ಗುರುವಾರ, ನವೆಂಬರ್ 14, 2024

ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ.

ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವಾದರೆ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಓದಿ.

https://nallanalle.blogspot.com/2024/11/how-to-earn-online.html

ಮೊದಲಿಗೆ, ನಾಳೆಯಿಂದ ಬೆಂಗಳೂರಿನಲ್ಲಿ ಜರುಗಲಿರುವ ವೀರಲೋಕ ಪುಸ್ತಕ ಸಂತೆಯಲ್ಲಿ ನೀವೆಲ್ಲಾ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಕೋರುತ್ತೇನೆ... ಮಾನಸಿಕವಾಗಿ ಮೂರೂ ದಿನಗಳು ನಾನಲ್ಲಿ ಇರುತ್ತೇನೆ ಎಂದು ಬಿನ್ನವಿಸಿಕೊಳ್ಳುತ್ತೇನೆ.


ಪುಸ್ತಕ ಸಂತೆಗೆ ಶುಭವಾಗಲಿ...

ಮೊನ್ನೆ ಸ್ನೇಹಿತರೊಬ್ಬರು ನನ್ನ ವಾಟ್ಸಪ್ಪಿಗೆ ಈ ಕೆಳಗಿನ ಪೋಸ್ಟರ್‌ ಕಳಿಸಿದರು. ಅವರಿಗೆ ನಾನು ಕೂಡ ಸಾಹಿತಿ, ಪುಸ್ತಕ ಪ್ರಕಾಶನವಿದೆ ಎಂದು ಇತ್ತೀಚಿಗಷ್ಟೇ ಗೊತ್ತಾಗಿದೆ. ಆದಕಾರಣ ಈ ಫೋಸ್ಟರ್‌ ಕಳಿಸಿದ್ದರು. ನಾನು ಧನ್ಯವಾದಗಳನ್ನು ಹೇಳಿ ಅನಂತ ಕುಣಿಗಲ್‌ ಅವರಿಗೆ ಪುಸ್ತಕ ಪ್ರಕಾಶನ ಮಾಡುವುದು ಹೇಗೆ ಎಂದು ತಿಳಿಸಿದ್ದೇ ನಾನು ಎಂದು ಉತ್ತರ ಬರೆದೆ. ಅವರಿಗೆ ಆಶ್ಚರ್ಯವಾಯಿತು. 

ಶ್ರೀಯುತ ಅನಂತ ಕುಣಿಗಲ್‌ ಅವರು ಉತ್ಸಾಹಿ ಸಾಹಿತಿ ಮತ್ತು ಪ್ರಕಾಶಕರು. ಈಗ ವೀರಲೋಕದ ಭಾಗವೂ ಆಗಿರುವ ಅನಂತ ಅವರು ಈ ಪುಸ್ತಕ ಸಂತೆಯಲ್ಲಿ ಪುಸ್ತಕ ಪ್ರಕಟಣೆಯ ಬಗ್ಗೆ ಮಾತನಾಡುತ್ತಿರುವುದು ಸಂತಸದ ವಿಚಾರವೇ ಸರಿ. ನನಗೆ ಸಮಯವಿದಿದ್ದರೆ ಮೊದಲನೇ ಸಾಲಿನಲ್ಲಿ ಕುಳಿತು ಇವರ ಮಾತುಗಳನ್ನು ಆಲಿಸುತ್ತಿದ್ದೆ. ಪ್ರಕಾಶನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ನಾನೆಷ್ಟು ತಿಳಿದುಕೊಂಡಿದ್ದರೂ ಅದು ಸಾಲದಾಗಿದೆ. ಕಾರಣಾಂತರಗಳಿಂದ ನಾನು ಹೋಗಲಾಗುತ್ತಿಲ್ಲ. ಆಸಕ್ತರು ಹೋಗಿ ಬನ್ನಿ...

