ಮಂಗಳವಾರ, ಆಗಸ್ಟ್ 22, 2023

ಕನ್ನಡಕ್ಕೆ ಬಂದ “ಜಂಗಲ್ ಬುಕ್”

 ಸ್ನೇಹಿತರೇ,

ಆಂಗ್ಲ ಸಾಹಿತಿ ಜೋಸೆಫ್‌ ರುಡ್ಯಾರ್ಡ್‌ ಕಿಪ್ಲಿಂಗ್‌ ಅವರ ಜಗತ್ಪ್ರಸಿದ್ದ “ಜಂಗಲ್‌ ಬುಕ್”‌ ಯಾರಿಗೆ ಗೊತ್ತಿಲ್ಲ? ಜಂಗಲ್‌ ಬುಕ್‌ ಎಂದರೆ ಮೊಗ್ಲಿ, ಶೇರ್‌ ಖಾನ್‌, ಭಗೀರ, ಭಾಲೂ ಇನ್ನು ಮುಂತಾದ ಪಾತ್ರಗಳು ನಮ್ಮ ಕಣ್ಮುಂದೆ ಸುಳಿದಾಡುತ್ತವೆ. ಕಾಡು ಕಣ್ಕಟ್ಟುತ್ತದೆ. ಭಾರತದಲ್ಲಿಯೇ 1865 ಡಿಸೆಂಬರ್‌ 30ರಂದು ಮುಂಬೈನಲ್ಲಿ ಜನಿಸಿದ ಕಿಪ್ಲಿಂಗ್‌ ತನ್ನ ಬಾಲ್ಯವನ್ನು ಕಳೆದದ್ದು ಇಲ್ಲಿಯೇ. ತನ್ನ ಆರನೇ ವರ್ಷದಲ್ಲಿ ವಿದ್ಯಾಭ್ಯಾಸಕ್ಕೆಂದು ಇಂಗ್ಲೇಂಡಿಗೆ ತೆರಳಿದ ಕಿಪ್ಲಿಂಗ್‌ ಹತ್ತು ವರುಷಗಳ ನಂತರ ಭಾರತಕ್ಕೆ ಹಿಂದಿರುಗಿದರು. ಕವಿ, ಕತೆಗಾರ, ಪತ್ರಕರ್ತ ಮತ್ತು ಕಾದಂಬರಿಕಾರರಾಗಿದ್ದ ಕಿಪ್ಲಿಂಗ್‌ ಆ ಕಾಲಘಟ್ಟದ ಜನಪ್ರಿಯ ಸಾಹಿತಿ. 1907ರಲ್ಲಿ ತಮ್ಮ ನಲವತ್ತೊಂದನೇಯ ವಯಸ್ಸಿನಲ್ಲಿಯೇ ಸಾಹಿತ್ಯಕ್ಕಾಗಿ ನೊಬೆಲ್‌ ಬಹುಮಾನವನ್ನು ಪಡೆದವರು. ಇವರ ʼಜಂಗಲ್‌ ಬುಕ್‌ʼ ಒಂದು ಪ್ರಸಿದ್ಧ ಕಥಾಸಂಕಲನ. ಈಗಾಗಲೇ ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದೆ. ಇದೀಗ ಕನ್ನಡಕ್ಕೂ ಬಂದಿದೆ.  



ಮೂಲ ಇಂಗ್ಲೀಷ್‌ ಭಾಷೆಯ ʼಜಂಗಲ್‌ ಬುಕ್‌ʼ ಕತೆಗಳು ಹುಟ್ಟಿದ್ದು ಅಮೇರಿಕಾದಲ್ಲಿ. ತಮ್ಮ ಪುಟ್ಟ ಮಗಳು ಜೋಸೆಫೀನ್‌ಗಳಿಗಾಗಿ ಈ ಕತೆಗಳನ್ನು ಕಿಪ್ಲಿಂಗ್ ಬರೆದರು ಎಂಬ ಹೇಳಿಕೆಯಿದೆ. ಆದರೆ, ದುರದೃಷ್ಟವಶಾತ್‌ ಜೋಸೆಫೀನ್‌ ನ್ಯೂಮೋನಿಯಾದಿಂದ ತನ್ನ ಆರನೇ ವಯಸ್ಸಿನಲ್ಲಿಯೇ ತೀರಿಕೊಳ್ಳುತ್ತಾಳೆ. ಕಿಪ್ಲಿಂಗ್‌ ತನ್ನ ಭಾರತದ ಕಾಡು-ಮೇಡುಗಳ ಸುತ್ತಾಟ, ಆಫ್ರಿಕಾ, ಜಪಾನ್‌, ಅಮೇರಿಕಾಗಳ ಪರ್ಯಟನೆಯ ಅನುಭವ ಮತ್ತು ಅಪಾರ ಓದಿನ ಅನುಭವಗಳಿಂದಲೇ ಈ ಕೃತಿಯನ್ನು ರಚಿಸಿದ್ದಾರೆ. ಪ್ರಾಣಿಗಳ ಪ್ರಪಂಚದ ಈ ಕೃತಿಯನ್ನು ಬರೆಯಲು ನಮ್ಮ ʼಪಂಚತಂತ್ರದ ಕತೆಗಳುʼ, ʼಜಾತಕ ಕತೆಗಳುʼ ಪ್ರೇರಣೆಯಾಗಿರುವುದನ್ನು ಅಲ್ಲಗೆಳೆಯಲಾಗದು. ಈ ಸಂಕಲನದ ಪಾತ್ರಗಳ ಹೆಸರುಗಳು ಕೂಡ ಭಾರತದವೇ ಆಗಿವೆ. ಕತೆ ನಡೆಯುವ ಪ್ರದೇಶಗಳಾದ ಸಿಯೋನಿ ಪರ್ವತಗಳು ಮಧ್ಯಪ್ರದೇಶದ ಕಾಡುಗಳಾದರೆ, ಮೋಗ್ಲಿಯನ್ನು ಹೊತ್ತೊಯ್ಯುವ ಮಂಗಗಳ ಕೋಲ್ಡ್‌ ಲೈರ್ಸ್‌ ಈಗಿನ ಚಿತ್ತೋರ್‌ಗಡ್‌, ಭಗೀರ ತಪ್ಪಿಸಿಕೊಂಡು ಬಂದಿದ್ದ ಓಡಾಯ್‌ ಫೋರ್‌ ರಾಜಸ್ಥಾನದ ಉದಯ್‌ಪುರ್‌ ಎಂದು ಗುರುತಿಸಲಾಗಿದೆ. ಜೊತೆಗೆ ರಷ್ಯಾದ ದ್ವೀಪಗಳ ಚಿತ್ರಣವೂ ಇದೆ. ಕಿಪ್ಲಿಂಗ್‌ ಅವರ ಈ ಕೃತಿಗೆ ಸ್ನೇಹಿತ ಸ್ಕೌಟ್‌ ಚಳುವಳಿಯ ಸ್ಥಾಪಕರಾದ ರಾಬರ್ಟ್‌ ಬಾಡೆನ್‌ ಪೋವೆಲ್‌ ಅವರ ಸ್ಕೌಟಿನ ನಿಯಮಗಳೂ ಕೂಡ ಪ್ರೇರಣೆಯಂತೆ. ಈ ನಿಯಮಗಳೇ ಇಲ್ಲಿ ಕಾಡಿನ-ನಾಡಿನ ನಿಯಮಗಳಾಗಿವೆ ಎಂದು ಕೂಡ ಹೇಳಲಾಗಿದೆ. ಬಹುಮುಖ್ಯವಾಗಿ 1872ರಲ್ಲಿ ಉತ್ತರಪ್ರದೇಶದ ಕಾಡಿನಲ್ಲಿ ತೋಳಗಳೊಂದಿಗೆ ಕಾಣಿಸಿಕೊಂಡ ʼದಿನಾ ಸಾನಿಚರ್‌ʼ ಅಥವಾ ʼಭಾರತೀಯ ತೋಳಗಳ ಪೋರʼ ಎಂದೇ ಪ್ರಸಿದ್ಧನಾದ ಹುಡುಗನೇ ʼಜಂಗಲ್‌ ಬುಕ್‌ʼ ಕತೆಗಳನ್ನು ಬರೆಯಲು ಪ್ರೇರಣೆಯೆಂದು ಸ್ವತಃ ಕಿಪ್ಲಿಂಗ್‌ ಅವರೇ ಹೇಳಿಕೊಂಡಿದ್ದಾರೆ. ತಮ್ಮ ಕತೆಗಳಲ್ಲಿ ಪ್ರಾಣಿಗಳ ಮೂಲಕ ಡಾರ್ವಿನ್ನನ ʼಬದುಕುಳಿಯುವ ಸಂಘರ್ಷʼವನ್ನು ಕೂಡ ಕಿಪ್ಲಿಂಗ್‌ ಹೇಳಿರುವುದು ಈ ಸಂಕಲನದ ಹೆಗ್ಗಳಿಕೆ.



