ಗುರುವಾರ, ಸೆಪ್ಟೆಂಬರ್ 28, 2023

ಲಂಕೇಶರ ನೀಲು ಕಾವ್ಯ ಓದದೆ ಹನಿಗವಿತೆ ಬರೆದರೆ ಹೇಗೆ?

ಲಂಕೇಶರ ನೀಲು ಕಾವ್ಯ ಓದದೆ ಹನಿಗವಿತೆ ಬರೆದರೆ ಹೇಗೆ?


ಕವಿಗೋಷ್ಠಿಯೊಂದರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ನಾನು ಕಲ್ಪನೆ, ಅನುಭವದ ಜೊತೆಗೆ ಒಂದಷ್ಟು ಓದು ಬೆರೆತರೆ ಕವನಗಳು ಮತ್ತಷ್ಟು ಚೆನ್ನಾಗಿ ಮೂಡುತ್ತವೆ, ಬರವಣಿಗೆ ಮತ್ತಷ್ಟು ಸುಧಾರಿಸುತ್ತದೆ ಎಂಬರ್ಥದ ಮಾತುಗಳನ್ನು ಆಡಿದೆ. ಅಂದಿನ ಆ ಕವಿಗೋಷ್ಠಿಯಲ್ಲಿ ಕವಿಗಳು ವಾಚಿಸಿದ ಬಹಳಷ್ಟು ಕವನಗಳು ಗಂಭೀರವಾಗಿದ್ದವು. ಒಂದೆರಡು ವರ್ಷದ ಹಿಂದಿನ ಕವಿಗೋಷ್ಠಿಯಲ್ಲಿ ಈ ಕವಿಗೋಷ್ಠಿಯಲ್ಲೂ ಇದ್ದ ಕೆಲವು ಕವಿಗಳ ಕವನಗಳನ್ನು ಕೇಳಿ ಇವರಿನ್ನೂ ಸುಧಾರಿಸಬೇಕಿದೆ ಥೇಟ್ ನನ್ನಂತೆ ಎಂದುಕೊಂಡಿದ್ದೆ. ಆದರೀಗ ಕೆಲವರು ಬಹಳ ಅರ್ಥವತ್ತಾದ ಕವನಗಳನ್ನು ವಾಚಿಸಿದ್ದಾರೆ. ಅಲ್ಲಿಗೆ ಇವರು ಒಂದಷ್ಟು ಒಳ್ಳೆಯ ಕವನ ಸಂಕಲನಗಳನ್ನು ಓದಿಕೊಂಡಿರಬಹುದು ಎಂದುಕೊಂಡೆ. ಆ ನಿಟ್ಟಿನಲ್ಲೇ ನನ್ನ ಪುಟ್ಟ ಭಾಷಣವೂ ಮುಗಿದಿತ್ತು.

