ಇಂದು (ಜನವರಿ 22, 2024) ಭಾರತದ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ ದಿನ. ಅಂದುಕೊಂಡಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಬಾಲರಾಮನ ಪ್ರತಿಷ್ಠಾಪನೆಯ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಈ ಅಭೂತಪೂರ್ವ ಕ್ಷಣಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೇರವಾದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇನೆ.
ಇಂದು ಬೆಳಿಗ್ಗೆ ನನ್ನ ಜಂಗಮ ಸ್ನೇಹಿತರು ಒಂದು ಫೇಸ್‌ಬುಕ್ ಫೋಸ್ಟ್
ಹಾಕಿದ್ದರು. “”ನಮ್ಮ ತಲೆಮಾರಿಗೆ ರಾಮಮಂದಿರ ನಿರ್ಮಾಣ ಅಸಾಧ್ಯ ಎಂದು ಭಾವಿಸಿದ್ದಾಗ, ಅದನ್ನು
ಸಾಧ್ಯವಾಗಿಸಿದ ಮಹಾನುಭಾವರಿಗೆ ದೇವರು, ಆರೋಗ್ಯ, ಆಯಸ್ಸು ಮತ್ತು ವಿಜಯವನ್ನು ನೀಡಲಿ ಎಂದು
ಹಾರೈಸುತ್ತೇನೆ. "ಟೀಕೆಗಳು ಸಾಯುತ್ತವೆ, ಸಾಧನೆ ಉಳಿಯುತ್ತದೆ."” ಎಂದು. ಈ ಪೋಸ್ಟಿಗೆ
ನನ್ನದೇ ಮೊದಲ ಲೈಕು. ಯಾಕೆಂದರೇ, ನಾನು ಕೂಡ ಹೀಗೇ ಭಾವಿಸಿದ್ದೆ. ನನ್ನ ಶಾಲಾ ದಿನಗಳಲ್ಲಿ ಶ್ರೀ
ಅಡ್ವಾಣಿಯವರ ರಥಯಾತ್ರೆ ನಮ್ಮ ಮನೆಯ ಮುಂದೆಯೇ ಸಾಗಿದ್ದನ್ನು ಕಂಡವನು ನಾನು. ನಾವು ಬೆಳೆದರೂ
ರಾಮಮಂದಿರ ಕನಸೇನೋ ಎಂಬಂತಾಗಿತ್ತು. ಆದರೆ, ಯಾವಾಗ 2019ರಲ್ಲಿ ನಮ್ಮ ದೇಶದ ಸುಪ್ರೀಂ ಕೋರ್ಟ್ ಈ
ಜಾಗ ರಾಮ ಮಂದಿರಕ್ಕೆ ಸೇರಿದ್ದು ಎಂದು ತೀರ್ಪು ಕೊಟ್ಟಿತೋ ಅಂದು ನನಗೆ ಅಲ್ಲಿ ನಿಧಾನವಾಗಿಯಾದರೂ
ಶ್ರೀರಾಮ ಮಂದಿರ ನಿರ್ಮಾಣವಾಗುವುದೆಂದು ಭರವಸೆಯಂತೂ ಮೂಡಿತ್ತು. ಆ ಪ್ರಕಾರವಾಗಿ ಇಂದು ಅಯೋಧ್ಯೆಯಲ್ಲಿ
ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಬಾಲರಾಮನ ಪ್ರತಿಷ್ಠಾಪನೆಯ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾನು ಮನೆಯಲ್ಲಿ ಇಲ್ಲದಿದ್ದಾಗ ಮಂತ್ರಾಕ್ಷತೆ
ನಮ್ಮ ಮನೆಯನ್ನು ಸೇರಿತ್ತು ನನ್ನ ಮಗಳು ದೇವರಮನೆಯಲ್ಲಿ ಇಟ್ಟಿದ್ದಳು. ಇದನ್ನು ಏನು ಮಾಡಬೇಕೆಂದು
ತಿಳಿಸಿದ್ದರೂ ಕೂಡ ನಾನು ನಮ್ಮ ಮನೆಯಲ್ಲಿ ಬೆಳೆದ ಹುಡುಗನೊಬ್ಬನಿಗೆ ಮದುವೆಯಾಗಲಿ ಎಂದು ಪ್ರಯತ್ನ
ಪಡುತ್ತಿರುವುದರಿಂದ ಅವನಿಗಾಗಿ ಎತ್ತಿಟ್ಟಿರುವ ಒಂದು ವಸ್ತುವಿನ ಜೊತೆ ಈ ಮಂತ್ರಾಕ್ಷತೆಯನ್ನು ಪೂಜೆ
ಮಾಡಿ ಎತ್ತಿಡು ಎಂದು ನಮ್ಮ ಮನೆಯವರಿಗೆ ತಿಳಿಸಿದೆ. ಆಕೆ ಅದೇ ರೀತಿ ಮಾಡಿದಳು.
