ಗುರುವಾರ, ಆಗಸ್ಟ್ 24, 2023

ಯಶಸ್ವಿ ಚಂದ್ರಯಾನ 3ರ ಹತ್ತು ಪ್ರಮುಖ ಪ್ರಯೋಜನಗಳು… 10 Major Benefits of Successful Chandrayana 3

ಸ್ನೇಹಿತರೇ,

ನಮ್ಮ ಭಾರತ ದೇಶದ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಗಿದೆ. ಆಗಸ್ಟ್‌ 23ರ ಬುಧವಾರ ಸಂಜೆ 6.04ಕ್ಕೆ ಸರಿಯಾಗಿ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ವಿಕ್ರಮ್‌ ಲ್ಯಾಂಡರ್‌ ಒಳಗಿರುವ ರೋವರ್‌ ಪ್ರಗ್ಯಾನ್‌ ಹೊರಬಂದು ತನ್ನ ಕೆಲಸಗಳನ್ನು ಮಾಡಲಿದೆ. ಇದರಿಂದ ನಮ್ಮ ಭಾರತ ದೇಶಕ್ಕೆ ಲಭಿಸುವ ಹತ್ತು ಪ್ರಮುಖ ಲಾಭಗಳು ಅಥವಾ ಪ್ರಯೋಜನಗಳು ಏನು ಅಂತ ನೋಡೋಣ ಬನ್ನಿ… ಅದಕ್ಕೂ ಮುನ್ನ ದೇಶದ ಹೆಮ್ಮೆಯ ಇಸ್ರೋಗೆ, ವಿಜ್ಞಾನಿಗಳಿಗೆ ಮತ್ತು ನಾಗರೀಕರಿಗೆ ಅಭಿನಂದನೆಗಳನ್ನು ತಿಳಿಸೋಣ…

1.     ಅಮೇರಿಕಾ, ರಷ್ಯಾ, ಚೀನಾ ನಂತರ ಚಂದ್ರನಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶವಾಗಿ ಭಾರತ ಇದೀಗ ಹೊರಹೊಮ್ಮಿದೆ. ಈ ಕ್ಲಬ್‌ ಸೇರುವ ಮೂಲಕ ಜಗತ್ತಿಗೆ ತನ್ನ ಬಾಹ್ಯಾಕಾಶ ಶಕ್ತಿಯನ್ನು ಸಾಬೀತುಪಡಿಸಿದಂತಾಗಿದೆ. ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇದೊಂದು ಮೈಲುಗಲ್ಲಾಗಿದೆ.

2.    ಈ ಮೂಲಕ ದೇಶದ ಘನತೆ ಮತ್ತು ಆರ್ಥಿಕತೆ ಹೆಚ್ಚಾಗಲಿದೆ. ಮತ್ತೊಮ್ಮೆ ನಾವು ಭಾರತೀಯರು ನಮ್ಮ ದೇಶ ಭಾರತ ಅಂತ ಹೆಮ್ಮೆಯಿಂದ ಹೇಳಬಹುದಾಗಿದೆ. ಜೊತೆಗೆ ಭಾರತ ವಿಶ್ವದಲ್ಲಿ ತನ್ನ ಆರ್ಥಿಕತೆಯನ್ನು ವಿಸ್ತರಿಸಿಕೊಳ್ಳಲು ಅವಕಾಶವಾದಂತಾಗಿದೆ.

