ಭಾನುವಾರ, ಜುಲೈ 7, 2024

ಚಡಪಡಿಸುವುದನ್ನು ಮೊದಲು ಬಿಟ್ಟುಬಿಡಿ

ಚಡಪಡಿಸುವುದನ್ನು ಮೊದಲು ಬಿಟ್ಟುಬಿಡಿ


“ಸುಮ್ಮನೆ ಹಾಗೇ ಗಮನಿಸುತ್ತಿರಿ. ಒಂದಷ್ಟು ಪಾತ್ರಗಳು ನಿಮಗೆ ಸಿಗುತ್ತವೆ”

                                        - ಯೋಗರಾಜ್ ಭಟ್, ಖ್ಯಾತ ಸಿನಿಮಾ ನಿರ್ದೇಶಕ.


2008ರಲ್ಲಿ ಖ್ಯಾತ ಸಾಹಿತಿ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರರವರ ಚಿತ್ರಕಥಾ ಶಿಬಿರದಲ್ಲಿ ಭಾಗವಹಿಸಿದ್ದೆ. ಆಗ ಅಲ್ಲಿಗೆ ‘ಮುಂಗಾರು ಮಳೆ’ಯ ಸಿನಿಮಾ ನಿರ್ದೇಶಕರಾದ ಯೋಗರಾಜ ಭಟ್ಟರ ಆಗಮನವಾದಾಗ ನಮ್ಮಲ್ಲೆಲ್ಲಾ ಏನೋ ಒಂಥಾರ ಸಂಚಲನ. ಅವರು ಬಂದವರೇ ನಮಗೊಂದು ಕ್ಲಾಸ್ ತೆಗೆದುಕೊಂಡರು. ಪ್ರಶ್ನೋತ್ತರದ ಮೂಲಕವೇ ಅವರು ಆರಂಭಿಸಿದರು. ಹೆಚ್ಚು ಮಾತನಾಡದೆ, ಸಂಕ್ಷಿಪ್ತವಾಗಿ, ಸೂಕ್ಷ್ಮವಾಗಿ ನಮ್ಮ ಪ್ರಶ್ನೆಗಳಿಗೆ ಭಟ್ಟರು ಉತ್ತರಿಸುತ್ತಿದ್ದರು. ‘ನಿಮ್ಮ ಪಾತ್ರಗಳ ಸೃಷ್ಠಿ ತುಂಬಾ ಹೊಸತನದಿಂದ ಕೂಡಿರುತ್ತದೆ?’ ಎಂಬ ಶಿಬಿರಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಭಟ್ಟರು ಹೇಳಿದಿಷ್ಟು: ‘ನೀವು ಸುಮ್ಮನೆ ಬಸ್ಟಾಂಡಿನಲ್ಲಿ ನಿಂತಿರಿ. ಅಲ್ಲಿಗೆ ಬರುವವರನ್ನು ಸುಮ್ಮನೆ ಹಾಗೇ ಗಮನಿಸುತ್ತೀರಿ. ಒಂದಷ್ಟು ಪಾತ್ರಗಳು ನಿಮಗೆ ಸಿಗುತ್ತವೆ. ಯಾಕೆಂದರೆ, ಮನುಷ್ಯ ಸದಾ ಚಡಪಡಿಸುತ್ತಿರುತ್ತಾನೆ’. 

ಒಮ್ಮೆ ಚಿಂತಿಸಿ ನೋಡಿ. ಹೌದಲ್ಲವ? ಬಂದ ಬಸ್ಸಿಗೆ ಹೋಗುವುದೋ? ಇಲ್ಲಾ ಇನ್ನೊಂದು ಬಸ್ ಬರುವವರೆಗೂ ಕಾಯುವುದೋ? ಒಬ್ಬನ ಚಡಪಡಿಕೆಯಾದರೆ, ಮತ್ತಿನ್ನೇನೋ ಇನ್ನೊಬ್ಬನ ಚಡಪಡಿಕೆ. ಮತ್ತೊಬ್ಬ ಇನ್ನೊಂದು ರೀತಿಯಲ್ಲಿ ಚಡಪಡಿಸುತ್ತಿರುತ್ತಾನೆ. ಮಾಡುವುದೇನು, ನಿಮ್ಮ ಗುರಿಯೇನು ಎಂದು ನಿರ್ಧರಿಸಿಕೊಳ್ಳದೆ ಬರೀ ಚಡಪಡಿಸುತ್ತಿದ್ದರೆ, ನೀವು ಯೋಗರಾಜ ಭಟ್ಟರು ಹೇಳಿದಂತೆ ಸಿನಿಮಾವೊಂದರ ಪಾತ್ರವಾಗಿಬಿಡುತ್ತೀರಿ ಅಷ್ಟೆ. ಅದಕ್ಕೆ ಹೇಳಿದ್ದು ಚಡಪಡಿಸುವುದನ್ನು ಮೊದಲು ಬಿಟ್ಟುಬಿಡಿ. ಚಡಪಡಿಸುವುದನ್ನು ಬಿಟ್ಟು ನಿಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಿ.

ಒಂದು ಕತೆಯಿದೆ. ಒಬ್ಬ ವ್ಯಾಪಾರಿಯ ಬಳಿ ಒಂದಿನ್ನೂರು ಒಂಟೆಗಳು, ಒಂದು ನೂರು ಸೇವಕರಿದ್ದರು. ಆತ ಯಾವಾಗಲು ಯಾವುದಾದರೂ ಕೆಲಸ ಮಾಡುವುದರಲ್ಲಿಯೇ ಬ್ಯುಸಿ. ಒಂದು ಸಂಜೆ ತನ್ನ ಕೆಲಸಗಳ ಬಗ್ಗೆ ಹೇಳಲು ತನ್ನ ಬುದ್ಧಿವಂತ ಗೆಳೆಯನನ್ನು ಬರಮಾಡಿಕೊಂಡ. ಊಟವಾದ ನಂತರ ರಾತ್ರಿಯೆಲ್ಲಾ ತನ್ನ ಗೆಳೆಯನಿಗೆ ತನ್ನ ಕೆಲಸಗಳ ಬಗ್ಗೆ, ಇರುವ ಆಸ್ತಿಯ ಬಗ್ಗೆ ಹೇಳಿದ. ಮುಂದುವರಿಯುತ್ತಾ, ಮುಂದೆ ಇನ್ನೂ ಮಾಡಬೇಕಾಗಿರುವ ಕೆಲಸಗಳ ಬಗ್ಗೆ, ಸಂಪಾದಿಸಬೇಕಾಗಿರುವ ಆಸ್ತಿಯ ಬಗ್ಗೆ ವಿವರಿಸುತ್ತಲೇ ಇದ್ದ. ಒಂದು ಕ್ಷಣವೂ ಆತನಿಗೆ ಸುಮ್ಮನೆ ಕೂಡಲು ಆಗಲೇ ಇಲ್ಲ. ಆತನ ಮಾತನ್ನು ಮಧ್ಯದಲ್ಲಿಯೇ ತಡೆದ ಬುದ್ಧಿವಂತ ಗೆಳೆಯ, “ಅದೆಲ್ಲಾ ಸರಿ. ಆದರೆ, ನಿನ್ನ ಜೀವನದ ಮುಖ್ಯ ಗುರಿ ಯಾವುದು?” ಎಂದು ಕೇಳಿದ. ಅದಕ್ಕೆ ವ್ಯಾಪಾರಿ, “ಇಷ್ಟೆಲ್ಲಾ ಮಾಡಿದ ಮೇಲೆ, ಹೆಚ್ಚು ಆಸ್ತಿಯನ್ನು ಗಳಿಸಿದ ಮೇಲೆ ನಾನು ನನ್ನ ಜೀವನವನ್ನು ಶಾಂತಿಯಿಂದ ಕಳೆಯಬೇಕಿರುವೆ” ಎಂದು. ಅದಕ್ಕೆ ಪ್ರತಿಕ್ರಿಯಿಸುತ್ತಾ ನಗುತ್ತಾ ಬುದ್ಧಿವಂತ ಗೆಳೆಯ ಹೇಳಿದ, “ನೀನು ಸದಾ ಒಂದಿಲ್ಲೊಂದು ಕೆಲಸ, ಆಸ್ತಿ ಗಳಿಸಿರುವುದರಲ್ಲಿಯೇ ಚಡಪಡಿಸುತ್ತಿದ್ದರೆ ನಿನಗೆ ಶಾಂತಿಯಿಂದ ಇರುವುದಕ್ಕಾದರೂ ಸಾಧ್ಯವೆಲ್ಲಿದೆ? ಒಂದು ಕ್ಷಣವೂ ಸುಮ್ಮನೆ ಕೂಡಲಾರೆಯಾದರೆ ನಿನಗೆ ಶಾಂತಿ ಎಲ್ಲಿಂದ ಲಭಿಸುತ್ತದೆ?” ಎಂದು ಹೇಳಿ ಹೊರಟುಹೋದ. ನಿಮ್ಮ ಗುರಿ ಜೀವನದಲ್ಲಿ ಶಾಂತಿ ಗಳಿಸುವುದಾಗಿದ್ದರೆ, ಮೊದಲು ನೀವು ಒಂದು ಕ್ಷಣ ಸುಮ್ಮನೆ ಕುಳಿತುಕೊಳ್ಳುವುದನ್ನು, ಧ್ಯಾನ ಮಾಡುವುದನ್ನು ಕಲಿಯಬೇಕಿರುತ್ತದೆ ಅಲ್ಲವೆ?

