ಶನಿವಾರ, ಸೆಪ್ಟೆಂಬರ್ 30, 2023

ತೇಜಸ್ವಿಯವರ ಖಾಸಗೀ ಬದುಕಿನ ‘ಪಾಕ ಕ್ರಾಂತಿ’


ಕಥೆ, ಕಾದಂಬರಿ, ವಿಚಾರ ಸಾಹಿತ್ಯ, ಪರಿಸರ ಹೀಗೆ ಎಲ್ಲಾ ಬಗೆಯ ಸಾಹಿತ್ಯ ಸೃಷ್ಟಿಯಲ್ಲಿ ಸಿದ್ಧಹಸ್ತರಾಗಿದ್ದ ಪೂರ್ಣಚಂದ್ರ ತೇಜಸ್ವಿ ನಮ್ಮ ನಾಡಿನ ಅನನ್ಯ ಲೇಖಕ. ಕನ್ನಡದ ಅತ್ಯುತ್ತಮ ಕತೆಗಾರರಲ್ಲಿ ಒಬ್ಬರಾಗಿರುವ ಇವರ ಕತೆಗಳಲ್ಲಿ ಶ್ರೀಸಾಮಾನ್ಯನ ಜೀವನವೇ ಕೇಂದ್ರಬಿಂದು. ಮನುಷ್ಯನ ಬದುಕಿನ ಹಿಂದೆ ಇರುವ ನಿಗೂಢತೆ, ಯಶಸ್ಸು, ವೈಫಲ್ಯಗಳನ್ನು ಇವರ ಕತೆಗಳಲ್ಲಿ ಕಾಣಬಹುದು. ತೇಜಸ್ವಿಯವರು ತಮ್ಮ ಅನುಭವಗಳನ್ನು ಸಮರ್ಥವಾಗಿ ಹೇಳುವ ಕಲೆಗಾರಿಕೆಗೆ ಹೆಸರುವಾಸಿ. ಅವರು ಸೃಷಿಸಿರುವ ಅದ್ಭುತ ಲೋಕದಲ್ಲಿ ವಿಹರಿಸುವುದೇ ಒಂದು ಅನನ್ಯ ಅನುಭವ. ಅವರ ಕೃತಿಗಳನ್ನು ಓದುತ್ತಿದ್ದರೆ ಅದ್ಭುತ ಮನುಷ್ಯನೊಬ್ಬ ತನ್ನ ಲೋಕವನ್ನು ನಮ್ಮ ಕೈಹಿಡಿದು ತೋರಿಸಿ ಅಚ್ಚರಿ ಮೂಡಿಸಿದ ಅನುಭವವಾಗುತ್ತದೆ. ಈ ನಿಟ್ಟಿನಲ್ಲಿ ಅವರ ಖಾಸಗೀ ಬದುಕಿನ ಬಗ್ಗೆ ನಮಗೆ ಉಂಟಾಗುವ ಕುತೂಹಲವನ್ನು ತಣಿಸುವ ಕೃತಿ ʼಪಾಕ ಕ್ರಾಂತಿ ಮತ್ತು ಇತರ ಕತೆಗಳುʼ.