ಕಾರ್ಯಕ್ರಮ ಮುಗಿದ ಮೇಲೆ ಕೆಲವು ಗೆಳೆಯರ ಜೊತೆ ಮಾತನಾಡುತ್ತಾ ಹೆಚ್ಚಾಗಿ ಬರೆಯುವ ಬದಲು ಹೆಚ್ಚಾಗಿ ಓದಿರಿ ಎಂದು ಹೇಳುತ್ತಿದ್ದೆ. ಆಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನನ್ನ ನೆಚ್ಚಿನ ಲೇಖಕರೊಬ್ಬರು ನಗುತ್ತಲೇ ಮಾತಿಗೆ ಇಳಿದು, ಹಾಗಂತ ಏನಿಲ್ಲ ಸರ್. ಓದದೆಯೂ ಚೆನ್ನಾಗಿ ಬರೆಯಬಹುದು. ಬರೀತಾ ಹೋದರೆ ಒಳ್ಳೆಯ ಬರವಣಿಗೆ ಸಿದ್ಧಿಸುತ್ತದೆ ಎಂದರು. ಹಾಡ್ತಾ ಹಾಡ್ತಾ ರಾಗ ಅಂತಾರಲ್ಲ ಹಾಗೆ ಬರೀತಾ ಬರೀತಾ ಬರವಣಿಗೆ ಎನ್ನುವ ಅರ್ಥದಲ್ಲಿ ಅವರ ಮಾತುಗಳಿದ್ದವು. ಅವರ ಅಭಿಪ್ರಾಯವನ್ನು ಅವರು ಹಂಚಿಕೊಂಡರು. ನಾನು ಅದನ್ನು ಗೌರವಿಸುತ್ತಲೇ ನನ್ನ ಅನುಭವವನ್ನು ಹೇಳಿದೆ ಎಂದೆ. ಒಮ್ಮೊಮ್ಮೆ ನಾವು ನಮ್ಮ ಅನಿಸಿಕೆಗಳನ್ನು, ಅನುಭವಗಳನ್ನು ಇನ್ನೊಬ್ಬರ ಮೇಲೆ ಹೇರುತ್ತಿದ್ದೇವೆ ಎಂದುಕೊಂಡರೂ ನನ್ನ ಅಲ್ಪಸ್ವಲ್ಪ ಓದಿನಿಂದಲೇ ನನ್ನ ಬರವಣಿಗೆ ಸುಧಾರಿಸುತ್ತಿದೆ ಎಂದು ನಾನು ಭಾವಿಸಿರುವುದರಿಂದ ನನ್ನ ಅನುಭವವನ್ನು ಯಾವ ಮುಲಾಜಿಲ್ಲದೆ ನೇರವಾಗಿ, ಕೆಲವರಿಗೆ ಸುತ್ತಿಬಳಸಿಯಾದರೂ ಹೇಳಿಬಿಡುತ್ತೇನೆ. ಅರ್ಥ ಮಾಡಿಕೊಂಡರೆ ಅವರಿಗೇ ಒಳ್ಳೆಯದು. ಇಲ್ಲವಾದರೆ ನನಗಂತೂ ಯಾವ ನಷ್ಟವೂ ಆಗುವುದಿಲ್ಲ.

ಈ ಚರ್ಚೆ ಕೆಲವು ದಿನಗಳ ನಂತರ ನನ್ನ ಆತ್ಮೀಯರೊಬ್ಬರ ಜೊತೆ ಫೋನಿನಲ್ಲಿ ಮತ್ತೆ ಕಾವು ಪಡೆಯಿತು. ಗಂಟೆಗಟ್ಟಲೇ ಮಾತನಾಡುತ್ತಲೇ ನಾವಿಬ್ಬರೂ ಚರ್ಚೆಯಲ್ಲಿ ಗೆದ್ದಿದ್ದೆವು. ಯಾರೊಬ್ಬರೂ ಸೋಲದೆ ಇಬ್ಬರೂ ಅದೇಗೆ ಗೆದ್ದಿರಿ ಎಂದು ನೀವು ಕೇಳಬಹುದು. ನಮ್ಮಿಬ್ಬರದು ಆರೋಗ್ಯಕರ ಚರ್ಚೆಯಾಗಿದ್ದುದರಿಂದ ನಮ್ಮ ಮಾತುಗಳಿಂದ ನಮಗೆ ಪರಸ್ಪರ ಹಲವಾರು ವಿಷಯಗಳು, ಹೊಳವುಗಳು ಸಿಕ್ಕಿದ್ದರಿಂದ ನಾವಿಬ್ಬರೂ ಗೆದ್ದಿದ್ದೆವು. ಕಡೆಗಂತೂ ಒಂದು ಮಾತು ನಿಶ್ಚಿತವಾಯಿತು: ನೀವು ಓದಿ ಬರೆಯುತ್ತಿರೋ ಇಲ್ಲಾ ಓದದೆಯೇ ನಿಮ್ಮ ಖುಷಿಗಷ್ಟೇ ಬರೆಯುತ್ತಿರೋ. ಕಡೆಗೆ ಉಳಿಯುವುದು ಜಾಳುಜಾಳೆಲ್ಲಾ ಹೋಗಿ ಗಟ್ಟಿ ಸಾಹಿತ್ಯ ಮಾತ್ರ. ಅದನ್ನು ಮರೆಯಬಾರದು.