ಅನಂತ ಅವರು ಆಗಾಗ ಫೇಸ್ಬುಕ್ಕಿನಲ್ಲಿ ಪ್ರಕಾಶನದ ಬಗ್ಗೆ ಬರೆಯುತ್ತಿರುತ್ತಾರೆ. ಬಹಳ ಲೆಕ್ಕಾಚಾರದ ಉಪಯುಕ್ತ ಮಾಹಿತಿಗಳಿರುತ್ತವೆ. ತಮ್ಮ ಪುಸ್ತಕ ಪ್ರಕಾಶನದ ಅನುಭವದ ಬಗ್ಗೆ ಹಿಂದೊಮ್ಮೆ ಬರೆಯುತ್ತಾ ನನ್ನ ಹೆಸರನ್ನು ಪ್ರಸ್ತಾಪಿಸುವುದನ್ನೇ ಮರೆತಿದ್ದರು. ಪ್ರಕಾಶನದ ಅತಿರಥ ಮಹಾರಥರನ್ನು ನೆನೆಯುತ್ತಾ ಈ ಗುಬ್ಬಚ್ಚಿಯನ್ನೇ ಮರೆತಿದ್ದರು. ನಾನು ಕಾಮೆಂಟಿಸಿ ಅವರಿಗೆ ನೆನಪಿಸಿದೆ. ಇದಕ್ಕೆ ಕಾರಣವಾದದ್ದು ನನ್ನೊಳಗಿನ ನಾನು. ಈ ನಾನುವಿನ ಬಗ್ಗೆ ನನಗೆ ವಿಷಾದವಿದೆ.

ಇತ್ತೀಚಿಗೆ ನಮ್ಮ ಪ್ರಕಾಶನದ ನಿಬಂಧನೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಾಗ ಅನಂತ ಅವರು ರಾಯಧನದ ಬಗ್ಗೆ ಕಾಮೆಂಟ್‌ ಮಾಡಿದ್ದರು. ಯಾರಾದರೂ ರಾಯಧನ ಕೊಡುತ್ತೇನೆ ಎಂದರೆ ನನ್ನ ಪುಸ್ತಕಗಳನ್ನು ಕೊಡಲು ನಾನೇ ಸಿದ್ಧನಿರುವಾಗ ರಾಯಧನದ ಮಾತೆಲ್ಲಿ? ನಿಮ್ಮ ಪ್ರಕಾಶನದ ಈಮೇಲ್‌ ಐಡಿ ಕೊಡಿ, ಇಷ್ಟವಾದರೆ ಪ್ರಕಟಿಸಿ ರಾಯಧನ ಕೊಡಿ ಎಂದೆ. ಅವರ್ಯಾಕೋ ಈಮೇಲ್‌ ಐಡಿ ಕೊಡಲಿಲ್ಲ. ಹೋಗಲಿಬಿಡಿ.

ಮೊನ್ನೆ ಮತ್ತೊಬ್ಬ ಸ್ನೇಹಿತರಾದ ಪ್ರಕಾಶಕರು ಇದು ನಿಮ್ಮದೇ ಐಡಿಯಾ ಎಂದರು. ಹೇಗೆ ಸರ್‌ ಎಂದೆ. ನೀವು ಹಿಂದೊಮ್ಮೆ ಪ್ರಕಟಿಸಿದ್ರಲ್ಲ ಅದರ ಪ್ರಭಾವ ಅಂದರು. ಇಲ್ಲ ಸರ್.‌ ಪ್ರತಿಯೊಬ್ಬ ಸೃಜನಶೀಲ ಮನಸ್ಸಿನಲ್ಲಿಯೂ ಅವರದೇ ಐಡಿಯಾಗಳಿರುತ್ತವೆ. ಸ್ಪೂರ್ತಿ ಇರಬಹುದು ಎಂದೆ. ಅವರು ನನ್ನ ಸ್ನೇಹಕ್ಕೆ ಕಟ್ಟುಬಿದ್ದು ಅಷ್ಟಕ್ಕೆ ಸುಮ್ಮನಾದರು. ಸ್ನೇಹಿತರಾದ ಪ್ರಕಾಶಕರು ಹೇಳಿದ ಪೋಸ್ಟರ್‌ ಕೆಳಗಿದೆ.


