ತೋತಾಪುರಿ 2 ವಿಮರ್ಶೆ:
ʼಸಂವಿಧಾನʼದ
ಆಶಯ ತಿಳಿಸಲು ಎಷ್ಟೊಂದು ಚೇಷ್ಟೆ ಮಾತುಗಳು
ನಿರ್ದೇಶಕ ವಿಜಯ ಪ್ರಸಾದ್ ಅವರ ನಿರ್ದೇಶನದಲ್ಲಿ ʼತೋತಾಪುರಿʼ ಸಿನಿಮಾದ ಮುಂದುವರಿದ ಭಾಗ ʼತೋತಾಪುರಿ 2ʼ ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಬಿಡುಗಡೆಯಾಗಿದೆ. ಈರೇಗೌಡ, ಶಕೀಲಾ ಭಾನು ಪ್ರೇಮಕತೆ ಏನಾಗುತ್ತೆ ಎನ್ನುವ ಕುತೂಹಲದೊಂದಿಗೆ, ಡಾಲಿ ಧನಂಜಯ್ ಮತ್ತು ಸುಮನ್ ರಂಗನಾಥ್ ಅವರ ಯಾವ ಪಾತ್ರಗಳು ಚಿತ್ರದಲ್ಲಿವೆ ಎನ್ನುವ ನಿರೀಕ್ಷೆಯಲ್ಲಿ ಚಿತ್ರಮಂದಿರಕ್ಕೆ ಹೋದವರಿಗೆ ಯಾಕೋ ಚಿತ್ರ ವಿಪರೀತವಾಯ್ತು ಎಂಬ ಅಸಹನೆ ಕಾಡುತ್ತೆ. ಇದು ಚಿತ್ರಮಂದಿರದಿಂದ ಹೊರಗೆ ಬಂದಮೇಲೂ ಯಾಕೋ ಹಣ, ಸಮಯ ವ್ಯರ್ಥವಾಯ್ತ ಎಂಬ ಭಾವನೆ ಮೂಡಿಸುತ್ತೆ. ಆದರೆ, ಜಗ್ಗೇಶ್, ಅದಿತಿ, ಧನಂಜಯ್ ಅಭಿಮಾನಿಗಳಿಗೆ ನಿರಾಸೆಯೇನು ಆಗಲ್ಲ. ಇವರ ಅಭಿನಯದೊಂದಿಗೆ ಉಳಿದ ಕೆಲವು ಹಿರಿಯ ಅಭಿನಯ ಚೆನ್ನಾಗಿದ್ದು ಕೊಂಚ ಮನಸ್ಸು ಹಗುರಾಗುತ್ತೆ.
ಸಿನಿಮಾದ ಆರಂಭದಲ್ಲಿ ಪ್ರೀತಿಯ ʼಅಪ್ಪುʼ ಡಾ. ಪುನೀತ್ ರಾಜ್‌ಕುಮಾರ್ ಅವರ “ಗಂಧದಗುಡಿʼಯ ಒಂದು ದೃಶ್ಯವಿದೆ. ʼಜೀವನʼ ಕುರಿತ ಒಂದು ಮಾತಿದೆ. ಸಿನಿಮಾದ ಅಂತ್ಯದಲ್ಲಿ ʼಮದುವೆಗಳು ಸ್ವರ್ಗದಲ್ಲಾಗುತ್ತವೆʼ ಅನ್ನುವ ಮಾತನ್ನು ಉಲ್ಲೇಖಿಸುತ್ತಾ ನಿರ್ದೇಶಕರು ಮತ್ತೊಂದು ಮಾತನ್ನು ಹೇಳಿದ್ದಾರೆ. ಸಿನಿಮಾದ ಇಂಟರ್‌ವಲ್ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಮುಂದೆ ಒಂದು ದೃಶ್ಯವಿದೆ. ಇಡೀ ಸಿನಿಮಾದ ಆಶಯ ಈ ಮೂರು ದೃಶ್ಯಗಳಲ್ಲಿ ಇದೆ. ಏನೇ ಆದರೂ ನೋಡುಗನನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆಯೇನೆಂದರೆ, ಇದನ್ನು ಹೇಳಲು ಇಷ್ಟೊಂದು ಚೇಷ್ಟೆ ಮಾತುಗಳ ಅಗತ್ಯವಿತ್ತೇ ಎಂಬುದು.
ನಿರ್ಮಾಪಕ ಕೆ.ಎ. ಸುರೇಶ್ ಅವರ ನಿರ್ಮಾಣದ ಈ ಸಿನಿಮಾದಲ್ಲಿ ಒಂದೊಳ್ಳೆಯ ಟೀಮ್ ವರ್ಕ್ ಇದೆ. ಇನ್ನಿಲ್ಲವಾದ ಕೆಲವು ಹಿರಿಯ ನಟರು ಇಲ್ಲಿ ನೋಡ ಸಿಗುತ್ತಾರೆ. ಕೆಲವೊಂದು ದೃಶ್ಯಗಳು, ಹಾಡುಗಳು ಇಷ್ಟವಾಗುತ್ತವೆ. ಸಮಯವಿದ್ದರೆ ಒಮ್ಮೆ ನೋಡಿ.
ನನ್ ನಂಬಿ, ನನ್ ನಂಬಿ, ಪ್ಲೀಸ್...
- ಪ್ರೀತಿಯಿಂದ, ಗುಬ್ಬಚ್ಚಿ ಸತೀಶ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