ಚಡಪಡಿಸುವುದನ್ನು ಹತ್ತಿಕ್ಕಿ ತಮ್ಮ ಗುರಿಯನ್ನು ನಿರ್ಧಾರವನ್ನು ಚಿಕ್ಕವಯಸ್ಸಿನಲ್ಲಿಯೇ ಮನಗಂಡು ಗೆದ್ದವರು ಬಹಳಷ್ಟು ಮಂದಿ ಇದ್ದಾರೆ ಈ ಪ್ರಪಂಚದೊಳಗೆ. ಅದರಲ್ಲಿ ದಂತಕತೆಯಾಗಿರುವ ನಮ್ಮ ಸಮಕಾಲೀನನಾಗಿರುವ ಸಚಿನ್ ತೆಂಡೂಲ್ಕರ್ ಒಂದು ಅದ್ಭುತ ಉದಾಹರಣೆ. ಚಿಕ್ಕ ವಯಸ್ಸಿನಲ್ಲಿಯೇ ಸಚಿನ್ ಬ್ಯಾಟ್ ಹಿಡಿದಿದ್ದ ಮತ್ತು ನಾವೂ ಹಿಡಿದಿದ್ದೆವು. ಸಚಿನ್ ಸ’ಚಿನ್ನʼನಾದ! ಆದರೆ ನಾವು? ನಾವು ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಲೇ, ಗೋಲಿ ಆಡಿದೆವು, ಲಗೋರಿ ಆಡಿದೆವು, ಕಣ್ಣಾಮುಚ್ಚಾಲೆ ಆಟ ಆಡಿದೆವು. ಎಲ್ಲದಕ್ಕಿಂತ ಮುಖ್ಯವಾಗಿ ಚೆನ್ನಾಗಿ ಓದಬೇಕೆಂದು ಕೂಡ ನಿರ್ಧರಿಸಿದ್ದೆವು. ಆಮೇಲಾಮೇಲೆ ಖೋಖೋ, ಕಬ್ಬಡಿ, ವಾಲಿಬಲ್, ಒಂದಷ್ಟು ಓದು, ಓಡಾಟ, ನಾಟಕ, ಸಿನಿಮಾ ಮತ್ತು ಇನ್ನೇನೋ ಎಂದೆಲ್ಲಾ ಮಾಡಿದೆವು. ಎಲ್ಲವೂ ಅಬ್ಬಾಬ್ಬ ಎಂದರೆ ತಾಲ್ಲೂಕು ಮಟ್ಟದಲ್ಲಿ, ಇಲ್ಲಾ ಜಿಲ್ಲಾ ಮಟ್ಟದಲ್ಲಿ ಹೆಸರು ಮಾಡಿದೆವು. ಅದರಲ್ಲೊಂದು ಇದರಲ್ಲೊಂದು ಸಣ್ಣ ಪುಟ್ಟ ಪ್ರಶಸ್ತಿ ಗೆದ್ದು ಬೀಗಿದೆವು. ಅಷ್ಟೆ. ಆದರೆ, ಸಚಿನ್? ಆತ ಬ್ಯಾಟನ್ನು ಬಿಟ್ಟು ಬೇರೆ ಏನನ್ನೂ ಹಿಡಿಯಲಿಲ್ಲ. ಕ್ರಿಕೆಟ್ ಅದರಲ್ಲೂ ಬ್ಯಾಟಿಂಗೇ ತನ್ನ ಜೀವನವೆಂದು ಚಿಕ್ಕವಯಸ್ಸಿನಲ್ಲಿಯೇ ಮನಗಂಡ ಮತ್ತು ನಿರ್ಧರಿಸಿಕೊಂಡ. ಬೆಳಿಗ್ಗೆ ಎದ್ದಾಗಿನಿಂದಲೂ, ರಾತ್ರಿ ಮಲಗುವ ತನಕವೂ, ಕನಸಿನಲ್ಲಿಯೂ ಬ್ಯಾಂಟಿಂಗೇ ಆತನ ಜೀವನವಾಗಿತ್ತು, ಉಸಿರಾಗಿತ್ತು. ಕ್ರಿಕೇಟನ್ನೇ ಚಿಂತಿಸಿದ, ಯೋಚಿಸಿದ. ಅದರ ಫಲವೇ ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿ ಕೋಟ್ಯಂತರ ಹಣ ಗಳಿಸಿರುವುದರ ಜೊತೆಗೆ ಕ್ರಿಕೆಟ್‌ನ ದೈವವಾದ. ನೋಡನೋಡುತ್ತಲೇ ದಂತಕತೆಯಾದ. ಆತ ಅದನ್ನೂ ಮಾಡುತ್ತೇನೆ, ಇದನ್ನೂ ಮಾಡುತ್ತೇನೆ ಎಂದು ಚಡಪಡಿಸುತ್ತಾ ಇದ್ದಿದ್ದರೆ ಬಹುಷಃ ಇಂದು ಆತನ ಹೆಸರು ನಮಗೆ ಗೊತ್ತೇ ಆಗುತ್ತಿರಲಿಲ್ಲ. ‘ಮಾಸ್ಟರ್ ಆಫ್ ಆಲ್ ಇಸ್ ಮಾಸ್ಟರ್ ಆಫ್ ನನ್’ ಎಂದು ಇಂಗ್ಲೀಷಿನಲ್ಲಿ ಒಂದು ಮಾತಿದೆ. ನಾವು ಎಲ್ಲದರಲ್ಲೂ ಮಾಸ್ಟರ್ ಆಗುತ್ತೇವೆಂದು ಹೋಗಿ ಯಾವುದರಲ್ಲೂ ಕನಿಷ್ಟ ಹೆಸರನ್ನೂ ಮಾಡಲಿಲ್ಲ. ಆದರೆ, ಸಚಿನ್ ಕ್ರಿಕೆಟ್ ಒಂದರಲ್ಲಿಯೇ ಮಾಸ್ಟರ್ ಆಗುತ್ತೇನೆಂದು ನಿರ್ಧರಿಸಿ ಮಾಸ್ಟರ್ ಬ್ಲಾಸ್ಟರ್ ಆದ. 

ಒಂದು ಕ್ಷಣ ಫೇಸ್‌ಬುಕ್ ಇಲ್ಲದ ನಿಮ್ಮ ಜೀವನವನ್ನು ಕಲ್ಪಿಸಿಕೊಳ್ಳಿ! ಆಗಲ್ಲ ಅಲ್ವ? ಬಹಳ ಕಷ್ಟ ಇದೆ. ಅಂತಹ ಫೇಸ್‌ಬುಕ್ ನಿರ್ಮಾತೃ ಮಾರ್ಕ್ ಜುಕರ್‌ಬರ್ಗ್ ಕೂಡ ಒಮ್ಮೆ ಚಡಪಡಿಸಬಹುದಾಗಿದ್ದ ಸಂದರ್ಭ ಬಂದಿತ್ತು. ಅಂದು ಅವನು ದಿಟ್ಟ ನಿರ್ಧಾರವನ್ನು ತಳೆಯದಿದ್ದರೆ ಇಂದು ಬಹುಶಃ ಫೇಸ್‌ಬುಕ್ ಇರುತ್ತಿರಲಿಲ್ಲ. ಇದ್ದರೂ ಅವನದಾಗಿರುತ್ತಿರಲಿಲ್ಲವೇನೋ!? ಜಗತ್ತಿನ ಶ್ರೀಮಂತರಲ್ಲಿ ಅವನ ಹೆಸರೂ ಇಂದು ಇರುತ್ತಿರಲಿಲ್ಲವೇನೋ!?

