ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ
ವಿಜಯನಗರ ಸಾಮ್ರಾಜ್ಯದ ಹಿರಿಮೆ ಗರಿಮೆಗಳನ್ನು ಕಣ್ಣು ಕಂಡರಿಯದು, ಕಿವಿ ಕೇಳರಿಯದು ಎಂದು ಬೇರೆ ಬೇರೆ ದೇಶಗಳಿಗೆ ಸೇರಿದ ವಿದೇಶಿ ಪ್ರವಾಸಿಗಳು ಬೆರಗುಗೊಂಡು ತಮಗಾದ ಬೆರಗನ್ನು ವರದಿ ಮಾಡಿದರೆ, ಬ್ರಿಟಿಷ್ ಆಡಳಿತದಲ್ಲಿ ಬಳ್ಳಾರಿಯ ಜಿಲ್ಲಾಧಿಕಾರಿಯಾಗಿದ್ದ ರಾಬರ್ಟ್ ಸೆವೆಲ್ ತನ್ನ ಮೇಲಧಿಕಾರಿಗಳಿಗೆ ವಿಜಯನಗರ ಸಾಮ್ರಾಜ್ಯ ಕುರಿತು ತಿಳಿಸಲು “A Forgotten Empire” ಕೃತಿಯನ್ನು ರಚಿಸಿದರು. ಈ ಕೃತಿಯೇ ವಿಜಯನಗರ ಸಾಮ್ರಾಜ್ಯ ಕುರಿತ ಆದಿಗ್ರಂಥ... 1900 ರಲ್ಲಿ ಈ ಕೃತಿ ಮೊದಲಿಗೆ ಪ್ರಕಟಗೊಂಡಿತು. ಈ ಕೃತಿ ವಿಜಯನಗರ ಸಾಮ್ರಾಜ್ಯ ಕುರಿತ ಅಮೂಲ್ಯ ಆಖರಗ್ರಂಥವೂ ಹೌದು. ಇದು ವಿಜಯನಗರದ ಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳ ಬಗೆಗೆ ಜಗತ್ತಿನ ಗಮನ ಸೆಳೆದ ಪ್ರಥಮಗ್ರಂಥ!
ಸ್ವತಃ ಸಾಹಿತಿಯಲ್ಲದ್ದಿದ್ದರೂ ರಾಬರ್ಟ್ ಸೆವೆಲ್ ಇತಿಹಾಸವನ್ನು ದಾಖಲಿಸಲು “A Forgotten Empire” ಕೃತಿಯನ್ನು ರಚಿಸಿದರೆ, ಇದನ್ನು ಕನ್ನಡಕ್ಕೆ ಸದಾನಂದ ಕನವಳ್ಳಿ ಅವರು ಯಥಾವತ್ತಾಗಿ “ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ” ಎಂದು ಅನುವಾದಿಸಿದ್ದಾರೆ. ಈ ಕೃತಿಯ ಮೌಲಿಕತೆಯನ್ನು ಮನಗಂಡು ಹಂಪಿಯ ಕನ್ನಡ ವಿಶ್ವವಿದ್ಯಾಲಯ ತನ್ನ ಪ್ರಥಮ ನುಡಿಹಬ್ಬದಂದು ಈ ಕೃತಿಯನ್ನು 1992ರಲ್ಲಿ ಪ್ರಕಟಿಸಿದ್ದರೆ, ಆನಂತರ ಇದೊಂದು ಅಧಿಕೃತ, ಬೇಡಿಕೆಯುಳ್ಳ ಕೃತಿಯೆಂದು ಮನಗಂಡ ʼಅಂಕಿತ ಪುಸ್ತಕʼ ಮರುಮುದ್ರಿಸಿದೆ.
ಒಂದು ಕಾಲದಲ್ಲಿ ವೈಭವದಿಂದ ಮೆರೆದ ವಿಜಯನಗರ ಮಹಾಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳನ್ನು ಈ ಕೃತಿ ವರ್ಣಿಸುತ್ತದೆ. ಈ ಸಾಮ್ರಾಜ್ಯದ ಆರಂಭ – ವೈಭವ ಕುರಿತಂತೇ ಅನೇಕ ದಂತ ಕತೆಗಳಿವೆ. ಕೃಷ್ಣದೇವರಾಯನ ಕಾಲಕ್ಕೆ ಉತ್ತುಂಗಕ್ಕೇರಿದ್ದ ವಿಜಯನಗರ ಸಾಮ್ರಾಜ್ಯ ವೈಭವದ ನಂತರ ಅವನತಿಯ ಹಾದಿ ಹಿಡಿಯಿತು. ವೈಭವದಲ್ಲಿರುವಾಗಲೇ ಒಳಜಗಳ – ಆಂತರಿಕ ಕಿತ್ತಾಟ ಮತ್ತು ತಾಳೀಕೋಟೆಯ ಯುದ್ಧ ವಿಜಯನಗರವನ್ನು ಅಧಃಪಾತಾಳಕ್ಕಿಳಿಸಿತು. ನಂತರ ನಡೆದ ರಾಜ್ಯದ ಲೂಟಿ ಎಲ್ಲ ವೈಭವವನ್ನೂ ನೆಲಸಮಗೊಳಿಸಿತು. ಈ ಕೃತಿ ವಿಜಯನಗರದ ಏಳು- ಬೀಳುಗಳನ್ನು ಸಮಗ್ರವಾಗಿ ಚಿತ್ರಿಸಿದೆ. ಇತಿಹಾಸದ ವಸ್ತುನಿಷ್ಠ ಅಧ್ಯಯನಕ್ಕೆ ಮಾದರಿಯಾಗಿ ಕೂಡ ನಿಲ್ಲುತ್ತದೆ.