(ಈ ಪುಸ್ತಕವನ್ನು ಕೊಳ್ಳಲು ಅಮೇಜಾನ್‌ ಲಿಂಕ್: https://amzn.to/3PXbZyz)


ʼಪಾಕ ಕ್ರಾಂತಿ ಮತ್ತು ಇತರ ಕತೆಗಳುʼ ಸಂಕಲನದಲ್ಲಿ ಒಟ್ಟು ಎಂಟು ಕತೆಗಳಿವೆ. ನನ್ನ ಮೊದಲ ಓದಿಗೆ ಒಂದು ತಾಜಾ ಓದಿನ ಅನುಭವವನ್ನು ಕೊಟ್ಟ ಕತೆ ಪಾಕ ಕ್ರಾಂತಿ. ‘ಕೆಲವೆಲ್ಲಾ ಮನುಷ್ಯನಿಗೆ ಅನುಭವಿಸಿದ ಮೇಲೇ ಅರ್ಥವಾಗುವುದು. ಮತ್ತೊಬ್ಬರು ಹೇಳಿದರೆ ತಲೆಗೆ ಹೋಗುವುದೇ ಇಲ್ಲ. ಉದಾಹರಣೆಗೆ ನನ್ನ ಶ್ರೀಮತಿ ಊರಿಗೆ ಹೋಗುತ್ತಾ ಅಡಿಗೆಮನೆ ಬಗ್ಗೆ ಕೆಲವು ಸೂಚನೆಗಳನ್ನು ಕೊಟ್ಟಳು’ ಎಂದು ಕತೆಯ ಆರಂಭದಲ್ಲಿಯೇ ಮುಂದೆ ನಿಮಗೊಂದು ಅದ್ಭುತವಾದ, ತೀರಾ ಖಾಸಗಿಯಾದ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಕುತೂಹಲ ಮೂಡಿಸುತ್ತಾರೆ ಕತೆಗಾರ ತೇಜಸ್ವಿ. ಕತೆ ಮುಂದೆ ಸಾಗುತ್ತಿದ್ದಂತೆ ಅದ್ಭುತ ಕತೆಗಾರ ಪಕ್ಕಾ ಗಂಡನಂತೆಯೇ ವರ್ತಿಸ ತೊಡಗುತ್ತಾನೆ. ಅಡಿಗೆಮನೆಯಲ್ಲಿ ಅದು ಅಲ್ಲಿದೆ, ಇದು ಇಲ್ಲಿದೆ ಎಂದು ಹೆಂಡತಿ ಹೇಳುವ ಮಾತುಗಳನ್ನು ಕಾಟಾಚಾರಕ್ಕೆ ಕೇಳಿಸಿಕೊಳ್ಳುವ ಗಂಡ ಈ ಹೆಂಗಸರು ತಾವು ಇಲ್ಲದಿದ್ದರೆ ಗಂಡಸರು ಊಟವಿಲ್ಲದೆ ಉಪವಾಸ ಬಿದ್ದು ಸಾಯುತ್ತಾರೇನು? ಅಡುಗೆಮನೆ ಚೊಕ್ಕಟವಾಗಿಡಲು ಇದೇನು ಆಪರೇಷನ್ ಥೀಯೆಟರೆ? ಎಂದೆಲ್ಲಾ ತನ್ನಲ್ಲೇ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ ಊರಿಗೆ ಹೊರಟವಳ ಹತ್ತಿರ ಕ್ಯಾತೆ ತೆಗೆದು ಜಗಳವಾಡುವುದು ಬೇಡ ಎಂದುಕೊಂಡು ಹುಂ ಎನ್ನುತ್ತಾನೆ. ಅಡಿಗೆ ಪಾತ್ರೆಗಳನ್ನು ಅದರಲ್ಲೂ ಪಾತ್ರೆಗಳ ಹೊರಭಾಗವನ್ನು ತೊಳೆಯುವುದು ಬೇಡವೆಂಬ ತರ್ಕ ಗಂಡನದು. ಹೆಲ್ತ್ ಇನ್ಸ್ಪೆಕ್ಟರ್ ಬಂದು ದಿನಾ ಅಡುಗೆಮನೆ ಚೆಕ್ ಮಾಡ್ತಾನಾ ಎಂಬ ವ್ಯಂಗ್ಯ. ಇನ್ನು ಸಾರನ್ನು ನಾಲ್ಕಾರು ದಿನಕ್ಕೆ ಆಗುವಷ್ಟು ಒಮ್ಮೆಗೇ ಮಾಡಿಟ್ಟು ಕುದಿಸಿ ಇಡಬಹುದಲ್ಲಾ? ಎಂಬ ಅಮೋಘವಾದ ಅಭಿಪ್ರಾಯಗಳು. ಆದರೆ, ಈ ಅಭಿಪ್ರಾಯಗಳನ್ನು ಹೆಂಗಸರ ಹತ್ತಿರ ಹೇಳಿದರೆ ಸ್ತ್ರೀ ಸ್ವಾತಂತ್ರ್ಯದ ಹಲವು ವಿಧಾನಗಳೆಂದು ಪರಿಗಣಿಸದೆ ಈ ಅನಾಗರೀಕ ಅಭಿರುಚಿ ಇರುವ ಮನುಷ್ಯ ಅದೇಗೆ ಉತ್ತಮ ಕತೆಗಾರನಾದ ಎಂಬ ಆಶ್ಚರ್ಯ ತೋರುವರು. ಇನ್ನು ಈ ಕ್ರಾಂತಿಕಾರಕ ಬದಲಾವಣೆಗಳ ಬಗ್ಗೆ ಗಂಡಸರಿಗೆ ಹೇಳಿದರೋ, ಮನೆ ಹೆಂಗಸರಿಗೆ ಹೆಚ್ಚು ವಿರಾಮ ದೊರೆತು ತಮಗೇ ತೊಂದರೆಯಾದೀತೆಂಬ ಭಯದಲ್ಲಿ ಇವರ ಯೋಜನೆಗಳ ಬಗ್ಗೆ ನಿರಾಸಕ್ತಿ.