3.     ಬಹುಮುಖ್ಯವಾಗಿ ನಮ್ಮ ದೇಶ ಮೂನ್‌ ಎಕಾನಮಿ ಪ್ರವೇಶಿಸಿದಂತಾಗಿದೆ. ಮೂನ್‌ ಎಕಾನಮಿ ಎಂದರೆ ಚಂದ್ರನ ಆರ್ಥಿಕತೆ. ಚಂದ್ರನಲ್ಲೀಗ ನಾವೀರುವುದರಿಂದ ಅಲ್ಲಿನ ಮಾಹಿತಿಯನ್ನು ವಿದೇಶಗಳೊಂದಿಗೆ ಹಂಚಿಕೊಳ್ಳುವ ಮೂಲಕ ಕೋಟ್ಯಾಂತರ ರೂಗಳ ಹೊಸ ವಹಿವಾಟು ಶುರುವಾಗಲಿದೆ. ಚಂದ್ರನಲ್ಲಿ ಇಳಿಯಲಾಗದ ದೇಶಗಳು ಈ ವಿಷಯದಲ್ಲಿ ನಮ್ಮೊಂದಿಗೆ ವ್ಯವಹಾರ-ವಹಿವಾಟುಗಳಲ್ಲಿ ಕೈಜೋಡಿಸಲಿವೆ. ಬಹುಮುಖ್ಯವಾಗಿ ಚಂದ್ರನ ಮಾಹಿತಿಗೆ ಸಂಪರ್ಕಿಸಲಿವೆ. ಈ ಮೂಲಕ ಉದ್ಯಮವನ್ನು ನಮ್ಮೊಂದಿಗೆ ನಡೆಸಲಿವೆ. ಹೊಸ ರೀತಿಯ ತಂತ್ರಜ್ಞಾನದ ವ್ಯವಹಾರಗಳಿಗೂ ಇದು ನಾಂದಿಯಾಗಲಿದೆ. ಸ್ಟಾರ್ಟ್‌ಅಪ್‌, ಪ್ರವಾಸ, ಮನರಂಜನೆ ಕ್ಷೇತ್ರಗಳ ವ್ಯಾಪ್ತಿ ವಿಸ್ತಾರವಾಗಲಿದೆ.

4.     ಈ ಗೆಲುವಿನಿಂದ ದೇಶದ ಅಭಿವೃದ್ಧಿಗೆ ಮತ್ತು ಪ್ರಗತಿಗೆ ಖಾಸಗಿ ಸಂಸ್ಥೆಗಳು ಮತ್ತಷ್ಟು ಬೆಳವಣಿಗೆಗೆ ಅನುಕೂಲವಾಗುವಂತೆ ತಮ್ಮ ಕೈಜೋಡಿಸಲಿವೆ. ಹೂಡಿಕೆದಾರರ ಮನಸ್ಸನ್ನು ದೇಶದ ಬಾಹ್ಯಾಕಾಶ ಕ್ಷೇತ್ರ ಆಕರ್ಷಿಸಿದಂತಾಗಿದೆ. ಇದು ದೇಶದ ತಂತ್ರಜ್ಞಾನದ ಮತ್ತು ಆರ್ಥಿಕತೆಯ ಬೆಳವಣಿಗೆಗೆ ಅನುಕೂಲವಾಗಲಿದೆ.

5.     ದೇಶದ ಬಾಹ್ಯಾಕಾಶ ತಂತ್ರಜ್ಞಾನದಿಂದ ನಮಗೊದಗಬಹುದಾದ ಅಪಾಯಗಳ ಮುನ್ಸೂಚನೆ ಸಿಗಲಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ  ಬಾಹ್ಯಾಕಾಶದ ಹೊಸ ಪರಿಶೋಧನೆಗಳಿಗೆ ಅವಕಾಶ ಲಭ್ಯವಾಗಲಿದೆ.

6.     ಚಂದ್ರನ ಅಧ್ಯಯನದಿಂದ ಚಂದ್ರನ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಲಿದ್ದು, ಇತರ ಗ್ರಹಗಳ ಮತ್ತು ಬಾಹ್ಯಾಕಾಶದ ಅಧ್ಯಯನಕ್ಕೆ ನೆರವಾಗಲಿದೆ.