ಇಲ್ಲಿ ಆಕಾಶ ನೋಡಲು ನುಗ್ಗಲಿಲ್ಲ. ನನಗೆ ಕಂಡಷ್ಟು ಆಕಾಶ ನನ್ನದು. ನಿಮಗೆ ದಕ್ಕಿದಷ್ಟು ಆಕಾಶ ನಿಮ್ಮದು...

ಈಗ, ವಿಷಯಕ್ಕೆ ಬರುತ್ತೇನೆ. ಕನ್ನಡ ಪುಸ್ತಕ ಪ್ರಕಾಶನ ಕುರಿತು ತಿಳಿಸಲು ಬಹಳಷ್ಟು ಜನ ಇದ್ದಾರೆ. ಆದರೆ, ಪ್ರಶ್ನೆಯಿರುವುದು ಓದುಗರನ್ನು ಎಲ್ಲಿಂದ ತರುವುದು? ಎಂಬುದು. ಏ! ಓದುಗರಿದ್ದಾರೆ ಮೊನ್ನೆ ಇಂತಹವರದು ಇಂತಿಷ್ಟು ಸಾವಿರ ಪ್ರತಿಗಳು ಮುದ್ರಣವಾಗಲಿಲ್ಲವೇ? ಎಂದೆಲ್ಲಾ ಹೇಳಬೇಡಿ. ಅದು ಇಷ್ಟು ವರ್ಷಗಳ ಕಾಲ ಅವರು ಗಳಿಸಿದ ಆಸ್ತಿ. ಸಮಸ್ಯೆ ಇರುವುದು ಹೊಸ ಓದುಗರ ಸೃಷ್ಟಿಯಲ್ಲಿ. ಕಲಿಕೆಯಲ್ಲಿ ಕನ್ನಡ ಕಡಿಮೆಯಾಗುತ್ತಿದೆ. ಹಿಂದೊಮ್ಮೆ ಒಂದನೇ ತರಗತಿಯಿಂದಲೇ ಇಂಗ್ಲೀಷ್‌ ಭಾಷೆಯನ್ನು ಕಲಿಸುತ್ತೇವೆ ಎಂದು ಸರ್ಕಾರ ಹೇಳಿದಾಗ ಬೇಡ ಬೇಡ ಎಂದು ಕನ್ನಡ ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ವಿರೋಧಿಸಿದರು. ಸರ್ಕಾರ ಸುಮ್ಮನಾಯಿತು. ಅಂದು ಈ ಕೆಲಸವಾಗಿದ್ದರೆ ಇಂದಿನ ದುಸ್ಥಿತಿ ಬರುತ್ತಿರಲಿಲ್ಲ. ಈಗ ಒಂದನೇ ತರಗತಿಯಿಂದಲೇ ಇಂಗ್ಲೀಷ್‌ ಕಲಿಸುತ್ತಿದ್ದರೂ ರಾಜ್ಯದ ಅರ್ಧ ಮಕ್ಕಳು ಇಂಗ್ಲೀಷ್‌ ಶಾಲೆಗಳಲ್ಲಿ ಕಲಿಯುತ್ತಿದ್ದು, ಕನ್ನಡ ಒಂದು ಭಾಷೆಯಾಗಷ್ಟೇ ಕಲಿಯುತ್ತಿದ್ದು, ಪಾಸ್‌ ಆದರೆ ಸಾಕು ಎಂಬ ಮನಸ್ಥಿತಿಗೆ ಬಂದುಬಿಟ್ಟಿದ್ದಾರೆ. ನನ್ನ ಆತಂಕ ಇರುವುದು ಇಲ್ಲಿ! ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಹೊಸ ಓದುಗರನ್ನು ಎಲ್ಲಿಂದ ತರುವುದು?

ಚರ್ಚೆಗೆ ಒಂದಷ್ಟು ಕಾಮೆಂಟುಗಳು ಬಂದರೆ, ಈ ಬಗ್ಗೆ ವಿಸ್ತಾರವಾಗಿ ಬರೆಯುವೆ.

