ಭಾನುವಾರ, ಜುಲೈ 6, 2025

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ,


ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾನು ಮೊದಲ ದಿನವೇ ನೋಡಿದೆ. ಸಿನಿಮಾ ಕುರಿತು ನನ್ನ ಅನಿಸಿಕೆ ಅಭಿಪ್ರಾಯವನ್ನು ನನ್ನ ಫೇಸ್ಬುಕ್‌ ಪೇಜ್‌ ಜೊತೆಗೆ, ನನ್ನ ಯೂಟ್ಯೂಬ್‌ ಚಾನೆಲ್ಲಿನಲ್ಲಿ ಕೂಡ ದಾಖಲಿಸಿದೆ. ಮೊದಲರ್ಧ ಸಾಮಾನ್ಯ ಸಿನಿಮಾದಂತೆ ನೋಡಿಸಿಕೊಂಡ ʼಮಾದೇವʼ ದ್ವಿತೀರ್ಯಾಧದಲ್ಲಿ ನನ್ನ ಮನಸ್ಸು ಗೆದ್ದುಬಿಟ್ಟ. ನಿರ್ದೇಶಕರು ಸಿನಿಮಾದ ಕತೆಗೆ ನೀಡಿದ ತಿರುವು ಮತ್ತು ಪಾತ್ರವೊಂದರ ರೂಪಾಂತರ ಸಿನಿಮಾವನ್ನು ಒಂದು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮುಗ್ಧ ಮಾದೇವನ ಪಾತ್ರವನ್ನು ಪರಕಾಯ ಪ್ರವೇಶ ಮಾಡಿದಂತೆ ನಟಿಸಿರುವ ನಟ ವಿನೋದ್‌ ಪ್ರಭಾಕರ್‌ ಮನಸ್ಸು ಗೆದ್ದು ಬಿಡುತ್ತಾರೆ. ಅವರ ತಣ್ಣನೆಯ ಕೌರ್ಯದ ನಟನೆ ಎಂಥಹವರನ್ನೂ ಮಂತ್ರಮುಗ್ಧನನ್ನಾಗಿಸುತ್ತದೆ. 

ಇನ್ನು ಸಿನಿಮಾದ ಉಳಿದ ಪಾತ್ರಗಳು, ತಾಂತ್ರಿಕವರ್ಗದ ಶ್ರಮ ಸಿನಿಮಾದ ಗೆಲುವಿಗೆ ಕಾರಣವಾಗುತ್ತದೆ...

ಇಷ್ಟೇ ಆಗಿದ್ದರೆ ಒಂದು ಅಥವಾ ಎರಡು ವಾರ ಸಿನಿಮಾ ಓಡಿ ಸುಮ್ಮನಾಗುತ್ತಿತ್ತು. ಆದರೆ, ನಟ ಟೈಗರ್‌ ಪ್ರಭಾಕರ್‌ ಅವರ ಅಭಿಮಾನಿಗಳು "ಜಿದ್ದು" ಸಿನಿಮಾವನ್ನು ನೆನಪಿಸಿಕೊಂಡು ಈ ಸಿನಿಮಾಗೆ ಇನ್ನಿಲ್ಲಿದ ಪ್ರೋತ್ಸಾಹ ಪ್ರೀತಿ ನೀಡಿದರು. ಬಾಯಿಂದ ಬಾಯಿಗೆ ಅಂದರೆ ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ʼಮಾದೇವʼ ವೈರಲ್‌ ಆದ. ಅವನನ್ನು ಯಾರೂ ಹಿಡಿಯಲಾಗಲಿಲ್ಲ. ಹಿಡಿಯಬೇಕೆಂದುಕೊಂಡವರ ಪಟ್ಟಿಗೆ ಸ್ವತಃ ನಟ ಮತ್ತು ಚಿತ್ರತಂಡ ಹಾಗೂ ಅಭಿಮಾನಿಗಳು ಸಿಗಲಿಲ್ಲ. ಮತ್ತಷ್ಟು ಪ್ರಚಾರ ಮಾಡಿ ಸಿನಿಮಾ ಗೆಲ್ಲಿಸಿದರು. ತಪಸ್ಸಿನಂತೆ ಒಂದು ಗೆಲುವಿಗಾಗಿ ಕಾದಿದ್ದ ನಟ ವಿನೋದ್‌ ಪ್ರಭಾಕರ್‌ ತಮ್ಮ ನಯ ವಿನಯದ ನಡವಳಿಕೆಯಿಂದ ತಮ್ಮ ಗೆಲುವನ್ನು ಆಹ್ವಾದಿಸಲು ತೊಡಗಿದರು. ಕಾರಣ, 25ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಇನ್ನೂ ಕೂಡ ಕೆಲವು ಕಡೆ "ಮಾದೇವ" ಪ್ರದರ್ಶನ ಕಾಣುತ್ತಲೇ ಇದೆ.

