ಶುಕ್ರವಾರ, ಏಪ್ರಿಲ್ 26, 2024

ಇದು ಅಪ್ಪಟ ಕನ್ನಡದ "ಪಂಚತಂತ್ರ"



'ಪಂಚತಂತ್ರʼ ಅಂದರೆ ನಮ್ಮ ನೆನಪಿಗೆ ಬರುವುದು ಬಾಲ್ಯ ಕಾಲದಲ್ಲಿ ಓದಿದ್ದ ಅಥವಾ ಕೇಳಿದ್ದ ಯಾವುದೋ ಒಂದು ಅಥವಾ ಹಲವು ಕತೆಗಳು. ಎಷ್ಟೊಂದು ಖುಷಿ ಮತ್ತು ಜ್ಞಾನವನ್ನೂ ಈ ಕತೆಗಳು ನೀಡಿದ್ದವಲ್ಲ ಎಂಬ ಭಾವನೆಯೂ ಬಂದು ಹೋಗುತ್ತದೆ. ಈ ಕತೆಗಳನ್ನು ಬರೆದವರು ವಿಷ್ಣುಶರ್ಮ ಎಂಬ ಪಂಡಿತರು ಎಂಬುದು ಕೂಡ ನೆನಪಿಗೆ ಬರುತ್ತದೆ. ಇವು ಸಂಸ್ಕೃತದ ಕತೆಗಳು ಎಂಬುದು ಕೂಡ ಮನಸ್ಸಿನ ಮೂಲೆಯಲ್ಲಿ ಮೂಡಿ ಮರೆಯಾಗುತ್ತದೆ. ಆದರೆ, ಇವೆಲ್ಲಾ ಯಾರೋ ಓದಿ, ಕೇಳಿ ಸರಳೀಕರಿಸಿ ನಮಗೆ ನೀಡಿದ್ದ ಕತೆಗಳು ಎಂದು ಗೊತ್ತಿರಲಿಲ್ಲ. ಯಾಕೆಂದರೆ, ಪಂಡಿತ ವಿಷ್ಣುಶರ್ಮ ವಿರಚಿತ “ಪಂಚತಂತ್ರ” ಮೂಲ ಸಂಸ್ಕೃತದಿಂದ ಕನ್ನಡಕ್ಕೆ ಸಂಪೂರ್ಣವಾಗಿ ಅನುವಾದಗೊಂಡಿದೆಯೋ ಇಲ್ಲವೋ ಎಂಬ ವಿಷಯವನ್ನು ನಾವೇನು ತಿಳಿದುಕೊಳ್ಳಲು ಹೋಗಿರಲಿಲ್ಲ. ಕತೆ ಓದಿ ಅಥವಾ ಕೇಳಿ ಖುಷಿಪಟ್ಟು ಸುಮ್ಮನಾಗಿದ್ವಿ ಅಷ್ಟೆ.

ಆದರೆ, ಈಗ ಈ ಮೂಲ ಸಂಸ್ಕೃತದ ಪಂಡಿತ ವಿಷ್ಣುಶರ್ಮ ವಿರಚಿತ ಪಂಚತಂತ್ರದ ಕತೆಗಳನ್ನು ಸಂಪೂರ್ಣವಾಗಿ ಕನ್ನಡಕ್ಕೆ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್‌ ಭರತ ಬಿ ರಾವ್‌ ಅವರು ಅನುವಾದಿಸಿ ಕನ್ನಡಿಗರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಶ್ಲಾಘನೀಯ ಕೆಲಸವಾಗಿದೆ. ಇದಕ್ಕೆ ಮೊದಲು ನಾವೆಲ್ಲರೂ ಭರತ ಬಿ ರಾವ್‌ ಅವರನ್ನು ಅಭಿನಂದಿಸಿ ಧನ್ಯವಾದಗಳನ್ನು ತಿಳಿಸಬೇಕಿದೆ. 2018ರಲ್ಲಿ ಮೊದಲ ಮುದ್ರಣವನ್ನು ಕಂಡ ಈ ಪುಸ್ತಕವು ಇದೀಗ 3ನೇಯ ಆವೃತ್ತಿಯನ್ನು ಕಂಡಿದೆ.



ʼಪಂಚತಂತ್ರವು ಸಾವಿರಾರು ವರ್ಷಗಳ ಹಳೆಯ ರಚನೆಯಾದರೂ, ನಮ್ಮ ಈಗಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿ ನಿಲ್ಲಬಲ್ಲ ಕೃತಿ. ಸಮಾಜವು ಯಾವಾಗಲೂ ಧರ್ಮದ ಆದರ್ಶದಂತೆ ನಡೆಯುವುದಿಲ್ಲವೆಂಬ ವಾಸ್ತವಿಕತೆಯ ಅರಿವಿದ್ದಾಗ, ಧರ್ಮದ ದಾರಿಯಲ್ಲಿ ನಡೆಯಲು ಏನೇನು ತಂತ್ರವನ್ನು ಮಾಡಬೇಕೋ ಅವೆಲ್ಲವನ್ನೂ ಸಮಯ ಸಂದರ್ಭಕ್ಕನುಗುಣವಾಗಿ ಬಳಸಲು ಸಿದ್ಧವಿರಬೇಕೆಂಬದು ಪಂಚತಂತ್ರದಿಂದ ಕಲಿಯಬಹುದಾದ ಮುಖ್ಯವಾದ ಪಾಠ. ರಾಜಧರ್ಮ, ಮೈತ್ರಿಧರ್ಮ, ಶತ್ರುನಿಗ್ರಹ, ಸೇವಾವೃತ್ತಿ, ಬುದ್ಧಿಯ ಬಳಕೆ, ಮೂರ್ಖರೊಂದಿಗಿನ ವ್ಯವಹಾರ, ಸ್ವಾರ್ಥ ಸಾಧನೆ, ತಂತ್ರಗಳ ಬಳಕೆ ಮುಂತಾದ ಹಲವು ವಿಚಾರಗಳನ್ನು ಕುತೂಹಲಕಾರಿಯಾದ ಕಥೆಗಳ ಮೂಲಕ ವಿವರಿಸುವ ಪಂಚತಂತ್ರದ ನಿಜವಾದ ಪ್ರಯೋಜನವನ್ನು ಪಡೆಯಲು ಸರಳೀಕರಿಸಿದ ಮಕ್ಕಳ ಪುಸ್ತಕಗಳಿಗೆ ಮೊರೆಹೋಗದೆ, ಮೂಲವನ್ನು ಓದುವುದು ಅವಶ್ಯಕ. ಮೂಲ ಪಂಚತಂತ್ರವನ್ನು ಕನ್ನಡ ಓದುಗರಿಗೆ ಪರಿಚಯಿಸುವ ಪ್ರಯತ್ನವಿದುʼ ಎಂದು ಬೆನ್ನುಡಿಯಲ್ಲಿ ಈ ಪುಸ್ತಕದ ಬಗ್ಗೆ ಹೇಳಲಾಗಿದೆ.

ಅಮರಶಕ್ತಿಯೆಂಬ ರಾಜ ತನ್ನ ಮೂವರು ಮೂರ್ಖ ಮಕ್ಕಳನ್ನು ಹೇಗೆ ವಿದ್ಯಾವಂತರನ್ನಾಗಿ ಮಾಡುವುದೆಂದು ಮಂತ್ರಿಗಳೊಡನೆ ಸಮಾಲೋಚಿಸಿ ಹಲವು ಶಾಸ್ತ್ರಗಳನ್ನು ಸಾಂಪ್ರದಾಯಿಕವಾಗಿ ಕಲಿಯಲು ಹತ್ತಾರು ವರ್ಷಗಳೇ ಬೇಕಿರುವಾಗ, ಶೀಘ್ರವಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸಕಲಶಾಸ್ತ್ರಕೋವಿದನಾದ 80 ವರ್ಷದ ವಿಷ್ಣುಶರ್ಮನೆಂಬ ಬ್ರಾಹ್ಮಣನಲ್ಲಿ ಬಿಡಬೇಕೆಂದು ನಿರ್ಧಾರವಾಗಿ, ವಿಷ್ಣುಶರ್ಮರು ಶಾಸ್ತ್ರಗಳಲ್ಲಿ ಸತ್ವವಿಲ್ಲದ್ದನ್ನು ಬಿಟ್ಟು ಸಾರವನ್ನು ಮಾತ್ರ ಪಂಚತಂತ್ರದ ಕತೆಗಳ ಮೂಲಕ ಭೋಧಿಸಿ ಯಶಸ್ವಿಯಾಗುತ್ತಾರೆ.

ʼಮಿತ್ರಭೇದ, ಮಿತ್ರಸಂಪ್ರಾಪ್ತಿ, ಕಾಕೋಲೂಕೀಯ, ಲಬ್ಧಪ್ರಣಾಶ ಮತ್ತು ಅಪರೀಕ್ಷಿತಕಾರಕ ಎಂಬ 5 ತಂತ್ರಗಳ 5 ಸೂತ್ರ ಕಥೆಗಳು ಹಾಗೂ ಅವುಗಳಲ್ಲಿ ಬರುವ 70 ಉಪಕಥೆಗಳನ್ನುʼ ಈ ಸಂಕಲನ ಒಳಗೊಂಡಿದ್ದು ಬಾಲಕರಿಗಾಗಿಯೇ ಈ ಕೃತಿ ರಚಿಸಲ್ಪಟ್ಟಿದ್ದರೂ ಸಂಪೂರ್ಣ ಅಧ್ಯಯನದಿಂದ ಹಲವಾರು ವಿಷಯಗಳನ್ನು ಗ್ರಹಿಸಿ ನಾವು ಕೂಡ ನಮ್ಮ ಬೌದ್ಧಿಕ ಮಟ್ಟವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಬಹುಮುಖ್ಯವಾಗಿ ಮಕ್ಕಳಿಗೆ ಪ್ರೀತಿಯಿಂದ ಉಡುಗೊರೆಯಾಗಿ ನೀಡಬಹುದಾಗಿದೆ.

ಭರತ ಬಿ ರಾವ್‌ ಅವರೇ ಈ ಪುಸ್ತಕವನ್ನು ಪ್ರಕಟಿಸಿದ್ದು ರೂ. 350/- ರ ಮೌಲ್ಯದ ಈ ಕೃತಿಯು ಆಸಕ್ತರಿಗೆ ಅಮೇಜಾನಿನಲ್ಲಿ ಲಭ್ಯವಿದೆ… https://amzn.to/3w6pOnl

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಆತ್ಮವಿಶ್ವಾಸ (ಒಂದೇ ಸಾಲಿನ ಕಥೆ)

ಆತ್ಮವಿಶ್ವಾಸ (ಒಂದೇ ಸಾಲಿನ ಕಥೆ) ‌‌                                                                                         (ಚಿತ್ರಕೃಪೆ: ಗೂಗಲ್) ಮ...