ಇದುವರೆವಿಗೂ ಇಂಗ್ಲೀಷ್‌ ಅಕ್ಷರಗಳಲ್ಲಿ, ಅನಿಮೇಟೆಡ್‌ ಚಿತ್ರಗಳಲ್ಲಿ, ಸಿನಿಮಾಗಳಲ್ಲಿ, 3-ಡಿ ಸಿನಿಮಾಗಳಲ್ಲಿ ಲಭ್ಯವಿದ್ದ ಈ ಹೆಸರಾಂತ ಕತೆಗಳು ಈಗ ಕನ್ನಡದಲ್ಲಿಯೂ ಲಭ್ಯವಿದ್ದು, ಕನ್ನಡದ ಓದುಗರು ʼಜಂಗಲ್‌ ಬುಕ್‌ʼ ಕತೆಗಳಲ್ಲಿ ಕಳೆದುಹೋಗಬಹುದಾಗಿದೆ. ʼಜಂಗಲ್‌ ಬುಕ್‌ʼ ಎಂದೇ ಕನ್ನಡಕ್ಕೆ ಅನುವಾದಗೊಂಡಿರುವ ಈ ಸಂಕಲನದ ಅನುವಾದಕಿ ಶ್ರೀಮತಿ ಆಶಾ ಜಿ. ಅವರು ಸಶಕ್ತವಾಗಿ ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ʼನಾಡೋಜ ಡಾ| ಚಂದ್ರಶೇಖರ ಕಂಬಾರ ಪ್ರತಿಷ್ಠಾನʼದ ಪ್ರಧಾನ ಕಾರ್ಯದರ್ಶಿಗಳಾದ ಸಾಹಿತಿ ಶ್ರೀ ಹೊ.ನ. ನೀಲಕಂಠೇಗೌಡ ಅವರ ಬೆನ್ನುಡಿ ಈ ಪುಸ್ತಕಕ್ಕಿದೆ. ವಂಶಿ ಪಬ್ಲಿಕೇಷನ್ಸ್‌ ಈ ಕೃತಿಯನ್ನು ಪ್ರಕಟಿಸಿದ್ದು, ಕಲಾವಿದ ಸಂತೋಷ್‌ ಸಸಿಹಿತ್ಲು ಅವರ ಮುಖಪುಟ ಮತ್ತು ರೇಖಾಚಿತ್ರಗಳಿವೆ. ಮಾನವ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಪ್ರತಿನಿಧಿಸುವ ಈ ಪುಸ್ತಕದ ಮೌಲ್ಯ ರೂ. 225/- ಆಗಿರುತ್ತದೆ.

-        ಧನ್ಯವಾದಗಳು…

ಕನ್ನಡ “ಜಂಗಲ್‌ ಬುಕ್”‌ ಕೊಳ್ಳಲು ಅಮೇಜಾನ್‌ ಲಿಂಕ್:


ಸೋಮವಾರ, ಮಾರ್ಚ್ 28, 2022

ಮತ್ತೆ ಹುಟ್ಟಿ ಬಂದರು... ಡಾ. ಪುನೀತ್ ರಾಜ್ ಕುಮಾರ್...



ನಿರೀಕ್ಷೆಯಂತೆ ಪುನೀತ್‌ ರಾಜ್‌ ಕುಮಾರ್‌ ಅವರು ಹೀರೋ ಆಗಿ ನಟಿಸಿರುವ ಕೊನೆಯ ಚಿತ್ರ “ಜೇಮ್ಸ್”‌ ಮಾರ್ಚ್‌ 17ರಂದೇ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.

ಚಿತ್ರ ನೋಡಿ ಅಭಿಮಾನಿಗಳು ಅಪ್ಪುವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ನೀವಿನ್ನೂ ಇರಬೇಕಿತ್ತು ಅಂತ ಕಣ್ಣುಗಳನ್ನು ಒದ್ದೆ ಮಾಡಿಕೊಳ್ಳುತ್ತಿದ್ದಾರೆ.

“ಜೇಮ್ಸ್‌” ಚಿತ್ರ ನೋಡುವಷ್ಟು ಕಾಲ ಪುನೀತ್‌ ರಾಜ್‌ ಕುಮಾರ್‌ ಮತ್ತೆ ಹುಟ್ಟಿ ಬಂದಿದ್ದಾರೆ ಎಂಬ ಭಾವ ತೀವ್ರವಾಗಿ ಕಾಡುತ್ತದೆ. ಅಪ್ಪು ನೀವಿನ್ನೂ ಇರಬೇಕಿತ್ತು ಎಂಬ ಹಾರೈಕೆ ಮನದಲ್ಲಿ ಮೂಡುತ್ತದೆ. ಜೊತೆಯಿರದ ಜೀವ ಎಂದೆಂದಿಗೂ ಜೀವಂತ ಎನ್ನುವ ಯೋಗರಾಜ ಭಟ್ಟರ ಮಾತುಗಳು ಸತ್ಯವಾಗಿವೆ.

