ಸ್ನೇಹಿತರೇ,
ನಮಸ್ಕಾರ.
ಇವತ್ತು ವರಮಹಾಲಕ್ಷ್ಮೀ ಹಬ್ಬ. ಕೆಲವರು ಇನ್ನೂ ಇದು ಮುಂಚೆ ವರಮಹಾಲಕ್ಷ್ಮೀ ವ್ರತ ಅಂತ ಇತ್ತು, ಅದ್ಯಾವಾಗ
ಹಬ್ಬ ಆಯ್ತು ಅಂತ ಯೋಚಿಸುತ್ತಿರುವಾಗಲೇ ಬಹುತೇಕರು ಸಂಭ್ರಮದಿಂದ ಹಬ್ಬ ಮಾಡಿ, ಊಟ ಮಾಡಿದರು. ಸಂತೋಷ.
ಎಲ್ಲರಿಗೂ ಹಬ್ಬದ ಶುಭಾಶಯಗಳು. ಇದು ಶ್ರಾವಣದ ಮೊದಲ ಹಬ್ಬ.
ಇವತ್ತು ನನ್ನ ಪ್ಲಾನ್ ಆದಷ್ಟು ಬೇಗ ಹಬ್ಬ ಮುಗಿಸಿ ʼಟೋಬಿʼ ಸಿನಿಮಾಗೆ ಹೋಗಬೇಕು ಅಂತ ಅಂದುಕೊಂಡಿದ್ದೆ. ಆದರೆ, ಆಗಲಿಲ್ಲ. ಮಧ್ಯಾಹ್ನ ಸ್ನೇಹಿತರ ಮನೆಗೆ ಊಟಕ್ಕೆ ಆತ್ಮೀಯ ಆಹ್ವಾನವಿತ್ತು. ಆದಕಾರಣದಿಂದ ಅವರ ಮನೆಗೆ ಹೋದೆವು. ಹೋಗ್ತಾ ದಾರಿಯಲ್ಲಿ India Sweet Houseಗೆ ಹೋಗಿ, (ಹೌದು, ತುಮಕೂರಿನಲ್ಲಿ ಈಗ ಇವರ ಬ್ರಾಂಚಿದೆ. ಎಸ್‌ಐಟಿ ಹತ್ತಿರ) ನಮ್ಮಿಷ್ಟದ ಸಿಹಿತಿಂಡಿಯನ್ನು ತಿಂದು ಆತ್ಮೀಯರ ಮನೆಗೂ ಒಂದು ಕಾಲು ಕೆಜಿ (ಅಲ್ಲಿ ಕಾಲು ಕೆಜಿಗೆ ಬೇರೆಕಡೆ ಕೆಜಿ ಸಿಗುವಷ್ಟು ದುಡ್ಡು ಹಾಕಿರ್ತಾರೆ. ಬಟ್ ಕ್ವಾಲಿಟಿ ಸಖತ್ ಇರುತ್ತೆ) ಕೊಂಡೋಯ್ದೆವು. ಅವರ ಮನೆಯಲ್ಲಿ ಕಷ್ಟ-ಸುಖ ಮಾತಾಡಿ ಸಂಜೆ ಮನೆ ಕಡೆ ಹೊರಟೆವು. ಅಷ್ಟರಲ್ಲಾಗಲೇ ನಮ್ಮ ಸ್ನೇಹಿತರು (ಇವರನ್ನು ನಾನು ಜಂಗಮ ಅಂತ ಹೃದಯದಿಂದ ಕರೆಯುತ್ತೇನೆ. ಇವರಿಗೆ ಈ ವಿಷಯ ಗೊತ್ತಿಲ್ಲ. ಮುಂದೊಂದು ದಿನ ʼಕಾಫಿ ವಿಥ್ ಜಂಗಮʼ ಅಂತ ಪುಸ್ತಕ ಬರೆಯುವವನಿದ್ದೇನೆ) ಕರೆಮಾಡಿದ್ರು. ಅವರಿಗೆ ಸಾಧ್ಯವಾದರೆ ಸಂಜೆ ಕಾಫಿಗೆ ಸಿಗುವೆ ಅಂತ ಹೇಳಿದ್ದೆ. ಮತ್ತೊಂದು ಆತ್ಮೀಯರ ಕರೆಗೂ ಓಗೊಟ್ಟು ಅಲ್ಲಿಗೂ ಹೋಗುವ ಪ್ಲಾನ್ ಇದ್ದರೂ ಕಡೆ ಗಳಿಗೆಯಲ್ಲಿ ನನ್ನ ಶ್ರೀಮತಿ ಮತ್ತು ಮಗಳು ಮನೆಗೆ ಹೋಗುತ್ತೇವೆಂದರು.