ವಿಪರೀತ ಜನಪ್ರಿಯ ಸಾಹಿತಿಯೊಬ್ಬರು ದಿನಪತ್ರಿಕೆಗಳನ್ನೇ ಓದುವುದಿಲ್ಲವಂತೆ! ನನಗೆ ಓದಲು ಸಮಯವೇ ಸಿಗುವುದಿಲ್ಲ! ನನ್ನ ಖುಷಿಗಷ್ಟೇ ಬರೆಯುತ್ತೇನೆ! ಎಂದು ಕೆಲವರು ಹೇಳುತ್ತಿರುತ್ತಾರೆ. ಒಂದಂತೂ ಸ್ಪಷ್ಟ. ಅವರು ತಮ್ಮ ಬರವಣಿಗೆಯನ್ನು ಸಮರ್ಥಿಸಿಕೊಂಡು ಈ ಮಾತುಗಳನ್ನು ಹೇಳುತ್ತಿರುತ್ತಾರೆ. ಆ ಜನಪ್ರಿಯ ಸಾಹಿತಿಯ ಭಾಷಣವನ್ನು ಕೇಳಿದ ಯಾರಿಗೆ ಬೇಕಾದರು ಅವರು ಚೆನ್ನಾಗಿ ಓದಿಕೊಂಡಿದ್ದಾರೆ, ವರ್ತಮಾನಕ್ಕೆ ಅವರ ಲೇಖನಿಯಲ್ಲಿ ಸ್ಪಂದನೆಯಿದೆ ಎಂಬುದು ಗೊತ್ತಾಗುತ್ತದೆ. ಇನ್ನು ಓದಲು ಸಮಯವೇ ಇಲ್ಲ ಎನ್ನುವವರು ಅದೇಗೆ, ಅದ್ಯಾವ ಸಮಯದಲ್ಲಿ ಪುಃಖಾನುಪುಂಖವಾಗಿ ಬರೆಯುತ್ತಲೇ ಇರುತ್ತಾರೆ? ತಮ್ಮ ಖುಷಿಗಷ್ಟೇ ಬರೆಯುವವರು ಬರೆದು ಬರೆದು ಫೇಸ್‌ಬುಕ್ಕಿಗೆ, ವಾಟ್ಸಪ್ಪಿಗೆ ಹಾಕಿ ಇನ್ನೊಬ್ಬರ ಮೆಚ್ಚುಗೆಗೆ ಕಾಯುವುದಾದರು ಏಕೆ? ಎನ್ನುವ ಪ್ರಶ್ನೆಗಳು ನನ್ನೊಳಗೆ ಮೂಡಿ ಕಾಡಿ ಪದೇ ಪದೇ ನೆನಪಿಗೆ ಬಂದ ಪುಸ್ತಕವೇ ‘ನೀಲುಕಾವ್ಯ ಸಂಗ್ರಹ ೩’. ಲಂಕೇಶರ ನೀಲು ಕಾವ್ಯ ಓದದೆ ಹನಿಗವಿತೆ ಬರೆದರೆ ಹೇಗೆ? ಎಂಬ ಜಿಜ್ಞಾಸೆಯೂ ಕಾಡಿತು.