ಇನ್ನು ಇಂದು ಬೆಳಿಗ್ಗೆ ಬೇಗಬೇಗ ನನ್ನೆಲ್ಲಾ ಕೆಲಸಗಳನ್ನು ಮುಗಿಸಿ,
ಸಿದ್ಧವಾಗಿ ಮಧ್ಯಾಹ್ನ ನಮ್ಮ ಊರಿನ ಸರ್ಕಲ್ಲಿನ ಬಳಿಯಿರುವ ಶ್ರೀ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿ
ಕೈಮುಗಿದು ಅಲ್ಲಿ ನೀಡುತ್ತಿದ್ದ ಪ್ರಸಾದವನ್ನು ಊಟ ಮಾಡಿದೆ. ಅಲ್ಲಿ ಜಾತಿ ಮತ ಧರ್ಮದ ಭೇದವಿಲ್ಲದೆ
ಜನ ಪ್ರಸಾದವನ್ನು ತೆಗೆದುಕೊಳ್ಳುತ್ತಿದ್ದರು. ಅಲ್ಲಿ ನನ್ನ ಮುಸ್ಲಿಂ ಸ್ನೇಹಿತರೊಬ್ಬರು ಬರುತ್ತಿರುವುದನ್ನು
ಕಂಡು ಪ್ರಸಾದ ತೆಗೆದುಕೊಳ್ಳಿ ಎಂದೆ. ಅವರು ಅದಾಗಲೇ ತಮ್ಮ ಹುಡುಗನೊಬ್ಬ ಇವರಿಗೂ ಸೇರಿಸಿ ತೆಗೆದುಕೊಂಡು
ಹೋಗುತ್ತಿರುವುದನ್ನು ತೋರಿಸಿ ಮುಗುಳ್ನಕ್ಕರು. ಅಲ್ಲಿದ್ದ ಕೆಲವು ಗೆಳೆಯರನ್ನು ಮಾತನಾಡಿಸಿ ಊಟ ಮಾಡಿ
ಮುಗಿಸಿ, ಪ್ರಸಾದ ಬಡಿಸುತ್ತಿದ್ದವರಿಗೆ ಊಟ ಮಾಡಲು ಹೇಳಿ ಉಳಿದ ಪ್ರಸಾದವನ್ನು ಬಂದವರಿಗೆಲ್ಲಾ ನೀಡಿ
ಕಾಲಿ ಮಾಡಿದೆ. ನನ್ನ ಬಾಲ್ಯದ ದಿನಗಳಲ್ಲಿ ಗುಬ್ಬಿಯಪ್ಪನ ದೇವಸ್ಥಾನದಲ್ಲಿ ಈ ಕೆಲಸ ಮಾಡುತ್ತಿದ್ದದ್ದು
ನೆನಪಿಗೆ ಬಂದು ಸ್ವಲ್ಪ ಭಾವುಕನಾಗಿದ್ದಂತೂ ನಿಜ. ಜೊತೆಗೆ, ಇಲ್ಲಿ ಆಂಜನೇಯನ ಸನ್ನಿಧಾನದಲ್ಲಿ ಊಟ
ಮಾಡುತ್ತಿದ್ದ ಎಲ್ಲಾ ಜನಗಳನ್ನು ನೋಡಿದಾಗ ನನಗನ್ನಿಸಿದ್ದು ಒಂದೇ ಸಂಗತಿ: “ಇದು ನನ್ನ ಭಾರತ.” ಈ
ಆಂಜನೇಯ ದೇವಸ್ಥಾನದ ಮುಂದೆಯೇ ದಿನಾ ನಾನು ಓಡಾಡುತ್ತಿದ್ದರೂ ಒಳಗೆ ಹೋಗಿದ್ದು ಇದೇ ಮೊದಲು. ಆಂಜನೇಯನ
ಪುಟ್ಟ ವಿಗ್ರಹವೊಂದು ಮಾತ್ರ ಅಲ್ಲಿದೆ. ಇಂದು ತಿಳಿದ ಹೊಸ ವಿಷಯವೇನೆಂದರೇ ಅಲ್ಲಿ ಇದೇ ಗಣರಾಜ್ಯೋತ್ಸವಕ್ಕೆ
ಪಂಚಮುಖಿ ಆಂಜನೇಯ ದೇವಸ್ಥಾನದ ಶಂಕುಸ್ಥಾಪನೆಯಾಗಲಿದೆಯಂತೆ. ಶುಭವಾಗಲಿ.
ನಂತರ ಗೂಳೂರು ಗಣಪನಿಗೆ ನಮಿಸಿ ಬರೋಣವೆಂದು ಹೋದೆ. ಅಲ್ಲಿ ಶ್ರೀರಾಮನ
ಹಳೆಯ ಫೋಟೊವೊಂದನ್ನು (ಈ ರೀತಿಯ ಫೋಟೋ ಕೋಟ್ಯಾನುಕೋಟಿ ಭಾರತೀಯರ ಮನೆಯಲ್ಲಿದೆ) ಇಟ್ಟು ಪೂಜೆ ಮಾಡಿದ್ದರು.
ನನಗೆ ಅದೃಷ್ಟವೆಂಬಂತೆ ಅಲ್ಲೂ ಕೂಡ ಸ್ವಲ್ಪ ಪ್ರಸಾದ ಸಿಕ್ಕಿತು.
ನಂತರ ಮನೆಗೆ ಬಂದು ಇಷ್ಟೆಲ್ಲಾ ಬರೆದೆ. ಬರೆಯುವುಕ್ಕೆ ಇನ್ನೂ ಇದೆ.
ಎಷ್ಟು ಬರೆದರೂ ಪ್ರಮುಖವಾಗಿ ಒಬ್ಬ ಭಾರತೀಯನಾಗಿ ನನಗೆ ಇವತ್ತು ಬಹಳ ಸಂತೋಷದ ದಿನ. ನಮ್ಮ ಮನೆಯ ದೇವರು
ಶ್ರೀ ವೀರಭದ್ರಸ್ವಾಮಿ. ಮನದ ದೇವರು ಶ್ರೀ ಗೋಸಲ ಚೆನ್ನಬಸವೇಶ್ವರ ಸ್ವಾಮಿ (ಗುಬ್ಬಿಯಪ್ಪ). ಆದರೆ,
ನಮ್ಮ ದೇಶದ ದೇವರು ಶ್ರೀರಾಮ. ಇದು ನನ್ನ ನಂಬಿಕೆ.
ಭಾರತೀಯರ ಶತಮಾನಗಳ ಕನಸೊಂದು ನನಸಾದ ಈ ಶುಭಸಂದರ್ಭಕ್ಕೆ ಸಾಕ್ಷಿಯಾದ
ನಾವೇ ಧನ್ಯರು…
ಜೈ ಶ್ರೀರಾಮ, ಜೈ ಭಾರತ…
Super
ಪ್ರತ್ಯುತ್ತರಅಳಿಸಿಮನವನ್ನು ಗೆಲ್ಲುವ ಲೇಖನ.
ಪ್ರತ್ಯುತ್ತರಅಳಿಸಿ