ನಮ್ಮ ದೇಶ ಮುಂದುವರಿಯದಿರುವುದಕ್ಕೆ ಮುಖ್ಯ ಕಾರಣ ಇವರ ಸಂಪ್ರದಾಯ ನಿಷ್ಠೆಯೇ. ಹೇಗಿದ್ದರೂ ಶ್ರೀಮತಿ ಊರಿಗೆ ಹೊರಟಿರುವುದರಿಂದ ನನ್ನ ತತ್ವ ಸಿದ್ಧಾಂತಗಳನ್ನು ಕಾರ್ಯರೂಪಕ್ಕಿಳಿಸಿ ಆ ಸಂಶೋಧನೆಯ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರುವ ಸುಯೋಗ ಸಿಕ್ಕಿದೆ ಎಂದು ಭಾವಿಸುತ್ತಾರೆ. ಹೆಂಡತಿ ನಿರ್ಗಮಿಸಿದ ಮೊದಲ ದಿನ ಯಾವ ಸಮಸ್ಯೆಯೂ ಆಗುವುದಿಲ್ಲ. ಆದರೆ ಆಕೆ ಬರುವವರೆಗೂ ಹಾಲು ತಗೊಳ್ಳಬಾರದೆಂದು ತೀರ್ಮಾನವಾಗುತ್ತದೆ. ಕಾರಣ, ಇವರು ಫೋನಿನಲ್ಲಿ ಮಾತಾಡುತ್ತಿದ್ದಾಗ ಎಲೆಕ್ಟ್ರಿಕ್ ಸ್ಟೌವಿನ ಮೇಲಿಟ್ಟ ಹಾಲು ಸಂಪೂರ್ಣವಾಗಿ ಉಕ್ಕಿ ಸ್ಟೌ ಒಳಗೆ ಇಳಿದು ಹಾವು ಭುಸುಗುಟ್ಟುವ ಶಬ್ದ! ಇವರಿಗೆ ಒಲೆಯ ಬುಡಕ್ಕೆ ಹೆಂಗಸರನ್ನು ಬಂಧಿಸಿರುವ ಮೊದಲ ಸಂಕೋಲೆ ಹಾಲು ಎಂದು ಮನದಟ್ಟಾಗುತ್ತದೆ. ಮೊಸರು ಮಜ್ಜಿಗೆ ಇಲ್ಲದೆ ಎರಡು ತುತ್ತು ಅನ್ನ ಸಾರನ್ನೇ ಜಾಸ್ತಿ ತಿಂದರೆ ಸಾಕಲ್ಲವೇ? ಎಂಬ ನಿಲುವು ತೆಗೆದುಕೊಳ್ಳುವ ಗಂಡನಿಗೆ ಹಾಲು ರೇಡಿಯೋ ವಿಕಿರಣ ಸೂಸುವ ಯುರೇನಿಯಂಗಿಂತ ಅಪಾಯಕಾರಿ ವಸ್ತುವಾಗಿ ತೋರುತ್ತದೆ. ಹಾಲಿನ ಪ್ಯಾಕೆಟ್ ಮೇಲೆ ಹ್ಯಾಂಡಲ್ ವಿತ್ ಕೇರ್ ಎನ್ನುವ ಸೂಚನೆ ಕೊಟ್ಟರೆ ಒಳ್ಳೆಯದು ಎಂಬ ಚಿಂತನೆ ನಡೆಸುತ್ತಾರೆ. ಹಾಲಿನ ಪಾತ್ರೆ ಭಿಕ್ಷುಕರ ಪಾತ್ರೆಯಂತಾಗಿ ಮೊದಲ ದಿನವೇ ಹೊಸ ಸಂಶೋಧನೆಗೆ ವಿಘ್ನವಾಗುತ್ತದೆ.