ಡಾ. ರಾಜ್‌ಕುಮಾರ್‌ ಅವರ ಬಾಂಡ್‌ ಸಿನಿಮಾಗಳಂತೆಯೇ ಈ ಸಿನಿಮಾ ಕೂಡ ನೋಡುಗರನ್ನು ಸೆಳೆಯುತ್ತಿದೆ. ಪುನೀತ್‌ ಅವರ ಅಬ್ಬರದ ರೌದ್ರ ನಟನೆಗೆ ಡಾ. ಶಿವರಾಜ್‌ಕುಮಾರ್‌ ಅವರ ಧ್ವನಿ ಬೊಬ್ಬಿರಿಯುತ್ತದೆ. ಕಿಶೋರ್ ಪತ್ತಿಕೊಂಡ ಅವರ ನಿರ್ಮಾಣ, ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರ ಬಹಳ ಅದ್ದೂರಿಯಾಗಿ ಮೂಡಿದೆ. ಶಿವಣ್ಣ ಮತ್ತು ರಾಘವೇಂದ್ರ ರಾಜ್‍ಕುಮಾರ್ ಕೂಡಾ ಈ ಚಿತ್ರದಲ್ಲಿ ನಟಿಸಿರೋದು ಹೈಲೈಟ್.

ನೀವಿನ್ನೂ ಈ ಸಿನಿಮಾ ನೋಡಿಲ್ಲವಾದರೆ, ಈ ಕೂಡಲೇ ನೋಡಿ…

***

ತುಮಕೂರಿನ INOX ನಲ್ಲಿ "ಜೇಮ್ಸ್"‌ ನೋಡಿ ಈ ವಿಡಿಯೋ ಮಾಡಿದ್ದೇನೆ… ಮತ್ತೆ ಹುಟ್ಟಿ ಬಂದರು... ಡಾ. ಪುನೀತ್ ರಾಜ್ ಕುಮಾರ್...

https://youtu.be/2FI04vVJ1Dg

ಬುಧವಾರ, ಮಾರ್ಚ್ 16, 2022

ಅಪ್ಪು ಈಗ ಡಾ. ಅಪ್ಪು ಡಾ. ಪುನೀತ್ ರಾಜ್ ಕುಮಾರ್

ಸ್ನೇಹಿತರೇ, ನಮ್ಮೆಲ್ಲರ ಪ್ರೀತಿಯ ನಟ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಕಟಿಸಿದೆ. ಪುನೀತ್‌ ಅವರ ಸಾಮಾಜಿಕ ಸೇವಾ ಕಾರ್ಯ ಹಾಗೂ ಚಿತ್ರರಂಗದಲ್ಲಿನ ಸಾಧನೆ ಪರಿಗಣಿಸಿ ಮೈಸೂರು ವಿಶ್ವವಿದ್ಯಾಲಯ ಮರಣೋತ್ತರವಾಗಿ ಗೌರವ ಡಾಕ್ಟರ್‌ ಪ್ರದಾನ ಮಾಡಲಿದೆ ಎಂದು ಕುಲಪತಿಗಳಾದ ಪ್ರೊ. ಬಿ. ಹೇಮಂತ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದು ಪುನೀತ್‌ ಅವರ ಜನ್ಮದಿನಕ್ಕೆ ವಿವಿ ನೀಡುತ್ತಿರುವ ಪುಟ್ಟ ಉಡುಗೊರೆ ಎಂದಿದ್ದಾರೆ. ಪುನೀತ್‌ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಘಟಿಕೋತ್ಸವಕ್ಕೆ ಬರಲು ಒಪ್ಪಿದ್ದಾರೆ ಎಂದು ಕೂಡ ತಿಳಿಸಿದ್ದಾರೆ. ಡಾ. ರಾಜ್‌ಕುಮಾರ್‌ ಅವರಿಗೆ 1976ರಲ್ಲಿ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗಿತ್ತು.


ಈ ಗೌರವದಿಂದ ಎಲ್ಲರ ಪ್ರೀತಿಯ ಅಪ್ಪು, ಡಾ. ಅಪ್ಪು... ಡಾ. ಪುನೀತ್‌ ರಾಜ್‌ ಕುಮಾರ್‌ ಆಗಲಿದ್ದಾರೆ...
***
ಈ ಮಾಹಿತಿಯ ನನ್ನ ಯೂಟ್ಯೂಬ್‌ ಲಿಂಕ್‌ :
ಅಪ್ಪು ಈಗ ಡಾ. ಅಪ್ಪು ಡಾ|| ಪುನೀತ್ ರಾಜ್‌ಕುಮಾರ್
https://youtu.be/1etPM3c3ftA


ಭಾನುವಾರ, ಮಾರ್ಚ್ 13, 2022

ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ

 ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ

ವಿಜಯನಗರ ಸಾಮ್ರಾಜ್ಯದ ಹಿರಿಮೆ ಗರಿಮೆಗಳನ್ನು ಕಣ್ಣು ಕಂಡರಿಯದು, ಕಿವಿ ಕೇಳರಿಯದು ಎಂದು ಬೇರೆ ಬೇರೆ ದೇಶಗಳಿಗೆ ಸೇರಿದ ವಿದೇಶಿ ಪ್ರವಾಸಿಗಳು ಬೆರಗುಗೊಂಡು ತಮಗಾದ ಬೆರಗನ್ನು ವರದಿ ಮಾಡಿದರೆ, ಬ್ರಿಟಿಷ್‌ ಆಡಳಿತದಲ್ಲಿ ಬಳ್ಳಾರಿಯ ಜಿಲ್ಲಾಧಿಕಾರಿಯಾಗಿದ್ದ ರಾಬರ್ಟ್‌ ಸೆವೆಲ್‌ ತನ್ನ ಮೇಲಧಿಕಾರಿಗಳಿಗೆ ವಿಜಯನಗರ ಸಾಮ್ರಾಜ್ಯ ಕುರಿತು ತಿಳಿಸಲು “A Forgotten Empire” ಕೃತಿಯನ್ನು ರಚಿಸಿದರು. ಈ ಕೃತಿಯೇ ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ... 1900 ರಲ್ಲಿ ಈ ಕೃತಿ ಮೊದಲಿಗೆ ಪ್ರಕಟಗೊಂಡಿತು. ಈ ಕೃತಿ ವಿಜಯನಗರ ಸಾಮ್ರಾಜ್ಯ ಕುರಿತ ಅಮೂಲ್ಯ ಆಖರಗ್ರಂಥವೂ ಹೌದು. ಇದು ವಿಜಯನಗರದ ಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳ ಬಗೆಗೆ ಜಗತ್ತಿನ ಗಮನ ಸೆಳೆದ ಪ್ರಥಮಗ್ರಂಥ!

ಸ್ವತಃ ಸಾಹಿತಿಯಲ್ಲದ್ದಿದ್ದರೂ ರಾಬರ್ಟ್‌ ಸೆವೆಲ್‌ ಇತಿಹಾಸವನ್ನು ದಾಖಲಿಸಲು “A Forgotten Empire” ಕೃತಿಯನ್ನು ರಚಿಸಿದರೆ, ಇದನ್ನು ಕನ್ನಡಕ್ಕೆ ಸದಾನಂದ ಕನವಳ್ಳಿ ಅವರು ಯಥಾವತ್ತಾಗಿ “ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ” ಎಂದು ಅನುವಾದಿಸಿದ್ದಾರೆ. ಈ ಕೃತಿಯ ಮೌಲಿಕತೆಯನ್ನು ಮನಗಂಡು ಹಂಪಿಯ ಕನ್ನಡ ವಿಶ್ವವಿದ್ಯಾಲಯ ತನ್ನ ಪ್ರಥಮ ನುಡಿಹಬ್ಬದಂದು ಈ ಕೃತಿಯನ್ನು 1992ರಲ್ಲಿ ಪ್ರಕಟಿಸಿದ್ದರೆ, ಆನಂತರ ಇದೊಂದು ಅಧಿಕೃತ, ಬೇಡಿಕೆಯುಳ್ಳ ಕೃತಿಯೆಂದು ಮನಗಂಡ ʼಅಂಕಿತ ಪುಸ್ತಕʼ ಮರುಮುದ್ರಿಸಿದೆ.



ಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ವರ್ಣಿಸುತ್ತದೆ. ಈ ಸಾಮ್ರಾಜ್ಯದ ಆರಂಭ – ವೈಭವ ಕುರಿತಂತೇ ಅನೇಕ ದಂತ ಕತೆಗಳಿವೆ. ಕೃಷ್ಣದೇವರಾಯನ ಕಾಲಕ್ಕೆ ಉತ್ತುಂಗಕ್ಕೇರಿದ್ದ ವಿಜಯನಗರ ಸಾಮ್ರಾಜ್ಯ ವೈಭವದ ನಂತರ ಅವನತಿಯ ಹಾದಿ ಹಿಡಿಯಿತು. ವೈಭವದಲ್ಲಿರುವಾಗಲೇ ಒಳಜಗಳ – ಆಂತರಿಕ ಕಿತ್ತಾಟ ಮತ್ತು ತಾಳೀಕೋಟೆಯ ಯುದ್ಧ ವಿಜಯನಗರವನ್ನು ಅಧಃಪಾತಾಳಕ್ಕಿಳಿಸಿತು. ನಂತರ ನಡೆದ ರಾಜ್ಯದ ಲೂಟಿ ಎಲ್ಲ ವೈಭವವನ್ನೂ ನೆಲಸಮಗೊಳಿಸಿತು. ಈ ಕೃತಿ ವಿಜಯನಗರದ ಏಳು- ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಠ ಅಧ್ಯಯನಕ್ಕೆ ಮಾದರಿಯಾಗಿ ಕೂಡ ನಿಲ್ಲುತ್ತದೆ.

ಈ ಕೃತಿಯಲ್ಲಿ ಪೀಠಿಕೆಯನ್ನೊಳಗೊಂಡು ಹದಿನೇಳು ಅಧ್ಯಾಯಗಳಿವೆ. ಪುಸ್ತಕದ ಕೊನೆಯಲ್ಲಿ ಅನುಬಂಧಗಳನ್ನು ನೀಡಲಾಗಿದೆ. ವಿಜಯನಗರ ಸಾಮ್ರಾಜ್ಯದ ಮೂಲ, ಸಾಮ್ರಾಜ್ಯದ ಪ್ರಥಮ ರಾಜರು, ಸಾಮ್ರಾಜ್ಯದ ಬೆಳವಣಿಗೆ, ಒಂದನೇಯ ದೇವರಾಯ, ಎರಡನೆಯ ದೇವರಾಯ, ಎರಡನೆಯ ದೇವರಾಯನ ಆಳ್ವಿಕೆಯಲ್ಲಿ ವಿಜಯನಗರ ನಗರ, ಪ್ರಥಮ ರಾಜವಂಶದ ಮುಕ್ತಾಯ, ಎರಡನೆಯ ರಾಜವಂಶದ ಪ್ರಥಮ ರಾಜರು, ಕೃಷ್ಣದೇವರಾಯನ ಆಳ್ವಿಕೆ, ರಾಯಚೂರ ದಾಳಿ ಮತ್ತು ಯುದ್ಧ ಮತ್ತು ಕೃಷ್ಣನ ಆಳ್ವಿಕೆಯ ಕೊನೆ, ಕೃಷ್ಣದೇವರಾಯನ ಕಟ್ಟಡಗಳು, ನಿರ್ಮಾಣಗಳು ಮತ್ತು ಶಾಸನಗಳು, ಅಚ್ಯುತರಾಯನ ಆಳ್ವಿಕೆ, ಅಂತ್ಯದ ಆದಿ, ವಿಜಯನಗರದ ವಿನಾಶ, ಮೂರನೆಯ ರಾಜವಂಶ, ಬ್ಯಾರಡಸ್‌ನ ಕಥಾನಕ, ಪ್ಯಾಸ್‌ ಮತ್ತು ನೂನೀಜ್‌ರ ದಿನಚರಿಗಳು, ಡೊಮಿಂಗೊಸ್‌ ಪ್ಯಾಸ್‌ ನ ಕಥನ, ಫರ್ನಾಒ ನೂನಿಜ್‌ ನ ದಿನಚರಿ ಯ ಬಗ್ಗೆ ನಾವು ತಿಳಿದುಕೊಳ್ಳಬಹುದಾಗಿದೆ.

ಒಟ್ಟು 448 ಪುಟಗಳ ಈ ಅಮೂಲ್ಯ ಪುಸ್ತಕದ ಮೌಲ್ಯ ರೂ. 450/- 

ಈ ಪುಸ್ತಕವನ್ನು ಗೋಮಿನಿ ಪ್ರಕಾಶನದ ಆನ್‌ ಲೈನ್‌ ಬುಕ್‌ ಶಾಪ್‌ ನ ಲಿಂಕಿನ ಮೂಲಕ ಕೊಳ್ಳಬಹುದಾಗಿದೆ... 

https://www.gominiprakashana.com/product/3169543/-10-off/

ಈ ಪುಸ್ತಕ ಕುರಿತು ನಾನು ಮಾಡಿರುವ ವಿಡಿಯೋವನ್ನು  ಯೂಟ್ಯೂಬಿನಲ್ಲಿ ವೀಕ್ಷಿಸಲು ಕೆಳಗಿನ ಲಿಂಕ್‌ ಉಪಯೋಗಿಸಿ,,,

https://www.youtube.com/watch?v=ASF4SD50QQQ

ಈ ಪೋಸ್ಟ್‌ ಕುರಿತು ತಪ್ಪದೇ ಕಾಮೆಂಟ್‌ ಮಾಡಿ, ಧನ್ಯವಾದಗಳು.

***

ಶುಕ್ರವಾರ, ನವೆಂಬರ್ 15, 2019

ಕನ್ನಡದ ಮೇಲಿನ ಅನನ್ಯ ಪ್ರೀತಿಯ ಜೊತೆಗೆ


(ವಿಶೇಷ ಸೂಚನೆ: ಈ ಪೋಸ್ಟನ್ನು ಪೂರ್ತಿ ಓದಿ, ನಿಮ್ಮ ಅನಿಸಿಕೆ ಕಾಮೆಂಟಿಸಿ. ಇದು ನಿಮಗೆ ಪಾಠವಾದರೂ ಆಗಬಹುದು! ಯಾರಿಗೊತ್ತು?)

ಕನ್ನಡದ ಮೇಲಿನ ಅನನ್ಯ ಪ್ರೀತಿಯ ಜೊತೆಗೆ ನಾನು ಓದಿದ್ದು ಸಂಸ್ಕೃತ ಸಾಹಿತ್ಯ ಮತ್ತು ಇಂಗ್ಲೀಷ್ ಸಾಹಿತ್ಯ. ಪದವಿಯವರೆಗೆ ಸಂಸ್ಕೃತವನ್ನು ಮೊದಲ ಭಾಷೆಯಾಗಿ ಕಲಿತವನಿಗೆ ಅದರ ಸಾಹಿತ್ಯ ಇವತ್ತಿಗೂ ಕಾಡುತ್ತಿದೆ. ಆ ನಂತರ ಸಾಹಿತ್ಯದ ಮೇಲಿನ ಪ್ರೀತಿಯಿಂದ ಕನ್ನಡ ಸಾಹಿತ್ಯವನ್ನು ಹಾಗೇ ಓದಿಕೊಳ್ಳಬಹುದು ಎಂದು ಭಾವಿಸಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಇದರಿಂದ ಕೆಲಸವೂ ಸಿಗಬಹುದು ಎಂಬ ಪುಟ್ಟ ಆಸೆಯೂ ಇತ್ತು. ಆದರೆ, ಆಗಾಗ ಕನ್ನಡ ಸಾಹಿತ್ಯವನ್ನು ಓದುವುದನ್ನು ಬಿಡಲಿಲ್ಲ. ಬರೆಯಲು ಶುರುಮಾಡಿದ ಮೇಲೆ ಕತೆಗಳನ್ನು ಅರಿಯಲು ಬಹಳಷ್ಟು ಕತೆಗಳನ್ನು ಓದಿದೆ. ಆದರೂ ಬರೆಯಲು ಸಾಕಷ್ಟು ಕಷ್ಟವಾಗುತ್ತಿತ್ತು. ಆಗ ನಾನು ಕಂಡುಕೊಂಡ ಉಪಾಯವೇನೆಂದರೆ ಇಂಗ್ಲೀಷ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸುವುದು. ಇದುವರೆವಿಗೂ ಕೆಲವು ಕತೆಗಳನ್ನು ಅನುವಾದಿಸಿ ಅವು ಪ್ರಕಟಗೊಂಡಿವೆ. ಮೊತ್ತ ಮೊದಲ ಅನುವಾದದ ಕತೆ ಪ್ರಕಟವಾದದ್ದು ಉದಯವಾಣಿಯಲ್ಲಿ. ಈ ವಿಷಯ ನನಗೆ ಮೊದಲು ಗೊತ್ತಾದ್ದದ್ದು ಮೂರು ತಿಂಗಳ ನಂತರ! ಅದನ್ನು ಮೊದಲು ನನಗೆ ತಿಳಿಸಿದ್ದು ಉದಯ್ ಇಟಗಿ ಸರ್. ಅವರು ಅಂದು ಮಧ್ಯರಾತ್ರಿ (ಆಗ ಫೇಸ್ ಬುಕ್ ಹೊಸದು) ಫೇಸ್ ಬುಕ್ ನೋಡುತ್ತಿದ್ದಾಗ ಚಾಟ್ ನಲ್ಲಿ ವಿಷಯ ತಿಳಿಸಿದರು. ಆಗ ನನಗಾದ ಖುಷಿ ಅಷ್ಟಿಷ್ಟಲ್ಲ.
ಆನಂತರ ನಾನೇ ಒಂದಷ್ಟು ಸ್ವಂತ ಕತೆಗಳನ್ನು ಬರೆದೆ, 'ಉಘೇ ಉಘೇ' ಸಂಕಲನವನ್ನೂ ಪ್ರಕಟಿಸಿದೆ. ಕೆಲವರ ಪ್ರೋತ್ಸಾಹವೂ ಸಿಕ್ಕಿತು. ಈ ಕುರಿತು ತದನಂತರ ಬರೆಯುವೆ. ಆನಂತರ ಅದಾಗಲೇ ಆತ್ಮೀಯರಾಗಿದ್ದ ಶಿವು ಕೆ. ಅವರ 'ವೆಂಡರ್ ಕಣ್ಣು' ಪ್ರಬಂಧಗಳನ್ನು ಇಂಗ್ಲೀಷಿಗೆ ಅನುವಾದಿಸಿ ಅದನ್ನು 'Boys Of The Dawn' ಎಂದು ಸಂಕಲಿಸಿ ಪ್ರಕಟಿಸಿದೆ. ಈ ಪುಸ್ತಕವು ನಮ್ಮ ವಲಯದಲ್ಲಿ ಹಲವರ ಮೆಚ್ಚುಗೆಗೆ ಪ್ರಾಪ್ತವಾಯಿತು.
ಆದರೆ, ಇರಲಿ ನಿಮ್ಮಲ್ಲಿ ಹೇಳಿಯೇ ಬಿಡುವೆ: ಈ 'ಸಾಹಿತ್ಯ-ಪ್ರಶಸ್ತಿ-ರಾಜಕಾರಣ' ನನ್ನಲ್ಲಿದ್ದ ಹುಮ್ಮಸ್ಸನ್ನು ನುಂಗಿ ನೀರು ಕುಡಿದು ಬಿಟ್ಟಿತು. ಅದ್ಯಾಕೋ ಗೊತ್ತಿಲ್ಲ ಈ ಎರಡೂ ಪುಸ್ತಕಗಳಿಗೆ ಬರಬೇಕಿದ್ದ ಪ್ರಶಸ್ತಿ ಇನ್ನೇನು ಬಂತು ಅನ್ನುವಾಗಲೇ ಬರಲಿಲ್ಲ. ಆನಂತರ ದಿನೇ ದಿನೇ ನನ್ನ ಆಸಕ್ತಿ (ಯಾಕೆಂದರೆ ಪ್ರಶಸ್ತಿ, ಬಹುಮಾನಗಳನ್ನು ನಾನು ಕೆಟಲಿಸ್ಟ್ ಅನ್ನುತ್ತೇನೆ) ಸಹಜವಾಗಿ ಕುಗ್ಗಿತು. ಇತ್ತೀಚೆಗೆ ಕಾರಣಗಳೂ ತಿಳಿದವು. ಹೋಗಲಿಬಿಡಿ ಎನ್ನಲು ಕನ್ನಡದಲ್ಲೇನು ಸಾವಿರಾರು ಪ್ರತಿಗಳು ಪುಸ್ತಕಗಳು ಮಾರಾಟವಾಗುವುದಿಲ್ಲ. ಪ್ರಶಸ್ತಿ, ಪುರಸ್ಕಾರಗಳು ದೊರೆತರೆ ಒಂದೈದು ಪ್ರತಿಗಳು ಹೆಚ್ಚು ಹೋಗಬಹುದು ಅಷ್ಟೆ. ಆದರೆ, ನಗದು ಬಹುಮಾನ ದೊರೆತರೆ ಆ ಹಣದಿಂದ ಮತ್ತೊಂದು ಪುಸ್ತಕವನ್ನು ಪ್ರಕಟಿಸಬಹುದು ಎಂಬುದು ನನ್ನ ಜಿಜ್ಞಾಸೆಯಷ್ಟೆ.
ಒಟ್ಟಿನಲ್ಲಿ ಖುಷಿಗಾಗಿ ಬರವಣಿಗೆ ಆರಂಭಿಸಿದವನು ಒಬ್ಬ ಸಾಹಿತಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಯ ಬಗ್ಗೆಯೂ ಬಹಳ ಬೇಗ ಅರಿತಿದ್ದೇನೆ. ಆ ನಿಟ್ಟಿನಲ್ಲಿ ನಾನೇನೇ ಬರೆದರು 'ಸ್ನೇಹ-ಪ್ರೀತಿ-ಜೀವನ' ವಸ್ತು ಬಹಳವಾಗಿ ಇರುತ್ತದೆ. ನನ್ನ ಪುಸ್ತಕಗಳಲ್ಲಿ ನನ್ನ ಬಯೋಡೇಟಾ ಪುಟದಲ್ಲಿ 'ವೀರಶೈವ ಬ್ಯಾಂಕ್ ಉದ್ಯೋಗಿ' ಎಂಬುದೇ ನನ್ನ ಪುಸ್ತಕಗಳಿಗೆ ಪ್ರಶಸ್ತಿ ಬಾರದಿರಲು ಕಾರಣವೆಂದು ತಿಳಿದಾಗ ಮಾತ್ರ ನಗಬೇಕೋ, ಅಳಬೇಕೋ ಎಂದು ಬಹಳ ನೊಂದಿದ್ದೇನೆ. ನನಗೆ ಬುದ್ಧಿ ಬಂತು ಎಂದ ಕ್ಷಣದಿಂದ ನಾನು 'ವಿಶ್ವ ಮಾನವ!'. ಇವತ್ತಿಗೂ ಹಾಗೇ ಬದುಕುತ್ತಿದ್ದೇನೆ. ಮುಂದೆಯೂ... ಇಷ್ಟು ವರ್ಷಗಳಲ್ಲಿ ಜಗತ್ತು ಬಹಳ ಅರ್ಥವಾಗಿಬಿಟ್ಟಿದೆ. ಒಂದಾನೊಂದು ಕಾಲದಲ್ಲಿ ಬಹಳ ಗಂಭೀರವಾಗಿರಬೇಕೆಂದುಕೊಂಡವನು ಅದರಲ್ಲಿ ಅರ್ಥವೂ ಇಲ್ಲ, ಜೀವನದ ಸಾರವೂ ಇಲ್ಲ ಎಂದು ನಾನು ನಾನಾಗೇ ಇದ್ದುಬಿಟ್ಟಿದ್ದೇನೆ. ಇಷ್ಟೆಲ್ಲಾ ಹೇಳಲು ಮೂಲ ಕಾರಣ ಮನಸ್ಸಿನ ಮೂಲೆಯಲ್ಲಿರುವ ಯಾವುದೋ ನೋವಿರಬಹುದು. ಅದು ಗೊತ್ತಿಲ್ಲ. ಫೇಸ್ ಬುಕ್ಕಿನಲ್ಲಿ ಇಷ್ಟೆಲ್ಲಾ ಇದೇ ಮೊದಲ ಬಾರಿಗೆ ನಾನು ಬರೆಯುತ್ತಿರುವುದು. ಮೂಲತಃ ಬ್ಲಾಗರ್ ಆಗಿದ್ದ ನನಗೆ ಇಷ್ಟು ಬರೆಯಲು ಕಷ್ಟವೇನು ಇರದು. ಇನ್ಮುಂದೆ ಬರೆಯಲೇ ಬೇಕಿದೆ...