- ಗುಬ್ಬಚ್ಚಿ ಸತೀಶ್.




ಮಂಗಳವಾರ, ನವೆಂಬರ್ 12, 2024

How to Earn Online...? ಆನ್‌ ಲೈನಿನಲ್ಲಿ ಹಣ ಗಳಿಸುವುದು ಹೇಗೆ...?

ಸ್ನೇಹಿತರೇ, ನಮಸ್ಕಾರ.

ಹೇಗಿದ್ದೀರಿ? ಎಲ್ಲಾ ಕುಶಲ ಎಂದು ಭಾವಿಸಿ ಈ ಪೋಸ್ಟ್‌ ಬರೆಯುತ್ತಿದ್ದೇನೆ...

ನನ್ನ ಕೆಲವು ಸ್ನೇಹಿತರು ಆಗಾಗ ಆನ್‌ ಲೈನಿನಲ್ಲಿ ಹಣ ಗಳಿಸುವುದರ ಬಗ್ಗೆ ಚರ್ಚಿಸುತ್ತಿರುತ್ತಾರೆ. ಈಗಾಗಲೇ ನಾವು ಯೂಟ್ಯೂಬಿನಲ್ಲಿ, ಫೇಸ್‌ ಬುಕ್ಕಿನಲ್ಲಿ, ಬ್ಲಾಗ್‌ ಬರೆಯುವ ಮೂಲಕ, ರೀಲ್ಸ್‌ ಮಾಡುವ ಮೂಲಕ ಅನೇಕರು ಹಣ ಗಳಿಸುತ್ತಿರುವುದನ್ನು ನೋಡಿದ್ದೇವೆ. ಸಿನಿಮಾ ನಟರಿಗಿಂತ ಖ್ಯಾತರಾದ, ಹಣ ಮತ್ತು ಹೆಸರು ಎರಡನ್ನು ಗಳಿಸಿದವರನ್ನು ನೋಡಿದ್ದೇವೆ. ಆದರೂ, ಇದೆಲ್ಲಾ ನಿಜವೇ ಎಂಬುದನ್ನು ಕೂಡ ಕೇಳುವವರು ನಮ್ಮ ನಡುವೆಯೇ ಇದ್ದಾರೆ. ಹಾಗೂ, ಯಾವ ರೀತಿ ಗಳಿಸಬಹುದು ಎಂದು ಕೇಳುವವರು ಕೂಡ ಇದ್ದಾರೆ. ಅಂತಹವರಿಗಾಗಿ ಅಂತಲೇ ಈ ಪ್ರಾಥಮಿಕ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆನ್‌ ಲೈನಿನಲ್ಲಿ ಸೋಶಿಯಲ್‌ ಮೀಡಿಯಾ ಮೂಲಕ ಹಣ ಗಳಿಸಬಹುದಾದ ಕೆಲವು ನನಗೆ ಗೊತ್ತಿರುವ ಸಂಗತಿಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.


