(ವಿಶೇಷ ಸೂಚನೆ: ಈ ಪೋಸ್ಟನ್ನು ಪೂರ್ತಿ ಓದಿ, ನಿಮ್ಮ ಅನಿಸಿಕೆ ಕಾಮೆಂಟಿಸಿ. ಇದು ನಿಮಗೆ ಪಾಠವಾದರೂ ಆಗಬಹುದು! ಯಾರಿಗೊತ್ತು?)
ಕನ್ನಡದ ಮೇಲಿನ ಅನನ್ಯ ಪ್ರೀತಿಯ ಜೊತೆಗೆ ನಾನು ಓದಿದ್ದು ಸಂಸ್ಕೃತ ಸಾಹಿತ್ಯ ಮತ್ತು ಇಂಗ್ಲೀಷ್ ಸಾಹಿತ್ಯ. ಪದವಿಯವರೆಗೆ ಸಂಸ್ಕೃತವನ್ನು ಮೊದಲ ಭಾಷೆಯಾಗಿ ಕಲಿತವನಿಗೆ ಅದರ ಸಾಹಿತ್ಯ ಇವತ್ತಿಗೂ ಕಾಡುತ್ತಿದೆ. ಆ ನಂತರ ಸಾಹಿತ್ಯದ ಮೇಲಿನ ಪ್ರೀತಿಯಿಂದ ಕನ್ನಡ ಸಾಹಿತ್ಯವನ್ನು ಹಾಗೇ ಓದಿಕೊಳ್ಳಬಹುದು ಎಂದು ಭಾವಿಸಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಇದರಿಂದ ಕೆಲಸವೂ ಸಿಗಬಹುದು ಎಂಬ ಪುಟ್ಟ ಆಸೆಯೂ ಇತ್ತು. ಆದರೆ, ಆಗಾಗ ಕನ್ನಡ ಸಾಹಿತ್ಯವನ್ನು ಓದುವುದನ್ನು ಬಿಡಲಿಲ್ಲ. ಬರೆಯಲು ಶುರುಮಾಡಿದ ಮೇಲೆ ಕತೆಗಳನ್ನು ಅರಿಯಲು ಬಹಳಷ್ಟು ಕತೆಗಳನ್ನು ಓದಿದೆ. ಆದರೂ ಬರೆಯಲು ಸಾಕಷ್ಟು ಕಷ್ಟವಾಗುತ್ತಿತ್ತು. ಆಗ ನಾನು ಕಂಡುಕೊಂಡ ಉಪಾಯವೇನೆಂದರೆ ಇಂಗ್ಲೀಷ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸುವುದು. ಇದುವರೆವಿಗೂ ಕೆಲವು ಕತೆಗಳನ್ನು ಅನುವಾದಿಸಿ ಅವು ಪ್ರಕಟಗೊಂಡಿವೆ. ಮೊತ್ತ ಮೊದಲ ಅನುವಾದದ ಕತೆ ಪ್ರಕಟವಾದದ್ದು ಉದಯವಾಣಿಯಲ್ಲಿ. ಈ ವಿಷಯ ನನಗೆ ಮೊದಲು ಗೊತ್ತಾದ್ದದ್ದು ಮೂರು ತಿಂಗಳ ನಂತರ! ಅದನ್ನು ಮೊದಲು ನನಗೆ ತಿಳಿಸಿದ್ದು ಉದಯ್ ಇಟಗಿ ಸರ್. ಅವರು ಅಂದು ಮಧ್ಯರಾತ್ರಿ (ಆಗ ಫೇಸ್ ಬುಕ್ ಹೊಸದು) ಫೇಸ್ ಬುಕ್ ನೋಡುತ್ತಿದ್ದಾಗ ಚಾಟ್ ನಲ್ಲಿ ವಿಷಯ ತಿಳಿಸಿದರು. ಆಗ ನನಗಾದ ಖುಷಿ ಅಷ್ಟಿಷ್ಟಲ್ಲ.
ಆನಂತರ ನಾನೇ ಒಂದಷ್ಟು ಸ್ವಂತ ಕತೆಗಳನ್ನು ಬರೆದೆ, 'ಉಘೇ ಉಘೇ' ಸಂಕಲನವನ್ನೂ ಪ್ರಕಟಿಸಿದೆ. ಕೆಲವರ ಪ್ರೋತ್ಸಾಹವೂ ಸಿಕ್ಕಿತು. ಈ ಕುರಿತು ತದನಂತರ ಬರೆಯುವೆ. ಆನಂತರ ಅದಾಗಲೇ ಆತ್ಮೀಯರಾಗಿದ್ದ ಶಿವು ಕೆ. ಅವರ 'ವೆಂಡರ್ ಕಣ್ಣು' ಪ್ರಬಂಧಗಳನ್ನು ಇಂಗ್ಲೀಷಿಗೆ ಅನುವಾದಿಸಿ ಅದನ್ನು 'Boys Of The Dawn' ಎಂದು ಸಂಕಲಿಸಿ ಪ್ರಕಟಿಸಿದೆ. ಈ ಪುಸ್ತಕವು ನಮ್ಮ ವಲಯದಲ್ಲಿ ಹಲವರ ಮೆಚ್ಚುಗೆಗೆ ಪ್ರಾಪ್ತವಾಯಿತು.