1984ರ ಮೇ ತಿಂಗಳ ಹದಿನಾಲ್ಕನೇ ತಾರೀಖಿನಂದು ಜನಿಸಿದ ಜುಕರ್‌ಬರ್ಗ್ ಚಿಕ್ಕಂದಿನಿಂದಲೇ ಕಂಪ್ಯೂಟರ್ ಜೊತೆ ಒಡನಾಡುತ್ತಲೇ ಹಲವು ಪ್ರಯೋಗಗಳನ್ನು ಮಾಡುತ್ತಾ ಪ್ರೋಗ್ರಾಂ ಬರೆಯುತ್ತಿದ್ದ. ತನ್ನ ಹನ್ನೆರಡನೆಯ ವಯಸ್ಸಿನಲ್ಲಿಯೇ ಮೆಸೇಂಜರ್ ಒಂದನ್ನು ತಯಾರಿಸಿದ್ದ. 2002ರಲ್ಲಿ ಹಾರ್ವಡ್ ವಿವಿಯಲ್ಲಿ ಓದಲು ಸೇರುವ ಈತ ಫೇಸ್‌ಮ್ಯಾಶ್ ಎಂಬ ಆಪನ್ನು ಅಭಿವೃದ್ಧಿಪಡಿಸುತ್ತಾನೆ. ಕಾಲೇಜಿನ ಗೆಳೆಯರನ್ನು ಒಂದುಕಡೆ ಸೇರಿಸಲು ಸಿದ್ಧವಾದ ಇದನ್ನು ತದನಂತರ 2004ರಲ್ಲಿ ಫೇಸ್‌ಬುಕ್ ಎಂಬ ವೆಬ್‌ಪೇಜನ್ನಾಗಿಸಿ ಜಗತ್ತಿನ ಜನರೆಲ್ಲಾ ಇಲ್ಲಿ ಸೇರುತ್ತಾರೆ ಎಂಬ ಕನಸು ಕಂಡಿದ್ದ. ಮನುಷ್ಯನ ಸಾಮಾಜಿಕ ಒಡನಾಟದ ನಾಡಿ ಈತನಿಗೆ ಚೆನ್ನಾಗಿ ಅರ್ಥವಾಗಿತ್ತೆಂದೆನಿಸುತ್ತದೆ. ಆದರೆ, ಅವನ ಕನಸನ್ನು ನನಸಾಗಿಸಲು ಅವನೊಬ್ಬನಿಗೇ ಸಾಧ್ಯವಿರಲಿಲ್ಲ. ಮುಂದೊಂದು ದಿನ ಯಾರದರೂ ಈ ಕನಸು ಕಂಡು ನನಸಾಗಿಸಿಕೊಳ್ಳುತ್ತಾರೆ ಎಂದೇ ಭಾವಿಸಿದ್ದ. ಮುಂದೊಂದು ದಿನ ತಾನೇ ಒಂದು ಕಂಪನಿ ಕಟ್ಟಿ, ಹಲವು ಜನರನ್ನು ಮ್ಯಾನೇಜ್‌ಮೆಂಟಿಗೆ ಸೇರಿಸಿಕೊಂಡು ದಿನಕ್ರಮೇಣ ವೇಬ್‌ಪೇಜ್ ಫೇಸ್‌ಬುಕ್ ಎಂದೇ ಜನರನ್ನು ಸೂಜಿಗಲ್ಲಿನಂತೆ ಸೆಳೆದು 2007ನೇ ಇಸವಿಯಲ್ಲಿಯೇ ಈತ ಶತಕೋಟ್ಯಾಧಿಪತಿಯಾದ. ಆಗ ಫೇಸ್‌ಬುಕ್ಕನ್ನು ಇನ್ನೂ ಉತ್ತಮ ಬೆಲೆಗೆ ಕೊಳ್ಳಲು ಆಗ ದೈತ್ಯ ಕಂಪನಿಯಾಗಿದ್ದ ಯಾಹೂ ಮುಂದೆ ಬಂದರೂ ಈತ ಮಾರುವ ಮನಸ್ಸು ಮಾಡಲಿಲ್ಲ. ಈತನ ಗೆಳೆಯರು ಮಾರುವಂತೆ ಸಲಹೆ ನೀಡಿ, ಈತನ ಮೇಲೆ ಮುನಿಸಿಕೊಂಡಾಗಲೂ ಈತ ಏನು ಮಾಡುವುದೆಂದು ಚಡಪಡಿಸುವ ಗೋಜಿಗೆ ಹೋಗಲಿಲ್ಲ. ತಾನು ಕಂಡ ಕನಸಿನ ಆರಂಭವಷ್ಟೇ ಈಗಿನ್ನೂ ಆಗಿದೆ ಎಂದು ತನ್ನ ಕಂಪನಿಯನ್ನು ತನ್ನಲೇ ಉಳಿಸಿಕೊಂಡ. ತದನಂತರ ನಡೆದದ್ದೇಲ್ಲಾ ಅವನು ಅಂದುಕೊಂಡಂತೆಯೇ ಆಗಿದೆ. ಅವನ ಫೇಸ್‌ಬುಕ್ಕೇ ಈಗ ಜಗತ್ತಿನ ದೈತ್ಯ ಕಂಪನಿ. ಜೊತೆಗೆ ಫೇಸ್‌ಬುಕ್ ನಂತರ ಜನಪ್ರಿಯವಾದ ಇನ್ಸ್ಟಗ್ರಾಂ, ವಾಟ್ಸಪ್ ಕೂಡ ಈತನ ತೆಕ್ಕೆಯಲ್ಲಿವೆ. 

ನಿಮ್ಮ ಜೀವನವೇ ಒಂದು ಟಿವಿ ಎಂದುಕೊಳ್ಳಿ. ನಿಮ್ಮ ಮನಸ್ಸು ಅದರ ರಿಮೋಟ್. ಟಿವಿ ಛಾಲು ಆಗಿದೆ. ನೀವು ಏನಾಗಬೇಕೆಂದಿದ್ದಿರೋ ಆ ಛಾನೆಲ್ ತಿರುಗಿಸಿಕೊಂಡು ಬಿಡಿ. ಯಾವುದೇ ಕಾರಣಕ್ಕೂ ಛಾನೆಲ್ ಬದಲಾಗಬಾರದು. ಕೈಯಲ್ಲಿ ರಿಮೋಟ್ ಇದೆ ಎಂದು ಚಡಪಡಿಸಿದಿರೋ ಅಲ್ಲಿಗೆ ಮುಗಿಯಿತು. ನೀವು ಫಿನಿಶ್! ಚಡಪಡಿಸದೆ ನಿಮ್ಮ ಜೀವನದ ಗುರಿಯನ್ನು ನಿರ್ಧರಿಸಿಕೊಂಡು ನೀವು ಏನಾಗಬೇಕೆಂದು ಮುನ್ನೆಡೆಯಲು ನಿಮ್ಮ ಮನಸ್ಸನ್ನು ಗಟ್ಟಿ ಮಾಡಿಕೊಂಡಿರೋ ಅಲ್ಲಿಗೆ ನೀವು ಅರ್ಧ ಗೆದ್ದಂತೆಯೇ ಸರಿ. ನೀವು ಗೆಲ್ಲಬಲ್ಲಿರಿ. 

ಇತ್ತೀಚಿಗೆ ಸಚಿನ್ ಒಂದು ಮಾತು ಹೇಳಿದ. “ಕ್ರಿಕೆಟ್ ಹೊರತಾಗಿ ನನ್ನ ಆದ್ಯತೆಗಳು ಎಂದೂ ಬದಲಾಗಲಿಲ್ಲ. ಅದೇ ನನ್ನ ಬದುಕಿನ ಕೇಂದ್ರಬಿಂದುವಾಗಿತ್ತು”. ಆಲ್ಬರ್ಟ್ ಐನ್‌ಸ್ಟೀನ್ ರವರು ಒಂದು ಮಾತನ್ನು ಹೇಳಿದ್ದಾರೆೆ: “ಸಾಧನಗಳು ಪರಿಪೂರ್ಣವಾಗಿದ್ದು, ನಮ್ಮ ಗುರಿಯೇ ಗೊಂದಲದಲ್ಲಿ ಇರುವುದು ನಮ್ಮ ಮುಖ್ಯ ಸಮಸ್ಯೆಯಾಗಿದೆ.” ಆದಕಾರಣ, ನಿಮ್ಮೆಲ್ಲಾ ಗೊಂದಲಗಳನ್ನು ನಿವಾರಿಸಿಕೊಂಡು ನಿಮ್ಮ ಜೀವನದ ಆದ್ಯತೆ ಯಾವುದೆಂದು ನಿರ್ಧರಿಸಿಕೊಳ್ಳಿ. ಯೂ ಕೆನ್ ವಿನ್! ಯಾಕೆಂದರೆ ಕಾಲ ಇನ್ನೂ ಮಿಂಚಿಲ್ಲ.

“ಒಂದೇ ಗುರಿಯನ್ನು ಇಟ್ಟುಕೊಳ್ಳಿ. ಅದನ್ನೇ ಆಲೋಚಿಸಿ, ಅದರ ಬಗ್ಗೆಯೇ ಕನಸು ಕಾಣಿರಿ, ಅದನ್ನೇ ಬದುಕಿರಿ. ಯಶಸ್ಸು ಖಂಡಿತಾ ನಿಮ್ಮದಾಗುತ್ತದೆ” ಸ್ವಾಮಿ ವಿವೇಕಾನಂದರ ಈ ಮಾತುಗಳು ಅದೆಷ್ಟು ಅರ್ಥಪೂರ್ಣವಾಗಿವೆ ಅಲ್ಲವೇ?

- ಗುಬ್ಬಚ್ಚಿ ಸತೀಶ್.


ಬುಧವಾರ, ಜುಲೈ 3, 2024

ಕಾಲ... ಕ್ಷಣಿಕ ಕಣೋ...

ಕಾಲ... ಕ್ಷಣಿಕ ಕಣೋ...


ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ...

ನಿಂತಾಗ ಬುಗುರಿಯ ಆಟ ಎಲ್ಲಾ ಒಂದೇ ಓಟ...

ಕಾಲ... ಕ್ಷಣಿಕ ಕಣೋ...

    - ನಾದಬ್ರಹ್ಮ ಹಂಸಲೇಖ


ನಾನು ಕೋಟ್ ಮಾಡಿರುವ ಮೇಲಿನ ಹಾಡನ್ನು ನೀವು ಕೇಳಿರಬಹುದು. ಕನ್ನಡ ಸಿನಿಮಾ ರಂಗದಲ್ಲಿ ‘ನಾದಬ್ರಹ್ಮ’ರೆಂದೇ ಖ್ಯಾತವಾಗಿರುವ ಸಂಗೀತಗಾರ, ಸಾಹಿತಿ ಹಂಸಲೇಖಾರವರು ಡಾ|| ವಿಷ್ಣುವರ್ಧನ್ ಅಭಿನಯದ ‘ಮಹಾಕ್ಷತ್ರಿಯ’ ಸಿನಿಮಾಗಾಗಿ ಬರೆದ ಸಾಲುಗಳಿವು. ಹಂಸಲೇಖರವರೊಳಗಿನ ತತ್ವಜ್ಞಾನಿ ಈ ಹಾಡನ್ನು ಬರೆದಿದ್ದಾನೆ. ಕಾಲ ಕ್ಷಣಿಕ ಎನ್ನುವುದು ಅದೆಷ್ಟು ಸತ್ಯವಲ್ಲವೇ? ‘ಹುಟ್ಟು ಉಚಿತ, ಸಾವು ಖಚಿತ’ ಎಂಬುದನ್ನು ಬಸ್ಸುಗಳಲ್ಲಿಯೋ ಮತ್ತೇಲ್ಲಿಯೋ ನೀವು ಓದೇ ಇರುತ್ತೀರಿ. 