ಮೊದಲಿಗೆ, ನೀವು ಬರಹಗಾರರಾಗಿದ್ದರೆ ಒಂದು ಬ್ಲಾಗನ್ನು ಶುರು ಮಾಡಿಕೊಳ್ಳಿ. ಬ್ಲಾಗರ್.ಕಾಮ್‌ (blogger.com) ಗೂಗಲ್ಲಿನವರದ್ದಾಗಿದ್ದು ನೀವು ಉಚಿತವಾಗಿ ಇಲ್ಲಿ ಬ್ಲಾಗನ್ನು ಶುರು ಮಾಡಬಹುದು. ನಿಯಮಿತವಾಗಿ ಬ್ಲಾಗ್‌ ಮಾಡುತ್ತಾ ನಿಮ್ಮ ಬ್ಲಾಗಿನ ವೀಕ್ಷಣೆಯು ಹೆಚ್ಚಾದಾಗ ಗೂಗಲ್‌ ಆಡ್‌ ಸೆನ್ಸ್‌ಗೆ ಅಪ್ಲೈ ಮಾಡಬಹುದು. ನಿಮಗೆ ಅಪ್ರೂವಲ್‌ ಸಿಕ್ಕರೆ ನಿಮ್ಮ ಬ್ಲಾಗಿನ ಪೋಸ್ಟುಗಳಿಗೆ ಗೂಗಲ್‌ನವರೇ ಜಾಹೀರಾತು ಹಾಕುತ್ತಾರೆ. ಈ ಜಾಹೀರಾತುಗಳಿಗೆ ಅವರು ತೆಗೆದುಕೊಳ್ಳುವ ಹಣದಲ್ಲಿ ನಿಮಗೂ ಪಾಲನ್ನು ಕೊಡುತ್ತಾರೆ. ನಿಯಮಿತವಾಗಿ ನಿಮಗೆ ಆಸಕ್ತಿದಾಯಕ ವಿಷಯದಲ್ಲಿ ಬ್ಲಾಗ್‌ ಪೋಸ್ಟುಗಳನ್ನು ಬರೆಯುತ್ತಾ ಇದ್ದರೆ ನಿಮ್ಮ ಬ್ಲಾಗಿಗೆ ಹೆಚ್ಚು ವೀಕ್ಷಣೆಗಳು ಬಂದಷ್ಟು ಹಣ ಗಳಿಕೆಯೂ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ವರ್ಡ್‌ ಪ್ರೆಸ್‌ (wordpress.com) ನಲ್ಲಿಯೂ ಕೂಡ ನೀವು ಬ್ಲಾಗ್‌ ಶುರು ಮಾಡಬಹುದು. ಇನ್ನಿತರ ಪ್ಲಾಟ್‌ ಫಾರ್ಮ್‌ ಗಳು ಕೂಡ ಇವೆ...

My Blog: https://nallanalle.blogspot.com/



ಎರಡನೆಯದಾಗಿ, ನಿಮಗೆ ಬರೆಯಲು ಆಸಕ್ತಿ ಇಲ್ಲದಿದ್ದರೆ ನಿಮ್ಮ ಕಲೆಯನ್ನು ಅಥವಾ ಆಸಕ್ತಿಯನ್ನು ವಿಡಿಯೋ ಮಾಡಬಹುದು. ಆ ವಿಡಿಯೋವನ್ನು ನಿಮ್ಮದೊಂದು ಯೂಟ್ಯೂಬ್‌ ಚಾನೆಲ್‌ ಶುರು ಮಾಡಿ ಅಲ್ಲಿ ಅಪ್ಲೋಡ್‌ ಮಾಡಬಹುದು. ಈಗಿರುವ ನಿಯಮದ ಪ್ರಕಾರ 1000 ಚಂದಾದಾರರು ಮತ್ತು 4000 ಗಂಟೆಗಳ ವೀಕ್ಷಣೆ ನಿಮ್ಮ ಚಾನೆಲ್‌ ಪಡೆದುಕೊಂಡರೆ, ಇಲ್ಲಿ ನೀವು ಗೂಗಲ್‌ ಆಡ್‌ ಸೆನ್ಸ್‌ ಗೆ ಅಪ್ಲೈ ಮಾಡಬಹುದು. ಅಪ್ರೂವಲ್‌ ಸಿಕ್ಕರೆ ಬ್ಲಾಗ್‌ ರೀತಿಯೇ ಇಲ್ಲೂ ಕೂಡ ಜಾಹೀರಾತುಗಳು ಬರಲು ಶುರುವಾಗಿ ಗೂಗಲ್‌ ಪಡೆವ ಹಣದಲ್ಲಿ ನಿಮಗೂ ಪಾಲು ಸಿಗುತ್ತದೆ. ಹೆಚ್ಚು ವಿಡಿಯೋಗಳು, ಹೆಚ್ಚು ವೀಕ್ಷಣೆಗಳು ಇದ್ದಷ್ಟೂ ಹಣ ಹೆಚ್ಚು ಗಳಿಸುವ ಸದಾವಕಾಶ ಇದೆ.