ಆದರೆ, ಇರಲಿ ನಿಮ್ಮಲ್ಲಿ ಹೇಳಿಯೇ ಬಿಡುವೆ: ಈ 'ಸಾಹಿತ್ಯ-ಪ್ರಶಸ್ತಿ-ರಾಜಕಾರಣ' ನನ್ನಲ್ಲಿದ್ದ ಹುಮ್ಮಸ್ಸನ್ನು ನುಂಗಿ ನೀರು ಕುಡಿದು ಬಿಟ್ಟಿತು. ಅದ್ಯಾಕೋ ಗೊತ್ತಿಲ್ಲ ಈ ಎರಡೂ ಪುಸ್ತಕಗಳಿಗೆ ಬರಬೇಕಿದ್ದ ಪ್ರಶಸ್ತಿ ಇನ್ನೇನು ಬಂತು ಅನ್ನುವಾಗಲೇ ಬರಲಿಲ್ಲ. ಆನಂತರ ದಿನೇ ದಿನೇ ನನ್ನ ಆಸಕ್ತಿ (ಯಾಕೆಂದರೆ ಪ್ರಶಸ್ತಿ, ಬಹುಮಾನಗಳನ್ನು ನಾನು ಕೆಟಲಿಸ್ಟ್ ಅನ್ನುತ್ತೇನೆ) ಸಹಜವಾಗಿ ಕುಗ್ಗಿತು. ಇತ್ತೀಚೆಗೆ ಕಾರಣಗಳೂ ತಿಳಿದವು. ಹೋಗಲಿಬಿಡಿ ಎನ್ನಲು ಕನ್ನಡದಲ್ಲೇನು ಸಾವಿರಾರು ಪ್ರತಿಗಳು ಪುಸ್ತಕಗಳು ಮಾರಾಟವಾಗುವುದಿಲ್ಲ. ಪ್ರಶಸ್ತಿ, ಪುರಸ್ಕಾರಗಳು ದೊರೆತರೆ ಒಂದೈದು ಪ್ರತಿಗಳು ಹೆಚ್ಚು ಹೋಗಬಹುದು ಅಷ್ಟೆ. ಆದರೆ, ನಗದು ಬಹುಮಾನ ದೊರೆತರೆ ಆ ಹಣದಿಂದ ಮತ್ತೊಂದು ಪುಸ್ತಕವನ್ನು ಪ್ರಕಟಿಸಬಹುದು ಎಂಬುದು ನನ್ನ ಜಿಜ್ಞಾಸೆಯಷ್ಟೆ.
ಒಟ್ಟಿನಲ್ಲಿ ಖುಷಿಗಾಗಿ ಬರವಣಿಗೆ ಆರಂಭಿಸಿದವನು ಒಬ್ಬ ಸಾಹಿತಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಯ ಬಗ್ಗೆಯೂ ಬಹಳ ಬೇಗ ಅರಿತಿದ್ದೇನೆ. ಆ ನಿಟ್ಟಿನಲ್ಲಿ ನಾನೇನೇ ಬರೆದರು 'ಸ್ನೇಹ-ಪ್ರೀತಿ-ಜೀವನ' ವಸ್ತು ಬಹಳವಾಗಿ ಇರುತ್ತದೆ. ನನ್ನ ಪುಸ್ತಕಗಳಲ್ಲಿ ನನ್ನ ಬಯೋಡೇಟಾ ಪುಟದಲ್ಲಿ 'ವೀರಶೈವ ಬ್ಯಾಂಕ್ ಉದ್ಯೋಗಿ' ಎಂಬುದೇ ನನ್ನ ಪುಸ್ತಕಗಳಿಗೆ ಪ್ರಶಸ್ತಿ ಬಾರದಿರಲು ಕಾರಣವೆಂದು ತಿಳಿದಾಗ ಮಾತ್ರ ನಗಬೇಕೋ, ಅಳಬೇಕೋ ಎಂದು ಬಹಳ ನೊಂದಿದ್ದೇನೆ. ನನಗೆ ಬುದ್ಧಿ ಬಂತು ಎಂದ ಕ್ಷಣದಿಂದ ನಾನು 'ವಿಶ್ವ ಮಾನವ!'. ಇವತ್ತಿಗೂ ಹಾಗೇ ಬದುಕುತ್ತಿದ್ದೇನೆ. ಮುಂದೆಯೂ... ಇಷ್ಟು ವರ್ಷಗಳಲ್ಲಿ ಜಗತ್ತು ಬಹಳ ಅರ್ಥವಾಗಿಬಿಟ್ಟಿದೆ. ಒಂದಾನೊಂದು ಕಾಲದಲ್ಲಿ ಬಹಳ ಗಂಭೀರವಾಗಿರಬೇಕೆಂದುಕೊಂಡವನು ಅದರಲ್ಲಿ ಅರ್ಥವೂ ಇಲ್ಲ, ಜೀವನದ ಸಾರವೂ ಇಲ್ಲ ಎಂದು ನಾನು ನಾನಾಗೇ ಇದ್ದುಬಿಟ್ಟಿದ್ದೇನೆ. ಇಷ್ಟೆಲ್ಲಾ ಹೇಳಲು ಮೂಲ ಕಾರಣ ಮನಸ್ಸಿನ ಮೂಲೆಯಲ್ಲಿರುವ ಯಾವುದೋ ನೋವಿರಬಹುದು. ಅದು ಗೊತ್ತಿಲ್ಲ. ಫೇಸ್ ಬುಕ್ಕಿನಲ್ಲಿ ಇಷ್ಟೆಲ್ಲಾ ಇದೇ ಮೊದಲ ಬಾರಿಗೆ ನಾನು ಬರೆಯುತ್ತಿರುವುದು. ಮೂಲತಃ ಬ್ಲಾಗರ್ ಆಗಿದ್ದ ನನಗೆ ಇಷ್ಟು ಬರೆಯಲು ಕಷ್ಟವೇನು ಇರದು. ಇನ್ಮುಂದೆ ಬರೆಯಲೇ ಬೇಕಿದೆ...
ನಾನು ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ ಮೊದಲ ಪುಸ್ತಕ ಕೊಂಡು ಓದಲು...
https://imojo.in/2mm893c
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