ನಾನು ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ ಮೊದಲ ಪುಸ್ತಕ ಕೊಂಡು ಓದಲು...
https://imojo.in/2mm893c

ಭಾನುವಾರ, ಡಿಸೆಂಬರ್ 20, 2015

ನವೀನ್ ಮಧುಗಿರಿಯವರ ‘ನವಿಗವನ’ : ಆಯುವ ಕವಿ ನವೀನ್.


ರಸ್ತೆ ಬದಿಯಲ್ಲಿ ಹಾಡಿ
ಅನ್ನ ಉಣ್ಣುವ
ಟೋನಿ
ಪ್ರತೀದಿನ ತನ್ನ ಕರುಳು
ಹಿಂಡುವಷ್ಟು ಬಾರಿ
ಗಿಟಾರಿನ
ತಂತಿ ಮೀಟುವನು
        *
ರಸ್ತೆ ಬದಿಯಲ್ಲಿ
ತರಕಾರಿ ಮಾರಲು
ಬಂದವನು
ತನ್ನಸಿವ
ತಕ್ಕಡಿಯಲ್ಲಿ ತೂಗಿದ
        *
ತುಂಬಾ ಹೊತ್ತಿದ್ದರೆ
ವಾಸನೆ ಬರುವುದೆಂದು
ಅತ್ತರನ್ನ ಬಳಿದರು
ಬದುಕಿಡೀ
ಮೋರಿ ಬಳಿದೆ ಬದುಕಿದವನು
ಶವವಾಗಿ ಮಲಗಿದ್ದ
        *
ಬಣ್ಣ ಮಾಸಿದ
ಗೋಡೆಯ ತುಂಬಾ
ಬಡತನದ ಚಿತ್ರ
        *
ಅಕ್ಷರದಿಂದ ದೇಶವನ್ನು
ಬದಲಿಸಬಹುದು!
ನಿಜಾ,
ಆದರೆ ಹಸಿವಿಗೆ
ಅನ್ನವೇ ಬೇಕು.
        *
ರೈತ
ದೇಶದ ಬೆನ್ನೆಲುಬು
ಬಡತನ
ರೈತನ ನೆರಳು
        *
ನಮ್ಮ ಮನೆಗೆ
ಬಾಗಿಲಿಡುತ್ತೇವೆ
ಹಕ್ಕಿಗಳ ಮನೆ ಕಿತ್ತು
        *
ಊರ ತುಂಬಾ
ಬೆದೆಗೆ ಬಂದ ನಾಯಿಗಳೆ,
ಉಚ್ಚೋ... ಎಂದೋಡಿಸಲು
ಎಳೆಯ ಹೆಣ್ಣು ಕೂಸಿನ್ನು
ಮಾತು ಕಲಿತಿಲ್ಲ
        *
ಬಳೆಗಳ ಸದಿಲ್ಲದೇ
ಇಲ್ಲಿ
ಏನೂ ಆಗುವುದಿಲ್ಲ
ಎರಡು ರೀತಿಯ ಹಸಿವಿನಲ್ಲೂ,
ಅವುಗಳ ಮಹತ್ವ ದೊಡ್ಡದು.
        *
        ಈ ಮೇಲಿನ ಹನಿಗವಿತೆಗಳನ್ನು ಹತ್ತನೇ ತರಗತಿಗೆ ವಿದ್ಯಾಭ್ಯಾಸವನ್ನು ಬಿಟ್ಟ ಯುವಕನೊಬ್ಬ ಬರೆದಿದ್ದಾನೆಂದರೆ ನಂಬಲೇಬೇಕು. ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ವೀರಾಪುರ ಗ್ರಾಮದ ರಘುನಂದನ್ ವಿ.ಆರ್. ಎಂಬ ಯುವಕ ನವೀನ್ ಮಧುಗಿರಿ ಎಂಬ ಕಾವ್ಯನಾಮದಲ್ಲಿ ತಮ್ಮ ಮೊದಲ ಕೃತಿ ನವಿಗವನ ಎಂಬ ಹನಿ - ಹನಿಗವನಸಂಕಲನದಲ್ಲಿ ಈ ಮೇಲಿನ ಹನಿಗವಿತೆಗಳ ಜೊತೆಗೆ ಮತ್ತಷ್ಟು ಪ್ರಬುದ್ಧ ಹನಿಗವಿತೆಗಳನ್ನು ಪ್ರಕಟಿಸಿರುವುದನ್ನು ಓದಿದರೆ ಈ ಯುವ ಕವಿಯ ಬಗ್ಗೆ ಅತೀವ ಹೆಮ್ಮೆಯಾಗುತ್ತದೆ. ಈಗಾಗಲೇ ತಮ್ಮ ಕಥೆ, ಕವಿತೆ, ಕಿರುಕಥೆ (ನ್ಯಾನೋ ಕಥೆ), ಶಿಶುಗೀತೆ ಮತ್ತು ಹಲವು ಲೇಖನಗಳನ್ನು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಿಸುವುದರ ಮೂಲಕ ಭರವಸೆ ಮೂಡಿಸಿದ್ದಾರೆ ಯುವ ಸಾಹಿತಿ ನವೀನ್ ಮಧುಗಿರಿ. ಇವರ ಈ ಮೊದಲ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದ ೨೦೧೩ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಣೆಯ ಪ್ರೋತ್ಸಾಹಧನದಿಂದ ಪ್ರಕಟನೆಗೊಂಡಿದೆ. ಈ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧನದಿಂದ ಪ್ರಕಟಿಸಲು ತಮ್ಮದೇ ನವಿ ಪುಸ್ತಕ ಎಂಬ ಪ್ರಕಾಶನವನ್ನೂ ನವೀನ್ ಆರಂಭಿಸಿದ್ದರೆ. ಈ ಸಂಕಲನಕ್ಕೆ ಕವಿಯೂ, ಚಿತ್ರಸಾಹಿತಿಯೂ ಆಗಿರುವ ಗುರುನಾಥ್ ಬೋರಗಿಯವರ ಸುಂದರ ಮುಖಪುಟವೂ ಇದ್ದು, ಜೊತೆಗೆ ಅಲ್ಲಲ್ಲಿ ಕವಿತೆಗಳಿಗೆ ಪೂರಕವಾಗಿರುವ ರೇಖಾಚಿತ್ರಗಳಿವೆ. ಮಧುಗಿರಿ ತಾಲ್ಲೂಕಿನವರೇ ಆದ ಹಿರಿಯ ಸಾಹಿತಿ ಮ.ಲ.ನ. ಮೂರ್ತಿಯವರ ಮುನ್ನುಡಿ ಈ ಸಂಕಲನಕ್ಕಿದೆ. ಸಗಣಿ, ಗಂಜಳ, ಗೊಬ್ಬರದ ನಡುವೆ ಬದುಕನ್ನು ಕಟ್ಟಿಕೊಳ್ಳುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆಯಾದ ಯುವ ಕವಿಯ ಸಂವೇದನೆ, ಕಾವ್ಯದ ತುಣುಕುಗಳಲ್ಲಿ ವ್ಯಕ್ತವಾಗಿದೆ ಎಂದು ಮ.ಲ.ನ. ಮೂರ್ತಿಯವರು ಗುರುತಿಸಿದ್ದಾರೆ. ತಮ್ಮನಿಗೇ ಪ್ರೀತಿಯಿಂದ ಸಂಕಲನದ ಅರ್ಪಣೆಯಾಗಿದೆ.

        ನೀವು ಹನಿಗವನವೆನ್ನಿ, ಹನಿಗವಿತೆಯನ್ನಿ, ಕಿರುಗವಿತೆಯನ್ನಿ, ಚುಟುಕವೆನ್ನಿ ಅಥವಾ ಮತ್ತಿನೇನೋ ಅನ್ನಿ ಅದನ್ನು ಕೆಲವರು ಪ್ರಾಸಕ್ಕಷ್ಟೇ ಬರೆದರೆ, ಕೆಲವರು ಗಂಭೀರವಾಗಿ ಸಾಮಾಜಿಕ ಕಳಕಳಿಯಿಂದ ಬರೆಯುತ್ತಾರೆ. ಪ್ರಾಸಕ್ಕಾಗಿ ಬರೆದದ್ದೂ ಆ ಕ್ಷಣಕ್ಕಷ್ಟೇ ಖುಷಿ ನೀಡಿದರೆ, ಗಂಭೀರವಾಗಿ ಬರೆದದ್ದು ಓದುಗನನ್ನು ಕಾಡುವ ಗುಣ ಹೊಂದಿರುತ್ತದೆ. ಸಾಮಾಜಿಕ ಕಳಕಳಿಯಿಂದ ಬರೆಯುವಲ್ಲಿ ನನಗೆ ದಿನಕರ ದೇಸಾಯಿ, ಜರಗನಹಳ್ಳಿ ಶಿವಶಂಕರ್, ವೈ‌ಎನ್ಕೆ, ಸಿ.ಪಿ.ಕೆ, ಡುಂಡಿರಾಜ್, ಡಾ|| ಕೆ.ಬಿ.ರಂಗಸ್ವಾಮಿ, ಇನ್ನೂ ಮುಂತಾದವರೂ ಬಹಳ ಪ್ರಮುಖವಾಗಿ ಕಾಣುತ್ತಾರೆ. ಇವರ ಸಾಲಿಗೆ ನವೀನ್ ಮಧುಗಿರಿಯೂ ಸೇರಬಲ್ಲರು ಎಂಬ ಭರವಸೆ ಮೂಡಿಸುವ ಅನೇಕ ಹನಿಗವಿತೆಗಳು ಸಂಕಲನದಲ್ಲಿವೆ. ಈತ ತನ್ನ ಮೊದಲ ಸಂಕಲನದಲ್ಲಿಯೇ ಪ್ರೌಢಿಮೆ ಮೆರೆದಿದ್ದಾನೆ. ಈ ಕಾರಣಕ್ಕಾಗಿಯೇ ಇತ್ತೀಚಿಗೆ ಪ್ರಕಟವಾಗಿರುವ ಹಲವು ಹನಿಗವಿತೆ ಸಂಕಲನಗಳಲ್ಲಿ ಈ ಕೃತಿ ಬಹಳ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.

