ಬುಧವಾರ, ಅಕ್ಟೋಬರ್ 4, 2023

ಒಂದೇ ತಿಂಗಳಲ್ಲಿ ಐದು ಮುದ್ರಣಗಳು…!

ಒಂದೇ ತಿಂಗಳಲ್ಲಿ ಐದು ಮುದ್ರಣಗಳು…!

ಆತ್ಮೀಯ ಸ್ನೇಹಿತರೇ,

ಸುಮಾರು ಒಂದು ತಿಂಗಳ ಹಿಂದಷ್ಟೇ ಬಿಡುಗಡೆಯಾದ ರಂಗಸ್ವಾಮಿ ಮೂಕನಹಳ್ಳಿ ಅವರ “ಹಣ ಏನಿದು ನಿನ್ನ ವಿಚಿತ್ರ ಗುಣ!” ಪುಸ್ತಕ ಇದಾಗಲೇ ಐದು ಮುದ್ರಣಗಳನ್ನು ಕಂಡು ಯಶಸ್ವಿಯಾಗಿ ಮಾರಾಟವಾಗುತ್ತಲೇ ಇದೆ. ಈ ಗೆಲುವಿಗೆ ಪ್ರಮುಖ ಕಾರಣಗಳೇನು ಅಂತ ನೋಡೋಣ ಬನ್ನಿ…



ಈ ಪುಸ್ತಕ ರಂಗಸ್ವಾಮಿ ಮೂಕನಹಳ್ಳಿ ಅವರ ಇಪ್ಪತ್ತೈದನೇ ಪುಸ್ತಕವೆನ್ನುವುದನ್ನು ಮುಖ್ಯವಾಗಿ ಗಮನಿಸಬೇಕು. ಹಣಕಾಸಿನ ಕುರಿತೇ ಬಹಳಷ್ಟು ಪುಸ್ತಕಗಳನ್ನು ಬರೆದಿರುವ ರಂಗಸ್ವಾಮಿಯವರು ʼಹಣದ ಜೊತೆಗಿನ ನನ್ನ ಸಂಬಂಧ ನನ್ನ ವಯಸ್ಸಿನಷ್ಟೇ ಹಳೆಯದು!ʼ ಎನ್ನುತ್ತಲ್ಲೇ ಹಣ ಕುರಿತು ತಮ್ಮ ಅನುಭವವನ್ನೇಲ್ಲಾ ಇಲ್ಲಿ ಧಾರೆಯೆರೆದಿದ್ದಾರೆ. ನಿಮಗೆ ಜಗತ್ತಿನಲ್ಲಿ ಶಿಕ್ಷಣ ಸಿಗುತ್ತದೆ. ಆದರೆ, ಹಣಕಾಸಿನ ಬಗ್ಗೆ ಸಿಗುವುದಿಲ್ಲ. ಆಗ ಇಂತಹ ಪುಸ್ತಕಗಳಷ್ಟೇ ನಿಮ್ಮ ಹಣಕಾಸಿನ ಅಜ್ಞಾನವನ್ನು ಹೊಡದೊಡಿಸಬಲ್ಲವು.

ಈ ಪುಸ್ತಕದ ಮುಖಪುಟದಲ್ಲಿ ಹಣವಿದೆ. ಜೊತೆಗೆ, ‌ಶೀರ್ಷಿಕೆಯ ಟ್ಯಾಗ್‌ ಲೈನ್‌ – ʼಬಯಸಿದರೆ ದೂರಾಗುತ್ತದೆ; ಬಯಸದಿದ್ದರೆ ಸಿಗುವುದೇ ಇಲ್ಲ!ʼ ಎಂಬ ಸಾಲು ʼಎಲಾ ಹಣವೇ!ʼ ಎಂದು ಓದುಗನನ್ನು ಪುಸ್ತಕ ಕೈಗೆತ್ತುಕೊಳ್ಳುವಂತೆ ಮಾಡುತ್ತಿದೆ.

ಈ ಪುಸ್ತಕದಲ್ಲಿ ಇಪ್ಪತ್ತೈದು ಅಧ್ಯಾಯಗಳಿದ್ದು, ರಂಗಸ್ವಾಮಿಯವರು ಹಣದ ಎಲ್ಲಾ ಮಜಲುಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದಾರೆ. ಹಣ ಕುರಿತು ಬಹುತೇಕ ಧರ್ಮಗಳ ನಂಬಿಕೆಗಳನ್ನು ಕೂಡ ಓದುಗರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಈ ಪುಸ್ತಕದ ಲೇಖಕರು ಮತ್ತು ಪ್ರಕಾಶಕರು (ಬೆಂಗಳೂರಿನ ಸಾವಣ್ಣ ಪ್ರಕಾಶನ) ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ಪ್ರಚಾರ ಮಾಡುತ್ತಲೇ ಇದ್ದಾರೆ. ಪ್ರತಿಯೊಬ್ಬ ಲೇಖಕರು, ಪ್ರಕಾಶಕರು ಇದನ್ನು ಗಮನಿಸಬೇಕು. ನಾನು ಕೂಡ ಪುಸ್ತಕದ ಬೆನ್ನಿನಲ್ಲಿದ್ದ ಮಾತುಗಳನ್ನು ಓದುತ್ತಾ ಈ ಪುಸ್ತಕವನ್ನು ಪ್ರಮೋಟ್‌ ಮಾಡಿದ್ದೆ. ಯೂಟ್ಯೂಬಿನಲ್ಲಿ ನಾನು ಹಾಕಿದ್ದ ಅಮೇಜಾನ್‌ ಲಿಂಕ್‌ ಅನ್ನು ನೂರಾರು ಜನ ಕ್ಲಿಕ್‌ ಮಾಡಿ, ಕೆಲವರು ಪುಸ್ತಕವನ್ನು ಕೂಡ ಕೊಂಡಿದ್ದಾರೆ. ಗೌರೀಶ್‌ ಅಕ್ಕಿ ಸ್ಟೂಡಿಯೋ ಯೂಟ್ಯೂಬ್‌ ಚಾನೆಲ್ಲಿನಲ್ಲಿ ಲೇಖಕರ ಸಂದರ್ಶನವೂ ಕೂಡ ಪ್ರಸಾರವಾಗಿತ್ತು.



ಈ ಪುಸ್ತಕವು ಅಮೇಜಾನ್‌ ಕನ್ನಡ ಟಾಪ್‌ ಸೆಲ್ಲಿಂಗ್‌ ಪುಸ್ತಕವಾಯಿತು. ಕಾರಣ, ಅಮೇಜಾನಿನಲ್ಲಿ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುವುದು ಸುಲಭ ಮತ್ತು ಬಹಳಷ್ಟು ಮಾರಾಟಗಾರರು ಅತಿ ಹೆಚ್ಚು ಮಾರಾಟವಾಗುವ ಪುಸ್ತಕಗಳಿಗೆ ರಿಯಾಯಿತಿ ಮತ್ತು ಬೋನಸ್‌ ಎನ್ನುವಂತೆ ಕೆಲವು ಮಾರಾಟಗಾರರು ಶಿಪ್ಪಿಂಗ್‌ ಶುಲ್ಕ ಹಾಕುವುದಿಲ್ಲ. ಇದು ಅವರಿಗೆ ಹೇಗೆ ಲಾಭ ತರುತ್ತದೋ ಗೊತ್ತಿಲ್ಲ, ಆದರೆ, ಓದುಗನಿಗಂತೂ ಲಾಭವಿದೆ. ಕುಳಿತಲ್ಲೇ ಕಡಿಮೆ ಹಣಕ್ಕೆ ಸಮಯವನ್ನೂ ಉಳಿಸಿಕೊಂಡು ಪುಸ್ತಕವನ್ನು ಖರೀದಿಸುವ ಲಾಭ. ಈ ರೀತಿ ಪುಸ್ತಕಗಳನ್ನು ಖರೀದಿಸುವ ಓದುಗರು ದಿನೇದಿನೇ ಹೆಚ್ಚುತ್ತಿದ್ದಾರೆ. ಈ ಪುಸ್ತಕದ ಮೂಲಕ ಇದು ಮತ್ತೊಮ್ಮೆ ಸಾಬೀತಾಗಿದೆ.

ಹಣ ಎಂದರೆ ಹೆಣ ಕೂಡ ಎದ್ದು ಕೂರುತ್ತೆ ಅಂತಾರೆ. ಅಂತಹದ್ದರಲ್ಲಿ ಬದುಕಿರುವವರು ಬಯಸುವುದರಲ್ಲಿ ತಪ್ಪೇನು ಇಲ್ಲ. ಹಣದ ಮಹತ್ವ ಕುರಿತು ಕೆಲವರು ಹೇಳುತ್ತಾರೆ, ಬಹುತೇಕರು ಹೇಳುವುದೇ ಇಲ್ಲ.



ʼಬೆಚ್ಚನೆಯಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು

ಇಚ್ಛೆಯನರಿವ ಸತಿ ಇರಲು

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞʼ

ಎಂದು ಸರ್ವಜ್ಞನ ವಚನವೇ ಇದೆ.


ಹಣಕ್ಕೂ ಒಂದು ಮನೋಧರ್ಮವಿದೆ. ಒಂದು ವಿಜ್ಞಾನವೂ ಇದೆ. (ʼಹಣದ ಮನೋವಿಜ್ಞಾನʼ ಪುಸ್ತಕ ನೆನಪಿಸಿಕೊಳ್ಳಬಹುದು.) ಮತ್ತೆ ಹಣವನ್ನು ನಮ್ಮದಾಗಿಸಿಕೊಳ್ಳಬಾರದೇ!?

ಈ ಕಾರಣಗಳಿಂದ ರಂಗಸ್ವಾಮಿ ಮೂಕನಹಳ್ಳಿ ಅವರ “ಹಣ ಏನಿದು ನಿನ್ನ ವಿಚಿತ್ರ ಗುಣ!” ಪುಸ್ತಕ ಓದುಗರನ್ನು ತನ್ನತ್ತ ಸೆಳೆಯುತ್ತಲೇ ಇದೆ.

ಇನ್ಯಾಕೆ ತಡ ಈ ಪುಸ್ತಕವನ್ನು ನೀವು ಅತ್ಯಂತ ಕಡಿಮೆ ಹಣಕ್ಕೆ ಅಮೇಜಾನಿನಲ್ಲಿ ಕೊಳ್ಳಬಹುದು. ನಿಮ್ಮ ಪ್ರತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ... https://amzn.to/3QAsPUS

ಪ್ರೀತಿಯಿಂದ, ಗುಬ್ಬಚ್ಚಿ ಸತೀಶ್.

ಸೋಮವಾರ, ಅಕ್ಟೋಬರ್ 2, 2023

ನಿಮ್ಮ ಸಂಕಲ್ಪ ಸಿಂಹದಂತಿರಲಿ!

 ನನ್ನ ಅಜ್ಜ ಯಾರೆಂದು ನನಗೆ ಗೊತ್ತಿಲ್ಲ; ಆದರೆ ಆತನ

ಮೊಮ್ಮಗ ಏನಾಗಬೇಕೆಂದು ನನಗೆ ಗೊತ್ತಿದೆ

-    ಅಬ್ರಹಾಂ ಲಿಂಕನ್, ಅಮೇರಿಕಾದ ಅಧ್ಯಕ್ಷ

ಸ್ನೇಹಿತರೇ, ನಾವು ಜೀವನದಲ್ಲಿ ಏಕೆ ಸೋಲ್ತೀವಿ? ಈ ಪ್ರಶ್ನೆ ಬಹಳ ಮುಖ್ಯವಾದುದು. ನಾವು ನಮ್ಮ ಗುರಿಯನ್ನು ಹುಡುಕಿಕೊಂಡಿರ‍್ತೀವಿ. ಆದರೆ, ಆ ಗುರಿಯೆಡೆಗೆ ಸರಿಯಾದ ದಾರಿಯಲ್ಲಿ ನಿರಂತರವಾಗಿ ನಡೆಯಲ್ಲ. ಅದಕ್ಕಿಂತ ಮುಖ್ಯವಾಗಿ ನಮ್ಮ ಗುರಿಯೆಡೆಗಿನ ಪಯಣವನ್ನು ಆರಂಭಿಸುವುದೇ ಇಲ್ಲ. ಜೊತೆಗೆ ನಾವು ಏನಾಗಬೇಕೆಂದು ನಿರ್ಧಾರ ತಳೆದಿರುತ್ತೇವೋ ಆ ಕುರಿತು ಸಂಕಲ್ಪವೊಂದನ್ನು ಮಾಡಿಕೊಂಡಿರುವುದೇ ಇಲ್ಲ. ಇದೇ ಕಾರಣಕ್ಕೆ ಅಮೇರಿಕಾದ ಅಧ್ಯಕ್ಷರಾಗಿದ್ದ ಅಬ್ರಾಹಂ ಲಿಂಕನ್ ಅವರ ಮಾತೊಂದನ್ನು ನಾನು ಮೇಲೆ ಉಲ್ಲೇಖಿಸಿರುವುದು.