ಲಂಕೇಶ್ ಪತ್ರಿಕೆಯನ್ನು ಓದಲು ನಾನು ಶುರುಮಾಡಿದ ದಿನಗಳಲ್ಲಿ ನಾನು ಅದರಲ್ಲಿ ಓದುತ್ತಿದ್ದದ್ದು ತುಂಟಾಟ ಮತ್ತು ನೀಲುಕಾವ್ಯವನ್ನು ಮಾತ್ರ. ತುಂಟಾಟ ಹದಿಹರೆಯಕ್ಕೆ ಬೆಚ್ಚನೆ ಅನುಭವವನ್ನು ನೀಡುತ್ತಿದ್ದರೆ, ನೀಲುಕಾವ್ಯ ಆಗ ಅರ್ಥವಾಗದಿದ್ದರೂ ಮನಸ್ಸಿಗೆ ಮುದವನ್ನಂತೂ ನೀಡುತ್ತಿತ್ತು. ಲಂಕೇಶರ ಹಸ್ತಾಕ್ಷರಗಳಲ್ಲೇ ನೀಲು ಎಂಬ ಸಹಿಯೊಂದಿಗೆ, ಮೋಹಕ ರೇಖಾಚಿತ್ರದೊಂದಿಗೆ (ಯಾರು ಬರೆಯುತ್ತಿದ್ದರೋ ಗೊತ್ತಿಲ್ಲ. ನನ್ನ ಬಳಿ ಇರುವ ನೀಲುಕಾವ್ಯ ಸಂಗ್ರಹ ೩ರ ಪುಸ್ತಕದ ಮುಖಪುಟ ಮತ್ತು ರೇಖಾಚಿತ್ರಗಳಿಗೆ ಟಿ.ಎಫ್. ಹಾದಿಮನಿಯವರಿಗೆ ಕ್ರೆಡಿಟ್ ಇದೆ) ಪ್ರತಿವಾರವೂ ಪ್ರಕಟವಾಗುತ್ತಿದ್ದ ನಾಲ್ಕೈದು ಸಾಲುಗಳ ಪದ್ಯ ಓದುಗರ, ವಿಶೇಷವಾಗಿ ಕಾವ್ಯಪ್ರಿಯರ ಗಮನವನ್ನು ಸೆಳೆಯುತ್ತಿದ್ದವು. ನಂತರದ ದಿನಗಳಲ್ಲಿ ನನ್ನ ಪುಸ್ತಕ ಅನ್ವೇಷಣೆಗೆ ಸಿಕ್ಕ ಪುಸ್ತಕವೇ ನೀಲುಕಾವ್ಯ ಸಂಗ್ರಹ ೩. ಇನ್ನುಳಿದ ಎರಡು ಸಂಗ್ರಹಗಳನ್ನೂ ಒಟ್ಟಿಗೆ ಕೊಳ್ಳೋಣವೆಂದರೆ ಅಂದು ನಮನ ಬುಕ್ ಪ್ಯಾಲೇಸಿನಲ್ಲಿ ಲಭ್ಯವಿದ್ದದ್ದು ಇದೊಂದೇ ಸಂಗ್ರಹ.

‘ನೀಲುಕಾವ್ಯ ಸಂಗ್ರಹ ೩’ ೧೯೯೧ ರಿಂದ ೨೦೦೦ರವರಗೆ ಪ್ರಕಟವಾದ ಪದ್ಯಗಳ ಸಂಕಲನವಾಗಿದ್ದು, ಈ ಸಂಕಲನಕ್ಕೆ ‘ಮೌನಕ್ಕೆ ಮುನ್ನುಡಿ’ ಎಂಬ ಚಂದ್ರಶೇಖರ ಪಾಟೀಲರ ಮುನ್ನುಡಿಯಿದೆ.