ವೇದವ್ಯಾಸರು ನಿಮಗೆಲ್ಲಾ ಗೊತ್ತೇ ಇದ್ದಾರೆ. ನಿಮಗೆ ಗೊತ್ತಿಲ್ಲದ ಅವರ ಸೋದರಮಾವನ ಕತೆಯೊಂದಿದೆ. ಒಂದು ದಿನ ವೇದವ್ಯಾಸರ ಸೋದರಮಾವ (ಮುದ್ದಿನ ಮಾಮ) ವೇದವ್ಯಾಸರಲ್ಲಿಗೆ ಬಂದು ಹೇಳುತ್ತಾರೆ, “ವ್ಯಾಸ, ನಿನಗೆ ಬ್ರಹ್ಮದೇವರು ಚೆನ್ನಾಗಿಯೇ ಪರಿಚಯವಿದ್ದಾರೆ. ಎಷ್ಟಾದರೂ ನೀನು ಬ್ರಹ್ಮಪುರಾಣವನ್ನೇ ಬರೆದವನಲ್ಲವೇ! ಹೇಗಾದರು ಮಾಡಿ ಆತನಿಂದ ನನಗೊಂದು ವರವನ್ನು ಕರುಣಿಸು. ನಾನು ಚಿರಂಜೀವಿಯಾಗಲು ಬಯಸಿದ್ದೇನೆ. ದಯಮಾಡಿ ಬ್ರಹ್ಮನಿಂದ ಚಿರಂಜೀವಿಯಾಗುವಂತೆ ನನ್ನನ್ನು ಹರಸಿಬಿಡು” ಎಂದು ಕೋರುತ್ತಾರೆ.

ಎಷ್ಟಾದರೂ ಮುದ್ದಿನ ಮಾಮನಲ್ಲವೇ? ವೇದವ್ಯಾಸರು ಆತನನ್ನು ಬ್ರಹ್ಮನಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಭೇಟಿಯ ಶಿಷ್ಟಾಚಾರಗಳೆಲ್ಲಾ ಮುಗಿದ ಮೇಲೆ ವೇದವ್ಯಾಸರು ತಾವು ಅಲ್ಲಿಗೆ ಬಂದ ಕಾರಣವನ್ನು ತಿಳಿಸುತ್ತಾರೆ. ವಿಷಯ ತಿಳಿದ ಬ್ರಹ್ಮನು ತನ್ನ ಅಸಾಯಕತೆಯನ್ನು ವ್ಯಕ್ತಪಡಿಸಿ, ವಿಷ್ಣುವು ಈ ಸಂಬಂಧ ಸಹಾಯ ಮಾಡಬಹುದೆಂದು ಅವರಿಬ್ಬರನ್ನು ವಿಷ್ಣುವಲ್ಲಿಗೆ ಕರೆದೊಯ್ಯುತ್ತೇನೆ ಎನ್ನುತ್ತಾರೆ. ಈ ಮಾತನ್ನು ಆಲಿಸಿದ ಸರಸ್ವತಿಯು, ತಾನೂ ಬರುವುದಾಗಿಯೂ, ಹಾಗೇ ಸೋದರಿ ಲಕ್ಷ್ಮಿಯನ್ನು ನೋಡಿಕೊಂಡು, ಅವಳ ಹೊಸ ವಡವೆಗಳನ್ನು ನೋಡುವ ಇಂಗಿತವನ್ನು ವ್ಯಕ್ತಪಡಿಸುತ್ತಾಳೆ. ಒಪ್ಪಿದ ಬ್ರಹ್ಮನು ಆ ಮೂವರನ್ನು ಕರೆದುಕೊಂಡು ವಿಷ್ಣುವಿನ ಸನ್ನಿಧಾನಕ್ಕೆ ಬರುತ್ತಾರೆ. ಕಾರಣ ತಿಳಿದ ವಿಷ್ಣುವು ತಾನೂ ಈ ವಿಷಯದಲ್ಲಿ ಅಸಾಯಕನಾಗಿರುವುದನ್ನು ತಿಳಿಸಿ, ಮಹೇಶ್ವರನು ಚಿರಂಜೀವಿ ವರವನ್ನು ಕರುಣಿಸಬಹುದೆಂದು ತಿಳಿಸಿ ಆತನಲ್ಲಿಗೆ ಹೊರಡಲು ಅನುವಾಗುತ್ತಾನೆ. ಆಗ ಲಕ್ಷ್ಮಿ ಮತ್ತು ಸರಸ್ವತಿಯರೂ ತಾವೂ ಬಂದು ಪಾರ್ವತಿಯನ್ನು ಮಾತನಾಡಿಸಿಕೊಂಡು ಬರುತ್ತೇವೆ ಎಂದು ಹೊರಡುತ್ತಾರೆ. ಈ ಆರು ಜನ ಕೈಲಾಸಕ್ಕೆ ಬಂದು ತಮ್ಮ ಆಗಮನದ ವಿಷಯವನ್ನು ಶಿವನಿಗೆ ಹೇಳುತ್ತಾರೆ. ತಾಳ್ಮೆಯಿಂದ ಕೇಳಿಸಿಕೊಂಡ ಶಿವ, ಇದು ತನ್ನ ಅಧೀನನಾದ ಯಮನೊಬ್ಬನಿಂದಲೇ ಸಾಧ್ಯವೆಂದು ತಿಳಿಸಿ, ಅಲ್ಲಿಗೆ ಯಮರಾಜನನ್ನು ಕರೆಸುತ್ತಾನೆ. ಕ್ಷಣಾರ್ಧದಲ್ಲಿ ಬಂದ ಯಮರಾಜ ವೇದವ್ಯಾಸರ ಮಾಮನ ಆಯುಷ್ಯದ ವಿವರಗಳು ಚಿತ್ರಗುಪ್ತನ ಲ್ಯಾಪ್‌ಟಾಪ್ಪಿನಲ್ಲಿ ಇರುವುದಾಗಿ ಹೇಳಿ ಅವರನ್ನು ಕೋರಬೇಕೆಂದು ಹೇಳುತ್ತಾನೆ. ಆ ಸಮಯದಲ್ಲಿ ಚಿತ್ರಗುಪ್ತ ಕಾಶಿಗೆ ಹೋಗಿದ್ದರಿಂದ ಆತ ಬರುವುದು ಸ್ವಲ್ಪ ತಡವಾಗುತ್ತದೆ. ಅಷ್ಟರಲ್ಲಿ ಎಲ್ಲರ ಪರಸ್ಪರ ಉಭಯ ಕುಶಲೋಪಚಾರ ನಡೆದು ಊಟವೂ ಮುಗಿದಿರುತ್ತದೆ. ಚಿತ್ರಗುಪ್ತನು ಬಂದ ಕ್ಷಣವೇ ಯಮರಾಜನು ವೇದವ್ಯಾಸರ ಮಾಮನ ಮರಣ ದಿನಾಂಕವನ್ನು ತಿಳಿಸುವಂತೆ ಕೋರುತ್ತಾನೆ. ಒಂದೆರಡು ನಿಮಿಷ ತಮ್ಮ ಲ್ಯಾಪ್‌ಟಾಪ್ಪಿನಲ್ಲಿ ವಿವರಗಳನ್ನು ಹುಡುಕುವ ಚಿತ್ರಗುಪ್ತರು ಒಮ್ಮೆಗೆ, “ಅಯ್ಯೋ...!” ಎಂದು ಕಿರುಚುತ್ತಾರೆ. ಆ ಕ್ಷಣವೇ ವೇದವ್ಯಾಸರ ಮಾಮ ಅಲ್ಲೇ ಅಸುನೀಗುತ್ತಾರೆ. ಎಲ್ಲರೂ ಆಶ್ಚರ್ಯಚಕಿತರಾದಾಗ ಯಮರಾಜನು ಚಿತ್ರಗುಪ್ತರ ಲ್ಯಾಪ್‌ಟಾಪ್ಪಿನಲ್ಲಿ ತೆರೆದಿದ್ದ ಫೈಲನ್ನು ನೋಡುತ್ತಾನೆ. ಅದರಲ್ಲಿ, ‘ಯಾವ ದಿನ ಬ್ರಹ್ಮ ಮತ್ತು ಸರಸ್ವತಿ, ವಿಷ್ಣು ಮತ್ತು ಲಕ್ಷ್ಮಿ, ಶಿವ ಮತ್ತು ಪಾರ್ವತಿ, ಯಮರಾಜ ಮತ್ತು ಚಿತ್ರಗುಪ್ತ ಹಾಗೂ ವೇದವ್ಯಾಸರು ಮತ್ತವರ ಮಾಮ ಸೇರುತ್ತಾರೋ ಅಂದೆ ವೇದವ್ಯಾಸರ ಮಾಮನ ಕಡೆಯ ದಿನ’ ವೆಂದು ದಾಖಲಾಗಿರುತ್ತದೆ.

ಅಂದಮೇಲೆ ಈ ಬದುಕು ಚಿರಂಜೀವಿಯಾಗಲು ಸಾಧ್ಯವೇ ಇಲ್ಲ. ಈ ಬದುಕು ಅನ್ನುವುದು ಸಾವೆಂಬ ಕಟ್ಟಕಡೆಯ ನಿದ್ದೆಯಲ್ಲಿ ಅಂತ್ಯವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಮನಗಂಡು ಈ ಅನಿಶ್ಚಿತ ಬದುಕಿನಲ್ಲಿ ಗೆಲ್ಲಲೇಬೇಕೆಂದು ಹೋರಾಡಬೇಕಾಗುತ್ತದೆ. ಏನಾದರೂ ಸಾಧಿಸುವುದಿದ್ದರೆ ಈ ಜನ್ಮದಲ್ಲಿಯೇ ಎಂದು ಪಣತೊಡಬೇಕಾಗುತ್ತದೆ. ಅಷ್ಟಕ್ಕೂ ಮುಂದಿನ ಜನ್ಮವನ್ನು ಕಂಡವರು ಯಾರು?

