಆಣತಿಗೆ ಕಾಯ್ಯುತ್ತಿದ್ದವರಂತೆ ರೊಯ್ ಅಂತಾ ಹೋಗಿ ರೊಯ್ ಅಂತ ಬಂದು ಬುಸುಗುಡುತ್ತಾ ಹೊಗೆಸೊಪ್ಪಿನ ಡಬ್ಬವನ್ನು ಅವರ ಮುಂದೆ ಇಡುತ್ತಿದ್ದರು. ಡಬ್ಬದಿಂದ ಹೊಗೆಸೊಪ್ಪನ್ನು ಎಲೆ ಅಡಿಕೆಯ ಜೊತೆ ಬೆರೆಸಿ ಬಾಯಿಗಿಡುತ್ತಾ “ಯಾರ್ಯಾರಿಗೆ ಗಾಳಿಪಟ ಬೇಕೋ ಅವರು ನ್ಯೂಸ್ ಪೇಪರ್ರು, ಗರಿ ಕಡ್ಡಿ, ದಾರ ಮತ್ತು ಸ್ವಲ್ಪ ಗೊಂದು ತಗೊಂಡು ಬನ್ನಿ” ಎನ್ನುತ್ತಿದ್ದರು. ಕೆಲವರು ಮೊದಲೇ ಇವುಗಳನ್ನೆಲ್ಲಾ ತಂದಿರಿಸಿಕೊಂಡು “ನಂಗೆ ಮೊದ್ಲು ಮಾಡಿ ಕೊಡಿ” ಎಂದು ವಿನಂತಿಸುತ್ತಿದ್ದರು. ಬೇಕಾದ ವಸ್ತುಗಳನ್ನು ತರದವರು ಮತ್ತೆ ಮನೆಯಕಡೆ ಓಡುತ್ತಿದ್ದರು. “ಆದಣ್ಣ” ಅಂದರೂ ಆಯ್ತು ಅಥವಾ “ಆದಪ್ಪಜ್ಜಿ” ಎಂದರೂ ಸರಿಯೇ ನಗುನಗುತ್ತಲೇ ಗಾಳಿಪಟ ಮಾಡಲು ಶುರುಮಾಡುತ್ತಿದ್ದರು.
ತಮ್ಮ ಹೊಗೆಸೊಪ್ಪಿನ ಡಬ್ಬದಲ್ಲೇ ಇರುತ್ತಿದ್ದ ಕೆಲವು ಉಪಕರಣಗಳಲ್ಲಿ ಒಂದಾದ ಕತ್ತರಿಯನ್ನು ತೆಗೆದು ಚಕಚಕನೆ ಪೇಪರ್ ಕಟ್ ಮಾಡಿಕೊಂಡು, ಗರಿಕಡ್ಡಿಯನ್ನು ಅಳೆತೆಗೆ ತಕ್ಕಂತೆ ಮುರಿದುಕೊಂಡು, ಡೈಮಂಡ್ ವಿನ್ಯಾಸಕ್ಕೆ ಕಟ್ಟಿ ಅದನ್ನು ಪೇಪರಿಗೆ ಅಂಟಿಸಿ, ಒಣಗಿದ ಕೂಡಲೇ ಸ್ವಲ್ಪ ದಾರವನ್ನು ಕಟ್ಟಿ, ಬಾಲಂಗೋಚಿಯನ್ನು ಕಟ್ಟಿ, ಕೈಯಲ್ಲಿಡಿದು, ಮೇಲಕ್ಕೆತ್ತಿ ಸರಿಯಾಯಿತೇ ಎಂದು ಪರೀಕ್ಷಿಸಿ ನೋಡುತ್ತಿದ್ದರು. “ಸ್ವಲ್ಪ ವ್ಯತ್ಯಾಸವಾದರೂ ಲಾಗ ಹಾಕ್ಬುಡುತ್ತೆ” ಎಂದು ನಗುತ್ತಿದ್ದರು. ಅವರ ಈ ಮಾತುಗಳು ಜೀವನಕ್ಕೂ ಅನ್ವಯಿಸುತ್ತವೆ ಎಂಬುದು ನಮಗೆಲ್ಲಾ ದೊಡ್ಡವರಾದ ಮೇಲೆಯೇ ತಿಳಿದದ್ದು. “ಜೀವನವೇ ಗಾಳಿಪಟವೆಂದುಕೊಂಡರೇ, ಮನಸ್ಸು ಅದರ ಬಾಲವಲ್ಲದೇ ಮತ್ತೇನು? ಮನಸ್ಸೆಂಬ ಬಾಲವಿದ್ದರೆ ಜೀವನವೆಂಬ ಗಾಳಿಪಟವನ್ನು ಎತ್ತರೆತ್ತರಕ್ಕೆ ಕರೆದೊಯ್ಯಬಲ್ಲದು ಅಲ್ಲವೇ?”