ಮಾತುಗಳನ್ನು ನೆಚ್ಚಿ ಬದುಕವ ಕವಿ
ಮೌನದ ನೆರವಿನಿಂದ
ಕವನಗಳನ್ನು ಕಟ್ಟಿ
ಸುಮ್ಮನೆ ಅರಣ್ಯದತ್ತ ಕಣ್ಮರೆಯಾದ

ಎನ್ನುವ ನೀಲು ಕಾವ್ಯವನ್ನು ಉಲ್ಲೇಖಿಸುತ್ತಾ ಚಂಪಾರವರು ‘ಪದ’ ಮತ್ತು ‘ಅರ್ಥ’ಗಳನ್ನು ಮೀರುವ ಈ ‘ಮೌನ’ಕ್ಕೆ ‘ಮುನ್ನುಡಿ’ ಯಾಕೆ ಬೇಕು? ಎನ್ನುತ್ತಲೇ ಲಂಕೇಶರ ವ್ಯಕ್ತಿತ್ವ ಮತ್ತು ಸೃಷ್ಟಿಯ ಹೆಚ್ಚುಗಾರಿಕೆಯ ಮೇಲೆ ಬೆಳಕು ಚೆಲ್ಲುತ್ತಾರೆ.

ಈ ನೀಲು ಯಾರು ಎನ್ನುವುದಕ್ಕೆ ಹಲವು ಕಾವ್ಯಗಳ ಮೂಲಕವೇ ಲಂಕೇಶರು ಉತ್ತರಿಸುತ್ತಾರೆ. ಉದಾಹರಣೆಗೆ ಈ ಸಂಕಲನದ ಬೆನ್ನಿನಲ್ಲೇ ಇರುವ ನೀಲು ಕಾವ್ಯ ನೋಡಿ-

ನೀಲು ಯಾರು ಎಂದು ಕೇಳಿದಿರಾ?
ಹುಣ್ಣಿಮೆಯ ಬೆಳದಿಂಗಳು ಕಾಮಿನಿಯಲ್ಲಿ
ಪ್ರೇಮ ಉಕ್ಕಿಸಿದ ವೇಳೆ
ಇನಿಯನಿಲ್ಲದ ಹಾಸಿಗೆಯಲ್ಲಿ
ಬಿಕ್ಕಳಿಸಿ ಅತ್ತು ಅವನಿಗಾಗಿ ಕಾದು
ಆತ ಹಿಂದಿರುಗುವ ಹೊತ್ತಿಗೆ ಅಮಾವಾಸ್ಯೆ
ಕವಿದಿತ್ತು
ಮತ್ತೆ ಬೆಳದಿಂಗಳ ಹುಣ್ಣಿಮೆಗೆ ಕಾಯುತ್ತಾ
ಅವಳು ಇಟ್ಟ ನಿಟ್ಟುಸಿರಲ್ಲಿ
ಹುಟ್ಟಿದವಳು ನೀಲು

ಎನ್ನುತ್ತಾರೆ.