My Youtube Channel: https://www.youtube.com/@sathishgbb


ಮೂರನೇಯದಾಗಿ, ಫೇಸ್‌ ಬುಕ್.‌ ಊರಿಗೆ ಬಂದವರು ನೀರಿಗೆ ಬರದೇ ಇರ್ತಾರ ಎಂಬ ಗಾದೆಯಂತೆ ಸ್ಮಾರ್ಟ್‌ ಫೋನ್‌ ಇದ್ದವರ ಬಳಿ ಫೇಸ್‌ ಬುಕ್‌ ಅಕೌಂಟ್‌ ಇರದೇ ಇರುತ್ತಾ!? ನಿಮ್ಮ ಫೇಸ್‌ ಬುಕ್‌ ಅಕೌಂಟನ್ನು ಪ್ರೊಫೆಷನಲ್‌ ಮೋಡಿಗೆ ಬದಲಾಯಿಸಿ ಇಲ್ಲಿ ಹಣ ಗಳಿಸುವ ಸಾಧ್ಯತೆಗಳನ್ನು ಪಡೆದುಕೊಳ್ಳಬಹುದು. ಅಥವಾ ನಿಮ್ಮದೇ ಒಂದು ಫೇಸ್ಬುಕ್‌ ಪೇಜನ್ನು ಕೂಡ ಮಾಡಿಕೊಳ್ಳಬಹುದು. ಕಾಲಕ್ಕೆ ತಕ್ಕಂತೆ ಇಲ್ಲಿ ಹಣ ಗಳಿಸುವ ವಿಧಾನಗಳು ಬದಲಾಗುತ್ತಿದ್ದು ನಿಯಮಿತವಾಗಿ ಅವುಗಳ ಮೇಲೆ ಗಮನ ಇಟ್ಟು ಕೆಲಸ ಮಾಡಬೇಕಾಗುತ್ತದೆ. ಟೆಕ್ಸ್ಟ್‌ ಪೋಸ್ಟುಗಳು, ಪೋಟೊಗಳು, ವಿಡಿಯೋಗಳು, ಬಹುಮುಖ್ಯವಾಗಿ ರೀಲ್ಸ್‌ ಮಾಡುವವರು ಇಲ್ಲಿ ಹೆಚ್ಚಿನ ಹಣ ಗಳಿಸುತ್ತಾರೆ. ಅದೇ ರೀತಿ ಇನ್ಟಾಗ್ರಾಂ ಅಕೌಂಟ್‌ ಕೂಡ ಮಾಡಿಕೊಂಡು ಖ್ಯಾತಿ ಮತ್ತು ಹಣ ಗಳಿಸಬಹುದು. ಇಲ್ಲಿ ರೀಲ್ಸ್‌ ಗಳದ್ದೇ ಹವಾ!

My Facebook Page: https://www.facebook.com/profile.php?id=100064182813052


ನಾಲ್ಕನೇಯದಾಗಿ, ಅಮೇಜಾನ್‌ ಅಫಿಲೇಟ್‌ ಮಾರ್ಕೆಟಿಂಗ್.‌ ನಿಮ್ಮಿಷ್ಟದ ವಸ್ತುಗಳನ್ನು ಅಮೇಜಾನ್‌ ಅಫಿಲೇಟ್‌ ಅಸೋಸಿಯೇಟ್‌ ಆಗಿ (https://affiliate-program.amazon.in/) ಅವರು ಕೊಡುವ ಲಿಂಕನ್ನು ಪ್ರಮೋಟ್‌ ಮಾಡುವುದರ ಮೂಲಕವೂ ಹಣ ಗಳಿಸಬಹುದು. ನೀವು ಪ್ರಮೋಟ್‌ ಮಾಡುವ ವಸ್ತುಗಳು  ಮಾರಾಟವಾದರೆ ನಿಮಗೆ ಸ್ವಲ್ಪ ಕಮೀಷನ್‌ ಸಿಗುತ್ತದೆ. ಹೆಚ್ಚು ಮಾರಾಟವಾದಷ್ಟು ಹೆಚ್ಚು ಹಣ ಗಳಿಸುವ ಅವಕಾಶವಿದೆ. ನಿಮ್ಮ ಸೋಶಿಯಲ್‌ ಮೀಡಿಯಾ ಐಡಿಗಳನ್ನು ಈ ಲಿಂಕನ್ನು ಶೇರ್‌ ಮಾಡಲು ಬಳಸಬಹುದು.

ನನ್ನದು ಈ ಅಕೌಂಟ್‌ ಕೂಡ ಇದ್ದು, ಸೂಕ್ತ ಸಂದರ್ಭಗಳಲ್ಲಿ ಹೆಚ್ಚಾಗಿ ಕನ್ನಡ ಪುಸ್ತಕಗಳನ್ನು ಪ್ರಮೋಟ್‌ ಮಾಡಲು ಮಾತ್ರ ಬಳಸುತ್ತೇನೆ.

(ನನ್ನ ಅಮೇಜಾನ್‌ ಲಿಂಕ್‌ ಮೂಲಕ ಕನ್ನಡ ಪುಸ್ತಕ ಕೊಳ್ಳಿರಿ: https://amzn.to/3ClRFCF)

ಈ ರೀತಿ ಇನ್ನೂ ಹತ್ತು ಹಲವು ನ್ಯಾಯಯುತವಾಗಿ ಹಣ ಗಳಿಸುವ ಅವಕಾಶಗಳು ಆನ್‌ ಲೈನಿನಲ್ಲಿವೆ. 

ಯಾವುದೆ ಪ್ಲಾಟ್‌ ಫಾರ್ಮ್‌ ಆದರೂ ನೀವು ಯಾವ ಕೆಟಗರಿ ಅಥವಾ ನೀಚೆ (niche) ಅಂದರೆ ಸರಳವಾಗಿ ನಿಮ್ಮ ಆಸಕ್ತಿ, ವಸ್ತು, ವಿಷಯದ ಮೇಲೆ ಹೆಚ್ಚು ಪರಿಣಿತರಾಗಿರುತ್ತೀರಿ ಎಂಬುದರ ಮೇಲೆ ನಿಮ್ಮ ಹಣ ಗಳಿಕೆಯ ಸಾಮರ್ಥ್ಯ ಅವಲಂಬಿತವಾಗಿರುತ್ತದೆ.

ಬಹುಮುಖ್ಯವಾಗಿ, ಇಲ್ಲಿ ಎಲ್ಲೂ ಸುಲಭವಾಗಿ ಹಣ ಗಳಿಸಲಾಗುವುದಿಲ್ಲ. ನಿರಂತರತೆ ಮಾತ್ರ ನಿಮ್ಮನ್ನು ಹೆಚ್ಚು ಖ್ಯಾತಿ, ಹಣವನ್ನು ಗಳಿಸುವಂತೆ ಮಾಡಬಹುದು.

ಮತ್ತೇನಾದರೂ ಹೆಚ್ಚಿಗೆ ಮಾಹಿತಿ ಬೇಕೆಂದರೆ ಇಲ್ಲಿಯೇ ಕಾಮೆಂಟ್‌ ಮಾಡಿ ತಿಳಿಸಿ. ಮುಂದಿನ ಪೋಸ್ಟಿನಲ್ಲಿ ಬರೆಯಲು ಪ್ರಯತ್ನಿಸುತ್ತೇನೆ.

ಇಲ್ಲೇಲ್ಲಾ ನೀವು ಎಷ್ಟು ಗಳಿಸಿದಿರಿ ಎಂದು ಮಾತ್ರ ಸದ್ಯಕ್ಕೆ ಕೇಳದಿರಿ.

ಶುಭವಾಗಲಿ,

- ಗುಬ್ಬಚ್ಚಿ ಸತೀಶ್.



ಬುಧವಾರ, ಅಕ್ಟೋಬರ್ 9, 2024

ನಿಮ್ಮ ಕವಿತೆಗೆ ʼಬಹುಮಾನʼ ಗೆಲ್ಲುವ ಅವಕಾಶ...