ಈ ಕೃತಿಯಲ್ಲಿ ಪೀಠಿಕೆಯನ್ನೊಳಗೊಂಡು ಹದಿನೇಳು ಅಧ್ಯಾಯಗಳಿವೆ. ಪುಸ್ತಕದ ಕೊನೆಯಲ್ಲಿ ಅನುಬಂಧಗಳನ್ನು ನೀಡಲಾಗಿದೆ. ವಿಜಯನಗರ ಸಾಮ್ರಾಜ್ಯದ ಮೂಲ, ಸಾಮ್ರಾಜ್ಯದ ಪ್ರಥಮ ರಾಜರು, ಸಾಮ್ರಾಜ್ಯದ ಬೆಳವಣಿಗೆ, ಒಂದನೇಯ ದೇವರಾಯ, ಎರಡನೆಯ ದೇವರಾಯ, ಎರಡನೆಯ ದೇವರಾಯನ ಆಳ್ವಿಕೆಯಲ್ಲಿ ವಿಜಯನಗರ ನಗರ, ಪ್ರಥಮ ರಾಜವಂಶದ ಮುಕ್ತಾಯ, ಎರಡನೆಯ ರಾಜವಂಶದ ಪ್ರಥಮ ರಾಜರು, ಕೃಷ್ಣದೇವರಾಯನ ಆಳ್ವಿಕೆ, ರಾಯಚೂರ ದಾಳಿ ಮತ್ತು ಯುದ್ಧ ಮತ್ತು ಕೃಷ್ಣನ ಆಳ್ವಿಕೆಯ ಕೊನೆ, ಕೃಷ್ಣದೇವರಾಯನ ಕಟ್ಟಡಗಳು, ನಿರ್ಮಾಣಗಳು ಮತ್ತು ಶಾಸನಗಳು, ಅಚ್ಯುತರಾಯನ ಆಳ್ವಿಕೆ, ಅಂತ್ಯದ ಆದಿ, ವಿಜಯನಗರದ ವಿನಾಶ, ಮೂರನೆಯ ರಾಜವಂಶ, ಬ್ಯಾರಡಸ್‌ನ ಕಥಾನಕ, ಪ್ಯಾಸ್ ಮತ್ತು ನೂನೀಜ್‌ರ ದಿನಚರಿಗಳು, ಡೊಮಿಂಗೊಸ್ ಪ್ಯಾಸ್ ನ ಕಥನ, ಫರ್ನಾಒ ನೂನಿಜ್ ನ ದಿನಚರಿ ಯ ಬಗ್ಗೆ ನಾವು ತಿಳಿದುಕೊಳ್ಳಬಹುದಾಗಿದೆ.
ಒಟ್ಟು 448 ಪುಟಗಳ ಈ ಅಮೂಲ್ಯ ಪುಸ್ತಕದ ಮೌಲ್ಯ ರೂ. 450/-
ಈ ಪುಸ್ತಕವನ್ನು ಗೋಮಿನಿ ಪ್ರಕಾಶನದ ಆನ್ ಲೈನ್ ಬುಕ್ ಶಾಪ್ ನ ಲಿಂಕಿನ ಮೂಲಕ ಕೊಳ್ಳಬಹುದಾಗಿದೆ...
https://www.gominiprakashana.com/product/3169543/-10-off/
ಈ ಪುಸ್ತಕ ಕುರಿತು ನಾನು ಮಾಡಿರುವ ವಿಡಿಯೋವನ್ನು ಯೂಟ್ಯೂಬಿನಲ್ಲಿ ವೀಕ್ಷಿಸಲು ಕೆಳಗಿನ ಲಿಂಕ್ ಉಪಯೋಗಿಸಿ,,,
https://www.youtube.com/watch?v=ASF4SD50QQQ
ಈ ಪೋಸ್ಟ್ ಕುರಿತು ತಪ್ಪದೇ ಕಾಮೆಂಟ್ ಮಾಡಿ, ಧನ್ಯವಾದಗಳು.
***
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