ಸರಿ, ಸಿದ್ದವಾದ ಗಾಳಿಪಟವನ್ನು “ಎಲ್ಲಿ ಒಂದು ರೌಂಡ್ ಹೋಗ್ಬ” ಎಂದೊಡನೆ ಗಾಳಿಪಟ ಮಾಡಿಸಿಕೊಂಡವನು ಅದನ್ನು ತೆಗೆದುಕೊಂಡು ಅಲ್ಲೇ ಬೀದಿಯಲ್ಲೆ ಓಡುತ್ತಿದ್ದನು. ಮನೆಗಳ ಹತ್ತಿರ ಬೀಸುತ್ತಿದ್ದ ಗಾಳಿ ಗಾಳಿಪಟ ಹಾರಿಸಲು ಸೂಕ್ತವಲ್ಲದಿದ್ದರೂ ಅದನ್ನು ಪರಿಕ್ಷೀಸುವ ಸಲುವಾಗಿ ಹಿಂದಕ್ಕೆ ನೋಡಿಕೊಂಡೇ ಓಡುತ್ತಿದ್ದ ಹುಡುಗನ ವೇಗಕ್ಕೆ ತಕ್ಕಂತೆ ಹಾರುತ್ತಿತ್ತು. ಒಂದು ರೌಂಡ್ ಬಂದ ಮೇಲೆ ಕುಳಿತಲ್ಲಿಂದಲೇ ಗಮನಿಸುತ್ತಿದ್ದ ಆದಣ್ಣನವರು ಗಾಳಿಪಟ ಸರಿಯಿದಯೇ ಇಲ್ಲವೇ ಎಂದು ಹೇಳಿ ಆಕಸ್ಮಾತ್ತೆನಾದರೂ ತೊಂದರೆ ಕಂಡರೆ ಅದನ್ನು ಸರಿ ಮಾಡುತ್ತಿದ್ದರು.
ಹೀಗೆಯೇ ನಾಲ್ಕೈದು ಗಾಳಿಪಟವನ್ನು ನಮಗೆಲ್ಲರಿಗೂ ಮಾಡಿಕೊಟ್ಟು, “ಹೋಗಿ ಹೈಸ್ಕೂಲ್ ಫೀಲ್ಡಿನಲ್ಲಿ ಹಾರಿಸಿ. ಹುಷಾರು...ಲೈಟ್ ಕಂಬದ ಹತ್ತಿರ, ಮರದ ಹತ್ತಿರ ಹಾರಿಸಬೇಡಿ” ಎಂದು ಎಚ್ಚರಿಸುತ್ತಿದ್ದರು. ಅವರವರ ಶಕ್ತ್ಯಾನುಸಾರ ಉದ್ದವಿರುತ್ತಿದ್ದ ದಾರವನ್ನು ಬಿದಿರು ಕಡ್ಡಿಗೋ, ಸರ್ವೆಕಡ್ಡಿಗೋ ಸುತ್ತಿಕೊಂಡು ನಾವೆಲ್ಲರು ಫೀಲ್ಡಿಗೆ ಹೋಗುತ್ತಿದ್ದೆವು. ದಾರವಿಲ್ಲದವರಿಗೆ ವಾಪಸ್ಸು ಕೊಡಬೇಕೆಂದು ಹೇಳಿ ಅವರ ಬಳಿ ಇರುತ್ತಿದ್ದ ದಾರವನ್ನು ಕೊಡುತ್ತಿದ್ದರು ನಮ್ಮೆಲ್ಲರ ಪ್ರೀತಿಯ ಆದಪ್ಪಾಜಿ. ನಾವೆಲ್ಲರೂ ಹಳೆಯ ನ್ಯೂಸ್ ಪೇಪರ್ಗಳಲ್ಲೇ ಗಾಳಿಪಟವನ್ನು ಮಾಡಿಸಿಕೊಳ್ಳುತ್ತಿದ್ದರಿಂದ ಮತ್ತು ಗೊಂದೇನಾದರೂ ಬೇಕೆಂದರೆ ನಮ್ಮ ಮನೆಯಲ್ಲಿ ಪೇಪರ್ ಕವರ್‍ಗಳನ್ನು ಮಾಡಲು ಸದಾ ಸಿದ್ದವಿರುತ್ತಿದ್ದ ಮೈದಾ ಹಿಟ್ಟಿನ ಅಂಟನ್ನು ಕೊಡುತ್ತಿದ್ದರಿಂದ ಮತ್ತು ಮುಖ್ಯವಾಗಿ ಗಾಳಿಪಟವನ್ನು ತಯಾರು ಮಾಡಲು ಆದಣ್ಣನವರು ಹಣವನ್ನು ತೆಗೆದುಕೊಳ್ಳುತ್ತಿರಲಿಲ್ಲವಾದ್ದರಿಂದ ಖರ್ಚೇನು ಇರುತ್ತಿರಲ್ಲಿಲ್ಲ. ಆದರೆ, ಯಾರಿಗಾದರೂ ಬಣ್ಣದ ಗಾಳಿಪಟ ಬೇಕಿದ್ದರೆ ಅವರು ಬಣ್ಣದ ಪೇಪರ್ ತಂದುಕೊಡಬೇಕಿತ್ತು ಮತ್ತು ಆದಪ್ಪಾಜಿಗೆ ಎಲೆ ಅಡಿಕೆಯನ್ನೊ, ಹೊಗೆಸೊಪ್ಪನ್ನೊ ತಂದುಕೊಡಬೇಕಿತ್ತು. ಹಣವನ್ನು ಮಾತ್ರ ಯಾವುದೇ ಕಾರಣಕ್ಕೂ ತೆಗೆದುಕೊಳ್ಳುತ್ತಿರಲಿಲ್ಲ.
ಗಾಳಿಪಟವನ್ನು ಹಿಡಿದು ನಾವೆಲ್ಲರೂ ಹೈಸ್ಕೂಲ್ ಫೀಲ್ಡಿಗೆ ಲಗ್ಗೆ ಹಾಕುತ್ತಿದ್ದೆವು. ವಿಶಾಲವಾದ ಗುಬ್ಬಿ ಮೈದಾನದಲ್ಲಿ ಅದಾಗಲೇ ಕೆಲವು ಗಾಳಿಪಟ ಪ್ರೇಮಿಗಳು ಗಾಳಿಪಟ ಆರಿಸುವುದರಲ್ಲಿ ಮಗ್ನರಾಗಿರುತ್ತಿದ್ದರು. ನಾವೆಲ್ಲರು ನಮ್ಮ ನಮ್ಮ ಗಾಳಿಪಟವನ್ನು ಮೈದಾನಕ್ಕಿಂತ ವಿಶಾಲವಾದ ಆಕಾಶಕ್ಕೆ ಹಾರಿಬಿಡುತ್ತೆದ್ದೆವು. ಅವುಗಳು ಮೇಲೆ ಮೇಲೆ ಹೋಗುತ್ತಿದ್ದಂತೆ ನಮ್ಮ ಹರ್ಷವೂ ಮುಗಿಲು ಮುಟ್ಟುತ್ತಿತ್ತು. ಸಂಜೆಯಾಗುವಷ್ಟರಲ್ಲಿ ಮನಸಿಲ್ಲದಿದ್ದರೂ ಮುಷ್ಟಿಯಲ್ಲಿಡಿದ ಖುಷಿಯನ್ನು ಹೊತ್ತು ಮನೆಗೆ ತೆರಳುತ್ತಿದ್ದೆವು. ಹೇಗಿದ್ದರೂ ನಾಳೆ ಭಾನುವಾರ! ಎಂಬ ಸಮಾಧಾನ ಜೊತೆಗಿರುತ್ತಿತ್ತು.