ನಿಮ್ಮ ಕವಿತೆಗೆ ʼಬಹುಮಾನʼ ಗೆಲ್ಲುವ ಅವಕಾಶ...


ಸ್ನೇಹಿತರೇ,

ಅಂತರ್ಜಾಲ ಪತ್ರಿಕೆ "ಪಂಜು" ಕವಿತೆ ಸ್ಪರ್ಧೆಯನ್ನು ಆಯೋಜಿಸಿದ್ದು, ನಿಮ್ಮ ಕವಿತೆ ರೂ. 3000/- ಬಹಮಾನ ಗೆಲ್ಲುವ ಅವಕಾಶವಿದೆ.

"ಪಂಜು" ಅಂತರ್ಜಾಲ ಪತ್ರಿಕೆ ಕವಿತೆ ಸ್ಪರ್ಧೆಗೆ ಸೂಚನೆಗಳು ಹೀಗಿವೆ:

- ಕವಿತೆ ಸ್ವಂತ ರಚನೆಯಾಗಿರಬೇಕು.

- ಕವಿತೆ ಯೂನಿಕೋಡ್ ನಲ್ಲಿ ಇದ್ದರೆ ಒಳ್ಳೆಯದು.

- ಸ್ಪರ್ಧೆಗೆ ಅಪ್ರಕಟಿತ ಕವಿತೆಯನ್ನು ಮಾತ್ರ ಕಳುಹಿಸಬೇಕು. ಕವಿತೆಯು, ಎಫ್ ಬಿ ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಕವಿತೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.

- ಬೇರೆಯವರ ಕದ್ದ ಕವಿತೆಯನ್ನು ಕಳುಹಿಸಿದರೆ ಅಂತಹ ಲೇಖಕರನ್ನು ಪಂಜುವಿನ ಬ್ಲಾಕ್ ಲಿಸ್ಟ್ ಗೆ ಹಾಕಲಾಗುವುದು.

* ಕವಿತೆಯನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com ಅಥವಾ                 smnattu@gmail.com

** ಮಿಂಚಂಚೆಯ ಸಬ್ಜೆಕ್ಟಿನಲ್ಲಿ “ಪಂಜು ಕವಿತೆ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ.

*** ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ..

**** ಕವಿತೆ ತಲುಪಬೇಕಾದ ಕೊನೆಯ ದಿನಾಂಕ: 20.10.2024

ಬಹುಮಾನಗಳು:

* ಮೊದಲ ಬಹುಮಾನ: 3000/- ರೂಪಾಯಿ

** ಎರಡನೇ ಬಹುಮಾನ: 2000/- ರೂಪಾಯಿ

*** ಮೂರನೇ ಬಹುಮಾನ: 1000/- ರೂಪಾಯಿ

* ಹಾಗು ತೀರ್ಪುಗಾರರ ಮೆಚ್ಚುಗೆ ಪಡೆದ ಐವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.

- ನಿಮ್ಮ ಕವಿತೆಯ ನಿರೀಕ್ಷೆಯಲ್ಲಿ.. ʼಪಂಜು ಬಳಗʼವಿದೆ...  

"ಪಂಜು" ಅಂತರ್ಜಾಲ ಪತ್ರಕೆಯ ಲಿಂಕ್: https://panjumagazine.com/


ಶುಭವಾಗಲಿ,

- ಗುಬ್ಬಚ್ಚಿ ಸತೀಶ್.‌


2024ನೇ ಸಾಲಿಗೆ ನಿಮ್ಮ ಪುಸ್ತಕವನ್ನು ನಮ್ಮ ಪ್ರಕಾಶನದೊಂದಿಗೆ ಪ್ರಕಟಿಸುವ ಇಚ್ಛೆಯಿದ್ದರೆ ನಿಬಂಧನೆಗಳ ಲಿಂಕ್‌ ಕ್ಲಿಕ್‌ ಮಾಡಿ ನೋಡಿ...


ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ. ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವ...