ಶನಿವಾರ, ಸೆಪ್ಟೆಂಬರ್ 30, 2023

ತೇಜಸ್ವಿಯವರ ಖಾಸಗೀ ಬದುಕಿನ ‘ಪಾಕ ಕ್ರಾಂತಿ’


ಕಥೆ, ಕಾದಂಬರಿ, ವಿಚಾರ ಸಾಹಿತ್ಯ, ಪರಿಸರ ಹೀಗೆ ಎಲ್ಲಾ ಬಗೆಯ ಸಾಹಿತ್ಯ ಸೃಷ್ಟಿಯಲ್ಲಿ ಸಿದ್ಧಹಸ್ತರಾಗಿದ್ದ ಪೂರ್ಣಚಂದ್ರ ತೇಜಸ್ವಿ ನಮ್ಮ ನಾಡಿನ ಅನನ್ಯ ಲೇಖಕ. ಕನ್ನಡದ ಅತ್ಯುತ್ತಮ ಕತೆಗಾರರಲ್ಲಿ ಒಬ್ಬರಾಗಿರುವ ಇವರ ಕತೆಗಳಲ್ಲಿ ಶ್ರೀಸಾಮಾನ್ಯನ ಜೀವನವೇ ಕೇಂದ್ರಬಿಂದು. ಮನುಷ್ಯನ ಬದುಕಿನ ಹಿಂದೆ ಇರುವ ನಿಗೂಢತೆ, ಯಶಸ್ಸು, ವೈಫಲ್ಯಗಳನ್ನು ಇವರ ಕತೆಗಳಲ್ಲಿ ಕಾಣಬಹುದು. ತೇಜಸ್ವಿಯವರು ತಮ್ಮ ಅನುಭವಗಳನ್ನು ಸಮರ್ಥವಾಗಿ ಹೇಳುವ ಕಲೆಗಾರಿಕೆಗೆ ಹೆಸರುವಾಸಿ. ಅವರು ಸೃಷಿಸಿರುವ ಅದ್ಭುತ ಲೋಕದಲ್ಲಿ ವಿಹರಿಸುವುದೇ ಒಂದು ಅನನ್ಯ ಅನುಭವ. ಅವರ ಕೃತಿಗಳನ್ನು ಓದುತ್ತಿದ್ದರೆ ಅದ್ಭುತ ಮನುಷ್ಯನೊಬ್ಬ ತನ್ನ ಲೋಕವನ್ನು ನಮ್ಮ ಕೈಹಿಡಿದು ತೋರಿಸಿ ಅಚ್ಚರಿ ಮೂಡಿಸಿದ ಅನುಭವವಾಗುತ್ತದೆ. ಈ ನಿಟ್ಟಿನಲ್ಲಿ ಅವರ ಖಾಸಗೀ ಬದುಕಿನ ಬಗ್ಗೆ ನಮಗೆ ಉಂಟಾಗುವ ಕುತೂಹಲವನ್ನು ತಣಿಸುವ ಕೃತಿ ʼಪಾಕ ಕ್ರಾಂತಿ ಮತ್ತು ಇತರ ಕತೆಗಳುʼ.

(ಈ ಪುಸ್ತಕವನ್ನು ಕೊಳ್ಳಲು ಅಮೇಜಾನ್‌ ಲಿಂಕ್: https://amzn.to/3PXbZyz)


ʼಪಾಕ ಕ್ರಾಂತಿ ಮತ್ತು ಇತರ ಕತೆಗಳುʼ ಸಂಕಲನದಲ್ಲಿ ಒಟ್ಟು ಎಂಟು ಕತೆಗಳಿವೆ. ನನ್ನ ಮೊದಲ ಓದಿಗೆ ಒಂದು ತಾಜಾ ಓದಿನ ಅನುಭವವನ್ನು ಕೊಟ್ಟ ಕತೆ ಪಾಕ ಕ್ರಾಂತಿ. ‘ಕೆಲವೆಲ್ಲಾ ಮನುಷ್ಯನಿಗೆ ಅನುಭವಿಸಿದ ಮೇಲೇ ಅರ್ಥವಾಗುವುದು. ಮತ್ತೊಬ್ಬರು ಹೇಳಿದರೆ ತಲೆಗೆ ಹೋಗುವುದೇ ಇಲ್ಲ. ಉದಾಹರಣೆಗೆ ನನ್ನ ಶ್ರೀಮತಿ ಊರಿಗೆ ಹೋಗುತ್ತಾ ಅಡಿಗೆಮನೆ ಬಗ್ಗೆ ಕೆಲವು ಸೂಚನೆಗಳನ್ನು ಕೊಟ್ಟಳು’ ಎಂದು ಕತೆಯ ಆರಂಭದಲ್ಲಿಯೇ ಮುಂದೆ ನಿಮಗೊಂದು ಅದ್ಭುತವಾದ, ತೀರಾ ಖಾಸಗಿಯಾದ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಕುತೂಹಲ ಮೂಡಿಸುತ್ತಾರೆ ಕತೆಗಾರ ತೇಜಸ್ವಿ. ಕತೆ ಮುಂದೆ ಸಾಗುತ್ತಿದ್ದಂತೆ ಅದ್ಭುತ ಕತೆಗಾರ ಪಕ್ಕಾ ಗಂಡನಂತೆಯೇ ವರ್ತಿಸ ತೊಡಗುತ್ತಾನೆ. ಅಡಿಗೆಮನೆಯಲ್ಲಿ ಅದು ಅಲ್ಲಿದೆ, ಇದು ಇಲ್ಲಿದೆ ಎಂದು ಹೆಂಡತಿ ಹೇಳುವ ಮಾತುಗಳನ್ನು ಕಾಟಾಚಾರಕ್ಕೆ ಕೇಳಿಸಿಕೊಳ್ಳುವ ಗಂಡ ಈ ಹೆಂಗಸರು ತಾವು ಇಲ್ಲದಿದ್ದರೆ ಗಂಡಸರು ಊಟವಿಲ್ಲದೆ ಉಪವಾಸ ಬಿದ್ದು ಸಾಯುತ್ತಾರೇನು? ಅಡುಗೆಮನೆ ಚೊಕ್ಕಟವಾಗಿಡಲು ಇದೇನು ಆಪರೇಷನ್ ಥೀಯೆಟರೆ? ಎಂದೆಲ್ಲಾ ತನ್ನಲ್ಲೇ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ ಊರಿಗೆ ಹೊರಟವಳ ಹತ್ತಿರ ಕ್ಯಾತೆ ತೆಗೆದು ಜಗಳವಾಡುವುದು ಬೇಡ ಎಂದುಕೊಂಡು ಹುಂ ಎನ್ನುತ್ತಾನೆ. ಅಡಿಗೆ ಪಾತ್ರೆಗಳನ್ನು ಅದರಲ್ಲೂ ಪಾತ್ರೆಗಳ ಹೊರಭಾಗವನ್ನು ತೊಳೆಯುವುದು ಬೇಡವೆಂಬ ತರ್ಕ ಗಂಡನದು. ಹೆಲ್ತ್ ಇನ್ಸ್ಪೆಕ್ಟರ್ ಬಂದು ದಿನಾ ಅಡುಗೆಮನೆ ಚೆಕ್ ಮಾಡ್ತಾನಾ ಎಂಬ ವ್ಯಂಗ್ಯ. ಇನ್ನು ಸಾರನ್ನು ನಾಲ್ಕಾರು ದಿನಕ್ಕೆ ಆಗುವಷ್ಟು ಒಮ್ಮೆಗೇ ಮಾಡಿಟ್ಟು ಕುದಿಸಿ ಇಡಬಹುದಲ್ಲಾ? ಎಂಬ ಅಮೋಘವಾದ ಅಭಿಪ್ರಾಯಗಳು. ಆದರೆ, ಈ ಅಭಿಪ್ರಾಯಗಳನ್ನು ಹೆಂಗಸರ ಹತ್ತಿರ ಹೇಳಿದರೆ ಸ್ತ್ರೀ ಸ್ವಾತಂತ್ರ್ಯದ ಹಲವು ವಿಧಾನಗಳೆಂದು ಪರಿಗಣಿಸದೆ ಈ ಅನಾಗರೀಕ ಅಭಿರುಚಿ ಇರುವ ಮನುಷ್ಯ ಅದೇಗೆ ಉತ್ತಮ ಕತೆಗಾರನಾದ ಎಂಬ ಆಶ್ಚರ್ಯ ತೋರುವರು. ಇನ್ನು ಈ ಕ್ರಾಂತಿಕಾರಕ ಬದಲಾವಣೆಗಳ ಬಗ್ಗೆ ಗಂಡಸರಿಗೆ ಹೇಳಿದರೋ, ಮನೆ ಹೆಂಗಸರಿಗೆ ಹೆಚ್ಚು ವಿರಾಮ ದೊರೆತು ತಮಗೇ ತೊಂದರೆಯಾದೀತೆಂಬ ಭಯದಲ್ಲಿ ಇವರ ಯೋಜನೆಗಳ ಬಗ್ಗೆ ನಿರಾಸಕ್ತಿ.

ನಮ್ಮ ದೇಶ ಮುಂದುವರಿಯದಿರುವುದಕ್ಕೆ ಮುಖ್ಯ ಕಾರಣ ಇವರ ಸಂಪ್ರದಾಯ ನಿಷ್ಠೆಯೇ. ಹೇಗಿದ್ದರೂ ಶ್ರೀಮತಿ ಊರಿಗೆ ಹೊರಟಿರುವುದರಿಂದ ನನ್ನ ತತ್ವ ಸಿದ್ಧಾಂತಗಳನ್ನು ಕಾರ್ಯರೂಪಕ್ಕಿಳಿಸಿ ಆ ಸಂಶೋಧನೆಯ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರುವ ಸುಯೋಗ ಸಿಕ್ಕಿದೆ ಎಂದು ಭಾವಿಸುತ್ತಾರೆ. ಹೆಂಡತಿ ನಿರ್ಗಮಿಸಿದ ಮೊದಲ ದಿನ ಯಾವ ಸಮಸ್ಯೆಯೂ ಆಗುವುದಿಲ್ಲ. ಆದರೆ ಆಕೆ ಬರುವವರೆಗೂ ಹಾಲು ತಗೊಳ್ಳಬಾರದೆಂದು ತೀರ್ಮಾನವಾಗುತ್ತದೆ. ಕಾರಣ, ಇವರು ಫೋನಿನಲ್ಲಿ ಮಾತಾಡುತ್ತಿದ್ದಾಗ ಎಲೆಕ್ಟ್ರಿಕ್ ಸ್ಟೌವಿನ ಮೇಲಿಟ್ಟ ಹಾಲು ಸಂಪೂರ್ಣವಾಗಿ ಉಕ್ಕಿ ಸ್ಟೌ ಒಳಗೆ ಇಳಿದು ಹಾವು ಭುಸುಗುಟ್ಟುವ ಶಬ್ದ! ಇವರಿಗೆ ಒಲೆಯ ಬುಡಕ್ಕೆ ಹೆಂಗಸರನ್ನು ಬಂಧಿಸಿರುವ ಮೊದಲ ಸಂಕೋಲೆ ಹಾಲು ಎಂದು ಮನದಟ್ಟಾಗುತ್ತದೆ. ಮೊಸರು ಮಜ್ಜಿಗೆ ಇಲ್ಲದೆ ಎರಡು ತುತ್ತು ಅನ್ನ ಸಾರನ್ನೇ ಜಾಸ್ತಿ ತಿಂದರೆ ಸಾಕಲ್ಲವೇ? ಎಂಬ ನಿಲುವು ತೆಗೆದುಕೊಳ್ಳುವ ಗಂಡನಿಗೆ ಹಾಲು ರೇಡಿಯೋ ವಿಕಿರಣ ಸೂಸುವ ಯುರೇನಿಯಂಗಿಂತ ಅಪಾಯಕಾರಿ ವಸ್ತುವಾಗಿ ತೋರುತ್ತದೆ. ಹಾಲಿನ ಪ್ಯಾಕೆಟ್ ಮೇಲೆ ಹ್ಯಾಂಡಲ್ ವಿತ್ ಕೇರ್ ಎನ್ನುವ ಸೂಚನೆ ಕೊಟ್ಟರೆ ಒಳ್ಳೆಯದು ಎಂಬ ಚಿಂತನೆ ನಡೆಸುತ್ತಾರೆ. ಹಾಲಿನ ಪಾತ್ರೆ ಭಿಕ್ಷುಕರ ಪಾತ್ರೆಯಂತಾಗಿ ಮೊದಲ ದಿನವೇ ಹೊಸ ಸಂಶೋಧನೆಗೆ ವಿಘ್ನವಾಗುತ್ತದೆ.

ಪ್ರೆಷರ್ ಕುಕ್ಕರಿನ ಗ್ಯಾಸ್ಕೆಟ್ಟು ಸೇಫ್ಟಿವಾಲ್ವ್ಗಳನ್ನು ಕೊಳ್ಳಲು ಹೋದಾಗ ಅಂಗಡಿಯ ಮಾರ್ವಾಡಿ ಹುಡುಗಿ ಇವರು ಪದೇಪದೇ ಇವುಗಳನ್ನು ಕೊಳ್ಳಲು ಬರುತ್ತಿರುವುದನ್ನು ಗಮನಿಸಿ ‘ಯಾಕೆ ಸರ್? ಮಿಸೆಸ್ಸು ಮನೇಲಿಲ್ವ?’ ಎಂದು ಕೇಳುವುದು ಇವರಿಗೆ ಭವಿಷ್ಯ ಹೇಳುವವಳ ರೀತಿ ಕಾಣುತ್ತಾಳೆ. ಆ ಹುಡುಗಿ ಅನ್ನಕ್ಕೆ ನೀವು ಸರಿಯಾದ ಪ್ರಮಾಣದಲ್ಲಿ ನೀರನ್ನು ಕೂಡಿಸದ ಕಾರಣ ಹೀಗೆ ಆಗುತ್ತಿರುವುದಾಗಿ ತಿಳಿಸುತ್ತಾಳೆ. ಕತೆಗಾರರು ಅಡುಗೆ ಎಂಬುದು ಕಲೆಯೋ ವಿಜ್ಞಾನವೋ ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಮೊದಲಿಗೆ ಕಲೆಯೇ ಎಂದು ತೀರ್ಮಾನಿಸಿಕೊಂಡರೂ, ಮನೆಗೆ ಕೊರೆಯಲು ಆಗಮಿಸುವ ಕಾಫಿಬೋರ್ಡಿನ ವಿಜ್ಞಾನಿ ಮಿತ್ರ (ಹಾಲು ಉಕ್ಕಲು ಕಾರಣಕರ್ತನಾದವನು) ಅಡುಗೆ ಗೃಹವಿಜ್ಞಾನವೆಂದು ಇವರಿಗೆ ಮನವರಿಕೆ ಮಾಡಿಸುತ್ತಾನೆ. ಅವನ ಇಚ್ಛೆಯಂತೆ ಇವರು ಮಾಡುವ ಮೂಸಂಬಿ ಕಾಫಿ ಕುಡಿದು ಅಲ್ಲಿಂದ ಮೆತ್ತಗೆ ಇವರ ಮನೆಯವರು ಬಂದ ಮೇಲೆ ಬರುತ್ತೇನೆಂದು ಕಾಲ್ತೆಗೆಯುತ್ತಾನೆ.

ಒಂದು ಗುಟುಕು ಕಾಫಿ ಕುಡಿದವನೇ ಫಾಲಿಡಾಲ್ ಕುಡಿದವನಂತೆ ಮುಖ ಮಾಡಿ ಹೋಮಿಯೋಪತಿ ಚಿಕಿತ್ಸೆಯ ನೆಪವೊಡ್ಡಿ ತಲೆ ತಪ್ಪಿಸಿಕೊಂಡು ಓಡಿ ಹೋಗುವ ವಿಜ್ಞಾನಿ ಮಿತ್ರ ಈ ಕ್ರಾಂತಿಕಾರಿ ಕತೆಗಾರನಿಗೆ ಪ್ರತಿಗಾಮಿಯಂತೆ ಕಾಣುತ್ತಾನೆ. ಕ್ರಾಂತಿಕಾರಿಗಳಿಗೆ ಇಂಥ ಒಂದೆರಡು ಪ್ರತಿಗಾಮಿಗಳ ತೊಂದರೆ ಸಾಧಾರಣವಾಗಿ ಇದ್ದೇ ಇರುತ್ತೆ ಎಂದು ಅಂದುಕೊಳ್ಳುತ್ತಲೇ ಮನೆಯ ನಾಯಿಮರಿಗೆ ಊಟ ಹಾಕಿದಾಗಲೇ ಗೊತ್ತಾಗುವುದು ಸುತ್ತಮುತ್ತಾ ಪ್ರತಿಗಾಮಿಗಳೇ ತುಂಬಿಕೊಂಡಿದ್ದಾರೆಂದು! ಇವರು ತಟ್ಟೆಗೆ ಅನ್ನ ಹಾಕಿದಾಗ ನಾಯಿಮರಿ ಎಂದಿನಂತೆ ಗಬಗಬ ಊಟ ಮಾಡದೆ ಅನ್ನವನ್ನು ಒಂದೆರಡು ಸಾರಿ ಮೂಸಿನೋಡಿ ಎರಡು ನಿಮಿಷ ನಿಂತುಕೊಂಡು ಗಾಢವಾಗಿ ಆಲೋಚಿಸಿ ಊಟ ಮಾಡದೆ ನೆಟ್ಟಗೆ ಹೋಗಿ ಮರದ ನೆರಳಿನಲ್ಲಿ ಕುಳಿತುಕೊಳ್ಳುತ್ತದೆ. ತೇಜಸ್ವಿಯವರ ನಿರೂಪಣೆಯ ಅಲ್ಟಿಮೇಟ್ ಹಾಸ್ಯದ ಒಂದು ಝಲಕ್ ಕತೆಯ ಈ ಭಾಗದಲ್ಲಿದೆ. ಇವರ ಅಡುಗೆಯ ಕಡೆಗೆ ನಾಯಿಮರಿ ಕಿಂಚಿತ್ತೂ ಒಲವನ್ನು ತಾಳದೆ ಉಪವಾಸ ಬಿದ್ದು ವೈರಾಗ್ಯ ತಾಳುತ್ತದೆ. ನಾಯಿ ಊಟ ಮಾಡುವಂತೆ ಇವರು ಒಲೈಸುವ ಪರಿ ಕಚಗುಳಿಯನ್ನಿಟ್ಟು ಓದುಗನನ್ನು ಮಹದಾನಂದ ಭಾವದಲ್ಲಿ ತೇಲಿಸುತ್ತದೆ. ತೆನಾಲಿ ರಾಮನ ಬೆಕ್ಕಿನಂತಾದ ನಾಯಿಗೆ ಕಡೆಗೆ ಒಣಮೀನಿನ ಆಮಿಷ ಒಡ್ಡುವ ಯೋಚನೆಯೊಂದು ಮೂಡುತ್ತದೆ.

ಒಣಮೀನಿನ ವಾಸನೆಗೆ ಮೇನಕೆಯ ಕ್ಯಾಬರೆ ನೋಡಿದ ವಿಶ್ವಾಮಿತ್ರನಂತೆ ನಾಯಿ ತನ್ನ ಉಪವಾಸ ವ್ರತವನ್ನು ತೊರೆದು ಅನ್ನ ಕಾಣದ ಪ್ರಾಣಿಯಂತೆ ಚಡಪಡಿಸುತ್ತಾ, ಗುಳ್ಳೆನರಿ ತರ ಊಳಿಡುತ್ತದೆ. ದುರಂತವೆಂದರೆ, ಒಣಮೀನಿನ ಸಹವಾಸದಿಂದಾಗಿ ಕತೆಗಾರರು ಕರೆಂಟು ಕೈಕೊಟ್ಟಾಗ ಕತ್ತಲಲ್ಲಿ ಸಾರಿನಲ್ಲಿ ಸಾಸುವೆ ಜಾಸ್ತಿಯಾಯ್ತೆಂದು ಇರುವೆಗಳನ್ನು ತಿಂದು ತೇಗುತ್ತಾರೆ. ಒಣಮೀನನ್ನು ಕೊಳ್ಳಲು ಹೋದಾಗ ಆಗುವ ಫಜೀತಿಗಳು, ಅದರ ಕೃಪೆಯಿಂದ ಮನೆಯಲ್ಲಿ ಹೆಚ್ಚಾಗುವ ಇರುವೆಗಳು, ಅವುಗಳ ಕಾಟದಿಂದ ಪಾರಾಗಲು ಸೀಮೆಎಣ್ಣೆ ತರಲು ಹೋರಡುವ ಲೇಖಕರಿಗೆ ರೇಷನ್ ಕಾರ್ಡ್ ಎನ್ನುವುದು ಒಬ್ಬ ವ್ಯಕ್ತಿಯ ಜೀವನದಲ್ಲಿ ಸಾಕ್ಷಾತ್ಕಾರವಾಗುವ ಮಹೋನ್ನತ ವಸ್ತು ಎನ್ನುವುದು ಅರಿವಾಗುತ್ತದೆ. ಸ್ಕೂಟರಿನಲ್ಲಿ ಹೋಗುವಾಗ ಹಿಂದೆಯೇ ಓಡಿಬರುವ ಜನರು ಹೆಡ್‌ಲೈಟ್ ಆನ್ ಆಗಿರುವುದನ್ನು ತಿಳಿಸುವ ಪರೋಪಕಾರಿಗಳ ಪ್ರಸಂಗ, ಇರುವೆಗಳನ್ನು ಓಡಿಸಲು ಸೀಮೆಎಣ್ಣೆ ಬದಲು ಡಿಸೇಲ್ ಉಪಯೋಗಿಸಿದರೆ ಹೇಗೆ ಎಂದು ಛಕ್ಕನೆ ಹೊಳೆಯುವ ಕಲ್ಪನೆ, ಗೆಳೆಯನ ಪರಿಚಿತನ ಮಗುವಿಗೆ ಕತೆಗಾರರು ಹೆಸರಿಡಬೇಕೆಂಬ ಪ್ರಹಸನ, ಆನಂತರ ಗೆಳೆಯ ಹೇಳಿಕೊಡುವ ಸಿಂಪಲ್ ಅಡುಗೆ ಮಾಡುವ ಪ್ರೊಸೀಜರ್, ಆ ಸಿಂಪಲ್ ಪ್ರೊಸೀಜರ್‌ನಂತೆ ಕುಕ್ಕರ್ ಮುಚ್ಚುಳ ಮುಚ್ಚಿ ಸ್ಟೌಮೇಲಿಡುವ ವೇಳೆಗೆ ಪೋಲಿಸರ ಜೀಪಿನ ಸದ್ದನ್ನು ಆಲಿಸಿ ಹೊರಬರುವ ಕತೆಗಾರರು ಖ್ಯಾತ ನಟನೊಬ್ಬನ ಆಗಮನದ ಸುಳಿವನ್ನು ಹುಡುಕಿ ಬರುವ ಪೋಲೀಸರ ಜೊತೆ ಸುದೀರ್ಘ ತನಿಖೆ-ಮಾತುಕತೆಯಲ್ಲಿ ತೊಡಗಿದಾಗ ಅಡುಗೆಮನೆಯ ಕಡೆಯಿಂದ ಭಯಂಕರ ಆಸ್ಪೋಟನೆಯ ಸದ್ದು ಕೇಳಿ ಪಾಕಕ್ರಾಂತಿಯ ಆಲೋಚನೆಯೊಂದು ಉಗ್ರಗಾಮಿ ಚಟುವಟಿಕೆಯಂತಾಗಿ ಕತೆಯ ಅಂತ್ಯಕ್ಕೆ ರೋಚಕತೆಯಿಂದ ಪೋಲಿಸ್ ಅಧಿಕಾರಿ ‘ಆರ್ ಯೂ ಷೂರ್?’ ಎಂದು ಕೇಳುವಲ್ಲಿಗೆ ಕತೆ ಮುಗಿಯುತ್ತದೆ.

ಕತೆಯನ್ನು ಓದುತ್ತಾ ಓದುತ್ತಾ ನಾನು ಪಕಪಕನೆ ನಗುತ್ತಿದ್ದರೆ ನನ್ನಾಕೆ ಮೊದಲು ಅಂಕಣವನ್ನು ಬರೆದು ಮುಗಿಸಿ ಎಂದರು. ಓದೋದ್ರಲ್ಲಿ ಇರೋ ಸುಖ ಬರೆಯೋದ್ರಲ್ಲಿ ಇಲ್ಲ ಕಣಮ್ಮ ಸುಮ್ಮನಿರು ಎಂದೆ. ಕತೆ ಓದುವಾಗ ಅಲ್ಲಲ್ಲಿ ʼಕಿರಿಕ್ʼ ಮಣ್ಣೆರಾಜುರವರ ಅಂಕಣಗಳು ನನಗೆ ನೆನಪಿಗೆ ಬಂದವು. ತೇಜಸ್ವಿಯವರ ಮತ್ತು ಮಣ್ಣೆರಾಜುರವರ ಹಾಸ್ಯದ ಮೊನಚು ಒಂದೇ ಎನ್ನಿಸಿತು. ಸಂಕಲನದ ‘ಕಳ್ಳನ ಕತೆ’ ಪುಟ್ಟದಾದರು ಮಕ್ಕಳ ಮುಗ್ಧ ಪ್ರಪಂಚಕ್ಕೆ ಹಿಡಿದ ಕೈಗನ್ನಡಿಯಂತಿದೆ. ಉಳಿದ ಕತೆಗಳನ್ನು ಓದಿಕೊಳ್ಳಬೇಕಿದೆ. ನೀವೂ ತಪ್ಪದೆ ಪಾಕ ಕ್ರಾಂತಿಯನ್ನು ಓದುವ ಮೂಲಕ ನಿಮ್ಮ ಓದಿನ ಕ್ರಾಂತಿಯನ್ನು ಮುಂದುವರೆಸಿ. ಈ ಓದಿನ ವಿಶೇಷತೆಯೆಂದರೆ, ಹೊಸದಾಗಿ ಬರೆಯುವವರಿಗೆ ಮತ್ತು ಈಗಾಗಲೇ ಬರೆಯುತ್ತಿರುವವರಿಗೆ ಈ ಸಂಕಲನ ಸ್ಫೂರ್ತಿಯ ಸೆಲೆಯಾಗಬಹುದೆಂಬುದು.

- ಗುಬ್ಬಚ್ಚಿ ಸತೀಶ್.
ಈ ಪುಸ್ತಕವನ್ನು ಕೊಳ್ಳಲು ಅಮೇಜಾನ್‌ ಲಿಂಕ್: https://amzn.to/3PXbZyz
(ಈ ಲೇಖನ ನನ್ನ ʼರೆಕ್ಕೆ ಪುಕ್ಕ ಬುಕ್ಕʼ ಪುಸ್ತಕದಲ್ಲಿದೆ. ಮತ್ತು ಅದಕ್ಕೂ ಮೊದಲು ʼತುಮಕೂರು ವಾರ್ತೆʼ ದಿನಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ಪ್ರಕಟವಾಗಿತ್ತು)
***

ಶುಕ್ರವಾರ, ಸೆಪ್ಟೆಂಬರ್ 29, 2023

ತೋತಾಪುರಿ 2 ವಿಮರ್ಶೆ: ʼಸಂವಿಧಾನʼದ ಆಶಯ ತಿಳಿಸಲು ಎಷ್ಟೊಂದು ಚೇಷ್ಟೆ ಮಾತುಗಳು

 ತೋತಾಪುರಿ 2 ವಿಮರ್ಶೆ:

ʼಸಂವಿಧಾನʼದ ಆಶಯ ತಿಳಿಸಲು ಎಷ್ಟೊಂದು ಚೇಷ್ಟೆ ಮಾತುಗಳು

ನಿರ್ದೇಶಕ ವಿಜಯ ಪ್ರಸಾದ್‌ ಅವರ ನಿರ್ದೇಶನದಲ್ಲಿ ʼತೋತಾಪುರಿʼ ಸಿನಿಮಾದ ಮುಂದುವರಿದ ಭಾಗ ʼತೋತಾಪುರಿ 2ʼ ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಬಿಡುಗಡೆಯಾಗಿದೆ. ಈರೇಗೌಡ, ಶಕೀಲಾ ಭಾನು ಪ್ರೇಮಕತೆ ಏನಾಗುತ್ತೆ ಎನ್ನುವ ಕುತೂಹಲದೊಂದಿಗೆ, ಡಾಲಿ ಧನಂಜಯ್‌ ಮತ್ತು ಸುಮನ್‌ ರಂಗನಾಥ್‌ ಅವರ ಯಾವ ಪಾತ್ರಗಳು ಚಿತ್ರದಲ್ಲಿವೆ ಎನ್ನುವ ನಿರೀಕ್ಷೆಯಲ್ಲಿ ಚಿತ್ರಮಂದಿರಕ್ಕೆ ಹೋದವರಿಗೆ ಯಾಕೋ ಚಿತ್ರ ವಿಪರೀತವಾಯ್ತು ಎಂಬ ಅಸಹನೆ ಕಾಡುತ್ತೆ. ಇದು ಚಿತ್ರಮಂದಿರದಿಂದ ಹೊರಗೆ ಬಂದಮೇಲೂ ಯಾಕೋ ಹಣ, ಸಮಯ ವ್ಯರ್ಥವಾಯ್ತ ಎಂಬ ಭಾವನೆ ಮೂಡಿಸುತ್ತೆ. ಆದರೆ, ಜಗ್ಗೇಶ್‌, ಅದಿತಿ, ಧನಂಜಯ್‌ ಅಭಿಮಾನಿಗಳಿಗೆ ನಿರಾಸೆಯೇನು ಆಗಲ್ಲ. ಇವರ ಅಭಿನಯದೊಂದಿಗೆ ಉಳಿದ ಕೆಲವು ಹಿರಿಯ ಅಭಿನಯ ಚೆನ್ನಾಗಿದ್ದು ಕೊಂಚ ಮನಸ್ಸು ಹಗುರಾಗುತ್ತೆ.


ʼತೋತಾಪುರಿ 2ʼ ಸಿನಿಮಾದಲ್ಲಿ ನಾಯಕನೇ ಹೇಳುವಂತೆ ಇಲ್ಲಿರುವುದು ಡಬಲ್‌ ಮೀನಿಂಗ್‌ ಮಾತುಗಳಲ್ಲ… ಚೇಷ್ಟೆ ಮಾತುಗಳು! ಸಿನಿಮಾ ತುಂಬಾ ಈ ಚೇಷ್ಟೆ ಮಾತುಗಳೇ ತುಂಬಿವೆ. ʼಪಿಳ್ಳೆʼ ಪಾತ್ರದಲ್ಲಿ ಧನಂಜಯ್‌, ʼವಿಕ್ಟೋರಿಯಾʼ ಪಾತ್ರದಲ್ಲಿ ಸುಮನ್‌ ರಂಗನಾಥ್‌ ಅವರ ನಟನೆ ಚೆನ್ನಾಗಿದೆ. ಬಂಧನಗಳಿಂದ ಹೊರಬರಲು ಹವಣಿಸುವ ಸಹಜ ಮನುಷ್ಯನ ಪಾತ್ರಗಳು ಇವಾಗಿವೆ. ಇನ್ನು ನಾಯಕ-ನಾಯಕಿಯ ಪ್ರೇಮಕಥೆಗೂ ಒಂದು ಅಂತ್ಯವಿದೆ. ಈ ರೀತಿಯ ಭಾವೈಕ್ಯತೆಯ ಸಮಾಜ ನಮ್ಮಲ್ಲಿ ಜೀವಂತವಾಗಿರುವುದು ಸಿನಿಮಾದಲ್ಲಿ ಪ್ರತಿಬಿಂಬಿತವಾಗಿದೆ. ಜೊತೆಗೆ ಇದೇ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಸಮಸ್ಯೆಯೊಂದಕ್ಕೆ ನಿರ್ದೇಶಕರು ಪರಿಹಾರವನ್ನು ಹೇಳಲು ಪ್ರಯತ್ನಿಸಿದ್ದಾರೆ. ಅವರ ಈ ಆಶಯ ʼಸಂವಿಧಾನʼ. ಈ ಆಶಯವನ್ನು ತಿಳಿಸಲು ಇಷ್ಟೊಂದು ಚೇಷ್ಟೆ ಮಾತುಗಳು, ಅಸಹನೀಯವಾದ ಕೆಲವು ದೃಶ್ಯಗಳು, ಈ ಮೂಲಕ ಸಿನಿಮಾ ಪಡೆದುಕೊಂಡಿರುವ ʼಎʼ ಸರ್ಟಿಫಿಕೇಟ್‌ ಬೇಕಿತ್ತ ಎಂಬ ಪ್ರಶ್ನೆಗಳು ಮೂಡುತ್ತವೆ. ಹಿಂದೂ-ಮುಸ್ಲಿಂ ಜೋಡಿ ಮದುವೆಯಾದರೆ ಹುಟ್ಟುವ ಮಗುವಿಗೆ ರಾಮನ ಹೆಸರೋ, ರಹೀಮನ ಹೆಸರೋ ಎಂಬ ಜಿಜ್ಞಾಸೆ ತೆರೆಯಮೇಲೆ ಮೂಡಿ, ನೋಡುಗನಿಗೂ ತಲುಪುತ್ತದೆ.

ಸಿನಿಮಾದ ಆರಂಭದಲ್ಲಿ ಪ್ರೀತಿಯ ʼಅಪ್ಪುʼ ಡಾ. ಪುನೀತ್‌ ರಾಜ್‌ಕುಮಾರ್‌ ಅವರ “ಗಂಧದಗುಡಿʼಯ ಒಂದು ದೃಶ್ಯವಿದೆ. ʼಜೀವನʼ ಕುರಿತ ಒಂದು ಮಾತಿದೆ. ಸಿನಿಮಾದ ಅಂತ್ಯದಲ್ಲಿ ʼಮದುವೆಗಳು ಸ್ವರ್ಗದಲ್ಲಾಗುತ್ತವೆʼ ಅನ್ನುವ ಮಾತನ್ನು ಉಲ್ಲೇಖಿಸುತ್ತಾ ನಿರ್ದೇಶಕರು ಮತ್ತೊಂದು ಮಾತನ್ನು ಹೇಳಿದ್ದಾರೆ. ಸಿನಿಮಾದ ಇಂಟರ್‌ವಲ್‌ ನಂತರ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಯ ಮುಂದೆ ಒಂದು ದೃಶ್ಯವಿದೆ. ಇಡೀ ಸಿನಿಮಾದ ಆಶಯ ಈ ಮೂರು ದೃಶ್ಯಗಳಲ್ಲಿ ಇದೆ. ಏನೇ ಆದರೂ ನೋಡುಗನನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆಯೇನೆಂದರೆ, ಇದನ್ನು ಹೇಳಲು ಇಷ್ಟೊಂದು ಚೇಷ್ಟೆ ಮಾತುಗಳ ಅಗತ್ಯವಿತ್ತೇ ಎಂಬುದು.

ನಿರ್ಮಾಪಕ ಕೆ.ಎ. ಸುರೇಶ್‌ ಅವರ ನಿರ್ಮಾಣದ ಈ ಸಿನಿಮಾದಲ್ಲಿ ಒಂದೊಳ್ಳೆಯ ಟೀಮ್‌ ವರ್ಕ್‌ ಇದೆ. ಇನ್ನಿಲ್ಲವಾದ ಕೆಲವು ಹಿರಿಯ ನಟರು ಇಲ್ಲಿ ನೋಡ ಸಿಗುತ್ತಾರೆ. ಕೆಲವೊಂದು ದೃಶ್ಯಗಳು, ಹಾಡುಗಳು ಇಷ್ಟವಾಗುತ್ತವೆ. ಸಮಯವಿದ್ದರೆ ಒಮ್ಮೆ ನೋಡಿ.

ನನ್‌ ನಂಬಿ, ನನ್‌ ನಂಬಿ, ಪ್ಲೀಸ್...‌

-         ಪ್ರೀತಿಯಿಂದ, ಗುಬ್ಬಚ್ಚಿ ಸತೀಶ್.

ಗುರುವಾರ, ಸೆಪ್ಟೆಂಬರ್ 28, 2023

ಲಂಕೇಶರ ನೀಲು ಕಾವ್ಯ ಓದದೆ ಹನಿಗವಿತೆ ಬರೆದರೆ ಹೇಗೆ?

ಲಂಕೇಶರ ನೀಲು ಕಾವ್ಯ ಓದದೆ ಹನಿಗವಿತೆ ಬರೆದರೆ ಹೇಗೆ?


ಕವಿಗೋಷ್ಠಿಯೊಂದರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ನಾನು ಕಲ್ಪನೆ, ಅನುಭವದ ಜೊತೆಗೆ ಒಂದಷ್ಟು ಓದು ಬೆರೆತರೆ ಕವನಗಳು ಮತ್ತಷ್ಟು ಚೆನ್ನಾಗಿ ಮೂಡುತ್ತವೆ, ಬರವಣಿಗೆ ಮತ್ತಷ್ಟು ಸುಧಾರಿಸುತ್ತದೆ ಎಂಬರ್ಥದ ಮಾತುಗಳನ್ನು ಆಡಿದೆ. ಅಂದಿನ ಆ ಕವಿಗೋಷ್ಠಿಯಲ್ಲಿ ಕವಿಗಳು ವಾಚಿಸಿದ ಬಹಳಷ್ಟು ಕವನಗಳು ಗಂಭೀರವಾಗಿದ್ದವು. ಒಂದೆರಡು ವರ್ಷದ ಹಿಂದಿನ ಕವಿಗೋಷ್ಠಿಯಲ್ಲಿ ಈ ಕವಿಗೋಷ್ಠಿಯಲ್ಲೂ ಇದ್ದ ಕೆಲವು ಕವಿಗಳ ಕವನಗಳನ್ನು ಕೇಳಿ ಇವರಿನ್ನೂ ಸುಧಾರಿಸಬೇಕಿದೆ ಥೇಟ್ ನನ್ನಂತೆ ಎಂದುಕೊಂಡಿದ್ದೆ. ಆದರೀಗ ಕೆಲವರು ಬಹಳ ಅರ್ಥವತ್ತಾದ ಕವನಗಳನ್ನು ವಾಚಿಸಿದ್ದಾರೆ. ಅಲ್ಲಿಗೆ ಇವರು ಒಂದಷ್ಟು ಒಳ್ಳೆಯ ಕವನ ಸಂಕಲನಗಳನ್ನು ಓದಿಕೊಂಡಿರಬಹುದು ಎಂದುಕೊಂಡೆ. ಆ ನಿಟ್ಟಿನಲ್ಲೇ ನನ್ನ ಪುಟ್ಟ ಭಾಷಣವೂ ಮುಗಿದಿತ್ತು.

ಕಾರ್ಯಕ್ರಮ ಮುಗಿದ ಮೇಲೆ ಕೆಲವು ಗೆಳೆಯರ ಜೊತೆ ಮಾತನಾಡುತ್ತಾ ಹೆಚ್ಚಾಗಿ ಬರೆಯುವ ಬದಲು ಹೆಚ್ಚಾಗಿ ಓದಿರಿ ಎಂದು ಹೇಳುತ್ತಿದ್ದೆ. ಆಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನನ್ನ ನೆಚ್ಚಿನ ಲೇಖಕರೊಬ್ಬರು ನಗುತ್ತಲೇ ಮಾತಿಗೆ ಇಳಿದು, ಹಾಗಂತ ಏನಿಲ್ಲ ಸರ್. ಓದದೆಯೂ ಚೆನ್ನಾಗಿ ಬರೆಯಬಹುದು. ಬರೀತಾ ಹೋದರೆ ಒಳ್ಳೆಯ ಬರವಣಿಗೆ ಸಿದ್ಧಿಸುತ್ತದೆ ಎಂದರು. ಹಾಡ್ತಾ ಹಾಡ್ತಾ ರಾಗ ಅಂತಾರಲ್ಲ ಹಾಗೆ ಬರೀತಾ ಬರೀತಾ ಬರವಣಿಗೆ ಎನ್ನುವ ಅರ್ಥದಲ್ಲಿ ಅವರ ಮಾತುಗಳಿದ್ದವು. ಅವರ ಅಭಿಪ್ರಾಯವನ್ನು ಅವರು ಹಂಚಿಕೊಂಡರು. ನಾನು ಅದನ್ನು ಗೌರವಿಸುತ್ತಲೇ ನನ್ನ ಅನುಭವವನ್ನು ಹೇಳಿದೆ ಎಂದೆ. ಒಮ್ಮೊಮ್ಮೆ ನಾವು ನಮ್ಮ ಅನಿಸಿಕೆಗಳನ್ನು, ಅನುಭವಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಿದ್ದೇವೆ ಎಂದುಕೊಂಡರೂ ನನ್ನ ಅಲ್ಪಸ್ವಲ್ಪ ಓದಿನಿಂದಲೇ ನನ್ನ ಬರವಣಿಗೆ ಸುಧಾರಿಸುತ್ತಿದೆ ಎಂದು ನಾನು ಭಾವಿಸಿರುವುದರಿಂದ ನನ್ನ ಅನುಭವವನ್ನು ಯಾವ ಮುಲಾಜಿಲ್ಲದೆ ನೇರವಾಗಿ, ಕೆಲವರಿಗೆ ಸುತ್ತಿಬಳಸಿಯಾದರೂ ಹೇಳಿಬಿಡುತ್ತೇನೆ. ಅರ್ಥ ಮಾಡಿಕೊಂಡರೆ ಅವರಿಗೇ ಒಳ್ಳೆಯದು. ಇಲ್ಲವಾದರೆ ನನಗಂತೂ ಯಾವ ನಷ್ಟವೂ ಆಗುವುದಿಲ್ಲ.

ಈ ಚರ್ಚೆ ಕೆಲವು ದಿನಗಳ ನಂತರ ನನ್ನ ಆತ್ಮೀಯರೊಬ್ಬರ ಜೊತೆ ಫೋನಿನಲ್ಲಿ ಮತ್ತೆ ಕಾವು ಪಡೆಯಿತು. ಗಂಟೆಗಟ್ಟಲೇ ಮಾತನಾಡುತ್ತಲೇ ನಾವಿಬ್ಬರೂ ಚರ್ಚೆಯಲ್ಲಿ ಗೆದ್ದಿದ್ದೆವು. ಯಾರೊಬ್ಬರೂ ಸೋಲದೆ ಇಬ್ಬರೂ ಅದೇಗೆ ಗೆದ್ದಿರಿ ಎಂದು ನೀವು ಕೇಳಬಹುದು. ನಮ್ಮಿಬ್ಬರದು ಆರೋಗ್ಯಕರ ಚರ್ಚೆಯಾಗಿದ್ದುದರಿಂದ ನಮ್ಮ ಮಾತುಗಳಿಂದ ನಮಗೆ ಪರಸ್ಪರ ಹಲವಾರು ವಿಷಯಗಳು, ಹೊಳವುಗಳು ಸಿಕ್ಕಿದ್ದರಿಂದ ನಾವಿಬ್ಬರೂ ಗೆದ್ದಿದ್ದೆವು. ಕಡೆಗಂತೂ ಒಂದು ಮಾತು ನಿಶ್ಚಿತವಾಯಿತು: ನೀವು ಓದಿ ಬರೆಯುತ್ತಿರೋ ಇಲ್ಲಾ ಓದದೆಯೇ ನಿಮ್ಮ ಖುಷಿಗಷ್ಟೇ ಬರೆಯುತ್ತಿರೋ. ಕಡೆಗೆ ಉಳಿಯುವುದು ಜಾಳುಜಾಳೆಲ್ಲಾ ಹೋಗಿ ಗಟ್ಟಿ ಸಾಹಿತ್ಯ ಮಾತ್ರ. ಅದನ್ನು ಮರೆಯಬಾರದು.

ವಿಪರೀತ ಜನಪ್ರಿಯ ಸಾಹಿತಿಯೊಬ್ಬರು ದಿನಪತ್ರಿಕೆಗಳನ್ನೇ ಓದುವುದಿಲ್ಲವಂತೆ! ನನಗೆ ಓದಲು ಸಮಯವೇ ಸಿಗುವುದಿಲ್ಲ! ನನ್ನ ಖುಷಿಗಷ್ಟೇ ಬರೆಯುತ್ತೇನೆ! ಎಂದು ಕೆಲವರು ಹೇಳುತ್ತಿರುತ್ತಾರೆ. ಒಂದಂತೂ ಸ್ಪಷ್ಟ. ಅವರು ತಮ್ಮ ಬರವಣಿಗೆಯನ್ನು ಸಮರ್ಥಿಸಿಕೊಂಡು ಈ ಮಾತುಗಳನ್ನು ಹೇಳುತ್ತಿರುತ್ತಾರೆ. ಆ ಜನಪ್ರಿಯ ಸಾಹಿತಿಯ ಭಾಷಣವನ್ನು ಕೇಳಿದ ಯಾರಿಗೆ ಬೇಕಾದರು ಅವರು ಚೆನ್ನಾಗಿ ಓದಿಕೊಂಡಿದ್ದಾರೆ, ವರ್ತಮಾನಕ್ಕೆ ಅವರ ಲೇಖನಿಯಲ್ಲಿ ಸ್ಪಂದನೆಯಿದೆ ಎಂಬುದು ಗೊತ್ತಾಗುತ್ತದೆ. ಇನ್ನು ಓದಲು ಸಮಯವೇ ಇಲ್ಲ ಎನ್ನುವವರು ಅದೇಗೆ, ಅದ್ಯಾವ ಸಮಯದಲ್ಲಿ ಪುಃಖಾನುಪುಂಖವಾಗಿ ಬರೆಯುತ್ತಲೇ ಇರುತ್ತಾರೆ? ತಮ್ಮ ಖುಷಿಗಷ್ಟೇ ಬರೆಯುವವರು ಬರೆದು ಬರೆದು ಫೇಸ್‌ಬುಕ್ಕಿಗೆ, ವಾಟ್ಸಪ್ಪಿಗೆ ಹಾಕಿ ಇನ್ನೊಬ್ಬರ ಮೆಚ್ಚುಗೆಗೆ ಕಾಯುವುದಾದರು ಏಕೆ? ಎನ್ನುವ ಪ್ರಶ್ನೆಗಳು ನನ್ನೊಳಗೆ ಮೂಡಿ ಕಾಡಿ ಪದೇ ಪದೇ ನೆನಪಿಗೆ ಬಂದ ಪುಸ್ತಕವೇ ‘ನೀಲುಕಾವ್ಯ ಸಂಗ್ರಹ ೩’. ಲಂಕೇಶರ ನೀಲು ಕಾವ್ಯ ಓದದೆ ಹನಿಗವಿತೆ ಬರೆದರೆ ಹೇಗೆ? ಎಂಬ ಜಿಜ್ಞಾಸೆಯೂ ಕಾಡಿತು.