ಹೌದು ಸ್ನೇಹಿತರೇ. ಜೀವನದಲ್ಲಿ ನಾವು ಏನಾಗಬೇಕೋ ಅದನ್ನು ಮೊದಲು ನಮ್ಮ ಮನಸ್ಸಿನಲ್ಲಿಯೇ ಸಂಕಲ್ಪ ಮಾಡಿಕೊಳ್ಳಬೇಕು. ಸಂಕಲ್ಪ ಮಾಡಿಕೊಳ್ಳುವುದೆಂದರೆ, ದೃಢ ನಿಶ್ಚಯ ತಳೆಯುವುದು. ಯಾವುದಾದರೂ ಪೂಜೆಗೆ ಕೂಡುವ ಮೊದಲು ಅಥವಾ ದೇವರ ವ್ರತಗಳನ್ನು ಮಾಡುವ ಮೊದಲು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಿ ಎನ್ನುವ ರೂಢಿಯಿದೆ. ಮನುಷ್ಯನನ್ನು ಒಳಗೊಂಡಂತೆ ಎಲ್ಲಾ ಪ್ರಾಣಿ ಪಕ್ಷಿಗಳಲ್ಲಿ ಸಂಕಲ್ಪ ಮಾಡಿಕೊಳ್ಳುವ ಗುಣವಿರುತ್ತದೆ. ವಿಶೇಷವಾಗಿ ಕಾಡಿನ ರಾಜ ಅಥವಾ ಮೃಗರಾಜ ಸಿಂಹದ ಸಂಕಲ್ಪ ಶಕ್ತಿ ಅದ್ವಿತೀಯವಾದದ್ದು.


ನಮಗೆಲ್ಲಾ ಗೊತ್ತಿರುವ ಸಂಗತಿಯೆಂದರೆ, ಕಾಡಿನಲ್ಲಿ ವಾಸವಾಗಿರುವ ಪ್ರಾಣಿಗಳಲ್ಲಿ ಎಲ್ಲಕ್ಕಿಂತ ದೊಡ್ಡದಾದ ಪ್ರಾಣಿ ಆನೆ, ಎತ್ತರವಾದ ಪ್ರಾಣಿ ಜಿರಾಫೆ, ಬುದ್ಧಿವಂತ ಪ್ರಾಣಿ ನರಿ, ವೇಗವಾಗಿ ಓಡುವ ಶಕ್ತಿ ಇರುವ ಪ್ರಾಣಿ ಚಿರತೆ. ಹೀಗೆ ಒಂದೊಂದು ಪ್ರಾಣಿಯೂ ಒಂದೊಂದು ವಿಶೇಷವಾದ ಶಕ್ತಿಯನ್ನು ಪಡೆದಿವೆ. ಆದರೆ, ಈ ಯಾವ ಗುಣಗಳೂ ತನ್ನಲ್ಲಿಲ್ಲದ ಸಿಂಹ ಕಾಡಿನ ರಾಜ! ಏತಕ್ಕೆ ಎನ್ನುವ ಪ್ರಶ್ನೆಗೆ ಉತ್ತರ: ಸಿಂಹ ನಿರ್ಭಯಿ, ಧೈರ್ಯಶಾಲಿ. ಎಂಥಹ ಸವಾಲನ್ನು ಬೇಕಾದರೂ ಎದುರಿಸಬಲ್ಲ ಚಾಕಚಕ್ಯತೆ ಅದಕ್ಕಿದೆ. ಎಲ್ಲ ಅಡೆತಡೆಗಳನ್ನು ಮೀರಬಲ್ಲ ಚೈತನ್ಯವಿದೆ. ಅದರದ್ದು ಆತ್ಮವಿಶ್ವಾಸಭರಿತ ಧೀಮಂತ ನಡಿಗೆ, ಅದು ಯಾವುದಕ್ಕೂ ಎದೆಗುಂದುವುದಿಲ್ಲ, ಎಂದಿಗೂ ಹೆದರುವುದಿಲ್ಲ, ತನ್ನನ್ನು ಯಾರೂ ತಡೆಯಲಾರರೆಂಬ ವಿಶ್ವಾಸ ಅದಕ್ಕಿದೆ. ಎಂಥಹ ಗಂಡಾಂತರಗಳನ್ನು ಬೇಕಾದರೂ ಎದುರಿಸುವ ವಿಶ್ವಾಸ ಅದಕ್ಕಿದೆ. ಅದರ ಆಲೋಚನೆಯಲ್ಲಿ ಪ್ರತಿಯೊಂದು ಪ್ರಾಣಿಯೂ ಅದರ ಆಹಾರವೇ ಸರಿ. ಸಿಕ್ಕ ಪ್ರತಿ ಅವಕಾಶವನ್ನೂ ತಾನು ಪ್ರಯತ್ನಿಸಿ ನೋಡಲು ಯೋಗ್ಯವಾದದ್ದೆಂದು ಭಾವಿಸಿ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಈ ಎಲ್ಲಾ ಗುಣಗಳಿಂದ ಅದು ಮೃಗರಾಜ!

