ಶನಿವಾರ, ಫೆಬ್ರವರಿ 10, 2024

ಇದು ಸರಳ ಅಲ್ಲ ವಿರಳ ಸಿನಿಮಾ…

 



ಸಿಂಪಲ್ಲಾಗ್‌ ಒಂದು ಲವ್‌ ಸ್ಟೋರಿ ಖ್ಯಾತಿಯ ನಿರ್ದೇಶಕರಾದ ಸಿಂಪಲ್‌ ಸುನಿಯವರ ರಚನ ವಚನ ನಿರ್ದೇಶನದ “ಒಂದು ಸರಳ ಪ್ರೇಮಕಥೆ” ಒಂದು ಸಂಗೀತಮಯ ವಿರಳ ಸಿನಿಮಾ. ಮಳವಳ್ಳಿ ಪ್ರಸನ್ನ ಅವರ ಕತೆಗೆ ಸಿನಿಮಾ ಚಿತ್ರಕತೆಯ ಒಂದು ಪರಿಪೂರ್ಣ ಸ್ಪರ್ಶವನ್ನು ನೀಡಿ ನಿರ್ದೇಶಕರು ದೃಶ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಆರಂಭದಲ್ಲಿ ಅವರೇ ಹೇಳುವಂತೆ ಕ್ಲೈಮ್ಯಾಕ್ಸಿನ ನಂತರವೂ ಒಂದು ಕ್ಲೈಮ್ಯಾಕ್ಸ್‌ ಇದ್ದು ಅಂತಿಮ ದೃಶ್ಯದಲ್ಲಿ ನಾಯಕ ಅಳುವುದನ್ನು ನೋಡಿ ಪ್ರೇಕ್ಷಕ ಮಹಾಫ್ರಭು “ವಾಟ್‌ ಅ ಮೂವಿ” ಎಂದು ಉದ್ಗರಿಸುತ್ತಾನೆ. ಮೈಸೂರು ರಮೇಶ್ ಈ ಸಿನಿಮಾದ ನಿರ್ಮಾಪಕರು.

ಕನ್ನಡ ಸಿನಿಮಾಗಳಿಗೆ ಸ್ಟಾರ್‌ ಪಟ್ಟವನ್ನು ಕಳಚಿಟ್ಟು ಅಭಿನಯಿಸುವ ನಟರುಗಳು ಬೇಕಾಗಿದ್ದಾರೆ. ಈ ಜಾಗವನ್ನು ಸಮರ್ಥವಾಗಿ ತುಂಬಬಲ್ಲವರು ವಿನಯ್‌ ರಾಜ್‌ ಕುಮಾರ್.‌ ನಾಯಕನೇ ಸ್ವಗತದಲ್ಲಿ ತನ್ನ ಕತೆಯನ್ನು ಹೇಳುತ್ತಾ ಹೋಗುತ್ತಾನೆ. ಅವನಿಗೆ ಎರಡು ಕನಸಿದೆ. ಅವುಗಳು ನನಸಾಗುತ್ತವ ಎಂಬುದನ್ನು ತೆರೆಯ ಮೇಲೆ ನೋಡಬೇಕು. ಹಗಲುಗನಸಿನ ಹುಡುಗನಾಗಿ ಸಿನಿಮಾದುದ್ದಕ್ಕೂ ವಿನಯ್‌ ಅವರ ಮಾಗಿದ ಅಭಿನಯ ಗಮನ ಸೆಳೆಯುತ್ತದೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ಇದೊಂದು ತ್ರಿಕೋನ ಪ್ರೇಮಕತೆಯಂತೆಯೂ ಭಾಸವಾಗುತ್ತದೆ. ನಾಯಕನ ಎದೆಯ ಭಾವನೆಗಳು ಯಾವ ನಾಯಕಿಯ ಧ್ವನಿಗೆ ಮಿಡಿಯುತ್ತವೆ ಎಂಬುದೇ ಈ ಸಿನಿಮಾ.

ಇತ್ತೀಚಿನ ದಿನಗಳಲ್ಲಿ ಒಂದು ಅಪರೂಪದ ಸಂಗೀತಮಯ ಚಿತ್ರವಾಗಿಯೂ “ಒಂದು ಸರಳ ಪ್ರೇಮಕತೆ” ನೋಡುಗರ ಮನಗೆಲ್ಲುತ್ತದೆ. ʼಮೂಕನಾಗಬೇಕುʼ ಎಂಬ ತತ್ವಪದವೊಂದು ಈ ಸಿನಿಮಾದುದ್ದಕ್ಕೂ ಇದ್ದು ಈ ಸಿನಿಮಾದ ನಿಜವಾದ ನಾಯಕ, ನಾಯಕಿ ಮತ್ತು ವಿಲನ್‌ ಆಗಿದೆ ಎಂದೇ ಹೇಳಬೇಕು. ಈ ತತ್ವಪದವೇ ಸಿನಿಮಾದ ಜೀವಾಳವೂ ಹೌದು. ಸುನಿ ಅವರ ದೃಶ್ಯಗಳಿಗೆ ವೀರ್‌ ಸಮರ್ಥ್‌ ಅವರ ಸಂಗೀತವೇ ಬೆನ್ನೆಲುಬು.

ನಾಯಕನಾಗಿರುವ ವಿನಯ್‌ ರಾಜ್‌ಕುಮಾರ್‌ ಅವರ ಜೊತೆ ನಾಯಕಿಯಾಗಿರುವ ಸ್ವಾತಿಷ್ಠ ಕೃಷ್ಣನ್‌ ಮತ್ತು ಹಿಂದಿಯ ರಾಧಾ ಕೃಷ್ಣ ಧಾರಾವಾಹಿಯ ರಾಧೆ ಖ್ಯಾತಿಯ ಮಲ್ಲಿಕಾ ಸಿಂಗ್‌ ಇದ್ದಾರೆ. ನಾಯಕನ ತಂದೆಯಾಗಿ ರಾಜೇಶ್‌ ಅವರು ಸೂಪರ್.‌ ಸಾಧು ಕೋಕಿಲ ಇಲ್ಲಿ ಮ್ಯೂಸಿಕ್‌ ಡೈರೆಕ್ಟರ್‌ ಆಗಿಯೇ ಅಭಿನಯಿಸಿದ್ದಾರೆ. ನಾಯಕನ ಅಜ್ಜಿಯ, ಸ್ನೇಹಿತರ ಪಾತ್ರಗಳೂ ಕಾಡುವಂತಿವೆ. ಹಿರಿಯ ನಟರಾದ ರಾಘವೇಂದ್ರ ರಾಜ್‌ಕುಮಾ‌ರ್‌ ಅವರು, ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿಯ ನಾಯಕಿ ಶ್ವೇತಾ ಶ್ರೀವಾಸ್ತವ್‌ ಅವರು, ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಅವರ ಅತಿಥಿ ಪಾತ್ರಗಳಿವೆ. ಸಿನಿಮಾದ ಒನ್‌ ಲೈನ್‌ ಪಂಚ್‌ಗಳು ಅಲ್ಲಲ್ಲಿ ಕಿರುನಗೆ ಮೂಡಿಸುತ್ತವೆ. ಹಿನ್ನೆಲೆಯ ಹಾಡುಗಳು ಗುನುಗುವಂತಿವೆ. ಜಯಂತ್‌ ಕಾಯ್ಕಿಣಿ ಅವರ ಸಾಲುಗಳೂ ಕೂಡ ಚಿತ್ರದಲ್ಲಿವೆ.

ನೀವು ಸಿನಿಮಾವನ್ನು, ಸಿನಿಮಾದ ಸಂಗೀತವನ್ನು, ಸಿಂಪಲ್‌ ಸುನಿಯವರನ್ನು, ವಿನಯ್‌ ರಾಜ್‌ಕುಮಾರ್ ಅವರನ್ನು ಇಡಿಯಾಗಿ ಇಷ್ಟಪಡುವವರು ಆಗಿದ್ದರೆ ಸಿನಿಮಾ ನಿಮಗೆ ಖಂಡಿತ ಇಷ್ಟವಾಗುತ್ತದೆ…‌ ಹೋಗಿ ಬಂದು ನಿಮ್ಮ ಅಭಿಪ್ರಾಯ ಕಾಮೆಂಟಿಸಿ…

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹತ್ತು ಅತ್ಯುತ್ತಮ ಕವನ ಸಂಕಲನಗಳಿಗೆ ಸುವರ್ಣಾವಕಾಶ...

ಸುವರ್ಣ ಕರ್ನಾಟಕ ಕಾವ್ಯ ಪುರಸ್ಕಾರಕ್ಕಾಗಿ ಕವನ ಸಂಕಲನಗಳ ಅಹ್ವಾನ... ರಾಜ್ಯಮಟ್ಟದ ಸಾಹಿತ್ಯಾತ್ಮಕ ಸಂಸ್ಥೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ  ಕರ್ನಾಟಕ ರಾಜ...