ಲಂಕೇಶ್ ಪತ್ರಿಕೆಯನ್ನು ಓದಲು ನಾನು ಶುರುಮಾಡಿದ ದಿನಗಳಲ್ಲಿ ನಾನು ಅದರಲ್ಲಿ ಓದುತ್ತಿದ್ದದ್ದು ತುಂಟಾಟ ಮತ್ತು ನೀಲುಕಾವ್ಯವನ್ನು ಮಾತ್ರ. ತುಂಟಾಟ ಹದಿಹರೆಯಕ್ಕೆ ಬೆಚ್ಚನೆ ಅನುಭವವನ್ನು ನೀಡುತ್ತಿದ್ದರೆ, ನೀಲುಕಾವ್ಯ ಆಗ ಅರ್ಥವಾಗದಿದ್ದರೂ ಮನಸ್ಸಿಗೆ ಮುದವನ್ನಂತೂ ನೀಡುತ್ತಿತ್ತು. ಲಂಕೇಶರ ಹಸ್ತಾಕ್ಷರಗಳಲ್ಲೇ ನೀಲು ಎಂಬ ಸಹಿಯೊಂದಿಗೆ, ಮೋಹಕ ರೇಖಾಚಿತ್ರದೊಂದಿಗೆ (ಯಾರು ಬರೆಯುತ್ತಿದ್ದರೋ ಗೊತ್ತಿಲ್ಲ. ನನ್ನ ಬಳಿ ಇರುವ ನೀಲುಕಾವ್ಯ ಸಂಗ್ರಹ ೩ರ ಪುಸ್ತಕದ ಮುಖಪುಟ ಮತ್ತು ರೇಖಾಚಿತ್ರಗಳಿಗೆ ಟಿ.ಎಫ್. ಹಾದಿಮನಿಯವರಿಗೆ ಕ್ರೆಡಿಟ್ ಇದೆ) ಪ್ರತಿವಾರವೂ ಪ್ರಕಟವಾಗುತ್ತಿದ್ದ ನಾಲ್ಕೈದು ಸಾಲುಗಳ ಪದ್ಯ ಓದುಗರ, ವಿಶೇಷವಾಗಿ ಕಾವ್ಯಪ್ರಿಯರ ಗಮನವನ್ನು ಸೆಳೆಯುತ್ತಿದ್ದವು. ನಂತರದ ದಿನಗಳಲ್ಲಿ ನನ್ನ ಪುಸ್ತಕ ಅನ್ವೇಷಣೆಗೆ ಸಿಕ್ಕ ಪುಸ್ತಕವೇ ನೀಲುಕಾವ್ಯ ಸಂಗ್ರಹ ೩. ಇನ್ನುಳಿದ ಎರಡು ಸಂಗ್ರಹಗಳನ್ನೂ ಒಟ್ಟಿಗೆ ಕೊಳ್ಳೋಣವೆಂದರೆ ಅಂದು ನಮನ ಬುಕ್ ಪ್ಯಾಲೇಸಿನಲ್ಲಿ ಲಭ್ಯವಿದ್ದದ್ದು ಇದೊಂದೇ ಸಂಗ್ರಹ.

‘ನೀಲುಕಾವ್ಯ ಸಂಗ್ರಹ ೩’ ೧೯೯೧ ರಿಂದ ೨೦೦೦ರವರಗೆ ಪ್ರಕಟವಾದ ಪದ್ಯಗಳ ಸಂಕಲನವಾಗಿದ್ದು, ಈ ಸಂಕಲನಕ್ಕೆ ‘ಮೌನಕ್ಕೆ ಮುನ್ನುಡಿ’ ಎಂಬ ಚಂದ್ರಶೇಖರ ಪಾಟೀಲರ ಮುನ್ನುಡಿಯಿದೆ.

ಮಾತುಗಳನ್ನು ನೆಚ್ಚಿ ಬದುಕವ ಕವಿ
ಮೌನದ ನೆರವಿನಿಂದ
ಕವನಗಳನ್ನು ಕಟ್ಟಿ
ಸುಮ್ಮನೆ ಅರಣ್ಯದತ್ತ ಕಣ್ಮರೆಯಾದ

ಎನ್ನುವ ನೀಲು ಕಾವ್ಯವನ್ನು ಉಲ್ಲೇಖಿಸುತ್ತಾ ಚಂಪಾರವರು ‘ಪದ’ ಮತ್ತು ‘ಅರ್ಥ’ಗಳನ್ನು ಮೀರುವ ಈ ‘ಮೌನ’ಕ್ಕೆ ‘ಮುನ್ನುಡಿ’ ಯಾಕೆ ಬೇಕು? ಎನ್ನುತ್ತಲೇ ಲಂಕೇಶರ ವ್ಯಕ್ತಿತ್ವ ಮತ್ತು ಸೃಷ್ಟಿಯ ಹೆಚ್ಚುಗಾರಿಕೆಯ ಮೇಲೆ ಬೆಳಕು ಚೆಲ್ಲುತ್ತಾರೆ.

ಈ ನೀಲು ಯಾರು ಎನ್ನುವುದಕ್ಕೆ ಹಲವು ಕಾವ್ಯಗಳ ಮೂಲಕವೇ ಲಂಕೇಶರು ಉತ್ತರಿಸುತ್ತಾರೆ. ಉದಾಹರಣೆಗೆ ಈ ಸಂಕಲನದ ಬೆನ್ನಿನಲ್ಲೇ ಇರುವ ನೀಲು ಕಾವ್ಯ ನೋಡಿ-

ನೀಲು ಯಾರು ಎಂದು ಕೇಳಿದಿರಾ?
ಹುಣ್ಣಿಮೆಯ ಬೆಳದಿಂಗಳು ಕಾಮಿನಿಯಲ್ಲಿ
ಪ್ರೇಮ ಉಕ್ಕಿಸಿದ ವೇಳೆ
ಇನಿಯನಿಲ್ಲದ ಹಾಸಿಗೆಯಲ್ಲಿ
ಬಿಕ್ಕಳಿಸಿ ಅತ್ತು ಅವನಿಗಾಗಿ ಕಾದು
ಆತ ಹಿಂದಿರುಗುವ ಹೊತ್ತಿಗೆ ಅಮಾವಾಸ್ಯೆ
ಕವಿದಿತ್ತು
ಮತ್ತೆ ಬೆಳದಿಂಗಳ ಹುಣ್ಣಿಮೆಗೆ ಕಾಯುತ್ತಾ
ಅವಳು ಇಟ್ಟ ನಿಟ್ಟುಸಿರಲ್ಲಿ
ಹುಟ್ಟಿದವಳು ನೀಲು

ಎನ್ನುತ್ತಾರೆ.

ಅಸಂಖ್ಯವಾಗಿರುವ ಎಲ್ಲಾ ನೀಲುಕಾವ್ಯಗಳನ್ನು ಓದಿ ಅವುಗಳ ಮೇಲೆ ಬರೆಯುವುದಕ್ಕಿಂತ ಸುಮ್ಮನೆ ಓದಿನ ಸುಖ ಅನುಭವಿಸುವುದೇ ಒಂದು ಅದ್ಭುತ ಕಾವ್ಯದ ಅನುಭೂತಿ. ಕೆಲವು ನೀಲುಕಾವ್ಯಗಳನ್ನು ಓದುತ್ತಲೇ ಲಂಕೇಶರ ಅಪಾರ ಓದಿನ ಆಳ ವಿಸ್ತಾರಗಳ ಪರಿಚಯ ನಮಗಾಗುತ್ತದೆ ಎಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಸಮಗ್ರ ಸಾಹಿತ್ಯವನ್ನು ಬದಿಗಿಟ್ಟು ಇದೊಂದೇ ಸಂಕಲನದಿಂದ ತಮ್ಮ ಓದಿನ ಅರಿವಿನ ಶಕ್ತಿಯಿಂದಲೇ ಇಷ್ಟೆಲ್ಲಾ ಬರವಣಿಗೆಯನ್ನು ಲಂಕೇಶರು ಮಾಡಲು ಸಾಧ್ಯವಾಯಿತು ಎಂದು ಮನದಟ್ಟಾಗುತ್ತದೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿಗೆ ಅನ್ವಯವಾಗುವಂತೆ ಪ್ರೀತಿ, ಕಾಮ, ರಾಜಕಾರಣ, ಸಾಹಿತ್ಯ ಎಲ್ಲಾ ವಿಷಯಗಳ ಮೇಲೆ ನೀಲು ಕಾವ್ಯಗಳಿವೆ. ಅದಕ್ಕೇ ನಾನು ಹೇಳುವುದು ನಾವು ಕೂಡ ಒಂದಷ್ಟು ಇಂತಹ ಪುಸ್ತಕಗಳನ್ನು ಓದಿಕೊಂಡರೆ ನಮ್ಮ ಬರವಣಿಗೆಯೂ ಸುಧಾರಿಸಿ, ಓದುಗರಿಗೆ ಮತ್ತಷ್ಟು ಖುಷಿ ನೀಡಬಹುದಲ್ಲವೇ!? ಹಾಗೇ ಸುಮ್ಮನೆ ನಾನು ಕೆಳಗೆ ಉಲ್ಲೇಖಿಸಿರುವ ಕೆಲವು ನೀಲುಕಾವ್ಯಗಳನ್ನು ಓದಿಕೊಳ್ಳಿ. ಇವು ಬರವಣಿಗೆಯ ಕುರಿತೇ ಮೂಡಿವೆ. ಜೊತೆಗೆ ನಾನೇಕೆ ಬರೆಯುವವರು ಒಂದಷ್ಟು ಓದಿಕೊಳ್ಳಬೇಕು ಎಂದು ಆಗಾಗ ಹೇಳುತ್ತೇನೆ ಎಂಬುದು ಕೂಡ ನಿಮಗೆ ಮನದಟ್ಟಾಗಬಹುದು.

ಅವಿದ್ಯಾವಂತೆಯ
ಆಳದ ಪುಟ್ಟ
ಕವನದಲ್ಲಿ
ಛಂದಸ್ಸಿಗೆ ಬದಲು
ಕುದಿವ ನೆತ್ತರು ಮತ್ತು
ಹೂವು ಇರುತ್ತವೆ
*

ರಾಜನ, ಸೇವಕನ,
ಬೀದಿಯ ಭಿಕ್ಷಕನ
ಲಕ್ಷಾಂತರ ಮಾತುಗಳು
ಇಂಗಿ
ನನ್ನೆದೆಯಲ್ಲಿ
ಕವನಗಳಾಗಿ
ಚಿಗುರುವುವು
*

ಈ ಸಮುದ್ರದ ದಂಡೆಯಲ್ಲಿ
ಕೂತಿರುವ ನಾವು
ಈ ವಿಶ್ವದ
ಕಾದಂಬರಿಯಲ್ಲಿ
ಪೂರ್ಣವಿರಾಮ ಕೂಡ
ಅಲ್ಲವಂತೆ, ನಿಜವೆ?
*

ಒಂದು ಕತೆಯ ಪ್ರಕಾರ
ಹಕ್ಕಿಯಂತೆ ಹಾರಲೆತ್ನಿಸಿದ ಆಮೆ
ಬಾವಿಗೆ ಬಿದ್ದು ಬೆನ್ನುಮುರಿದುಕೊಂಡಿತು;
ಅದರ ಬೆನ್ನಿನ ತೇಪೆಗಳ ನೋಡಿ
ಕುಕವಿಗಳು ಕಲಿಯಲಿ
*

ನೀತಿ, ಅನೀತಿ, ಅರೆನೀತಿಯ
ನಡುವೆ
ದಾರಿ ಮಾಡಿಕೊಂಡು
ಹೃದಯದ ಕತೆ
ಹೇಳುವವನೇ
ಶ್ರೇಷ್ಠ ಕಾದಂಬರಿಕಾರ
*

ಕೆಲವು ಸಲ ಕವನ ಬರೆಯುವುದೆಂದರೆ
ಕಗ್ಗವಿಯಲ್ಲಿ
ಅನನುಭವಿ ತರುಣನ
ಕಂಪಿಸುವ ಕೈಗಳಿಗಾಗಿ
ತಡಕಾಡಿದಂತೆ
*

ನನ್ನ ದಂತದಂತಹ ದೇಹದ
ರಕ್ಕ ಮಾಂಸಗಳಲ್ಲಿ
ಅದ್ಭುತ ಬೆಂಕಿ ಮತ್ತು ಹಿಮ
ಸ್ಪರ್ಧಿಸಿ ಹರಿಯದಿದ್ದರೆ
ಕವನ ಮತ್ತು ಪ್ರೇಮ
ಎರಡೂ ಸಾಧ್ಯವಾಗುವುದಿಲ್ಲ
*

ಮೊನ್ನೆ ಮೇಘದ
ಮೂಲಕ ಸಂದೇಶ
ಕಳಿಸಿದ ಕವಿಯೇ
ಜಲಕ್ಷಾಮಕ್ಕೆ ಕಾರಣ
ಎಂದು ವಿಮರ್ಶಕರು
ಹೇಳುತ್ತಿದ್ದಾರೆ


ಇದು ಸಿಹಿನೀರ ಸರೋವರದ ಒಂದು ಪುಟ್ಟ ಬೊಗಸೆಯಷ್ಟೆ. ನಿಮಗೆ ರುಚಿ ಹತ್ತಲು ಕೊಟ್ಟಿದ್ದೇನೆ. ನಿಮಗೆ ಇನ್ನೂ ಬೇಕೆಂದರೆ ಎಷ್ಟು ಬೇಕೋ ಅಷ್ಟು ನೀವೇ ಮೊಗೆಮೊಗೆದು ಕುಡಿಯಿರಿ ಎಂದು ಹೇಳಲು ಇಚ್ಛಿಸುತ್ತೇನೆ. ಅಷ್ಟಕ್ಕೂ ನಾನೂ ಕೂಡ ಕೆಲವೇ ನೀಲು ಕಾವ್ಯಗಳನ್ನು ಓದಿಕೊಂಡೆ. ಬಳಿಕ ಬೆರಳೆಣಿಕೆಯಷ್ಟು ಪುಟ್ಟ ಪದ್ಯಗಳನ್ನು ಬರೆದಿಟ್ಟುಕೊಂಡೆ. ಅದರಲ್ಲಿ ನನಗೆ ಬಹಳ ಖುಷಿಕೊಟ್ಟ ಒಂದು ಪದ್ಯದೊಂದಿಗೆ ಈ ಅಂಕಣಕ್ಕೆ ವಿರಾಮ ನೀಡುತ್ತೇನೆ.

ಲಂಕೇಶರ ನೀಲು ಕಾವ್ಯಗಳ
ಓದಿದ
ನನ್ನೊಳಗಿನ ನಲ್ಲ
ಪ್ರೀತಿಯಿಂದ ನಲಿದ
ನೋವಿನಿಂದ ಮಿಡಿದ
ಕನಲಿದ
ಆಗಾಗ ನಲ್ಲೆಯೂ ಆದ
ಕಡೆಗೆ ಜ್ಞಾನಿಯಾದ.

- ಗುಬ್ಬಚ್ಚಿ ಸತೀಶ್

ಪಿ. ಲಂಕೇಶ್‌ ಅವರ ಪುಸ್ತಕಗಳನ್ನು ಕೊಳ್ಳಲು ಅಮೇಜಾನಿನಲ್ಲಿ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ...  https://amzn.to/3PBrACp
***

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...