ಪ್ರಖ್ಯಾತ ವ್ಯಕ್ತಿತ್ವ ವಿಕಸನ ಗುರು ಸ್ಟೀಫನ್ ಆರ್ ಕೋವೆ ತನ್ನ ಜಗತ್ಪ್ರಸಿದ್ದ ಪುಸ್ತಕ ‘ಸೆವೆನ್ ಹ್ಯಾಬಿಟ್ಸ್ ಆಫ್ ಹೈಲಿ ಎಫೆಕ್ಟಿವ್ ಪೀಪಲ್’ ನಲ್ಲಿ ‘ಅಂತ್ಯದೊಂದಿಗೆ ಆರಂಭಿಸಿ’ ಎಂಬ ಒಂದು ಅಧ್ಯಾಯವನ್ನು ಸವಿವರವಾಗಿ ಬರೆದಿದ್ದಾರೆ. ಅವರ ಮಾತುಗಳನ್ನು ಸಂಕ್ಷಿಪ್ತಗೊಳಿಸುವುದಾದರೆ, ‘ನಿಮ್ಮ ಸಾವಿಗೆ ನೀವೇ ಹೋಗಿದ್ದೀರೆಂದು ಕಲ್ಪಿಸಿಕೊಳ್ಳಿ. ಅಲ್ಲಿ ನಿಮ್ಮ ಅಂತಿಮ ದರ್ಶನಕ್ಕೆ ನೆರೆದಿರುವವರು ನಿಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬುದು ನಿಮ್ಮ ಬದುಕನ್ನು ನಿರ್ಧರಿಸುತ್ತದೆ. ನೀವು ಒಬ್ಬ ಉತ್ತಮ ತಂದೆಯಾಗಬೇಕಿಂದಿದ್ದೀರಾ? ತಾಯಿಯಾಗಬೇಕಿಂದಿದ್ದೀರಾ? ಸ್ನೇಹಿತನಾಗಬೇಕೆಂದಿದ್ದೀರಾ? ಉತ್ತಮ ಕೆಲಸಗಾರನಾಗಬೇಕೆಂದಿದ್ದೀರಾ? ವಿಶ್ವವಿಖ್ಯಾತ ಕ್ರಿಕೆಟರ್ ಅಥವಾ ಅಥ್ಲೆಟ್ ಆಗಬೇಕೆಂದಿದ್ದೀರಾ? ಪ್ರಖ್ಯಾತ ಲೇಖಕ ಅಥವಾ ಪತ್ರಕರ್ತನಾಗಬೇಕೆಂದಿದ್ದೀರಾ? ಅತ್ಯುತ್ತಮ ಶಿಕ್ಷಕ ಅಥವಾ ಶಿಕ್ಷಣ ಸಂಸ್ಥೆಯ ಮಾಲೀಕನೋ ಅಥವಾ ಮತ್ತೇನೋ ನೀವು ಇಷ್ಟಪಟ್ಟದನ್ನು ಆಗಬೇಕೆಂದಿದ್ದೀರೋ ಅದನ್ನು ನಿಮ್ಮ ಸಾವಿನ ದಿನ ಅಲ್ಲಿಗೆ ಬಂದವರು ಆಡುವ ಮಾತುಗಳಲ್ಲಿ ನೀವು ಕಂಡುಕೊಳ್ಳಬಹುದು. ಯಾವನಾದರೂ ಒಬ್ಬ ಸ್ನೇಹಿತ ನಿಮ್ಮ ಮತ್ತೊಬ್ಬ ಸ್ನೇಹಿತನನ್ನು ಕೇಳಿದಾಗ ಮೊದಲನೆಯವನು, ‘ಅಯ್ಯೋ ಅವನು ಸತ್ತದ್ದೇ ಒಳ್ಳೆಯದಾಯ್ತು ಬಿಡೋ’ ಎಂದು ಬಿಟ್ಟರೆ ನಿಮ್ಮ ಬದುಕು ಹೇಗಿತ್ತು ಎಂದು ನಿಮಗೇ ತಿಳಿದುಬಿಡುತ್ತದೆ. ನಿಮ್ಮ ಮನೆಯವರು ಒಳ್ಳೆಯ ರಕ್ತಸಂಬಂಧಿಯನ್ನು ಕಳೆದುಕೊಂಡೆ ಎಂದರೆ, ನಿಮ್ಮ ಗೆಳೆಯರು ಜೀವದ ಗೆಳೆಯನನ್ನು ಕಳೆದುಕೊಂಡೆ ಎಂದರೇ, ನಿಮ್ಮ ವೃತ್ತಿಬಾಂಧವರು ಒಳ್ಳೆಯ ಕೆಲಸಗಾರನನ್ನು ಕಳೆದುಕೊಂಡರೆಂದರೆ, ನಿಮ್ಮ ಧರ್ಮದವರು ಧರ್ಮರಕ್ಷಕ, ಒಳ್ಳೆಯ ಮನುಷ್ಯನನ್ನು ಕಳೆದುಕೊಂಡರೆಂದರೆ, ಇನ್ಯಾರೋ ಒಳ್ಳೆಯ ಸಾಧಕನನ್ನು ಕಳೆದುಕೊಂಡರೆಂದರೆ, ನೀವು ಬದುಕಿದ್ದ ಬದುಕು ಸಾರ್ಥಕತೆಯನ್ನು ಪಡೆದಿರುತ್ತದೆ. ಇಲ್ಲವಾದರೆ ನೀವು ಬದುಕಿದ್ದೂ ಪ್ರಯೋಜನವೇನು? ಅದಕ್ಕೆ ಆತ ಹೇಳಿದ್ದು ‘ಅಂತ್ಯದಿಂದ ಆರಂಭಿಸಿ’ ಎಂದು.

ಆದಕಾರಣ ನಿಮ್ಮ ಸಾವು ಎಂದಾದರೂ ಒಂದು ದಿನ ನಿಶ್ಚಿತವಾಗಿರುವುದರಿಂದ ನಿಮ್ಮ ಸಾವಿನ ದಿನ ಜನರ ಪ್ರತಿಕ್ರಿಯೆ ಹೇಗಿರಬೇಕೆಂದು ಊಹಿಸಿಕೊಂಡು ಇಂದಿನಿಂದಲೇ ನೀವು ನಿಮ್ಮ ಬದುಕನ್ನು ಬದುಕಲು ಆರಂಭಿಸಿ. ನಿಮ್ಮ ಸಾಧನೆಯ ಹಾದಿಯಲ್ಲಿ ಪ್ರತಿಕ್ಷಣವನ್ನೂ ಸದುಪಯೋಗಪಡಿಸಿಕೊಂಡು ಬಾಳಿರಿ. ಆಗ ನಿಮ್ಮ ಸಾವಿಗೂ ಒಂದು ಅರ್ಥವಿರುತ್ತದೆ. ನೀವು ಏನಾಗಬೇಕೆಂದಿದ್ದೀರೋ ಅದನ್ನು ಈ ಕ್ಷಣದಿಂದಲೇ ಆರಂಭಿಸಿ ಯಶಸ್ಸು ಪಡೆದು ಗೆಲುವಿನ ಸರದಾರರಾಗಿರಿ. 

ಹೆಸರಾಂತ ಲೇಖಕರಾದ ಯಂಡಮೂರಿ ವೀರೆಂದ್ರನಾಥರು ಇದೇ ಕಾರಣಕ್ಕೆ ಒಂದು ದಿನದ ಇಪ್ಪತ್ನಾಲ್ಕು ಘಂಟೆಗಳನ್ನು ‘ಇಪ್ಪತ್ನಾಲ್ಕು ಅಮೂಲ್ಯ ವಜ್ರ’ಗಳೆಂದು ಕರೆದರು. ನಿಮಗೆ ಒಂದು ದಿನಕ್ಕೆ ಅದೆಷ್ಟು ವಜ್ರಗಳು ಬೇಕೋ ಅಷ್ಟನ್ನು ನಿಮ್ಮದಾಗಿಸಿಕೊಳ್ಳಿ. ಈ ಸದಾವಕಾಶ ನಿಮ್ಮದು. ಏಕೆಂದರೆ, ಈ ಅಮೂಲ್ಯ ಜನ್ಮ, ಜೀವನ ನಿಮ್ಮದು. ಅದಕ್ಕೆ ನೀವೇ ಹೊಣೆಗಾರರು. ನಿಮ್ಮ ಅಮೂಲ್ಯ ಜೀವನದ ಕಾಲ ನಿಮ್ಮ ಕೈಯಲ್ಲೇ ಇದೆ. ಅದು ಕ್ಷಣಿಕವಾದರೂ ಅತ್ಯಮೂಲ್ಯವಾದದ್ದು ಎಂಬುದನ್ನು ಮಾತ್ರ ಎಂದಿಗೂ ಮರೆಯಬೇಡಿ. ಮರೆತು ನಿರಾಶರಾಗದಿರಿ.

ಯಮನೊಂದಿಗೆ ನಮ್ಮ ಸಾವಿನ ಮುಹೂರ್ತ ಹೇಗೆ ಕೂಡಿ ಬರುತ್ತದೆ ಎಂಬುದನ್ನು ಅರಿಯಲು ಅಥವಾ ನೀತಿಗಾದರೂ ಮುಸ್ತಾಫನ ಕಥೆಯನ್ನು ನೀವು ಓದಬೇಕು. ಇಸ್ತಾನ್‌ಬುಲ್ಲಿಗೆ ಸುಮಾರು ಎರಡು ಘಂಟೆಯ ಪ್ರಯಾಣ ವೇಳೆ ತಗಲುವ ಒಂದು ಹಳ್ಳಿಯಲ್ಲಿ ಅಲ್ಲಾದ್ದೀನ್ ಎಂಬ ಶ್ರೀಮಂತ ವ್ಯಾಪಾರಿಯಿದ್ದ. ಆತನ ಬಳಿ ಹಲವು ಸೇವಕರಿದ್ದರು. ಅವರಲ್ಲಿ ಮುಸ್ತಾಫನೂ ಒಬ್ಬ. ಆತ ತನ್ನ ಒಡೆಯನಿಗೆ ಬಹಳ ಬೇಕಾದವನಾಗಿದ್ದ.