ಇಂಥಹ ಆಕರ್ಷಕ ಗುಣಗಳುಳ್ಳ ಸಿಂಹದಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ನೀವು ಎಲ್ಲರಿಗಿಂತ ಎತ್ತರವಾಗಿರಬೇಕಿಲ್ಲ, ಎಲ್ಲರಿಗಿಂತ ಹೆಚ್ಚು ಬುದ್ಧಿವಂತರಾಗಿರಬೇಕಿಲ್ಲ, ಹೆಚ್ಚು ಚಾಣಾಕ್ಷರಾಗಬೇಕಿಲ್ಲ, ಹೆಚ್ಚು ಮೇಧಾವಿಯೂ ಆಗಿರಬೇಕಿಲ್ಲ, ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಎಲ್ಲರೂ ನಿಮ್ಮನ್ನು ಒಪ್ಪಿಕೊಳ್ಳಬೇಕಿಲ್ಲ. ನಿಮಗೆ ಬೇಕಿರುವುದೆಲ್ಲವೂ ‘ಧೈರ್ಯ’, ‘ಎದೆಗಾರಿಗೆ’, ‘ಮತ್ತೆ ಮತ್ತೆ ಪ್ರಯತ್ನಿಸುವ ಛಲ’, ‘ಇದು ನನ್ನಿಂದ ಸಾಧ್ಯವೆಂಬ ಆತ್ಮವಿಶ್ವಾಸ’. ಈ ರೀತಿಯ ಸಿಂಹದ ಸಂಕಲ್ಪ ಶಕ್ತಿ ನಿಮ್ಮಲ್ಲಿ ಬಂದು ಅದು ದೃಢವಾದರೆ ನಿಮ್ಮನ್ನು ತಡೆಯುವವರು ಯಾರು?

ಒಂದೇ ಒಂದು ಕ್ಷಣದ ಸಂಕಲ್ಪ ನಿಮ್ಮ ಭವಿಷ್ಯವನ್ನೇ ಬದಲಿಸಬಲ್ಲದು. ನಾವು ಏನಾಗಬೇಕೆಂದುಕೊಂಡಿದ್ದೇವೋ ಅದನ್ನು ಸಂಕಲ್ಪ ಮಾಡಿಕೊಂಡು ಅದನ್ನೇ ಸಾಧಿಸುವ ನಿಟ್ಟಿನಲ್ಲಿ ಅಭ್ಯಾಸ ಮಾಡುತ್ತ ಹೋದಂತೆ ನಮ್ಮ ಸಂಕಲ್ಪ ಶಕ್ತಿಯೂ ಸದೃಢವಾಗಿ ನಮ್ಮ ಗೆಲುವಿನ ಹಾದಿಯು ಕೂಡ ಸುಲಭವಾಗಿಬಿಡುತ್ತದೆ. ಗೆಲುವಿಗಾಗಿ ಹಾತೊರೆಯುವವರು ದೃಢಸಂಕಲ್ಪ ತೆಗೆದುಕೊಂಡ ಕೂಡಲೇ ಸಮಯವನ್ನು ಮಹತ್ವಪೂರ್ಣವೆಂದು ಪರಿಗಣಿಸಿ ತಮ್ಮ ಕೆಲಸದಲ್ಲಿ ನಿರತರಾಗಬೇಕು. ಜಗತ್ತಿನಲ್ಲಿ ಎಲ್ಲರಿಗೂ ಇಪ್ಪತ್ತನಾಲ್ಕೇ ಗಂಟೆಗಳು. ಸಾಧಿಸದವರಿಗೂ ಮತ್ತು ಸಾಧಿಸಿದವರಿಗೂ… ಸಮಯದ ಸರಿಯಾದ ಸದುಪಯೋಗ ಪಡೆದುಕೊಂಡವರು ಮಾತ್ರ ಸಾಧಿಸಿಯೇ ವಿರಮಿಸುತ್ತಾರೆ ಎಂಬುದು ಜಗತ್ತಿನ ಸತ್ಯಗಳಲ್ಲೊಂದು. ಸಂಕಲ್ಪ ಗಟ್ಟಿಯಾದರೇ ಸಮಯ ತಂತಾನೇ ಒಲಿದಿರುತ್ತದೆ.


‘ಸಂಕಲ್ಪ’ದ ಅರ್ಥ ಏನು ಎಂಬುದನ್ನು ಸರಿಯಾಗಿ ಅರಿಯಲು ಓಶೋ ಅವರು ಹೇಳುವ ಈ ಕಥೆಯನ್ನು ಓದಬೇಕು: ಒಮ್ಮೆ ವ್ಯಕ್ತಿಯೋರ್ವ ಪರಮಾತ್ಮನನ್ನು ಹೊಂದುವ ಮಾರ್ಗ ಏನೆಂದು ಓರ್ವ ಫಕೀರನನ್ನು ಕೇಳಿದ. ಆತನ ಕಣ್ಣುಗಳಲ್ಲಿ ಇಣುಕಿದಾಗ, ಆತನಲ್ಲಿಯ ತೃಷೆ ಫಕೀರರಿಗೆ ಕಂಡಿತು. ಫಕೀರ ನದಿಸ್ನಾನಕ್ಕೆ ಹೋಗುತ್ತಿದ್ದರು. ಜೊತೆಗೆ ಬಂದಲ್ಲಿ, ಮಿಂದ ಬಳಿಕ ಪರಮಾತ್ಮನನ್ನು ಹೊಂದುವ ಮಾರ್ಗವನ್ನು ತೋರಿಸುವುದಾಗಿ ವಾಗ್ದಾನ ನೀಡಿದರು. ಅವರಿಬ್ಬರೂ ನದಿಯ ಬಳಿಗೆ ಬಂದರು. ಆ ವ್ಯಕ್ತಿ ನೀರಿನಲ್ಲಿ ಇಳಿದೊಡನೆ, ಫಕೀರ ಆತನ ತಲೆಯನ್ನು ಗಟ್ಟಿಯಾಗಿ ನೀರಿನಲ್ಲಿ ಅದುಮಿಟ್ಟುಕೊಂಡರು. ಆ ವ್ಯಕ್ತಿ ಫಕೀರರ ಹಿಡಿತದಿಂದ ಬಿಡಿಸಿಕೊಳ್ಳಲು ಹರಸಾಹಸಪಟ್ಟ. ಆತನ ಜೀವ ಅಪಾಯದಲ್ಲಿತ್ತು, ಆತ ಫಕೀರರ ತುಲನೆಯಲ್ಲಿ ನಿಶ್ಯಕ್ತನಾಗಿದ್ದರೂ ಸಹಿತ ಆತನ ಸುಪ್ತ ಶಕ್ತಿ ನಿಧಾನವಾಗಿ ಜಾಗೃತಗೊಂಡಿತು. ಸ್ವಲ್ಪ ಹೊತ್ತಿನಲ್ಲೇ ಫಕೀರರಿಗೆ ಆತನನ್ನು ಮುಳುಗಿಸಿಡುವುದು ಅಸಾಧ್ಯವಾಯಿತು. ಆ ವ್ಯಕ್ತಿ ತನ್ನೆಲ್ಲ ಶಕ್ತಿಯನ್ನು ಬಳಸಿ ನದಿಯಿಂದ ಹೊರಬರುವುದರಲ್ಲಿ ಸಫಲನಾದ. ಫಕೀರ ಜೋರಾಗಿ ನಗುತ್ತಿದ್ದುದನ್ನು ಕಂಡು ಆತ ಚಕಿತನಾದ. ಅವರ ವರ್ತನೆ ಆತನಿಗೆ ಅರ್ಥವಾಗಲಿಲ್ಲ. ಆತ ತುಸು ಶಾಂತನಾದ ಮೇಲೆ ಫಕೀರ ಕೇಳಿದರು. ‘ನೀರಿನಲ್ಲಿ ಮುಳುಗಿದ್ದಾಗ ನಿನ್ನ ಮನದಲ್ಲೇನು ಬಯಕೆಗಳಿದ್ದವು?’ ಆತನೆಂದ, ‘ಬಯಕೆಗಳು...! ಬಯಕೆಗಳು ಇರಲಿಲ್ಲ, ಒಂದೇ ಒಂದು ಬಯಕೆ ಮಾತ್ರ ಇತ್ತು – ಉಸಿರು ಒಳಕ್ಕೆಳೆದುಕೊಳ್ಳುವ ಬಯಕೆ.’ ಫಕೀರ ಹೇಳಿದರು, ‘ಪರಮಾತ್ಮನನ್ನು ಹೊಂದುವ ರಹಸ್ಯವೂ ಇದೇನೆ. ಈ ಸಂಕಲ್ಪ, ನಿನ್ನ ದೃಢಸಂಕಲ್ಪ ನಿನ್ನೆಲ್ಲ ಸುಪ್ತ ಶಕ್ತಿಗಳನ್ನು ಜಾಗೃತಗೊಳಿಸಿತು.’

ಈ ಕತೆಯಿಂದಲೇ ಸಂಕಲ್ಪದ ಪ್ರಾಮುಖ್ಯತೆಯನ್ನು ಅರಿತು ಇದೆಷ್ಟು ಅತ್ಯವಶ್ಯಕವೆಂದು ಮನಗಾಣಬಹುದಾಗಿದೆ. ಸಂಕಲ್ಪದ ಜೊತೆಗೆ ಸಾಧನೆ ನಿರಂತರವಾಗಿರಬೇಕು. ಆ ನಿರಂತರತೆ ಜಲಪಾತದಂತೆ ಸದಾ ಧುಮ್ಮಿಕ್ಕುತ್ತಿರಬೇಕು.

ಸ್ವಾಮಿ ವಿವೇಕಾನಂದರು ಅಮೇರಿಕಾಕ್ಕೆ ಹೋಗಿದ್ದಾಗ ಒಂದು ಸಂಜೆ ನದಿಯ ಮೇಲಿದ್ದ ಸೇತುವೆಯಲ್ಲಿದ್ದ ಹುಡುಗರು ನೀರಿನ ಮೇಲೆ ತೇಲುತ್ತಿದ್ದ ಶಂಖಗಳಿಗೆ ಪಿಸ್ತೂಲಿನಿಂದ ಶೂಟ್ ಮಾಡುತ್ತಿದ್ದನ್ನು ಗಮನಿಸಿದರು. ಆ ಶಂಖಗಳು ಮುಳುಗುತ್ತಾ ತೇಲುತ್ತಾ ಇದ್ದವು. ಈ ಹುಡುಗರಿಗೆ ಗುರಿಯಿಟ್ಟು ಒಂದು ಶಂಖಕ್ಕೂ ಹೊಡೆಯಲಾಗಲಿಲ್ಲ. ಸ್ವಾಮಿ ವಿವೇಕಾನಂದರು ಇವರನ್ನು ಗಮನಿಸುತ್ತಿದ್ದದ್ದನ್ನು ಅರಿತ ಹುಡುಗರು, “ನೀವು ನಮ್ಮನ್ನು ನೋಡುತ್ತಿದ್ದೀರಿ. ನೀವು ನಮಗಿಂತ ಚೆನ್ನಾಗಿ ಹೊಡೆಯಬಲ್ಲಿರಾ?” ಎಂದು ಕೇಳಿದರು. ನಗುತ್ತಾ ಸ್ವಾಮಿ ವಿವೇಕಾನಂದರು, “ನಾನು ಪ್ರಯತ್ನಿಸುತ್ತೇನೆ” ಎಂದು ಹೇಳಿ ಆ ಪಿಸ್ತೂಲನ್ನು ತೆಗೆದುಕೊಂಡರು. ಆ ಪಿಸ್ತೂಲಿನಿಂದ ಶಂಖಗಳಿಗೆ ಗುರಿಯಿಟ್ಟು ಒಂದೆರಡು ಕ್ಷಣಗಳ ಕಾಲ ತನ್ಮಯರಾಗಿ ನಿಂತರು. ನಂತರ ತಮ್ಮ ಪಿಸ್ತೂಲಿನಿಂದ ಗುಂಡನ್ನು ಹಾರಿಸಿದರು. ಸತತವಾಗಿ ಹನ್ನೆರೆಡು ಬಾರಿ ಒಂದೇ ಸಮನೆ ಅವರು ಹಾರಿಸಿದ ಗುಂಡುಗಳು ಶಂಖಗಳಿಗೆ ಬೀಳುವಂತೆ ಹೊಡೆದಿದ್ದರು. ಇದನ್ನು ನೋಡಿದ ಹುಡುಗರು ಆಶ್ಚರ್ಯಚಕಿತರಾದರು. ಒಬ್ಬ ಮನುಷ್ಯ ಈ ರೀತಿ ಗುರಿಯಿಟ್ಟು ಹೊಡೆಯಬಹುದೆಂದು ಆ ಹುಡುಗರು ಕನಸಿನಲ್ಲಿಯೂ ಎಣಿಸಿರಲಿಲ್ಲ. ತುಸು ಯೋಚಿಸಿ “ಸ್ವಾಮಿ, ಈ ರೀತಿ ಗುರಿಯಿಡುವುದಕ್ಕೆ ನಿಮಗೆ ಹೇಗೆ ಸಾಧ್ಯವಾಯಿತು?” ಎಂದು ವಿನಮ್ರರಾಗಿ ಕೇಳಿದರು. ಸ್ವಾಮಿ ವಿವೇಕಾನಂದರು ಅವರೆಡೆಗೆ ಮುಗುಳ್ನಕ್ಕು, “ನೀವು ಏನನ್ನೇ ಮಾಡುತ್ತಿರಿ, ಅದರಲ್ಲೇ ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ನೀವು ಪಿಸ್ತೂಲಿನಿಂದ ಗುರಿಯಿಡುವ ಆಟವಾಡುತ್ತಿದ್ದರೆ, ಗುರಿಯೆಡೆಗೆ ನಿಮ್ಮ ಪೂರ್ತಿ ಗಮನವಿರಬೇಕು. ನೀವು ಏನನ್ನಾದರು ಕಲಿಯುತ್ತಿದ್ದರೆ, ಆ ಕಲಿಯುವಿಕೆಯೆಡೆಗೆ ನಿಮ್ಮ ಮನಸ್ಸಿರಬೇಕು. ನಿಮ್ಮ ಏಕಾಗ್ರತೆ ಆ ಮಟ್ಟದಲ್ಲಿದ್ದಾಗ ಮಾತ್ರ ನೀವು ಏನನ್ನಾದರೂ ಗೆಲ್ಲಬಲ್ಲಿರಿ. ನಮ್ಮ ಭಾರತದೇಶದಲ್ಲಿ ನಾವು ಮಕ್ಕಳಿಗೆ ಇದನ್ನು ಹೇಳಿಕೊಡುತ್ತೇವೆ” ಎಂದು ಹೇಳಿದರು. ಇದನ್ನೇ ದೃಢಸಂಕಲ್ಪ ಅನ್ನುತ್ತಾರೆ ಅಲ್ಲವೇ?

ನಾನು ನಿಮಗೆ ಇಲ್ಲಿ ಒಂದು ನನ್ನ ಅನುಭವದ ಉದಾಹರಣೆಯೊಂದನ್ನು ಕೊಡಲು ಇಚ್ಚಿಸುತ್ತೇನೆ. ನನ್ನ ಗೆಳೆಯರೊಬ್ಬರು ಅವರ ನೆಂಟರ ಮನೆಯ ಗೃಹಪ್ರವೇಶಕ್ಕೆ ಒಮ್ಮೆ ಹೋಗಿದ್ದರಂತೆ. ಮನೆಯನ್ನೆಲ್ಲಾ ನೋಡಿ, ಊಟ ಮಾಡಿ ಅಲ್ಲೆಲ್ಲಾ ಹುಡುಕಿದರೂ ಪಿ.ಯು.ಸಿ. ಓದುತ್ತಿದ್ದ ನೆಂಟರ ಮಗಳು ಕಾಣಲೇ ಇಲ್ಲವಂತೆ! ನೆಂಟರನ್ನು ವಿಚಾರಿಸಿದಾಗ ಅವಳು ಹತ್ತಿರದ ತೋಟದಮನೆಯಲ್ಲಿ ಇರುವಳೆಂದು ಹೇಳಿದರಂತೆ. ಸರಿ, ಇವರು ಅಲ್ಲಿ ಹೋಗಿ ನೋಡಿದ್ದಾರೆ. ಆಕೆ ಅಲ್ಲಿ ತನ್ನ ಪಾಡಿಗೆ ತಾನು ಓದುತ್ತಾ ಕುಳಿತ್ತಿದ್ದಳಂತೆ! ಏನಶ್ಚಾರ್ಯ!? ಏನಮ್ಮ, ನಿನ್ನ ತಂದೆ ತಾಯಿ ಕಟ್ಟಿರುವ ಮನೆಯ ಗೃಹಪ್ರವೇಶದಲ್ಲಿ ಖುಷಿಯಿಂದ ಓಡಾಡುವುದನ್ನು ಬಿಟ್ಟು ಇಲ್ಲಿ ಓದುತ್ತಾ ಕುಳಿತ್ತಿದ್ದೀಯಾ ಎಂದು ಕೇಳಿದರಂತೆ. ಅದಕ್ಕೆ ಆಕೆ, ಅಣ್ಣಾ, ಈ ಮನೆ ನನ್ನ ಅಪ್ಪ ಅಮ್ಮ ಕಟ್ಟಿರುವುದು. ಅವರು ಸಂಭ್ರಮಿಸಲಿ. ನಾನು ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಿ ಮನೆ ಕಟ್ಟುತ್ತೇನೆ. ಆಗ ಎಲ್ಲರನ್ನೂ ಕರೆದು ಸಂಭ್ರಮಿಸುತ್ತೇನೆ ಎಂದು ಹೇಳಿದಳಂತೆ. ಅಪ್ಪ ಅಮ್ಮ ಕಟ್ಟಿರುವ ಮನೆಯ ಗೃಹಪ್ರವೇಶದ ಸಂಭ್ರಮವಿದ್ದರೂ ತನ್ನ ಓದಿನಲ್ಲಿ ಏಕಾಗ್ರತೆಯಿಂದ ತೊಡಗಿಕೊಂಡ ಆಕೆಯನ್ನು ನಾವು ಮೆಚ್ಚಲೇಬೇಕಲ್ಲವೇ? ಅವಳ ಸಂಕಲ್ಪ ಎಂತಹದಿತ್ತು ನೋಡಿ. ಆಕೆ ಇವತ್ತು ಪ್ರತಿಷ್ಟಿತ ಐಬಿಎಂ ಉದ್ಯೋಗಿ. ಲಕ್ಷಾಂತರ ಸಂಬಳ ಪಡೆಯುತ್ತಾಳೆ. ಬೆಂಗಳೂರಿನಲ್ಲಿ ಸ್ವಂತ ಅಪಾರ್ಟ್ಮೆಂಟ್ ಹೊಂದಿದ್ದಾಳೆ. ಮತ್ತು ಇಂದು ಗಂಡ ಮಗುವಿನೊಂದಿಗೆ ಸುಖಸಂಸಾರ ಆಕೆಯದು.

ನೀವು ಏನನ್ನೇ ಮಾಡುತ್ತಿರಿ, ಆ ಕೆಲಸದಲ್ಲಿ ಯಶಸ್ವಿಯಾಗಲು ಏಕಾಗ್ರತೆ ಕೂಡ ತುಂಬಾ ಮುಖ್ಯ. ಏಕಾಗ್ರತೆ ಇಲ್ಲದೆ ನೀವು ನಿಮ್ಮ ಕೆಲಸವನ್ನು ಸಂಪೂರ್ಣವಾಗಿ ಮುಗಿಸಲಾರಿರಿ. ಮನುಷ್ಯನ ಮನಸ್ಸು ಏನೇ ಮಾಡಿದರೂ ಒಂದು ಕೆಲಸದಲ್ಲಿ ಶೇ 10ರಷ್ಟು ಮಾತ್ರ ತೊಡಗಿಕೊಳ್ಳಬಲ್ಲದಂತೆ. ಉಳಿದ ಶೇ 90ರಷ್ಟು ಮನಸ್ಸು ಎಲ್ಲೆಲ್ಲೋ ಹರಿದಾಡಿ ಹೋಗುತ್ತದಂತೆ. ಅಂತಹ ಶೇ 10ರಷ್ಟು ಮನಸ್ಸನ್ನು ಏಕಾಗ್ರತೆಗೊಳಿಸಿ ಕೆಲಸ ಮಾಡಿ ಅದೆಷ್ಟೋ ಸಾಧನೆಗಳು ಆಗಿರುವಾಗ, ಇನ್ನೂ ಹೆಚ್ಚು ಶೇಕಡಾ ಮನಸ್ಸನ್ನು ಏಕಾಗ್ರತೆಯಿಂದ ಒಂದೇ ಕಡೆ ಇಟ್ಟು ಕೆಲಸ ಮಾಡಿದರೆ ಎಂಥಹ ಅದ್ಭುತವನ್ನಾದರೂ ಸಾಧಿಸಿ ಬಿಡಬಹುದು. ಸೂರ‍್ಯನ ಚೆದುರಿದ ಕಿರಣಗಳನ್ನು ಭೂತಗನ್ನಡಿಯ ಮೂಲಕ ಒಂದೇ ಕಡೆ ಕೇಂದ್ರಿಕರಿಸಿದರೆ ಅದು ಏನನ್ನಾದರು ಸುಡುವ ಬೆಂಕಿಯೇ ಆಗಿಬಿಡುತ್ತದೆ. ಅದೇ ರೀತಿ ನಮ್ಮ ಮನಸ್ಸನ್ನು ಒಂದೇ ಕಡೆ ಕೇಂದ್ರಿಕರಿಸಿ ದೊರೆಯುವ ಏಕಾಗ್ರತೆಯಿಂದ ನಾವು ಏನಾನ್ನಾದರೂ ಸಾಧಿಸಿ ಬಿಡಬಹುದು. ನಮ್ಮ ಗುರಿಯನ್ನು ಬೇಗ ಮುಟ್ಟಬಹುದು. ಈ ರೀತಿಯ ಏಕಾಗ್ರತೆ ನಿಮ್ಮದಾಗಬೇಕಾದರೆ ನಿಮ್ಮ ಸಂಕಲ್ಪ ಗಟ್ಟಿಯಾಗಿರಬೇಕು, ದೃಢವಾಗಿರಬೇಕು. ಅದು ಸಿಂಹದ ಸಂಕಲ್ಪದಂತಿರಬೇಕು.

ನೋಡಿ, ಈ ʼಸಂಕಲ್ಪʼ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ಹೃದಯ ಮತ್ತು ಮನಸ್ಸಿನಿಂದ ರೂಪುಗೊಂಡ ಉದ್ದೇಶ ಎಂದು. ನಿಮ್ಮ ಉದ್ದೇಶ ಅಥವಾ ಗುರಿ ಏನೇ ಆಗಿರಲಿ ಅದು ನಿಮ್ಮ ಹೃದಯ ಮತ್ತು ಮನಸ್ಸಿನಿಂದ ರೂಪುಗೊಂಡಿದ್ದರೆ ನಿಮ್ಮನ್ನು ಯಾರೂ ಕೂಡ ಸೋಲಿಸಲು ಸಾಧ್ಯವಿಲ್ಲ. ಸದಾಕಾಲ ಗೆಲುವೇ ನಿಮ್ಮ ಜೀವನವಾಗಲಿದೆ. ಈಗಲೇ ಸಂಕಲ್ಪ ಮಾಡಿಕೊಳ್ಳಿ. ಶುಭವಾಗಲಿ.

 ಪ್ರೀತಿಯಿಂದ, ‌

- ಗುಬ್ಬಚ್ಚಿ ಸತೀಶ್

***

ಶನಿವಾರ, ಸೆಪ್ಟೆಂಬರ್ 30, 2023

ಅನಂತ್‌ ನಾಗ್‌ ಅವರ “ನನ್ನ ತಮ್ಮ ಶಂಕರ"


ಸೆಪ್ಟೆಂಬರ್‌ 30 ಬಂದರೆ ಶಂಕರ್‌ ನಾಗ್‌ ಬಲ್ಲ ಕನ್ನಡಿಗರಲ್ಲಿ ಒಂದು ವಿಷಾದ ಮನೆ ಮಾಡುತ್ತದೆ. ಶಂಕರ್‌ ನಾಗ್‌ ಬಗ್ಗೆ ಗೊತ್ತಿಲ್ಲದೆ ಇರುವ ಕನ್ನಡಿಗರಿದ್ದಾರೆ ಎಂದರೆ ನಾನು ನಂಬಲು ಸಿದ್ಧನಿಲ್ಲ. ತನ್ನ ಮೂವತ್ತಾರು ವರುಷಗಳ ಆಯಸ್ಸಿನಲ್ಲಿ, ಹನ್ನೆರಡು ವರುಷಗಳ ಸಿನಿಮಾ ಪಯಣದಲ್ಲಿ 80 ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಅಂದಿನ-ಇಂದಿನ ಚೈತನ್ಯವಾಗಿ ರೂಪುಗೊಂಡವರು ಶಂಕರ್‌ ನಾಗ್.‌ 1990ರ ಸೆಪ್ಟೆಂಬರ್‌ 30ರಂದು ನಾನು ರೇಡಿಯೋದಲ್ಲಿ ಶಂಕರ್‌ ನಾಗ್‌ ಅವರು ಸತ್ತ ಸುದ್ಧಿಯನ್ನು ಕೇಳಿದಾಗ ನನಗೆ 13 ವರ್ಷ. ನಿಜವಾಗಿಯೂ ನನಗೆ ಆ ದಿನ ಶಾಕ್‌ ಆಗಿತ್ತು. ಇಂದಿಗೂ ನಾನು ಆ ಶಾಕ್‌ನಿಂದ ಹೊರಬಂದಿಲ್ಲ. ಆದರೆ, ಇದುವರೆವಿಗೂ ನಾನು ಆ ಸುದ್ಧಿಯನ್ನು ನಂಬಿಯೇ ಇಲ್ಲ. ನಾನೊಬ್ಬನೇ ಯಾಕೆ, ಕೋಟ್ಯಾಂತರ ಕನ್ನಡಿಗರಿಗೆ ಶಂಕರ್‌ ನಾಗ್‌ ಇಂದಿಗೂ ಜೀವಂತ... ಅಷ್ಟೇ ಅಲ್ಲ ಜೀವನದ ಅದಮ್ಯ ಚೇತನ…!

ನನ್ನೊಳಗೆ ಶಂಕರ್‌ ನಾಗ್‌ ಪ್ರವೇಶವಾಗಿದ್ದು ಬಹಳ ಚಿಕ್ಕ ವಯಸ್ಸಿಗೆ. ʼಸಾಂಗ್ಲಿಯಾನʼ, ʼಸಾಗ್ಲಿಯಾನ – ಭಾಗ 2ʼ, ʼರಾಮ ರಾಜ್ಯದಲ್ಲಿ ರಾಕ್ಷಸರುʼ, ʼಸಿಬಿಐ ಶಂಕರ್‌ʼ ಸಿನಿಮಾಗಳನ್ನು ಸಿನಿಮಾ ಮಂದಿರಗಳಲ್ಲೇ ನೋಡಿ ಕಣ್ತುಂಬಿಕೊಂಡಿದ್ದೆ. ನಮ್ಮೂರಿಗೆ ರಾಜಕೀಯದ ಒಂದು ಕಾರ್ಯಕ್ರಮಕ್ಕೆ ಅಣ್ಣ-ತಮ್ಮಂದಿರು ಬಂದಾಗ ದೂರದಿಂದ ನೋಡಿದ ನೆನಪು. ಆ ನಂತರವೂ ಅವಕಾಶ ಸಿಕ್ಕಾಗಲೆಲ್ಲ ಶಂಕರ್‌ ನಾಗ್‌ ಅವರ ಸಿನಿಮಾಗಳನ್ನು ನೋಡುವುದು, ಸಾಹಸಗಳ ಪರಿಚಯ ಮಾಡಿಕೊಳ್ಳುವುದು ನಡೆದೇ ಇದೆ. ಇಂದಿಗೂ ಒಂದು ವಿಸ್ಮಯವಾಗಿಯೇ ಶಂಕರ್‌ ನಾಗ್‌ ನಮ್ಮೊಂದಿಗಿದ್ದಾರೆ.



ಶಂಕರ್‌ ನಾಗ್‌ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬೇಕು ಎಂದಾಗಲೆಲ್ಲಾ ನನಗೆ ನೆನಪಿಗೆ ಬರುವ ಪುಸ್ತಕ ಅನಂತ್‌ ನಾಗ್‌ ಅವರು ಬರೆದಿರುವ “ನನ್ನ ತಮ್ಮ ಶಂಕರ”. ಈ ಅಮೂಲ್ಯ ಪುಸ್ತಕ ಮೊದಲಿಗೆ 2001ರಲ್ಲಿ ಮುದ್ರಣವಾಯಿತು. 2001ನೇ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಪುಸ್ತಕವಿದು. ತದನಂತರ 2010ರಲ್ಲಿ ಟೋಟಲ್‌ ಕನ್ನಡವು ಈ ಪುಸ್ತಕದ ಪರಿಷ್ಕೃತ ಆವೃತ್ತಿ ಪ್ರಕಟಿಸಿದ್ದು, ಇದುವರೆವಿಗೂ ಹದಿಮೂರು ಮುದ್ರಣಗಳನ್ನು ಕಂಡಿದೆ. ಅರವತ್ತು ಅಧ್ಯಾಯಗಳಲ್ಲಿ ನಮ್ಮ-ನಿಮ್ಮೆಲ್ಲರ ಪ್ರೀತಿಯ ಶಂಕರ್‌ ನಾಗ್‌ ಅವರನ್ನು ಅನಂತ್‌ ನಾಗ್‌ ತಾವು ಕಂಡಂತೆ ಕಟ್ಟಿಕೊಟ್ಟಿದ್ದಾರೆ. ಪುಸ್ತಕದಲ್ಲಿ ಅಪರೂಪದ ಮಾಹಿತಿಗಳಿವೆ-ಚಿತ್ರಗಳಿವೆ. ಪುಸ್ತಕವಾಗುವ ಮುನ್ನ ʼಲಂಕೇಶ್‌ ಪತ್ರಿಕೆʼಯಲ್ಲಿ ಅಂಕಣರೂಪದಲ್ಲಿ ಪ್ರಕಟವಾಗಿದ್ದ ಇಲ್ಲಿನ ಅಕ್ಷರಗಳಲ್ಲಿ ಶಂಕರ್‌ ನಾಗ್‌ ಜೀವಂತವಾಗಿದ್ದಾರೆ. ಮತ್ತೆ ಮತ್ತೆ ನೆನಪಾಗುವ, ಕಾಡುವ, ನಮ್ಮೊಂದಿಗೆ ಒಂದು ಅದಮ್ಯ ಚೇತನವಾಗಿಯೇ ಇರುವ ಶಂಕರ್‌ ನಾಗ್‌ ಕುರಿತು ಅಮೂಲ್ಯ ಮಾಹಿತಿಯ ಕಣಜ ಈ ಪುಸ್ತಕ. ಈ ಪುಸ್ತಕದ ಮೌಲ್ಯ ರೂ. 299/-

ಈ ಪುಸ್ತಕದ ಪ್ರತಿಗಳಿಗೆ ವಾಟ್ಸಪ್‌ @ 9986692342

ಅಥವಾ ಅಮೇಜಾನಿನಲ್ಲಿ ಕೊಳ್ಳಲು ಲಿಂಕ್:‌ https://amzn.to/3PZoZnw

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...