ಆರಂಭದಲ್ಲಿ ಈ ಸಿನಿಮಾಗೆ ಅಷ್ಟೇನು ಪ್ರಚಾರವಿರಲಿಲ್ಲ. ನನ್ನನ್ನೂ ಒಳಗೊಂಡಂತೆ ನೂರಾರು ಜನರು ಈ ಸಿನಿಮಾಗೆ ಅಭೂತಪೂರ್ವವಾಗಿ ಬೆಂಬಲಿಸಿದರು. ಕೆಲವರಂತು ನಿಮಗೆಷ್ಟು ದುಡ್ಡು ಪ್ರಚಾರಕ್ಕೆ ಅಂತ ಕೊಟ್ಟರು ಎಂದರು. ಎಂದಿನಂತೆ ನಾನು ಇವಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ. ನನಗೆ ಒಂದು ಸಿನಿಮಾ ಗೆಲ್ಲಬೇಕು, ಒಬ್ಬ ಒಳ್ಳೆಯ ನಟನಿಗೆ ಅನ್ಯಾಯವಾಗಬಾರದು ಎಂಬ ಕಾಳಜಿ ಅಷ್ಟೆ. ಮತ್ತು ಕನ್ನಡ ಚಲನಚಿತ್ರರಂಗ ಬೆಳೆಯಬೇಕೆಂದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ಒಂದು ಒಳ್ಳೆಯ ಸಿನಿಮಾ ನೋಡಿ ಸುಮ್ಮನಿರಬಾರದು ಎಂಬ ನನ್ನ ನಿಲುವು. ನಾನು ನೋಡಿದ ಒಂದೊಳ್ಳೆಯ ಸಿನಿಮಾವನ್ನು ಮತ್ತಷ್ಟು ಸಿನಿಮಾಪ್ರಿಯರು ನೋಡಲಿ ಎಂಬುದಷ್ಟೇ! ಸ್ವಾರ್ಥವೇನಾದರೂ ಇದ್ದರೆ ಅದು ಈ ಮೂಲಕ ನನ್ನ ಸಾಮಾಜಿಕ ಜಾಲತಾಣಗಳ ಪರಿಧಿ ವಿಸ್ತಾರವಾಗಲಿ ಎಂಬುದಾಗಿರುತ್ತದೆ ಅಷ್ಟೆ.

ನೀವಿನ್ನೂ "ಮಾದೇವ" ಸಿನಿಮಾ ನೋಡಿಲ್ಲವಾದರೆ, ಆದಷ್ಟು ಬೇಗ ನೋಡಿಬಿಡಿ.

ನನ್ನ ಫೇಸ್ಬುಕ್‌ ಪೇಜ್‌ ಮತ್ತು ಯೂಟ್ಯೂಬ್‌ ಚಾನೆಲ್ಲಿನಲ್ಲಿ ಈ ಕುರಿತು ನೀವು ಮತ್ತಷ್ಟು ಹೆಚ್ಚಿನ ಮಾಹಿತಿ ಪಡೆಯಬಹುದು...

ನನ್ನ ಯೂಟ್ಯೂಬ್: https://youtu.be/aV04OWi3EVY?si=AnRPHmvltjMN4BaO

ನನ್‌ ಫೇಸ್ಬುಕ್‌ ಪೇಜ್:‌ https://www.facebook.com/share/p/1BsAp7jvSX/

ಜೈ ಮಾದೇವ,

- ಗುಬ್ಬಚ್ಚಿ ಸತೀಶ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...