        ವಯೋಸಹಜ ಪ್ರೀತಿ, ಪ್ರೇಮ, ಕಾಮ ವಸ್ತುಗಳಾಗಿರುವ ಹನಿಗವಿತೆಗಳೂ ಇಲ್ಲಿವೆ. ಆದರೆ, ಅವು ಬೆರಳೆಣಿಕೆಯಷ್ಟೇ ಎನ್ನಬಹುದು. ಉದಾಹರಣೆಗೆ :

ಹುಡುಗಿಯರು ಒಮ್ಮೆ
ಹೆಜ್ಜೆಯಿರಿಸಿದರೆ
ಜನುಮ ಪೂರ್ತಿ ಅಳಿಸುವುದಿಲ್ಲ!
ಅದರಲ್ಲೂ,
ಹೃದಯದ ಮೇಲೆ!
        *
ಬೇಲಿಯಿರದ
ಬದುಕ ಬಯಸಿ
ಹೊರಟವನನ್ನು
ಪ್ರೇಯಸಿಯ ಬಾಹುಗಳು
ಬಂಧಿಸಿದವು!
        *
ಎಲ್ಲಕ್ಕಿಂತಲೂ
ಮೊದಲು
ಹುಟ್ಟಿದ್ದು ಕಾಮ
ಆನಂತರ ನಾವೆಲ್ಲರೂ
ಹುಟ್ಟಿದ್ದು
        *
ಇಬ್ಬರೂ ಕೂಡಿದಾಗ
ಕಳೆದದ್ದು
ದೇಹದ ಹಸಿವು
        *

        ಸಂಕಲನದ ಅಲ್ಲಲ್ಲಿ ಕರುಳ ಸಂಬಂಧಗಳನ್ನು ನೆನೆಯುವ ಹನಿಗವತೆಗಳಿವೆ.

ಅಪ್ಪನ ಕೈಗಳನ್ನೇ
ಗಮನಿಸಿದ ನಮಗೆ
ಅವನ
ಹಗುರಾದ ಜೇಬು
ಅರ್ಥವಾಗಲಿಲ್ಲ
        *
ಅವ್ವ
ತನ್ನ ಕಷ್ಟ, ಕಣ್ಣೀರುಗಳನ್ನೆಲ್ಲ
ಬಚ್ಚಿಟ್ಟು
ಬರಿ ನಗುವನ್ನಷ್ಟೇ
ನಮಗೆ ಉಣ ಬಡಿಸಿದಳು
        *
ಅಟ್ಟ ಸೇರಿದ
ಒನಕೆಯ ಮೇಲೆ
ಮಾಸದ
ಅಜ್ಜಿಯ ಕೈಬೆರಳ
ಗುರುತು
        *      

        ಸಂಕಲನದ ಕೆಲವು ಹನಿಗವಿತೆಗಳು ಇತಿಹಾಸ, ಬ್ರೇಕಿಂಗ್ ನ್ಯೂಸ್‌ಗಳ ಮೇಲೂ ಬೆಳಕು ಚೆಲ್ಲಿವೆ:

ಇತಿಹಾಸದ ತುಂಬಾ
ಸಾವಿನ ಶವಗಳ
ವಾಸನೆ
        *
ಚುಟುಕು ಸುದ್ದಿ
ಆಕ್ರಮಿಸಿದೇ
ಎಷ್ಟೊಂದು ಕಿವಿ!?
        *

        ನವೀನ್ ತಮ್ಮ ಸಂಕಲನವನ್ನು ಸ್ನೇಹ ಹಾಗೂ ಗೌರವದೊಂದಿಗೆ ನನಗೆ ಕಳುಹಿಸಿದ ಸಮಯದಲ್ಲಿಯೇ ಒಂದು ಶನಿವಾರದ ಸಂಜೆ ಓದಿದಾಗಲೇ, ಈ ಸಂಕಲನವನ್ನು ಸಹೃದಯ ಓದುಗರಿಗೆ ಪರಿಚಯಿಸಬೇಕೆಂದು ಮನದಲ್ಲಿ ಆಸೆ ಮೂಡಿತಾದರೂ ಕಾಲ ಕೂಡಿಬಂದಿರಲಿಲ್ಲ. ಕಾಲ ಕೂಡಿ ಬರುವ ಸಮಯಕ್ಕೆ ನವೀನ್ ಅದಾಗಲೇ ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಅವರದೇ ಒಂದು ಹನಿಗವನದ ಆಶಯದಂತೆ ಅವರೂ ಮತ್ತೆ ಅಪ್ಪನಾಗಿ ಜನಿಸಿದ್ದಾರೆ.

ಪುಟ್ಟ ಮಗುವಿನ
ಮೊದಲ ಅಳುವಿನ
ಜೊತೆಗೆ
ಕಾರಿಡಾರಿನಲ್ಲೊಬ್ಬ
ಅಪ್ಪನ ಜನನ

        ಈ ಸಂದರ್ಭದಲ್ಲಿ ನವೀನ್‌ರವರಿಗೆ ಶುಭಕೋರುತ್ತಾ, ಖ್ಯಾತ ಹನಿಗವಿ, ಹನಿಗವಿತೆಗಳ ಖಜಾನೆಯ ಒಡೆಯ ಡುಂಡಿರಾಜ್ ರೇ ಹಿಂದಿನ ಮತ್ತು ಇಂದಿನ ಕವಿಗಳನ್ನು ಕುರಿತು ಬರೆದಿರುವ

ಅವರು ಆಯುವ ಕವಿ
ಇವರು ಈಯುವ ಕವಿ

ಎಂಬ ಹನಿಗವಿತೆಯನ್ನು ನೆನೆಯುತ್ತಾ, ನವೀನ್ ಮಧುಗಿರಿ ಆಯುವ ಕವಿ ಎಂದು ಶ್ಲಾಘಿಸಬಹುದಾಗಿದೆ.

                                                                           -       ಗುಬ್ಬಚ್ಚಿ ಸತೀಶ್.








ಬುಧವಾರ, ಜುಲೈ 22, 2015

’ಮುಗುಳ್ನಗೆ’ ಯ ಎರಡನೇ ಮುದ್ರಣ

ಆತ್ಮೀಯರೇ, ’ನಿಮ್ಮೆಲ್ಲರ ಮಾನಸ’ ಕನ್ನಡ ಮಾಸಪತ್ರಿಕೆಯ ೧೦೦ ಸಂಚಿಕೆಗಳ ಸಂಭ್ರಮಕ್ಕೆ ಮತ್ತು 
ಪುಸ್ತಕಗಳ ಬಿಡುಗಡೆಗೆ ತಪ್ಪದೆ ಪ್ರೀತಿಯಿಂದ ಬನ್ನಿ... 
ಅಂದು ನನ್ನ ಕಾದಂಬರಿ ’ಮುಗುಳ್ನಗೆ’ ಯ ಎರಡನೇ ಮುದ್ರಣ ಕೂಡ ಬಿಡುಗಡೆಯಾಗುತ್ತಿದೆ... 
ನಿಮಗಿದೋ ಪ್ರೀತಿಯ ಆಹ್ವಾನ...

ತಪ್ಪದೆ ಬನ್ನಿ...
ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.

ಅಮೇಜಾನ್‌ "ಗ್ರೇಟ್‌ ಸಮ್ಮರ್‌ ಸೇಲ್"‌

ಸ್ನೇಹಿತರೇ, ಇಂದಿನಿಂದ ಅಮೇಜಾನ್‌ "ಗ್ರೇಟ್‌ ಸಮ್ಮರ್‌ ಸೇಲ್"‌ ಶುರುವಾಗಿದ್ದು, ನಿಮಗೆ ಅಗತ್ಯವಿರುವ ವಸ್ತುಗಳನ್ನು ಹೆಚ್ಚಿನ ರಿಯಾಯಿತಿಯಲ್ಲಿ ಕೊಳ್ಳಲು ಸದಾವ...