ಆಷಾಢ ಮುಗಿಯುವವರೆಗೂ ಡಬ್ಬಗಳಲ್ಲೇ ದುಃಖಿಸುತ್ತಿದ್ದ ಗೋಲಿಗಳು, ಮಂಚದ ಕೆಳಗೆ ಯಾವುದೋ ಮೂಲೆಯಲ್ಲಿ ನರಳುತ್ತಿದ್ದ ಲಗೋರಿ ಬಾಲು, ಕ್ರಿಕೆಟ್ ಬ್ಯಾಟುಗಳು ಗಾಳಿಪಟವನ್ನು ನೋಡಿ ಹೊಟ್ಟೆ ಉರಿದುಕೊಂಡಿರಲು ಸಾಕು. ಅದೇಕೋ, ನಾವೆಲ್ಲ ಇನ್ನೇನು ಹೈಸ್ಕೂಲಿಗೆ ಕಾಲಿಟ್ಟಾಗ ಅದ್ಯಾವ ಗಾಳಿ ಬೀಸಿತೋ ಗಾಳಿಪಟಗಳೆಲ್ಲಾ ಅಟ್ಟ ಸೇರಿದವು. ನಮ್ಮ ಪ್ರೀತಿಯ ಆದಣ್ಣನವರ ಸುತ್ತ ಆಷಾಢಗಳಲ್ಲಿ ನಮಗಿಂತಲೂ ಕಿರಿಯ ಹುಡಗರು ಸೇರತೊಡಗಿದರು.
ನಾನೂ ಕೆಲವು ಕಿರಿಯರಿಗೆ ಗಾಳಿಪಟ ಮಾಡಿಕೊಡಲು ಪ್ರಯತ್ನಿಸಿದ್ದೆನಾದರೂ, ಆದಣ್ಣನವರಂತೆ ಯಶಸ್ವಿಯಾಗಿರಲಿಲ್ಲ. ಆದರೆ, ಆಷಾಢದ ಬಾಲ್ಯದ ದಿನಗಳಲ್ಲಿ ಗಾಳಿಪಟವೆಂಬ ಒಂದು ಆಕರ್ಷಣೆಗೆ ಬಾಲವಾಗಿದ್ದ ನನ್ನ ಮನ ಇದೀಗ ಗಾಳಿಪಟವೆಂದರೆ, “ಜೀವನವೇ ಒಂದು ಗಾಳಿಪಟ” ಎಂಬ ತತ್ತ್ವ ಹೇಳಲು ಶುರುಮಾಡುತ್ತದೆ.
ಹೀಗೆಲ್ಲಾ ಗಾಳಿಪಟದ ಬಗ್ಗೆ ಚಿಂತಿಸಿ ಅದರ ಬಗ್ಗೆ ತಿಳಿದುಕೊಳ್ಳಲು ಗೂಗಲಿಸಿದಾಗ ಒಂದು ಪುಸ್ತಕವೇ ಆಗಬಹುದಾದಷ್ಟು ಮಾಹಿತಿ ಅಂತರ್ಜಾಲದಲ್ಲಿ ಸಿಕ್ಕಿತ್ತಾದರೂ ಅದರಲ್ಲಿ ನನ್ನ ಭಾವನಗಳೇ ಇರಲಿಲ್ಲ. ಯಾವತ್ತಾದರೂ ಒಂದು ದಿನ ನನ್ನ ಮತ್ತು ಗಾಳಿಪಟದ ನಂಟು ವಿಕಿಪೀಡಿಯಾದಲ್ಲಿ ಸೇರುತ್ತದೇನೋ ಎಂಬ ನನ್ನನೆಂದೂ ಕೈಬಿಡದ ನನ್ನ ಆತ್ಮವಿಶ್ವಾಸ ಮನದಲ್ಲಿ ಕನಸೊಂದನ್ನು ಮೂಡಿಸುತ್ತಿದೆ. ಅದನ್ನು ನಿಮ್ಮಲ್ಲಿ ಹೇಳಿಯೇ ಬಿಡುತ್ತೇನೆ. ಅಷ್ಟಕ್ಕೂ ನಿಮ್ಮಲಲ್ಲದೆ ಇನ್ಯಾರಲ್ಲಿ ನನ್ನ ಕನಸನ್ನು ಹಂಚಿಕೊಳ್ಳಲಿ!