ಅಸಂಖ್ಯವಾಗಿರುವ ಎಲ್ಲಾ ನೀಲುಕಾವ್ಯಗಳನ್ನು ಓದಿ ಅವುಗಳ ಮೇಲೆ ಬರೆಯುವುದಕ್ಕಿಂತ ಸುಮ್ಮನೆ ಓದಿನ ಸುಖ ಅನುಭವಿಸುವುದೇ ಒಂದು ಅದ್ಭುತ ಕಾವ್ಯದ ಅನುಭೂತಿ. ಕೆಲವು ನೀಲುಕಾವ್ಯಗಳನ್ನು ಓದುತ್ತಲೇ ಲಂಕೇಶರ ಅಪಾರ ಓದಿನ ಆಳ ವಿಸ್ತಾರಗಳ ಪರಿಚಯ ನಮಗಾಗುತ್ತದೆ ಎಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಸಮಗ್ರ ಸಾಹಿತ್ಯವನ್ನು ಬದಿಗಿಟ್ಟು ಇದೊಂದೇ ಸಂಕಲನದಿಂದ ತಮ್ಮ ಓದಿನ ಅರಿವಿನ ಶಕ್ತಿಯಿಂದಲೇ ಇಷ್ಟೆಲ್ಲಾ ಬರವಣಿಗೆಯನ್ನು ಲಂಕೇಶರು ಮಾಡಲು ಸಾಧ್ಯವಾಯಿತು ಎಂದು ಮನದಟ್ಟಾಗುತ್ತದೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿಗೆ ಅನ್ವಯವಾಗುವಂತೆ ಪ್ರೀತಿ, ಕಾಮ, ರಾಜಕಾರಣ, ಸಾಹಿತ್ಯ ಎಲ್ಲಾ ವಿಷಯಗಳ ಮೇಲೆ ನೀಲು ಕಾವ್ಯಗಳಿವೆ. ಅದಕ್ಕೇ ನಾನು ಹೇಳುವುದು ನಾವು ಕೂಡ ಒಂದಷ್ಟು ಇಂತಹ ಪುಸ್ತಕಗಳನ್ನು ಓದಿಕೊಂಡರೆ ನಮ್ಮ ಬರವಣಿಗೆಯೂ ಸುಧಾರಿಸಿ, ಓದುಗರಿಗೆ ಮತ್ತಷ್ಟು ಖುಷಿ ನೀಡಬಹುದಲ್ಲವೇ!? ಹಾಗೇ ಸುಮ್ಮನೆ ನಾನು ಕೆಳಗೆ ಉಲ್ಲೇಖಿಸಿರುವ ಕೆಲವು ನೀಲುಕಾವ್ಯಗಳನ್ನು ಓದಿಕೊಳ್ಳಿ. ಇವು ಬರವಣಿಗೆಯ ಕುರಿತೇ ಮೂಡಿವೆ. ಜೊತೆಗೆ ನಾನೇಕೆ ಬರೆಯುವವರು ಒಂದಷ್ಟು ಓದಿಕೊಳ್ಳಬೇಕು ಎಂದು ಆಗಾಗ ಹೇಳುತ್ತೇನೆ ಎಂಬುದು ಕೂಡ ನಿಮಗೆ ಮನದಟ್ಟಾಗಬಹುದು.

ಅವಿದ್ಯಾವಂತೆಯ
ಆಳದ ಪುಟ್ಟ
ಕವನದಲ್ಲಿ
ಛಂದಸ್ಸಿಗೆ ಬದಲು
ಕುದಿವ ನೆತ್ತರು ಮತ್ತು
ಹೂವು ಇರುತ್ತವೆ
*

ರಾಜನ, ಸೇವಕನ,
ಬೀದಿಯ ಭಿಕ್ಷಕನ
ಲಕ್ಷಾಂತರ ಮಾತುಗಳು
ಇಂಗಿ
ನನ್ನೆದೆಯಲ್ಲಿ
ಕವನಗಳಾಗಿ
ಚಿಗುರುವುವು
*

ಈ ಸಮುದ್ರದ ದಂಡೆಯಲ್ಲಿ
ಕೂತಿರುವ ನಾವು
ಈ ವಿಶ್ವದ
ಕಾದಂಬರಿಯಲ್ಲಿ
ಪೂರ್ಣವಿರಾಮ ಕೂಡ
ಅಲ್ಲವಂತೆ, ನಿಜವೆ?
*

ಒಂದು ಕತೆಯ ಪ್ರಕಾರ
ಹಕ್ಕಿಯಂತೆ ಹಾರಲೆತ್ನಿಸಿದ ಆಮೆ
ಬಾವಿಗೆ ಬಿದ್ದು ಬೆನ್ನುಮುರಿದುಕೊಂಡಿತು;
ಅದರ ಬೆನ್ನಿನ ತೇಪೆಗಳ ನೋಡಿ
ಕುಕವಿಗಳು ಕಲಿಯಲಿ
*

ನೀತಿ, ಅನೀತಿ, ಅರೆನೀತಿಯ
ನಡುವೆ
ದಾರಿ ಮಾಡಿಕೊಂಡು
ಹೃದಯದ ಕತೆ
ಹೇಳುವವನೇ
ಶ್ರೇಷ್ಠ ಕಾದಂಬರಿಕಾರ
*

ಕೆಲವು ಸಲ ಕವನ ಬರೆಯುವುದೆಂದರೆ
ಕಗ್ಗವಿಯಲ್ಲಿ
ಅನನುಭವಿ ತರುಣನ
ಕಂಪಿಸುವ ಕೈಗಳಿಗಾಗಿ
ತಡಕಾಡಿದಂತೆ
*

ನನ್ನ ದಂತದಂತಹ ದೇಹದ
ರಕ್ಕ ಮಾಂಸಗಳಲ್ಲಿ
ಅದ್ಭುತ ಬೆಂಕಿ ಮತ್ತು ಹಿಮ
ಸ್ಪರ್ಧಿಸಿ ಹರಿಯದಿದ್ದರೆ
ಕವನ ಮತ್ತು ಪ್ರೇಮ
ಎರಡೂ ಸಾಧ್ಯವಾಗುವುದಿಲ್ಲ
*

ಮೊನ್ನೆ ಮೇಘದ
ಮೂಲಕ ಸಂದೇಶ
ಕಳಿಸಿದ ಕವಿಯೇ
ಜಲಕ್ಷಾಮಕ್ಕೆ ಕಾರಣ
ಎಂದು ವಿಮರ್ಶಕರು
ಹೇಳುತ್ತಿದ್ದಾರೆ


ಇದು ಸಿಹಿನೀರ ಸರೋವರದ ಒಂದು ಪುಟ್ಟ ಬೊಗಸೆಯಷ್ಟೆ. ನಿಮಗೆ ರುಚಿ ಹತ್ತಲು ಕೊಟ್ಟಿದ್ದೇನೆ. ನಿಮಗೆ ಇನ್ನೂ ಬೇಕೆಂದರೆ ಎಷ್ಟು ಬೇಕೋ ಅಷ್ಟು ನೀವೇ ಮೊಗೆಮೊಗೆದು ಕುಡಿಯಿರಿ ಎಂದು ಹೇಳಲು ಇಚ್ಛಿಸುತ್ತೇನೆ. ಅಷ್ಟಕ್ಕೂ ನಾನೂ ಕೂಡ ಕೆಲವೇ ನೀಲು ಕಾವ್ಯಗಳನ್ನು ಓದಿಕೊಂಡೆ. ಬಳಿಕ ಬೆರಳೆಣಿಕೆಯಷ್ಟು ಪುಟ್ಟ ಪದ್ಯಗಳನ್ನು ಬರೆದಿಟ್ಟುಕೊಂಡೆ. ಅದರಲ್ಲಿ ನನಗೆ ಬಹಳ ಖುಷಿಕೊಟ್ಟ ಒಂದು ಪದ್ಯದೊಂದಿಗೆ ಈ ಅಂಕಣಕ್ಕೆ ವಿರಾಮ ನೀಡುತ್ತೇನೆ.

ಲಂಕೇಶರ ನೀಲು ಕಾವ್ಯಗಳ
ಓದಿದ
ನನ್ನೊಳಗಿನ ನಲ್ಲ
ಪ್ರೀತಿಯಿಂದ ನಲಿದ
ನೋವಿನಿಂದ ಮಿಡಿದ
ಕನಲಿದ
ಆಗಾಗ ನಲ್ಲೆಯೂ ಆದ
ಕಡೆಗೆ ಜ್ಞಾನಿಯಾದ.

- ಗುಬ್ಬಚ್ಚಿ ಸತೀಶ್

ಪಿ. ಲಂಕೇಶ್‌ ಅವರ ಪುಸ್ತಕಗಳನ್ನು ಕೊಳ್ಳಲು ಅಮೇಜಾನಿನಲ್ಲಿ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ...  https://amzn.to/3PBrACp
***

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ. ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವ...