ಸೆಪ್ಟೆಂಬರ್ 30 ಬಂದರೆ ಶಂಕರ್ ನಾಗ್
ಬಲ್ಲ ಕನ್ನಡಿಗರಲ್ಲಿ ಒಂದು ವಿಷಾದ ಮನೆ ಮಾಡುತ್ತದೆ. ಶಂಕರ್ ನಾಗ್ ಬಗ್ಗೆ ಗೊತ್ತಿಲ್ಲದೆ ಇರುವ
ಕನ್ನಡಿಗರಿದ್ದಾರೆ ಎಂದರೆ ನಾನು ನಂಬಲು ಸಿದ್ಧನಿಲ್ಲ. ತನ್ನ ಮೂವತ್ತಾರು ವರುಷಗಳ ಆಯಸ್ಸಿನಲ್ಲಿ,
ಹನ್ನೆರಡು ವರುಷಗಳ ಸಿನಿಮಾ ಪಯಣದಲ್ಲಿ 80 ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಅಂದಿನ-ಇಂದಿನ
ಚೈತನ್ಯವಾಗಿ ರೂಪುಗೊಂಡವರು ಶಂಕರ್ ನಾಗ್. 1990ರ ಸೆಪ್ಟೆಂಬರ್ 30ರಂದು ನಾನು ರೇಡಿಯೋದಲ್ಲಿ
ಶಂಕರ್ ನಾಗ್ ಅವರು ಸತ್ತ ಸುದ್ಧಿಯನ್ನು ಕೇಳಿದಾಗ ನನಗೆ 13 ವರ್ಷ. ನಿಜವಾಗಿಯೂ ನನಗೆ ಆ ದಿನ ಶಾಕ್
ಆಗಿತ್ತು. ಇಂದಿಗೂ ನಾನು ಆ ಶಾಕ್‌ನಿಂದ ಹೊರಬಂದಿಲ್ಲ. ಆದರೆ, ಇದುವರೆವಿಗೂ ನಾನು ಆ
ಸುದ್ಧಿಯನ್ನು ನಂಬಿಯೇ ಇಲ್ಲ. ನಾನೊಬ್ಬನೇ ಯಾಕೆ, ಕೋಟ್ಯಾಂತರ ಕನ್ನಡಿಗರಿಗೆ ಶಂಕರ್ ನಾಗ್
ಇಂದಿಗೂ ಜೀವಂತ... ಅಷ್ಟೇ ಅಲ್ಲ ಜೀವನದ ಅದಮ್ಯ ಚೇತನ…!
ನನ್ನೊಳಗೆ ಶಂಕರ್ ನಾಗ್
ಪ್ರವೇಶವಾಗಿದ್ದು ಬಹಳ ಚಿಕ್ಕ ವಯಸ್ಸಿಗೆ. ʼಸಾಂಗ್ಲಿಯಾನʼ, ʼಸಾಗ್ಲಿಯಾನ – ಭಾಗ 2ʼ, ʼರಾಮ ರಾಜ್ಯದಲ್ಲಿ
ರಾಕ್ಷಸರುʼ, ʼಸಿಬಿಐ ಶಂಕರ್ʼ ಸಿನಿಮಾಗಳನ್ನು ಸಿನಿಮಾ ಮಂದಿರಗಳಲ್ಲೇ ನೋಡಿ
ಕಣ್ತುಂಬಿಕೊಂಡಿದ್ದೆ. ನಮ್ಮೂರಿಗೆ ರಾಜಕೀಯದ ಒಂದು ಕಾರ್ಯಕ್ರಮಕ್ಕೆ ಅಣ್ಣ-ತಮ್ಮಂದಿರು ಬಂದಾಗ
ದೂರದಿಂದ ನೋಡಿದ ನೆನಪು. ಆ ನಂತರವೂ ಅವಕಾಶ ಸಿಕ್ಕಾಗಲೆಲ್ಲ ಶಂಕರ್ ನಾಗ್ ಅವರ ಸಿನಿಮಾಗಳನ್ನು
ನೋಡುವುದು, ಸಾಹಸಗಳ ಪರಿಚಯ ಮಾಡಿಕೊಳ್ಳುವುದು ನಡೆದೇ ಇದೆ. ಇಂದಿಗೂ ಒಂದು ವಿಸ್ಮಯವಾಗಿಯೇ ಶಂಕರ್
ನಾಗ್ ನಮ್ಮೊಂದಿಗಿದ್ದಾರೆ.
ಶಂಕರ್ ನಾಗ್ ಬಗ್ಗೆ ಮತ್ತಷ್ಟು
ತಿಳಿದುಕೊಳ್ಳಬೇಕು ಎಂದಾಗಲೆಲ್ಲಾ ನನಗೆ ನೆನಪಿಗೆ ಬರುವ ಪುಸ್ತಕ ಅನಂತ್ ನಾಗ್ ಅವರು ಬರೆದಿರುವ
“ನನ್ನ ತಮ್ಮ ಶಂಕರ”. ಈ ಅಮೂಲ್ಯ ಪುಸ್ತಕ ಮೊದಲಿಗೆ 2001ರಲ್ಲಿ ಮುದ್ರಣವಾಯಿತು. 2001ನೇ ವರ್ಷದ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಪುಸ್ತಕವಿದು. ತದನಂತರ 2010ರಲ್ಲಿ ಟೋಟಲ್
ಕನ್ನಡವು ಈ ಪುಸ್ತಕದ ಪರಿಷ್ಕೃತ ಆವೃತ್ತಿ ಪ್ರಕಟಿಸಿದ್ದು, ಇದುವರೆವಿಗೂ ಹದಿಮೂರು
ಮುದ್ರಣಗಳನ್ನು ಕಂಡಿದೆ. ಅರವತ್ತು ಅಧ್ಯಾಯಗಳಲ್ಲಿ ನಮ್ಮ-ನಿಮ್ಮೆಲ್ಲರ ಪ್ರೀತಿಯ ಶಂಕರ್ ನಾಗ್
ಅವರನ್ನು ಅನಂತ್ ನಾಗ್ ತಾವು ಕಂಡಂತೆ ಕಟ್ಟಿಕೊಟ್ಟಿದ್ದಾರೆ. ಪುಸ್ತಕದಲ್ಲಿ ಅಪರೂಪದ
ಮಾಹಿತಿಗಳಿವೆ-ಚಿತ್ರಗಳಿವೆ. ಪುಸ್ತಕವಾಗುವ ಮುನ್ನ ʼಲಂಕೇಶ್ ಪತ್ರಿಕೆʼಯಲ್ಲಿ ಅಂಕಣರೂಪದಲ್ಲಿ
ಪ್ರಕಟವಾಗಿದ್ದ ಇಲ್ಲಿನ ಅಕ್ಷರಗಳಲ್ಲಿ ಶಂಕರ್ ನಾಗ್ ಜೀವಂತವಾಗಿದ್ದಾರೆ. ಮತ್ತೆ ಮತ್ತೆ
ನೆನಪಾಗುವ, ಕಾಡುವ, ನಮ್ಮೊಂದಿಗೆ ಒಂದು ಅದಮ್ಯ ಚೇತನವಾಗಿಯೇ ಇರುವ ಶಂಕರ್ ನಾಗ್ ಕುರಿತು ಅಮೂಲ್ಯ
ಮಾಹಿತಿಯ ಕಣಜ ಈ ಪುಸ್ತಕ. ಈ ಪುಸ್ತಕದ ಮೌಲ್ಯ ರೂ. 299/-
ಈ ಪುಸ್ತಕದ ಪ್ರತಿಗಳಿಗೆ ವಾಟ್ಸಪ್ @
9986692342
ಅಥವಾ ಅಮೇಜಾನಿನಲ್ಲಿ ಕೊಳ್ಳಲು ಲಿಂಕ್: https://amzn.to/3PZoZnw
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