ಪ್ರೆಷರ್ ಕುಕ್ಕರಿನ ಗ್ಯಾಸ್ಕೆಟ್ಟು ಸೇಫ್ಟಿವಾಲ್ವ್ಗಳನ್ನು ಕೊಳ್ಳಲು ಹೋದಾಗ ಅಂಗಡಿಯ ಮಾರ್ವಾಡಿ ಹುಡುಗಿ ಇವರು ಪದೇಪದೇ ಇವುಗಳನ್ನು ಕೊಳ್ಳಲು ಬರುತ್ತಿರುವುದನ್ನು ಗಮನಿಸಿ ‘ಯಾಕೆ ಸರ್? ಮಿಸೆಸ್ಸು ಮನೇಲಿಲ್ವ?’ ಎಂದು ಕೇಳುವುದು ಇವರಿಗೆ ಭವಿಷ್ಯ ಹೇಳುವವಳ ರೀತಿ ಕಾಣುತ್ತಾಳೆ. ಆ ಹುಡುಗಿ ಅನ್ನಕ್ಕೆ ನೀವು ಸರಿಯಾದ ಪ್ರಮಾಣದಲ್ಲಿ ನೀರನ್ನು ಕೂಡಿಸದ ಕಾರಣ ಹೀಗೆ ಆಗುತ್ತಿರುವುದಾಗಿ ತಿಳಿಸುತ್ತಾಳೆ. ಕತೆಗಾರರು ಅಡುಗೆ ಎಂಬುದು ಕಲೆಯೋ ವಿಜ್ಞಾನವೋ ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಮೊದಲಿಗೆ ಕಲೆಯೇ ಎಂದು ತೀರ್ಮಾನಿಸಿಕೊಂಡರೂ, ಮನೆಗೆ ಕೊರೆಯಲು ಆಗಮಿಸುವ ಕಾಫಿಬೋರ್ಡಿನ ವಿಜ್ಞಾನಿ ಮಿತ್ರ (ಹಾಲು ಉಕ್ಕಲು ಕಾರಣಕರ್ತನಾದವನು) ಅಡುಗೆ ಗೃಹವಿಜ್ಞಾನವೆಂದು ಇವರಿಗೆ ಮನವರಿಕೆ ಮಾಡಿಸುತ್ತಾನೆ. ಅವನ ಇಚ್ಛೆಯಂತೆ ಇವರು ಮಾಡುವ ಮೂಸಂಬಿ ಕಾಫಿ ಕುಡಿದು ಅಲ್ಲಿಂದ ಮೆತ್ತಗೆ ಇವರ ಮನೆಯವರು ಬಂದ ಮೇಲೆ ಬರುತ್ತೇನೆಂದು ಕಾಲ್ತೆಗೆಯುತ್ತಾನೆ.