ಒಂದು ದಿನ ಅಲ್ಲಾದ್ದೀನ್ ಮುಸ್ತಾಫನನ್ನೂ ಏನೋ ತರಲು ಮಾರ್ಕೆಟ್ಟಿಗೆ ಕಳುಹಿಸಿದ್ದ. ಹೋದ ಸ್ವಲ್ಪ ಹೊತ್ತಿನಲ್ಲಿಯೇ ಮುಸ್ತಾಫನು ಬೆವರುತ್ತಾ ಭಯಭೀತನಾಗಿ ಹಿಂದಿರುಗಿ ಬಂದಿದ್ದ. ಇದನ್ನು ಕಂಡ ಅಲ್ಲಾದ್ದೀನ್ ಕಾರಣ ಕೇಳಲು, ಕಾರಣ ಆಮೇಲೆ ಹೇಳುತ್ತೇನೆಂದ ಮುಸ್ತಾಫಾ ತನ್ನ ಒಡೆಯನ ಕುದುರೆಯನ್ನು ಕೇಳಿ ಪಡೆದು ಅದನ್ನು ಹತ್ತಿ ವೇಗವಾಗಿ ಇಸ್ತಾನ್‌ಬುಲ್ ಕಡೆಗೆ ಮಿಂಚಿನ ವೇಗದಲ್ಲಿ ಹೋಗಿಯೇ ಬಿಟ್ಟ. 

ಅಲ್ಲಾದ್ದೀನನಿಗೆ ಇದೆಲ್ಲಾ ವಿಚಿತ್ರವಾಗಿ ಕಂಡಿತ್ತು. ಮಾರ್ಕೆಟ್ಟಿನಲ್ಲಿ ಏನೋ ವಿಚಿತ್ರ ಘಟನೆ ನಡೆದಿರಬಹುದೆಂದು ಊಹಿಸಿ ಅಲ್ಲಿಗೆ ಹೋದರೆ ಅಲ್ಲಿ ಯಮಧರ್ಮರಾಯ ಸುತ್ತಾಡುತ್ತಿದ್ದಾನೆ! ಆಶ್ಚರ್ಯದಿಂದ ಯಮನು ಯಾರನ್ನೋ ಹುಡುಕುತ್ತಿದ್ದಾನೆ. ಇದನ್ನು ಗಮನಿಸಿದ ಅಲ್ಲಾದ್ದೀನ್ ನೇರವಾಗಿ ಯಮನಲ್ಲಿಗೆ ಹೋಗಿ ಆತ ಅಲ್ಲಿ ಸುತ್ತಾಡುತ್ತಿರುವ ಕಾರಣವೇನು ಎಂದು ಕೇಳುತ್ತಾನೆ. ಆಗ ಯಮನು, “ಇಲ್ಲಿ ಸ್ವಲ್ಪ ಹೊತ್ತಿಗೆ ಮುಂಚೆ ಮುಸ್ತಾಫನನ್ನು ನೋಡಿದೆ. ಆತ ಇಲ್ಲೇನು ಮಾಡುತ್ತಿದ್ದಾನೆ ಎಂದು ಯೋಚಿಸುತ್ತಿರುವಷ್ಟರಲ್ಲಿ ಆತ ಮಂಗಮಾಯವಾದ. ಯಾಕೆಂದರೆ, ಇನ್ನು ಎರಡು ಘಂಟೆಯ ನಂತರ ಆತನ ಸಾವು ಇಸ್ತಾನ್‌ಬುಲ್‌ನಲ್ಲಿ ನಿಶ್ಚಯವಾಗಿದೆ” ಎಂದು ಹೇಳಿದ.

ಯಾರ ಸಾವು ಎಲ್ಲಿ ನಿಶ್ಚಯವಾಗಿದೆಯೋ? ಬಲ್ಲರ‍್ಯಾರು? 

ಕೊರೊನ ಕೂಡ ಇದನ್ನು ಪದೇಪದೇ ಹೇಳಿತಲ್ವ!?

- ಗುಬ್ಬಚ್ಚಿ ಸತೀಶ್.‌ 


ಬುಧವಾರ, ಜೂನ್ 26, 2024

ನಿಮ್ಮೊಳಗಿನ ಗುರುವನ್ನು ಮೊದಲು ಅರಿಯಿರಿ

ನಿಮ್ಮೊಳಗಿನ ಗುರುವನ್ನು ಮೊದಲು ಅರಿಯಿರಿ




ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ||

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ||


ಮೊದಲಿಗೆ ಗುರುವಿಗೆ ವಂದಿಸಿ ನಮ್ಮ ಮೊದಲ ಹೆಜ್ಜೆಯಿಡೋಣ. ನಮ್ಮ ಮೊದಲ ಗುರು ಅಮ್ಮ. ಕೆಲವೊಮ್ಮೆ ಅಪ್ಪ ಕೂಡ. ಆ ನಂತರ ಅಕ್ಷರಗಳನ್ನು ಕಲಿಸಲು, ವಿದ್ಯಾಭ್ಯಾಸ ಮಾಡಿಸಲು ಗುರುಗಳು ಸಿಕ್ಕಿರುತ್ತಾರೆ. ಈ ಎಲ್ಲಾ ಗುರುಗಳು ಒಂದು ಹಂತದವರೆಗಷ್ಟೇ ನಮಗೆ ಕಲಿಸಲು ಶಕ್ತರಾಗಿರುತ್ತಾರೆ. ಆ ನಂತರ ನಮ್ಮ ವಿದ್ಯಾಭ್ಯಾಸದ ಮೇಲೆ, ಸಿಕ್ಕಿದ ವೃತ್ತಿಯ ಮೇಲೆ ಅಥವಾ ಆಯ್ಕೆಮಾಡಿಕೊಂಡ ಪ್ರವೃತ್ತಿ ಅಥವಾ ಹವ್ಯಾಸಕ್ಕೆ ಅನುಗುಣವಾಗಿ ನಮ್ಮ ಗುರುಗಳನ್ನು ನಾವೇ ಹುಡುಕಿಕೊಳ್ಳಬೇಕಾಗುತ್ತದೆ. ಆ ಗುರು ಯಾರು ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗುತ್ತದೆ. ಅವರ ಮಾರ್ಗದರ್ಶನದಲ್ಲಿ ನಡೆಯಬೇಕಾಗುತ್ತದೆ. ಕೆಲವು ಬೆರಳೆಣಿಕೆಯಷ್ಟು ಮಂದಿಗೆ ಮತ್ತು ಅದೃಷ್ಟವಿದ್ದವರಿಗೆ ಮಾತ್ರ ಈ ರೀತಿಯ ಗುರುಗಳು ಸಿಗುವ ಅವಕಾಶವಿರುತ್ತದೆ. ಆದರೆ, ಬಹಳ ಮಂದಿಗೆ ಈ ರೀತಿಯ ಗುರುಗಳು ಸಿಗುವುದಿಲ್ಲ. ಅವರು ನಿರಾಶರಾಗಬೇಕಿಲ್ಲ. ಯಾಕೆಂದರೆ, ನಿಜವಾದ ಅದೃಷ್ಟವೆಂದರೆ ಈ ಬಹುಸಂಖ್ಯಾತರೇ! ಕಾರಣ ಸ್ಪಷ್ಟ: ನಿಮ್ಮ ಗೆಲುವಿನ ಹಾದಿಯಲ್ಲಿ ನಿಮಗೊಬ್ಬ ಗುರುವಿದ್ದರೆ ನೀವು ಅವರು ಹೇಳಿದಂತೆ ನಡೆಯಬೇಕಾಗುತ್ತದೆ. ಮತ್ತು ಪ್ರತಿಯೊಂದು ಹೆಜ್ಜೆಯನ್ನಿಡಲು ಅವರನ್ನೇ ಅವಲಂಬಿಸಬೇಕಾಗುತ್ತದೆ. ಆದರೆ, ಗುರುವಿಲ್ಲದವನು ಹೀಗೆ ಯಾರೋ ಒಬ್ಬರ ಮೇಲೆಯೇ ಅವಲಂಬಿತವಾಗಬೇಕಿಲ್ಲ. ಆತನು ಮಾಡಬೇಕಾದ ಮೊದಲ ಕೆಲಸವೆಂದರೆ, ತನ್ನೊಳಗಿನ ಗುರುವನ್ನು ಹುಡುಕಿಕೊಳ್ಳುವುದು. ಹೌದು, ಪ್ರತಿಯೊಬ್ಬರಲ್ಲೂ ಒಬ್ಬ ಗುರುವಿರುತ್ತ್ತಾನೆ. ಅದೇ ‘ಅರಿವೆಂಬ ಗುರು’. ನೀವು ಈ ‘ಅರಿವೆಂಬ ಗುರು’ವನ್ನು ಹುಡುಕಿಕೊಂಡಿರೋ ಅಲ್ಲಿಗೆ ನಿಮಗೊಬ್ಬ ಜೀವನಪರ್ಯಂತ ನೆರವಾಗುವ, ಮಾರ್ಗದರ್ಶನ ನೀಡುವ ಪ್ರಚಂಡ ಗುರುವೊಬ್ಬ ಸಿಕ್ಕಿರುತ್ತಾನೆ. ಅವನನ್ನು ನಮ್ಮೊಳಗೆ ಮನಗಂಡು ಅವನನ್ನು ಗುರುವೆಂದು ಸ್ಥಾಪಿತಮಾಡಿಕೊಳ್ಳಬೇಕು.

ಈ ಅರಿವೆಂಬ ಗುರುವನ್ನು ಮೊದಲು ಅರಿತವನು ಬಹುಶಃ ‘ಏಕಲವ್ಯ’ನೇ ಇರಬೇಕು. ಹೌದು, ನಮ್ಮ ಮಹಾಕಾವ್ಯಗಳಲ್ಲೊಂದಾದ ಮಹಾಭಾರತದ ಏಕಲವ್ಯ! ನಿಮಗೆಲ್ಲಾ ಈತನ ಬಗ್ಗೆ ಮತ್ತು ಅರ್ಜುನನ ಬಗ್ಗೆ ಗೊತ್ತೇ ಇರುತ್ತದೆ. ನಾನೇನಾದರು ನಿಮಗೆ ದ್ರೋಣಾಚಾರ‍್ಯನಂತ ಗುರುವಿನ ಬಲವುಳ್ಳ ಅರ್ಜುನನಾಗುತ್ತಿರೋ ಇಲ್ಲಾ ಗುರುವಿಲ್ಲದ ಏಕಲವ್ಯನಂತಾಗುತ್ತಿರೋ ಎಂದರೆ, ನೀವು ಆರಾಮವಾಗಿ ಅರ್ಜುನ ಎಂದು ಹೇಳಿಬಿಡಬಹುದು. ಸಾಮಾನ್ಯವಾಗಿ ಅರ್ಜುನ ಸರಿಯಾದ ಆಯ್ಕೆಯೇ ಆಗಿರುತ್ತಾನೆ ಎಂಬುದರಲ್ಲಿ ತಪ್ಪಿಲ್ಲ. ಆದರೆ, ಮತ್ತೊಂದು ಕೋನದಿಂದ ನೋಡಿದರೆ ಏಕಲವ್ಯನೇ ಸೂಕ್ತನಾಗಿರುತ್ತಾನೆ!

ನೀವು ಈ ಸ್ಪರ್ಧೆಯನ್ನು ಊಹಿಸಿಕೊಳ್ಳಿ: ಅರ್ಜುನನಿಗೆ ಮರದ ಗೂಳಿಯೊಂದರ ಎಡಗಣ್ಣಿಗೆ ಗುರಿಯಿಡಬೇಕಿದೆ. ಗುರಿಯಿಟ್ಟ ಆತ ಎರಡು ಅಂಗುಲದಷ್ಟು ಗುರಿ ತಪ್ಪಿದ ಎಂದುಕೊಳ್ಳಿ. ಆತ ಆಗ ತನ್ನ ಗುರು ದ್ರೋಣರ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕೇಳುತ್ತಾನೆ. ಆಗವರು ಅರ್ಜುನನಿಗೆ ಮತ್ತೆ ಗುರಿಯಿಡುವಂತೆ ಹೇಳಿ ಈ ಬಾರಿ ಎಡಗಾಲಿನ ಮೇಲೆ ಹಾಕಿರುವ ಹೆಚ್ಚಿನ ಭಾರವನ್ನು ಬಲಗಾಲಿಗೂ ಸ್ವಲ್ಪ ವರ್ಗಾಯಿಸುವಂತೆ ಹೇಳುತ್ತಾರೆ. ಗುರುಗಳು ಹೇಳಿದಂತೆಯೇ ಅರ್ಜುನ ಮಾಡುತ್ತಾನೆ. ಆದರೆ, ಈ ಬಾರಿಯೂ ಸ್ವಲ್ಪದರಲ್ಲಿಯೇ ಗುರಿ ತಪ್ಪುತ್ತಾನೆ. ಮತ್ತೆ ಅವನು ಗುರುಗಳ ಮೊರೆಹೋಗುತ್ತಾನೆ. ಮತ್ತವರು ಮಾರ್ಗದರ್ಶನ ನೀಡುತ್ತಾರೆ. ಕಡೆಗೆ ಅರ್ಜುನ ತನ್ನ ಗುರಿ ಮುಟ್ಟುತ್ತಾನೆ.

ಅದೇ ಸ್ಪರ್ಧೆಯಲ್ಲೀಗ ಏಕಲವ್ಯನನ್ನು ಕಲ್ಪಿಸಿಕೊಳ್ಳಿ: ಆತನೂ ಮೊದಲ ಪ್ರಯತ್ನದಲ್ಲಿ ಗುರಿ ತಪ್ಪುತ್ತಾನೆ. ಆದರಿಲ್ಲಿ ಅವನಿಗೆ ಮಾರ್ಗದರ್ಶನ ಮಾಡಲು ಗುರುಗಳಿಲ್ಲ. ಸಿದ್ಧ ಉತ್ತರಗಳನ್ನು ನೀಡಬಲ್ಲ ಗುರು ಆತನ ಹಿಂದೆ ಬೆಂಗಾವಲಾಗಿ ನಿಂತಿಲ್ಲ. ಆಗ ಆತ ತನ್ನನ್ನೇ ಪ್ರಶ್ನಿಸಿಕೊಂಡು ತನ್ನಲ್ಲೇ ಉತ್ತರ ಹುಡುಕಿಕೊಳ್ಳಲು ಪ್ರಯತ್ನಿಸುತ್ತಾನೆ. ಮತ್ತೇ ಸೋಲುತ್ತಾನೆ. ಮತ್ತೆ ಮತ್ತೆ ಪ್ರಯತ್ನಿಸಿ ಮತ್ತೆ ಮತ್ತೆ ಸೋಲುತ್ತಾನೆ. ರಾತ್ರಿಯೆಲ್ಲಾ ನಿದ್ದೆಬರುವುದಿಲ್ಲ. ಮರುದಿನವು ಆತನ ಪ್ರಯತ್ನಕ್ಕೆ ಫಲವಿರುವುದಿಲ್ಲ. ಆದರೂ ಆತ ಛಲ ಬಿಡುವುದಿಲ್ಲ. ಮೂರನೇ ದಿನದ ಸತತ ಪ್ರಯತ್ನದಿಂದ ಆತನಿಗೆ ಅರಿವಾಗಿರುತ್ತದೆ; ತಾನು ತನ್ನ ಎಡಗಾಲಿನ ಮೇಲೆ ಹೆಚ್ಚು ಭಾರವನ್ನು ಹಾಕುತ್ತಿದ್ದೇನೆ ಎಂದು. ಅದನ್ನು ಬಲಗಾಲಿಗೆ ಸ್ವಲ್ಪವೇ ವರ್ಗಾಯಿಸಿದರೆ ತನಗೆ ಗೆಲುವು ನಿಶ್ಚಿತವೆಂದು ಖಚಿತವಾಗುತ್ತದೆ. ಆ ನಂತರದ ಪ್ರಯತ್ನದಲ್ಲಿ ಆ ಮರದ ಗೂಳಿಯ ಎಡಗಣ್ಣಿಗೆ ಸರಿಯಾಗಿ ಬಾಣ ಬಿಟ್ಟು ಗೆಲ್ಲುತ್ತಾನೆ. 

ಇವರಿಬ್ಬರನ್ನು ನೋಡಿದಾಗ ಅರ್ಜುನನಿಗೆ ಗುರುವೊಬ್ಬ ಜೊತೆಯಿರಲೇಬೇಕಾಗುತ್ತದೆ. ಆತನಿಗೆ ಕುರುಕ್ಷೇತ್ರದಲ್ಲಿ ಯುದ್ಧಮಾಡುವಾಗಲೂ ಕೃಷ್ಣನ ರೂಪದಲ್ಲಿ ಗುರುವೊಬ್ಬ ಸಾರಥಿಯಾಗಬೇಕಾಯಿತು. ಆತ ತನ್ನ ಸ್ವಂತ ಪರಿಶ್ರಮದಿಂದ ಸಾಧಿಸಿ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಿಕೊಂಡವನಲ್ಲ. ಆತನದ್ದು ಏನೇ ಆದರೂ ಪರಾವಲಂಬಿ ಬದುಕು. ಆದರೆ, ಏಕಲವ್ಯ ಹಾಗಲ್ಲ. ಆತ ತನ್ನ ಸ್ವಂತ ಪರಿಶ್ರಮದಿಂದ, ಸತತ ಪ್ರಯತ್ನಗಳಿಂದ ತನ್ನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡವನು. ತನ್ನಲ್ಲೇ ಅಡಗಿದ್ದ ಗುರುವೆಂಬ ಅರಿವನ್ನು ಅರಿತುಕೊಂಡವನು. ಬಿಲ್ವಿದ್ಯೆಯಲ್ಲಿ ಪರಿಣಿತಿ ಪಡೆದವನು. ಆದಕಾರಣ ಗೆಳೆಯರೇ, ನಾವು ನಮ್ಮಲ್ಲಿರುವ ಗುರುವನ್ನು ಮೊದಲು ಅರಿಯಬೇಕಿದೆ. ಅದಕ್ಕೇ ಹಿರಿಯರು ಹೇಳಿದ್ದು, “ಅರಿವೇ ಗುರು.”

ನೀವು ನೀವಾಗುವುದಕ್ಕೆ, ನಿಮಗೆ ನೆರವಾಗುವುದಕ್ಕೆ ಗುರುವೊಬ್ಬನ ಅವಶ್ಯಕತೆಯಿರಲೇಬೇಕು ಎಂದು ಸೂಫಿ ಸಂತರು ಕೂಡ ಹೇಳಿದ್ದಾರೆ. ಆ ಗುರುವು ಹೊರಗಿನವರಾದರೂ ಆಗಿರಬಹುದು ಇಲ್ಲಾ ನಿಮ್ಮೊಳಗೇ ಇರಬಹುದು. ಆದರೆ, ಆ ಗುರುವು ನಿಮ್ಮೊಳಗೇ ಇದ್ದರೆ ಆ ಗುರುವೇ ಶ್ರೇಷ್ಠ ಎಂದು ಅವರು ಪ್ರತಿಪಾದಿಸಿದ್ದಾರೆ. ಅದಕ್ಕೆ ಅನುಗುಣವಾಗಿ ಸೂಫಿ ಸಂತರು ಹೇಳಿದ ಗುರುಗಳ ಹುಡುಕಾಟದ ಕತೆ ಹೀಗಿದೆ:

ಒಮ್ಮೆ ಸೂಫಿ ಗುರುವೊಬ್ಬ ಇನ್ನೇನು ಮರಣವೊಂದುವವನಿದ್ದ. ಆತನಿಗೆ ತನ್ನ ಮೂವರು ಶಿಷ್ಯಂದಿರು ತನ್ನ ಮರಣಾನಂತರ ಯಾವ ಗುರುವಿನ ಮಾರ್ಗದರ್ಶನದಲ್ಲಿ ಮುನ್ನೆಡೆಯುವರು ಎಂಬ ಚಿಂತೆ ಕಾಡತೊಡಗಿತು. ಅವರಿಗೆ ಆತ ಸುಲಭವಾಗಿ ಇಂತಹ ಗುರುಗಳನ್ನು ನೀವೇ ಹುಡುಕಿಕೊಳ್ಳಿ ಅಥವಾ ಇಂತಹವರ ಬಳಿಗೆ ಹೋಗಿ ಎಂದು ಹೇಳಿಬಿಡಬಹುದಿತ್ತು. ಆದರೆ, ಆತ ತನ್ನ ಶಿಷ್ಯಂದಿರು ಅವರಾಗಿಯೇ ತಮ್ಮ ಗುರುಗಳನ್ನು ಹುಡುಕಿಕೊಳ್ಳುವಂತೆ ಮಾಡಬೇಕಿತ್ತು. ಯಾರಾದರೂ ಆಗಲಿ ಅವರೇ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಿಕೊಂಡರೆ ಅದು ಅತ್ಯುತ್ತಮವಾದದ್ದು ಮತ್ತು ಶ್ರೇಷ್ಠವಾದದ್ದು  ಎಂಬ ನಂಬಿಕೆಯಿತ್ತು. ಕುರುಡನೊಬ್ಬನಿಗೆ ಕೈ ನೀಡಿ ಮುನ್ನೆಡೆಸುವುದಕ್ಕಿಂತಲೂ, ಆ ಕುರುಡನೇ ತಾನೇತಾನಾಗಿ ಮುನ್ನೆಡೆಯುವುದನ್ನು ಕಲಿಸುವುದೇ ಶ್ರೇಷ್ಠ ಎಂದು ನಂಬಿದ್ದ ಆ ಗುರು. ಆಗಲೇ ಕುರುಡನಿಗೆ ತಾನು ಕತ್ತಲಲ್ಲೂ ಬೆಳಕನ್ನು ಅರಸಬಲ್ಲೆ ಎಂಬ ಅರಿವು ಬರುತ್ತದೆ ಎಂಬ ಅರಿವಿತ್ತು ಆ ಗುರುವಿಗೆ. ಆದಕಾರಣ ಆತ ತನ್ನ ಮೂವರು ಶಿಷ್ಯರನ್ನು ಕರೆದು, ಅವರಿಗೆ ಹದಿನೇಳು ಒಂಟೆಗಳನ್ನು ನೀಡಿ, ನೀವೆಲ್ಲಾ ನಾನು ಹೇಳಿದ ನಿಯಮದಂತೆಯೇ ಒಟ್ಟು ಹದಿನೇಳು ಒಂಟೆಗಳನ್ನು ಹಂಚಿಕೊಳ್ಳಬೇಕೆಂದು ಹೇಳಿದ. ಆತನ ಹಂಚಿಕೆಯ ನಿಯಮವು ಹೀಗಿತ್ತು, ‘ಒಟ್ಟು ಒಂಟೆಗಳಲ್ಲಿ ಹಿರಿಯ ಶಿಷ್ಯನಿಗೆ ಅರ್ಧಭಾಗ, ಮಧ್ಯ ವಯಸ್ಸಿನವನಿಗೆ ಮೂರರಲ್ಲಿ ಒಂದು ಭಾಗ ಮತ್ತು ಕಿರಿಯವನಿಗೆ ಒಂಭತ್ತರಲ್ಲಿ ಒಂದು ಭಾಗ’ ಎಂದು.

ಶಿಷ್ಯರೆಲ್ಲಾ ತಲೆಕೆಡಿಸಿಕೊಂಡರು. ಗುರುಗಳು ಹೇಳಿದ್ದರಲ್ಲಿ ಅವರಿಗೆ ಅರ್ಥವೇ ಕಾಣಲಿಲ್ಲ. ಇದು ಸಾಧ್ಯವೇ ಇಲ್ಲ ಎಂದು ಅವರಲ್ಲಿಯೇ ಮಾತನಾಡಿಕೊಂಡರು. ಈ ಗುರುಗಳಿಗೆ ಸರಿಯಾದ ಬುದ್ಧಿಯಿಲ್ಲ. ಗುರುಗಳು ಏನೋ ಅತರ್ಕವಾದುದ್ದನ್ನು ಹೇಳಿದ್ದಾರೆ. ಅವರಿಗೆ ಸಾಯುವ ಕಾಲದಲ್ಲಿ ಬುದ್ಧಿಭ್ರಮಣೆಯಾಗಿರುವಂತಿದೆ ಎಂದೆಲ್ಲಾ ಯೋಚಿಸತೊಡಗಿದರು. ಇವರಿಗೆ ಇದಕ್ಕೆ ಸರಿಯಾದ ಉತ್ತರವಿಲ್ಲ ಎಂದು ಸ್ವಲ್ಪದರಲ್ಲಿಯೇ ಮನದಟ್ಟಾಗುತ್ತದೆ ಎಂದು ಭಾವಿಸಿದರು. 

ಹೇಗೂ ಗುರುಗಳು ಇನ್ನೇನು ಸಾಯುತ್ತಾರೆ. ಆಗ ಎಲ್ಲರೂ ಹೇಗೆ ಬೇಕೋ ಹಾಗೆ ಹಂಚಿಕೊಂಡರಾಯಿತು ಎಂದು ಲೆಕ್ಕಾಚಾರವನ್ನು ತಮ್ಮೊಳಗೆ ಹಾಕಿಕೊಂಡರು. ಆದರೆ, ಅವರಲ್ಲೊಬ್ಬ ಏನಾದರೂ ಮಾಡಿ ಉತ್ತರ ಕಂಡುಕೊಳ್ಳಲೇಬೇಕು ಎಂದು ಮತ್ತಿಬ್ಬರನ್ನು ಕರೆದುಕೊಂಡು ಹಿರಿಯರೊಬ್ಬರ ಬಳಿ ಬಂದ. ಆ ಹಿರಿಯರು ಇವರ ಸಮಸ್ಯೆಯನ್ನು ಅರ್ಥಮಾಡಿಕೊಂಡು ನಿಮ್ಮ ಸಮಸ್ಯೆಗೆ ಸುಲಭ ಉತ್ತರವಿದೆ ಎಂದು ಹೇಳಿ, ನಾನೊಂದು ಒಂಟೆಯನ್ನು ನಿಮಗೆ ಕೊಟ್ಟು ಬಿಡುತ್ತೇನೆ. ಆಗ ಒಟ್ಟು ಹದಿನೆಂಟು ಒಂಟೆಗಳಾಗುತ್ತವೆ. ನೀವೀಗ ನಿಮ್ಮ ಗುರುಗಳು ಹೇಳಿದಂತೆ, ‘ಒಟ್ಟು ಒಂಟೆಗಳಲ್ಲಿ ಹಿರಿಯ ಶಿಷ್ಯನಿಗೆ ಅರ್ಧಭಾಗ ಅಂದರೆ ಒಂಭತ್ತು ಒಂಟೆಗಳು, ಮಧ್ಯ ವಯಸ್ಸಿನವನಿಗೆ ಮೂರರಲ್ಲಿ ಒಂದು ಭಾಗ ಅಂದರೆ ಆರು ಒಂಟೆಗಳು ಮತ್ತು ಕಿರಿಯವನಿಗೆ ಒಂಭತ್ತರಲ್ಲಿ ಒಂದು ಭಾಗ ಅಂದರೆ ಎರಡು ಒಂಟೆಗಳನ್ನು ಹಂಚಿಕೊಳ್ಳಿ. ಅಲ್ಲಿಗೆ ಹದಿನೇಳು ಒಂಟೆಗಳಾದವು. ಉಳಿದ ಒಂದು ಒಂಟೆ ನನ್ನದು. ಅದನ್ನು ನನಗೆ ಹಿಂದಿರುಗಿಸಿಬಿಡಿ’ ಎಂದು ಮುಗುಳ್ನಕ್ಕರು. 

ಅಲ್ಲಿಗೆ ಈ ಕಥೆ ಹೇಳುವುದು ನಿಮ್ಮಳೊಗಿಳಿದು ನಿಮ್ಮ ಸಮಸ್ಯೆಗೆ ಪರಿಹಾರ ನೀಡುವವರು ಮಾತ್ರ ನಿಮ್ಮ ಗುರುವಾಗಬಲ್ಲರು ಎಂದು. ನಿಮ್ಮಳೊಗಿನ ಆ ಹಿರಿಯನ ರೂಪದ ‘ಒಂದು ಒಂಟೆ’ ಎಂಬ ಅರಿವೇ ನಿಮಗೆ ಗುರುವಾಗಬಲ್ಲದು. 

ಆ ‘ಅರಿವೆಂಬ ಗುರು’ವೇ ಅನುಗಾಲವೂ ನಿಮ್ಮೊಂದಿಗಿರಬಲ್ಲರು. ಆತನನ್ನು ಮೊದಲು ಹುಡುಕಿಕೊಳ್ಳಿ. ಆಲ್ ದಿ ಬೆಸ್ಟ್... ಶುಭವಾಗಲಿ...

- ಗುಬ್ಬಚ್ಚಿ ಸತೀಶ್.

***


"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...