ಸಮುದ್ರ ತೀರ ಗಾಳಿಪಟ ಹಾರಿಸಲು ಸೂಕ್ತ ಸ್ಥಳವಂತೆ!, ಕೊರಿಯದಲ್ಲಿ ಗಂಡು ಮಕ್ಕಳ ಹೆಸರು ಮತ್ತು ಜನ್ಮ ದಿನಾಂಕವನ್ನು ಗಾಳಿಪಟದ ಮೇಲೆ ಬರೆದು, ಅದನ್ನು ಹಾರಿಸಿ, ನಂತರ ದಾರವನ್ನು ಕತ್ತರಿಸಿ ಗಾಳಿಪಟದೊಡನೆ ಎಲ್ಲ ದುಷ್ಟಶಕ್ತಿಗಳು ಹೊರಟುಹೋಗಲಿ, ಮಗುವಿಗೆ ಒಳ್ಳೆಯದಾಗಲಿ ಎಂಬ ಪದ್ದತಿಯಿದೆಯಂತೆ! ಮತ್ತು ವಿಯೆಟ್ನಾಂನಲ್ಲಿ ಬಾಲದ ಬದಲಿಗೆ ಸಣ್ಣ ಕೊಳಲನ್ನು ಕಟ್ಟಿ ಗಾಳಿಪಟವನ್ನು ಹಾರಿಸಿ ಕೊಳಲಿನ ನಾದವನ್ನು ಆಲಿಸುತ್ತಾರಂತೆ!
ನಂದೇನಪ್ಪಾ ಕನಸು ಅಂದರೆ : “ಕಲ್ಪನೆಯೇ ಅತಿ ಎತ್ತರಕ್ಕೆ ಹಾರಬಹುದಾದ ಗಾಳಿಪಟ” ಎಂದು ಅಮೆರಿಕದ ನಟಿ ಲೌರೆನ್ ಬಕಲ್ ಹೇಳಿದಂತೆ, ನಾನು ತುಂಬಾ ಇಷ್ಟಪಡುವ ಸ್ಥಳ ಕನ್ಯಾಕುಮಾರಿಯ ಸಮುದ್ರ ತೀರದಲ್ಲಿ, ನನ್ನ ನಲ್ಲೆಯೊಡನೆ, ನಮ್ಮ ಮುದ್ದಿನ ಮಗಳೊಂದಿಗೆ ಅವಳ ಹೆಸರು, ಜನ್ಮದಿನಾಂಕವನ್ನು ಬರೆದು, ಬಾಲದ ಬದಲು ನಮ್ಮ ಮಗಳಷ್ಟೇ ಪುಟ್ಟದಾದ ಕೊಳಲೊಂದನ್ನು ಕಟ್ಟಿ, ಮಕರ ಸಂಕ್ರಾಂತಿಯಂದು ಗಾಳಿಪಟವನ್ನು ಹಾರಿಬಿಡಬೇಕೆಂದು!
ಎಂದಿನಂತೆ ನಿಮ್ಮ ಪ್ರೀತಿಯ ಹಾರೈಕೆಯಿರಲಿ.
- ಗುಬ್ಬಚ್ಚಿ ಸತೀಶ್.
ಎಷ್ಟು ಸೊಗಸಾದ ಬರಹ... ಒಂದು ಕ್ಷಣ ಗಾಳೀಪಟದೊಂದಿಗೆ ನಮ್ಮದೇ ಬಾಲ್ಯಕ್ಕೆ ಹಾರಿಹೋಗಿ ಬಂದಂತಾಯಿತು
ಪ್ರತ್ಯುತ್ತರಅಳಿಸಿಲೇಖನ ತುಂಬಾ ಚನ್ನಾಗಿದೆ ಬಾಲ್ಯದ ನೆನಪುಗಳು ಮರುಕಳಿಸಿದವು
ಪ್ರತ್ಯುತ್ತರಅಳಿಸಿಹಗೆ ಕೊರಿಯ ಮತ್ತು ವಿಯೆಟ್ನಾಂ ನಲ್ಲಿನ ಗಾಳಿಪಟದ ವಿಶಿಷ್ಟತೆ ಬಗ್ಗೆ ತಿಳಿಸಿದ್ದಿರ ಧನ್ಯವಾದ
ಹಾಗೆ ನಿಮ್ಮ ಕನ್ಯಾಕುಮಾರಿಯ ಕನಸು ಆದಷ್ಟು ಬೇಗ ನನಸಾಗಲಿ
ಪ್ರೀತಿಯಿಂದ
ಮರೀಚಿಕೆ
nice one sir...