ಒಂದು ಗುಟುಕು ಕಾಫಿ ಕುಡಿದವನೇ ಫಾಲಿಡಾಲ್ ಕುಡಿದವನಂತೆ ಮುಖ ಮಾಡಿ ಹೋಮಿಯೋಪತಿ ಚಿಕಿತ್ಸೆಯ ನೆಪವೊಡ್ಡಿ ತಲೆ ತಪ್ಪಿಸಿಕೊಂಡು ಓಡಿ ಹೋಗುವ ವಿಜ್ಞಾನಿ ಮಿತ್ರ ಈ ಕ್ರಾಂತಿಕಾರಿ ಕತೆಗಾರನಿಗೆ ಪ್ರತಿಗಾಮಿಯಂತೆ ಕಾಣುತ್ತಾನೆ. ಕ್ರಾಂತಿಕಾರಿಗಳಿಗೆ ಇಂಥ ಒಂದೆರಡು ಪ್ರತಿಗಾಮಿಗಳ ತೊಂದರೆ ಸಾಧಾರಣವಾಗಿ ಇದ್ದೇ ಇರುತ್ತೆ ಎಂದು ಅಂದುಕೊಳ್ಳುತ್ತಲೇ ಮನೆಯ ನಾಯಿಮರಿಗೆ ಊಟ ಹಾಕಿದಾಗಲೇ ಗೊತ್ತಾಗುವುದು ಸುತ್ತಮುತ್ತಾ ಪ್ರತಿಗಾಮಿಗಳೇ ತುಂಬಿಕೊಂಡಿದ್ದಾರೆಂದು! ಇವರು ತಟ್ಟೆಗೆ ಅನ್ನ ಹಾಕಿದಾಗ ನಾಯಿಮರಿ ಎಂದಿನಂತೆ ಗಬಗಬ ಊಟ ಮಾಡದೆ ಅನ್ನವನ್ನು ಒಂದೆರಡು ಸಾರಿ ಮೂಸಿನೋಡಿ ಎರಡು ನಿಮಿಷ ನಿಂತುಕೊಂಡು ಗಾಢವಾಗಿ ಆಲೋಚಿಸಿ ಊಟ ಮಾಡದೆ ನೆಟ್ಟಗೆ ಹೋಗಿ ಮರದ ನೆರಳಿನಲ್ಲಿ ಕುಳಿತುಕೊಳ್ಳುತ್ತದೆ. ತೇಜಸ್ವಿಯವರ ನಿರೂಪಣೆಯ ಅಲ್ಟಿಮೇಟ್ ಹಾಸ್ಯದ ಒಂದು ಝಲಕ್ ಕತೆಯ ಈ ಭಾಗದಲ್ಲಿದೆ. ಇವರ ಅಡುಗೆಯ ಕಡೆಗೆ ನಾಯಿಮರಿ ಕಿಂಚಿತ್ತೂ ಒಲವನ್ನು ತಾಳದೆ ಉಪವಾಸ ಬಿದ್ದು ವೈರಾಗ್ಯ ತಾಳುತ್ತದೆ. ನಾಯಿ ಊಟ ಮಾಡುವಂತೆ ಇವರು ಒಲೈಸುವ ಪರಿ ಕಚಗುಳಿಯನ್ನಿಟ್ಟು ಓದುಗನನ್ನು ಮಹದಾನಂದ ಭಾವದಲ್ಲಿ ತೇಲಿಸುತ್ತದೆ. ತೆನಾಲಿ ರಾಮನ ಬೆಕ್ಕಿನಂತಾದ ನಾಯಿಗೆ ಕಡೆಗೆ ಒಣಮೀನಿನ ಆಮಿಷ ಒಡ್ಡುವ ಯೋಚನೆಯೊಂದು ಮೂಡುತ್ತದೆ.