ಸೋ,
ನಾನು ಅವರನ್ನು ಮನೆಗೆ ಕಳುಹಿಸಿ ʼಜಂಗಮʼರನ್ನು ಮೀಟ್ ಮಾಡಲು ಹೋದೆ. ಅವರು ಬರುವ ಸಮಯಕ್ಕೆ ಮತ್ತೊಬ್ಬ
ಪರಿಚಿತರು ನಮ್ಮ ರೆಗ್ಯುಲರ್ ಕಾಫಿ ಶಾಪ್ ಬಳಿ ಸಿಕ್ಕರು. ಉಭಯಕುಶಲೋಪರಿ ಮಾತನಾಡುತ್ತ ಅವರು ತಿಂಗಳಿಗೆ
ಒಂದೂವರೆ ಲಕ್ಷ ಬಾಡಿಗೆ ಬರುವ ಪ್ಲಾನೋಂದನ್ನು ಹೇಳಿಕೊಂಡದ್ದು ಕೇಳಿ ನನಗೆ ಶಾಕ್ ಆಯಿತು. ಅದಿರಲಿ
ಅವರು ಶ್ರೀಮಂತರು. ಅವರ ಯೋಜನೆಗಳು ಕೂಡ ಶ್ರೀಮಂತವಾಗಿರುತ್ತವೆ! ಸ್ವಲ್ಪ ಹೊತ್ತಿನ ನಂತರ ʼಜಂಗಮʼರು
ಬಂದರು. ಆ ಸಂದರ್ಭದಲ್ಲಿ ಅಲ್ಲಿನ ರಸ್ತೆಯ ಬದಿಯೊಂದರಲ್ಲಿ ಪಂಚೆ ಮತ್ತು ಟವೆಲ್‌ಗಳನ್ನು ಹಾಕಿಕೊಂಡಿದ್ದ
ವ್ಯಕ್ತಿಯೊಬ್ಬನಿಗೆ ಕ್ಷಣಾರ್ಧದಲ್ಲಿ ಭರ್ಜರಿ ವ್ಯಾಪಾರವಾಯ್ತು. ಕಾರಣ, ಕಡಿಮೆ ಬೆಲೆ! ತದನಂತರ ಕಾಫಿ
ಕುಡಿದು ಸ್ವಲ್ಪ ಹೊತ್ತು ಮಾತನಾಡಲು ʼಜಂಗಮʼರ ಆಫೀಸಿಗೆ ಹೋದೆವು. ಕಾಫಿ ಬೇಡ ಅಂದಿದ್ದ ಶ್ರೀಮಂತ ಗೆಳೆಯರು
ಅವರ ದಾರಿ ಅದಾಗಲೇ ಹಿಡಿದಾಗಿತ್ತು.
ʼಜಂಗಮʼರ
ಆಫೀಸಿನಲ್ಲಿ ಕುಳಿತು ನಮ್ಮ ಪ್ರಚಲಿತ ವಿದ್ಯಮಾನಗಳ ಚರ್ಚೆ ಶುರುವಾಯ್ತು. ʼಟೋಬಿʼ ಸಿನಿಮಾ ವಿಷಯವೂ
ಬಂತು. ಇತ್ತೀಚಿಗೆ ಮೊದಲನೇ ದಿನವೇ ಸಿನಿಮಾ ನೋಡಿ ನನ್ನ ಯೂಟ್ಯೂಬ್ ಚಾನೆಲ್ Movie Matters
Kannadaದಲ್ಲಿ ವಿಮರ್ಶೆ ಬರೆಯುವುದನ್ನು ಕಡಿಮೆ ಮಾಡಿಕೊಂಡಿದ್ದೇನೆ. ಇದೇ ಕಾರಣದಿಂದ ಸಿನಿಮಾಗೇ ಹೋಗಲೇಬೇಕೆಂಬ
ತುಡಿತ ಈಗ ಮೊದಲಿನಷ್ಟಿಲ್ಲ. ಜೊತೆಗೆ ಇಲ್ಲಿ Inoxನಲ್ಲಿ ಸಿನಿಮಾ ನೋಡಿದ್ರೆ ಈಗ ಮಜಾ. ಬೇರೆ ಏಕಪರದೆಯ
ಚಿತ್ರಮಂದಿರಗಳಲ್ಲಿ ಭಯಂಕರ ಎಂಬುವುಷ್ಟು ಬೇಜಾರಾಗಿದೆ. ಬಟ್ inox ದೂರ ಮತ್ತು ದುಬಾರಿ! ಸೋ, ಅಲ್ಲೇ
ಕುಳಿತು ಬೇರೆ ಚರ್ಚೆಗಳು ಆದವು. ಚಂದ್ರಯಾನ, ಪ್ರಜ್ಞಾನಂದ, ರಾಜಕೀಯ, ಪ್ರಮುಖವಾಗಿ ಕನ್ನಡ ಸಿನಿಮಾಗಳು,
ಇತ್ಯಾದಿ, ಇತ್ಯಾದಿ. ಈ ನಡುವೆ ಅಪರೂಪಕ್ಕೆ ಆತ್ಮೀಯ ಗೆಳೆಯರೊಬ್ಬರು ಫೋನ್ ಮಾಡಿದ್ರು. ಅವರ ಬಳಿಯೂ
ಮಾತನಾಡಿ, ಮನೆಗೆ ಬಂದು, ಸೋಷಿಯಲ್ ಮೀಡಿಯಾದಲ್ಲಿ ʼಟೋಬಿʼ ವಿಮರ್ಶೆಗಳನ್ನು ಗಮನಿಸಿದ್ರೆ ಸಿನಿಮಾಗೆ
ಹೋಗದಿದ್ದದ್ದೆ ಒಳ್ಳೆಯದಾಯ್ತು ಅಂತ ಅನ್ನಿಸಿತು.
ನಾನು
ಇತ್ತೀಚಿಗೆ, ಅದೂ ಬಿಡುಗಡೆಯಾದ ಹತ್ತು ದಿನದ ನಂತರ ನೋಡಿದ ಸಿನಿಮಾ ʼಜೈಲರ್ʼ. ಅದೂ ಕನ್ನಡದಲ್ಲಿ.
ಈ ಸಿನಿಮಾ ಕುರಿತು ಬಿಡುವಾದಾಗ ಬರೆಯುವೆ.
ಮತ್ತೊಮ್ಮೆ, ನಿಮ್ಮೆಲ್ಲಾ ಕೋರಿಕೆಗಳಿಗೆ ವರಮಹಾಲಕ್ಷ್ಮೀ ಸ್ಪಂದಿಸಲಿ ಎಂದು ಆ ತಾಯಿಯಲ್ಲಿ ಪ್ರಾರ್ಥಿಸುತ್ತಾ… ಶುಭರಾತ್ರಿ…
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