7. ಚಂದ್ರಯಾನ 2ರ ಸೋಲಿನಿಂದ ಕಲಿತ ಪಾಠಗಳು ಚಂದ್ರಯಾನ 3ರ ಯಶಸ್ಸಿಗೆ ಕಾರಣವಾಗಿದ್ದು, ಸೋತವರು ಛಲದಿಂದ ಮತ್ತೆ ಪ್ರಯತ್ನಿಸಿದರೆ ಖಂಡಿತ ಗೆಲ್ಲಬಹುದು ಎಂಬ ಹೊಸ ಪಾಠವೊಂದು ನಮಗೆ, ಜಗತ್ತಿಗೆ  ದೊರೆತಿದೆ. 

8. ಸೋಲಿನಿಂದ ಕುಂದದೆ ಗೆದ್ದ ಇಸ್ರೋ ವಿಜ್ಞಾನಿಗಳ ನಡೆ, ನಾಯಕತ್ವ ಈಗ ದೇಶಕ್ಕಷ್ಟೇ ಮಾದರಿಯಲ್ಲ, ವಿಶ್ವಕ್ಕೂ ಹೊಸ ಹುಮ್ಮಸ್ಸನ್ನು ನೀಡಿದೆ.

9. ಈ ಗೆಲುವು ಗುರಿಯಷ್ಟೇ ಮುಖ್ಯವಲ್ಲ, ದಾರಿಯೂ ಕೂಡ ಅಂತ ಮತ್ತೊಮ್ಮೆ ಸಾಬೀತುಪಡಿಸಿದೆ. ಗೆಲುವಿನ ದಾರಿಯಲ್ಲಿ ಎಷ್ಟೇ ಅಡೆತಡೆಗಳಾದರೂ ಗಮ್ಯ ಬದಲಾಗಬಾರದು. ಆಗ ಗುರಿ ಮುಟ್ಟೇ ಮುಟ್ಟುತ್ತೇವೆ ಎಂಬುದನ್ನು ಎತ್ತಿ ಹಿಡಿದಿದೆ. 

10. ಇದು ದೇಶದ ವರ್ತಮಾನದ ಗೆಲುವಷ್ಟೇ ಆಗಿ ಉಳಿಯದೆ, ಭವಿಷ್ಯದ ಹೊಸ ದಾರಿಗೆ, ಹೊಸ ಗೆಲುವಿಗೆ, ಚೈತನ್ಯ ತುಂಬಿದಂತಾಗಿದೆ. ಈ ಚೈತನ್ಯ ಭವಿಷ್ಯ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಇವಿಷ್ಟು ನನಗೆ ಸಿಕ್ಕ ಚಂದ್ರಯಾನ 3ರ ಯಶಸ್ಸಿನ ಪ್ರಯೋಜನಗಳು.  ಹುಡುಕಿದರೆ ಇನ್ನೂ ಹಲವು ಪ್ರಯೋಜನಗಳು ಸಿಗಬಹುದು. ನನಗೆ ಸಿಕ್ಕಷ್ಟನ್ನು ನಾನು ನಿಮಗೆ ತಿಳಿಸಿದ್ದೇನೆ. ನಿಮಗೆ ಗೊತ್ತಿರುವವನ್ನು ಕಾಮೆಂಟ್‌ ಮಾಡಿ ತಿಳಿಸಿ, ನಾನು ತಿಳಿದುಕೊಳ್ಳುತ್ತೇನೆ.

ನಮ್ಮ ದೇಶ, ನಮ್ಮ ಹೆಮ್ಮೆ… ಧನ್ಯವಾದಗಳು…


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಗುರಿ ಏನು?

ಸ್ನೇಹಿತರೇ, ಜೀವನದಲ್ಲಿ ಒಂದು ಗುರಿ ಇರಬೇಕಾಗುತ್ತದೆ. ನೀವು ಇರುವುದರಲ್ಲೇ ಸಂತುಷ್ಟರಾಗಿ ಇರುತ್ತೇನೆ ಎಂದರೆ ನಿಮಗೆ ಯಾವುದೇ ಗುರಿಯ ಅವಶ್ಯಕತೆ ಇರುವುದಿಲ್ಲ. ಆದರೆ, ಏನನ...