ಪ್ರತ್ಯುತ್ತರಅಳಿಸಿNice one!!
ಪ್ರತ್ಯುತ್ತರಅಳಿಸಿRaghu
ನಿಮ್ಮ ಬರಹ ಓದುತ್ತಿದ್ದೆ. ಗಾಳಿಪಟ ದೊ೦ದಿಗೆ ನಮ್ಮೆಲ್ಲರ ಬಾಲ್ಯದ ಬದುಕು ಬೆಸೆದಿದೆ, ನಿಮ್ಮ ಬರಹ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿnice one :)
ಪ್ರತ್ಯುತ್ತರಅಳಿಸಿSir Congragulations that this article got prize....
ಪ್ರತ್ಯುತ್ತರಅಳಿಸಿಬರಹ ತು೦ಬಾ ಚೆನ್ನಾಗಿದೆ...
ಪ್ರತ್ಯುತ್ತರಅಳಿಸಿಈ ಲೇಖನಕ್ಕೆ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿರುವುದಕ್ಕೆ ಅಭಿನ೦ದನೆಗಳು.
ಪ್ರಥಮ ಬಹುಮಾನ ವಿಜೇತರಿಗೆ ಅಭಿನಂದನೆಗಳು.
ಪ್ರತ್ಯುತ್ತರಅಳಿಸಿಮತ್ತೆ ನಮ್ಮನು ಬಾಲ್ಯಕ್ಕೆ ಕೊಂಡು ಹೋಗಿ, ಗಾಳಿ ಪಟ ಹಾರಿಸುವ ಉಮೇದಿಯನ್ನು ಪುನಃಶ್ಚೇತನಗೊಳಿಸಿದ್ದಕ್ಕಾಗಿ ಧನ್ಯವಾದಗಳು.
ನಿಮ್ಮ ಭಾಷೆಯ ಬಳಕೆಯಲ್ಲಿನ ಸಹಜತೆ - ಸರಳತೆ, ನಿರೂಪಣೆಯಲ್ಲಿ ಕಾಯ್ದುಕೊಳ್ಳುವ ಓದಿಸಿಕೊಳ್ಳುವ ಗುಣ ಪ್ರಶಂಸನೀಯ.
hai sir , cogrates ,ondu pustak copy nange kalisadidakke nima mele kopa ide nange
ಪ್ರತ್ಯುತ್ತರಅಳಿಸಿಸತೀಶ್ ಸರ್,
ಪ್ರತ್ಯುತ್ತರಅಳಿಸಿಗಾಳಿಪಟದ ಬಾಲ್ಯದ ನೆನಪು ತುಂಬಾ ಚೆನ್ನಾಗಿ ಬರೆದಿದ್ದೀರಿ. ನೀವು ಇಂಥ ಲೇಖನಗಳನ್ನು ಚೆನ್ನಾಗಿ ಬರೆಯುತ್ತೀರಿ. ಮತ್ತಷ್ಟು ಬರೆಯಿರಿ. ನನ್ನ ಬಾಲ್ಯದ ಗಾಳಿಪಟ ಹಾರಿಸುವಿಕೆಯ ನೆನಪು ಕಾಡಿತು ನಿಮ್ಮ ಲೇಖನವನ್ನು ಓದಿ.
ನಿಮ್ಮೆಲ್ಲರ ಪ್ರೀತಿಯ ಹಾರೈಕೆ, ಅಭಿನಂದನೆಗಳಿಗೆ ವಂದನೆಗಳು.
ಪ್ರತ್ಯುತ್ತರಅಳಿಸಿ