ಒಣಮೀನಿನ ವಾಸನೆಗೆ ಮೇನಕೆಯ ಕ್ಯಾಬರೆ ನೋಡಿದ ವಿಶ್ವಾಮಿತ್ರನಂತೆ ನಾಯಿ ತನ್ನ ಉಪವಾಸ ವ್ರತವನ್ನು ತೊರೆದು ಅನ್ನ ಕಾಣದ ಪ್ರಾಣಿಯಂತೆ ಚಡಪಡಿಸುತ್ತಾ, ಗುಳ್ಳೆನರಿ ತರ ಊಳಿಡುತ್ತದೆ. ದುರಂತವೆಂದರೆ, ಒಣಮೀನಿನ ಸಹವಾಸದಿಂದಾಗಿ ಕತೆಗಾರರು ಕರೆಂಟು ಕೈಕೊಟ್ಟಾಗ ಕತ್ತಲಲ್ಲಿ ಸಾರಿನಲ್ಲಿ ಸಾಸುವೆ ಜಾಸ್ತಿಯಾಯ್ತೆಂದು ಇರುವೆಗಳನ್ನು ತಿಂದು ತೇಗುತ್ತಾರೆ. ಒಣಮೀನನ್ನು ಕೊಳ್ಳಲು ಹೋದಾಗ ಆಗುವ ಫಜೀತಿಗಳು, ಅದರ ಕೃಪೆಯಿಂದ ಮನೆಯಲ್ಲಿ ಹೆಚ್ಚಾಗುವ ಇರುವೆಗಳು, ಅವುಗಳ ಕಾಟದಿಂದ ಪಾರಾಗಲು ಸೀಮೆಎಣ್ಣೆ ತರಲು ಹೋರಡುವ ಲೇಖಕರಿಗೆ ರೇಷನ್ ಕಾರ್ಡ್ ಎನ್ನುವುದು ಒಬ್ಬ ವ್ಯಕ್ತಿಯ ಜೀವನದಲ್ಲಿ ಸಾಕ್ಷಾತ್ಕಾರವಾಗುವ ಮಹೋನ್ನತ ವಸ್ತು ಎನ್ನುವುದು ಅರಿವಾಗುತ್ತದೆ. ಸ್ಕೂಟರಿನಲ್ಲಿ ಹೋಗುವಾಗ ಹಿಂದೆಯೇ ಓಡಿಬರುವ ಜನರು ಹೆಡ್‌ಲೈಟ್ ಆನ್ ಆಗಿರುವುದನ್ನು ತಿಳಿಸುವ ಪರೋಪಕಾರಿಗಳ ಪ್ರಸಂಗ, ಇರುವೆಗಳನ್ನು ಓಡಿಸಲು ಸೀಮೆಎಣ್ಣೆ ಬದಲು ಡಿಸೇಲ್ ಉಪಯೋಗಿಸಿದರೆ ಹೇಗೆ ಎಂದು ಛಕ್ಕನೆ ಹೊಳೆಯುವ ಕಲ್ಪನೆ, ಗೆಳೆಯನ ಪರಿಚಿತನ ಮಗುವಿಗೆ ಕತೆಗಾರರು ಹೆಸರಿಡಬೇಕೆಂಬ ಪ್ರಹಸನ, ಆನಂತರ ಗೆಳೆಯ ಹೇಳಿಕೊಡುವ ಸಿಂಪಲ್ ಅಡುಗೆ ಮಾಡುವ ಪ್ರೊಸೀಜರ್, ಆ ಸಿಂಪಲ್ ಪ್ರೊಸೀಜರ್‌ನಂತೆ ಕುಕ್ಕರ್ ಮುಚ್ಚುಳ ಮುಚ್ಚಿ ಸ್ಟೌಮೇಲಿಡುವ ವೇಳೆಗೆ ಪೋಲಿಸರ ಜೀಪಿನ ಸದ್ದನ್ನು ಆಲಿಸಿ ಹೊರಬರುವ ಕತೆಗಾರರು ಖ್ಯಾತ ನಟನೊಬ್ಬನ ಆಗಮನದ ಸುಳಿವನ್ನು ಹುಡುಕಿ ಬರುವ ಪೋಲೀಸರ ಜೊತೆ ಸುದೀರ್ಘ ತನಿಖೆ-ಮಾತುಕತೆಯಲ್ಲಿ ತೊಡಗಿದಾಗ ಅಡುಗೆಮನೆಯ ಕಡೆಯಿಂದ ಭಯಂಕರ ಆಸ್ಪೋಟನೆಯ ಸದ್ದು ಕೇಳಿ ಪಾಕಕ್ರಾಂತಿಯ ಆಲೋಚನೆಯೊಂದು ಉಗ್ರಗಾಮಿ ಚಟುವಟಿಕೆಯಂತಾಗಿ ಕತೆಯ ಅಂತ್ಯಕ್ಕೆ ರೋಚಕತೆಯಿಂದ ಪೋಲಿಸ್ ಅಧಿಕಾರಿ ‘ಆರ್ ಯೂ ಷೂರ್?’ ಎಂದು ಕೇಳುವಲ್ಲಿಗೆ ಕತೆ ಮುಗಿಯುತ್ತದೆ.

ಕತೆಯನ್ನು ಓದುತ್ತಾ ಓದುತ್ತಾ ನಾನು ಪಕಪಕನೆ ನಗುತ್ತಿದ್ದರೆ ನನ್ನಾಕೆ ಮೊದಲು ಅಂಕಣವನ್ನು ಬರೆದು ಮುಗಿಸಿ ಎಂದರು. ಓದೋದ್ರಲ್ಲಿ ಇರೋ ಸುಖ ಬರೆಯೋದ್ರಲ್ಲಿ ಇಲ್ಲ ಕಣಮ್ಮ ಸುಮ್ಮನಿರು ಎಂದೆ. ಕತೆ ಓದುವಾಗ ಅಲ್ಲಲ್ಲಿ ʼಕಿರಿಕ್ʼ ಮಣ್ಣೆರಾಜುರವರ ಅಂಕಣಗಳು ನನಗೆ ನೆನಪಿಗೆ ಬಂದವು. ತೇಜಸ್ವಿಯವರ ಮತ್ತು ಮಣ್ಣೆರಾಜುರವರ ಹಾಸ್ಯದ ಮೊನಚು ಒಂದೇ ಎನ್ನಿಸಿತು. ಸಂಕಲನದ ‘ಕಳ್ಳನ ಕತೆ’ ಪುಟ್ಟದಾದರು ಮಕ್ಕಳ ಮುಗ್ಧ ಪ್ರಪಂಚಕ್ಕೆ ಹಿಡಿದ ಕೈಗನ್ನಡಿಯಂತಿದೆ. ಉಳಿದ ಕತೆಗಳನ್ನು ಓದಿಕೊಳ್ಳಬೇಕಿದೆ. ನೀವೂ ತಪ್ಪದೆ ಪಾಕ ಕ್ರಾಂತಿಯನ್ನು ಓದುವ ಮೂಲಕ ನಿಮ್ಮ ಓದಿನ ಕ್ರಾಂತಿಯನ್ನು ಮುಂದುವರೆಸಿ. ಈ ಓದಿನ ವಿಶೇಷತೆಯೆಂದರೆ, ಹೊಸದಾಗಿ ಬರೆಯುವವರಿಗೆ ಮತ್ತು ಈಗಾಗಲೇ ಬರೆಯುತ್ತಿರುವವರಿಗೆ ಈ ಸಂಕಲನ ಸ್ಫೂರ್ತಿಯ ಸೆಲೆಯಾಗಬಹುದೆಂಬುದು.

- ಗುಬ್ಬಚ್ಚಿ ಸತೀಶ್.
ಈ ಪುಸ್ತಕವನ್ನು ಕೊಳ್ಳಲು ಅಮೇಜಾನ್‌ ಲಿಂಕ್: https://amzn.to/3PXbZyz
(ಈ ಲೇಖನ ನನ್ನ ʼರೆಕ್ಕೆ ಪುಕ್ಕ ಬುಕ್ಕʼ ಪುಸ್ತಕದಲ್ಲಿದೆ. ಮತ್ತು ಅದಕ್ಕೂ ಮೊದಲು ʼತುಮಕೂರು ವಾರ್ತೆʼ ದಿನಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ಪ್ರಕಟವಾಗಿತ್ತು)
***

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಅರ್ಜುನ V/s ಏಕಲವ್ಯ

ಅರ್ಜುನ V/s ಏಕಲವ್ಯ ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗ...